ಸ್ವಾತಂತ್ರ್ಯ ಇನ್ನೆಷ್ಟು ದಿನ !!!
೨೯ ಮೇ ೧೪೫೩, ಅಟ್ಟೋಮನ್ ತುರ್ಕರು ಕಾಂಸ್ಟನ್ಟಿನೋಪಾಲ್ ನಗರವನ್ನು ಆಕ್ರಮಿಸಿ (ಇಂದಿನ ಇಸ್ತಾಂಬುಲ್) ತಮ್ಮ ವಶಕ್ಕೆ ತಗೆದುಕೊಂಡ ದಿನ. ಈ ದಿನಕ್ಕೂ ಮುಂಚೆ ಪೂರ್ವ ಮತ್ತು ಪಶ್ಚಿಮಗಳ ವ್ಯಾಪಾರ ಮತ್ತು ಭಾಂದವ್ಯ ಸಮುದ್ರ ಮಾರ್ಗವಾಗಿ ಈ ನಗರದ ಮೂಲಕವೇ ನಡೆಯುತ್ತಿತ್ತು. ತುರ್ಕರ ಆಕ್ರಮಣದೊಂದಿಗೆ ಪಶ್ಚಿಮದವರ ವ್ಯಾಪಾರದ ಬಾಗಿಲು ಸಂಪೂರ್ಣವಾಗಿ ಮುಚ್ಚಲ್ಪಟ್ಟಿತು. ಹೊಸ ಮಾರ್ಗದ ಅನ್ವೇಷಣೆ ಪಶ್ಸಿಮದವರಿಗೆ ಅನಿವಾರ್ಯವಾಯಿತು.
ಮೊದಲಿಗೆ ಸ್ಪೇನ್ ದೇಶದ ನಾವಿಕ ಕೊಲಂಬಸ್ ಮುಂದಾದ, ಭಾರತವನ್ನು ಕಂಡುಹಿಡಿಯುವ ಬದಲಿಗೆ ಅಮೇರಿಕ ಖಂಡವನ್ನು ಅನ್ವೇಷಿಸಿದ. ನಂತರ ಪೋರ್ಚುಗಲ್ನ ನಾವಿಕ ಬರ್ತ ಲೋಮಿಯ ಡಯಾಜ್ , ಪೋರ್ಚುಗಲ್ ದೇಶದ ದಕ್ಷಿಣದಿಂದ ಆರಂಭಿಸಿ ಆಫ್ರಿಕಾ ಖಂಡದ ತುದಿಯನ್ನು ಮುಟ್ಟಿದ ಆದರೆ ಸಮುದ್ರದಲ್ಲಿ ಉಂಟಾದ ಭಾರಿ ಅನಾಹುತಗಳಿಂದ ಅವನ ಸಹ ನಾವಿಕರು ಮುಂದೆ ಸಾಗಲು ನಿರಾಕರಿಸಿದರು. ಆಫ್ರಿಕದ ತುಟ್ಟ ತುದಿ ಕೇಪ್ ಆಫ್ ಗುಡ್ ಹೋಪ್ ಕಂಡು ಹಿಡಿದು ಪೋರ್ಚುಗಲ್ಗೆ ಹಿಂದಿರುಗಿದ. ಮತ್ತೆ ಅದೇ ಯತ್ನವನ್ನು ಪೋರ್ಚುಗಲ್ಲಿನ ವಾಸ್ಕೋ ಡ ಗಾಮ ಬರ್ತ ಲೋಮಿಯ ಡಯಾಜ್ ಬಳಸಿದ ಮಾರ್ಗದಲ್ಲೇ ಹೋಗಿ ಆಫ್ರಿಕಾ ಖಂಡವನ್ನು ಒಂದು ಸುತ್ತು ಹಾಕಿ ಕಡೆಗೆ ಕೇರಳದ ಕಲ್ಲಿ ಕೋಟೆಯಲ್ಲಿ ೨೦ ಮೇ ೧೪೯೮ ಕಾಲಿಟ್ಟ. ಕಲ್ಲಿಕೋಟೆಯ ದೊರೆ ಜಮೂರಿನ ವಾಸ್ಕೋ ಡ ಗಾಮನನ್ನು ಆತ್ಮೀಯವಾಗಿ ಸ್ವಾಗತಿಸಿ ಪೂರ್ವ ಪಶ್ಚಿಮಗಳ ವ್ಯಾಪಾರಕ್ಕೆ ಮುನ್ನುಡಿ ಬರೆದ.
ಸತತ ನೂರು ವರ್ಷಗಳ ಕಾಲ ಯಾವುದೇ ಅಡೆತಡೆ ಇಲ್ಲದೆ ಭಾರತದ ಪಶ್ಚಿಮ ಸಮುದ್ರ ತೀರದ ಎಲ್ಲಾ ಪ್ರಮುಖ ನಗರದಲ್ಲಿ ಒಂದು ಒಂದು ಶಾಖೆಗಳನ್ನು ಸ್ಥಾಪಿಸಿ ಪೋರ್ಚುಗೀಸರು ತಮ್ಮ ವ್ಯಾಪಾರ ಮುಂದುವರೆಸಿದರು. ೧೬೦೦ ಬ್ರಿಟೀಷರು, ೧೬೦೨ ರಲ್ಲಿ ಡಚ್ಚರು, ೧೬೬೪ ರಲ್ಲಿ ಫ್ರೆಂಚರು ಈಸ್ಟ್ ಇಂಡಿಯಾ ಕಂಪನಿ ಹೆಸರಿನಲ್ಲಿ ಭಾರತ ಖಂಡದಲ್ಲಿ ನಿಧಾನವಾಗಿ ತಮ್ಮ ಖಾತೆ ತೆರೆದರು.
ಸ್ಪರ್ಧಿಗಳು ಹೆಚ್ಚಾದಾಗ ವ್ಯಾಪಾರ ವಹಿವಾಟು ಮಾಡಲು ನಾಲ್ವರಲ್ಲಿ ಉತ್ತಮರು ಯಾರು ಅವರೇ ಗೆಲ್ಲುತ್ತಾರೆ ಹಾಗೆ ಫ್ರೆಂಚ್ ಮತ್ತು ಬ್ರಿಟೀಶ್ ಈಸ್ಟ್ ಇಂಡಿಯಾ ಕಂಪನಿಗಳ ಮುಂದೆ ಪೋರ್ಚುಗೀಸ್ ಮತ್ತು ಡಚ್ಚರು ಸಮನಾಗಿ ನಿಲ್ಲಲಾಗಲಿಲ್ಲ. ಫ್ರೆಂಚರು ಮತ್ತು ಬ್ರಿಟೀಷರು ತಮ್ಮ ವ್ಯಾಪಾರ ವಹಿವಾಟು ಹೆಚ್ಚಿಸಲು ನಿಧಾನವಾಗಿ ದೇಶಿಯ ರಾಜರ ರಾಜಕೀಯದಲ್ಲಿ ಕೈ ಜೋಡಿಸಿದರು. ದಕ್ಷಿಣದಲ್ಲಿ ವಿಜಯನಗರದ ಪತನದ ನಂತರ ಯಾವುದೇ ದೊಡ್ಡ ಸಾಮ್ರಾಜ್ಯ ಇರಲಿಲ್ಲ ಹಾಗು ಉತ್ತರದಲ್ಲಿ ಮೊಘಲರ ಆಡಳಿತ ಅವನತಿಯ ಹಂತದಲ್ಲಿತ್ತು. ಭಾರತ ದೇಶದಲ್ಲಿ ಕೇವಲ ಚಿಕ್ಕ ಪುಟ್ಟ ಸಂಸ್ಥಾನಗಳು ಆಳ್ವಿಕೆ ಮಾಡುತ್ತಿದ್ದವು. ಬ್ರಿಟೀಷರು ಮತ್ತು ಫ್ರೆಂಚರು ದೇಶಿಯ ಸಂಸ್ಥಾನಗಳ ಜೊತೆ ಗುರುತಿಸಿಕೊಂಡು ಅಗತ್ಯ ನೆರವು ನೀಡಲು ಆರಂಭಿಸಿದರು.
ಕಡೆಗೆ ಫ್ರೆಂಚರು ಮತ್ತು ಬ್ರಿಟೀಷರ ನಡುವಿನ ಯುದ್ದದಲ್ಲಿ ಬ್ರಿಟೀಷರ ಕೈ ಮೇಲಾಯಿತು, ಫ್ರೆಂಚರು ಸೋತು ಸುಣ್ಣವಾದರು. ಅದೇ ಸಮಯಕ್ಕೆ ಮೊಘಲರು ಸಂಪೂರ್ಣ ನಿರ್ನಾಮವಾಗಿದ್ದರು.ಇದೆ ಸಮಯವನ್ನು ಕಾದಿದ್ದ ಬ್ರಿಟೀಷರು ಬಂಗಾಳವನ್ನು ತಮ್ಮ ವಶಕ್ಕೆ ತಗೆದುಕೊಂಡರು. ಮುಂದೆ ಹಂತ ಹಂತವಾಗಿ ಭಾರತವನ್ನೇ ತಮ್ಮ ವಶಕ್ಕೆ ತಗೆದುಕೊಂಡರು. ಇಲ್ಲಿಂದ ಆರಂಭವಾದ ನಮ್ಮ ಗುಲಾಮಗಿರಿ ಆಗಸ್ಟ್ ೧೫ ೧೯೪೭ ರ ವರೆಗೂ ನಡೆಯಿತು.
ದೇಶ ಭಕ್ತ ಯೋಧರು, ದೇಶಿಯ ರಾಜರು, ತೀವ್ರಗಾಮಿಗಳು ಮತ್ತು ಮಂದಗಾಮಿಗಳ ಹೋರಾಟದ ಫಲವಾಗಿ ನಮಗೆ ಸ್ವತಂತ್ರವೇನು ದೊರೆಯಿತು. ಬ್ರಿಟೀಷರು ದೇಶವನ್ನೇನು ತೊರೆದು ಹೋದರು ನಿಜ ಆದರೆ ಸ್ವತಂತ್ರ ಸಿಕ್ಕರೂ ಅದನ್ನು ನಮಗೆ ಅನುಭವಿಸದಂತೆ ಮಾಡಿಯೇ ಹೋದರು. ದೇಶ ವಿಭಜನೆ ಮಾಡಿ ಕೋಮು ದಳ್ಳುರಿಗೆ ಕುಮ್ಮಕ್ಕು ಕೊಟ್ಟು ಇಂದಿಗೂ ಸಹ ನಾವು ಹೊಡೆದಾಡುವಂತೆ ಮಾಡಿದರು. ಪಶ್ಚಿಮ ಮತ್ತು ಉತ್ತರದಲ್ಲಿ ಪಾಕಿಸ್ತಾನ, ಪೂರ್ವದಲ್ಲಿ ಬಾಂಗ್ಲಾ ಹಾಗು ದೇಶದ ನಾಲ್ಕು ದಿಕ್ಕಿನಲ್ಲಿ ಚೀನಾ ಆಗಾಗ ದೇಶದ ಮೇಲೆ ಬೀಳುತ್ತಿದ್ದೆ. ಇದನ್ನು ಮಟ್ಟ ಹಾಕುವಲ್ಲಿ ಸಂಪೂರ್ಣ ವಿಫಲವಾಗಿರುವ ರಾಜಕೀಯ ಮುಖಂಡರು ದೇಶದ ಬಗ್ಗೆ ಕನಿಷ್ಠ ಕಾಳಜಿಯನ್ನು ತೊರೆದೆ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.
ಖಾಸಗೀಕರಣ, ಜಾಗತೀಕರಣ ಎನ್ನುವ ವ್ಯವಸ್ಥೆ ದೇಶಕ್ಕೆ ಲಾಭಕ್ಕಿಂತ ಹೆಚ್ಚಿಗೆ ನಷ್ಟವನ್ನೇ ಮಾಡಿವೆ. ಸ್ವತಂತ್ರ ಪೂರ್ವದಲ್ಲಿ ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಇಂದು ಆಹಾರ ಉತ್ಪಾದನೆ ಸಂಪೂರ್ಣ ಕುಂಠಿತವಾಗಿದೆ. ದೇಶಿಯ ತಳಿಗಳನ್ನು ಅಭಿರುದ್ದಿ ಮಾಡುವ ಬದಲು ವಿದೇಶಿ ತಳಿಗಳನ್ನು ಬೆಳೆಸುವ ಹಲವಾರು ಯೋಜನೆಗಳು ಅನ್ನದಾತನ ಕೈ ಸುಟ್ಟಿವೆ.
ಖಾಸಗೀಕರಣ, ಜಾಗತೀಕರಣ ಎನ್ನುವ ವ್ಯವಸ್ಥೆ ಮುಂದೆ ದೇಶವನ್ನು ಮತ್ತೊಮ್ಮೆ ಗುಲಾಮಗಿರಿ ಒಡ್ಡುವ ಸಾಧ್ಯತೆ ಇದೆ. ಜಾಗತೀಕರಣ ಹಲವಾರು ಉಪಯೋಗಗಳು ಅದವೇನು ನಿಜ ಆದರೆ ಅವೆಲ್ಲವೂ ನಮ್ಮ ಮೂಲ ನೆಲೆಯನ್ನು ನಮ್ಮಿಂದ ಕಸಿದುಕೊಂಡು ನಮ್ಮನ್ನು ನಿರ್ಗತಿಕರನ್ನಾಗಿ ಮಾಡಿವೆ.
ನಾವೆಲ್ಲರೂ ಹೇಳಬಹುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಬಹಳ ಮುಂದೆ ಇದ್ದೇವೆಂದು.. ಈ ಕ್ಷೇತ್ರದಲ್ಲಿ ನಾವು ಹೆಚ್ಚಾಗಿ ಸೇವೆ ನೀಡುತ್ತಿರುವುದು ವಿದೇಶಿ ಕಂಪನಿಗಳಿಗೆ ಹೊರತು ದೇಶಿಯ ಕಂಪನಿಗಳಿಗೆ ಅಲ್ಲ. ವಿದೇಶಿ ಕಂಪನಿಗಳು ಬಾಗಿಲು ಮುಚ್ಚಿದರೆ ಹೆಚ್ಚಾಗಿ ಬೀದಿಗೆ ಬರುವುದು ನಾವೇ. ತಿಂಗಳಿಗೆ ಲಕ್ಷ ರೂಪಾಯಿ ಜೇಬಿಗಿಳಿಸುವ ಟೆಕ್ಕಿಗಳು, ಪ್ರತಿ ತಿಂಗಳು ಅಷ್ಟೇ ಖರ್ಚು ಮಾಡುತ್ತಾರೆ. ಇವರು ಬೀದಿಗೆ ಬಂದರೆ ಬೇರೇನೂ ಕೆಲಸ ಮಾಡಿಯಾರು.
ಇನ್ನು ವಿದೇಶಿ ನೇರ ಬಂಡವಾಳದ ಹೊಡಿಕೆಯನ್ನು ತಗೆದುಕೊಂಡರೆ ಸರ್ಕಾರವು ಹಲವಾರು ಕ್ಷೇತ್ರದಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ವಿದೇಶಿ ನೇರ ಬಂಡವಾಳ ಹೊಡಿಕೆ ಮಾಡಲು ಅವಕಾಶ ಕಲ್ಪಿಸಿದೆ. ಇದೆ ಅವಕಾಶವನ್ನು ಹಿಂದೆ ರಾಜ ಮಹಾರಾಜರು ಈಸ್ಟ್ ಇಂಡಿಯಾ ಕಂಪನಿಗಳಿಗೆ ಅನುಮತಿ ನೀಡಿ ತಮ್ಮ ನೈತಿಕ ಹಕ್ಕನ್ನು ವಿದೇಶಿಯರಿಗೆ ಮಾರಿಕೊಂಡಿದ್ದರು.
ಇದೆ ರೀತಿ ಮುಂದೊಂದು ದಿನ ವಿದೇಶಿ ಕಂಪನಿಗಳು ದೇಶದ ನ್ಯಾಯಾಂಗ , ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿಯೂ ಸಹ ಹೊಡಿಕೆ ಮಾಡಿ ಕೊಂಡು ಕೊಂಡರು ಆಶ್ಚರ್ಯ ಪಡಬೇಕಾದ ಸಂಗತಿಯೇನಲ್ಲ. ನಿಮಗೆ ಗೊತ್ತಿರುವ ಹಾಗೆ ನಾವು ಪೆಟ್ರೋಲ್ ಮತ್ತು ಡಿಸೇಲ್ಗೆ ಅರಬ್ ದೇಶಗಳನ್ನು, ಮಾಹಿತಿ ತಂತ್ರಜ್ಞಾನ ಕಂಪನಿಗಳು ಹೆಚ್ಚಾಗಿ ಅಮೇರಿಕ ಮತ್ತು ಯೂರಪು ದೇಶಗಳನ್ನು ನೆಚ್ಚಿಕೊಂಡಿದ್ದೇವೆ. ಅವರು ಪೆಟ್ರೋಲ್ ಮತ್ತು ಪ್ರಾಜೆಕ್ಟ್ ಕೊಡದಿದ್ದರೆ ಏನಾಗುತ್ತದೆ ಎಂದು ನೀವೇ ಊಹಿಸಿ. ಹೀಗೆ ದೇಶದ ಆರ್ಥಿಕತೆ ವಿದೇಶಿ ಕಂಪನಿಗಳ ಹಿಡಿತಕ್ಕೆ ಸಿಗದಂತೆ ನೋಡಿಕೊಳ್ಳುವಲ್ಲಿ ನಮ್ಮ ನ್ಯಾಯಾಂಗ , ಕಾರ್ಯಾಂಗ ಮತ್ತು ಶಾಸಕಾಂಗ ವ್ಯವಸ್ಥೆ ನಿರ್ವಹಿಸಿದರೆ ಮಾತ್ರ ಗುಲಾಮಗಿರಿಯನ್ನು ತಪ್ಪಿಸ ಬಹುದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರತೀಯರು ಸ್ವಾತಂತ್ರ್ಯವನ್ನು ಕಳೆದುಕೊಂಡು ಗುಲಾಮಗಿರಿಗೆ ಹೋಗುವ ಸಾಧ್ಯತೆಯೇ ಹೆಚ್ಚು. ಎಲ್ಲರೂ ಸ್ವಾವಲಂಬನೆ ಕಡೆ ದೃಷ್ಟಿ ಹರಿಸಿದರೆ ಮಾತ್ರ ನಮ್ಮ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬಹುದು. ಇಲ್ಲದಿದ್ದರೆ ಸ್ವಾತಂತ್ರ್ಯ ಇನ್ನೆಷ್ಟು ದಿನ ಅಂತ ಯೋಚಿಸಬೇಕಾಗುತ್ತದೆ.
———————————————————————————————————————–
ಚಿತ್ರ ಕೃಪೆ : ಅಂತರ್ಜಾಲ





