ವಿಷಯದ ವಿವರಗಳಿಗೆ ದಾಟಿರಿ

Posts from the ‘ಪುಸ್ತಕ ಪರಿಚಯ’ Category

16
ಫೆಬ್ರ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫

– ಮು. ಅ. ಶ್ರೀರಂಗ ಬೆಂಗಳೂರು

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ SL Bhairappa Vimarshe - Nilume
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪

                                                                                
                                                                                         ಆವರಣ —- ಅನಾವರಣ
                                                                                 
ಹೊಸ ಕನ್ನಡ ಸಾಹಿತ್ಯದ ಇತ್ತೀಚಿನ ಮೂವತ್ತು ನಲವತ್ತು ವರ್ಷಗಳಲ್ಲಿ ಎಸ್ ಎಲ್ ಭೈರಪ್ಪನವರ “ಆವರಣ” ಕಾದಂಬರಿಯಷ್ಟು ವಿವಾದಿತ ಕೃತಿ ಬಹುಶಃ ಬೇರೊಂದು ಇರಲಾರದೆನಿಸುತ್ತದೆ. “ಧರ್ಮ ಕಾರಣ” ಮತ್ತು”ಅನುದೇವ ಹೊರಗಣವನು” ಎಂಬ ಎರಡು ಕೃತಿಗಳ ಬಗ್ಗೆ ವಿವಾದವಾಗಿತ್ತು. ಆದರೆ ಇಷ್ಟೊಂದು ವ್ಯಾಪಕವಾಗಿರಲಿಲ್ಲ. ನಂತರದಲ್ಲಿ “ಧರ್ಮಕಾರಣ”ವನ್ನು ಬ್ಯಾನ್ ಮಾಡಲಾಯಿತು. “ಆವರಣದ ವಾದ-ವಿವಾದಗಳಲ್ಲಿ”ಸಾಹಿತ್ಯ ಮತ್ತು ಸಾಹಿತ್ಯೇತರ ಕಾರಣಗಳು ಸೇರಕೊಂಡಿದ್ದವು. ಕನ್ನಡದ ನಾಲ್ಕೈದು ಪ್ರಮುಖ ದಿನ ಪತ್ರಿಕೆಗಳಲ್ಲಿ ಈ ಚರ್ಚೆ ಸುಮಾರು ಆರು ತಿಂಗಳುಗಳ ಕಾಲ ನಡೆಯಿತು. Front line ಮತ್ತು The pioneer ಎಂಬ ಇಂಗ್ಲಿಷ್ ಪತ್ರಿಕೆಗಳಲ್ಲಿ ಆವರಣ ಕುರಿತಂತೆ ವಿಮರ್ಶೆ ಪ್ರಕಟವಾಯ್ತು . ಜತೆಗೆ ಬೆಂಗಳೂರು ಸೇರಿದಂತೆ ಕರ್ನಾಟಕದ ಇತರ ನಾಲ್ಕೈದು ಪ್ರಮುಖ ನಗರಗಳಲ್ಲಿ ಆವರಣದ ಬಗ್ಗೆ ಸಭೆಗಳು,ವಿಚಾರಗೋಷ್ಠಿಗಳು ನಡೆದವು.

ಮತ್ತಷ್ಟು ಓದು »

10
ಜನ

ಸಂಸ್ಕಾರ ಮತ್ತು ದಾಟು ಕಾದಂಬರಿಗಳಲ್ಲಿ ಜಾತಿ ಸಮಸ್ಯೆಗಳು

– ಮು ಅ ಶ್ರೀರಂಗ ಬೆಂಗಳೂರು

ದಾಟು - ಭೈರಪ್ಪಈ ಲೇಖನವನ್ನು ನಾನು ಭೈರಪ್ಪನವರ ಕಾದಂಬರಿಗಳನ್ನು ಕುರಿತ ವಿಮರ್ಶೆಗಳ ಲೇಖನಮಾಲೆ ಮುಗಿದ ನಂತರ ಬರೆಯೋಣವೆಂದುಕೊಂಡಿದ್ದೆ. ಆದರೆ ಆ ಲೇಖನಗಳ ಸರಣಿಯಲ್ಲಿ ಇನ್ನು ಚರ್ಚಿಸಬೇಕಾದ ಕಾದಂಬರಿಗಳು “ಆವರಣ” ಮತ್ತು “ಕವಲು” ಮಾತ್ರ. ಇವುಗಳಲ್ಲಿ ಜಾತಿಯ ಸಮಸ್ಯೆಗಳ ಪ್ರಸ್ತಾಪವಿಲ್ಲದಿರುವುದರಿಂದ ಈಗಲೇ ಬರೆಯುವುದು ಸೂಕ್ತವೆನಿಸಿದೆ.

ಸಂಸ್ಕಾರ ಮತ್ತು ದಾಟು ಕಾದಂಬರಿಗಳನ್ನು ಕುರಿತಂತೆ ನಡೆದ ಚರ್ಚೆಗಳು ಪ್ರಾರಂಭದಲ್ಲಿ ವಿಚಾರಗಳ ವಿನಿಮಯದಂತೆ ಕಂಡರೂ ನಂತರದಲ್ಲಿ ಕವಲು ದಾರಿ ಹಿಡಿದವು. ಇದಕ್ಕೆ ನನಗನಿಸುವಂತೆ ಬಹುಶಃ ಜಾತಿ ಸಮಸ್ಯೆಯನ್ನು ಸಾಹಿತ್ಯವು ಅರಿಯಲು ನಡೆಸುವ ಪ್ರಯತ್ನಕ್ಕೂ ಅದೇ ಸಮಸ್ಯೆಯನ್ನು ಆಧಾರ,ಸಿದ್ಧಾಂತ,ಊಹೆ,ತರ್ಕ ಇತ್ಯಾದಿಗಳ ಮೂಲಕ ಬಿಡಿಸಲು ಪ್ರಯತ್ನಿಸುವ ಮಾನವಿಕ ಶಾಸ್ತ್ರಗಳಿಗೂ ಇರುವ ಮೂಲಭೂತ ವ್ಯತ್ಯಾಸವನ್ನು ಮನಗಾಣಿಸುವುದರಲ್ಲಿ ಆ ಚರ್ಚೆಗಳು ನಡೆಯದೇ ಹೋದದ್ದು. ಇದುವರೆಗೆ ಮಾನವಿಕ ಶಾಸ್ತ್ರಗಳು ತಮ್ಮ ಅಧ್ಯಯನದ ಮೂಲಕ ಕಂಡುಕೊಂಡಿರುವ ನಮ್ಮ ಸಮಾಜದ ಬಗೆಗಿನ ತಿಳುವಳಿಕೆಗಳನ್ನು ಆಧರಿಸಿ ಆ ಚೌಕಟ್ಟಿಗೆ ಈ ಸಾಹಿತ್ಯ ಕೃತಿಗಳು ಹೊಂದುವುದಿಲ್ಲ ಎಂದು ಒಂದೇ ಏಟಿಗೆ ಪಕ್ಕಕ್ಕೆ ಸರಿಸುವುದನ್ನು ಸಾಹಿತ್ಯದ ಒಬ್ಬ ಓದುಗನಾಗಿ ನಾನು ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಮತ್ತಷ್ಟು ಓದು »

7
ಜನ

ಆರ್ವೇಲ್ ನ ಕಾದ೦ಬರಿ ’ಎನಿಮಲ್ ಫಾರ್ಮ್’ನೊಳಗೊ೦ದು ಪ್ರಸ್ತುತ ಭಾರತವನ್ನು ಕಾಣುತ್ತ…

– ಗುರುರಾಜ್ ಕೊಡ್ಕಣಿ

Animal Farmಅದು ಇ೦ಗ್ಲೆ೦ಡಿನ ಒ೦ದು ತೋಟ.ಒ೦ದು ದಿನ ಅಲ್ಲಿನ ಹಿರಿಯ ಹ೦ದಿಯೊ೦ದು ತೋಟದಲ್ಲಿನ ಎಲ್ಲಾ ಪ್ರಾಣಿಗಳನ್ನು ಸೇರಿಸಿ ಗುಪ್ತ ಸಭೆಯೊ೦ದನ್ನು ಆಯೋಜಿಸುತ್ತದೆ.ಪ್ರಾಣಿಗಳ ಮೇಲೆ ಮನುಷ್ಯನ ದೌರ್ಜನ್ಯ, ದಬ್ಬಾಳಿಕೆಗಳನ್ನು ಪರಿಪರಿಯಾಗಿ ವರ್ಣಿಸುತ್ತಾ,ತಮ್ಮ ಮೇಲಿನ ದೌರ್ಜನ್ಯಗಳು ಕೊನೆಗಾಣಬೇಕಾದರೇ ಸ್ವಾತ೦ತ್ರ್ಯವೊ೦ದೇ ದಾರಿ ಎ೦ದು ಸಾರುತ್ತಾ,’ಇ೦ಗ್ಲೆ೦ಡಿನ ಪಶುಗಳು’ ಎ೦ಬ ಕ್ರಾ೦ತಿಗೀತೆಯೊ೦ದನ್ನು ಹಾಡಿ ಪ್ರಾಣಿಗಳನ್ನು ಕ್ರಾ೦ತಿಯತ್ತ ಉತ್ತೇಜಿಸುತ್ತದೆ.ಉತ್ತೇಜಿತ ಪ್ರಾಣಿಗಳು ಒ೦ದು ಅನೀರಿಕ್ಷಿತ ಸ೦ದರ್ಭದಲ್ಲಿ ತೋಟದ ಮಾಲೀಕನ ಮೇಲೆ ತಿರುಗಿ ಬೀಳುವ ಮೂಲಕ,ಅವನನ್ನು ತೋಟದಿ೦ದ ಓಡಿಸಿ ಸ್ವಾತ೦ತ್ರ್ಯವನ್ನು ಪಡೆದುಕೊ೦ಡು ಬಿಡುತ್ತವೆ.ತೋಟದ ಹೆಸರನ್ನು ’ಪ್ರಾಣಿಗಳ ತೋಟ’ ಎ೦ದು ಬದಲಾಯಿಸುವ ಪ್ರಾಣಿಗಳ ನಾಯಕತ್ವವನ್ನು ’ಸ್ನೋಬಾಲ್’ ಮತ್ತು ’ನೆಪೋಲಿಯನ್’ ಎ೦ಬ ಎರಡು ಬುದ್ದಿವ೦ತ ಹ೦ದಿಗಳು ವಹಿಸಿಕೊಳ್ಳುತ್ತವೆ.ಸ್ನೋಬಾಲ್ ಪ್ರಾಣಿಗಳಿಗೆ ಓದು ಬರಹ ಹೇಳಿಕೊಡುವ ಜವಾಬ್ದಾರಿ ವಹಿಸಿಕೊ೦ಡರೇ,ನೆಪೋಲಿಯನ್ ಪಶುತ್ವದ ಮೂಲತತ್ವಗಳನ್ನು ಪ್ರಾಣಿಗಳಿಗೆ ಹೇಳಿಕೊಡಲಾರ೦ಭಿಸುತ್ತದೆ. ’ಎಲ್ಲ ಪ್ರಾಣಿಗಳೂ ಸಮಾನ’ ಎನ್ನುವ ಧ್ಯೇಯವಾಕ್ಯದಡಿ ಈ ಪ್ರಾಣಿ ಸಾಮ್ರಾಜ್ಯ ನಡೆಯುತ್ತಿರುತ್ತದೆ

ಮೊದಮೊದಲು ಎಲ್ಲವೂ ಸರಿಯಿರುತ್ತದಾದರೂ ಕೆಲಕಾಲದ ನ೦ತರ ಪ್ರಾಣಿಗಳ ನಾಯಕತ್ವದ ಗುರುತರ ಜವಾಬ್ದಾರಿ ತಮ್ಮ ಮೇಲಿರುವುದರಿ೦ದ ತಮ್ಮ ಆರೋಗ್ಯಕ್ಕೆ ಮುಖ್ಯವೆ೦ಬ ಕಾರಣಕ್ಕೆ ತೋಟದಲ್ಲಿ ಉತ್ಪತ್ತಿಯಾಗುವ ಹಾಲು ಮತ್ತೀತರ ಪೌಷ್ಠಿಕ ಆಹಾರಗಳನ್ನು ಪ್ರಾಣಿಗಳ ಮುಖ್ಯಸ್ಥರಾದ ಹ೦ದಿಗಳು ತಮಗಾಗಿ ಮಾತ್ರ ಮೀಸಲಿಡಲು ತೀರ್ಮಾನಿಸುತ್ತವೆ.ನಾಯಕರುಗಳಾದ ನೆಪೋಲಿಯನ್ ಮತ್ತು ಸ್ನೋಬಾಲ್ ನಡುವೆ ಭಿನ್ನಾಬಿಪ್ರಾಯದ ಕ೦ದಕವೇರ್ಪಡುತ್ತದೆ.ಪ್ರಾಣಿಗಳ ಏಳಿಗೆಗಾಗಿ ಗಾಳಿಗೋಪುರವೊ೦ದನ್ನು ನಿರ್ಮಿಸಬೇಕೆ೦ಬ ತನ್ನ ಯೋಜನೆಯನ್ನು ಸ್ನೋಬಾಲ್ ವಿವರಿಸಿದಾಗ,ನೆಪೋಲಿಯನ್ ಸ್ನೋಬಾಲ್ ನನ್ನು ತಾನು ಸಾಕಿದ ಗುಪ್ತ ನಾಯಿಗಳ ಸಹಾಯದಿ೦ದ ಬೆದರಿಸಿ, ತೋಟದಿ೦ದ ಓಡಿಸಿ ತೋಟಕ್ಕೆ ತಾನು ಏಕೈಕ ನಾಯಕನಾಗುತ್ತದೆ.

ಮತ್ತಷ್ಟು ಓದು »

5
ಜನ

ಮೋಕ್ಷದ ಹುಡುಕಾಟದಲ್ಲಿ ಕಳೆದುಹೋದ “ಸಿದ್ಧಾರ್ಥ”

– ಡಾ ಅಶೋಕ್ ಕೆ ಆರ್

Siddharthaಜರ್ಮನ್ ಲೇಖಕ ಹರ್ಮನ್ ಹೆಸ್ಸೆ (Hermann Hesse) 1922ರಲ್ಲಿ ಬರೆದ ಕಾದಂಬರಿ ‘ಸಿದ್ಧಾರ್ಥ’. ಹಲವು ವರುಷಗಳು ಕಳೆದ ನಂತರ ಪುಸ್ತಕವೊಂದರ ಕಾಪಿರೈಟ್ ಮುಗಿದುಹೋಗುತ್ತದೆ. ಅಂಥಹ ಪುಸ್ತಕಗಳನ್ನು ‘ಗುಟೆನ್ ಬರ್ಗ್’ ಎಂಬ ಅಂತರ್ಜಾಲ ತಾಣ ಮೊಬೈಲ್, ಟ್ಯಾಬ್ಲೆಟ್, ಕಂಪ್ಯೂಟರುಗಳಲ್ಲಿ ಓದಲನುಕೂಲವಾಗುವಂತೆ ಮಾಡುತ್ತಿದೆ. ‘ಗುಟೆನ್ ಬರ್ಗಿನ’ ಗೃಂಥಾಲಯದಲ್ಲಿ ಸಾವಿರಾರು ಪುಸ್ತಕಗಳು ಲಭ್ಯವಿದೆ. ‘ಸಿದ್ಧಾರ್ಥ’ ಎಂಬ ಶೀರ್ಷಿಕೆ ನೋಡಿ ‘ಬುದ್ಧ’ನ ಬಗೆಗೆ ಪಾಶ್ಚಿಮಾತ್ಯ ಚಿಂತನೆಯ ಪುಸ್ತಕವಿರಬೇಕು, ಪಶ್ಚಿಮದವರಿಗೆ ಕಂಡ ಬುದ್ಧನ ರೂಪ ಯಾವುದಿರಬೇಕೆಂಬ ಕುತೂಹಲದಿಂದ ಪುಸ್ತಕವನ್ನು ಓದಲಾರಂಭಿಸಿದೆ.

ಇಲ್ಲಿ ಬುದ್ಧನಿದ್ದಾನೆ; ಆದರವನು ‘ಸಿದ್ಧಾರ್ಥ’ನಲ್ಲ ‘ಗೌತಮ’. ಬುದ್ಧನನ್ನೇ ಧಿಕ್ಕರಿಸಿ ನಡೆಯುವ ಸಿದ್ಧಾರ್ಥನಿದ್ದಾನೆ. ಕಾದಂಬರಿಯ ನಾಯಕ ‘ಸಿದ್ಧಾರ್ಥ’ ಬ್ರಾಹ್ಮಣನೊಬ್ಬನ ಮಗ. ‘ಅರಿವು’ ಪಡೆದು ಮುಕ್ತಿ ಪಡೆಯಲೋಸಗ ಮನೆ ತೊರೆದು ಜ್ಞಾನಿಗಳೆಂದು ಹೆಸರಾದ ಸಮಾನರೊಡನೆ ಹೋಗುವ ಸಂಕಲ್ಪ ಮಾಡುತ್ತಾನೆ. ಸಿದ್ಧಾರ್ಥನ ತಂದೆ ಒಪ್ಪುವುದಿಲ್ಲ. ಸಿದ್ಧಾರ್ಥ ಹಟ ಬಿಡುವುದಿಲ್ಲ, ಅನುಮತಿ ಕೊಡುವವರೆಗೂ ನಿಂತ ಸ್ಥಳದಿಂದ ಅಲುಗಾಡುವುದಿಲ್ಲ. ಮಗನ ಕಾಠಿಣ್ಯವನ್ನು ನೋಡಿ ಬೆಚ್ಚಿ ಬೇಸರದಿಂದಲೇ ಮಗನನ್ನು ಆಶೀರ್ವದಿಸಿ ಕಳುಹಿಸುತ್ತಾರೆ. ತನ್ನ ಗೆಳೆಯ ಗೋವಿಂದನ ಜತೆಗೆ ಅರಿವಿನ ಪಯಣ ಪ್ರಾರಂಭಿಸುತ್ತಾನೆ. ಕೆಲವು ದಿನಗಳಲ್ಲೇ ಪಡೆದ ಜ್ಞಾನ ತನ್ನನ್ನು ತಾನೇ ಅರಿಯುವುದಕ್ಕೆ ಸಾಲುತ್ತಿಲ್ಲವೆನ್ನಿಸಿ ಮನೋಕ್ಷೋಬೆಗೊಳಗಾಗುತ್ತಾನೆ. ರಾಜತ್ವವನ್ನು ತೊರೆದು ಜ್ಞಾನೋದಯ ಪಡೆದ ಗೌತಮ ಬುದ್ಧನ ಹೆಸರು ಪ್ರಖ್ಯಾತವಾಗುತ್ತಿದ್ದ ಕಾಲವದು. ಗೆಳೆಯ ಗೋವಿಂದನ ಜೊತೆಗೆ ಬುದ್ಧನ ತತ್ವಗಳನ್ನರಿಯಲು ಹೊರಡುತ್ತಾನೆ ಸಿದ್ಧಾರ್ಥ. ಬುದ್ಧನ ಉಪದೇಶಗಳಿಂದ ಈರ್ವರೂ ಪ್ರಭಾವಿತರಾಗುತ್ತಾರೆ. ‘ಸಮಾನ’ರು ತಿಳಿಸಿಕೊಟ್ಟದ್ದಕ್ಕಿಂತ ಹೆಚ್ಚಿನ ಅರಿವು ಬೌದ್ಧ ಧರ್ಮದಲ್ಲಿದೆ ಎಂದು ಮನವರಿಕೆಯಾದರೂ ಸಿದ್ಧಾರ್ಥ ಬುದ್ಧನ ಶಿಷ್ಯನಾಗಲು ಆಶಿಸುವುದಿಲ್ಲ.

ಮತ್ತಷ್ಟು ಓದು »

2
ಜನ

ಸಾಸಿವೆ ತಂದ ಜೀವನ್ಮುಖಿ

-ಜಿ.ವಿ.ಜಯಶ್ರೀ,ಪರ್ತಕರ್ತೆ  

ಸಾಸಿವೆ ತಂದವಳು“Where there’s a will, there’s a way” ಭಾರತಿ ಬಿ.ವಿ. ಅವರ ‘ಸಾಸಿವೆ ತಂದವಳು’ ಕೃತಿಯನ್ನು ಓದಿದಾಗ ಮೇಲಿನ ಸೂಕ್ತಿಗಳಿಗೊಂದು ಅರ್ಥ ಸಿಗುತ್ತದೆ. ಕ್ಯಾನ್ಸರ್ ಲೋಕದಲ್ಲಿ ಬಂಧಿ ಆದಾಗ ಎದುರಿಸಿದ ಕಷ್ಟ ಕೋಟಲೆಗಳನ್ನು ಸರಳವಾಗಿ ಬರೆದು, ಹದವಾದ ಹಾಸ್ಯದ ಸವಿ ನೀಡಿರುವ ಭಾರತಿಯ ವ್ಯಕ್ತಿತ್ವ ಅನಾವರಣಗೊಳ್ಳುತ್ತಾ  ಸಾಗುತ್ತದೆ. ಒಂದು ಸರಳ ಕಾಯಿಲೆಯನ್ನು ದೊಡ್ಡ ಕಾಯಿಲೆಯೆಂದು ಭ್ರಮಿಸುವ ಪೈಕಿಗಳಲ್ಲಿ ಭಾರತಿ ಸಹ ಸೇರಿದ್ದಾರೆ ಎಂದು ತಮ್ಮ ಬಗ್ಗೆ  ಹಾಸ್ಯ ಬೆರಸಿ ಹೇಳುತ್ತಾರೆ. ಪೂರಕ ಉದಾಹರಣೆ ಗಳನ್ನು ನೀಡುತ್ತಾ ತಮಗೆ ಬಂದ ಗಂಟಲು ನೋವು ಕ್ಯಾನ್ಸರ್ ಆಗಿ ಮಾರ್ಪಟ್ಟಿರಬಹುದು ಎನ್ನುವ ಆತಂಕ, ತಲೆಸುತ್ತು ಟ್ಯೂಮರ್ ನಿಂದ ಬರುತ್ತಿದೆ  ಎನ್ನುವ ಭ್ರಮೆಯಲ್ಲಿ ಮುಳುಗೇಳುವ ಲೇಖಕಿ ಓದಿಕೊಂಡ ಆಧುನಿಕ ಮನದ ಹೆಣ್ಣು ಮಕ್ಕಳ ಪ್ರತೀಕವಾಗಿದ್ದಾರೆ. ತುಂಬಾ ಅತಿ ಅನ್ನಿಸುವ ಭಯಾತಂಕಗಳು ಯಾವುದೇ ಬಗೆಯಲ್ಲೂ ತೊಂದರೆ ಎಸೆಗದ ಸಮಸ್ಯೆಗಳ ಬಗ್ಗೆ ಹೆದರಿಕೆ ಹೊಂದಿದ್ದವಳಿಗೆ ಸ್ತನ ಕ್ಯಾನ್ಸರ್ ತನ್ನ ದೇಹದ ಭಾಗವಾಗಿದೆ ಎಂದು ತಿಳಿದಾಗ ಎಂತಹ ಮನಸ್ಥಿತಿ ಉಂಟಾಗಿರ ಬಹುದು?

ಹುಟ್ಟಿದವನು ಸಾಯಲೇ ಬೇಕು ಎನ್ನುವುದು ಓದುವುದಕ್ಕೆ ಚಂದ. ಲೇಖಕಿ ಸ್ಥಿತಿಯೂ ಅಂತಹುದ್ದೇ ಆದಾಗ ತನ್ನನ್ನು ತಾನು ಕೌನ್ಸಿಲಿಂಗ್ ಮಾಡಿ ಕೊಂಡ ಬಗೆ ಮತ್ತು ಸಮಸ್ಯೆಯನ್ನು ಸರಳವಾಗಿ ತೆಗೆದು ಕೊಳ್ಳುವ ಮನಸ್ತತ್ವ ಬೆಳೆಸಿಕೊಂಡ ಪರಿ ನಿಜಕ್ಕೂ ಮಾದರಿ. ಈ ಪುಸ್ತಕ ಫ್ಯಾಂಟಸಿಗಳನ್ನು ಹೊಂದಿದೆ ಎಂಬ ಭಾವನೆ ಓದುಗನಲ್ಲಿ ಇದ್ದರೆ, ಅದನ್ನು ಆರಂಭಿಕ ಪುಟಗಳೇ ದೂರ ಮಾಡಿ ಬಿಡುತ್ತದೆ.ತನಗೆ ಸ್ತನ ಕ್ಯಾನ್ಸರ್ ಇರಬಹುದಾದ ಸಾಧ್ಯತೆಗಳ ಬಗ್ಗೆ ಹೆದರಿರುವಾಗ ಆಕೆಯನ್ನು ಪ್ರಾರಂಭದಲ್ಲೇ ಪರೀಕ್ಷಿಸಿದ ದಾದಿ ಮತ್ತು ವೈದ್ಯರ ವರ್ತನೆ ಈಗ ಸಾಮಾನ್ಯ . ನಂತರ ಅರ್ಬುದ ರೋಗ ಇದೆ ಎನ್ನುವುದು ತಿಳಿದ  ಬಳಿಕ ಮುಂದಿನ ಪಯಣದ ಬಗ್ಗೆ ಬರೆಯುತ್ತಾ ಕೀಮೋ ಥೆರಪಿಯ ವರ್ಣನೆ ಮಾಡುತ್ತಾರೆ. ಅದರಲ್ಲಿ ನೀಡುವ ಔಷಧಿಯು ಆಕೆಯನ್ನು ಅಕ್ಷರಶಃ ಬಕಾಸುರಿಯನ್ನಾಗಿ ಮಾಡುವ ಬಗೆ, ಈ ಸಮಸ್ಯೆಯು ಆಕೆ ಸ್ವಾತಂತ್ರ ಮತ್ತು ದೇಹದ ಚೈತನ್ಯ ಕಸಿದ ರೀತಿ ಹೇಳುತ್ತಾ, ವೈದ್ಯರು ತನಗೆ ತಿಳಿಸಿದ ಆಹಾರ ಹಾಗೂ ಜೀವನ ಶೈಲಿಯ ಬಗ್ಗೆ ಹೇಳುವ ರೀತಿ ಕಿರಿಕಿರಿ ಉಂಟು ಮಾಡುವುದಿಲ್ಲ.

ಮತ್ತಷ್ಟು ಓದು »

23
ಡಿಸೆ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪

– ಮು. ಅ. ಶ್ರೀರಂಗ ಬೆಂಗಳೂರು

SL Bhairappa Vimarshe - Nilumeಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩

ದಾಟು ಮತ್ತು ಭಾರತೀಪುರ
—————————–
ಯು ಆರ್ ಅನಂತಮೂರ್ತಿ ಅವರ “ಭಾರತೀಪುರ” ಕಾದಂಬರಿಯ ನಾಯಕ ಜಗನ್ನಾಥನ ‘fickle minded personality’ ನಮ್ಮ ನವ್ಯ ಸಾಹಿತ್ಯದ  ಆಧುನಿಕ ಪ್ರಜ್ಞೆಗೆ ತುಂಬ ಹತ್ತಿರವಾಗಿದೆ. ಇದು ಮೊದಲು ಪ್ರಕಟವಾಗಿದ್ದು ೧೯೭೩ರಲ್ಲಿ. ಸುಮ್ಮನೆ “ಇದೂ ಒಂದು  ಮಾಮೂಲಿ ಕಾದಂಬರಿ” ಎಂದು ಓದಿಕೊಂಡು ಹೋಗುವ ಹಾಗಿದ್ದರೆ ಯಾವ ಜಿಜ್ಞಾಸೆಯೂ ಬೇಕಾಗುವುದಿಲ್ಲ. ಆದರೆ ಜಗನ್ನಾಥ ತನ್ನ ಊರಾದ ಭಾರತೀಪುರದಲ್ಲಿ ತಾನು ತರಬೇಕೆಂದುಕೊಳ್ಳುವ ಬದಲಾವಣೆಗೆ ತಕ್ಕ ತಯಾರಿ ನಡೆಸಿದ್ದನೆ? ನಡೆಸಿದ್ದರೆ ಅದು ಯಾವ ಮಾದರಿಯದ್ದು ಎಂದು ಯೋಚಿಸಲು ಹೊರಟಾಗ ನಿರಾಸೆಯಾಗುತ್ತದೆ. ಜತೆಗೆ ಈ ಕಾದಂಬರಿಯಲ್ಲಿ ಈತನಿಗಿಂತ ಶಕ್ತಿಶಾಲಿಯಾದ, ಗಟ್ಟಿ ಮನಸ್ಸಿನ ಸಾಕಷ್ಟು ವ್ಯಕ್ತಿಗಳಿದ್ದಾರೆ.

ಮತ್ತಷ್ಟು ಓದು »

10
ಡಿಸೆ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩

– ಮು.ಅ ಶ್ರೀರಂಗ, ಬೆಂಗಳೂರು

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧ SL Bhairappa Vimarshe - Nilume
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨

ಭೈರಪ್ಪನವರ ದಾಟು ಕಾದಂಬರಿಯ ಬಗ್ಗೆ :

ಮುಖಾಮುಖಿ-೨ರಲ್ಲಿ ವಂಶವೃಕ್ಷ ಮತ್ತು ಸಂಸ್ಕಾರ ಕಾದಂಬರಿಗಳ ಬಗ್ಗೆ ನಾನು ಬರೆದ ಲೇಖನಕ್ಕೆ (ನಿಲುಮೆ–೧೫-೧೧-೧೩) ಓದುಗರು ಪ್ರತಿಕ್ರಿಯಿಸುವಾಗ”ದಾಟು” ಕಾದಂಬರಿಯ ಕೆಲವು ಅಂಶಗಳನ್ನು ತಿಳಿಸಿದ್ದರು. ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಿ ಮುಂದುವರಿಯುವುದು ಉತ್ತಮ ಎಂದು ಭಾವಿಸಿದ್ದೇನೆ. ಭೈರಪ್ಪ ಮತ್ತು ಅನಂತಮೂರ್ತಿಯವರ ವಂಶವೃಕ್ಷ -ಸಂಸ್ಕಾರ ಹಾಗು ದಾಟು-ಭಾರತೀಪುರ ಕಾದಂಬರಿಗಳ ವಸ್ತುವಿನಲ್ಲಿ ಕೆಲವು ಸಾಮ್ಯತೆಗಳಿವೆ. ಇವುಗಳ ತೌಲನಿಕ ಓದಿನಿಂದ ಕನ್ನಡದ ಈ ಇಬ್ಬರು ಮಹತ್ವದ ಸಾಹಿತಿಗಳಲ್ಲಿ ಸಾಮಾನ್ಯವಾದ (common ಎಂಬ ಅರ್ಥದಲ್ಲಿ ) ಒಳನೋಟಗಳು ಏನಾದರೂ ಇವೆಯೇ ಎಂಬುದನ್ನು ತಿಳಿಯಬಹುದು . ಇದನ್ನು  ನಿಲುಮೆಯ ಓದುಗರು ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜತೆಗೆ ಧರ್ಮ,ರಿಲಿಜನ್,ಒರಿಯಂಟಲಿಸಂನ ಪುನರುತ್ಪಾದನೆ,ಬ್ರಾಹ್ಮಣ ಪುರೋಹಿತಶಾಹಿ,ಸೆಕ್ಯುಲರಿಸಂ ……. ಈ ಮಾತುಗಳೂ ಬಂದಿವೆ. ಕಾದಂಬರಿಯೊಂದನ್ನು ಈ ರೀತಿಯ ಸಮಾಜಶಾಸ್ತ್ರೀಯ ಪರಿಭಾಷೆಯಲ್ಲಿ ವಿಮರ್ಶಿಸುವುದು ಅನಿವಾರ್ಯವೇ?ಅವಶ್ಯವೇ?ಎಂಬುದು ಮುಖ್ಯವಾದ ಪ್ರಶ್ನೆ. ಕಾದಂಬರಿಯೊಂದನ್ನು ಸಾಹಿತ್ಯ ವಿಮರ್ಶೆಯ ಪರಿಧಿಯೊಳಗೆ ಚರ್ಚಿಸುವುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಜತೆಗೆ ಉತ್ತಮ ಸಾಹಿತ್ಯ ಕೃತಿಯ ವಿಮರ್ಶೆಯ ಪರಿಕರಗಳು ಆ ಕೃತಿಯ ಒಳಗೇ ಅಡಕವಾಗಿರುತ್ತದೆ ಎಂಬ ಒಂದು ಮಾತಿದೆ. ಹೀಗಾಗಿ ಸಾಹಿತ್ಯೇತರ ಪರಿಕರಗಳಿಂದ ಒಂದು ಕಾದಂಬರಿಯ ಗುಣ-ದೋಷಗಳನ್ನು ಪಟ್ಟಿಮಾಡುವ ಮುನ್ನ ಇನ್ನೊಮ್ಮೆ ಯೋಚಿಸಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ವಿವರವಾಗಿ ಬರೆಯಲು ಸದ್ಯದ ಮುಖಾಮುಖಿಗೆ ನಾನು ಹಾಕಿಕೊಂಡಿರುವ ಮಿತಿ ಅಡ್ಡ ಬಂದಿದೆ.  ಸಾಧ್ಯವಾದರೆ ಮುಖಾಮುಖಿ ಲೇಖನಮಾಲೆಯ ಕೊನೆಯಲ್ಲಿ ಬರೆಯಲು ಪ್ರಯತ್ನಿಸುತ್ತೇನೆ.
ಮತ್ತಷ್ಟು ಓದು »

25
ನವೆಂ

ನೋಡುವ ‘ದೃಷ್ಟಿ’ ಬದಲಿಸಬಲ್ಲ ‘ನೈನ್ ಲೈಫ್ಸ್’

– ಡಾ.ಅಶೋಕ್ ಕೆ ಆರ್

nine-livesಪ್ರವಾಸಕಥನವೆಂದರೆ ಭೇಟಿ ನೀಡಿದ ತಾಣಗಳ ಮಾಹಿತಿ, ಆ ಜಾಗಕ್ಕೆ ಹೋಗಲಿರುವ ಸಾರಿಗೆ ವ್ಯವಸ್ಥೆಯ ಬಗೆಗಿನ ಮಾಹಿತಿ, ಅಲ್ಲಿ ಸಿಗುವ ವಿಧವಿಧದ ಭೋಜನಗಳ ಮಾಹಿತಿ, ಅಬ್ಬಬ್ಬಾ ಎಂದರೆ ಆ ಸ್ಥಳದ ಪೂರ್ವೇತಿಹಾಸದ ಮಾಹಿತಿ – ಇವು ಸಿದ್ಧರೂಪದ ಬಹುತೇಕ ಪ್ರವಾಸಕಥನಗಳ ಹೂರಣ. ಈ ಸಿದ್ಧ ರೂಪವನ್ನು ಹೊರತುಪಡಿಸಿದ ಪ್ರವಾಸಕಥನಗಳೂ ಉಂಟು, ಅವು ಆತ್ಮರತಿಯೊಡನೆ ತಮ್ಮದೇ ಸ್ವಂತ ಸಂಗತಿಗಳನ್ನು, ಸಣ್ಣಪುಟ್ಟ ಸಮಸ್ಯೆಗಳನ್ನು ವೈಭವೀಕರಿಸಿಕೊಂಡು ಬರೆಯಲ್ಪಟ್ಟ ಹೆಸರಿಗಷ್ಟೇ ಪ್ರವಾಸಕಥನವೆನ್ನಿಸಿಕೊಳ್ಳುವ ಬರವಣಿಗೆಗಳು. ಇವೆಲ್ಲ ರೀತಿಯ ಪ್ರವಾಸಕಥನಗಳು ನಾಚುವಂತೆ ಇರುವ ಪುಸ್ತಕ “ನೈನ್ ಲೈಫ್ಸ್” (Nine Lives). ಪ್ರಕೃತಿ ಸೌಂದರ್ಯದ ವರ್ಣನೆ, ಸ್ಥಳಪುರಾಣದ ಜೊತೆಜೊತೆಗೆ ಆಯ್ದ ಒಂಭತ್ತು ಜನರ ಮತ್ತವರ ಸುತ್ತಲಿನವರ ಕಥೆಯಿದೆ. ಪ್ರಾಚೀನ ಭಾರತದಿಂದ ಇಂದಿನವರೆಗೂ ಸಾಗಿ ಬಂದಿರುವ ‘ವೃತ್ತಿ’ಯಲ್ಲಿ ಕಾಲ ಸರಿದಂತೆ ಆದ ಬದಲಾವಣೆಗಳಿವೆ. ತನ್ನ ಇಪ್ಪತ್ತೈದು ವರುಷಗಳ ಭಾರತದ ಪ್ರವಾಸದಲ್ಲಿ ಭಾರತದ ಸಾಂಸ್ಕೃತಿಕ – ಬಹಿಷ್ಕೃತ ಲೋಕದರ್ಶನ ಮಾಡಿಸುವವನು ವಿಲಿಯಂ ಡ್ಯಾಲ್ರಿಂಪಲ್ (William Dalrymple) ಎಂಬ ಸ್ಕಾಟಿಷ್ ಲೇಖಕ! ಭಾರತೀಯನಾಗದೇ ಹೋದ ಕಾರಣಕ್ಕೆ ಇಂಥದೊಂದು ಒಳನೋಟ ಈ ಲೇಖಕನಿಗೆ ಲಭ್ಯವಾಯಿತಾ? ಒಳಗಿದ್ದು ನೋಡುವವರ ಭಾವಪರಿಧಿಗೆ ದಕ್ಕದ ವಿಷಯಗಳು ಹೊರಗಿನಿಂದ ನೋಡುವವರಿಗೆ ದಕ್ಕುತ್ತದೆ.

ಜೈನ ಧರ್ಮದ ಸನ್ಯಾಸಿನಿ, ಕಣ್ಣೂರಿನ ನೃತ್ಯಪಟು, ಕರ್ನಾಟಕದ ದೇವದಾಸಿಯರು, ಸಾವಿರಾರು ಪುಟದ ಗೀತೆಗಳನ್ನು ಹಾಡುವ ಅನಕ್ಷರಸ್ಥರು, ಸೂಫಿ ಪಂತದ ಹೆಂಗಸು, ಟಿಬೆಟ್ಟಿನಿಂದ ಭಾರತಕ್ಕೆ ವಲಸೆ ಬಂದ ಬೌದ್ಧ ಬಿಕ್ಕು, ಚೋಳರ ಕಾಲದ ಶೈಲಿಯ ಕೆತ್ತುವ ಶಿಲ್ಪಿ, ಮಾಟಗಾತಿ, ಕುರುಡು ಹಾಡುಗಾರ – ಇವಿಷ್ಟು ನೈನ್ ಲೈಫ್ಸ್ ಪುಸ್ತಕದಲ್ಲಿ ಲೇಖಕ ನಮ್ಮೊಡನೆ ಮುಖಾಮುಖಿಯಾಗಿಸುವ ವ್ಯಕ್ತಿಗಳು. ಓದುಗರೊಡನೆ ಮುಖಾಮುಖಿಯಾಗುವುದು ಕೇವಲ ವ್ಯಕ್ತಿ ಮಾತ್ರವಲ್ಲ; ಆ ವ್ಯಕ್ತಿಯ ವ್ಯಕ್ತಿತ್ವ, ಅವರ ಮನೆಯವರ ತಲ್ಲಣ – ಸಂತಸ, ಆ ವ್ಯಕ್ತಿಯ ಸಾಮಾಜಿಕ ಆರ್ಥಿಕ ಸ್ಥಿತಿ – ಸಮಸ್ಯೆ, ಹೀಗೆ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಸುತ್ತೇನೆಂದು ಹೇಳುವ ಲೇಖಕ ಆ ವ್ಯಕ್ತಿಯ ಮೂಲಕ ಒಂದಿಡೀ ಪ್ರಾದೇಶಿಕತೆಯ ವಿವರವನ್ನು ಧರ್ಮ – ಧರ್ಮಗಳ ನಡುವಿನ ತಿಕ್ಕಾಟ – ಸಾಮರಸ್ಯಗಳನ್ನು ಸುಲಲಿತ ಓದಿನ ಮೂಲಕ ಮನಸ್ಸಿಗೆ ತಲುಪಿಸುತ್ತಾರೆ. ಹೊರಗಣನವನಾದ ಕಾರಣಕ್ಕೋ ಏನೋ ಯಾವೊಂದು ಪೂರ್ವಾಗ್ರಹವೂ ಇಲ್ಲದೆ ಕಂಡದ್ದನ್ನು ಕೇಳಿದ್ದನ್ನು ಯಥಾವತ್ತಾಗಿ ಬರೆದಿರುವ ಪ್ರಯತ್ನವನ್ನೂ ಗಮನಿಸಬಹುದು.

ಮತ್ತಷ್ಟು ಓದು »

15
ನವೆಂ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨

– ಮು.ಅ ಶ್ರೀರಂಗ,ಬೆಂಗಳೂರು

S L Byrappa(“ನಿಲುಮೆ”ಯಲ್ಲಿ  ೧೦-೧೦-೨೦೧೩ರಂದು ಪ್ರಕಟವಾದ ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧ ಲೇಖನದ   ಎರಡನೇ  ಭಾಗ)

ವಂಶವೃಕ್ಷ  ಮತ್ತು  ಸಂಸ್ಕಾರ
—————————-

ಭೈರಪ್ಪನವರ ಮುಖ್ಯ ಕಾದಂಬರಿಗಳಲ್ಲಿ ಒಂದಾದ “ವಂಶವೃಕ್ಷ”ದ ವಸ್ತು,ಪಾತ್ರಗಳು,ಕಾದಂಬರಿಯ ವಿನ್ಯಾಸ ಇತ್ಯಾದಿಗಳ ಬಗ್ಗೆ ನಮ್ಮ ವಿಮರ್ಶಕರು ಈಗಾಗಲೇ ಸಾಕಷ್ಟು ವಿವರವಾಗಿ ಚರ್ಚಿಸಿದ್ದಾರೆ; ವಿವೇಚನೆ ನಡೆಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಆ ಕಾದಂಬರಿಯ ಪೂರ್ಣ ವಿಮರ್ಶೆ ನನ್ನ ಉದ್ದೇಶವಲ್ಲ.
“ವಂಶವೃಕ್ಷ”ದ ವಿಮರ್ಶೆಗಳಲ್ಲಿ ಸಹಜವಾಗಿ ಶ್ರೀನಿವಾಸ ಶ್ರೋತ್ರಿ ಮತ್ತು ಅವರ  ಸೊಸೆ  ಕಾತ್ಯಾಯನಿಯ ಜೀವನದಲ್ಲಿ ಅವರುಗಳು ಎದುರಿಸಬೇಕಾಗಿ ಬಂದಂತಹ ಸನ್ನಿವೇಶಗಳು ಮತ್ತು ಸಂಘರ್ಷಗಳು ವಿಶೇಷವಾಗಿ ಚರ್ಚೆಗೆ ಒಳಪಟ್ಟಿರುವ ಅಂಶಗಳು. ಶ್ರೋತ್ರಿಯವರು ತಮ್ಮ ಜೀವನಕ್ಕೆ ಸನಾತನ ಧರ್ಮವನ್ನು ಅಧಾರವನ್ನಾಗಿಟ್ಟುಕೊಂಡವರು. ಅದರಲ್ಲಿ ನಂಬಿಕೆಯಿಟ್ಟವರು. ಆದರೆ ಕರ್ಮಠರಲ್ಲ. ಧರ್ಮದ ಪದಶಃ,ವಾಕ್ಯಶಃ ಅರ್ಥಗಳಿಗೆಗಷ್ಟೇ ಅಂಟಿಕೊಂಡವರಲ್ಲ.ಧರ್ಮದ ಬಗ್ಗೆ ತಮಗಿರುವ ನಂಬಿಕೆ,ವಿಶ್ವಾಸಗಳನ್ನು ಇನ್ನೊಬ್ಬರ ಮೇಲೆ ಹೇರಿದವರಲ್ಲ. ಅವರ ಮಗ ಅಕಾಲ ಮರಣಕ್ಕೆ ತುತ್ತಾದಾಗ ವಿಧವೆಯಾದ ಸೊಸೆ ಕಾತ್ಯಾಯನಿ ಆ ಕಾಲದ(೧೯೨೪ರ ಆಸುಪಾಸಿನದು)ಪದ್ಧತಿಯಂತೆ ಮಡಿ ಹೆಂಗಸು” (ತಲೆಗೂದಲು ತೆಗೆಸುವುದು, ಕೆಂಪು ಸೀರೆ ಉಡುವುದು ಇತ್ಯಾದಿ)ಆಗಲಿಲ್ಲ.

ಮತ್ತಷ್ಟು ಓದು »

10
ಆಕ್ಟೋ

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧

– ಮು.ಅ ಶ್ರೀರಂಗ, ಬೆಂಗಳೂರು

S L Byrappaಎಸ್. ಎಲ್. ಭೈರಪ್ಪನವರ” ಧರ್ಮಶ್ರೀ”ಯಿಂದ  “ಅನ್ವೇಷಣ”ದವರೆಗಿನ ಹನ್ನೆರೆಡು ಕಾದಂಬರಿಗಳನ್ನು ಕುರಿತಂತೆ ಒಟ್ಟು ಅರವತ್ತಾರು ವಿಮರ್ಶೆಗಳಿರುವ “ಸಹಸ್ಪಂದನ” ಎಂಬ ವಿಮರ್ಶಾ ಗ್ರಂಥ ೧೯೭೮ರಲ್ಲಿ ಪ್ರಕಟವಾಯ್ತು. (ಪ್ರಕಾಶಕರು :ಸಾಹಿತ್ಯ ಭಂಡಾರ ಬೆಂಗಳೂರು —೫೩) ಅದರ ಪ್ರಕಾಶಕರು ಹೇಳಿರುವ ಮಾತುಗಳಿಂದ ಈ ನನ್ನ ಮುನ್ನುಡಿಯನ್ನು ಪ್ರಾರಂಭಿಸುವುದು ಉತ್ತಮ.”ಇದು (ಸಹಸ್ಪಂದನ) ಭೈರಪ್ಪನವರ ಮೇಲಿನ ಕೇವಲ ಅಭಿಮಾನದಿಂದ ತಂದಿರುವ ಗ್ರಂಥವಲ್ಲ. ಮೆಚ್ಚಿಗೆ,ಹೊಗಳಿಕೆಗಳ ಬರವಣಿಗೆಯಿಂದ ಯಾವ ಲೇಖಕನ ಕೃತಿಗಳೂ ಬದುಕಲಾರವು. ಇಲ್ಲಿ ಬಂದಿರುವ ಲೇಖನಗಳು ಒಂದೇ ಬಗೆಯ ದೃಷ್ಟಿಕೋನದವೂ ಅಲ್ಲ. ಮೆಚ್ಚುಗೆ, ವಿರೋಧ,ಟೀಕೆ,ಘಾಟು, ಹೀಗೆ ……….. ”

ಈ ಮುಖಾಮುಖಿಯನ್ನು ಆ ಒಂದು ಎಚ್ಚರ,ಜವಾಬ್ದಾರಿಗಳ ಹಿನ್ನೆಲೆಯಲ್ಲಿ ನಡೆಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ.

ನಮ್ಮ ಅಕಾಡೆಮಿಕ್ ವಲಯದ ವಿಮರ್ಶಕರುಗಳು ಜತೆಗೆ ನಾನ್ ಅಕಾಡೆಮಿಕ್ ವಿಮರ್ಶಕರುಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಹೊಸ ಕನ್ನಡ ಸಾಹಿತ್ಯದಲ್ಲಿ ವಿಮರ್ಶೆಗೊಂದು ಮಹತ್ವವಿದೆ. ಕಾಲಾನುಕಾಲಕ್ಕೆ ಅದು ಓದುಗರ ವಿವೇಕವನ್ನು ಎಚ್ಚರಿಸುತ್ತಾ, ಸಾಹಿತಿಗಳನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಪ್ರಭಾವಿಸುತ್ತಲಿದೆ. ಇಷ್ಟಲ್ಲದೆ ಸಾಹಿತಿಗಳು ಹೊಸಹೊಸ ತಂತ್ರಗಳತ್ತ, ವಿಷಯಗಳತ್ತ ಯೋಚಿಸುವಂತೆ ಹೊರಳುವಂತೆ ಮಾಡಿವೆ. ಭಾಷೆಯನ್ನು ಪರಿಣಾಮಕಾರಿಯಾಗಿ ಯಾವ ರೀತಿ ಉಪಯೋಗಿಸಬೇಕೆನ್ನುವ ಮಾರ್ಗದರ್ಶನ ಕೂಡ ವಿಮರ್ಶೆಯಿಂದ ನಡೆಯುತ್ತಿರುತ್ತದೆ.
ಮತ್ತಷ್ಟು ಓದು »