ಮತಾಂಧರ ಮುಂದೆ ಸಧ್ಭಾವನೆಯ ಕನಸೇ?
-ರಾಕೇಶ್ ಶೆಟ್ಟಿ
ದಿನಾ ಸಾಯೋರಿಗೆ ಅಳೋರು ಯಾರು ಅನ್ನೋ ಗಾದೆ ಜಮ್ಮುಕಾಶ್ಮೀರ ರಾಜ್ಯದ ದಿನನಿತ್ಯದ ಹಿಂಸಾಚಾರಕ್ಕೆ ಹೇಳಿ ಮಾಡಿಸಿದಂತಿದೆ. ಆದರೆ ಈ ಗಾದೆಗೆ ಅಪವಾದವೆಂಬಂತೆ ಉಗ್ರರು, ಉಗ್ರರ ಸಿಂಪಥೈಸರ್ ಗಳು ಸತ್ತಾಗ ಅಳಲಿಕ್ಕೆ ದೇಶದಾದ್ಯಂತ ಗಂಜಿಗಿರಾಕಿಗಳು, ಸೆಕ್ಯುಲರ್ ಮಾಧ್ಯಮಗಳು ತಯಾರಾಗುತ್ತವೆ. ಆದರೆ ಕಣಿವೆಯಲ್ಲಿ ಪಾಕಿಗಳು ಗಡಿಯಾಚೆಯಿಂದ ನಡೆಸುವ ಅಪ್ರಚೋದಿತ ಗುಂಡಿನ ದಾಳಿಗೆ, ಉಗ್ರರ ದಾಳಿಗೆ ಬಲಿಯಾಗುವ ಭಾರತೀಯ ಯೋಧರಿಗೆ ಮಾತ್ರ ಈ ಭಾಗ್ಯವಿಲ್ಲ. ಇವರ ಸಾವಿನ ಸುದ್ದಿಗಳು ದಿನಪತ್ರಿಕೆಗಳಲ್ಲಿ ಕಾರ್ನರ್ ಸುದ್ದಿಯಾಗಿರುತ್ತದೆ. ಓದುವ ಜನರಿಗೂ ಇದೆಲ್ಲಾ ಅಲ್ಲಿ ಮಾಮೂಲು ಎನಿಸಿಬಿಡುತ್ತದೆ. ಆದರೆ, ಭುಜದೆತ್ತರಕ್ಕೆ ಬೆಳೆದು ನಿಂತ ಮಗನನ್ನು ಕಳೆದುಕೊಂಡ ಹೆತ್ತವರಿಗಷ್ಟೇ ಆ ನೋವಿನ ತೀವ್ರತೆ ತಟ್ಟುವುದು. ಅದೇ ನೋವಿನಲ್ಲಿ ಮಾತನಾಡಿದವರು ಹುತಾತ್ಮ ಯೋಧ ಔರಂಗಜೇಬ್ ತಂದೆ. ದೇಶಕ್ಕಾಗಿ ಪ್ರಾಣ ಕೊಡುತ್ತೇನೆಂದಿದ್ದ ನನ್ನ ಮಗ ತನ್ನ ಮಾತನ್ನು ಉಳಿಸಿಕೊಂಡಿದ್ದಾನೆ, ಅವನ ಸಾವಿಗೆ ತಕ್ಕ ಉತ್ತರವನ್ನು 72 ಗಂಟೆಗಳೊಳಗೇ ನೀಡಿ ಎಂದು ಪ್ರಧಾನಿ ಮೋದಿಯವರನ್ನು ಅವರು ಆಗ್ರಹಿಸಿದ್ದಾರೆ. ಮೊನ್ನೆ ರಂಜಾನ್ ಹಬ್ಬಕ್ಕೆಂದು ರಜೆಯಲ್ಲಿ ಮನೆಗೆ ತೆರಳುತ್ತಿದ್ದ ಯೋಧ ಔರಂಗಜೇಬ್ ರನ್ನು ಅಪಹರಿಸಿದ ಉಗ್ರಗ್ರಾಮಿಗಳು ತಲೆ, ಕತ್ತಿನ ಭಾಗಕ್ಕೆ ಗುಂಡಿಟ್ಟು ಕೊಂದಿದ್ದಾರೆ. ಅದೇ ದಿನ ರೈಸಿಂಗ್ ಕಾಶ್ಮೀರ್ ಎಂಬ ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಮತ್ತವರ ಖಾಸಗಿ ಅಂಗರಕ್ಷಕರನ್ನು ಉಗ್ರರು ಕೊಂದಿದ್ದಾರೆ. ಇವೆಲ್ಲಾ ಕೇಂದ್ರ ಸರ್ಕಾರದ ತಲೆಕೆಟ್ಟ ನಿರ್ಧಾರವಾಗಿದ್ದ ಪವಿತ್ರ ತಿಂಗಳಲ್ಲಿ ಭದ್ರತಾಪಡೆಗಳ ಮೇಲೆ ಏಕಪಕ್ಷೀಯ ಕದನವಿರಾಮ ಹೇರಿಕೆಯ ಫಲ. ಮತ್ತಷ್ಟು ಓದು