ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 25, 2019

3

ಅಕಟಕಟ ಸಂಸಾರವನು ನೆಚ್ಚಿಕೆಡಬ್ಯಾಡ

‍ನಿಲುಮೆ ಮೂಲಕ

ಡಾ. ಶ್ರೀಪಾದ ಭಟ್
ಸಹಾಯಕ ಪ್ರಾಧ್ಯಾಪಕ
ಡಾ. ಡಿ ವಿ ಗುಂಡಪ್ಪಕನ್ನಡಅಧ್ಯಯನಕೇಂದ್ರ,
ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

Sri Sripadaruಶ್ರೀಪಾದರಾಜರು (1404-1502) ಹರಿದಾಸ ಸಾಹಿತ್ಯದ ಪ್ರಮುಖ ಕೀರ್ತನಕಾರರಲ್ಲಿ ಒಬ್ಬರು. ಚನ್ನಪಟ್ಟಣ ಬಳಿಯ ಅಬ್ಬೂರಿನವರಾದ ಇವರನ್ನುಪುರಾಣೋಕ್ತ ಹರಿಭಕ್ತಧ್ರುವನ ಅವತಾರ ಎಂದು ಹೇಳಲಾಗುತ್ತದೆ. ವಿಜಯನಗರ ಅರಸರ ರಾಜಗುರುಗಳಾಗಿದ್ದ ಇವರು ಪುರಂದರ, ಕನಕರ ಗುರುಗಳಾಗಿದ್ದ ವ್ಯಾಸತೀರ್ಥರ ಗುರುಗಳೂ ಹೌದು. ಭ್ರಮರಗೀತ, ವೇಣುಗೀತ, ಗೋಪಿಗೀತ, ಮಧ್ವನಾಮ ಇವರ ಪ್ರಮುಖರಚನೆಗಳು. ರಂಗವಿಠಲ ಎಂಬ ಅಂಕಿತದಲ್ಲಿ ಇವರು ಕೀರ್ತನೆಗಳನ್ನೂ ರಚಿಸಿದ್ದಾರೆ. ‘ನೀ ಇಟ್ಟ ಹಂಗೆ ಇರುವೆನೋ ಹರಿಯೇ’;‘ಕಣ್‍ಗಳಿದ್ಯಾತಕೋ ಕಾವೇರಿರಂಗನ ನೋಡದಾ’;‘ಭೂಷಣಕೆ ಭೂಷಣ…’ ಮೊದಲಾದವು ಅವರ ಅತ್ಯಂತ ಜನಪ್ರಿಯ ಕೀರ್ತನೆಗಳಾಗಿ ಜನಮನದಲ್ಲಿ ನೆಲೆನಿಂತಿವೆ. ‘ಅಕಟಕಟ ಸಂಸಾರವನು ನೆಚ್ಚಿಕೆಡಬ್ಯಾಡ’ ಎಂಬುದು ಅವರ ಅನೇಕಾನೇಕ ಕೀರ್ತನೆಗಳಲ್ಲೊಂದು.

ಹರಿದಾಸರ ರಚನೆಗಳು ಕನ್ನಡಕ್ಕೇ ವಿಶಿಷ್ಟವಾದವು. ಇವು ಅನುಭವಸಾರದಿಂದ ಉತ್ಪನ್ನವಾದ ಅಧ್ಯಾತ್ಮತತ್ತ್ವ ಹೇಳುವ ರಚನೆಗಳಾಗಿವೆ. ಮೇಲ್ನೋಟದಲ್ಲಿ ಇವುಗಳ ಅರ್ಥತೀರಾ ಲೌಕಿಕ ಅನ್ನುವಂತಿದ್ದರೆ, ಆಳದಲ್ಲಿ ಅವು ಲೋಕದ ಆತ್ಯಂತಿಕ ಸತ್ಯ ಹೇಳುವ ಪಾರಮಾರ್ಥಿಕ ಸಂಗತಿಗಳು ಅನ್ನುವಂತಿವೆ. ಸಾಮಾನ್ಯವಾಗಿ ಕನ್ನಡ ಸಾಹಿತ್ಯವನ್ನು ಪಾಶ್ಚಾತ್ಯದೃಷ್ಟಿಕೋನದ ದೃಷ್ಟಿಯಲ್ಲಿ ವಿವಿಧ ಮತಗಳ ದೃಷ್ಟಿಯಿಂದ ವಿಭಜಿಸಿ ನೋಡಲಾಗುತ್ತದೆ. ಈ ದೃಷ್ಟಿಯಿಂದ ನೋಡುತ್ತ ಹೋದರೆ ಈ ಪಠ್ಯಗಳು ಅರ್ಥವಾಗಲಾರವು. ಪಂಪ ರನ್ನಾದಿಗಳನ್ನು ಜೈನ ಸಾಹಿತ್ಯದಲ್ಲೂ ವಚನಕಾರರು, ಹರಿಹರ, ರಾಘವಾಂಕರನ್ನು ಶೈವ ಸಾಹಿತ್ಯದಲ್ಲೂ, ಶ್ರೀಪಾದರಾಜರನ್ನೊಳಗೊಂಡಂತೆ ಕನಕ ಪುರಂದರ ಮೊದಲಾದದಾಸರನ್ನು ವೈಷ್ಣವ ಅಥವಾ ವೈದಿಕ ಸಾಹಿತ್ಯದಲ್ಲೂ ಗುರುತಿಸುವ ಪರಿಪಾಠವಿದೆ. ಇಂಥ ದೃಷ್ಟಿಕೋನ ಸಾಹಿತ್ಯದ ಅಧ್ಯಯನಕ್ಕೆ ಮತ ಪ್ರೇಮ ಅಥವಾ ದ್ವೇಷದ ಹಿನ್ನೆಲೆಯಲ್ಲಿ ಅಧ್ಯಯನ ಮಾಡುವ ಸಂಕುಚಿತ ನೋಟವನ್ನು ತಂದಿಟ್ಟಿರುವುದು ಸುಳ್ಳಲ್ಲ. ಇಂಥ ಸಂಕುಚಿತತೆಯನ್ನು ಇಟ್ಟುಕೊಂಡು ಸಾಹಿತ್ಯದ ಅಧ್ಯಯನ ನಡೆಸಿದರೆ ಕನ್ನಡ ಸಾಹಿತ್ಯ ನಿಜವಾಗಿ ಕೊಡುವ ಒಟ್ಟು ನೋಟವನ್ನಾಗಲೀ ವಿಶಾಲ ಮನೋಧರ್ಮವನ್ನಾಗಲೀ ಹೊಂದುವುದು ಸಾಧ್ಯವಿಲ್ಲ. ಇಂಥ ಸಂಕುಚಿತದೃಷ್ಟಿಯ ಫಲವಾಗಿಯೇ ಹರಿದಾಸರ ಕೀರ್ತನೆಗಳು ಹೊಸಗನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಉಳಿದ ‘ಮತ’ ಸಾಹಿತ್ಯಗಳು ಪಡೆದ ಮಹತ್ತ್ವವನ್ನು ಪಡೆದಿಲ್ಲ. ಇದರಿಂದ ಅಧ್ಯಯನಕಾರರಿಗೆ ನಷ್ಟವೇ ವಿನಾ ಸಾಹಿತ್ಯಕ್ಕಾಗಲೀ ಹರಿದಾಸರಿಗಾಗಲೀ ಅಲ್ಲ. ಅದೇನೇ ಇದ್ದರೂ ಸಾಹಿತ್ಯವನ್ನು ‘ಸಂತೋಷ ನೀಡುವ ಮಾಧ್ಯಮವಾಗಿ’ ಮಾತ್ರ ನೋಡುವ ನೈಜ ಅಧ್ಯಯನಕಾರರಿಗೆ ಇವೆಲ್ಲ ಮತದಕಾರಣಕ್ಕಾಗಿ ಮುಖ್ಯವೂ ಆಗುವುದಿಲ್ಲ, ಅಮುಖ್ಯವೂ ಆಗುವುದಿಲ್ಲ.

ಆಧುನಿಕ ಕನ್ನಡ ಸಾಹಿತ್ಯ ವಿಮರ್ಶೆಗಳಲ್ಲಿ ‘ಹರಿದಾಸ ಸಾಹಿತ್ಯ ಕೇವಲ ದ್ವೈತ ಮತವನ್ನು, ವೈದಿಕ ದೃಷ್ಟಿಯನ್ನು ಪ್ರತಿಪಾದಿಸುತ್ತದೆ’ ಎಂಬ ಹಣೆಪಟ್ಟಿಯನ್ನು ಹಚ್ಚಿ ದೂರವಿಡಲಾಗಿದೆ. ವಸಾಹತುಶಾಹಿ ಕಾಲದಚಿಂತನೆಯ ಈ ಬಗೆಯ ವಿಭಜನೆಯ ದೃಷ್ಟಿಯಿಂದ ಮಾತ್ರ ನೋಡಿದರೆ ಇವು ಹಾಗೆಯೇ ಕಾಣಬಹುದು.ಯಾಕೆಂದರೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಯಾವ ಕೃತಿಕಾರನೂ ನಾನು ಜೈನ, ನಾನು ಶೈವ ಅಥವಾ ನಾನು ವೈದಿಕ ವರ್ಗಕ್ಕೆ ಸೇರುವ ಸಾಹಿತ್ಯ ರಚಿಸುತ್ತಿದ್ದೇನೆಂದು ಹೇಳಿಲ್ಲ. ಇವು ಅಪೂರ್ವ ಸಾಹಿತ್ಯಕ್ಕೂ ಸೇರಿವೆ. ಕೀರ್ತನೆಗಳಿಂದ ಮತವನ್ನೂ ಸಾಹಿತ್ಯವನ್ನೂ ಬೇರ್ಪಡಿಸಲಾಗದು. ಜನಸಾಮಾನ್ಯರಿಗೆ ಬದುಕಿನ ಆತ್ಯಂತಿಕ ಆನಂದವನ್ನು ನೀಡುವುದು ಇವುಗಳ ಮೂಲ ಉದ್ದೇಶ ಎಂಬುದನ್ನು ಮನಗಂಡಾಗ ಕೀರ್ತನೆಗಳ ಅರ್ಥವ್ಯಾಪ್ತಿಯೇ ಬೇರೆಯಾಗುತ್ತದೆ. ಕೇವಲ ಲೌಕಿಕ ನಿತ್ಯಜೀವನದ ದೃಷ್ಟಿಯಿಂದ ಇವುಗಳನ್ನು ಅಳೆದಾಗ ಇವುಗಳಿಗೆ ಹಣೆಪಟ್ಟಿ ಹಚ್ಚುವುದೂ ಸುಲಭ; ಇವುಗಳಿಗೆ ಅರ್ಥವೇ ಇಲ್ಲವೆಂದು ದೂರ ತಳ್ಳುವುದೂ ಸುಲಭ. ಸಮಾಜದಲ್ಲಿರುವ ಬಗೆಬಗೆಯ ಜನರಿಗೆ ಕೇಳಿದ್ದನ್ನು ಇವು ಕೊಡುತ್ತವೆ. ರಸಿಕರಿಗೆ ಸಾಹಿತ್ಯವನ್ನೂ ಶ್ರದ್ಧಾಳುಗಳಿಗೆ ಮತವನ್ನೂ ತಾರ್ಕಿಕರಿಗೆ ತತ್ತ್ವವನ್ನೂ ಅನ್ಯಾನ್ಯ ಜೀವನೋಪಾಯದಲ್ಲಿರುವ ಸಾಮಾನ್ಯ ಜನರಿಗೆ ಸಂತೋಷವನ್ನೂ ನೀಡುತ್ತವೆ. ಇದೇ ನಮ್ಮ ಪರಂಪರೆ ನೀಡುವ ಕ್ರಿಯಾಜ್ಞಾನ. ನಮ್ಮೆಲ್ಲ ಸಾಹಿತ್ಯವೂ ಇಂಥ ಜ್ಞಾನದ ಭಾಗಗಳು. ಈ ದೃಷ್ಟಿಯಿಂದ ಇವು ಭಾರತೀಯ ಜ್ಞಾನ ಪರಂಪರೆಯ ಅಮೂಲ್ಯ ಭಾಗಗಳು. ಈ ಹಿನ್ನೆಲೆಯಲ್ಲಿಯೇ ಶ್ರೀಪಾದರಾಜರ ಕೀರ್ತನೆಯೊಂದನ್ನು ಇಲ್ಲಿ ಗಮನಿಸಲಾಗಿದೆ. ಕೀರ್ತನೆಯ ಪೂರ್ಣಪಾಠ ಹೀಗಿದೆ:

ಅಕಟಕಟ ಸಂಸಾರವನು ಮೆಚ್ಚಿಕೆಡಬ್ಯಾಡ
ವಿಕಟದಲಿ ಮಾನವರುಕೆಟ್ಟರೆಲ್ಲರು ನಿಜ

ಮುನ್ನ ನರಕಾಸುರನು ಬಡಿದುಚಿಂತಾಮಣಿಯ
ತನ್ನ ಮನೆಯಲ್ಲಿತಂದು ನಿಲ್ಲಿಸಿ ನೃಪರ
ಕನ್ನೆಯರ ಷೋಡಶ ಸಹಸ್ರವನೆತಂದಾತ
ಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ

ಸಾವಿರಕರ ಪಡೆದಕಾರ್ತವೀರ್ಯಾರ್ಜುನನು
ಭೂವಲಯದೊಳಗೊಬ್ಬನೇ ವೀರನೆನಿಸಿ
ರಾವಣನ ಸೆರೆಯಿಟ್ಟುಕಾಮಧೇನುವ ಬಯಸಿ
ಸಾವಾಗ ಏನ ಕೊಂಡೊಯ್ದನೋ ನೋಡೊ

ಕೌರವನುಧರೆಯೆಲ್ಲತನಗಾಗಬೇಕೆಂದು
ವೀರಪಾಂಡವರೊಡನೆಕದನಮಾಡಿ
ಮಾರಿಯ ವಶವೈದಿ ಹೋಹಾಗ ತನ್ನೊಡನೆ
ಶ್ಯಾರೆ ಭೂಮಿಯಒಯ್ದುದಿಲ್ಲವೊ ನೋಡೊ

ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿ
ಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿ
ಉರಗಜನುಮವನೈದಿ ಹೋದಾಗತನ್ನೊಡನೆ
ಸುರಲೋಕದೊಳಗೇನ ಕೊಂಡ್ಹೋದ ನೋಡೊ

ತುಂಗಗುಣಧ್ರುವ ವಿಭೀಷಣ ಹನುಮಾದಿಗಳು
ಮಂಗಳಾತ್ಮಕ ಹರಿಯನರಿತು ಭಜಿಸಿ
ಭಂಗವಿಲ್ಲದೆ ಹೊರೆದರೈ ಸಕಲ ಭಾಗ್ಯವನು
ರಂಗವಿಠಲರೇಯನ ನೆರೆ ನಂಬಿರೋ

ನಾಲ್ಕುಪಾದಗಳ ಐದು ಚರಣಗಳುಳ್ಳ ಗೇಯಗುಣದಲ್ಲಿರುವ, ಆದರೆ ಯಾವುದೇ ಛಂದೋರೂಪಕ್ಕೂ ಬದ್ಧವಾಗದ ಕೀರ್ತನೆ ಇದು. ಸಂಸಾರವನ್ನು ಅಂದರೆ ಪ್ರಾಪಂಚಿಕ ಸುಖವನ್ನು ನೆಚ್ಚಿ ಮನುಷ್ಯರು ಇನ್ನಿಲ್ಲದಂತೆ ಹಾಳಾಗಿ ಹೋಗುತ್ತಾರೆ. ಘಟಾನುಘಟಿಗಳೇ ಹೀಗೆ ಹಾಳಾಗಿ ಹೋಗಿದ್ದಾರೆ, ಇನ್ನು ಸಾಮಾನ್ಯ ಮನುಷ್ಯರು ಯಾವ ಲೆಕ್ಕ; ಹೀಗಾಗಿ ಅನಂತ ಶಕ್ತಿಯಾದ ಹರಿಯನ್ನು ಮಾತ್ರ ನೆಚ್ಚಿ ಎಂದು ನಿದರ್ಶನ ಸಹಿತವಾಗಿ ಶ್ರೀಪಾದರಾಜರು ಐದು ಚರಣಗಳ ಈ ಕೀರ್ತನೆಯಲ್ಲಿ ಪುರಾಣ ಹಾಗೂ ಲೋಕೋತ್ತರ ಕಥೆಗಳ ಆಧಾರದಲ್ಲಿ ಜನತೆಗೆ ಹೇಳಿದ್ದಾರೆ.

ಮೊದಲನೆಯ ಚರಣದಲ್ಲಿ ಭಾಗವತ ಪುರಾಣದಲ್ಲಿ ಬರುವ ನರಕಾಸುರನ ಪ್ರಕರಣವನ್ನು ಉಲ್ಲೇಖಿಸುತ್ತ ಆತ ದೈವಾನುಗ್ರಹದಿಂದ ಸರ್ವಶಕ್ತಿಯನ್ನು ಪಡೆದು ಏಕಮೇವಾದ್ವಿತೀಯನೆಂಬಂತೆ ಮೆರೆಯುತ್ತ ಲೋಕಕಂಟಕನಾಗಿದ್ದ. ಆತ ಪ್ರಾಗ್ಜೋತಿಷಪುರವನ್ನು ಆಳುತ್ತ ಅದಿತಿದೇವಿಯ ಕಿವಿಯರತ್ನ ಕುಂಡಲಗಳನ್ನೂ ವರುಣನ ಶ್ವೇತಛತ್ರವನ್ನೂ ಮೇರು ಪರ್ವತದ ಭಾಗವಾದ ಮಹಾಮಣಿ (ಚಿಂತಾಮಣಿ) ಎಂಬ ಶಿಖರವನ್ನೂ ವೈಜಯಂತಿ ಮಾಲೆಯನ್ನೂ ಅಪಹರಿಸಿ ಇಟ್ಟುಕೊಂಡಿದ್ದ. ಆತನ ಬಯಕೆ, ಕಾಮವಾಂಛೆಗೆ ಮಿತಿಯೇ ಇರಲಿಲ್ಲ. ಆತನ ಉಪಟಳ ತಾಳಲಾರದ ಇಂದ್ರ, ಕೃಷ್ಣನಿಗೆ ದೂರಿತ್ತ. ನರಕಾಸುರನನ್ನು ಕೊಂದಕೃಷ್ಣ ನರಕಾಸುರನನ್ನು ಕೊಂದು ಆತನ ಅಂತಃಪುರದಲ್ಲಿದ್ದ ಹದಿನಾರು ಸಾವಿರ ಸತಿಯರು ತಮ್ಮ ಭವಿಷ್ಯವೇನೆಂದು ಅಳಲು ತೋಡಿಕೊಂಡಾಗ ತಾನೇ ಅವರನ್ನು ವರಿಸಿದ. ಆದರೆ ಇಷ್ಟೆಲ್ಲ ಮೆರೆದ ನರಕಾಸುರ ಸಾಯುವಾಗ ಒಬ್ಬ ಹೆಣ್ಣನ್ನೂ ಒಯ್ದಿಲ್ಲ. ಆತ ಹೋದುದು ಬರಿಗೈಯಲ್ಲಿ ಎಂದು ಪುರಾಣವನ್ನು ನೆನಪಿಸಿದ್ದಾರೆ.

ಎರಡನೆಯಚರಣದಲ್ಲಿ ಹರಿವಂಶ ಪುರಾಣ ಹಾಗೂ ಮಹಾಭಾರತ ಕಥೆಯಲ್ಲಿ ಬರುವ ಕಾರ್ತವೀರ್ಯಾರ್ಜುನನ ಕಥೆಯನ್ನು ಉಲ್ಲೇಖಿಸಿದ್ದಾರೆ. ಸಾವಿರ ತೋಳುಗಳ ಆತ ರಾವಣನಂಥ ಪರಾಕ್ರಮಿಯನ್ನು ಸೆರೆ ಇಟ್ಟಂಥವ. ತೋಳ್ಬಲದಲ್ಲಿ ನಂಬಿಕೆ ಇಟ್ಟವ. ಮಹಾಮುನಿ ವಸಿಷ್ಠರ ಆಶ್ರಮದಲ್ಲಿದ್ದ ಕಾಮಧೇನುವನ್ನು ಪಡೆಯುವ ಬಯಕೆಯಿಂದ ಮುನಿಯ ಆಶ್ರಮವನ್ನು ಸುಟ್ಟುಹಾಕಿ ಅವರಿಂದ ಪರಶುರಾಮನಿಂದ ಮರಣ ಬರುವಂತೆ ಶಾಪ ಪಡೆದ. ಅಂಥ ಪರಾಕ್ರಮಿ ಕೂಡ ಸಾಯುವಾಗ ಏನನ್ನೂ ತೆಗೆದುಕೊಂಡು ಹೋಗಲಿಲ್ಲ ಎಂದು ಮತ್ತೊಂದು ಕಥೆಯನ್ನು ನೆನಪಿಸಿದ್ದಾರೆ.

ಮೂರನೆಯ ಚರಣದಲ್ಲಿ ಮಹಾಭಾರತದ ಕೌರವ ಪಾಂಡವರ ಕದನದ ಉಲ್ಲೇಖವಿದೆ. ಸೂಜಿ ಮೊನೆಯಷ್ಟೂ ಭೂಮಿ ಕೊಡದೇ ಎಲ್ಲವನ್ನೂ ತಾನೇ ಅನುಭವಿಸುವ ಹಠತೊಟ್ಟ ಕೌರವ ರಣಮಾರಿಗೆ ಬಲಿಯಾಗುವಾಗ ಒಂದಿನಿತೂ ಭೂಮಿಯನ್ನು ಒಯ್ದಿಲ್ಲದಿರುವುದನ್ನು ನೆನೆಯಿರಿ ಎಂದಿದ್ದಾರೆ.

ನಾಲ್ಕನೆಯ ಚರಣದಲ್ಲಿ ಇಂದ್ರಪದವಿಗೇರಿದ ನಹುಷ ಶಚಿಯೊಡನೆ ಕೂಡಲು ಬಯಸಿದ. ಆಕೆ ಸಪ್ತರ್ಷಿಗಳಿಂದ ಪಲ್ಲಕ್ಕಿ ಹೊರಿಸಿಕೊಂಡು ತನ್ನರಮನೆಗೆ ಬಂದರೆ ವಿವಾಹವಾಗುವುದಾಗಿ ಷರತ್ತು ವಿಧಿಸಿದಳು. ಕಾಮದ ಅವಸರದಲ್ಲಿದ್ದ ನಹುಷ ಬೇಗಬೇಗ (ಸರ್ಪ ಸರ್ಪ) ನಡೆಯುವಂತೆ ಅಗಸ್ತ್ಯರ ತಲೆಗೆ ಒದ್ದ. ಮುನಿದ ಮುನಿ ‘ಸರ್ಪೋಭವ’ ಎಂದು ಶಪಿಸಿಬಿಟ್ಟಿದ್ದರಿಂದ ನಹುಷ ಸರ್ಪವಾಗಿ ಹುಟ್ಟಿದ. ಅಂಥ ನಹುಷ ಕೂಡ ಸುರಲೋಕದೊಳಗೆ ಹೋಗುವಾಗ ಕೊಂಡೊಯ್ದಿದ್ದು ಏನೂ ಇಲ್ಲ ಎಂದು ಎಚ್ಚರಿಸಿದ್ದಾರೆ.

ಐದನೆಯ ಮತ್ತು ಕೊನೆಯ ಚರಣದಲ್ಲಿ ಮೇಲಿನ ನಾಲ್ಕೂ ಪಾತ್ರಗಳಿಗೆ ವಿರುದ್ಧವಾದ ಮತ್ತೆ ಅದೇ ಪುರಾಣ, ಕಥೆಗಳ ಆದರ್ಶ ಪಾತ್ರಗಳನ್ನು ನೆನಪಿಸಿ ಅತಿಶಯ ಶ್ರೇಯಸ್ಸು ಪಡೆಯುವ ದಾರಿಯನ್ನು ಕಾಣಿಸಿದ್ದಾರೆ. ಶ್ರೇಷ್ಠಗುಣವಂತರಾದ (ತುಂಗಗುಣ) ಧ್ರುವ, ವಿಭೀಷಣ ಮತ್ತು ಹನುಮಾದಿಗಳು ಸಕಲ ಮಂಗಳ ನೀಡುವ ಹರಿಯನ್ನು ಭಜಿಸಿ ಸಕಲ ಭಾಗ್ಯವನ್ನೂ ಪಡೆದರು. ನೀವೂ ಅದೇ ಬಗೆಯಲ್ಲಿ ರಂಗವಿಠ್ಠಲನನ್ನು ನೆನೆಯುತ್ತ ಭಾಗ್ಯವಂತರಾಗಿ ಎಂದು ಹೇಳಿದ್ದಾರೆ.

ಇಲ್ಲಿ ಶ್ರೀಪಾದರಾಜರು ನೀಡಿದ ನರಕಾಸುರ, ಕಾರ್ತವೀರ್ಯ, ಕೌರವ ಮತ್ತು ನಹುಷರ ಪಾತ್ರಗಳು ಕಾಮದ ಒಂದೊಂದು ಮಗ್ಗುಲನ್ನೂ ಅದರ ಪರಿಣಾಮವನ್ನೂ ಚಿತ್ರಿಸುತ್ತವೆ. ಈ ಲೋಕ ನಿಂತಿರುವುದೇ ಬಯಕೆಯಲ್ಲಿ. ಕಾಮಿಸುವಂತೆ, ಬಯಸುವಂತೆ ಮಾಡುವುದೇ ಸಂಸಾರದ ಮಾಯೆ. ಹೆಣ್ಣು, ಹೊನ್ನು, ಮಣ್ಣು, ಅಧಿಕಾರ ಇವೆಲ್ಲವೂ ಕಾಮದ ರೂಪಗಳೇ. ಇವುಗಳ ಬೆನ್ನು ಹತ್ತುವುದರಿಂದ ವಿನಾಶವೇ ವಿನಾ ಯಾವುದೇ ಭಾಗ್ಯವಿಲ್ಲ. ಇದನ್ನು ಪುರಾಣ ಕತೆಗಳು ನಿರೂಪಿಸಿವೆ ಎಂಬುದನ್ನು ಸರಳವಾಗಿ ಈ ಕೀರ್ತನೆಯಲ್ಲಿ ತಿಳಿಸಲಾಗಿದೆ.

ಭಾರತೀಯ ಸಂಪ್ರದಾಯದಲ್ಲಿ ಪುರಾಣವಾಗಲಿ, ಕಥೆಯಾಗಲಿ ಅವು ಕೇವಲ ಮನರಂಜನೆಗಾಗಿ ಇರುವಂಥವಲ್ಲ. ತತ್ತ್ವಬೋಧೆ ಅವುಗಳ ಮುಖ್ಯ ಉದ್ದೇಶ. ಅವು ತಲೆಮಾರುಗಳನ್ನು ರೂಪಿಸುವ ಸಂಸ್ಕೃತಿಯ ಧಾರೆಗಳು. ನಿರ್ದಿಷ್ಟ ಸಂಸ್ಕಾರ ನೀಡುವ ಮೂಲಕ ವ್ಯಕ್ತಿತ್ವ ನಿರ್ಮಿಸುವ ಮಾಧ್ಯಮಗಳು. ತನ್ನ ಬದುಕಿನ ಆತ್ಯಂತಿಕ ಫಲ ಏನು ಎಂದು ಜೀವನದ ಅಂತ್ಯದಲ್ಲಿ ಅಥವಾ ಸಾವಿನ ಸನ್ನಿವೇಶದಲ್ಲಿ ವ್ಯಕ್ತಿ ಹಿಂತಿರುಗಿ ನೋಡಿಕೊಂಡಾಗ ಕಾಮವಾಂಛೆಯ ಈಡೇರಿಕೆಗೆ ವ್ಯಯಿಸಿದ ಯಾವ ಸಾಹಸವೂ ನೆರವಿಗೆ ಬರುವುದಿಲ್ಲ ಎಂಬುದು ಗಮನಕ್ಕೆ ಬರುತ್ತದೆ. ಕಾಮವನ್ನೇ ಬಯಸುತ್ತ, ಸಕಲ ಶ್ರಮವನ್ನೂ ಅದಕ್ಕೇ ವ್ಯಯಿಸುತ್ತ ಕಾಲ ಕಳೆದರೆ ಏನು ಫಲ? ಈಗಾಗಲೇ ಅಂಥ ಮಹಾ ನಿದರ್ಶನಗಳಿವೆ. ಅದನ್ನು ತಿಳಿದು, ಗ್ರಹಿಸಿ ಅರ್ಥಮಾಡಿಕೊಳ್ಳಿ ಎಂದು ಪುರಾಣ ಕಥೆಗಳು ಸೂಚಿಸುತ್ತವೆ. ಇವುಗಳ ಸೂಚನೆಯನ್ನು ಜನ ಅರಿತು ಬದುಕನ್ನು ಸರಿದಾರಿಯಲ್ಲಿ ನಡೆಸಿಕೊಳ್ಳಲಿ ಎಂಬುದು ಅವುಗಳ ಆಶಯ. ಬದುಕಿನ ಕನಿಷ್ಠ ಅಗತ್ಯ ಪೂರೈಸಿಕೊಂಡು ಸರಳ ಜೀವನ ನಡೆಸಲು ಎಷ್ಟು ಬೇಕೋ ಅಷ್ಟಕ್ಕೇ ಈ ಸಂಸಾರವನ್ನು ನೆಚ್ಚಿಕೊಳ್ಳಬೇಕೇ ವಿನಾ ಅದನ್ನೇ ಆವರಿಸಿಕೊಳ್ಳುವುದರಿಂದ ಖಂಡಿತವಾಗಿಯೂ ಸಂತೋಷ ದೊರಕದು ಎಂಬುದನ್ನು ಈ ಕೀರ್ತನೆ ತೋರಿಸುತ್ತದೆ.

ಶ್ರೀಪಾದರಾಜರು ಇಲ್ಲಿ ಉಲ್ಲೇಖಿಸಿದ ಕಥೆಗಳೆಲ್ಲವೂ ಜನಸಾಮಾನ್ಯರಿಗೆ ಅತ್ಯಂತ ಪರಿಚಿತವಾದವು. ಅವುಗಳನ್ನು ಆಧಾರದಲ್ಲಿಟ್ಟುಕೊಂಡೇ ಸರಳ ಬದುಕಿನ ಘನ ತತ್ತ್ವವನ್ನು ಈ ಕೀರ್ತನೆಯಲ್ಲಿ ಕಂಡರಿಸಿದ್ದಾರೆ. ದಾಸರ ಕೀರ್ತನೆಗಳು ಹಾಡುವ ಮೂಲಕ ಜನರನ್ನು ತಲಪುವ ಉದ್ದೇಶ ಹೊಂದಿವೆ. ಹಾಡುವುದರಿಂದ ಸಾಹಿತ್ಯ ಮತ್ತು ಸಂಗೀತದ ಪರಿಣಾಮ ಮನದಲ್ಲಿ ಅಚ್ಚೊತ್ತುತ್ತದೆ. ಜೀವನದಲ್ಲಿ ಚಿಂತನ, ಮಂಥನದಂಥ ಕಾರ್ಯದಲ್ಲಿ ಮಗ್ನವಾಗದೇ ಅನ್ಯಾನ್ಯ ಕಾರ್ಯದಲ್ಲಿ ತೊಡಗಿಕೊಂಡ ಜನ ಸಾಮಾನ್ಯರಿಗೆ ಅವರವರ ಬದುಕಿನ ಸಾಧ್ಯತೆಯಲ್ಲೇ ಆನಂದವನ್ನೂ ಜೀವನ ಸಾರ್ಥಕತೆಯನ್ನೂ ಕಂಡುಕೊಳ್ಳಲು ಇಂಥ ಕೀರ್ತನೆಗಳು ನೆರವಾಗಿವೆ.

3 ಟಿಪ್ಪಣಿಗಳು Post a comment
  1. shripad
    ಮಾರ್ಚ್ 29 2019

    ನನಗೊಂದು ಅನುಮಾನವಿದೆ. ಚವಚನಕಾರರು ಮತ್ತು ದಾಸರು ಈ ಸಂಳುವುದು ಏಕೆ?ಸಾರ ಅಂದರೆ ಪ್ರಪಂಚವನ್ನು ನೆಚ್ಚಿಯೇ ಎಲ್ಲ ಜ್ನಾನ ಪಡೆದು ಅದನ್ನೇ ತೆಗ

    ಉತ್ತರ
  2. shripad
    ಮಾರ್ಚ್ 30 2019

    ಬುಸ್ ಬುಸ್ ಕಾಣ್ತಿಲ್ಲ್. ಏಕೆ?

    ಉತ್ತರ
  3. ಮಾಲಾ
    ಜುಲೈ 15 2019

    ಮಾಹಿತಿಪೂರ್ಣ ಲೇಖನದೊಂದಿಗೆ ಒಂದು ಒಳ್ಳೆಯ ಕೃತಿಯನ್ನೂ ಪರಿಚಯಿಸಿದ್ದೀರ. ಧನ್ಯವಾದ.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments