ಅಸಹಾಯಕತೆಯೇ ಹೊರತು ಸಾಮಾಜಿಕ ಕಳಕಳಿಯೇನಲ್ಲ..
ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯ ಶಬ್ಧಗಳ ಬಳಕೆಯ ಕುರಿತು ಇತ್ತೀಚೆಗೆ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಸರ್ವೋಚ್ಚ ನ್ಯಾಯಾಲಯ ಸಹ ಈ ನಿಟ್ಟಿನಲ್ಲಿ ಹೊಸ ತೀರ್ಪುಗಳನ್ನು ನೀಡುತ್ತಿದೆ. ಇತ್ತೀಚೆಗೆ ನಿಲುಮೆ ಎಂಬ ಫೇಸ್‌ಬುಕ್ ಗುಂಪಿನ ವಿರುದ್ಧ ದಿನೇಶ್ ಅಮಿನ್ ಮಟ್ಟು ಅವರು ದೂರು ದಾಖಲಿಸಿದ್ದರು. ಆ ದೂರು ನೀಡುವ ಹಿಂದೆ ದೊಡ್ಡ ಸಾಮಾಜಿಕ ಕಳಕಳಿ ಇದೆ ಎಂದು ಅವರು ಹಲವು ಕಡೆ ಹೇಳಿಕೊಂಡಿದ್ದಾರೆ. ಆದರೆ ಸ್ವಲ್ಪ ಸೂಕ್ಷ್ಮವಾಗಿ ಗಮನಹರಿಸಿದರೆ ಸಾಕು ಅವರ ಸಾಮಾಜಿಕ ಕಳಕಳಿಯ ಪೊರೆ ಕಳಚಿ, ಅವರ ಅಸಹಾಯಕತೆಯ ಅನಾವರಣ ಆಗುತ್ತದೆ. ಮೊದಲೇ ಸ್ಪಷ್ಟ ಪಡಿಸಬೇಕಿರುವ ಅಂಶವೆಂದರೆ, ಅಸಭ್ಯ ಭಾಷೆ ಬಳಕೆಯನ್ನು ಪ್ರೋತ್ಸಾಹಿಸುವ ಪ್ರಯತ್ನ ಈ ಲೇಖನದ್ದಲ್ಲ. ಬದಲಾಗಿ ಅದರ ನೆಪದಲ್ಲಿ, ಸಮಾಜ ವಿರೋಧಿ ಕ್ರಿಯೆ ನಡೆಯುತ್ತಿದೆ ಎಂಬುದನ್ನು ಸೂಚಿಸುವುದು.
ಈ ದೂರು ಸಾಮಾಜಿಕ ಕಾಳಜಿಯ ಭಾಗವೇ ಆಗಿದ್ದರೆ, ಅವಾಚ್ಯ ಶಬ್ಧಗಳನ್ನು ಬಳಸಿದವರ ವಿರುದ್ಧ ದೂರು ನೀಡುತ್ತಿದ್ದರು. 19000ದಷ್ಟು ಅಧಿಕ ಓದುಗ ಬಳಗದ ಎಲ್ಲಾ ಕಾಮೆಂಟುಗಳಿಗೂ ನಿರ್ವಾಹಕರೇ ಕಾರಣರಾಗುತ್ತಾರೆ ಎನ್ನುವುದಾದರೆ, ರಾಜ್ಯದಲ್ಲಾಗುವ ಎಲ್ಲಾ ಅತ್ಯಾಚಾರ, ಅನಾಚಾರಗಳಿಗೂ ಮುಖ್ಯಮಂತ್ರಿಗಳೇ ಹೊಣೆಗಾರರಾಗುತ್ತಾರೆಯೇ? ಅವರ ವಿರುದ್ಧ ಕೇಸು ದಾಖಲಿಸಲು ಸಾಧ್ಯವೇ? ಇಲ್ಲ ಎಂಬುದು ಎಲ್ಲರ ತರ್ಕ. ಅದಿರಲಿ ಸ್ವತಃ ಅಮೀನ್ ಮಟ್ಟು ಅವರೇ ಮಧ್ಯಮ ವರ್ಗದ ಮತದಾರರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.ಹಾಗೆ ನಿಂದಿಸಿರುವುದನ್ನು ಸುವರ್ಣ ವಾಹಿನಿಯ ಲೈವ್ ಚರ್ಚೆಯಲ್ಲಿ ಸಮರ್ಥಿಸಿಕೊಂಡಿದ್ದಾರೆ ಕೂಡ! ಅಲ್ಲದೇ ಬೇರೆಯವರನ್ನು/ಎದುರಾಳಿ ಚಿಂತಕರನ್ನು ವಾಚಾಮಗೋಚರವಾಗಿ ನಿಂದಿಸಿದ ಹಲವು ಲೇಖನಗಳನ್ನು ಸಾಮಾಜಿಕ ಜಾಲತಾಣದ ಅವರ ಗೋಡೆಯ ಮೇಲೆ ಹಂಚಿಕೊಂಡಿದ್ದಾರೆ. ಹಾಗೆಂದು ಯಾರೋ ಬರೆದ ಲೇಖನವನ್ನು ಹಂಚಿಕೊಂಡ ಕಾರಣಕ್ಕೆ ಇವರ ವಿರುದ್ಧ ಕೇಸು ದಾಖಲಿಸಲಾಗುತ್ತದೆಯೇ? ಈ ಸಂದರ್ಭದಲ್ಲೆಲ್ಲಾ ಮಾಯವಾಗಿದ್ದ ಸಾಮಾಜಿಕ ಹೊಣೆಗಾರಿಕೆ ಈಗ ದಿಢೀರನೇ ಬರಲು ಕಾರಣ ಏನು? ಯಾರೋ ಓರ್ವ ಸದಸ್ಯನ ಪ್ರತಿಕ್ರಿಯೆಗೆ ‘ನಿಲುಮೆ’ ಎಂಬ ಬೃಹತ್ ಓದುಗ ಗುಂಪನ್ನೇ ಮುಚ್ಚಿಸಬೇಕೆಂಬ ತರ್ಕ ಯಾಕೆ ಮುಖ್ಯವೆನಿಸಿತು? ಮತ್ತಷ್ಟು ಓದು
ಶಿಕ್ಷಕನ ಕಾಳಜಿಯೋ? ಬೌದ್ದಿಕ ಸಂವಾದಗಳ ಹನನವೋ?
-ಡಾ.ಎ. ಷಣ್ಮುಖ, ಕುವೆಂಪು ವಿಶ್ವವಿದ್ಯಾನಿಲಯ
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ‘ದಿನೇಶ್ ಅಮೀನ್ ಮಟ್ಟು’ ರವರು ಫೇಸ್ ಬುಕ್ ನಲ್ಲಿ ಅವರ ಲೇಖನವೊಂದಕ್ಕೆ ಪ್ರತಿಕ್ರಿಯಿಸುತ್ತಾ ಕೆಲುವ ಹುಡುಗರು ಬಳಸಿದ ಪದಪುಂಜಗಳಿಗಾಗಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಆ ಹುಡುಗರು ಬಳಸಿದ ಪದಪುಂಜಗಳು ಸಭ್ಯತೆಯ ಎಲ್ಲೆ ಮೀರಿತ್ತು. ಓರ್ವ ಬರಹಗಾರನ ಘನತೆಗೆ ಚ್ಯುತಿ ತರುವಂತಹ ಭಾಷೆಯಲ್ಲಿತ್ತು ಕೂಡ. ಈ ರೀತಿಯ ಪರಿಸ್ಥಿತಿ ಇದೊಂದೇ ಪ್ರಸಂಗಕ್ಕೆ ಸಂಬಂದಿಸಿದ್ದಲ್ಲ! ಸಾಮಾಜಿಕ ತಾಣಗಳನ್ನು ಒಮ್ಮೆ ಕಣ್ಣಾಡಿಸಿದರೆ ಅಲ್ಲಿ ಎಗ್ಗಿಲ್ಲದೆ ಹೀನಾಮಾನವಾಗಿ ಬೈಗುಳದ ಪದಗಳನ್ನೇ ಸಾಮಾನ್ಯವೆಂಬಂತೆ ಬಳಸುತ್ತಾ ಸಭ್ಯ ಮತ್ತು ಗೌರವಾನ್ವಿತ ಬರಹಗಾರರು ಅಸಹ್ಯಪಡುವಂತ ಭಾಷೆಗಳೇ ತುಂಬಿರುವುದನ್ನು ಸರ್ವೇ ಸಾಮಾನ್ಯವೆಂಬಂತೆ ಕಾಣಬಹುದು. ಈ ಕುರಿತು ಹಲವು ಬರಹಗಾರರು ಅದೇ ಸಾಮಾಜಿಕ ತಾಣಗಳಲ್ಲಿ ಆತಂಕ ವ್ಯಕ್ತಪಡಿಸುತ್ತಿರುವಂತದ್ದನ್ನೂ ಕಾಣಬಹುದು. ಇಂತಹ ಸನ್ನಿವೇಶದಲ್ಲಿ ದಿನೇಶ್ ಅಮೀನ್ ಮಟ್ಟುರವರ ಈ ನಡೆ ಇದಕ್ಕೆಲ್ಲಾ ಕಡಿವಾಣ ಹಾಕುವ ಒಂದು ದಿಟ್ಟ ಹೆಜ್ಜೆ ಎಂದು ಯೋಚಿಸುವುದು ಸಕಾರಣವಾಗಿಯೇ ಇದೆ. ಒಂದೊಮ್ಮೆ ದಿನೇಶ್ ಅಮೀನ್ ಮಟ್ಟುರವರ ಈ ಕ್ರಮದ ಹಿಂದೆ ಇದೇ ಕಾಳಜಿಯೇ ಇದ್ದಂತ ಪಕ್ಷದಲ್ಲಿ ಆರೋಗ್ಯಪೂರ್ಣ ಬೌದ್ದಿಕ ಚರ್ಚೆಯ ವಾತಾವರಣವನ್ನು ಬಯಸುವ ಯಾರೇ ಆದರೂ ಈ ನಡೆಯನ್ನು ಮುಕ್ತಮನಸ್ಸಿನಿಂದ ಬೆಂಬಲಿಸಲಿಕ್ಕೇಬೇಕು.
ಆದರೆ ವಾಸ್ತವ ಇದಕ್ಕೆ ವಿರುದ್ದವಾಗಿದೆ. ಅಂದರೆ ದಿನೇಶ್ ಅಮೀನ್ ಮಟ್ಟುರವರ ಈ ನಡೆಗೆ ದೊಡ್ಡಸಂಖ್ಯೆಯಲ್ಲಿ ಬೆಂಬಲ ನಿರೀಕ್ಷಿಸಬೇಕಾದ ಈ ಪ್ರಸಂಗದಲ್ಲಿ ಅವರ ಈ ನಡೆಯ ವಿರುದ್ದ ಚಳುವಳಿಯೋಪಾದಿಯಲ್ಲಿ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಸಾಮಾಜಿಕ ತಾಣಗಳಲ್ಲಿ ಅಸಭ್ಯ ಭಾಷಾ ಪ್ರಯೋಗದ ಬಗ್ಗೆ ಆತಂಕವನ್ನು ವ್ಯಕ್ತಪಡಿಸುತ್ತಿದ್ದವರಾದರೂ ದಿನೇಶರನ್ನು ಬೆಂಬಲಿಸ ಬೇಕಿತ್ತು! ಆದರೆ ಅವರಲ್ಲೂ ಕೆಲವರು ಇವರ ನಡೆಯನ್ನು ವಿರೋಧಿಸುತ್ತಿದ್ದಾರೆ ಮತ್ತು ಹಲವರು ಮೌನಕ್ಕೆ ಶರಣಾಗಿದ್ದಾರೆ ಇದು ಸೋಜಿಗದ ಸಂಗತಿ. ಹಾಗಿದ್ದರೆ ಇವರ ನಡೆಯನ್ನು ವಿರೋದಿಸುತ್ತಿರುವವರು ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಭಾಷಾ ಪ್ರಯೋಗಗಳನ್ನು ಬೆಂಬಲಿಸುತ್ತಿದ್ದಾರೆಯೇ? ಎಂದೂ ಸಹ ಯೋಚಿಸಬೇಕಾದ ಸಂಗತಿಯಾಗುತ್ತದೆ. ಈ ಸೂಜಿಗದ ಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕೆಂದರೆ ಅಮೀನ್ ಮಟ್ಟುರವರ ಈ ನಡೆಗೆ ಕಾರಣವಾದ ಇಡೀ ಘಟನೆಯನ್ನು ಒಮ್ಮೆ ಅವಲೋಕಿಸಬೇಕು. ಮತ್ತಷ್ಟು ಓದು
ಶಕ್ತಿ, ವ್ಯಕ್ತಿ, ಅಭಿವ್ಯಕ್ತಿ
– ಶ್ರೀವತ್ಸ ಜೋಶಿ
ಕಳೆದ ಶತಮಾನದ ಆರಂಭದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬೊಬ್ಬ ಯೋಧನಲ್ಲೂ ಆ ಮನೋಭಾವ ಪುಷ್ಕಳವಾಗಿ ಇತ್ತು. ಕಳೆದ ವರ್ಷ ಮೋದಿಯವರ ವಿಜಯಕ್ಕಾಗಿ ಹಗಲಿರುಳೂ ದುಡಿದ ಒಬ್ಬೊಬ್ಬ ಕಾರ್ಯಕರ್ತನಲ್ಲೂ ಆ ಮನೋಭಾವ ಹೇರಳವಾಗಿ ಇತ್ತು. ಅದೇನೆಂದರೆ- ಸ್ವಾರ್ಥ ಎಂಬುದು ರವಷ್ಟೂ ಇಲ್ಲದೆ, ಸಮಾಜಕ್ಕೆ ಒಳಿತಾಗಬೇಕು, ದೇಶಕ್ಕೆ ಒಳ್ಳೆಯದಾಗಬೇಕು, ನಾವು ಭಾರತೀಯರು ಅಭಿಮಾನದಿಂದ ತಲೆಯೆತ್ತಿ ನಿಲ್ಲುವಂತಾಗಬೇಕು ಎಂಬ ತುಡಿತ. ಅದಕ್ಕೋಸ್ಕರ ಯಾವ ಅಪಾಯಕಾರಿ ಮಾರ್ಗವನ್ನಾದರೂ ಹಿಡಿಯುವ ಛಲ. ವೈಯಕ್ತಿಕವಾಗಿ ತನ್ನನ್ನು ಯಾರು ಎಷ್ಟು ಜರಿದರೂ ಜರ್ಝರಗೊಳಿಸಿದರೂ ಸರಿಯೇ ದೇಶಕ್ಕೆ, ದೇಶದ ಆದರ್ಶಗಳ ಔನ್ನತ್ಯಕ್ಕೆ ಧಕ್ಕೆಯಾದರೆ, ಮಸಿ ಬಳಿದರೆ ಸಹಿಸಿಕೊಳ್ಳುವುದಿಲ್ಲ ಎಂಬ ಕಿಚ್ಚಿನಂಥ ಕೆಚ್ಚು.
ಇದೀಗ ’ನಿಲುಮೆ’ ಬಳಗದ ಸದಸ್ಯರಲ್ಲಿ ಕಾಣುತ್ತಿರುವುದೂ ಅದೇ ಕೆಚ್ಚಿನ ಮನೋಭಾವ. ಅಂತಹದೊಂದು ಶಕ್ತಿ ತಲೆಯೆತ್ತಿ ನಿಲ್ಲುತ್ತಿರುವುದು ತಂದಿದೆ ಕುತ್ಸಿತ ಬುದ್ಧಿಯ ಕುತಂತ್ರಿಗಳಿಗೆ ತಲೆನೋವ. ಸ್ವಾಮಿ ವಿವೇಕಾನಂದರನ್ನು ಕೀಳಾಗಿ ಚಿತ್ರಿಸಿ ಬರೆದಿದ್ದಕ್ಕೆ ಆ ಲೇಖಕನ ವಿರುದ್ಧ ನಿಲುಮೆಯ ಕೆಲ ಹುಡುಗರು ಕೆಟ್ಟ ಶಬ್ದಗಳನ್ನು ಬಳಸಿದ್ದಾರೆ ನಿಜ. ಆದರೆ ಏಕೆ ಅವರು ಹಾಗೆ ಮಾಡಿದರು ಎನ್ನುವುದಕ್ಕೆ ಉತ್ತರ ಮೇಲಿನ ಮೊದಲ ಪ್ಯಾರಗ್ರಾಫ್‌ನಲ್ಲಿ ಸಿಗುತ್ತದೆ. ಆ ಹುಡುಗರಿಗೆ ಸ್ವಾರ್ಥ ಇಲ್ಲ. ಸಮಾಜದಲ್ಲಿ ಹೇಳಿಕೊಳ್ಳುವಂಥ ಸ್ಥಾನಮಾನವೂ ಇಲ್ಲ. ಅದೆಲ್ಲ ಅವರಿಗೆ ಮುಖ್ಯವೂ ಅಲ್ಲ. ಆದರೆ ದೇಶದ ಆದರ್ಶಗಳನ್ನು ಯಾರಾದರೂ ಅವಹೇಳನ ಮಾಡಿದರೆ ಮಾತ್ರ ಅವರು ಖಂಡಿತ ಸಹಿಸಿಕೊಳ್ಳುವುದಿಲ್ಲ. ನಖಶಿಖಾಂತ ಉರಿದು ಉಗಿದು ಉಪ್ಪಿನಕಾಯಿ ಹಾಕದೆ ಬಿಡುವುದಿಲ್ಲ.
ವಿವೇಕಾನಂದರ ಕುರಿತು ಕೆಟ್ಟದಾಗಿ ಬರೆದ ದಿನೇಶ್ ಅಮೀನ್ ಮಟ್ಟು ಹಾಗಲ್ಲ. ಅವರು ಯಾರ ಬಗ್ಗೆ ಎಷ್ಟೂ ಕೆಟ್ಟದಾಗಿ ಬರೆಯಬಹುದು. ಯಾರನ್ನು ಬೇಕಿದ್ದರೂ ಷಂಡರೆಂದು ಹೀಗಳೆಯಬಹುದು. ಭಾರತದೇಶದ ಸಂಸತ್ತನ್ನು ಪಾಯಿಖಾನೆ ಎಂದು ಚಿತ್ರಿಸಿದರೆ ಅಂತಹ ಅಭಿವ್ಯಕ್ತಿ ತನಗಿಷ್ಟವಾಯ್ತು ಎನ್ನಬಹುದು. ಆದರೆ ತನ್ನನ್ನು ಮಾತ್ರ ಯಾರಾದರೂ ಕೆಟ್ಟ ಶಬ್ದಗಳಿಂದ ಜರಿದರೆ ಸುತಾರಾಂ ಸಹಿಸಿಕೊಳ್ಳುವುದಿಲ್ಲ. ಅವರು ನಖಶಿಖಾಂತ ಉರಿಯುವುದು ತನ್ನ ಬುಡಕ್ಕೆ ಕೊಡಲಿ ಬಿದ್ದಾಗ ಮಾತ್ರ.
ನಿಲುಮೆ ಹುಡುಗರಿಗೂ ಮಟ್ಟುಗೂ ಅದೇ ಮೂಲಭೂತ ವ್ಯತ್ಯಾಸ. ನಿನ್ನೆ ಸುವರ್ಣ ನ್ಯೂಸ್ ಸುದ್ದಿವಾಹಿನಿಯಲ್ಲಿ ನೇರಪ್ರಸಾರವಾದ ಚರ್ಚೆಯಲ್ಲಿ ಅದು ಮತ್ತಷ್ಟು ಸ್ಪಷ್ಟವಾಯಿತು. ರಾಜ್ಯದ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಎಂಬ ಗೌರವದ ಹುದ್ದೆಯಲ್ಲಿರುವ ದಿನೇಶ್ ಅಮೀನ್ ಮಟ್ಟು ಆ ಚರ್ಚೆಯಲ್ಲಿ ಆಕ್ರೋಶದಿಂದ ಕಿರುಚಾಡುತ್ತ ತನಗೆ ಮತ್ತು ತನ್ನ ಹುದ್ದೆಗೆ ಇರಬೇಕಾದ ಗೌರವ ಘನತೆಗಳ ಕನಿಷ್ಟ ಅರಿವೂ ಇಲ್ಲದೆ ಕೂಗಾಡುತ್ತ ಚರ್ಚೆಯಲ್ಲಿ ಪಾಲ್ಗೊಂಡರು. ಅವರ ವೃತ್ತಿ ಅನುಭವದ ವರ್ಷಗಳಷ್ಟು ವಯಸ್ಸೂ ಆಗದಿರುವ ರಾಕೇಶ್ ಶೆಟ್ಟಿ (ನಿಲುಮೆ ಬಳಗ) ಒಂದು ಗಂಭೀರ ಚರ್ಚೆಗೆ ಹೇಗೆ ತಯಾರಾಗಿ ಬರಬೇಕು, ಚರ್ಚೆಯ ವೇಳೆ ಹೇಗೆ ವರ್ತಿಸಬೇಕು, ಯಾವಾಗ ಹೇಗೆ ಎಷ್ಟು ಮಾತನಾಡಬೇಕು ಎಂಬ ಆದರ್ಶವನ್ನು ಮೆರೆದರು!
ತಾನು ಮಾಡಿದ್ದೇ ಸರಿ ಎಂಬ ದರ್ಪವನ್ನು ಚರ್ಚೆಯುದ್ದಕ್ಕೂ ತೋರಿದ ಮಟ್ಟು, ಮಧ್ಯಮವರ್ಗವನ್ನು ತಾನು ಷಂಡ ಎಂದಿದ್ದನ್ನು ಮತ್ತೆಮತ್ತೆ ಸಮರ್ಥಿಸಿಕೊಂಡರು. ಆದರೆ ತನ್ನನ್ನು ಕೆಟ್ಟ ಶಬ್ದಗಳಿಂದ ಬೈಯ್ದದ್ದು ತನಗೆ ನೋವು ತಂದಿತು ಎಂದು ಅಳಲುತೋಡಿಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವ ಭಾಷೆಯ ಬಗ್ಗೆ ಎಚ್ಚರವಿರಬೇಕೆಂದು ಬೋಧಿಸಿದರು. ಆದರೆ ಆ ಬೋಧನೆ ಸ್ವತಃ ತನಗೆ ಲಗಾವಾಗುವುದಿಲ್ಲ, ತಾನು ಪ್ರತ್ಯಕ್ಷವಾಗಿ/ಪರೋಕ್ಷವಾಗಿ “ಪೋಷಿಸುತ್ತಿರುವ” ಸಮಾಜವಿರೋಧಿ ದುಷ್ಟಶಕ್ತಿಗಳಿಗೆ ಮತ್ತು ಹುಲ್ಲಿನಲ್ಲಿರುವ ಹಾವಿನಂಥವರಿಗೂ ಅನ್ವಯವಾಗುವುದಿಲ್ಲ ಎಂದು ತೋರಿಸಿದರು. ಕೆಟ್ಟ ಭಾಷೆ ಬಳಸುವುದನ್ನು ತಡೆಗಟ್ಟುವುದು ಸಾಧ್ಯವಾಗದಿದ್ದರೆ ನಿಲುಮೆ ಸಂಘಟನೆಯನ್ನೇ ಮುಚ್ಚಿಹಾಕಬೇಕೆಂಬ ಬಿಟ್ಟಿ ಉಪದೇಶ ಕೊಟ್ಟರು. ತಾನು ಮಾತ್ರ ಎಂತೆಂಥ ಗಲೀಜು ಜಂತುಗಳನ್ನು ಬಗಲಲ್ಲಿಟ್ಟುಕೊಂಡಿದ್ದೇನೆ ಎನ್ನುವುದರ ಪರಿವೆಯಿಲ್ಲದವರಾದರು.
ಎತ್ತರದ ದನಿಯಲ್ಲಿ ಕೂಗಾಡಿ, ಅಧಿಕಾರದ ಮದವನ್ನು ತೋರಿ, ಚರ್ಚೆಯಲ್ಲೂ ತಾನು ಗೆದ್ದೆ ಎಂದು ಮಟ್ಟು ತಿಳಿದುಕೊಂಡಿರಬಹುದು. ಗೆಲ್ಲುವುದು ಬಿಡಿ, ಅವರು ಸೋತದ್ದಷ್ಟೇ ಅಲ್ಲ, ಚರ್ಚೆಯನ್ನು ನೋಡಿದ ಎಷ್ಟೋ ವೀಕ್ಷಕರಿಗೆ ಅವರ ಮೇಲಿದ್ದ ಅರೆಬರೆ ಗೌರವವೂ ಸತ್ತುಹೋಯಿತಿರಬಹುದು. ಅಂತಹ ಮಟ್ಟು, ಮಾನ್ಯ ಮುಖ್ಯಮಂತ್ರಿಗೆ ಮಾಧ್ಯಮಸಲಹೆಗಾರ ಅಂತೆ. ಮುಗಿದ್ಹೋಯ್ತು!
ಚರ್ಚೆಯ ವಿಡಿಯೋ ಲಿಂಕ್ ಇಲ್ಲಿವೆ:
5ನೇ ವರ್ಷದ ಸಂಭ್ರಮದಲ್ಲಿ ಶುರುವಾಗಲಿದೆ “ನಿಲುಮೆ ಪ್ರಕಾಶನ”
ನಿಲುಮೆಯ ಪ್ರಿಯ ಓದುಗರೇ,
“ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ,ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು.ಅಷ್ಟಕ್ಕೂ ‘ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ.ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು” ಎನ್ನುವ “ನಿಲುವು” ಮತ್ತು “ಎಲ್ಲ ತತ್ವದ ಎಲ್ಲೆ ಮೀರಿ” ಎಂಬ ಅಡಿ ಬರಹದೊಂದಿಗೆ ನಾವೊಂದಿಷ್ಟು ಗೆಳೆಯರು ಸೇರಿಕೊಂಡು “ನಿಲುಮೆ” (nilume.net) ವೆಬ್ ತಾಣವನ್ನು ಪ್ರಾರಂಭಿಸಿ ನಾಲ್ಕು ವರ್ಷಗಳನ್ನು ಪೂರೈಸಿ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ “ನಿಲುಮೆ ಪ್ರಕಾಶನ”ವನ್ನು ಪ್ರಾರಂಭಿಸುತ್ತಿದ್ದೇವೆ.
ಈಗಾಗಲೇ ಕನ್ನಡದಲ್ಲಿ ಹಲವಾರು ಪ್ರಕಾಶನಗಳಿರುವಾಗ ಇನ್ನೊಂದು ಏಕೆ? ಅನ್ನೋ ಪ್ರಶ್ನೆ ಕೂಡ ಹುಟ್ಟಲಾರದ ಸಮಯವಿದು.ಹಾಗಾಗಿ ಈ ಮೇಲಿನ ಪ್ರಶ್ನೆ ಓದುಗರಲ್ಲಿ ಏಳುವ ಸಾಧ್ಯತೆಯೂ ಇಲ್ಲ.ಈ ಕಾರಣದಿಂದ ನಾವೇ ಈ ಪ್ರಶ್ನೆಯನ್ನು ಎತ್ತಿ ನಮ್ಮ ಉದ್ದೇಶದ ಕುರಿತು ತಮ್ಮ ಗಮನವನ್ನು ಸೆಳೆಯುವ ಪ್ರಯತ್ನ ಮಾಡುತ್ತೇವೆ.
ರಮಾನಂದ ಐನಕೈಯವರ ‘ಸಂಸ್ಕೃತಿ ಸಂಕಥನ” ಲೇಖನ ಸರಣಿಯ (ಈ ಲೇಖನಗಳು “ನಮಗೇ ನಾವೇ ಪರಕೀಯರು” ಪುಸ್ತಕವಾಗಿ ಹೊರಬಂದು ಇದೀಗ ಮೂರನೇ ಮುದ್ರಣವನ್ನು ಕಾಣುತ್ತಿದೆ) ಮೂಲಕ ಶುರುವಾದ ನಿಲುಮೆ ಮತ್ತು CSLC ತಂಡಗಳ ಬಾಂಧವ್ಯ ಇನ್ನಷ್ಟು ಆಪ್ತವಾಗಿದ್ದು ೨೦೧೩ರಲ್ಲಿ ಕರ್ನಾಟಕದ ಬೌದ್ಧಿಕ ವಲಯದಲ್ಲಿ ದೊಡ್ಡ ಸಂಚಲವನ್ನುಂಟು ಮಾಡಿದ್ದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆಯ ಸಂದರ್ಭದಲ್ಲಿ.ರಾಜ್ಯದ ಪ್ರಗತಿಪರ ಪತ್ರಿಕೆಯೊಂದರಲ್ಲಿ ಶುರುವಾದ ಈ ಚರ್ಚೆ ಏಕಮುಖವಾಗಿ ಸಾಗಿ ಒಂದು ಕಡೆಯವರ ಲೇಖನಗಳಿಗೆ ಮಾತ್ರ ಮನ್ನಣೆ ನೀಡಿ ಇನ್ನೊಂದು ಗುಂಪಿನ ವಾದವನ್ನೂ ಆಲಿಸುವ ನಿಲುವನ್ನು ತೋರಿಸದಿದ್ದಾಗ ಸಿ.ಎಸ್.ಎಲ್.ಸಿ ತಂಡದ ಜೊತೆ ನಿಂತು,ನಿಲುಮೆಯ ನಿಲುವಿಗೆ ಬದ್ಧವಾಗಿ ನಾವು ಬೌದ್ಧಿಕ ಫ್ಯಾಸಿಸಂ ಅನ್ನು ವಿರೋಧಿಸಿದೆವು.
ಈ ಚರ್ಚೆಯ ಸಮಯದಲ್ಲಿ ಮತ್ತು ಆ ನಂತರ ಕರ್ನಾಟಕದ ಬುದ್ಧಿಜೀವಿ ವಲಯ ನಡೆದುಕೊಂಡ ರೀತಿ ಆಘಾತಕಾರಿಯಾಗಿತ್ತು. ಅವರ ನಡೆ ಹೇಗಿತ್ತೆಂದರೆ,ತಮಗೇ ಬೇಕಾದ ವಾದಗಳಿಗೆ ಮಾತ್ರ ಮನ್ನಣೆ ನೀಡುತ್ತ,ಅಂತ ವಾದವನ್ನು ಮುಂದಿಡುವ ಜನರನ್ನು ಒಂದಾಗಿಸಿಕೊಂಡು ಉಳಿದವರನ್ನು ಬೌದ್ಧಿಕ ಅಸ್ಪೃಷ್ಯರನ್ನಾಗಿಸುವುದು.ಇಂತ ಬೌದ್ಧಿಕ ಫ್ಯಾಸಿಸಂನ ಉಸಿರುಗಟ್ಟಿಸುವ ಕಾಲದಲ್ಲಿ ಹೊಸತೊಂದು ಬೌದ್ಧಿಕ ಚಳುವಳಿ ಸಾಮಾನ್ಯ ಜನರನ್ನು ತಲುಪಬೇಕೆಂದರೆ ಅದಕ್ಕೊಂದು ಪ್ರಕಾಶನದ ಅಗತ್ಯವನ್ನು ನಾವು ಮನಗಂಡೆವು.ಹಾಗೇ ರೂಪು ತಳೆದಿದ್ದೇ ನಿಲುಮೆ ಪ್ರಕಾಶನ.
ನಮ್ಮ ಪ್ರಕಾಶನದ ಮೊದಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ”.ಈ ಪುಸ್ತಕ ಪ್ರೊ.ಬಾಲಗಂಗಾಧರ ಅವರ ಸಂಶೋಧನಾ ಗ್ರಂಥ “The Heathen in his Blindness” ನ ವಿಚಾರಧಾರೆಗಳನ್ನು ಆಧರಿಸಿ ಪ್ರೊ.ರಾಜಾರಾಮ್ ಹೆಗಡೆ ಅವರು ಬರೆದಿರುವ ಮತ್ತು ವಿಜಯವಾಣಿ ಪತ್ರಿಕೆಯಲ್ಲಿ ಕೆಲಕಾಲ “ವಸಾಹತುಶಾಹಿಯ ವಿಶ್ವಪ್ರಜ್ಞೆ” ಸರಣಿಯಾಗಿ ಪ್ರಕಟಗೊಂಡಿದ್ದ ಲೇಖನಗಳಗುಚ್ಛ.
ಪ್ರೊ.ಎಸ್ ಎನ್ ಬಾಲಗಂಗಾಧರ ಅವರ ನೇತೃತ್ವದಲ್ಲಿ 5 ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಬೆಲ್ಜಿಯಂನ ಗೆಂಟ್ ವಿವಿಯ ಸಹಭಾಗಿತ್ವದೊಂದಿಗೆ ಶುರುವಾದ ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ(CSLC) ಭಾರತೀಯ ಸಮಾಜ, ಸ್ಥಳಿಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.(ಕರ್ನಾಟಕದ ಕೆಲವು ಬುದ್ಧಿಜೀವಿಗಳ ಚಿತಾವಣೆಯಿಂದಾಗಿ ಈಗ ಆ ಸಂಶೋಧನಾ ಕೇಂದ್ರವನ್ನು ಮುಚ್ಚಿಸಲಾಗಿರುವುದು ನಿಮಗೇ ತಿಳಿದೇ ಇದೆ.)
ಕಳೆದ ಕೆಲವು ವರ್ಷಗಳಿಂದ ಪ್ರೊ.ಬಾಲಗಂಗಾಧರರಿಂದ ಕನ್ನಡದಲ್ಲಿ ಹೊಸ ಚಿಂತನೆಯ ಅಲೆ ಹುಟ್ಟಿಕೊಂಡಿದೆ.ಅವರು ಭಾರತೀಯ ಸಂಸ್ಕೃತಿಯ ಕುರಿತು ಹೊಸ ವಿಚಾರಗಳನ್ನು ತಿಳಿಸುತ್ತಿದ್ದಾರೆ.ಕನ್ನಡದ ಹಾಗೂ ಭಾರತೀಯ ಚಿಂತಕರು ಶತಮಾನಕ್ಕೂ ಹಿಂದಿನಿಂದ ಎದುರಿಸಿದ ಬೌದ್ಧಿಕ ಸಮಸ್ಯೆಗಳನ್ನು ತಮ್ಮ ಸಂಶೋಧನೆಗಳ ಮೂಲಕ ಉತ್ತರಿಸಲು ಬಾಲು ಪ್ರಯತ್ನಿಸುತ್ತಾರೆ.ಈ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವು ನಿರ್ದಿಷ್ಟವಾಗಿ ಏಕೆ ಹುಟ್ಟಿಕೊಳ್ಳುತ್ತವೆ,ಅವುಗಳಿಂದ ಹೊರಬರುವ ದಾರಿ ಯಾವುದು ಎಂಬುದನ್ನು ಕಂಡುಕೊಳ್ಳಲು ಅವರ ಸಂಶೋಧನೆ ಸಹಾಯಮಾಡುತ್ತದೆ. ಹಾಗಾಗಿ ಸ್ವಾಭಾವಿಕವಾಗಿಯೇ ಅವರ ಸಂಶೋಧನೆಗಳು ಸ್ವೀಕೃತ ವಿಚಾರಗಳನ್ನು ಅಲ್ಲಗಳೆಯುತ್ತವೆ ಹಾಗೂ ಪ್ರಶ್ನೆಗೀಡುಮಾಡುತ್ತವೆ.ಇಂದಿನ ಭಾರತೀಯ ಸಮಾಜದಲ್ಲಿ ಇಂಥ ಸ್ವೀಕೃತ ಚಿಂತನೆಗಳು ಬಗೆಹರಿಯದ ಸಮಸ್ಯೆಗಳನ್ನು ಸೃಷ್ಟಿಸಿವೆ.ಬಾಲಗಂಗಾಧರರ ವಿಚಾರಗಳು ತುಂಬ ಸಮರ್ಥವಾಗಿ ಅವುಗಳಿಂದ ಹೊರಬರುವ ದಾರಿಯನ್ನು ಸೂಚಿಸುತ್ತಿವೆ.ಜೊತೆಗೇ ನಮ್ಮ ಹಿಂದಿನ ಚಿಂತಕರ ಒಳನೋಟಗಳನ್ನು ಸ್ಪಷ್ಟವಾಗಿ ಗ್ರಹಿಸಿ ಅವುಗಳ ಮಹತ್ವವನ್ನು ಅರಿಯಲೂ ಅವು ಸಹಾಯ ಮಾಡುತ್ತವೆ.ಈ ಕಾರಣದಿಂದ ಕಳೆದ ಒಂದು ದಶಕದಿಂದ ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಬೌದ್ಧಿಕ ವಲಯದಲ್ಲಿ ಅವರ ವಿಚಾರಗಳ ಕುರಿತು ತೀವ್ರ ಆಸಕ್ತಿ ಹಾಗೂ ಕುತೂಹಲ ಮೂಡಿದೆ.
ಬಾಲಗಂಗಾಧರ ಚಿಂತನೆಗಳು ಕೇವಲ ಶೈಕ್ಷಣಿಕ ಕಸರತ್ತುಗಳಲ್ಲ.ಅಥವಾ ಒಬ್ಬ ವ್ಯಕ್ತಿಯ ಖಾಸಗಿ ಸಂಗತಿಗಳಲ್ಲ.ಇದು ಭಾರತೀಯ ಸಂಸ್ಕೃತಿಯ ಪುನರುಜ್ಜೀವನದತ್ತ ನಡೆಯುತ್ತಿರುವ ಒಂದು ಬೌದ್ಧಿಕ ಚಳವಳಿಯಾಗಿದೆ.ಅವರು ಇದನ್ನು ಪ್ರತ್ಯಭಿಜ್ಞಾನ ಎಂದು ಗುರುತಿಸುತ್ತಾರೆ.ಅಂದರೆ ವಸಾಹತುಕಾಲದಲ್ಲಿ ನಾವೊಂದು ಸಾಂಸ್ಕೃತಿಕ ಮರೆವೆಗೆ ಒಳಗಾಗಿದ್ದೇವೆ.ಪ್ರತ್ಯಭಿಜ್ಞಾನ ಎಂದರೆ ಆ ಮರೆವೆಯಿಂದ ಹೊರಬಂದು ನಮ್ಮ ಸಂಸ್ಕೃತಿಯನ್ನು ಮತ್ತೆ ನೆನಪಿಗೆ ತಂದುಕೊಳ್ಳುವುದು.
ಇಂತಹ ಬೌದ್ಧಿಕ ಚಳವಳಿಯ ಮೂಲಕ ಒಂದು ಓದುಗರ ಬಳಗವನ್ನು ಕಟ್ಟುತ್ತಾ ಚಿಂತನ ಮಂಥನಗಳಿಗೆ ಕನ್ನಡದಲ್ಲಿ ಸರಾಗ ಮಾರ್ಗವನ್ನು ನಿರ್ಮಿಸುವುದೂ ನಿಲುಮೆ ಪ್ರಕಾಶನದ ಗುರಿ.ಪ್ರತ್ಯಭಿಜ್ಞಾನಕ್ಕಾಗಿ ತುಡಿಯುತ್ತಿರುವ ಕನ್ನಡ ಓದುಗರು ನಮ್ಮ ಈ ಪ್ರಯತ್ನವನ್ನು ಬೆಂಬಲಿಸಿ,ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆಯೊಂದಿಗೆ ಮುಂದಡಿಯಿಡುತ್ತಿದ್ದೇವೆ.
ಈ ಬೌದ್ಧಿಕ ಚಳವಳಿಯ ಭಾಗವಾಗಿಸಿಕೊಂಡು ಇತರೆ ಉತ್ಸಾಹಿ ಚಿಂತಕರು ಬರೆಯಲು ಆರಂಭಿಸಿದ್ದಾರೆ.ಬಾಲು ಅವರ ಚಿಂತನೆಗಳನ್ನು ಅಧ್ಯಯನ ನಡೆಸಿ ಆ ಮೂಲಕ ತತ್ಕಾಲೀನ ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿದ್ದಾರೆ.ಅವರ ಪುಸ್ತಕಗಳನ್ನೂ ಪ್ರಕಟಿಸುವ ಉದ್ದೇಶವಿದೆ.
ಇವೆಲ್ಲದರ ಜೊತೆಗೆ,”ಎಲ್ಲ ತತ್ವದ ಎಲ್ಲೆ ಮೀರಿ” ನಿಲ್ಲುವ ನಿಲುಮೆಯ ನಿಲುವಿಗೆ ಬದ್ಧವಾಗಿ ಎಲ್ಲಾ ಸಾಹಿತ್ಯ ಪ್ರಕಾರದ ಸೃಜನಶೀಲ ಕೃತಿಗಳನ್ನು ಪ್ರಕಟಿಸುವ ಮೂಲಕ ಮತ್ತು ಹೊಸ ಪ್ರತಿಭೆಗಳಿಗೆ ವೇದಿಕೆಯಾಗುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಳಿಲು ಸೇವೆ ಸಲ್ಲಿಸುವುದು ನಮ್ಮ ಯೋಜನೆಯಾಗಿದ್ದು ಆದ್ಯತೆಯ ಆಧಾರದಲ್ಲಿ ಕಾರ್ಯನಿರ್ವಹಿಸಲು ಯೋಚಿಸಲಾಗಿದೆ.
ನಿಮ್ಮ ಬೆಂಬಲ,ಹಾರೈಕೆ ನಮ್ಮ ಜೊತೆಗಿರಲಿ.
ನಿಮ್ಮೊಲುಮೆಯ,
ನಿಲುಮೆ ಬಳಗ
ಕಾಡಿನ ನಂಟು – ವ್ಯಕ್ತಿ ಚಿತ್ರ
– ಭರತೇಶ ಅಲಸಂಡೆಮಜಲು
ಅದು ಕಣಿಯಾರು ಮಲೆ , ಒಂದು ಕಾಲದಲ್ಲಿ ಸಸ್ಯಜನ್ಯ, ಪ್ರಾಣಿಗಳಿಂದ ತುಂಬಿದ್ದ ಸಮೃದ್ಧ ಅರಣ್ಯ , ಮೂಜುವಿನ ಕೂಗು , ಗೂಬೆಯ ಹಾಡು , ಪೊಟ್ಟ ಹಕ್ಕಿಯ ಕರ್ಕಶ ಧ್ವನಿ ಸಾಮಾನ್ಯವಾಗಿರುತಿತ್ತು. ಇಂದು ಸಹ ಒಂದಷ್ಟು ಇವುಗಳ ಸಂಖ್ಯೆಯಲ್ಲಿ ಅವರೋಹಣವಾಗಿದ್ರೂ ನೈಜತೆಯನ್ನು ಉಳಿಸಿಕೊಂಡು ಬಂದಿದೆ. ಕಾಡಿನ ತಪ್ಪಲಿನಲ್ಲಿರುವ ಅರಣ್ಯ ಇಲಾಖೆಯ ಗುಪ್ಪೆಯ ವರೆಗೆ ಒತ್ತುವರಿ ಮಾಡಿ ಮನೆ ಕಟ್ಟಿಸಿಕೊಂಡು ಜೀವನ ಸಾಗಿಸುವ ಕಷ್ಟ ಜೀವಿಗಳು , ಅವರೊಬ್ಬ ಈ ಮುದರ , ತನ್ನ ಎರಡು ಕೋಣೆಯ ಪುಟ್ಟ ಮುಳಿ ಹುಲ್ಲಿನ ಮನೆಗೆ ಮಳೆಗಾಲದ ಮೊದಲೂಮ್ಮೆ ಅಡಕೆ ಹಾಲೆಯ ತುಂಡುಗಳನಿಟ್ಟು ಮಾಡಿನ ಸಂದಿನ ಸೆರೆಯಿಂದ ಸೂರ್ಯನ ಬೆಳಕು ಬರುವುದನ್ನು ತಡೆಯುತ್ತಾನೆ , ಗಾಳಿಗೆ ಅಲ್ಲಾಡುವ ಸೋಗೆಯನ್ನು ನಿಲ್ಲಿಸಲು ತೆಂಗಿನ ಮಡಲೋ , ಬಿದಿರಿನ ತೊಳುಗಳನಿಟ್ಟು ಸಿಂಗಾರ ಮಾಡುತ್ತಾನೆ. ಆರು ಜನರಿರುವ ಮನೆಯಲ್ಲಿ ಯಜಮಾನನಾಗಿಯೇ ಇದ್ದು ದುಡಿಯದೇ ಜೀವನ ಸಾಗಿಸುತಿದ್ದ. ಬೇಸಗೆಯಲ್ಲಿ ಜೇನು ಹಿಡಿದು ತಂದು ಹತ್ತಿರದ ಭಟ್ರ ಅಂಗಡಿ ಮಧು ಮಲ್ಟಿಪಲ್ಸ್ಗೆ ಪೆಟ್ಟಿಗೆ ಜೇನೆಂದು ಮಾರಿ ದುಡ್ಡು ಮಾಡುತಿದ್ದ . ಬೇಡವಾದ ಪುರಿಯೆದಿ , ಮಂಜೊಲ್ ಎದಿಗಳೆಂದು ವಿಂಗಡಿಸಿ ಅದೆಷ್ಟೋ ಬಾರಿ ನನ್ನ ಬಾಯನ್ನು ಸಿಹಿ ಮಾಡಿದ್ದ . ಅಪರೂಪಕ್ಕೆಂಬಂತೆ ಜೇನಿನ ಅತಿಯಾದ ಪ್ರೀತಿಯಿಂದ ಆತನನ್ನು ಖಾರವಾಗಿ ಕುಟುಕಿ ಹನುಮಂತನಾದದ್ದು ಇದೆ . ಯಾವ ಕಲ್ಲಿನ ಸೆರೆಯಲ್ಲಿ ಯಾವ ಜೇನಿದೆ ಎಂದು ಆತನಿಗೆ ತಿಳಿಯುತ್ತಿತ್ತು , ತುಡುವೆ , ಕೋಲ್ಚಿಯಾ , ಕುಡುಪೋಲ್ , ಮೊಜಂಟಿ , ಅತೀ ಎತ್ತರದಲ್ಲಿ ಗೂಡು ಕಟ್ಟುವ ಪೆರಿಯ ಹೀಗೆ ಹಲವು ….. ಯಾವಾಗಲು ಏಕಾಂಗಿಯಾಗಿ ಅಲೆಯುವ ಆತನಿಗೆ ಅನೇಕ ಬಾರಿ ಸಾಥ್ ನೀಡುತಿದದ್ದು ನಮ್ಮ ಮನೆಯ ರಾಜು , ಮೆಲ್ಲನೆ ಆತನಿಂದ ಮುಂದೆ ಮುಂದೆ ಹೋಗಿ ಬಾಲ ಅಲ್ಲಾಡಿಸುತ್ತಾ , ಭೂ ವಿಜ್ಞಾನಿಯಂತೆ ಮೂಸಿ ಕಲ್ಲಿನ ಸೆರೆಯಲ್ಲಿರುವ ಜೇನನ್ನು ಸಂಶೋಧಿಸುತಿತ್ತು , ಎತ್ತರದ ಕುಂಬು ಕುತ್ತಿಯ ಮೇಲೆ ಕಾಡುಕೋಳಿಯ ಮೊಟ್ಟೆಯನ್ನು ಗೊತ್ತು ಮಾಡಿಸುತಿತ್ತು. ಮತ್ತೆ ಋತುಮಾನ ಅನುಸಾರ ವಾಗಿ ಬೆಳೆಯುವ ಕಾಡುತ್ಪತಿಗಳಾದ ಸೀಗೆ , ಉಂಡೆ ಪುಲಿ , ಕಾಟ್ ಪುಲಿ, ಲೆಂಕಿರಿ ಕೊಕ್ಕೆ , ಬೆದ್ರ್ ಕೇರ್ಪು ಗಳನ್ನೂ ತಂದು ಸೇಸಪ್ಪಣ್ಣನ ಅಂಗಡಿಗೋ, ಮೂಸೆ ಬ್ಯಾರಿಗೋ ಮಾರುತಿದ್ದ.
ಮತ್ತಷ್ಟು ಓದು
ಆಳ್ವಾಸ್ ವಿರಾಸತ್ ಎಂಬ ಸಾಂಸ್ಕೃತಿಕ ವೈಭವ
ಡಾ.ಸಂತೋಷ್ ಕುಮಾರ್ ಪಿ.ಕೆ
ಇತ್ತೀಚೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದಂತಹ ಒಬ್ಬರು ಹೇಳುತ್ತಿದ್ದರು, ಏನು ಚಂಡೆಯ ಶಬ್ದವೇ ಬರುತ್ತಿಲ್ಲ, ಆಳ್ವಾಸ್ ಎಂದರೆ ಯಾವುದಾದರೂ ಒಂದು ಕಾರ್ಯಕ್ರಮ ಜರುಗುವ ತಾಣ ಎಂಬುದೇ ನಮ್ಮ ಭಾವನೆ ಎನ್ನುತ್ತಿದ್ದರು. ಆ ಮಾತಿನ ಅರ್ಥ, ಆಳ್ವಾಸ್ ಕೇವಲ ಒಂದು ಶಿಕ್ಷಣ ಸಂಸ್ಥೆಯಾಗಿ ಮಾತ್ರ ತನ್ನನ್ನು ತಾನು ಗುರುತಿಸಿಕೊಳ್ಳದೆ, ಶಿಕ್ಷಣದ ಜೊತೆ ಜೊತೆಗೆ ಸಾಂಸ್ಕೃತಿಕ ವಿಷಯಗಳನ್ನೂ ಸಹ ವಿದ್ಯಾರ್ಥಿಗಳಲ್ಲಿ ಅಳವಡಿಸುವ ಕಾರ್ಯವನ್ನು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿ ಹಾಗೂ ವಿರಾಸತ್ ಕಾರ್ಯಕ್ರಮಗಳು ಇಡೀ ಸಂಸ್ಥೆಯ ಬಹುದೊಡ್ಡ ಸಾಂಸ್ಕೃತಿಕ ಮತ್ತು ಸಾಹಿತ್ತಿಕ ಸವಿಯನ್ನು ಒದಗಿಸುವ ವಿಶಿಷ್ಟ ಘಟನೆಗಳಾಗಿವೆ.
ಜನವರಿ 8 ರಿಂದ 11 ರವರೆಗೆ ಮೂಡಬಿದರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆದ ಸಾಂಸ್ಕೃತಿಕ ಹಬ್ಬವು ಭಾರತದ ವಿವಿದೆಡೆಯಿಂದ ಕಲಾವಿದರಿಗೆ ವೈಭವಯುತ ವೇದಿಕೆಯನ್ನು ಒದಗಿಸಿಕೊಟ್ಟಿತು. ಜುಗಲ್ ಬಂದಿ ಸಂಗೀತಗಳ ಆಸ್ವಾದನೆ, ಪಂಜಾಬಿ, ಗುಜರಾತಿ ಹಾಗೂ ಶ್ರೀಲಂಕಾದ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನತಣಿಸಿದವು. ಡ್ಯಾನ್ಸ್ ಆನ್ ವ್ಹೀಲ್ಸ್, ಮಡಿಕೆಗಳ ಮೇಲಿನ ನೃತ್ಯ, ದೃಷ್ಟಿಮಾಂದ್ಯ 30 ಕಲಾವಿದರು ಏಕ ಕಾಲದಲ್ಲಿ ವೇದಿಕೆಯ ಮೇಲೆ ಗಾಯನ ಕಾರ್ಯಕ್ರಮ, ಯಕ್ಷಗಾನದ ಹಾಡು ಮತ್ತು ವೈಯಲಿನ್ ಸಂಗೀತದ ವಿಶಿಷ್ಟ್ಯ ಸಮ್ಮಿಶ್ರಣ ಇವೆಲ್ಲವೂ ವಿರಾಸತ್ ಗೆ ಮೆರುಗು ನೀಡಿದವು. ನಾಲ್ಕು ದಿನಗಳು ಹೇಗೆ ಕಳೆದವು ಎಂಬುದೇ ಪ್ರೇಕ್ಷಕರಿಗೆ ತಿಳಿಯದಾಗಿದೆ, ಆ ಮಟ್ಟಿಗೆ ವೈವಿಧ್ಯಮಯ ಕಾರ್ಯಕ್ರಮಗಳು ಜನರ ಮನಸ್ಸನ್ನು ಆವರಿಸಿದ್ದವು. ಮತ್ತಷ್ಟು ಓದು
ನವಯುಗಾಚಾರ್ಯ ಸ್ವಾಮಿ ವಿವೇಕಾನಂದ
– ಎಸ್.ಎನ್.ಭಾಸ್ಕರ್, ಬಂಗಾರಪೇಟೆ
ಮರುದಿನ ಪೂರ್ವ ದಿಗಂತದಿಂದ ಉದಯಿಸುವ ನೇಸರ ಅಂಧಕಾರವನ್ನು ಕೊಲ್ಲಿ ಬೆಳಕನ್ನು ಪಸರಿಸುವಂತೆ, ತನ್ನ ಜನ್ಮ ಭೂಮಿಯ, ಸನಾತನ ಹಿಂದೂ ಧರ್ಮದ ಸಂಸ್ಕೃತಿ ಪರಂಪರೆಯ, ಆಳ-ಅಗಾಧತೆಯ, ವೇದಾಂತ ದರ್ಶನದ ಪ್ರಖರವಾದ ಬೆಳಕಿನ ಅನುಭೂತಿ ಇಡೀ ಅಮೇರಿಕಕ್ಕೆ ಅಲ್ಲ ಇಡೀ ವಿಶ್ವಕ್ಕೇ ಹಬ್ಬಬೇಕಿದೆ. ಮಾತೃಭೂಮಿಯ ಬಗ್ಗೆ ಅಪಾರವಾದ ಕರುಣಾಭರಿತ ರಾಷ್ಟ್ರಪ್ರೇಮವನ್ನು, ಗುರುವಾಣಿಯನ್ನು, ತನ್ನ ದೃಢ ಸಂಕಲ್ಪವನ್ನು ಮನದಲ್ಲಿ ಹೊತ್ತ ಮಹಾ ಸನ್ಯಾಸಿ, ಅಪ್ರತಿಮ ರಾಷ್ಟ್ರಪ್ರೇಮಿ, ಯೋಗಾಚಾರ್ಯ ಶ್ರೀ ಸ್ವಾಮಿ ವಿವೇಕಾನಂದರು ೧೮೯೩ ನೇ ಸೆಪ್ಟೆಂಬರ್ ೧೦ ರಂದು ಅಮೇರಿಕದ ಚಿಕಾಗೋ ರೈಲ್ವೆ ನಿಲ್ದಾಣದಲ್ಲಿ ಇಳಿಯುತ್ತಾರೆ.ಮುಂದಿನ ದಿನವೇ ನಡೆಯಲಿದ್ದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸನಾತನ ಹಿಂದೂ ಧರ್ಮದ ಪ್ರತಿನಿಧಿಯಾಗಿ ಭಾಗವಹಿಸಲು. ಇಷ್ಟಕ್ಕೂ, ಆಗಾಗಲೇ ಕತ್ತಲು ವ್ಯಾಪಿಸಿದ್ದ ರಾತ್ರಿಯಂದು ಚಿಕಾಗೋ ರೈಲ್ವೇ ನಿಲ್ದಾಣದಲ್ಲಿ ಇಳಿದ ವಿವೇಕಾನಂದರ ಸ್ಥಿತಿಯಾದರೂ ಹೇಗಿತ್ತು ಎಂದು ಕೊಂಡಿರಿ?
ತಮ್ಮ ಬಳಿಯಲ್ಲಿದ್ದ ಹಣವೆಲ್ಲವೂ ವ್ಯಯವಾಗಿ ಕಿಲುಬು ಕಾಸೂ ಸಹಾ ಇರಲಿಲ್ಲ. ಹಿಂದಿನ ದಿನ ಪರಿಚಯಸ್ಥರೊಬ್ಬರು ನೀಡಿದ್ದ ಚಿಕಾಗೋವಿನ ಅವರ ಗೆಳೆಯರ ವಿಳಾಸ ಬರೆದಿಟ್ಟುಕೊಂಡಿದ್ದ ಚೀಟಿ ಸಹಾ ಅಕಸ್ಮಾತಾಗಿ ಕಳೆದುಹೋಗಿತ್ತು. ಕಾವಿಯ ನಿಲುವಂಗಿ, ರುಮಾಲು ಧರಿಸಿದ್ದ ಸ್ವಾಮಿಗಳಿಗೆ ಅಲ್ಲಿನ ಚಳಿಯ ರುಧ್ರತೆ ಚುಚ್ಚತೊಡಗಿತ್ತು. ಹೆಚ್ಚಾಗಿ ಜರ್ಮನ್ನರೇ ವಾಸವಿದ್ದ ಚಿಕಾಗೋವಿನಲ್ಲಿ ಭಾಷೆಯು ಅಂತಹ ಸಹಾಯಕ್ಕೆ ಬರಲಿಲ್ಲ. ಇವರ ವೇಷಧಾರಣೆಯನ್ನು ನೋಡಿ ಕೆಲವರು ನಗತೊಡಗದರೆ, ಮತ್ತೆ ಕೆಲವರು ಅನುಮಾನದಿಂದ ನೋಡತೊಡಗಿದರು. ದಿನವೆಲ್ಲವೂ ಏನನ್ನೂ ಸೇವಿಸದೇ ಇದ್ದ ಕಾರಣ ಹಸಿವಿನಿಂದ ಬಳಲಿದ್ದರು. ಮನದಲ್ಲಿ ಮತ್ತೊಮ್ಮೆ ತಮ್ಮ ಗುರುವರ್ಯರನ್ನು ನೆನೆದು ಅಲ್ಲೇ ನಿಲ್ದಾಣದಲ್ಲಿ ಬಿದ್ದಿದ್ದ ಒಂದು ದೊಡ್ಡ ಪೆಟ್ಟಿಗೆಯೊಳಗೆ ಹೋಗಿ ಮಲಗಿಬಿಟ್ಟರು. ಕತ್ತಲಿನೊಡನೆ ರಮಿಸುತ್ತಾ ಅಸಹನೀಯವಾದ ಚಳಿ ಸುತ್ತಲೂ ವ್ಯಾಪಿಸಿತ್ತು, ಊಟವಿಲ್ಲದೇ ಹೊಟ್ಟೆಯಲ್ಲಿ ಹಸಿವಿನ ಸಂಕಟ, ಬೆಳಗಾದರೇ ಸನಾತನ ಧರ್ಮದ ಪ್ರತಿನಿಧಿಯಾಗಿ ತಾನು ಪಾಲ್ಗೊಳ್ಳಬೇಕಾದ ವಿಶ್ವ ಧರ್ಮ ಸಮ್ಮೇಳನ. ಕುವೆಂಪು ಬರೆಯುತ್ತಾರೆ “ನಾಳೆಯೆಂದರೆ ಅವರ ಹರಿಕಂಠ ಗರ್ಜನೆಯಿಂದ ಸಮಸ್ತ ಅಮೇರಿಕಾ ದೇಶವೇ ಎಚ್ಚರಗೊಳ್ಳಬೇಕು. ಇಂದಾದರೋ ಗತಿಯಿಲ್ಲದೇ ಪೆಟ್ಟಿಗೆಯಲ್ಲಿ ಮಲಗಿದ್ದಾರೆ. ಈಶ್ವರೇಚ್ಚೆ!”.
ನಿಜ಼ಾಮ ಗ್ರೇಟ್ ಸೆಕ್ಯುಲರ್ ಆಗಿದ್ದರೆ, ಆಪರೇಷನ್ ಪೋಲೊ ನಡೆದದ್ದು ಸುಳ್ಳೇ?
– ಪ್ರವೀಣ್ ಪಟವರ್ಧನ್
ಕೆಲ ದಿನಗಳ ಹಿಂದಷ್ಟೇ ತೆಲಂಗಾಣ ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನಿಜ಼ಾಮನನ್ನು ಕೊಂಡಾಡಿದ್ದಾರೆ. ನಿಜ಼ಾಮ ಒಂದೊಳ್ಳೆಯ ರಾಜ್ಯಭಾರ ಮಾಡಿದವನೆಂದೂ, ಅವನಿಂದ ಹಲವಾರು ಕಲ್ಯಾಣಕರ ಕಾರ್ಯಗಳು ನಡೆದಿವೆ ಎಂದೂ, ಜೊತೆಗೆ ಆತ ದೇಶಭಕ್ತ, ಜಾತ್ಯಾತೀತ ರಾಜನಾಗಿದ್ದನೆಂದೂ ಕೆಸಿಆರ್ ನಿಜ಼ಾಮನನ್ನು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೆ ಒಂದು ಹೆಜ್ಜೆ ಮುಂದೆ ನಡೆದು ಇದುವರೆಗಿನ ಆಂಧ್ರ ಸರಕಾರಗಳು ನಿಜ಼ಾಮನನ್ನು ತುಚ್ಛವಾಗಿ ಕಂಡಿದ್ದವು, ಆ ಅಕ್ಷಮ್ಯ ಅಪರಾಧವನ್ನು ಇವರ ಸರ್ಕಾರ ಖಂಡಿಸುತ್ತದೆ ಹಾಗೂ ಆ ತಪ್ಪು ಮರುಕಳಿಸದಂತೆ ನೋಡಿಕೊಳ್ಳುತ್ತದೆ ಎಂದೂ ಕೆಸಿಆರ್ ತಿಳಿಸಿದ್ದಾರೆ. ನಿಜ಼ಾಮನ ಆಳ್ವಿಕೆಯಲ್ಲಿ ಕೆಲ ತಪ್ಪುಗಳು ಗತಿಸಿರಬಹುದು. ಆದರೆ ತಪ್ಪುಗಳು ಎಲ್ಲಾ ರಾಜರುಗಳ ರಾಜ್ಯಭಾರದಲ್ಲೂ ನಡೆದಿವೆಯೆಂದು ಸಮಝಾಯಿಷಿಯೂ ನೀಡುತ್ತಾರೆ. ಈ ಘಟನೆ ನಡೆಯುವ ಕೆಲ ವಾರಗಳ ಹಿಂದೆ ನಮ್ಮ ದೇಶದ ಮಾಧ್ಯಮಗಳಲ್ಲಿ ಗಾಂಧಿಜೀಯ ಹತ್ಯೆಗೈದ ಗೋಡ್ಸೆ ಒಬ್ಬ ದೇಶಭಕ್ತ ಎಂದು ಆಡಿದ ಮಾತನ್ನು ಆಧರಿಸಿಯೇ ಚರ್ಚೆಗಳು ಮುಗಿಲು ಮುಟ್ಟಿದ್ದ ಪರಿಯ ಕಂಡು ನಿಜ಼ಾಮನ ಬಗ್ಗೆಯೂ ಡಿಬೇಟ್ ಸರಣಿಗಳು ನಡೆಯುತ್ತವೆ ಎಂದು ಕಾದದ್ದೇ ಬಂತು. ಆದರೆ ಕೆಸಿಆರ್ ರ ಹೇಳಿಕೆ, ವಿಷಯ, ವರದಿ ಅಥವಾ ಆ ಬಗೆಗಿನ ಜಿಜ್ಞಾಸೆ, ಮುಖ್ಯ ವಾಹಿನಿಯ ಚರ್ಚೆಗೆ ಒಳಪಟ್ಟಿದ್ದನ್ನು ಕಂಡಿರಾ? ಊಹೂಂ. ಅರ್ನಬ್ ಗೋಸ್ವಾಮಿ, ರಾಜದೀಪ ಸರದೇಸಾಯಿ, ಕರಣ್ ಥಾಪರ್, ಬರ್ಖಾ ದತ್ತ ಇತ್ಯಾದಿಯಾಗಿ ಯಾರೂ ಏಕೆ ಚರ್ಚೆಗೆ ಈ ವಿಷಯ ತೆಗೆದುಕೊಳ್ಳಲಿಲ್ಲ? ಅದೇನು ಟಿ.ಆರ್.ಪಿ ಸಂಬಂಧಿತ ನಿರಾಕರಣೆಯೋ ಅಥವಾ ಒಂದು ಕೋಮಿನ ಸುತ್ತದ ಕಥೆಯನ್ನು ಕೆದಕುವ ರಗಳೆ ಏಕೆಂದು ಸುಮ್ಮನಾದರೋ ಗೊತ್ತಿಲ್ಲ. ಟಿವಿ ಮಾಧ್ಯಮದಲ್ಲಿನ ವಾರ್ತೆಗಳಲ್ಲಿ ಕೆಸಿಆರ್ ವಿರುದ್ಧದ ಹೇಳಿಕೆಗಳು ಪ್ರತಿಪಕ್ಷದಿಂದ ಬಂದರೂ ನಿಜ಼ಾಮನ ಕುರಿತಾಗಿ ಮಾತನಾಡಿದ್ದು ಕಾಣಲಿಲ್ಲ ಅಥವಾ ತೋರಿಸಲಿಲ್ಲ. ಸಾಮಾನ್ಯವಾಗಿ ಟ್ವಿಟರ್ ನಲ್ಲಿಯಾದರೂ ನಡೆಯುವ ಚರ್ಚೆ ಈ ಬಾರಿ ನಡೆಯಲಿಲ್ಲ. ತತ್ಸಂಬಂಧದ ೫೦ ಟ್ವೀಟ್ ಗಳಲ್ಲಿ, ಶೇಖಡ ೯೫ ರಷ್ಟು ಕೆಸಿಆರ್ ನ ಮಾತನ್ನು ಒಪ್ಪಿರದಿದ್ದರೂ ವಿಷಯ “Trending” ಆಗಲೇ ಇಲ್ಲ. ಹಾಗಾದರೆ ನಿಜವಾಗಿಯೂ ನಿಜ಼ಾಮನು ಆ ಮಟ್ಟದ ದೇಶಭಕ್ತನೇ, ಜಾತ್ಯಾತೀತ ರಾಜನೇ; ಒಮ್ಮೆ ಬೂಧಿ ಮುಚ್ಚಿದ ಕೆಂಡವನ್ನು ಕೆದಕೋಣ.