ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 1, 2018

#MeToo, ಒಂದೆರಡು ಪ್ರಶ್ನೆಗಳು from Me Too…!

‍ನಿಲುಮೆ ಮೂಲಕ

– ಸುಜಿತ್ ಕುಮಾರ್

timthumbಸ್ಥಳ ವರ್ಲಿ, ಮುಂಬೈ. ಅದು ಕಡುಕಪ್ಪು ಕೋಟುಗಳು ಹಾಗು ಎಲ್ಲೆಂದರಲ್ಲಿ ಸೀಳಿಕೊಂಡು ಗಾಳಿಗೆ ಹಾರಾಡುತ್ತಿರುವ ಡ್ರೆಸ್ಸುಗಳೇ ತುಂಬಿ ತುಳುಕುತ್ತಿರುವ ಸ್ಟೇಡಿಯಂ. ಸೇರಿರುವರೆಲ್ಲ ಸಿನಿಮಾರಂಗದಲ್ಲಿ ಒಂದಿಲ್ಲೊಂದು ಬಗೆಯಲ್ಲಿ ಗುರುತಿಸಿಕೊಂಡಿರುವ ದೊಡ್ಡ ದೊಡ್ಡ ಹಸ್ತಿಗಳು. ಘಾಡ ಮೌನದ ಸೀರಿಯಸ್ನೆಸ್ ಅನ್ನು ಒಳಗೊಂಡ ಆ ಮುಖಗಳನ್ನು ಗಮನಿಸಿದಾಗ ಮುಂದಿದ್ದ ಸ್ಟೇಜಿನ ಮೇಲೆ ಇಂದು ತೀರಾ ಸಾಮನ್ಯವೆನಿಸಿಕೊಂಡಿರುವಂತೆ ಕೇಂದ್ರ ಸರ್ಕಾರಗಳ ನಡೆಯ ವಿರುದ್ಧವೋ, ದೇವಸ್ಥಾನಗಳಿಗೆ ಮಹಿಳೆಯ ಪ್ರವೇಶ ಬೇಕೆಂಬುದರ ಬಗ್ಗೆಯೂ ಅಥವಾ ಜೀವ ಪಣವಿಟ್ಟು ಕಾದಾಡುವ ಸೈನಿಕರ ನಡೆಗಳ ಬಗ್ಗೆಯೂ ಜನತೆಗೆ ಅರ್ಥವಾಗದ ದುಬಾರಿ ಭಾಷೆಯಲ್ಲಿ ಅವರವರೇ ಚರ್ಚಿಸಿ, ಮಧ್ಯದಲ್ಲಿ ಒಂದೆರೆಡು ಮದ್ಯಗಳನ್ನು ಏರಿಸಿ, ಕೊನೆಗೆ ತೂರಾಡುತ್ತಾ ಮನೆಗೆ ತೆರಳುವ ಹೈ ಪ್ರೊಫೈಲ್ ಪ್ರಗತಿಪರರ ಕಾರ್ಯಕ್ರಮವೇನೋ ಎಂದೆನಿಸುತ್ತಿತ್ತು. ಆದರೆ ಅಂದು ಅಲ್ಲಿ ನಡೆದದ್ದೇ ಬೇರೆ. ಮುಂದಿನ ಮೂರ್ನಾಲ್ಕು ಘಂಟೆ ಅಲ್ಲಿ ನಡೆದ ಪ್ರಹಸನ ಇಡೀ ದೇಶಕ್ಕೆ ದೇಶವೇ ಹುಚ್ಚೆದ್ದು ಚರ್ಚಿಸುವ ವಿಷಯವಾಯಿತು. ಸ್ಲೇಟೊಂದನ್ನು ಹಿಡಿದು ಅರೆನಗ್ನಗೊಂಡ ಪಬ್ಲಿಸಿಟಿಯನ್ನೇ ಸಾಧನೆ ಎಂದುಕೊಂಡು ಅರಚಾಡುವ ಕೆಟಗರಿಯ ಮೂವರು, ವಾನರರ ಸೈನ್ಯದ ಕಿರಾತಕರಂತಿರುವ ಆರೇಳು ಜನರನ್ನು ಸ್ಟೇಜಿನ ಮೇಲೆ ಕರೆಸಿ ಅವರ ಮೂರು ತಲೆಮಾರಿನ ಕುಟುಂಬವನ್ನು ಜಾತಿ ವರ್ಣವೆನ್ನದೇ ಮುಖದಿಂದ ಹಿಡಿದು ಮರ್ಮಾಂಗದವರೆಗೂ ಅಣಕಿಸಿ, ಹೀಯಾಳಿಸಿ ತಮ್ಮ ವಿಷಯ ದಾಹದ ತೃಷೆಯನ್ನು ತೀರಿಸಿಕೊಂಡಿದ್ದನ್ನು ಅಲ್ಲಿ ನೆರೆದಿದ್ದ ಜೆಂಟಲ್ ಮ್ಯಾನ್ ಡ್ರೆಸ್ಸಿನ ಸೆಲೆಬ್ರಿಟಿಗಳು ಎದ್ದು ಬಿದ್ದು ನಗುತ್ತಾ ಸ್ವಾಗತಿಸಿದರು. ಕೇಕೆಹಾಕುತ್ತ ಕುಣಿದು ಕುಪ್ಪಳಿಸಿದರು. ಅಲ್ಲಿ ನೆರೆದಿರುವರಷ್ಟೇ ಅಲ್ಲದೆ ಬಾರದಿರುವರನ್ನೂ ಮಾತಿನಲ್ಲಿ ಅಳಿದು ಜಾಡಿಸಿದರು. ಹಿರಿಯರು ಕಿರಿಯರು ಎಂಬುದನ್ನು ಲೆಕ್ಕಿಸದೆ ನಡೆದ ಆ ‘A’ ಕೆಟಗರಿಯ ಕಾರ್ಯಕ್ರಮವನ್ನು ಪ್ರಶ್ನಿಸ ಹೊರಟವರಿಗೆ ‘ಅಭಿವ್ಯಕ್ತಿ’ ಸ್ವಾತಂತ್ರ್ಯದ ಬಾವುಟವನ್ನು ಹಾರಿಸುತ್ತ ನಂತರ ನುಳಚಿಕೊಂಡರು. ಯಾವುದೇ ಹ್ಯಾಷ್ ಟ್ಯಾಗ್ ಗಳಾಗಲಿ, ಪಿಟಿಷನ್ಗಳ ಅಭಿಯಾನಗಳಾಗಲಿ ಅಂದು ಕಾಣಲಿಲ್ಲ. ಅಲ್ಲಿ ನೆರೆದಿದ್ದ ಯಾವೊಬ್ಬ ಸೆಲೆಬ್ರೆಟಿಯೂ ನನ್ನ ಮಾನ ಹರಾಜಾಯಿತು ಏನುತಾ ಮಾನನಷ್ಟ ಮೊಕದ್ದಮ್ಮೆಯನ್ನು ಹೂಡಲಿಲ್ಲ…. ಏಕೆ?

ಅದು ಟ್ರೆಡಿಷನಲ್ ಚಿತ್ರಗಳ ಓಟವನ್ನು ತಡೆಹಿಡಿದು, ಬಡಿದು, ತುಳಿದು ಬೆಳೆಯಲೆತ್ನಿಸುತಿದ್ದ ಕಮರ್ಷಿಯಲ್ ಚಿತ್ರಗಳ ಜಮಾನ. ಆದರೆ ಅದೆಷ್ಟೇ ಕಮರ್ಷಿಯಾಲಿಟಿ ಚಿತ್ರದಲ್ಲಿ ಇದ್ದರೂ ಕ್ಲಾಸಿಕ್ ಚಿತ್ರಗಳ ಹೊಳಪಿನ ಮುಂದೆ ಆವುಗಳು ತೀರಾನೇ ಮಂಕಾಗುತ್ತಿದ್ದವು. ಕ್ರಿಯೇಟಿವಿಟಿ ಏನೆಂಬುದೇ ಅರಿಯದ ಅಮಾಯಕ ನಿರ್ದೇಶಕ ಆಗ ಬೇರೆದಾರಿ ಕಾಣದೆ ಕೆಲವು ವಯಸ್ಕ ಸೀನ್ಗಳನ್ನು ಚಿತ್ರಗಳಲ್ಲಿ ತೂರಿಸಬೇಕಾಯಿತು. ನಾವು ನಟರು, ಡೈರೆಕ್ಟರ್ ಸಾಹೇಬರ  ಕೈಯಲ್ಲಿ ನಲಿಯುವ ಗೊಂಬೆಗಳು, ಅವರು ಆಡಿಸಿದ ಆಟವನ್ನು ಆಟವಾಡುವವರು ಎಂಬ  ಸ್ಟೇಟ್ಮೆಂಟ್ ಗಳನ್ನು ನೀಡುತ್ತಾ ನಟ ನಟಿಯರೂ ತಮ್ಮ ಮೂರು ಕಾಸಿನ ಮರ್ಯಾದೆಯ ಹರಾಜನ್ನು ಕೊಂಚ ಡೈರೆಕ್ಟರ್ಗಳಿಗೂ ಹೊರಿಸಿ, ನಟಿಸಿ, ಹಣವನ್ನು ಗಳಿಸಿ ಅಲ್ಲಿಂದ ಪಾರಾಗುತ್ತಿದ್ದರು. ಹೆಚ್ಚಾಗಿ ತಮ್ಮ ವೃತ್ತಿಜೀವನದ ಆದಿಯಲ್ಲಿರುತ್ತಿದ್ದ ಅವರುಗಳು ಹಣ ಹಾಗು ಪಬ್ಲಿಸಿಟಿಗಳು ಸಿಗುವ ಕ್ರ್ಯಾಶ್ ಕೋರ್ಸ್ ಗಳ ಶಾರ್ಟ್ಕಟ್ಟನು ಹಿಡಿದ್ದಿದ್ದರು. ಆಗ ಎಲ್ಲವೂ ಸರಿ. ಎಲ್ಲರೂ ತನ್ನ ಜೀವನವನ್ನು ಕಟ್ಟಿ ಬೆಳೆಸುವ ಮಾರ್ಗದರ್ಶಕರು. ಅದಕ್ಕಾಗಿ ಚಿತ್ರದಲ್ಲಿ ಎಂತಹ ಸೀನ್ಗಳನ್ನೂ ಮಾಡಲು ಸಿದ್ದ. ಏನೂ ಮಾಡಲೂ ಸಿದ್ದ. ಏಕೆಂದರೆ ಅದು ‘ಬೋಲ್ಡ್’ ಕ್ಯಾರೆಕ್ಟರ್. ಅಲ್ಲದೆ ಅದೊಂದು ಆರ್ಟ್. ದುರ್ಬಿನ್ ಇಟ್ಟು ಕಣ್ಣರಳಿಸಿ ನೋಡಿದರೂ ಎಳ್ಳಷ್ಟೂ ನಟನೆಯ ಅಂಶವನ್ನು ಕಾಣದ ಆ ಮುಖಗಳು ಆರ್ಟ್ ಅಂಡ್ ಕ್ಯಾರೆಕ್ಟರ್ ಗಳ ಬಗ್ಗೆ ಮಾತನಾಡುವಾಗ ಅಂದು ಕಿವಿಯಿಟ್ಟು ಕೇಳುತ್ತಾ ಸಿಳ್ಳೆ ಚಪ್ಪಾಳೆಗಳನ್ನು ಬಾರಿಸಿದ ಗುಂಪನ್ನೂ ಶ್ಲಾಘಿಸಲೇ ಬೇಕು ಬಿಡಿ. ಅದೇನೇ ಇರಲಿ. ಈಗ ದಶಕಗಳ ನಂತರ ಮತ್ತದೇ ಕ್ಯಾರೆಕ್ಟರ್ಗಳು ತಲೆಯೆತ್ತಿವೆ. ತಮ್ಮ ನಟನ ಕೌಶ್ಯಲ್ಯದ ಹಿರಿಮೆಗೆ ಮೂರು ದಿನದ ಮಟ್ಟಿಗೆ ನೆಟ್ಟಗೆ ಚಿತ್ರರಂಗದಲ್ಲಿ ನೆಲೆಯೂರಲಾಗದ ಅವುಗಳು ಈಗ ಮತ್ತೊಮ್ಮೆ ಟಿವಿ ಪರದೆಯ ಮೇಲೆ ಬಂದಿವೆ. ಕೈಗೊಂದು ಕಾಲಿಗೊಂದು ಸಿಗುವ ರಿಯಾಲಿಟಿ ಷೋಗಳ ದೃಷ್ಟಿ ತಮ್ಮೆಡೆ ಹರಿಯಲೋ ಅಥವಾ ಮತ್ತದೇ ಪುಕ್ಕಟೆ ದೊರೆಯುವ ಹಣ ಹಾಗು ಪಬ್ಲಿಸಿಟಿಯ ಧಾಹಕ್ಕೋ ಹಾತೊರೆಯುವ ಅವುಗಳ ಹಪಾಹಪಿ ಪ್ರೆಸ್ ಕಾನ್ಫೆರೆನ್ಸ್ ಒಂದನ್ನು ಕರೆಸಿ ದಶಕಗಳ ಹಿಂದೆ ಜರುಗಿದ ಶೋಷಣೆಯನ್ನು ಊರು ಬಿದ್ದರೂ ಕ್ಯಾರೇ ಎನ್ನದೆ ಸೆಲೆಬ್ರಿಟಿಗಳ ಬಾಲದ ಹಿಂದೆ ಅಲೆಯುವ ಕೆಲ ಮಾಧ್ಯಮಗಳ ಮುಂದೆ ಕಾಣುತ್ತದೆ. ಅದೊಂದು ದಿನ, ಅದೆಲ್ಲೋ, ಅದೆಷ್ಟೊತ್ತಿಗೋ ನನ್ನ ಮೇಲೆ ಆತ ಅಸಭ್ಯವಾಗಿ ವರ್ತಿಸಿದ, ಹೇಳಬಾರದ ಮಾತನ್ನು ಹೇಳಿದ, ಶೋಷಿಸಿದ ಎಂದೆಲ್ಲಾ ಒದರುತ್ತಾ ನೆರೆದಿರುವವರ ಸಿಂಪತಿಯನ್ನು ಪಡೆಯಲೆತ್ನಿಸುವ ಅವುಗಳ ಪ್ರಸ್ತುತ ಆಟ ಯಾರಿಗೇನು ತಿಳಿಯದಂತಲ್ಲ. ಕ್ರಿಕೆಟ್ ದಿಗ್ಗಜರಿಂದಿಡಿರು ಪ್ರಸಿದ್ಧ ನಟ ನಿರ್ದೇಶಕರವರೆಗೆ ಬೊಟ್ಟು ಮಾಡುತ್ತಾ ಜೀವನದ ಗೊತ್ತು ಗುರಿ ಇಲ್ಲದೆ ಅಲೆಯುವ ಅವುಗಳ ಸ್ಟೇಟ್ಮೆಂಟ್ ಗಳನ್ನು ಪರೀಕ್ಷೆ ಹಾಗು ಪರಾಮರ್ಶೆಗೆ ಒಳಪಡಿಸದೆ ಮುಖ್ಯವಾಹಿನಿಯಲ್ಲಿ ಬಿತ್ತರಿಸಲಾಗುತ್ತದೆ. ಹೀಗೆ ಅಂದು ಯಾವುದೇ ನೀಲಿ ಚಿತ್ರಗಳಿಗೂ ಕಡಿಮೆ ಎನಿಸದ, ಎಂತಹ ವಯಸ್ಕ ಸೀನ್ಗಳನ್ನೂ ನೀರು ಕುಡಿದಂತೆ ಮಾಡಿ, ಒಂದು ಮಾತನ್ನು ತುಟಿಕ್ ಪಿಟಿಕ್ ಅನ್ನದೆ ಇಂದು ಅದೆಲ್ಲೋ ಆತ ಹಾಗಂದ,ಇವರು ಹೀಗೆಂದರು, ಈತ ಅಲ್ಲಿಗೆ ಕರೆದ, ಕಣ್ಸನ್ನೆ ಮಾಡಿದ ಹಾಗಾಗಿ ನನ್ನ ಮೇಲೆ ಶೋಷಣೆಯಾಗಿದೆ ಎಂಬ ಮಾತುಗಳಿಗೆ ಆ ಮಟ್ಟಿನ ಪ್ರಾಮುಖ್ಯತೆಯನ್ನು ಕೊಡುವ ಮಾಧ್ಯಮಗಳ ಬಗೆಯನ್ನು ಪ್ರಶ್ನಿಸುವರೇ ಇಲ್ಲ, ಏಕೆ?

ಅದೊಂದು ಕಾಲವಿತ್ತು. ಸಿನಿಮಾದಲ್ಲಿ ನಟಿಸುವ ನಾಯಕ ಹಾಗು ನಾಯಕಿಯರ ಆಧಾರದ ಮೇಲೆ ಪೋಷಕರು ತಮ್ಮ ಮಕ್ಕಳನ್ನು ಅಂತಹ ಸಿನಿಮಾಗಳಿಗೆ ಕರೆದುಕೊಂಡು ಹೋಗಬೇಕೋ ಬೇಡವೋ ಎಂಬುದನ್ನು ನಿರ್ಧರಿಸುತ್ತಿದ್ದರು. ಆ ನಾಯಕ ನಾಯಕಿಯರೂ ಸಹ ತಮ್ಮ-ತಮ್ಮ ಸ್ಥಾನದ ಜವಾಬ್ದಾರಿಯನ್ನು ಅರಿತು ಸಿಗುವ ಪಾತ್ರಗಳನ್ನು ಕೇಳಿ, ಕಲ್ಪಿಸಿ, ಬೇಡವಾದಾದನ್ನು ತಿರಸ್ಕರಿಸಿ ಬೇಕಾದನ್ನು ಮಾರ್ಪಡಿಸಿ ಒಟ್ಟಿನಲ್ಲಿ ಎಲ್ಲಿಯೂ ತನ್ನ ಗೌರವಕ್ಕೆ ಹಾಗು ಜನತೆಯ ನಂಬುಗೆಗೆ ದಕ್ಕೆ ಬಾರದಂತಹ ಪಾತ್ರಗಳನ್ನು ಮಾಡುತ್ತಾ ನಟಿಸಿ ರಂಜಿಸುತ್ತಿದ್ದರು. ಆದರೆ ಕಾಲ ಕಳೆದಂತೆ ಹಣದ ಹುಚ್ಚುಹೊಳೆಯಲ್ಲಿ ಪ್ರಸ್ತುತ ಬಹುಪಾಲು ನಟನಟಿಯರು ಸಾಮಾಜಿಕ ಜವಾಬ್ದಾರಿ, ಅಭಿಮಾನಿಗಳ ಬಗೆಗಿನ ಕಳಕಳಿ ಎಂಬೆಲ್ಲ ನಿಯಮಗಳನ್ನು ಯಾವುದೇ ಮುಲಾಜಿಲ್ಲದೆ ಮುರಿದು ‘ಫೇಮ್’ ಎಂಬ ಕಿರೀಟದ ಧಾಹದಲ್ಲಿ ದೈಹಿಕವಷ್ಟೇ ಅಲ್ಲದೆ ಮಾನಸಿಕವಾಗಿಯೂ ನಗ್ನಗೊಳ್ಳುತ್ತಿದ್ದಾರೆ. ಪ್ರಸ್ತುತ ಕಾಲದ ಇಂತಹ ಬಹುಮಂದಿ ನಟ ನಟಿಯರಿಗೆ ಶೋಷಣೆಯ ಹೆಸರಿನಲ್ಲಿ ಇನ್ನೊಬ್ಬರ ಮೇಲೆ ಬೊಟ್ಟು ಮಾಡುವ ನೈತಿಕ ಹಕ್ಕು ನಿಜವಾಗಿಯೂ ಇದೆಯೇ ಎಂಬ ಪ್ರಶ್ನೆ ಉದ್ಭವಿಸದಿರದು. ಅಲ್ಲದೆ ಎಂದು ‘ಚಿತ್ರಮಾಧ್ಯಮ’ಗಳು ‘ಫಿಲ್ಮ್ಇಂಡಸ್ಟ್ರಿ’ಗಳಾದವೋ ಅಂದೇ ಕಲೆ, ಸಂಗೀತ, ಸಾಹಿತ್ಯ ಎಂಬ ಬೇಕಾದ ಅಂಶಗಳು ಅಲ್ಲಿಂದ ದೂರವಾದವು. ಇಂದು ಸಿನಿಮರಂಗವೇನಿದ್ದರೂ ಇತ್ತಕಡೆಯಿಂದ ನೂರು ರೂಪಾಯಿ ತಳ್ಳಿ ಅತ್ತ ಕಡೆಯಿಂದ ಕೋಟಿ ಪಡೆಯುವ ಯಂತ್ರವಷ್ಟಾಗಿ ನಿಂತಿದೆ. ಇಲ್ಲಿ ಎಲ್ಲವು ಹಣಮಯವಾಗಿರುವಾಗ ಸರಿ-ತಪ್ಪು, ಸುಳ್ಳು-ನಿಜ, ಕಪ್ಪು-ಬಿಳುಪೆಂಬ ಭಾವಗಳಿಗೆ ಎಲ್ಲಿಯ ಬೆಲೆ?

ಒಟ್ಟಿನಲ್ಲಿ ಲಂಗು ಲಗಾಮಿಲ್ಲದೆ ನ್ಯಾಯಮೂರ್ತಿಗಳಂತೆ ವರ್ತಿಸುವ ಮಾಧ್ಯಮಗಳು, ಹೊಲಸು ಪದಗಳ ಸರಮಾಲೆಯನ್ನೇ ಹಾಸ್ಯವೆಂದು ಪರಿಗಣಿಸಿ ನೋಡುಗರನ್ನು ರಂಜಿಸಲೆತ್ನಿಸುವ ಯುವ ಜನಾಂಗ, ಸಾಮಾಜಿಕ ಬದ್ಧತೆಯನ್ನು ಕಳೆದುಕೊಂಡಿರುವ  ಪ್ರಸ್ತುತ ಚಿತ್ರರಂಗಳ ಹಿನ್ನಲೆಗಳಲ್ಲಿ ಇಂದು ಶೋಷಣೆ ಎಂಬ ಪದ  ತನ್ನ ನಿಜತ್ವವನ್ನು ಕಳೆದುಕೊಳ್ಳುವಂತೆ ತೋರುತ್ತಿದೆ. ಬೇಕಾಬಿಟ್ಟಿ ಸಿಕ್ಕ ಸಿಕ್ಕಲೆಲ್ಲ ಬಳಕೆಯಾಗಿ ತನ್ನ ನೈಜ ಶಕ್ತಿಯನ್ನು ಕ್ಷಿಣೀಸಿಕೊಳ್ಳುತ್ತಿದೆ. ಮುಖವನ್ನು ಬಣ್ಣಮೆತ್ತುವ ಪೈಂಟ್ ಬೋರ್ಡಿನಂತೆ ಮಾಡಿಕೊಂಡು, ಲಕ್ಷ ಬೆಲೆಬಾಳುವ  ಚಿನ್ನಾಭರಣಗಳನ್ನು ಕಷ್ಟಪಟ್ಟು  ಹೊತ್ತುಕೊಂಡು, ಸರಿಯೋ ತಪ್ಪೋ, ನಿಜವೋ ಸುಳ್ಳೋ ಏನಾದರಾಗಲಿ ಮೇರು ವ್ಯಕ್ತಿತ್ವವೊಂದರ ಮಾನಹರಣ ಕಾರ್ಯಕ್ರಮವೆಂದರೆ ತಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಡೇರೆ ಹೂಡುವ ಕೆಲವು ಮಾನವಪ್ರಾಣಿಗಳನ್ನು ಒಳಗೊಂಡು ‘ಶೋಷಣೆ’ ಎನುತ ನುಲಿಯುವ ಗುಂಪಿಗೆ ಅಲ್ಲಿ ಸ್ಕೂಲು, ಕಾಲೇಜು, ಆಸ್ಪತ್ರೆ, ಕಚೇರಿಗಳಷ್ಟೇ ಅಲ್ಲದೆ ಆಶ್ರಮ ಅನಾಥಯಲಯಗಳಲ್ಲೂ ನಡೆಯುವ (!)ಶೋಷಣೆ ಶೋಷಣೆ ಎನಿಸುವುದಿಲ್ಲವೇ? ಅವುಗಳ ಧ್ವನಿಗೂ ಧ್ವನಿಗೂಡಿಸಬೇಕೆನಿಸುವುದಿಲ್ಲವೇ? ಸ್ಟಾರ್ಗಿರಿ ಇದ್ದ ಮಾತ್ರಕ್ಕೆ ಇಂದು ಊರಿಗೆ ಊರೇ ಈಕೆಗೆ ಬೆಂಬಲ ಕೊಡಬಹುದು. ಮುಖಕ್ಕೆ ಮಸಿಯನ್ನು ಮೆತ್ತಿಕೊಂಡು ಅಡುಗೆ ಮನೆಯಲ್ಲೆ ಕಾಲ ತಳ್ಳುವ ಅದೆಷ್ಟೋ ಮೂಕ ಜೀವಗಳಿಗೆ ಬೆಂಬಲ ಕೊಡುವವರ್ಯಾರು? ಮೇಲಾಗಿ ಇಂದು ಶೋಷಣೆ ಎಂಬುದು ಕೇವಲ ಮಹಿಳೆಯೊಬ್ಬಳ ಮಾತ್ರದ ಅನ್ಯಾಯದ ಭಾಗವೇ? ಅದೇ ಇಂಡಸ್ಟ್ರಿಯಲ್ಲಿ ಪುರುಷರೊಟ್ಟಿಗೂ ಜರುಗುವ ಶೋಷಣೆಗೆ ಏನೆಂದು ಕರೆಯುತ್ತಾರೆ?  ಅಷ್ಟಾಗಿಯೂ ಕೆಲ ಹೆಂಗಸರಿಗೆ ಅದು ಶೋಷಣೆಯ ನಿಜ ರೂಪವೆಂದೇ ಎನಿಸಿದಲ್ಲಿ ನಮ್ಮ ಪೊಲೀಸ್ ಸ್ಟೇಷನ್ ಗಳು, ಕೋರ್ಟು ಕಛೇರಿಗಳೇನು ಸರ್ಕಾರದ ಬೆಂಚು ಬಿಸಿ ಮಾಡಲಿಕ್ಕಿರುವ ಸಂಸ್ಥೆಗಳೇ? ಹೋಗಿ, ನಿಮ್ಮ ಅಳಲನ್ನು, ನೋವನ್ನು, ಜಿಗುಪ್ಸೆಯನ್ನು ಪುರಾವೆಯ ಸಹಿತ ಅಲ್ಲಿ ಬಿಚ್ಚಿಡಿ. ಅದನ್ನು ಬಿಟ್ಟು ಸ್ವಘೋಷಿತ ನ್ಯಾಯಮೂರ್ತಿಗಳೆನಿಸಿರುವ ಟಿವಿ ಚಾನೆಲ್ಲುಗಳನ್ನು ಕರೆದು ಬಾಯಿಗೆ ಬಂದಂತೆ ಅರಚಿದರೆ ಅಪರಾಧಿಗೆ ಶಿಕ್ಷಿಸುವ ನಿಮ್ಮ ಪ್ರಯತ್ನ ನಿಜವಾಗಿಯೂ ಸಫಲವಾಗುತ್ತದೆಯೇ?

ಒಂದಂತು ನಿಜ. ಇಂದು ನಡೆಯುತ್ತಿರುವ #MeToo ಅಭಿಯಾನ ಮುಂದಿನ ದಿನಗಳಲ್ಲಿ ಮುಗ್ದ ಜೀವಗಳನ್ನು ಚಿತ್ರದ ಆಮಿಷವೊಡ್ಡಿ ತಮಗೆ ಬೇಕಂತೆ ಬಳಸಲಿಚ್ಛಿಸುವ ಅದೆಷ್ಟೋ ಮನಸ್ಸುಗಳಿಗೆ ಮರ್ಮಾಘಾತವನ್ನು ಉಂಟುಮಾಡುವದಂತು ಸುಳ್ಳಲ್ಲ. ಈ ಅಭಿಯಾನ ಕೇವಲ ಸಿನಿಮಾ ಇಂಡಸ್ಟ್ರಿಯಷ್ಟೇ ಅಲ್ಲದೆ ಇತರೆ ಎಲ್ಲಾ ವಲಯಗಳನ್ನು ಪ್ರವೇಶಿಸಬೇಕು. ಆದರೆ ಇಂದು ಸಮ್ಮತಿಸಿ ನಾಳೆ ದೂರುವಂತಹ ಅಥವಾ ನೋಡಿದ ಮಾತ್ರಕ್ಕೆ ತನ್ನ ಚಾರಿತ್ರವೇ ಹಾಳಾಯಿತ್ತೆನ್ನುವ ಬಾಲಿಶ ಹೇಳಿಕೆಗಳಿಗೆ ಪರಮಾರ್ಶೆಯ ಫಿಲ್ಟರ್ ಅನ್ನು ತೊಡಿಸದೆಯೇ ಸೊಪ್ಪು ತಿನ್ನಿಸುವುದನ್ನು ಮಾತ್ರ ಮಾಧ್ಯಮಗಳು ನಿಲ್ಲಿಸಲೇಬೇಕು. ಅಲ್ಲದೆ ಇವುಗಳೆಲ್ಲದರ ಅಖಾಡವಾಗಿರುವ ಸಿನಿಮಾ ರಂಗ ಕೊಂಚವಾದರೂ ಬದಲಾಗಬೇಕು. ಅರೆ ಬೆತ್ತಲ ಫೋಟೊಶೂಟ್ಗಳ ಮಾದಕ ಪೋಸುಗಳಿಗೆ ನೋಡುಗರೇನು ಕಾಯಿ ಒಡೆದು ಪೂಜೆಮಾಡುವಿದಿಲ್ಲ ಸ್ವಾಮಿ. ನಿಜವಾದ ಅಭಿಯಾನ ಮೊದಲು ಕ್ರಿಯೇಟಿವಿಟಿಯ ಹೆಸರಿನಲ್ಲಿ ಫ್ಯಾಮಿಲಿ ಫಿಲಂ ಎಂದು ಪಬ್ಲಿಸಿಟಿಯನ್ನು ನೀಡಿ ‘ಇಂಟಿಮೇಟ್ ಸೀನ್ಗಳು ’ ‘ಐಟಂ ಸಾಂಗ್ ಗಳು’ ‘ಹಾಟ್ ಸೀನ್’ಗಳು ಎಂಬ ಬಾಯಿಚಪ್ಪರಿಸುವ ದೃಶ್ಯಗಳನ್ನು ತೋರಿಸುವವರ ವಿರುದ್ದವೂ ಇರಲಿ. ಇಲ್ಲವಾದರೆ ಕೆಸರನ್ನು ತಿನ್ನುವ ಪ್ರಾಣಿಯನ್ನು ಕೆಸರಿಗೇ ಒಗೆದಂತೆ ಶೋಷಣೆಯೆನುತ ಒದರುವ ಮಾತುಗಳು ಅತ್ತ ಆರಕ್ಕೂ ಏರದ ಮೂರಕ್ಕೂ ಇಳಿಯದ  ಗಾಳಿಪದಗಳಾಗಿ ಕಾಣೆಯಾಗಬಲ್ಲವು.

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments