ವಿಷಯದ ವಿವರಗಳಿಗೆ ದಾಟಿರಿ

ಜುಲೈ 3, 2020

ಕಮ್ಯುನಿಸಂನ ಅಭದ್ರತೆ ಮತ್ತು ಅಸಹನೆಯೇ ಚೀನಾ ಆಕ್ರಮಣದ ಮೂಲ

‍ನಿಲುಮೆ ಮೂಲಕ

– ಅಜಿತ್ ಶೆಟ್ಟಿ ಹೆರಂಜೆ

ಯಾವುದೇ ದೇಶ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪ್ರಭುತ್ವ ಸ್ಥಾಪಿಸಬೇಕಾದರೆ ಅದು ವ್ಯಾಪಾರ ನಡೆಸುವ ಮಾರ್ಗ ಸುರಕ್ಷಿತವಾಗಿರಬೇಕು ಮತ್ತು ಬಹುತೇಕ ಅದು ಆ ದೇಶದ ನಿಯಂತ್ರಣದಲ್ಲಿ ಇರಬೇಕು. ಈ ಭೂಮಿಯ ಮೇಲೆ ಶತಮಾನಗಳಿಂದಲೂ ಅಂತಾರಾಷ್ಟ್ರೀಯ ವ್ಯಾಪಾರ ಬಹುತೇಕ ಸಮುದ್ರ ಮಾರ್ಗದ ಮುಖಾಂತರವೇ ನೆಡೆದಿದ್ದು. ಇದರ ನಿಯಂತ್ರಣ ಯಾರ ಕೈಯಲ್ಲಿ ಇರುತ್ತದೆಯೋ ಅವರು ಜಗತ್ತಿನ ರಾಜಕೀಯವನ್ನು ನಿಯಂತ್ರಿಸುತ್ತಾರೆ. ಇದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳು ಸಿಗುತ್ತವೆ. ನೆಪೋಲಿಯನ್ ಬೊನಪಾರ್ಟೆ ಇಂಗ್ಲೆಂಡನ್ನು ಸಾಮರಿಕವಾಗಿ ಬಗ್ಗುಬಡಿಯಲು ಆಗದ ಸಂದರ್ಭದಲ್ಲಿ ಅದರ ಆರ್ಥಿಕತೆಯ ನರಮಂಡಲವಾಗಿದ್ದ ಸಮುದ್ರ ವ್ಯಾಪಾರ ಮಾರ್ಗದ ಮೇಲೆ ದಿಗ್ಭಂಧನವನ್ನು ಹಾಕುತ್ತಾನೆ. ಇದು ಆ ಕಾಲದಲ್ಲಿ ಇಂಗ್ಲೆಂಡಿಗೆ ಬಲವಾದ ಹೊಡತವನ್ನೇ ಕೊಟ್ಟಿತ್ತು. ಯೂರೋಪ್ ಮತ್ತು ಪೂರ್ವ ರಾಷ್ಟ್ರಗಳ ನಡುವೆ ವಾಣಿಜ್ಯ ವ್ಯವಹಾರಗಳ ಸಂಪರ್ಕದ ಕೊಂಡಿಯಾಗಿದ್ದ ಕಾಂನ್‌ಸ್ಟಾಂಟಿನೋಪಲನ್ನು ಒಟ್ಟೋಮನ್ ತುರ್ಕರು ವಶಪಡಿಸಿಕೊಂಡಾಗ ಯುರೋಪಿಯನ್ನರಿಗೆ ಪೂರ್ವದ ಜೊತೆಗೆ ವ್ಯವಹಾರ ಮಾಡಲು ಹೊಸ ಮಾರ್ಗದ ಅನ್ವೇಷಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಹಾಗೆಯೆ ಇವತ್ತು ಚೀನಾ ಇಂತಹುದೇ ಒಂದು ಕೃತ್ಯಕ್ಕೆ ಕೈ ಹಾಕಿ ಕೈ ಸುಟ್ಟುಕೊಳ್ಳುತ್ತಿದೆ.

ಕಳೆದ ಕೆಲವು ದಿನಗಳಿಂದ ಲಡಾಕಿನ ಗಲ್ವಾನ್ ಸರೋವರದ ತೀರದಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಉಪದ್ರವ ಚೀನಾ ಇಡೀ ಜಗತ್ತಿನಲ್ಲಿ ತಾನು ವಿಶ್ವದ ಆರ್ಥಿಕ ಜಗತ್ತಿನ ಅನಭಿಶಕ್ತ ದೊರೆಯಾಗಬೇಕು ಎನ್ನುವ ಕೂಟ ನೀತಿಯ ಒಂದು ಚಿಕ್ಕ ಭಾಗ. ಇದು ಭಾರತ ಮತ್ತು ಚೀನಾದ ಒಂದು ಸಣ್ಣ ಗಡಿ ವಿವಾದ ಎಂದು ಭಾವಿಸಿದರೆ ಖಂಡಿತ ತಪ್ಪಾಗುತ್ತದೆ.

ಮೊದಲಿಗೆ ಚೀನಾ ಜಾಗತಿಕ ರಂಗದಲ್ಲಿ ತಾನು ಮಾಡುತ್ತಿರುವ ವಾಣಿಜ್ಯೋದ್ಯಮದ ಬಗ್ಗೆ ತಿಳಿಯೋಣ. ಇವತ್ತು ಚೀನಾದ ಒಟ್ಟು ಅಂತಾರಾಷ್ಟ್ರೀಯ ವ್ಯವಹಾರದ ಮೊತ್ತ ಸುಮಾರು ಐದು ಟ್ರಿಲಿಯನ್ ಡಾಲರ್. ಇದನ್ನು ಭಾರತೀಯ ಕರೆನ್ಸಿಯಲ್ಲಿ ಅರ್ಥ ಮಾಡಿಸುವುದಕ್ಕೆ ಒಂದು ಸಣ್ಣ ಲೆಕ್ಕ ನಿಮಗೆ ಕೊಡುತ್ತೇನೆ. ಒಂದು ಬಿಲಿಯನ್ ಡಾಲರ್ ಅಂದ್ರೆ ಸರಿ ಸುಮಾರು ೭೫ ಸಾವಿರ ಕೋಟಿ. ಇಂತಹ ಸಾವಿರ ಬಿಲಿಯನ್ ಸೇರಿ ಒಂದು ಟ್ರಿಲಿಯನ್ ಆಗುತ್ತದೆ. ಇಷ್ಟೊಂದು ದೊಡ್ಡ ಪ್ರಮಾಣದ ವಾಣಿಜ್ಯೋದ್ಯಮದ ಸರಕು ಸಾಗಣೆಯ ಬಹುಪಾಲು ಚೀನಾದ ಅತ್ಯಂತ ವಿವಾದಿತ ಸೌತ್ ಚೀನಾ ಸಮುದ್ರ ಮೂಲ. ಸೌತ್ ಚೀನಾ ಸಮುದ್ರದಿಂದ ಇಂಡೋನೇಷಿಯಾದ ಮಲಕ್ಕಾ ಜಲಸಂಧಿಯ ಮುಖಾಂತರ ಹಿಂದೂ ಮಹಾ ಸಾಗರ ತಲುಪಿ, ಅಲ್ಲಿಂದ ಮೇಲಕ್ಕೆ ಅರೇಬಿಯನ್ ಸಮುದ್ರದ ಮುಖಾಂತರ ಯುರೋಪ್ ರಾಷ್ಟ್ರಗಳಿಗೆ ಸಾಗುತ್ತದೆ. ಇಲ್ಲಿ ಸಮಸ್ಯೆ ಏನು ಅಂದ್ರೆ ಸೌತ್ ಚೀನಾ ಸಮುದ್ರ ಕೇವಲ ಚೀನಾಕ್ಕೆ ಸೇರಿದ್ದಲ್ಲ. ಇದರಲ್ಲಿ ತೈವಾನ್, ಫಿಲಿನ್ಸ್, ಮಲೇಶಿಯಾ ಮತ್ತು ವಿಯೆಟ್ನಾಂ ದೇಶಗಳ ಹಕ್ಕೂ ಇದೆ. ಇದರ ಅಧಿಪತ್ಯದ ಬಗ್ಗೆ ಚೀನಾ ತನ್ನ ಉಳಿದ ನೆರೆಯ ರಾಷ್ಟ್ರಗಳೊಂದಿಗೆ ಶಾಂತಿ ಮತ್ತು ಸಹಬಾಳ್ವೆಯಿಂದ ಬಗೆಹರಿಸಿಕೊಂಡಿದ್ದಲ್ಲಿ ಸಮಸ್ಯೆ ಈ ಮಟ್ಟಕ್ಕೆ ಬೆಳೆಯುತ್ತಿರಲ್ಲಿಲ್ಲ. ಆದರೆ ಚೀನಾ ತನ್ನ ಎಂದಿನ ಸಾಮ್ರಾಜ್ಯಶಾಹಿ ನೀತಿಯಂತೆ ಇಡೀ ಸೌತ್ ಚೀನಾ ಸಮುದ್ರ ತನ್ನದು ಎಂದು ಬಲವಂತದಿಂದ ಅದರ ಅಧಿಪತ್ಯ ಪಡೆಯಲು ಮುಂದಾದಾಗ ಅದನ್ನು ತಡೆಯಲು ಜಪಾನ್, ಅಮೆರಿಕಾ ಮತ್ತು ಆಸ್ಟ್ರೇಲಿಯಾ ರಂಗಪ್ರವೇಶ ಮಾಡಿದವು. ಇದರಿಂದ ಚೀನಾಕ್ಕೆ ಅಸ್ಥಿರತೆಯ ಭಯ ಕಾಡಲು ಶರುವಾಯಿತು. ಇದರ ಜೊತೆಗೆ ಚೀನಾಕ್ಕೆ ಇದ್ದ ಇನ್ನೊಂದು ಭಯ ಇಂಡೋನೇಶಿಯಾ ಮತ್ತು ಮಲೇಶಿಯಾದ ನಡುವೆ ಹಾದು ಹೋಗುವ ಸುಮಾರು ಐನೂರು ಮೀಟರ್ ಅಗಲ ಇರುವ ಮಲಾಕ್ಕಾ ಜಲಸಂಧಿ. ಸೌತ್ ಚೀನಾ ಸಮುದ್ರದಲ್ಲಿ ಜಾಸ್ತಿ ತಗಾದೆ ತೆಗೆದರೆ ಇಂಡೋನೇಶಿಯಾ, ಮಲೇಶಿಯಾ ಈ ಮಾರ್ಗವನ್ನು ಮುಚ್ಚಿ ಬಿಡುತ್ತದೆ ಅನ್ನುವ ಆತಂಕ ಅದಕ್ಕಿದೆ.

ಈ ಕಾರಣಕ್ಕೆ ೨೦೧೩ರಲ್ಲಿ ತನ್ನ ವಾಣಿಜ್ಯೋದ್ಯಮದ ಅರ್ಧ ಭಾಗವನ್ನಾದರೂ ಭೂ ಮಾರ್ಗದ ಮುಖಾಂತರ ಮಾಡಬೇಕು ಎಂದು ಚೀನಾದ ಈಗಿನ ಅಧ್ಯಕ್ಷ ಕ್ಸಿ ಜಿಂಗ್ ಪಿಂಗ್ One Belt one Road (OROB) ಅನ್ನುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ಕೊಡುತ್ತಾರೆ. ಈ ಯೋಜನೆ ಪೂರ್ಣಗೊಂಡರೆ ಆಫ್ರಿಕಾ,ಯುರೋಪ್, ರಷ್ಯಾ ಮತ್ತು ಮಂಗೋಲಿಯಾದ ಮೂಲಕ ಸುಲಭವಾಗಿ ರೈಲು ಮಾರ್ಗ ನಿರ್ಮಾಣ ಮಾಡಬಹುದು. ಇದರ ಇನ್ನೊಂದು ಭಾಗವಾಗಿ ಅರಬ್ಬಿ ಸಮುದ್ರಲ್ಲಿ ತನ್ನ ಒಂದು ನೌಕಾ ನೆಲೆಯನ್ನು ಸ್ಥಾಪಿಸಿ ಅಲ್ಲಿಂದ ಭೂಮಾರ್ಗವಾಗಿ ಸರಕುಗಳನ್ನು ಚೀನಾಕ್ಕೆ ತರುವುದು. ಈ ಯೋಜನೆಗೆ ಚೀನಾ ಆಯ್ದುಕೊಂಡಿದ್ದು ಪಾಕಿಸ್ಥಾನದ ಬಲೂಚಿಸ್ಥಾದಲ್ಲಿ ಇರುವ ಗ್ವಾಡರ್ ಬಂದರನ್ನು. ಚೀನಾ ಪಾಕಿಸ್ಥಾನದ ಜೊತೆ China Pakistan Economic Corridor ಎಂದೇ ಜನಜನಿತವಾದ ಯೋಜನೆಗೆ ಚಾಲನೆ ಕೊಟ್ಟಿತು. ಈ ಯೋಜನೆಯ ಕೇಂದ್ರ ಬಿಂದು ಗ್ವಾಡರ್ ಬಂದರು ಮತ್ತು ಅದಕ್ಕೆ ಬರುವ ದಾರಿ ಬಹುತೇಕ ಬಲೂಚಿಸ್ಥಾನದ ಮುಖಾಂತರ ಹಾದು ಪಾಕ್ ಆಕ್ರಮಿತ ಕಾಶ್ಮೀರದ ಮುಖಾಂತರ ಚೀನಾಕ್ಕೆ ತಲುಪುತ್ತದೆ. ಈ ಯೋಜನೆಯನ್ನು ಭಾರತ ವಿರೋಧಿಸಿತ್ತು. ತನ್ನ ನೆಲದ ಮೇಲೆ ಭಾರತದ ಅನುಮತಿ ಇಲ್ಲದೆ ಮಾಡುವ ಈ ಯೋಜನೆಗೆ ಭಾರತದ ಸಮ್ಮತಿ ಇಲ್ಲವೆಂದು ಹೇಳಿತು. ಆದರೆ ಈ ಭೂಭಾಗ ಪಾಕಿಸ್ಥಾನದ ಕೈಯಲ್ಲಿ ಇರುವ ಕಾರಣ ಯೋಜನೆ ಕಾರ್ಯ ರೂಪಕ್ಕೆ ಬರತೊಡಗಿತು. ಈ ಯೋಜನೆಯ ಒಂದು ಭಾಗವಾದ ಗ್ವಾಡರ್ ಬಂದರನ್ನು ಚೀನಾ ಸಂಪೂರ್ಣ ಅಭಿವೃದ್ಧಿಪಡಿಸಿದೆ. ಅದರ ಭೂ ಮಾರ್ಗದ ಕೆಲಸ ಇನ್ನೂ ಬಾಕಿ ಉಳಿದಿದೆ. ಇಲ್ಲಿ ಚೀನಾಕ್ಕೆ ಎರಡು ಸವಾಲುಗಳಿವೆ. ಬಲೂಚಿಸ್ಥಾನ, ಪಾಕಿಸ್ಥಾನದಿಂದ ಸ್ವಾತಂತ್ರ್ಯವನ್ನು ಪಡೆಯಲು ಹೋರಾಟ ಮಾಡುತ್ತಿದೆ. ಜೊತೆಗೆ ಚೀನಾದ ಕಾಮಗಾರಿಯ ಮೇಲೆ ಧಾಳಿ ಮಾಡಿ ಉಪದ್ರವ ಕೊಡುತ್ತಿದೆ. ಇದಕ್ಕೆ ಭಾರತ ಪರೋಕ್ಷವಾಗಿ ಬೆಂಬಲ ಕೊಡುತ್ತಿದೆ ಎನ್ನುವುದು ಚೀನಾ ಮತ್ತು ಪಾಕಿಸ್ಥಾನದ ಆರೋಪ. ಇನ್ನೊಂದು ಕಡೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇರುವ ಮಾರ್ಗಕ್ಕೆ ಪಾಕ್ ಮತ್ತು ಚೀನಾಕ್ಕೆ ಭಾರತದ ಭಯ ಕಾಡುತ್ತಿದೆ.

ಲಡಾಕಿನ ಪೂರ್ವಕ್ಕೆ ಇರುವ ಅಕ್ಸಯ್ ಚಿನ್ ಭಾಗವನ್ನು ಚೀನಾ ೧೯೬೨ರ ಯುದ್ಧದಲ್ಲಿ ವಶಪಡಿಸಿಕೊಂಡಿತು. ಚೀನಾ ವಶದಲ್ಲಿರುವ ಭಾರತದ ಅಕ್ಸಾಯ್ ಚೀನ್ ಗೆ ೧೯೬೨ರ ಯುದ್ಧದಲ್ಲಿ ಲಡಾಕಿನಿಂದ ಸೈನ್ಯ ಕಳುಹಿಸಲು ವಾರಗಳು ಬೇಕಾಯಿತು. ಗಡಿಭಾಗದಲ್ಲಿ ಸೈನ್ಯ ಮತ್ತು ಶಸ್ತ್ರಾಸ್ತ್ರಗಳ ತ್ವರಿತ ಸಾಗಾಣಿಕೆಗೆ ಭಾರತ ಸರ್ಕಾರ ೨೦೦೦ರಲ್ಲಿ ಲಡಾಕ್ ರಾಜಧಾನಿ ಲೇಹ್‌ನಿಂದ ದರ್ಬುಕ್, ಶೇಯೋಕ್ ಮಾರ್ಗವಾಗಿ ಗಿಲ್ಗಿಟ್-ಬಾಲಿಸ್ಥಾನ್ ಗಡಿಭಾಗದ ದೌಲತ್ ಬೇಗ್ ಓಡಿಯ ತನಕ ಸುಮಾರು ೨೫೫ ಕಿಲೋಮೀಟರ್ ಉದ್ದದ ರಸ್ತೆ ಮಾಡುವ ಯೋಜನೆಯನ್ನು ೨೦೧೩ರಲ್ಲಿ ಮುಗಿಸಬೇಕಿತ್ತು. ಚೀನಾದ ವಿರುದ್ಧ ಸರ್ಕಾರ ತನ್ನ ರಾಜಕೀಯ ಇಚ್ಛಾ ಶಕ್ತಿಯನ್ನು ತೋರಿಸದ ಕಾರಣ ೨೦೧೪ಕ್ಕೆ ಮುಗಿಸುವ ಇನ್ನೊಂದು ಗುರಿ ಹಾಕಿಕೊಳ್ಳಲಾಯಿತು. ಆದರೆ ನಿಗದಿತ ಕಾಲಕ್ಕೆ ಈ ಯೋಜನೆ ಮುಗಿಯುವ ಯಾವುದೇ ಲಕ್ಷಣಗಳು ಕಾಣಿಸಲಿಲ್ಲ. ೨೦೧೪ ರ ನಂತರ ಈ ಯೋಜನೆ ಸೇರಿ ಇನ್ನೂ ಅನೇಕ ಗಡಿಭಾಗಗಳಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳು ವೇಗ ಪಡೆದುಕೊಂಡಿತು. ಇದನ್ನು ೨೦೧೯ ಕ್ಕೆ ಮುಗಿಸಬೇಕು ಎಂಬ ಗುರಿಯೊಂದಿಗೆ ಹೊರಟ ಸರ್ಕಾರ ಈ ರಸ್ತೆಯನ್ನು ಬಹುತೇಕ ಮುಗಿಸಿದೆ. ಇದೆ ರಸ್ತೆ ದೌಲತ್ ಬೇಗ್ ಓಡಿಯಲ್ಲಿ ವಿಶ್ವದ ಅತ್ಯಂತ ಎತ್ತರದ ಏರ್‌ಸ್ಟ್ರಿಪ್ ಇದೆ.

ಈ ರಸ್ತೆ ಭಾರತದ ಪಾಲಿಗೆ ವ್ಯೂಹಾತ್ಮಕವಾಗಿ ಏಕೆ ಮುಖ್ಯ ಅನ್ನುವುದನ್ನು ತಿಳಿಯೋಣ. ಈ DOB ರಸ್ತೆ ಲೇಹ್‌ನಿಂದ ಸುಮಾರು ೫೦ ಕಿ.ಮಿ ಪೂರ್ವಕ್ಕೆ ಹೋಗಿ ಅಲ್ಲಿಂದ ಉತ್ತರಕ್ಕೆ ದೌಲತ್ ಬೇಗ್ ತಿರುಗಿ ಶೋಕ ನದಿಯ ದಂಡೆಯ ಮೇಲೆ ಸಾಗುತ್ತದೆ. ಈ ದೌಲತ್ ಬೇಗ್ ಓಲ್ಡಿ ಅನ್ನುವ ಜಾಗ ಉತ್ತರದ ಪಾಕಿಸ್ಥಾನ್ ಆಕ್ರಮಿತ ಗಿಲ್ಗಿಟ್- ಬಾಲ್ಟಿಸ್ಟಾನ್ ಮತ್ತು ಪೂರ್ವದಲ್ಲಿ ಚೀನಾ ಕಬಳಿಸಿರುವ ಆಕ್ಸಯ್ ಚಿನ್ ಭಾಗದ ಗಡಿಗೆ ಹತ್ತಿರಕ್ಕೆ ಹೋಗುತ್ತದೆ. ಇಲ್ಲಿಂದ ಭಾರತಕ್ಕೆ ಮುಂದಿನ ದಿನಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಸಯ್ ಚಿನ್ ಭಾಗವನ್ನು ವಶಕ್ಕೆ ತೆಗೆದುಕೊಳ್ಳುವುದು ಸುಲಭ. ಗಿಲ್ಗಿಟ್-ಬಾಲಿಸ್ಥಾನ್ ಪಾಕಿಸ್ತಾನದಲ್ಲಿದ್ದರೂ ಚೀನಾದ OBOR ಯೋಜನೆಯ ಭಾಗವಾದ CPEC ಕಾರಿಡಾರ್ ಇಲ್ಲೇ ಹಾದುಹೋಗುತ್ತದೆ. ಇದು ಚೀನಾಕ್ಕೆ ಭಯ ಹುಟ್ಟಿಸಿದೆ. ಆ ಕಾರಣಕ್ಕೆ ಈ ರಸ್ತೆಯನ್ನು ಹಿಂದೆ ಕಾರ್ಗಿಲಿನಲ್ಲಿ ಪಾಕಿಸ್ಥಾನ್ ಟೈಗರ್ ಹಿಲ್‌ನಲ್ಲಿ ಕುಳಿತು ನಿಯಂತ್ರಿಸಲು ಹೊರಟಂತೆ ಗುಂಗ್ವಗ್ ವ್ಯಾಲಿಯ ಪೆಟ್ರೋಲಿಂಗ್ ಪಾಯಿಂಟ್ ೧೪ರ ಮೇಲೆ ಕೂತು ಅಲ್ಲಿಂದ ಈ PP 14 ರಸ್ತೆ ನಿಯಂತ್ರಿಸುವ ಉದ್ದೇಶ. ಆ ಕಾರಣಕ್ಕೆ ಚೀನಾ ಸೈನಿಕರು ಈ PP ೧೪ರಿಂದ ಹಿಂದೆ ಹೋಗಲು ಒಪ್ಪಲಿಲ್ಲ. ಆಗ ೧೪ನೆ ಬಿಹಾರ್ ರೇಜಿಮೆಂಟಿನ ಕರ್ನಲ್ ಸಂತೋಷ್ ಬಾಬು ಚೀನಿಯರು PP ೧೪ ಮಾಡಿದ್ದ ಕ್ಷಣಾ ಟೆಂಟುಗಳನ್ನು ಬೆಂಕಿ ಹಾಕಿ ಸುಡುತ್ತಾರೆ. ಅಲ್ಲಿಂದ ಚೀನಿ ಸೈನಿಕರ ಘರ್ಷಣೆ ಪ್ರಾರಂಭ ಆಗುತ್ತದೆ.

ಚೀನಾ ಭಾರತದ ಮೇಲೆ ಮುಗಿಬೀಳಲು ಇನ್ನೂ ಎರಡು ಪ್ರಬಲ ಕಾರಣಗಳಿವೆ. ಮೊದಲನೆಯದ್ದು ಕೊರೋನಾ. ಕೊರೋನಾ ಸಮಯದಲ್ಲಿ ಚೀನಾ ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷರನ್ನು ಬಳಸಿಕೊಂಡು ಇಡೀ ಜಗತನ್ನು ತಪ್ಪು ದಾರಿಗೆ ಎಳೆದಿತ್ತು. ಈ ಬಗ್ಗೆ ಅಮೆರಿಕಾ ಚೀನಾದ ಮೇಲೆ ರಾಜತಾಂತ್ರಿಕ ಯುದ್ದವನ್ನೇ ಸಾರಿತ್ತು. ಈ ವಿಚಾರವಾಗಿ ಚೀನಾದ ವಿರುದ್ಧ ತನಿಖೆ ನಡೆಸಬೇಕು ಎನ್ನುವ ಪ್ರಸ್ತಾವನೆಯನ್ನು ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಒಪ್ಪಿ ನಿರ್ಣಯವನ್ನೂ ಜಾರಿಗೂ ತಂದಿತ್ತು. ವಿಶ್ವ ಆರೋಗ್ಯ ಸಂಸ್ಥೆಗೆ ಮುಖ್ಯಸ್ಥರಾಗಿ ಭಾರತ ಸರ್ಕಾರದ ಹಾಲಿ ಆರೋಗ್ಯ ಸಚಿವ ಡಾ. ಹರ್ಷವರ್ದನ್ ಅವರ ನೇಮಕಾತಿ ಚೀನಾಕ್ಕೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಎರಡನೆ ಕಾರಣ ವಿಶ್ವದ ಬಲಿಷ್ಠ ರಾಷ್ಟ್ರಗಳ ಸಂಘಟನೆ ಆಗಿರುವ ಎ೭ ರಾಷ್ಟ್ರಗಳ ಒಕ್ಕೂಟಕ್ಕೆ ಇನ್ನೂ ಮೂರು ಹೊಸ ರಾಷ್ಟ್ರಗಳನ್ನು ಸೇರಿಸಲು ಹೊರಟಿದೆ. ಆ ಮೂರು ರಾಷ್ಟ್ರಗಳಲ್ಲಿ ಭಾರತವೂ ಒಂದು. ಈ ಗುಂಪಿಗೆ ಸೇರಲು ಚೀನಾ ಕೂಡ ಆಸಕ್ತ ರಾಷ್ಟ್ರ. ಆದರೆ ಅಮೆರಿಕಾಕ್ಕೆ ಕಮ್ಯುನಿಸ್ಟ್ ಚೀನಾವನ್ನು ಸೇರಿಸಿಕೊಳ್ಳಲು ಇಷ್ಟವಿಲ್ಲ. ಅದಕ್ಕೆ ಭಾರತದಂತಹ ಪ್ರಜಾಪ್ರಭುತ್ವದ ರಾಷ್ಟ್ರಗಳೇ ಬೇಕು. ಈಗಾಗಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾವನ್ನು ಕಟ್ಟಿಕೊಂಡು ಆಗಿರುವ ಅವಾಂತರಗಳೇ ಸಾಕಾಗಿದೆ. ಅಮೆರಿಕಾದ ಪ್ರಸ್ತಾಪಕ್ಕೆ ಭಾರತ ಸಕಾರಾತ್ಮಕವಾಗಿ ಪ್ರತಿಕ್ರಿಯೆಯನ್ನು ಕೊಟ್ಟಿದೆ. ಇದು ಚೀನಾವನ್ನು ವಿಶ್ವ ಸಮುದಾಯದಲ್ಲಿ ಒಬ್ಬಂಟಿಯನ್ನಾಗಿ ಮಾಡಿದೆ.

ಚೀನಾದ ಒಟ್ಟು ಭೂ ಪ್ರದೇಶದ ಶೇ.೬೦ ಭಾಗ ಚೀನಾ ಅಕ್ರಮಿಸಿಕೊಂಡ ಭಾಗ. ಇಲ್ಲಿನ ಜನ ಚೀನಾದ ಜೊತೆ ಭಾವನಾತ್ಮಕವಾಗಿ ಜೊತೆಗಿಲ್ಲ. ಒಂದು ದೇಶ ಮತ್ತು ಸೈನ್ಯವನ್ನು ಬಂದೂಕಿನ ನಳಿಕೆಯ ಮೇಲೆ ಕಟ್ಟಲಾಗದು. ಅದನ್ನು ಭಾವನಾತ್ಮಕವಾಗಿ ಬೆಳಸಬೇಕು. ಅದು ಚೀನಾದಲ್ಲಿ ಇಲ್ಲ. ಟಿಬೇಟಿನ ಜನರು ಇಂದಿಗೂ ಚೀನಾದ ವಿರುದ್ಧ ದಂಗೆ ಏಳಲು ಅವಕಾಶವನ್ನು ಕಾಯುತ್ತಿದ್ದಾರೆ. ಇದರ ಜೊತೆಗೆ ಚೀನಾದ ಆಡಳಿತ ಪಕ್ಷದಲ್ಲಿ ಕೂಡ ಚೀನಾದ ಅಧ್ಯಕ್ಷ ಕ್ಸಿ ಅವರ ವಿರುದ್ಧ ಅಸಮಾದಾನ ಇದೆ. ಚೀನಾದ ಸೈನ್ಯದ ಹಿರಿಯ ಅಧಿಕಾರಿಗಳಿಗೂ ಇದೆ. ಈ ಕಾರಣದಿಂದ ವಿದ್ರೋಹದ ಭಯವೂ ಚೀನಾಕ್ಕಿದೆ. ತಾನೂ ಒಂದು ಕಾಲದ ಯುಎಸ್‌ಎಸ್‌ಆರ್‌ನಂತೆ ಚೂರುಚೂರಾಗಬಾರದೆಂಬ ಸುಪ್ತವಾದ ಭಯವೂ ಅದಕ್ಕಿದೆ. ಅಲ್ಲದೆ ಟಿಬೇಟಿನ ವಲಸಿಗ ಸರ್ಕಾರವನ್ನು ಭಾರತ ಇಂದಿಗೂ ಜೀವಂತವಾಗಿಟ್ಟಿದೆ. ಈ ಹಿಂದೆ ಡೋಕ್ಲಾಂನಲ್ಲಿ ತಾನು ಅನುಭವಿಸಿದ ರಾಜತಾಂತ್ರಿಕ ಸೋಲು… ಈ ಎಲ್ಲಾ ಕಾರಣಗಳಿಂದ ಚೀನಾಕ್ಕೆ ತನ್ನೆಲ್ಲಾ ನೆರೆಹೊರೆಗಿಂತ ಮೊದಲ ಆತಂಕ ಶಕ್ತಿಯುತವಾದ ಭಾರತವೇ! ಆ ಕಾರಣಗಳಿಂದ ಚೀನಾಕ್ಕೆ ಸರ್ಕಾರದೊಳಗೆ ವಿಶ್ವಾಸ ಗಳಿಸಿಕೊಳ್ಳುವ ಒತ್ತಡ ಸಹಜವಾಗಿಯೇ ಇದೆ.

ಈ ಎಲ್ಲಾ ಕಾರಣಗಳಿಂದ ಕುದಿಯುವ ಕುಲುಮೆಯಂತಾಗಿರುವ ಚೀನಾದ ಒಟ್ಟು ಅಸಹನೆಯೇ ಮೊನ್ನೆ ಪಾಂಗ್ವಾಂಗ್‌ನಲ್ಲಿ ಸ್ಪೋಟಗೊಂಡಿದೆ.

ಚಿತ್ರ ಕೃಪೆ : ಚೀನಾ ಹೈಲೈಟ್ಸ್ .ಕಾಮ್

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments