ವಿಷಯದ ವಿವರಗಳಿಗೆ ದಾಟಿರಿ

ಜನವರಿ 22, 2015

7

ಶಕ್ತಿ, ವ್ಯಕ್ತಿ, ಅಭಿವ್ಯಕ್ತಿ

‍ನಿಲುಮೆ ಮೂಲಕ

1380232_10152740811064403_374390729633801991_n

– ಶ್ರೀವತ್ಸ ಜೋಶಿ

ಕಳೆದ ಶತಮಾನದ ಆರಂಭದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಒಬ್ಬೊಬ್ಬ ಯೋಧನಲ್ಲೂ ಆ ಮನೋಭಾವ ಪುಷ್ಕಳವಾಗಿ ಇತ್ತು. ಕಳೆದ ವರ್ಷ ಮೋದಿಯವರ ವಿಜಯಕ್ಕಾಗಿ ಹಗಲಿರುಳೂ ದುಡಿದ ಒಬ್ಬೊಬ್ಬ ಕಾರ್ಯಕರ್ತನಲ್ಲೂ ಆ ಮನೋಭಾವ ಹೇರಳವಾಗಿ ಇತ್ತು. ಅದೇನೆಂದರೆ- ಸ್ವಾರ್ಥ ಎಂಬುದು ರವಷ್ಟೂ ಇಲ್ಲದೆ, ಸಮಾಜಕ್ಕೆ ಒಳಿತಾಗಬೇಕು, ದೇಶಕ್ಕೆ ಒಳ್ಳೆಯದಾಗಬೇಕು, ನಾವು ಭಾರತೀಯರು ಅಭಿಮಾನದಿಂದ ತಲೆಯೆತ್ತಿ ನಿಲ್ಲುವಂತಾಗಬೇಕು ಎಂಬ ತುಡಿತ. ಅದಕ್ಕೋಸ್ಕರ ಯಾವ ಅಪಾಯಕಾರಿ ಮಾರ್ಗವನ್ನಾದರೂ ಹಿಡಿಯುವ ಛಲ. ವೈಯಕ್ತಿಕವಾಗಿ ತನ್ನನ್ನು ಯಾರು ಎಷ್ಟು ಜರಿದರೂ ಜರ್ಝರಗೊಳಿಸಿದರೂ ಸರಿಯೇ ದೇಶಕ್ಕೆ, ದೇಶದ ಆದರ್ಶಗಳ ಔನ್ನತ್ಯಕ್ಕೆ ಧಕ್ಕೆಯಾದರೆ, ಮಸಿ ಬಳಿದರೆ ಸಹಿಸಿಕೊಳ್ಳುವುದಿಲ್ಲ ಎಂಬ ಕಿಚ್ಚಿನಂಥ ಕೆಚ್ಚು.

ಇದೀಗ ’ನಿಲುಮೆ’ ಬಳಗದ ಸದಸ್ಯರಲ್ಲಿ ಕಾಣುತ್ತಿರುವುದೂ ಅದೇ ಕೆಚ್ಚಿನ ಮನೋಭಾವ. ಅಂತಹದೊಂದು ಶಕ್ತಿ ತಲೆಯೆತ್ತಿ ನಿಲ್ಲುತ್ತಿರುವುದು ತಂದಿದೆ ಕುತ್ಸಿತ ಬುದ್ಧಿಯ ಕುತಂತ್ರಿಗಳಿಗೆ ತಲೆನೋವ. ಸ್ವಾಮಿ ವಿವೇಕಾನಂದರನ್ನು ಕೀಳಾಗಿ ಚಿತ್ರಿಸಿ ಬರೆದಿದ್ದಕ್ಕೆ ಆ ಲೇಖಕನ ವಿರುದ್ಧ ನಿಲುಮೆಯ ಕೆಲ ಹುಡುಗರು ಕೆಟ್ಟ ಶಬ್ದಗಳನ್ನು ಬಳಸಿದ್ದಾರೆ ನಿಜ. ಆದರೆ ಏಕೆ ಅವರು ಹಾಗೆ ಮಾಡಿದರು ಎನ್ನುವುದಕ್ಕೆ ಉತ್ತರ ಮೇಲಿನ ಮೊದಲ ಪ್ಯಾರಗ್ರಾಫ್‌ನಲ್ಲಿ ಸಿಗುತ್ತದೆ. ಆ ಹುಡುಗರಿಗೆ ಸ್ವಾರ್ಥ ಇಲ್ಲ. ಸಮಾಜದಲ್ಲಿ ಹೇಳಿಕೊಳ್ಳುವಂಥ ಸ್ಥಾನಮಾನವೂ ಇಲ್ಲ. ಅದೆಲ್ಲ ಅವರಿಗೆ ಮುಖ್ಯವೂ ಅಲ್ಲ. ಆದರೆ ದೇಶದ ಆದರ್ಶಗಳನ್ನು ಯಾರಾದರೂ ಅವಹೇಳನ ಮಾಡಿದರೆ ಮಾತ್ರ ಅವರು ಖಂಡಿತ ಸಹಿಸಿಕೊಳ್ಳುವುದಿಲ್ಲ. ನಖಶಿಖಾಂತ ಉರಿದು ಉಗಿದು ಉಪ್ಪಿನಕಾಯಿ ಹಾಕದೆ ಬಿಡುವುದಿಲ್ಲ.

ವಿವೇಕಾನಂದರ ಕುರಿತು ಕೆಟ್ಟದಾಗಿ ಬರೆದ ದಿನೇಶ್ ಅಮೀನ್ ಮಟ್ಟು ಹಾಗಲ್ಲ. ಅವರು ಯಾರ ಬಗ್ಗೆ ಎಷ್ಟೂ ಕೆಟ್ಟದಾಗಿ ಬರೆಯಬಹುದು. ಯಾರನ್ನು ಬೇಕಿದ್ದರೂ ಷಂಡರೆಂದು ಹೀಗಳೆಯಬಹುದು. ಭಾರತದೇಶದ ಸಂಸತ್ತನ್ನು ಪಾಯಿಖಾನೆ ಎಂದು ಚಿತ್ರಿಸಿದರೆ ಅಂತಹ ಅಭಿವ್ಯಕ್ತಿ ತನಗಿಷ್ಟವಾಯ್ತು ಎನ್ನಬಹುದು. ಆದರೆ ತನ್ನನ್ನು ಮಾತ್ರ ಯಾರಾದರೂ ಕೆಟ್ಟ ಶಬ್ದಗಳಿಂದ ಜರಿದರೆ ಸುತಾರಾಂ ಸಹಿಸಿಕೊಳ್ಳುವುದಿಲ್ಲ. ಅವರು ನಖಶಿಖಾಂತ ಉರಿಯುವುದು ತನ್ನ ಬುಡಕ್ಕೆ ಕೊಡಲಿ ಬಿದ್ದಾಗ ಮಾತ್ರ.

ನಿಲುಮೆ ಹುಡುಗರಿಗೂ ಮಟ್ಟುಗೂ ಅದೇ ಮೂಲಭೂತ ವ್ಯತ್ಯಾಸ. ನಿನ್ನೆ ಸುವರ್ಣ ನ್ಯೂಸ್ ಸುದ್ದಿವಾಹಿನಿಯಲ್ಲಿ ನೇರಪ್ರಸಾರವಾದ ಚರ್ಚೆಯಲ್ಲಿ ಅದು ಮತ್ತಷ್ಟು ಸ್ಪಷ್ಟವಾಯಿತು. ರಾಜ್ಯದ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಎಂಬ ಗೌರವದ ಹುದ್ದೆಯಲ್ಲಿರುವ ದಿನೇಶ್ ಅಮೀನ್ ಮಟ್ಟು ಆ ಚರ್ಚೆಯಲ್ಲಿ ಆಕ್ರೋಶದಿಂದ ಕಿರುಚಾಡುತ್ತ ತನಗೆ ಮತ್ತು ತನ್ನ ಹುದ್ದೆಗೆ ಇರಬೇಕಾದ ಗೌರವ ಘನತೆಗಳ ಕನಿಷ್ಟ ಅರಿವೂ ಇಲ್ಲದೆ ಕೂಗಾಡುತ್ತ ಚರ್ಚೆಯಲ್ಲಿ ಪಾಲ್ಗೊಂಡರು. ಅವರ ವೃತ್ತಿ ಅನುಭವದ ವರ್ಷಗಳಷ್ಟು ವಯಸ್ಸೂ ಆಗದಿರುವ ರಾಕೇಶ್ ಶೆಟ್ಟಿ (ನಿಲುಮೆ ಬಳಗ) ಒಂದು ಗಂಭೀರ ಚರ್ಚೆಗೆ ಹೇಗೆ ತಯಾರಾಗಿ ಬರಬೇಕು, ಚರ್ಚೆಯ ವೇಳೆ ಹೇಗೆ ವರ್ತಿಸಬೇಕು, ಯಾವಾಗ ಹೇಗೆ ಎಷ್ಟು ಮಾತನಾಡಬೇಕು ಎಂಬ ಆದರ್ಶವನ್ನು ಮೆರೆದರು!

ತಾನು ಮಾಡಿದ್ದೇ ಸರಿ ಎಂಬ ದರ್ಪವನ್ನು ಚರ್ಚೆಯುದ್ದಕ್ಕೂ ತೋರಿದ ಮಟ್ಟು, ಮಧ್ಯಮವರ್ಗವನ್ನು ತಾನು ಷಂಡ ಎಂದಿದ್ದನ್ನು ಮತ್ತೆಮತ್ತೆ ಸಮರ್ಥಿಸಿಕೊಂಡರು. ಆದರೆ ತನ್ನನ್ನು ಕೆಟ್ಟ ಶಬ್ದಗಳಿಂದ ಬೈಯ್ದದ್ದು ತನಗೆ ನೋವು ತಂದಿತು ಎಂದು ಅಳಲುತೋಡಿಕೊಂಡರು. ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುವ ಭಾಷೆಯ ಬಗ್ಗೆ ಎಚ್ಚರವಿರಬೇಕೆಂದು ಬೋಧಿಸಿದರು. ಆದರೆ ಆ ಬೋಧನೆ ಸ್ವತಃ ತನಗೆ ಲಗಾವಾಗುವುದಿಲ್ಲ, ತಾನು ಪ್ರತ್ಯಕ್ಷವಾಗಿ/ಪರೋಕ್ಷವಾಗಿ “ಪೋಷಿಸುತ್ತಿರುವ” ಸಮಾಜವಿರೋಧಿ ದುಷ್ಟಶಕ್ತಿಗಳಿಗೆ ಮತ್ತು ಹುಲ್ಲಿನಲ್ಲಿರುವ ಹಾವಿನಂಥವರಿಗೂ ಅನ್ವಯವಾಗುವುದಿಲ್ಲ ಎಂದು ತೋರಿಸಿದರು. ಕೆಟ್ಟ ಭಾಷೆ ಬಳಸುವುದನ್ನು ತಡೆಗಟ್ಟುವುದು ಸಾಧ್ಯವಾಗದಿದ್ದರೆ ನಿಲುಮೆ ಸಂಘಟನೆಯನ್ನೇ ಮುಚ್ಚಿಹಾಕಬೇಕೆಂಬ ಬಿಟ್ಟಿ ಉಪದೇಶ ಕೊಟ್ಟರು. ತಾನು ಮಾತ್ರ ಎಂತೆಂಥ ಗಲೀಜು ಜಂತುಗಳನ್ನು ಬಗಲಲ್ಲಿಟ್ಟುಕೊಂಡಿದ್ದೇನೆ ಎನ್ನುವುದರ ಪರಿವೆಯಿಲ್ಲದವರಾದರು.

ಎತ್ತರದ ದನಿಯಲ್ಲಿ ಕೂಗಾಡಿ, ಅಧಿಕಾರದ ಮದವನ್ನು ತೋರಿ, ಚರ್ಚೆಯಲ್ಲೂ ತಾನು ಗೆದ್ದೆ ಎಂದು ಮಟ್ಟು ತಿಳಿದುಕೊಂಡಿರಬಹುದು. ಗೆಲ್ಲುವುದು ಬಿಡಿ, ಅವರು ಸೋತದ್ದಷ್ಟೇ ಅಲ್ಲ, ಚರ್ಚೆಯನ್ನು ನೋಡಿದ ಎಷ್ಟೋ ವೀಕ್ಷಕರಿಗೆ ಅವರ ಮೇಲಿದ್ದ ಅರೆಬರೆ ಗೌರವವೂ ಸತ್ತುಹೋಯಿತಿರಬಹುದು. ಅಂತಹ ಮಟ್ಟು, ಮಾನ್ಯ ಮುಖ್ಯಮಂತ್ರಿಗೆ ಮಾಧ್ಯಮಸಲಹೆಗಾರ ಅಂತೆ. ಮುಗಿದ್ಹೋಯ್ತು!

#‎IAmWithNilume‬

ಚರ್ಚೆಯ ವಿಡಿಯೋ ಲಿಂಕ್‌ ಇಲ್ಲಿವೆ:

 

7 ಟಿಪ್ಪಣಿಗಳು Post a comment
  1. sudarshanarao's avatar
    ಜನ 22 2015

    ಜೋಶಿಯವರ ಎಲ್ಲ ಲೇಖನಗಲಂತೆ ಇದೂ ಸಹ ಚಿಕ್ಕ ಚೊಕ್ಕ ಹಾಗೂ ಹಸೀ ಗೋಡೆಯ ಮೇಲಿನ ಹರಳಂತೆ ನಿಖರವಾಗಿ, ವಿಶ್ಯಾಂತರ ಮಾಡದೆ ಹೇಳ ಬೇಕಾದ್ದನ್ನು ಹೇಳಿದೆ. ಕನ್ನಡದಲ್ಲಿ ಇನ್ನೂ ಇಂತಹ ಮಹಾಚೇತನಗಳು ಇರುವುದೇ ಸಮ್ತಸದ ವಿಷಯ.
    ಸುದರ್ಶನ

    ಉತ್ತರ
  2. Krishna murthy.c.r's avatar
    Krishna murthy.c.r
    ಜನ 22 2015

    ichina varsha Dali solpa solpa namma yuvasamudayadali deshavanu mundhe kondoyuva bhravase muduthide.

    ಉತ್ತರ
  3. ಎಂ ಎ ಶ್ರೀರಂಗ's avatar
    ಎಂ ಎ ಶ್ರೀರಂಗ
    ಜನ 23 2015

    ನಿಲುಮೆಗೆ—-ತಾವು ಅಳವಡಿಸಿರುವ ಮಾಡರೇಶನ್ ಗೆ ನನ್ನ ಪೂರ್ಣ ಸಹಮತವಿದೆ. ಸದ್ಯದ ಸನ್ನಿವೇಶದಲ್ಲಿ ಇದು ಅನಿವಾರ್ಯ.

    ಉತ್ತರ
  4. Sharma's avatar
    ನಾವಿಕ
    ಜನ 23 2015

    Reblogged this on ದೂರತೀರ.

    ಉತ್ತರ
  5. anwar's avatar
    anwar
    ಜನ 23 2015

    ಮಾನ್ಯರೇ, ದಯವಿಟ್ಟು ಸರಿಯಾದ ಲಿಂಕ್ ಗಳನ್ನು ಕೊಡಬೇಕಾಗಿ ಕೇಳಿಕೊಳ್ಳುತ್ತೇನೆ. ಈಗ ಕೊಟ್ಟಿರುವ ಲಿಂಕ್ ಗಳು, ಕೆಲಸ ಮಾಡುತ್ತಿಲ್ಲ. ಧನ್ಯವಾದಗಳು

    ಉತ್ತರ
  6. Shripad's avatar
    Shripad
    ಜನ 24 2015

    ತಪ್ಪು ಎಲ್ಲರಿಂದಲೂ ನಡೆಯುತ್ತದೆ. ಯಾವ ಮಾಧ್ಯಮವಾಗಲಿ, ಮಾಧ್ಯಮ ಸಲಹೆಗಾರರಾಗಲಿ ಇದಕ್ಕೆ ಹೊರತಲ್ಲ. “ಅತ್ಯಂತ ವಿಶ್ವಾಸಾರ್ಹ” ಎಂದು ಬೋರ್ಡು ಹಾಕಿಕೊಂಡವರಿಂದಲೂ ಇದು ನಡೆಯುತ್ತದೆ. ಹಾಗಾಗಿಯೇ ಅವುಗಳಲ್ಲೂ “ತಿದ್ದುಪಡಿ” ಇರುವುದು. ತಪ್ಪು ಮಾಡಿದ್ದಾರೆ ಎಂದು ಪತ್ರಿಕೆಯನ್ನೋ ಮಾಧ್ಯಮವನ್ನೋ ಮುಚ್ಚಿಸುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವೇ ಆಗುತ್ತದೆ. ಹಾಗೆ ಮಾಡುತ್ತ ಹೋದರೆ ಯಾವ ಭಾ‍ಷೆಯಲ್ಲಿಯೂ ಯಾವ ಮಾಧ್ಯಮವೂ ಸದ್ಯ ಉಳಿಯುತ್ತಿರಲಿಲ್ಲ!

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments