ವಿಷಯದ ವಿವರಗಳಿಗೆ ದಾಟಿರಿ

Archive for

29
ಡಿಸೆ

ಸಂವಿಧಾನ ತಿದ್ದಿದ್ದ ಇಂದಿರಾ ಅಂಬೇಡ್ಕರರಿಗಿಂತ ಶ್ರೇಷ್ಠರಾಗಿದ್ದರೇ?

– ಸಂತೋಷ್ ತಮ್ಮಯ್ಯ 
ದೇಶ ಕಂಡ ಶ್ರೇಷ್ಠ ಕಾನೂನು ಪರಿಣಿತ ಮತ್ತು ಸಂವಿಧಾನ ತಜ್ಞ ಕೆ.ವಿ ಕೃಷ್ಣ ಅಯ್ಯರ್ ಒಮ್ಮೆ ಸಂಸದರೇ ಸೇರಿದ್ದ ಸಭೆಯೊಂದರಲ್ಲಿ “ಎಲ್ಲಕ್ಕೂ ಒಂದು ಕೊನೆ ಎಂಬುದಿರುತ್ತದೆ. ಸಂವಿಧಾನದ ಕೆಲವು ವಿಧಿಗಳು ಇಂದು ಕಾಲಬಾಹಿರವಾಗಿವೆ. ಅವು ಬದಲಾಗಲೇ ಬೇಕು. ಸಂವಿಧಾನ ಬದಲಾಗಲೇ ಬಾರದು ಎನ್ನುವಷ್ಟು ಪವಿತ್ರ ವಸ್ತುವೇನಲ್ಲ. ಅವು ಸಮಾಜದಲ್ಲಿ ಒಂದು ಪರಿಕರವೇ ಹೊರತು, ಸಮಾಜವನ್ನು ನಿರ್ಧರಿಸುವ ಸಾಧನಗಳಲ್ಲ” ಎಂದಿದ್ದರು . ಆಂದು ಆಯ್ಯರ್ ಮಾತಿಗೆ ನೆರದಿದ್ದ  ಸಂಸದರೆಲ್ಲಾ ಕುತ್ತಿಗೆ ನೋಯುವಷ್ಟು  ತಲೆದೂಗಿದ್ದರು. ಅವರಿಗೆಲ್ಲಾ ಅಯ್ಯರ್ ಮಾತು ಅರ್ಥವಾಗಿತ್ತೋ ಅಥವಾ ಬಾಯಿಬಿಟ್ಟರೆ ಬಣ್ಣಗೇಡು ಎಂದು ಸುಮ್ಮನಾಗಿದ್ದರೋ ಗೊತ್ತಿಲ್ಲ. ಅಂತೂ ಆ ಮಾತು ಹೆಚ್ಚು ಚರ್ಚೆಯಾಗಲಿಲ್ಲ.
ಇಂದಿರಾ ಕಾಲದ ರಾಜಕಾರಣಿ, ಮುತ್ಸದ್ಧಿ ಚಿದಂಬರಂ ಸುಬ್ರಮಣಿಯಮ್ ಕೂಡಾ “ಸಂವಿಧಾನ ಪರಂಪರೆಯ ಬೆಳಕಿನಲ್ಲಿ ರೂಪುಗೊಳ್ಳಬೇಕಿತ್ತು. ಅದು ಪರಿಷ್ಕರಣೆಗೆ ಒಳಪಡಲೇಬೇಕು. ಈಗಿನ ಸಂವಿಧಾನ ಬುದ್ಧಿವಂತರೆಲ್ಲರನ್ನೂ ರಾಜಕಾರಣಿಗಳಾಗಿ ಮತ್ತು ರಾಜಕಾರಣಿಗಳ ಗುಲಾಮರನ್ನಾಗಿಸಲು ಮಾತ್ರ ಶಕ್ತವಾಗಿದೆ” ಎಂದು ಕಟುವಾಗಿ ಹೇಳಿದ್ದರು. ಆಗಲೂ ಅದು ಚರ್ಚೆಯಾಗಲಿಲ್ಲ. ಏಕೆಂದರೆ ಅಂದು ಅವರ ಮಾತಿನ ಅರ್ಥವನ್ನು ಗ್ರಹಿಸುವವರ ಸಂಖ್ಯೆ ಅತ್ಯಂತ ಕಡಿಮೆಯಿತ್ತು. ಮತ್ತು ಅರ್ಥವಾದ ಬುದ್ಧಿವಂತರೆಲ್ಲರೂ ರಾಜಕಾರಣಿಗಳ ಅಂಬಾಸೆಡರ್ ಕಾರಿನ ಡೋರು ತೆಗೆಯುವುದರಲ್ಲಿ ಧನ್ಯತೆ ಕಾಣುತ್ತಿದ್ದರು.
ಅದಕ್ಕೂ ಬಹಳ ಹಿಂದೆ ಥಿಯೋಡರ್ ಷೇ ಎಂಬ ಜರ್ಮನ್ ಚಿಂತಕ ತನ್ನ ಲೆಗಸಿ ಆಫ್ ಲೋಕಮಾನ್ಯ ಎಂಬ ಪುಸ್ತಕದಲ್ಲಿ  “ಭಾರತೀಯ ಸಂವಿಧಾನದಲ್ಲಿ ಭಾರತೀಯತೆಯೆಂಬುದೇ ಇಲ್ಲ. ಅದು ಅನ್ಯಾನ್ಯ ದೇಶಗಳ ಸಂವಿಧಾನಗಳ ಚೂರುಪಾರುಗಳನ್ನು ಜೋಡಿಸಿ ಹೊಲಿದ ಒಂದು ಕಲಾಕೃತಿ” ಎಂದು ಬರೆದಿದ್ದ. ವಿಚಿತ್ರವೆಂದರೆ ಆಗಲೂ ವಿದೇಶಿಯನ ಮಾತಿಗೆ ದೇಶದಲ್ಲಿ ಎದುರಾಡಿದವರಿರಲಿಲ್ಲ.
ಆದರೆ ಮೊನ್ನೆ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಿಸುತ್ತೇವೆ, ಬದಲಿಸಲೆಂದೇ ನಾವಿದ್ದೇವೆ ಎಂದಾಗ ನಾಮುಂದು ತಾಮುಂದೆಂಬಂತೆ ಟೀಕೆಗಳ ಮಹಾಪೂರ ಹರಿಯತೊಡಗಿತು. ಎಲ್ಲರೂ ಸಂವಿಧಾನ ಪರಿಷ್ಕರಣೆಯ ಮಾತಾಡುವುದು ನೇರ ಅಂಬೇಡ್ಕರರಿಗೇ ಮಾಡಿದ ಅವಮಾನ, ಫ್ಯಾಸಿಸ್ ಶಕ್ತಿ ಮತ್ತು ಮನುವಾದಿ ಮನಸ್ಸುಗಳ ಹುನ್ನಾರ, ಆರೆಸ್ಸೆಸ್ಸಿನ ಅಜೆಂಡಾ ಎಂದು ಅರಚಲಾರಂಭಿಸಿದರು. ಹಾಗಾದರೆ ಸಂವಿಧಾನ ಚರ್ಚೆಗೆ ಅತೀತವೇ? ಅದರ ಬಗ್ಗೆ ಮಾತಾಡಲೇಬಾರದೇ? ಅದೇನು ಕುರಾನೇ? ಅದರ ಕರ್ತೃ ಪ್ರವಾದಿಯೇ? ತಮಾಷೆಯೆಂದರೆ ಅಂಬೇಡ್ಕರರೇ ಸಂವಿಧಾನವನ್ನು ಸ್ವೀಕರಿಸುತ್ತಾ “ಇದುವರೆಗೆ ನಮ್ಮ ಕುಂದುಕೊರತೆ, ಲೋಪದೋಷಗಳಿಗೆ ಬ್ರಿಟಿಷರನ್ನು ದೂರಬಹುದಿತ್ತು. ಆದರೆ ಇನ್ನು ನಮಗೆ ನಾವೇ ಹೊಣೆಗಾರರು. ಸಂವಿಧಾನ ಕೂಡಾ ಪುನರವಲೋಕಿಸಬಲ್ಲ ಸಂಗತಿ” ಎಂದಿದ್ದರು. ಅಂದರೆ ಸಾಕ್ಷಾತ್ ಅಂಬೇಡ್ಕರರೇ ಸಂವಿಧಾನವನ್ನು ದೇವಲೋಕದ ಸರಕೆಂದೂ ತಾನೊಬ್ಬ ಪ್ರವಾದಿಯೆಂದೂ  ಅಂದುಕೊಂಡಿರಲಿಲ್ಲ. ಆದರೆ ಅದನ್ನೇ ಅನಂತ್‌ಕುಮಾರ್ ಹೆಗಡೆ ಹೇಳಿದರೆ ವಿವಾದ!
ಅಷ್ಟಕ್ಕೂ ಅವರ ಮಾತಲ್ಲಿ ತಪ್ಪೇನಿತ್ತು? ಅನಂತ ಕುಮಾರ್ ಹೆಗಡೆ ಮೇಲೆ ಕೀಳು ಭಾಷೆ ಉಪಯೋಗಿಸಿದವರ ಜೊತೆಗೆ ಹೆಗಡೆ ಮಾತಿಗೆ ಅಂತರ ಕಾಯ್ದುಕೊಂಡವರು ಸಂವಿಧಾನವನ್ನು ಎಷ್ಟರಮಟ್ಟಿಗೆ ಅರ್ಥಮಾಡಿಕೊಂಡಿದ್ದಾರೆ ಎನ್ನುವ ಸಂಶಯ ಬರುತ್ತಿದೆ.  ಸಂವಿಧಾನವನ್ನು ನಾವು ಸ್ವೀಕರಿಸಿದಾಗ ಅದರಲ್ಲಿ 395 ವಿಧಿಗಳಿದ್ದವು. ಅವುಗಳಲ್ಲಿ ಸುಮಾರು 250 ವಿಧಿಗಳು 1935 ರ ಭಾರತ ಸಂವಿಧಾನ ಅಧಿನಿಯಮದಿಂದ ನೇರವಾಗಿ ತೆಗೆದುಕೊಂಡವುಗಳು. ಮೂರನೆ ಅಧ್ಯಾಯದಲ್ಲಿರುವ ಮೂಲಭೂತ ಹಕ್ಕುಗಳನ್ನು ಅಮೆರಿಕಾ ಸಂವಿಧಾನದಿಂದ ನೇರವಾಗಿ ಭಟ್ಟಿ ಇಳಿಸಲಾಗಿತ್ತು. ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ  ನಿಯಮಗಳನ್ನು ಬ್ರಿಟಿಷ್ ವೆಸ್ಟ್ ಮಿನಿಸ್ಟರ್ ನಿಂದ ನೇರವಾಗಿ ಎಗರಿಸಲಾಗಿತ್ತು. ನಾಲ್ಕನೆ ಅಧ್ಯಾಯದ ರಾಜ್ಯನೀತಿ ತತ್ವಗಳು ಐರಿಷ್ ಸಂವಿಧಾನದ ಕಾರ್ಬನ್ ಕಾಪಿಗಳು. ಅಂದರೆ ಭಾರತೀಯ ಸಂವಿಧಾನದಲ್ಲಿರುವ ಬಹುತೇಕ ನಿಯಮಗಳು ಇಲ್ಲಿಗೆ ಒಗ್ಗದ ಸರಕುಗಳು. ಅಂದಿನ ತುರ್ತು ಸಂವಿಧಾನ ನಿರ್ಮಾತೃರಿಂದ ಆ ಕೆಲಸ ಮಾಡಿಸಿತ್ತು. ಸ್ವತಃ ಅಂಬೇಡ್ಕರರಿಗೂ ಈ ನಿಯಮಗಳು ಸುಧೀರ್ಘಾವಧಿಗೆ ಸಲ್ಲುವ ಸಂಗತಿಗಳಲ್ಲ ಎಂದೂ ತಿಳಿದಿತ್ತು. ಏಕೆಂದರೆ ಅಂಬೇಡ್ಕರರೇನೂ ಕಾಂಗ್ರೆಸಿಗರಂತೆ ದಡ್ಡಶಿಖಾಮಣಿಗಳಾಗಿರಲಿಲ್ಲ. ಪರಕೀಯ ವಿಧಿಗಳನ್ನು ಅಳವಡಿಸುವ ಹೊತ್ತಲ್ಲಿ ಅಂಬೇಡ್ಕರರು ಸಾಧ್ಯವಾದಷ್ಟೂ ಪರಂಪರೆಯ ಪಾಕ, ವಾಸ್ತವ ಪ್ರಜ್ಞೆ ಮತ್ತು ದೂರದೃಷ್ಟಿತ್ವದಿಂದ ಸಂವಿಧಾನಕ್ಕೆ ಅಂತಿಮ ರೂಪವನ್ನು ಕೊಟ್ಟಿದ್ದರು. ಹಾಗಾಗಿ ಸಂವಿಧಾನ ರಚನೆಗೆ ಮೀಸಲಿಟ್ಟ ಸಮಯಕ್ಕಿಂತಲೂ ಅದರ ಚರ್ಚೆಯೇ ಹೆಚ್ಚಿನ  ಸಮಯ ತೆಗೆದುಕೊಂಡಿತು. ಕರಡು ಪ್ರತಿಯ ಮೇಲಿನ ಆ ಚರ್ಚೆ ಅದೆಷ್ಟು ದೀರ್ಘಕಾಲದವರೆಗೆ ನಡೆಯಿತೆಂದರೆ ಸ್ವತಃ ಅಂಬೇಡ್ಕರರೇ ಅದನ್ನು ವಿಳಂಭ ನೀತಿ ಎಂದು ಬೇಸರಿಸಿ ಸಮಿತಿಯಿಂದ ಹೊರನಡೆದುಬಿಟ್ಟಿದ್ದರು.

ಮತ್ತಷ್ಟು ಓದು »