ನಮ್ಮೂರ ಹಬ್ಬ.. ( ಶ್ರೀ ರಂಗನಾಥ ಸ್ವಾಮಿಯ ರಥೋತ್ಸವ )
ಯೋಗಾನಂದಾರಾಧ್ಯ
ನೇರಲವಾಡಿ, ಮಾಗಡಿ ತಾಲ್ಲೂಕು
ರಾಮನಗರ ಜಿಲ್ಲೆ
ಹಬ್ಬಗಳೆಂದರೆ ಸಾಮಾನ್ಯವಾಗಿ ಸಡಗರ ಸಂಭ್ರಮದಿಂದ ಕೂಡಿದ್ದು, ಬಂಧು ಬಾಂಧವರು, ಗೆಳೆಯರು, ಆಯಾ ಸಮುದಾಯದವರು ಒಟ್ಟಿಗೇ ಸೇರಿ ಆಚರಿಸುವ ಮನಶ್ಶಾಂತಿಯ ಮಹತ್ಕಾರ್ಯ..
ಇಂದು ಪ್ರಪಂಚದ ನಾನಾ ಭಾಗಗಳಲ್ಲಿ ಅವರದೇ ಆದ ಸಂಸ್ಕೃತಿಯ ವೈಶಿಷ್ಟ್ಯಗಳಿಂದ ಕೂಡಿದ ಹಲವಾರು ಹಬ್ಬಗಳನ್ನು ಆಚರಿಸುವುದನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಾವು ಕಂಡಿದ್ದೇವೆ.. ಕೆಲವು ಹಬ್ಬಗಳನ್ನು ಜಾಗತಿಕ ಮಟ್ಟದಲ್ಲಿ ಆಚರಿಸಿದರೆ, ಮತ್ತೆ ಕೆಲವು ರಾಷ್ಟ್ರೀಯ ಮಟ್ಟದಲ್ಲಿ, ಇನ್ನೂ ಕೆಲವು ರಾಜ್ಯಮಟ್ಟದಲ್ಲಿ ಹಾಗೆಯೇ ಸಂಪ್ರದಾಯ, ಸಂಸ್ಕೃತಿಗಳ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಾಟಕದ ಹಳ್ಳಿ ಹಳ್ಳಿಗಳಲ್ಲೂ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸುವುದು ಸರ್ವೇ ಸಾಮಾನ್ಯ…
ಕರುನಾಡಿನ ಪ್ರತೀ ಪಟ್ಟಣ ಹಾಗೂ ಹಳ್ಳಿಗಳಲ್ಲಿ ತಮ್ಮ ಊರಿನ ವಿಶೇಷತೆಯನ್ನು ಸಾರುವ ನಿಟ್ಟಿನಲ್ಲಿ ಹಲವು ಅದ್ಭುತ ಹಬ್ಬಗಳನ್ನು ಆಚರಿಸುವುದುಂಟು.. ಅಂತಹವುಗಳನ್ನು “ನಮ್ಮೂರ ಹಬ್ಬ” ಎಂದು ಹೆಮ್ಮೆಯಿಂದ ಆಚರಿಸುವುದನ್ನು ನಾವು ನೋಡಿದ್ದೇವೆ..
ಅಂತಹ ಪ್ರಮುಖ ಹಬ್ಬಗಳಲ್ಲಿ ನಮ್ಮ ಊರಿನ ಹಬ್ಬವೂ ಒಂದಾಗಿದೆ.. ಅದರ ಪರಿಚಯ ಮಾಡಿಕೊಡಲು ಪ್ರಯತ್ನಿಸುತ್ತೇನೆ..
ನಮ್ಮ ಊರು ಕೆಂಪೇಗೌಡ, ಇಮ್ಮಡಿ ಕೆಂಪೇಗೌಡರ ತವರೂರು ಮಾಗಡಿ..(ರಾಮನಗರ ಜಿಲ್ಲೆ). ಸುಮಾರು ಕ್ರಿ.ಶ 1569 ರಿಂದ 1658 ರ ಅವಧಿಯಲ್ಲಿ 2ನೇ ಕೆಂಪೇಗೌಡರು ನಿರ್ಮಿಸಿದ ಮಾಗಡಿ, ಇತಿಹಾಸದ ಪುಟಗಳಲ್ಲಿ ತನ್ನದೇ ಆದ ಹೆಗ್ಗಳಿಕೆಗೆ ಪಾತ್ರವಾಗಿರುವ ಮಾಂಡವ್ಯ ಋಷಿಗಳ ತಪೋವನವಾಗಿತ್ತು ಎಂಬುದು ನಮ್ಮ ಹೆಮ್ಮೆ.. ಇಂತಹ ಒಂದು ಪುಟ್ಟ ಪಟ್ಟಣ ಹಲವಾರು ವಿಶೇಷತೆಗಳಿಂದ ಕೂಡಿದ್ದು ಇಲ್ಲಿ ವಿಜಯನಗರದ ಸಾಮ್ರಾಜ್ಯದ ಕಾಲದಿಂದಲೂ ಆಚರಿಸುತ್ತಿರುವ “ಶ್ರೀ ರಂಗನಾಥ ಸ್ವಾಮಿ ರಥೋತ್ಸವ” ಬಹಳ ಪ್ರಸಿದ್ಧಿ ಪಡೆದ ಪ್ರಮುಖ ಹಬ್ಬವಾಗಿದೆ..
ವಿಷಯ ವಿಶ್ಲೇಷಣೆ *
ಮಾಗಡಿಯ ತಿರುಮಲೆ ಎಂಬ ಸ್ಥಳದಲ್ಲಿ ನೆಲೆಸಿರುವ “ಶ್ರೀ ರಂಗನಾಥ ಸ್ವಾಮಿ”ಯ ರಥೋತ್ಸವವು ಕರ್ನಾಟಕದ ದಕ್ಷಿಣ ಭಾಗದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ ಎಂದರೆ ತಪ್ಷಾಗಲಾರದು.. ಐತಿಹಾಸಿಕ ಹಿನ್ನೆಲೆ ಹೊಂದಿರುವ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡ ಈ ಹಬ್ಬ ಮಾಗಡಿ ಹಾಗೂ ತಾಲ್ಲೂಕಿನ ಎಲ್ಲಾ ಜನತೆಗೆ ಬಹಳಷ್ಟು ಆಹ್ಲಾದವನ್ನುಂಟು ಮಾಡುವ ಅದ್ಭುತ ಹಬ್ಬ.
ಏಕೆಂದರೆ ಈ ರಥೋತ್ಸವದ ಸಂದರ್ಭದಲ್ಲಿ ದನಗಳ ಪರಿಷೆಯು ನಡೆಯುವುದು. ಅಕ್ಕ ಪಕ್ಕದ ಹಳ್ಳಿಗಳ ಜನರು ಬಹುತೇಕ ರೈತಾಪಿ ವರ್ಗದವರಾಗಿದ್ದು ಈ ಪರಿಷೆಯಲ್ಲಿ ಭಾಗವಹಿಸುವುದರಲ್ಲಿ ಅವರು ತೋರುವ ಉತ್ಸಾಹ, ಕುತೂಹಲ ಹೇಳತೀರದು.. ರಾಜ್ಯದ ನಾನಾ ಪ್ರದೇಶಗಳಿಂದ ದನಗಳನ್ನು ಕೊಳ್ಳುವವರು ಹಾಗೂ ಮಾರುವವರು ಬರುವುದು ಈ ಹಬ್ಬಕ್ಕೆ ಮತ್ತಷ್ಟು ಮೆರಗು ನೀಡಿದಂತಾಗುತ್ತದೆ..
ರಂಗನಾಥ ಸ್ವಾಮಿ ರಥೋತ್ಸವದ ಅತ್ಯಂತ ಪ್ರಮುಖವಾದ ಕೆಲವು ವಿಶೇಷತೆಗಳು..
1) ರಂಗನಾಥ ಸ್ವಾಮಿಯ ಅವತಾರವೆತ್ತಿ ಬಂದ ತಿರುಮಲೆಯ ತಿಮ್ಮಪ್ಪ :-
ನಮ್ಮ ಮಾಗಡಿಯು ಮಾಂಡವ್ಯ ಋಷಿಗಳ ತಪೋವನವಾಗಿತ್ತು ಎಂದು ಈಗಾಗಲೇ ಉಲ್ಲೇಖಿಸಿದ್ದೇನೆ. ಈ ಮಾಂಡವ್ಯ ಮಹರ್ಷಿಗಳ ತಪಸ್ಸಿಗೆ ಒಲಿದು ತಿರುಮಲದ ತಿಮ್ಮಪ್ಪನು ಮಾಗಡಿಯಲ್ಲಿ ಶ್ರೀ ರಂಗನಾಥ ಸ್ವಾಮಿಯ ಅವತಾರದಲ್ಲಿ ನೆಲೆಸಿದ್ದಾನೆಂಬುದು ಪ್ರತೀತಿ…
2) ಪ್ರತೀ ವರ್ಷ ಯುಗಾದಿಯ ನಂತರ ಚೈತ್ರ ಮಾಸದ ಶುಕ್ಲ ಪಕ್ಷದಲ್ಲಿ “ಬ್ರಹ್ಮ ರಥೋತ್ಸವ” ನಡೆಯುತ್ತದೆ :-
ಮಾಗಡಿಯ ರಂಗನಾಥ ಸ್ವಾಮಿ ದೇವಾಲಯವನ್ನು ಕ್ರಿ.ಶ 12ನೇ ಶತಮಾನದಲ್ಲಿ ಚೋಳ ರಾಜರಿಂದ ನಿರ್ಮಾಣ ಮಾಡಲಾಯಿತೆಂದು ಹೇಳಲಾಗುತ್ತದೆ. ಅಂದಿನಿಂದಲೂ ಸಹ ಪ್ರತೀ ವರ್ಷದ ಯುಗಾದಿ ಹಬ್ಬದ ನಂತರ, ಅಂದರೆ ಹಬ್ಬದ ಮರುದಿನವೇ ಈ ದೇವಾಲಯದ ಬಯಲಿನಲ್ಲಿ ದನಗಳ ಪರಿಷೆಯು ಆರಂಭಗೊಂಡು 8 ನೇ ದಿನ ಸ್ವಾಮಿಯ ಬ್ರಹ್ಮ ರಥೋತ್ಸವದೊಂದಿಗೆ ಅಂತ್ಯವಾಗುತ್ತದೆ..
3) ವಿವಿಧ ಸಮುದಾಯಗಳ ಬೃಹತ್ ಅರವಂಟಿಗೆಯು ಅತ್ಯಂತ ವಿಶಿಷ್ಟ :-
ರಂಗನಾಥ ಸ್ವಾಮಿಯ ರಥೋತ್ಸವದಂದು ವಿವಿಧ ಸಮುದಾಯದವರು ಅರವಂಟಿಗೆ ಕಾರ್ಯಕ್ರಮವನ್ನು ಪ್ರತೀ ವರ್ಷ ನಡೆಸುತ್ತಿದ್ದೂ ಈ ಹಬ್ಬದಲ್ಲಿ ಪಾಲ್ಗೊಳ್ಳುವ ಸಮಸ್ತ ಜನತೆಗೂ ಅನ್ನಸಂತರ್ಪಣೆ ಹಾಗೂ ಬೇಸಿಗೆಯ ಬಿಸಿಲಿಗೆ ಪಾನಕ, ಮಜ್ಜಿಗೆ, ಮುಂತಾದ ತಂಪು ಪಾನೀಯಗಳನ್ನು ನೀಡುತ್ತಾರೆ
4) ಕೇವಲ ಕರ್ನಾಟಕವಲ್ಲದೇ ಇತರ ರಾಜ್ಯದ ಜನರೂ ಈ ಹಬ್ಬದಲ್ಲಿ ಭಾಗವಹಿಸುವುದು ವಿಶೇಷ :-
ದನಗಳ ಪರಿಷೆಗೆ ವಿವಿಧ ರಾಜ್ಯಗಳಿಂದ ರಾಸುಗಳು ಬರುತ್ತವೆ. ಹಾಗೂ ಬ್ರಹ್ಮ ರಥೋತ್ಸವದಂದು ರಾಜ್ಯದ ನಾನಾ ಭಾಗಗಳಿಂದ ಭಕ್ತರು ಬಂದು ಪಾಲ್ಗೊಳ್ಳುವುದು ಅತ್ಯಂತ ವಿಶಿಷ್ಟ..
5) ಅಲಂಕಾರಕ್ಕಾಗಿ ಬಿದಿರಿನಿಂದ ನಿರ್ಮಿಸಿದ ರಥದ ಹೊದಿಕೆ :-
ಪ್ರತೀ ವರ್ಷವೂ ಕೂಡ ಅಲಂಕಾರಕ್ಕೆ ಅನುಕೂಲಕರವಾಗಲೆಂದು ತಿರುಮಲೆಯ ಜನ ಸಮುದಾಯದವರು ಬಿದಿರಿನಿಂದ ರಥದ ಹೊರಹೊದಿಕೆಯನ್ನು ನಿರ್ಮಿಸುತ್ತಾರೆ. ಹಾಗೂ ವಿವಿಧ ಫಲಪುಷ್ಪಗಳಿಂದ ಕಣ್ಮನ ಸೆಳೆಯುವಂತೆ ಅಲಂಕಾರ ಮಾಡಿರುತ್ತಾರೆ.
6) ತೇರನ್ನು ಎಳೆಯುವ ದಪ್ಪನೆಯ ಹಗ್ಗವನ್ನು ಬಿದಿರಿನ ಎಳೆಗಳಿಂದ ತಯಾರಿಸುವುದು ಅದ್ಭುತ ವೈಶಿಷ್ಟ್ಯ :-
ಶ್ರೀ ರಂಗನಾಥ ಸ್ವಾಮಿ ರಥೋತ್ಸವದಂದು ತೇರನ್ನು ಎಳೆಯಲು ಬಳಸುವ ಹಗ್ಗವು ಸಂಪೂರ್ಣವಾಗಿ ಬಿದಿರಿನ ಎಳೆಗಳಿಂದ ಮಾಡಿದ ಹಗ್ಗವಾಗಿದೆ. ಪ್ರತೀ ವರ್ಷವೂ ಸಹ ಈ ಹಗ್ಗವನ್ನು ತಯಾರಿಸಿ ತೇರನ್ನು ಎಳೆಯಲು ಕಟ್ಟುತ್ತಾರೆ..
7) ರಥದ ತುತ್ತ ತುದಿಯಲ್ಲಿರುವ ಕಳಸಕ್ಕೆ ಬಾಳೆಹಣ್ಣು ತಾಕಿದರೆ ಒಳಿತಾಗುತ್ತದೆಂಬ ವಾಡಿಕೆ :-
ರಥೋತ್ಸವದ ದಿನದಂದು ರಥದ ಸುತ್ತಲೂ ಕಿಕ್ಕಿರಿದ ಭಕ್ತರು ಬಾಳೆಹಣ್ಣನ್ನು ರಥದ ತುದಿಯಲ್ಲಿ ಇರುವ ಕಳಸಕ್ಕೆ ಹೊಡೆಯುವ ಪ್ರಯತ್ನವನ್ನು ಮಾಡುತ್ತಾರೆ. ಒಂದು ತಮಾಷೆಯೆಂದರೆ ಆ ಬಾಳೆಹಣ್ಣು ಕಳಸಕ್ಕೆ ತಾಕುವ ಬದಲು ಇತರ ಭಕ್ತರಿಗೆ ತಾಕುವ ಸಂಭವವೇ ಹೆಚ್ಚು.
8) ಮೆರವಣಿಗೆ, ಡೊಳ್ಳು ಕುಣಿತ, ವೀರಗಾಸೆ, ಹಾಗೂ ಜವಳಿ ಕುಣಿತ :-
ಮಾಗಡಿಯ ವೈಭವಪೂರಿತ ಹಬ್ಬವೆಂದೇ ಖ್ಯಾತಿಯಾದ ರಂಗನಾಥ ಸ್ವಾಮಿ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ರಂಗನಾಥ ಸ್ವಾಮಿ ದೇವರ ಮೆರವಣಿಗೆಯು ಅತ್ಯಾಕರ್ಷಕವಾಗಿರುತ್ತದೆ. ಈ ಮೆರವಣಿಗೆಯಲ್ಲಿ ನುರಿತ ಕಲಾವಿದರಿಂದ ಡೊಳ್ಳು ಕುಣಿತ, ಜವಳಿ ಕುಣಿತ, ನಡೆಯುತ್ತದೆ. ಲಕ್ಷಾಂತರ ಜನರು ಈ ರಥೋತ್ಸವದಲ್ಲಿ ಭಾಗವಹಿಸಿ ಜನಮರುಳೋ- ಜಾತ್ರೆ ಮರುಳೋ ಎಂಬಂತೆ ಭಾಸವಾಗುತ್ತದೆ.
9) ದೇವಾಲಯದ ಗರ್ಭಗುಡಿಯ ಹಿಂಭಾಗದಲ್ಲಿರುವ ಬೆಳೆಯೋ ರಂಗನಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ :-
ಬೆಳೆಯುವ ರಂಗನೆಂದೇ ಪ್ರಸಿದ್ಧಿಯಾಗಿರುವ ರಂಗನಾಥ ಸ್ವಾಮಿಯ ವಿಗ್ರಹವು ಗರ್ಭಗುಡಿಯ ಹಿಂಭಾಗದಲ್ಲಿದೆ. ಮಕ್ಕಳಿಲ್ಲದ ಮಹಿಳೆಯರು ಸಂತಾನ ಪಡೆಯುವ ಹರಕೆ ಹೊತ್ತು ಇಲ್ಲಿ ತೊಟ್ಟಿಲು ಸೇವೆ ಹರಕೆ ಕಟ್ಟಿಕೊಳ್ಳುತ್ತಾರೆ. ಈ ರಂಗನಾಥ ಸ್ವಾಮಿಗೆ ಮಕ್ಕಳ ರಂಗ, ಮಾಗಡಿ ರಂಗ, ಅನ್ನದ ರಂಗ ಇನ್ನೂ ಮುಂತಾದ ಹೆಸರುಗಳಿವೆ.
10) ರಂಗನಾಥ ದೇವಾಲಯದ ಮುಂಭಾಗದ ಕಲ್ಯಾಣಿಯಲ್ಲಿ ಶುಕ್ಲ ಪಕ್ಷದ ರಾತ್ರಿ ರಥೋತ್ಸವದಂದು ತೆಪ್ಪೋತ್ಸವ ನಡೆಯುತ್ತದೆ :-
ರಂಗನಾಥ ಸ್ವಾಮಿ ದೇವಸ್ಥಾನದ ಕಲ್ಯಾಣಿಯು ಪ್ರಖ್ಯಾತಿ ಪಡೆದ ಅಂದದ ಕಲ್ಯಾಣಿಯಾಗಿದ್ದು, ರಥೋತ್ಸವದ ದಿನ ರಾತ್ರಿಯ ವೇಳೆ ಕಲ್ಯಾಣಿಯು ತೆಪ್ಪಗಳು, ಹಾಗೂ ತೇಲಿಬಿಟ್ಟ ಬೆಳಕಿನ ದೀಪಗಳೊಂದಿಗೆ ಕಂಗೊಳಿಸುತ್ತಾ ನೋಡುಗರ ಕಣ್ಮನ ಸೆಳೆಯುತ್ತದೆ.
11) ಮರಗಾಲು ಹಾಗೂ ಗೊಂಬೆಗಳ ಮುಖವಾಡ ಧರಿಸಿ ಸೊಬಗಿನ ನೃತ್ಯ :-
ರಥೋತ್ಸವದ ಸಂಭ್ರಮದಲ್ಲಿ ನಾನಾ ಪ್ರದೇಶಗಳಿಂದ ಬಂದ ವಿವಿಧ ಕಲಾತಂಡದವರು ವಿಭಿನ್ನ ಶೈಲಿಯಲ್ಲಿ ಕಾಲುಗಳಿಗೆ ಉದ್ದನೆಯ ಮರದ ತುಂಡುಗಳನ್ನು ಕಟ್ಟಿಕೊಂಡು ಹಾಗೂ ಮುಖಕ್ಕೆ ದೊಡ್ಡ ಗಾತ್ರದ ಗೊಂಬೆಗಳ ಮುಖವಾಡವನ್ನು ಧರಿಸಿ ಉತ್ಸಾಹದಿಂದ ಕುಣಿಯುವ ಭಂಗಿ ನೋಡುಗರನ್ನು ಅರೆಕ್ಷಣ ನಿಬ್ಬೆರಗಾಗಿಸುತ್ತದೆ..
12) ನಯನ ಮನೋಹರವಾದ ಸಾಲಿಗ್ರಾಮ ಶಿಲೆಯ ಮಹಿಮೆ :-
ದೇವಾಲಯದ ಶ್ರೀ ರಂಗನಾಥ ಸ್ವಾಮಿಯವರಿಗೆ ಅಭಿಷೇಕ ಮಾಡಿದ ನೀರು ಸಾಲಿಗ್ರಾಮ ರೂಪದಲ್ಲಿರುವ ಶಿಲೆಯ ಮೇಲೆ ಬೀಳುವುದು ಈ ದೇವಾಲಯದ ವೈಶಿಷ್ಟ್ಯಗಳಲ್ಲಿ ಒಂದು…
*ಉಪಸಂಹಾರ* :-
ಹೀಗೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಶ್ರೀ ರಂಗನಾಥ ಸ್ವಾಮಿ ದೇವಾಲಯವು ಹತ್ತು ಹಲವು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು ವಿಜಯ ನಗರ ಸಾಮ್ರಾಜ್ಯದ ಗಡಿಯಾಗಿ ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿದೆ.. ಇಂದಿಗೂ ಸಹ ಈ ದೇವಾಲಯಕ್ಕೆ ಪ್ರತಿನಿತ್ಯ ನೂರಾರು ಭಕ್ತರು ಬರುತ್ತಿದ್ದಾರೆ. ದೇವಾಲಯದ ಮುಂದಿರುವ ಶಾಸನವು ವಾಸ್ತು ಶಿಲ್ಪ ಹಾಗೂ ದೇವಾಲಯದ ಬಗೆಗಿನ ಹಲವು ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ.. ದೇವಾಲಯದ ಗೋಪುರವು ಎತ್ತರವಾಗಿದ್ದು ಆಕರ್ಷಕ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನು ಈ ಗೋಪುರದ ನಿರ್ಮಾತೃ ಎಂದು ಇತಿಹಾಸವು ಹೇಳುತ್ತದೆ..
ಚಿತ್ರ ಕೃಪೆ :- http://vilindia.com