ವಿಷಯದ ವಿವರಗಳಿಗೆ ದಾಟಿರಿ

Archive for

13
ಜೂನ್

ಭಾರತದ ನಾಯಕರ ಹತ್ಯೆಯ ಹಿಂದಿನ ಕಾಣದ ಕೈಗಳು

– ರಾಕೇಶ್ ಶೆಟ್ಟಿ

ಆ ಮನುಷ್ಯ ಮನಸ್ಸು ಮಾಡಿದ್ದರೆ, ಬ್ರಿಟಿಷ್ ಸರ್ಕಾರದಲ್ಲಿ ‘ಐ.ಸಿ.ಎಸ್’ ಅಧಿಕಾರಿಯಾಗಿ ನೆಮ್ಮದಿಯ ಬದುಕು ಬದುಕಬಹುದಿತ್ತು, ಆದರೆ ಚಿನ್ನದ ಮೊಟ್ಟೆಯಿಡುವ ಐ.ಸಿ.ಎಸ್ ಅನ್ನು ಎಡಗಾಲಲ್ಲಿ ಒದ್ದು, ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಭಾರತಕ್ಕೆ ಬಂದ ಸುಭಾಷ್ ರವರು ಮೊದಲಿಗೆ ಕಾಂಗ್ರೆಸ್ ಪಕ್ಷ ಸೇರಿಕೊಂಡರು. ತಮ್ಮ ಸಾಮರ್ಥ್ಯದಿಂದಲೇ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ಏರಿದ್ದರು. ಆಗಲಾದರೂ ಅವರು ಸುಮ್ಮನೇ ಇದ್ದಿದ್ದರೂ ಸ್ವತಂತ್ರ ಭಾರತದಲ್ಲಿ ಯಾವುದಾದರೊಂದು ಸಚಿವ ಸ್ಥಾನ ಪಡೆದು ಇರುತ್ತಿದ್ದರೋ ಏನೋ. ಆದರೆ ಹುಟ್ಟಾ ಸ್ವಾಭಿಮಾನಿ ಮತ್ತು ಹೋರಾಟಗಾರರಾಗಿದ್ದ ನೇತಾಜಿಯವರು ಕಾಂಗ್ರೆಸ್ಸನ್ನೇ ಬದಲಿಸ ಹೊರಟರು. ಈಗ ಕಾಂಗ್ರೆಸ್ ಎಂಬ ಪುರಾತನ ಪಕ್ಷ ಹೇಗೆ ನೆಹರೂ ಮನೆತನದ ಅಡಿಯಾಳಾಗಿದೆಯೋ, ಆಗ ಗಾಂಧೀಜಿಯವರ ಕೈಯಲ್ಲೇ ಇತ್ತು. ಅದನ್ನು ಧಿಕ್ಕರಿಸಿ ನಿಂತ ಸುಭಾಷರನ್ನು ಗಾಂಧೀ ಬೆಂಬಲಿಗರು ಬಿಟ್ಟಾರೇನು? ಬೆಂಬಲಿಗರು ಬಿಟ್ಟರೂ, ಗಾಂಧೀಜಿ ಪಕ್ಷದ ಮೇಲಿನ ತನ್ನ ಪಾರುಪತ್ತೇದಾರಿಕೆಯನ್ನು ಬಿಡಲು ಸಿದ್ಧರಿದ್ದರಿರಲಿಲ್ಲ. ಹಾಗೆಯೇ, ಭಾರತದ ಸ್ವಾತಂತ್ರ್ಯವೊಂದೇ ಅಂತಿಮ ಗಮ್ಯವಾಗಿದ್ದ ಸುಭಾಷರಿಗೆ ಗಾಂಧೀಜಿಯವರ ಚಿಲ್ಲರೆ ರಾಜಕೀಯದ ಜಂಜಾಟಗಳು ಬೇಕಿರಲಿಲ್ಲ. ಕಾಂಗ್ರೆಸ್ಸಿನಿಂದ ಹೊರ ಬಂದ ಅವರು ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದರು. ಬ್ರಿಟಿಷರಿಗೆ ಸುಭಾಷ್ Potential Threat ಎನ್ನುವುದು ಅರಿವಾಗಿತ್ತು. ಅವರನ್ನು ಗೃಹಬಂಧನದಲ್ಲಿರಿಸಿದ್ದರು, ಈ ಪುಣ್ಯಾತ್ಮ ಅಲ್ಲಿಂದ ತಪ್ಪಿಸಿಕೊಂಡರು. ನಂತರದ್ದು ಭಾರತ ಸ್ವಾತಂತ್ರ್ಯ ಇತಿಹಾಸದ ರೋಚಕ ಅಧ್ಯಾಯ, ಬರಿಗೈಯಲ್ಲಿ ದೇಶಬಿಟ್ಟ ಸುಭಾಷ್, ೪೫ ಸಾವಿರ ಜನರ ಆಜಾದ್ ಹಿಂದ್ ಫೌಜ್ ಸ್ಥಾಪಿಸಿ ಬ್ರಿಟಿಷರ ನಿದ್ದೆಗೆಡಿಸಿದ್ದರು. ಎರಡನೇ ವಿಶ್ವ ಯುದ್ಧದಲ್ಲಿ ಜಪಾನ್ ಜೊತೆ ಸೇರಿಕೊಂಡು ೪೪ರಲ್ಲೇ ಅಂಡಮಾನ್-ನಿಕೋಬಾರ್ ದ್ವೀಪಗಳನ್ನು ಬ್ರಿಟಿಷರಿಂದ ಮುಕ್ತಿಗೊಳಿಸಿದರು, ಅಂತಿಮವಾಗಿ ಜಪಾನ್ ಹಾಗೂ ಆಜಾದ್ ಹಿಂದ್ ಫೌಜಿಗೆ ಈಶಾನ್ಯ ಭಾರತದಲ್ಲಿ ಹಿನ್ನಡೆಯಾಯಿತಾದರೂ, ಸುಭಾಷರು ಹೊತ್ತಿಸಿದ್ದ ಕ್ರಾಂತಿಯ ಕಿಡಿ ಸರ್ವವ್ಯಾಪಿಯಾಗಿತ್ತು. ಆಜಾದ್ ಹಿಂದ್ ಫೌಜಿನ ರುದ್ರನರ್ತನ ಬ್ರಿಟಿಷ್ ಭಾರತೀಯ ಆರ್ಮಿಯನ್ನು ಆವರಿಸಿಕೊಂಡಿತ್ತು. ಅದೇ ಸಮಯಕ್ಕೆ ಸರಿಯಾಗಿ ಅತ್ತ ಜಪಾನ್ ಶರಣಾಗಾತಿಯಾಗುವುದರಲ್ಲಿತ್ತು, ಇತ್ತ ಬ್ರಿಟಿಷರಿಗೆ ಭಾರತದಲ್ಲಿ ಉಳಿಗಾಲವಿರಲಿಲ್ಲವಾಗಿತ್ತು, ಆಗಲೇ ಶುರುವಾಗಿದ್ದು ಸುಭಾಷರ ನಿಗೂಢ ವಿಮಾನಾಪಘಾತದ ಕತೆ. ಅಪಘಾತದಲ್ಲಿ ಸುಭಾಷರು ಅಸುನೀಗಿದರು ಎನ್ನುವುದನ್ನು ಯಾರೆಂದರೇ ಯಾರೂ ನಂಬುವ ಸ್ಥಿತಿಯಲ್ಲಿರಲಿಲ್ಲ. ಅಮೇರಿಕನ್/ಬ್ರಿಟಿಷ್ ಗುಪ್ತಚರರು ವರ್ಷಗಟ್ಟಲೆ ಸುಭಾಷರ ಇರುವಿಕೆಯ ಪತ್ತೆ ಹಚ್ಚಲೆಂದೇ ಹಿಂದೆ ಬಿದ್ದಿದ್ದರು. ಇತ್ತ ಭಾರತದಲ್ಲಿ ಬ್ರಿಟಿಷರ ಹೈಫೈ ಆತಿಥ್ಯದ ಜೈಲಿನಲ್ಲಿದ್ದುಕೊಂಡೇ ಆಜಾದ್ ಹಿಂದ್ ಫೌಜಿನವರು ಭಾರತಕ್ಕೆ ಬಂದರೆ ಕತ್ತಿ ಹಿಡಿದು ಹೋರಾಡುತ್ತೇನೆಂದಿದ್ದ ಕಠಾರಿ ವೀರ ನೆಹರೂ ಸಾಹೇಬರಿಗೆ, ಸುಭಾಷ್ ವಾಪಸ್ ಬಂದರೆ ತನ್ನ ಖುರ್ಚಿಯ ಗತಿಯೇನು ಎಂದು ಚಿಂತೆ ಹತ್ತಿತ್ತು. ಅದೇ ಕಾರಣಕ್ಕೆ, ಬ್ರಿಟನ್ ಪ್ರಧಾನಿ ಆಟ್ಲಿಯವರಿಗೆ ಬರೆದ ಪತ್ರದಲ್ಲಿ, ನಿಮ್ಮ ಯುದ್ಧ ಖೈದಿ ಸುಭಾಷ್ ಗೆ ರಷ್ಯಾ ಆಶ್ರಯ ಕೊಟ್ಟಿದೆ ಎಂದು ಚಿಲ್ಲರೆ ದೂರು ನೀಡಿದ್ದರು. ಅಂದು ತೈಪೆಯಲ್ಲಿ ಯಾವುದೇ ವಿಮಾನ ಹಾರಾಟ ನಡೆದಿಲ್ಲವೆನ್ನುವುದು ಈಗ ಅಧಿಕೃತವಾಗಿದೆ. ವಿಮಾನವೇ ಹಾರದೇ, ಅಪಘಾತವಾಗಿದ್ದು ಎಲ್ಲಿಂದ? ಅಪಘಾತವೇ ನಡೆಯದಿದ್ದ ಮೇಲೆ ಸುಭಾಷರು ಹೋದರೆಲ್ಲಿ? ಹಾಗೆ ನಾಪತ್ತೆಯಾದವರನ್ನು ಹುಡುಕಿ ಕೊಲ್ಲಲಾಯಿತೇ? ಈ ನಿಗೂಢತೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸ್ವತಂತ್ರ ಭಾರತದ ಮೊದಲ ನಿಗೂಢ ರಾಜಕೀಯ ಕಣ್ಮರೆ/ಹತ್ಯೆಯ ಸಾಲಿಗೆ ಸೇರುವುದು ಸುಭಾಷರ ಹೆಸರು. ಸುಭಾಷರು ಮಾಡಿದ ತಪ್ಪೆಂದರೆ ಸ್ವತಂತ್ರ-ಸ್ವಾಭಿಮಾನಿ-ಸಶಕ್ತ ಭಾರತದ ಕನಸು ಕಂಡಿದ್ದು. ಸುಭಾಷರಿಂದ ಶುರುವಾದ ಈ ನಿಗೂಢ ರಾಜಕೀಯ ಹತ್ಯೆ/ಕಣ್ಮರೆಯ ಸರಣಿ ಸ್ವತಂತ್ರ ಭಾರತದಲ್ಲೂ ಮುಂದುವರೆಯುತ್ತಲೇ ಹೋಯಿತು. ಮತ್ತಷ್ಟು ಓದು »