ಆಳ್ವಾಸ್ ವಿರಾಸತ್ ಎಂಬ ಸಾಂಸ್ಕೃತಿಕ ವೈಭವ
ಡಾ.ಸಂತೋಷ್ ಕುಮಾರ್ ಪಿ.ಕೆ
ಇತ್ತೀಚೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದಂತಹ ಒಬ್ಬರು ಹೇಳುತ್ತಿದ್ದರು, ಏನು ಚಂಡೆಯ ಶಬ್ದವೇ ಬರುತ್ತಿಲ್ಲ, ಆಳ್ವಾಸ್ ಎಂದರೆ ಯಾವುದಾದರೂ ಒಂದು ಕಾರ್ಯಕ್ರಮ ಜರುಗುವ ತಾಣ ಎಂಬುದೇ ನಮ್ಮ ಭಾವನೆ ಎನ್ನುತ್ತಿದ್ದರು. ಆ ಮಾತಿನ ಅರ್ಥ, ಆಳ್ವಾಸ್ ಕೇವಲ ಒಂದು ಶಿಕ್ಷಣ ಸಂಸ್ಥೆಯಾಗಿ ಮಾತ್ರ ತನ್ನನ್ನು ತಾನು ಗುರುತಿಸಿಕೊಳ್ಳದೆ, ಶಿಕ್ಷಣದ ಜೊತೆ ಜೊತೆಗೆ ಸಾಂಸ್ಕೃತಿಕ ವಿಷಯಗಳನ್ನೂ ಸಹ ವಿದ್ಯಾರ್ಥಿಗಳಲ್ಲಿ ಅಳವಡಿಸುವ ಕಾರ್ಯವನ್ನು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಆಳ್ವಾಸ್ ನುಡಿಸಿರಿ ಹಾಗೂ ವಿರಾಸತ್ ಕಾರ್ಯಕ್ರಮಗಳು ಇಡೀ ಸಂಸ್ಥೆಯ ಬಹುದೊಡ್ಡ ಸಾಂಸ್ಕೃತಿಕ ಮತ್ತು ಸಾಹಿತ್ತಿಕ ಸವಿಯನ್ನು ಒದಗಿಸುವ ವಿಶಿಷ್ಟ ಘಟನೆಗಳಾಗಿವೆ.
ಜನವರಿ 8 ರಿಂದ 11 ರವರೆಗೆ ಮೂಡಬಿದರಿಯ ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆದ ಸಾಂಸ್ಕೃತಿಕ ಹಬ್ಬವು ಭಾರತದ ವಿವಿದೆಡೆಯಿಂದ ಕಲಾವಿದರಿಗೆ ವೈಭವಯುತ ವೇದಿಕೆಯನ್ನು ಒದಗಿಸಿಕೊಟ್ಟಿತು. ಜುಗಲ್ ಬಂದಿ ಸಂಗೀತಗಳ ಆಸ್ವಾದನೆ, ಪಂಜಾಬಿ, ಗುಜರಾತಿ ಹಾಗೂ ಶ್ರೀಲಂಕಾದ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನತಣಿಸಿದವು. ಡ್ಯಾನ್ಸ್ ಆನ್ ವ್ಹೀಲ್ಸ್, ಮಡಿಕೆಗಳ ಮೇಲಿನ ನೃತ್ಯ, ದೃಷ್ಟಿಮಾಂದ್ಯ 30 ಕಲಾವಿದರು ಏಕ ಕಾಲದಲ್ಲಿ ವೇದಿಕೆಯ ಮೇಲೆ ಗಾಯನ ಕಾರ್ಯಕ್ರಮ, ಯಕ್ಷಗಾನದ ಹಾಡು ಮತ್ತು ವೈಯಲಿನ್ ಸಂಗೀತದ ವಿಶಿಷ್ಟ್ಯ ಸಮ್ಮಿಶ್ರಣ ಇವೆಲ್ಲವೂ ವಿರಾಸತ್ ಗೆ ಮೆರುಗು ನೀಡಿದವು. ನಾಲ್ಕು ದಿನಗಳು ಹೇಗೆ ಕಳೆದವು ಎಂಬುದೇ ಪ್ರೇಕ್ಷಕರಿಗೆ ತಿಳಿಯದಾಗಿದೆ, ಆ ಮಟ್ಟಿಗೆ ವೈವಿಧ್ಯಮಯ ಕಾರ್ಯಕ್ರಮಗಳು ಜನರ ಮನಸ್ಸನ್ನು ಆವರಿಸಿದ್ದವು. ಮತ್ತಷ್ಟು ಓದು
ನವಯುಗಾಚಾರ್ಯ ಸ್ವಾಮಿ ವಿವೇಕಾನಂದ
– ಎಸ್.ಎನ್.ಭಾಸ್ಕರ್, ಬಂಗಾರಪೇಟೆ
ಮರುದಿನ ಪೂರ್ವ ದಿಗಂತದಿಂದ ಉದಯಿಸುವ ನೇಸರ ಅಂಧಕಾರವನ್ನು ಕೊಲ್ಲಿ ಬೆಳಕನ್ನು ಪಸರಿಸುವಂತೆ, ತನ್ನ ಜನ್ಮ ಭೂಮಿಯ, ಸನಾತನ ಹಿಂದೂ ಧರ್ಮದ ಸಂಸ್ಕೃತಿ ಪರಂಪರೆಯ, ಆಳ-ಅಗಾಧತೆಯ, ವೇದಾಂತ ದರ್ಶನದ ಪ್ರಖರವಾದ ಬೆಳಕಿನ ಅನುಭೂತಿ ಇಡೀ ಅಮೇರಿಕಕ್ಕೆ ಅಲ್ಲ ಇಡೀ ವಿಶ್ವಕ್ಕೇ ಹಬ್ಬಬೇಕಿದೆ. ಮಾತೃಭೂಮಿಯ ಬಗ್ಗೆ ಅಪಾರವಾದ ಕರುಣಾಭರಿತ ರಾಷ್ಟ್ರಪ್ರೇಮವನ್ನು, ಗುರುವಾಣಿಯನ್ನು, ತನ್ನ ದೃಢ ಸಂಕಲ್ಪವನ್ನು ಮನದಲ್ಲಿ ಹೊತ್ತ ಮಹಾ ಸನ್ಯಾಸಿ, ಅಪ್ರತಿಮ ರಾಷ್ಟ್ರಪ್ರೇಮಿ, ಯೋಗಾಚಾರ್ಯ ಶ್ರೀ ಸ್ವಾಮಿ ವಿವೇಕಾನಂದರು ೧೮೯೩ ನೇ ಸೆಪ್ಟೆಂಬರ್ ೧೦ ರಂದು ಅಮೇರಿಕದ ಚಿಕಾಗೋ ರೈಲ್ವೆ ನಿಲ್ದಾಣದಲ್ಲಿ ಇಳಿಯುತ್ತಾರೆ.ಮುಂದಿನ ದಿನವೇ ನಡೆಯಲಿದ್ದ ವಿಶ್ವ ಧರ್ಮ ಸಮ್ಮೇಳನದಲ್ಲಿ ಸನಾತನ ಹಿಂದೂ ಧರ್ಮದ ಪ್ರತಿನಿಧಿಯಾಗಿ ಭಾಗವಹಿಸಲು. ಇಷ್ಟಕ್ಕೂ, ಆಗಾಗಲೇ ಕತ್ತಲು ವ್ಯಾಪಿಸಿದ್ದ ರಾತ್ರಿಯಂದು ಚಿಕಾಗೋ ರೈಲ್ವೇ ನಿಲ್ದಾಣದಲ್ಲಿ ಇಳಿದ ವಿವೇಕಾನಂದರ ಸ್ಥಿತಿಯಾದರೂ ಹೇಗಿತ್ತು ಎಂದು ಕೊಂಡಿರಿ?
ತಮ್ಮ ಬಳಿಯಲ್ಲಿದ್ದ ಹಣವೆಲ್ಲವೂ ವ್ಯಯವಾಗಿ ಕಿಲುಬು ಕಾಸೂ ಸಹಾ ಇರಲಿಲ್ಲ. ಹಿಂದಿನ ದಿನ ಪರಿಚಯಸ್ಥರೊಬ್ಬರು ನೀಡಿದ್ದ ಚಿಕಾಗೋವಿನ ಅವರ ಗೆಳೆಯರ ವಿಳಾಸ ಬರೆದಿಟ್ಟುಕೊಂಡಿದ್ದ ಚೀಟಿ ಸಹಾ ಅಕಸ್ಮಾತಾಗಿ ಕಳೆದುಹೋಗಿತ್ತು. ಕಾವಿಯ ನಿಲುವಂಗಿ, ರುಮಾಲು ಧರಿಸಿದ್ದ ಸ್ವಾಮಿಗಳಿಗೆ ಅಲ್ಲಿನ ಚಳಿಯ ರುಧ್ರತೆ ಚುಚ್ಚತೊಡಗಿತ್ತು. ಹೆಚ್ಚಾಗಿ ಜರ್ಮನ್ನರೇ ವಾಸವಿದ್ದ ಚಿಕಾಗೋವಿನಲ್ಲಿ ಭಾಷೆಯು ಅಂತಹ ಸಹಾಯಕ್ಕೆ ಬರಲಿಲ್ಲ. ಇವರ ವೇಷಧಾರಣೆಯನ್ನು ನೋಡಿ ಕೆಲವರು ನಗತೊಡಗದರೆ, ಮತ್ತೆ ಕೆಲವರು ಅನುಮಾನದಿಂದ ನೋಡತೊಡಗಿದರು. ದಿನವೆಲ್ಲವೂ ಏನನ್ನೂ ಸೇವಿಸದೇ ಇದ್ದ ಕಾರಣ ಹಸಿವಿನಿಂದ ಬಳಲಿದ್ದರು. ಮನದಲ್ಲಿ ಮತ್ತೊಮ್ಮೆ ತಮ್ಮ ಗುರುವರ್ಯರನ್ನು ನೆನೆದು ಅಲ್ಲೇ ನಿಲ್ದಾಣದಲ್ಲಿ ಬಿದ್ದಿದ್ದ ಒಂದು ದೊಡ್ಡ ಪೆಟ್ಟಿಗೆಯೊಳಗೆ ಹೋಗಿ ಮಲಗಿಬಿಟ್ಟರು. ಕತ್ತಲಿನೊಡನೆ ರಮಿಸುತ್ತಾ ಅಸಹನೀಯವಾದ ಚಳಿ ಸುತ್ತಲೂ ವ್ಯಾಪಿಸಿತ್ತು, ಊಟವಿಲ್ಲದೇ ಹೊಟ್ಟೆಯಲ್ಲಿ ಹಸಿವಿನ ಸಂಕಟ, ಬೆಳಗಾದರೇ ಸನಾತನ ಧರ್ಮದ ಪ್ರತಿನಿಧಿಯಾಗಿ ತಾನು ಪಾಲ್ಗೊಳ್ಳಬೇಕಾದ ವಿಶ್ವ ಧರ್ಮ ಸಮ್ಮೇಳನ. ಕುವೆಂಪು ಬರೆಯುತ್ತಾರೆ “ನಾಳೆಯೆಂದರೆ ಅವರ ಹರಿಕಂಠ ಗರ್ಜನೆಯಿಂದ ಸಮಸ್ತ ಅಮೇರಿಕಾ ದೇಶವೇ ಎಚ್ಚರಗೊಳ್ಳಬೇಕು. ಇಂದಾದರೋ ಗತಿಯಿಲ್ಲದೇ ಪೆಟ್ಟಿಗೆಯಲ್ಲಿ ಮಲಗಿದ್ದಾರೆ. ಈಶ್ವರೇಚ್ಚೆ!”.