ಪ್ರಶ್ನೆ ರಾಹುಲ್ ಪಟ್ಟಾಭಿಷೇಕದ್ದಲ್ಲ; ಕಾಂಗ್ರೆಸ್ಸಿನ ನಿಗೂಢ ನಡೆಗಳದ್ದು
– ರಾಕೇಶ್ ಶೆಟ್ಟಿ
ಸೋನಿಯಾ ಗಾಂಧಿಯವರನ್ನು ಅಧ್ಯಕ್ಷೆಯನ್ನಾಗಿಸುವಾಗ,ವಯೋವೃದ್ಧ ಕೇಸರಿಯವರನ್ನು ಹೇಗೆ ನಡೆಸಿಕೊಳ್ಳಲಾಗಿತ್ತು ಎನ್ನುವುದು ಈಗ ಇತಿಹಾಸ. ಆದರೆ ಕೇಸರಿಯವರ ರಾಜಕೀಯ ಅಧ್ಯಾಯ ತೀರಾ,ಇಂದಿರಾ ಗಾಂಧಿಯವರ ಕಾಲದಲ್ಲಿ ದಲಿತ ನಾಯಕ ಜಗಜೀವನ್ ರಾಮ್ ಅವರ ರಾಜಕೀಯ ಜೀವನವನ್ನು ಮುಗಿಸಿದಷ್ಟು ಕ್ರೂರವಾಗಿರಲಿಲ್ಲವೆಂಬುದೇ ಸಮಾಧಾನ!
ದೇವೇಗೌಡರ ನೇತೃತ್ವದ ಸರ್ಕಾರವನ್ನು ವಿನಾಕಾರಣ ಬೀಳಿಸಿದ್ದ ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆ ಗೆಲ್ಲಲು ನಾಯಕರೇ ಇರಲಿಲ್ಲವೆಂಬ ನೆಪವೊಡ್ಡಿ ಸೋನಿಯಾ ಅವರನ್ನು ಮುನ್ನೆಲೆಗೆ ತರಲಾಯಿತು. ರಾಜೀವ್ ಗಾಂಧಿಯವರ ಕೊಲೆಯ ನಂತರ ದೇಶವನ್ನು,ಪಕ್ಷವನ್ನು ಸಮರ್ಥವಾಗಿ ಮುಂದುವರೆಸಿದ್ದ ಪಿವಿ ನರಸಿಂಹರಾವ್ ಕಾಂಗ್ರೆಸ್ಸಿನಲ್ಲಿ ಯಾರಿಗೂ ಆಗ ಬೇಡವಾಗಿದ್ದರು. ಕಾರಣ ಸ್ಪಷ್ಟ, ನೆಹರೂ ಕುಟುಂಬದ ಸುತ್ತ ಸುತ್ತುವ ಕ್ಷುದ್ರ ಗ್ರಹಗಳಿಗೆ, ನಕಲಿ ಗಾಂಧಿ ಕುಟುಂಬದ ಮುಖ ಸ್ತುತಿ ಮಾಡುವ ಗುಲಾಮರು ಇಷ್ಟವಾಗುತ್ತಾರೆಯೇ ಹೊರತು ಸ್ವಂತ ಬುದ್ಧಿಶಕ್ತಿ,ಚಿಂತನೆಯುಳ್ಳ ನಾಯಕರಲ್ಲ. ಇಂದಿರಾ ಕಾಲದಲ್ಲಿ ಜಗಜೀವನ್ ರಾಮ್,ಮೊರಾರ್ಜಿ ದೇಸಾಯಿಯಂತವರನ್ನು ಹಣಿಯಲಾಗಿತ್ತು. ಸೋನಿಯಾ ಕಾಲಕ್ಕೆ ನರಸಿಂಹರಾವ್,ಕೇಸರಿಯವರು ನೆಹರೂ ಕುಟುಂಬದ ರಾಜಕೀಯ ಬೇಟೆಗೆ ಬಲಿಯಾದರು.ಕೇಸರಿಯವರನ್ನು ಕಾಂಗ್ರೆಸ್ ಪಕ್ಷದ ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಅಧ್ಯಕ್ಷ ಹುದ್ದೆಯಿಂದ ಇಳಿಸಿ, ಸೋನಿಯಾ ಅವರಿಗೆ ಪಟ್ಟ ಕಟ್ಟಲು,ಸೋನಿಯಾರ ಟೀಮು ಸೇರಿಕೊಂಡಿದ್ದ ಪ್ರಣಬ್ ಮುಖರ್ಜಿ,ಶರದ್ ಪವಾರ್ ಅವರಂತವರಿಗೂ ಮುಂದೊಂದು ದಿನ ಕೇಸರಿಯವರಿಗೆ ಸಿಕ್ಕ ಅದೇ ರುಚಿಯ ಸ್ವಾದವೂ ಸಿಕ್ಕಿತು. ಶರದ್ ಪವಾರ್, ಸಂಗ್ಮಾ, ತಾರೀಖ್ ಅನ್ವರ್ ಅವರನ್ನು ಪಕ್ಷದಿಂದ ಹೊರಹಾಕಿದರು. ಮುಂದೊಂದು ದಿನ ಅಡ್ಡಿಯಾಗಬಹುದಾಗಿದ್ದ ರಾಜೇಶ್ ಪೈಲಟ್,ಮಾಧರಾವ್ ಸಿಂಧಿಯಾ ರಸ್ತೆ ಮತ್ತು ವಿಮಾನಾಪಘಾತಗಳಲ್ಲಿ ಸತ್ತರು.ಈ ರೀತಿ ವಿಮಾನಾಪಘಾತ/ರಸ್ತೆ ಅಪಘಾತಗಳಲ್ಲಿ ಸಾಯುವವರ ಪಟ್ಟಿ ಭಾರತದ ರಾಜಕೀಯ ಇತಿಹಾಸದಲ್ಲಿ ಅಲ್ಲಲ್ಲಿ ಸಿಗುತ್ತದೆ.ಆದರೆ ಹಾಗೆ ಸಿಗುವ ಪಟ್ಟಿ ಇದೇ ನೆಹರು ಕುಟುಂಬದ ಆಸುಪಾಸಿನಲ್ಲಿ ಸುತ್ತುತ್ತದೆ. ನಿಗೂಢತೆ ಮತ್ತು ನೆಹರೂ ಕುಟುಂಬಕ್ಕೂ ಅದೇನೋ ಒಂದು ನಂಟು.