ವಿಷಯದ ವಿವರಗಳಿಗೆ ದಾಟಿರಿ

ಡಿಸೆಂಬರ್ 10, 2013

33

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩

‍ನಿಲುಮೆ ಮೂಲಕ

– ಮು.ಅ ಶ್ರೀರಂಗ, ಬೆಂಗಳೂರು

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧ SL Bhairappa Vimarshe - Nilume
ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨

ಭೈರಪ್ಪನವರ ದಾಟು ಕಾದಂಬರಿಯ ಬಗ್ಗೆ :

ಮುಖಾಮುಖಿ-೨ರಲ್ಲಿ ವಂಶವೃಕ್ಷ ಮತ್ತು ಸಂಸ್ಕಾರ ಕಾದಂಬರಿಗಳ ಬಗ್ಗೆ ನಾನು ಬರೆದ ಲೇಖನಕ್ಕೆ (ನಿಲುಮೆ–೧೫-೧೧-೧೩) ಓದುಗರು ಪ್ರತಿಕ್ರಿಯಿಸುವಾಗ”ದಾಟು” ಕಾದಂಬರಿಯ ಕೆಲವು ಅಂಶಗಳನ್ನು ತಿಳಿಸಿದ್ದರು. ಅವುಗಳ ಬಗ್ಗೆ ಸಂಕ್ಷಿಪ್ತವಾಗಿ ಪ್ರಸ್ತಾಪಿಸಿ ಮುಂದುವರಿಯುವುದು ಉತ್ತಮ ಎಂದು ಭಾವಿಸಿದ್ದೇನೆ. ಭೈರಪ್ಪ ಮತ್ತು ಅನಂತಮೂರ್ತಿಯವರ ವಂಶವೃಕ್ಷ -ಸಂಸ್ಕಾರ ಹಾಗು ದಾಟು-ಭಾರತೀಪುರ ಕಾದಂಬರಿಗಳ ವಸ್ತುವಿನಲ್ಲಿ ಕೆಲವು ಸಾಮ್ಯತೆಗಳಿವೆ. ಇವುಗಳ ತೌಲನಿಕ ಓದಿನಿಂದ ಕನ್ನಡದ ಈ ಇಬ್ಬರು ಮಹತ್ವದ ಸಾಹಿತಿಗಳಲ್ಲಿ ಸಾಮಾನ್ಯವಾದ (common ಎಂಬ ಅರ್ಥದಲ್ಲಿ ) ಒಳನೋಟಗಳು ಏನಾದರೂ ಇವೆಯೇ ಎಂಬುದನ್ನು ತಿಳಿಯಬಹುದು . ಇದನ್ನು  ನಿಲುಮೆಯ ಓದುಗರು ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜತೆಗೆ ಧರ್ಮ,ರಿಲಿಜನ್,ಒರಿಯಂಟಲಿಸಂನ ಪುನರುತ್ಪಾದನೆ,ಬ್ರಾಹ್ಮಣ ಪುರೋಹಿತಶಾಹಿ,ಸೆಕ್ಯುಲರಿಸಂ ……. ಈ ಮಾತುಗಳೂ ಬಂದಿವೆ. ಕಾದಂಬರಿಯೊಂದನ್ನು ಈ ರೀತಿಯ ಸಮಾಜಶಾಸ್ತ್ರೀಯ ಪರಿಭಾಷೆಯಲ್ಲಿ ವಿಮರ್ಶಿಸುವುದು ಅನಿವಾರ್ಯವೇ?ಅವಶ್ಯವೇ?ಎಂಬುದು ಮುಖ್ಯವಾದ ಪ್ರಶ್ನೆ. ಕಾದಂಬರಿಯೊಂದನ್ನು ಸಾಹಿತ್ಯ ವಿಮರ್ಶೆಯ ಪರಿಧಿಯೊಳಗೆ ಚರ್ಚಿಸುವುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಜತೆಗೆ ಉತ್ತಮ ಸಾಹಿತ್ಯ ಕೃತಿಯ ವಿಮರ್ಶೆಯ ಪರಿಕರಗಳು ಆ ಕೃತಿಯ ಒಳಗೇ ಅಡಕವಾಗಿರುತ್ತದೆ ಎಂಬ ಒಂದು ಮಾತಿದೆ. ಹೀಗಾಗಿ ಸಾಹಿತ್ಯೇತರ ಪರಿಕರಗಳಿಂದ ಒಂದು ಕಾದಂಬರಿಯ ಗುಣ-ದೋಷಗಳನ್ನು ಪಟ್ಟಿಮಾಡುವ ಮುನ್ನ ಇನ್ನೊಮ್ಮೆ ಯೋಚಿಸಬೇಕಾಗಿದೆ. ಈ ಎಲ್ಲಾ ಅಂಶಗಳನ್ನು ವಿವರವಾಗಿ ಬರೆಯಲು ಸದ್ಯದ ಮುಖಾಮುಖಿಗೆ ನಾನು ಹಾಕಿಕೊಂಡಿರುವ ಮಿತಿ ಅಡ್ಡ ಬಂದಿದೆ.  ಸಾಧ್ಯವಾದರೆ ಮುಖಾಮುಖಿ ಲೇಖನಮಾಲೆಯ ಕೊನೆಯಲ್ಲಿ ಬರೆಯಲು ಪ್ರಯತ್ನಿಸುತ್ತೇನೆ.

“ದಾಟು” ಕಾದಂಬರಿಯ ವಸ್ತು ನಮ್ಮನ್ನು ಎಡಬಿಡದೆ ಕಾಡುತ್ತಿರುವ ” ಜಾತಿ”ಗೆ ಸಂಬಂಧಿಸಿದ್ದು. ನಮ್ಮ ಸಾಂಪ್ರದಾಯಿಕ ಚಾತುರ್ವಣ್ಯದ ಎಲ್ಲಾ ಜಾತಿಗೆ ಸೇರಿದವರು ಈ ಕಾದಂಬರಿಯ ತಿರುಮಲಾಪುರದಲ್ಲಿದ್ದಾರೆ. ಈ ಜಾತಿ ಎಂಬುದು “…… ಸೋಫಿಸ್ಟಿಕೇಟೆಡ್ ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸುತ್ತಿರುವ ಹಾಲಾಹಲ ಸಮಸ್ಯೆ …. ಜೀವನ ಧರ್ಮವಾಗಿ ಒಂದು ಕಡೆಯಲ್ಲಿ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿರುವ ಜಾತಿ ಪದ್ದತಿ, ಇನ್ನೊಂದೆಡೆ ಅನುಕೂಲಸಿಂಧುವಾಗಿ ಸಾವಿರ ಹೆಡೆಗಳನ್ನು ಬಿಚ್ಚಿ ಬೆಳೆಯುತ್ತಿದೆ….. ರಾಜಕೀಯಕ್ಕೆ,ಚುನಾವಣೆಯಲ್ಲಿ ಗೆಲ್ಲೋದಕ್ಕೆ, ಸಾಮಾಜಿಕ ಸವಲತ್ತುಗಳಿಗೆ ಬೇಕು……”(ಬನ್ನಂಜೆ ಗೋವಿಂದಾಚಾರ್ಯ, ಸಹಸ್ಪಂದನ, ಪುಟ ೫೪೩). ಈ ಕಾದಂಬರಿಯಲ್ಲಿ ಬರುವ ಬೇಡರು ವಾಲ್ಮೀಕಿ ಬ್ರಾಹ್ಮಣರಾಗಬೇಕು,ಕುರುಬರು ಕಾಳಿದಾಸ ಬ್ರಾಹ್ಮಣರಾಗಬೇಕು , ಅಕ್ಕಸಾಲಿಗರು ವಿಶ್ವಕರ್ಮ ಬ್ರಾಹ್ಮಣರಾಗಬೇಕು  …… ಹೀಗೆ ಇತರೆ ಜಾತಿಗಳಿಗೆ ಸೇರಿದವರು ತಾವೂ ಸಹ ಒಂದು ರೀತಿಯಲ್ಲಿ  ಬ್ರಾಹ್ಮಣರು ಅಥವಾ ಇನ್ನೊಂದು ಜಾತಿಗಿಂತ ಮೇಲು ಅಥವಾ ಅದೇ ಜಾತಿಯ ಇನ್ನೊಂದು ಪಂಗಡಕ್ಕಿಂತ ಮೇಲು ಎಂದು ಜನಗಣತಿಯಲ್ಲಿ ಬರೆಸಲು ಪ್ರಯತ್ನಿಸುತ್ತಾರೆ. ಅದು ಸಾಧ್ಯವಾಗದಾಗ ಕೊನೆಯ ಪಕ್ಷ ಊರಿನಲ್ಲಾದರೂ ತಮ್ಮ ಜಾತಿ/ಉಪಜಾತಿಗಳ ಹೆಚ್ಚುಗಾರಿಕೆಯನ್ನು ಸ್ಥಾಪಿಸಲು/ವಾದಿಸಲು ಸಭೆ ಸೇರುತ್ತಾರೆ. ಯಾರು ಹೆಚ್ಚು ಯಾರು ಕಮ್ಮಿ ಎಂದು ನಿರೂಪಿಸುವ ಕರಪತ್ರಗಳನ್ನು ಊರಿಗೆಲ್ಲಾ ಹಂಚುತ್ತಾರೆ. ದಾಟು ಕಾದಂಬರಿ ೧೯೭೩ರಲ್ಲಿ ಮೊದಲು ಪ್ರಕಟವಾಯ್ತು. ನಾನು ಈ ಹಿಂದೆ ಇದ್ದ ಬೆಂಗಳೂರಿಗೆ ಸಮೀಪದ ಮುಂದುವರಿದ ತಾಲ್ಲೋಕು ಕೇಂದ್ರವಾದ ಪಟ್ಟಣದಲ್ಲಿ ೨೦೧೧ರ ಡಿಸೆಂಬರ್ ತಿಂಗಳಿನಲ್ಲಿ ಮನೆಮನೆಗೆ ದಿನ ಪತ್ರಿಕೆಗಳ ಜತೆ ‘ಈ ತಿಂಗಳಿನಿಂದ ಸರ್ಕಾರ ಜನಗಣತಿ ನಡೆಸುತ್ತದೆ. ನೇಕಾರ ಸಮುದಾಯದವರು ಜಾತಿ ಎನ್ನುವಲ್ಲಿ ನೇಕಾರ-ದೇವಾಂಗ,ನೇಕಾರ-ತೊಗಟವೀರ ಕ್ಷತ್ರೀಯ,…. ನೇಕಾರ-ಪಟ್ಟಸಾಲಿ ಹೀಗೆ ಜಾತಿ ನಮೂದಿಸಲು ಪ್ರತ್ಯೇಕ ಕಾಲಂಗಳಿದ್ದು ಈ ವಿವರಗಳನ್ನು ನಮೂದಿಸಲು ತೊಂದರೆಯಿರುವುದಿಲ್ಲ. ಅದೇ ರೀತಿ ಮಾಡಿ’ ಎಂಬ ಸಾರಾಂಶದ ಕರಪತ್ರಗಳನ್ನು ದೇವಾಂಗ ಮಂಡಳಿ(ರಿ) ಎಂಬ ಹೆಸರಿನಿಂದ ಆ ಪಟ್ಟಣದಲ್ಲಿ ಹಂಚಲಾಗಿತ್ತು. ದಾಟುವಿನ ಕರಪತ್ರ ಹಂಚುವ ಆ ಸನ್ನಿವೇಶ ಈಗಲೂ ಇದೆ ಎಂದು ತಿಳಿಸುವುದಕ್ಕಾಗಿ ಪ್ರಾಸಂಗಿಕವಾಗಿ ಈ ವಿಷಯ ಪ್ರಸ್ತಾಪಿಸಿದೆ;

ಜಾತಿಯ ಬಗ್ಗೆ  ಈ ಕಾದಂಬರಿಯಲ್ಲಿನ ಎರಡು ಮೂರು ಪಾತ್ರಗಳ  ನಿಲುವು,ಯೋಚನೆಗಳು ಹೇಗಿದೆ ಎಂಬುದನ್ನು ಈಗ ನೋಡೋಣ:-
ಪಟೇಲ್ ತಿರುಮಲೇಗೌಡ —‘ವೇದ ವೇದಾಂತ ಮಾಡಿದವರು ಬ್ರಾಹ್ಮಣರಲ್ಲ. ರಾಮ,ಕೃಷ್ಣ ಅಂತ ನಾವು ಪೂಜಿಸುವ ದೇವರು ಕ್ಷತ್ರಿಯರೇ ಅಲ್ಲವೇ? ಜನಕ ಮಹಾರಾಜನಂತಹ ಕ್ಷತ್ರಿಯರೇ ಮಹಾವೇದ ವಿದ್ಯಾಪಂಡಿತರು. ಒಟ್ಟಿನಲ್ಲಿ ಬ್ರಹ್ಮ ವಿದ್ಯಾನ ಬ್ರಾಹ್ಮಣರಿಗೆ ಕಲಿಸಿದವರು ಕ್ಷತ್ರಿಯರೇ. ಭೂಲೋಕದಲ್ಲಿ ದೇವರು ಅವತಾರ ತಾಳಿದ್ದು ಸಹ ಕ್ಷತ್ರಿಯನಾಗಿಯೇ. ಪೂಜೆಗೆ ಅರ್ಹರಾದವರು ಕ್ಷತ್ರಿಯರು. ಪೂಜೆ ಮಾಡುವುದೇ ಬ್ರಾಹ್ಮಣರ ಕಸುಬು. ವೇದದಲ್ಲಿ ಹೇಳಿರುವುದೂ ಸಹ ತೋಳಿರುವವನೇ ರಾಜ ಅವನೇ ಕ್ಷತ್ರಿಯ. ಪತಿ ಎಂದರೆ ಯಜಮಾನ,ರಾಜ. ಪತಿ ಎಂಬ ಮಾತಿನಿಂದ ಪಟೇಲ ಆಯ್ತಂತೆ …. ‘ಹೀಗೆ ಸಾಗುತ್ತದೆ ಈತನ ವ್ಯಾಖ್ಯಾನ. ಆದ್ದರಿಂದ ತಾನು ಗೌಡನಾಗಿದ್ದರೂ ಕ್ಷತ್ರಿಯ. ಜತೆಗೆ ಆತನ ಮಗ ನಮ್ಮ ಪ್ರಜಾಪ್ರಭುತ್ವದ ಸರಕಾರದಲ್ಲಿ ಮಂತ್ರಿಯಾಗಿದ್ದಾನೆ. ರಾಜ್ಯ ಆಳುತ್ತಿದ್ದಾನೆ. ಇನ್ನೇನು ಬೇಕು? ನಾನೇ ಬ್ರಾಹ್ಮಣರಿಗಿಂತ ಮೇಲಿದ್ದೇನೆಂದು ಭಾವಿಸುವವನು  ಮತ್ತು ಅದೇ ರೀತಿ ವರ್ತಿಸುವವನು.

ಸತ್ಯಭಾಮೆ:- ‘ಓದಿನಲ್ಲಿ ತಾನು ಕಂಡುಕೊಂಡ ಸತ್ಯವನ್ನು ಜೀವನ ಸತ್ಯವನ್ನಾಗಿ ಮಾಡಲು ಪ್ರಯತ್ನಿಸುತ್ತಾಳೆ. ಜಾತಿ ಪದ್ಧತಿಯನ್ನು ಮುರಿಯದೆ ಈ ದೇಶದ ಪ್ರಗತಿ ಸಾಧ್ಯವಿಲ್ಲ ಎಂದಾದರೆ ತಾನು ಒಬ್ಬ ಅಬ್ರಾಹ್ಮಣನನ್ನು ಮದುವೆಯಾಗಿ ಮೇಲು ಪಂಕ್ತಿ ಹಾಕಬೇಕು …..’ (ಬನ್ನಂಜೆ ಗೋವಿಂದಾಚಾರ್ಯ  ಸಹಸ್ಪಂದನ  ಪುಟ ೫೪೪) ತನ್ನ ಬ್ರಾಹ್ಮಣ ಜಾತಿಯನ್ನು ದಾಟುವ ಈ ನಿರ್ಧಾರದಿಂದ ಶ್ರೀನಿವಾಸನನ್ನು (ಪಟೇಲ್ ತಿರುಮಲೇಗೌಡರ ಮೊಮ್ಮೊಗ-ಮಂತ್ರಿ ಮೇಲಗಿರಿಗೌಡರ ಮಗ) ಮದುವೆಯಾಗಲು ತೀರ್ಮಾನಿಸುತ್ತಾಳೆ. ಇದು ಅಂತರ್ಜಾತಿ ವಿವಾಹವಾದ್ದರಿಂದ ಇವರಿಬ್ಬರ  ಮನೆಯವರ ಒಪ್ಪಿಗೆಯಿಲ್ಲ. ಹೀಗಾಗಿ  ಮನೆಯಲ್ಲಿ ನಡೆಯುವುದು ಸಾಧ್ಯವಿಲ್ಲ.ಆದ್ದರಿಂದ ರಿಜಿಸ್ಟರ್ ಮಾಡುವೆ ಮಾಡಿಕೊಳ್ಳಲು ನಿರ್ಧರಿಸುತ್ತಾರೆ. ಆದರೆ ಶ್ರೀನಿವಾಸನ ತಂದೆ ತನ್ನ ಮಂತ್ರಿ ಸ್ಥಾನದ ಪ್ರಭಾವದಿಂದ ರಿಜಿಸ್ಟರ್ ಮದುವೆ ಮಾಡಿಸಬೇಕಾದ ಅಧಿಕಾರಿಯನ್ನೇ ನಾಲ್ಕಾರು ದಿನಗಳ ಕಾಲ ರಜೆ ಹೋಗುವಂತೆ ಮಾಡಿ ಈ ಮದುವೆಗೆ ಮೊದಲ ತಡೆ ಒಡ್ಡುತ್ತಾನೆ . ನಂತರದ ಘಟನೆಗಳಿಂದ ಆ ಮದುವೆ ಆಗುವುದಿಲ್ಲ. ಬೆಂಗಳೂರಿನ ಕೆಲಸ ಬಿಡಬೇಕಾದ ಪರಿಸ್ಥಿತಿಯಿಂದಾಗಿ ಸತ್ಯಭಾಮೆ ತನ್ನ ಹಳ್ಳಿಗೆ ವಾಪಸ್ಸು  ಬರುತ್ತಾಳೆ. ತನಗೆ ಜಾತಿ ಪದ್ಧತಿಯಲ್ಲಿ ನಂಬಿಕೆಯಿಲ್ಲವಾದ್ದರಿಂದ ಅದನ್ನು ನಾನೇ ಮೊದಲು ಮುರಿಯುವ ರಿಸ್ಕ್ ತೆಗೆದುಕೊಳ್ಳಬೇಕೆಂಬ ಆಕೆಯ ನೈಜ ಪ್ರಯತ್ನ ಫಲಿಸುವುದಿಲ್ಲ.

ಮೋಹನದಾಸ:- ಈತ ಹರಿಜನನಾದ ಬೆಟ್ಟಯ್ಯನವರ ಮಗ. ಈ ಹಿಂದೆ ಬೆಟ್ಟಯ್ಯನವರು ಮೀಸೆ ಬಿಟ್ಟಿದ್ದೇ ಕಾರಣವಾಗಿ ಪಟೇಲ್ ತಿರುಮಲೇಗೌಡ ಇವರನ್ನು  ಕಂಬಕ್ಕೆ ಕಟ್ಟಿ ಬಾರುಗೊಲಿನಿಂದ ಹೊಡೆಸಿರುತ್ತಾನೆ. ಆಗ ನಾಚಿಕೆಯಿಂದಲೋ,ಹೆದರಿಕೆಯಿಂದಲೋ ಊರುಬಿಟ್ಟು ಹೋಗಿ ಗಾಂಧಿ ಆಶ್ರಮದಲ್ಲಿದ್ದು ಭಾರತಕ್ಕೆ ಸ್ವತಂತ್ರ ಬಂದ ಮೇಲೆ ಊರಿಗೆ ವಾಪಸ್ಸು ಬಂದವರು. ನಂತರದಲ್ಲಿ ಎಂ.ಎಲ್.ಎ  ಸಹ ಆದವರು. ಮೋಹನದಾಸನಿಗೆ ತನ್ನ ಅಪ್ಪ ತನಗಿಟ್ಟ ಹೆಸರಿನ ಬಗ್ಗೆಯೂ ಅಸಮಾಧಾನವಿದೆ. “ಬರಿ ಮೋಹನ ಅಂತ ಏಕೆ ಇಡಲಿಲ್ಲ? ದಾಸ ಅಂತ ಏಕೆ ಸೇರಿಸಿದ? ಮೂಲತಃ ದಾಸರು ….. ಮಗನಿಗೆ ಹೆಸರಿಡಕ್ಕೂ ಗುರುವಿನ(ಗಾಂಧಿ) ದಾಸನಾಗಬೇಕಿತ್ತೆ ಇವನು?…. ನಮ್ಮ ಇಂಥ ದಾಸ್ಯ ಹೋಗದೆ ನಾವು ಮೇಲೆ ಬರುಕ್ಕೆ ಸಾಧ್ಯವಿಲ್ಲ” ಒಮ್ಮೆ ಈತನ ಮದುವೆ ಪ್ರಸ್ತಾಪ ಮುರಿದುಬಿದ್ದದ್ದು ಹರಿಜನರಲ್ಲೇ ಇರುವ ಬಲಗೈ ಮೇಲು ಎಡಗೈ ಕೀಳು ಎಂಬ ಕಾರಣದಿಂದ. ಮೋಹನದಾಸ ಎಡಗೈಗೆ ಸೇರಿದವನು; ಹುಡುಗಿ ಬಲಗೈಗೆ ಸೇರಿದವಳು…….” ಉಳಿದ ಯಾವ ಒಂದು ಜಾತಿಯ ಜನರಿಗಿಂತಲೂ ನಾವು ಹೆಚ್ಚಿನ ಸಂಖ್ಯೆಲಿದ್ದೀವಿ …. ನಮ್ಮೋರು ಒಟ್ಟಾದರೆ ಅಧಿಕಾರ ನಮ್ಮ ಕೈಗೆ ಬರುತ್ತೆ. ಆಗ ಇದುವರೆಗೆ ತುಳಿದ ಈ ಮೇಲುಜಾತಿಯೋರನ್ನೆಲ್ಲ ತುಳೀಬೌದು …. ಎಲ್ಲಿತ್ತು ಸಮಾನತೆ ನಾಲ್ಕುಸಾವಿರ ವರ್ಷದಿಂದ ? ಅವರನ್ನು ತುಳಿದು ನಾವು ಆಳೂದೇ ನಮ್ಮ ಗುರಿ…… ” (ದಾಟು ಪುಟ ೫೬೪)

ಕೆಲವು ವಿಮರ್ಶಕರು ಈ ಕಾದಂಬರಿಯ ಒಂದೆರೆಡು ಸನ್ನಿವೇಶಗಳನ್ನು ಪ್ರಸ್ತಾಪಿಸಿ ಭೈರಪ್ಪನವರು ಪ್ರತಿಗಾಮಿ,ಸಂಪ್ರದಾಯಕ್ಕೆ ಜೋತುಬೀಳುವ ಸಾಹಿತಿಯೆಂದು ಟೀಕಿಸುವುದುಂಟು. ಈ ಕಾದಂಬರಿ ಪ್ರಕಟವಾದಾಗ ಬಹಿರಂಗ ಸಭೆಗಳನ್ನು ನಡೆಸಿ ಖಂಡಿಸುವ ವಿಕೋಪಕ್ಕೂ ಹೋಯಿತು. ಅವರ ಆಕ್ಷೇಪಗಳಲ್ಲಿ ಪ್ರಮುಖವಾದ ಒಂದೆರಡನ್ನು ನೋಡೋಣ.

(೧) ಮೋಹನದಾಸನು ತನ್ನ ಕೇರಿಯ ಎಲ್ಲ ಹರಿಜನರೊಡನೆ ತಿರುಮಲಾಪುರದ ಪ್ರಸಿದ್ಧವಾದ ದೇವಾಲಯವನ್ನು ಪ್ರವೇಶಿಸಿದಾಗ ದೇವರ ಮಂಗಳಾರತಿಯ ಸಮಯದಲ್ಲಿ ತಲೆಸುತ್ತಿ ಬಂದು ಬೀಳುವುದು:—– ಈ ಬಗ್ಗೆ ಎಲ್. ಎಸ್ ಶೇಷಗಿರಿರಾವ್ ಅವರ ವಿಶ್ಲೇಷಣೆಯನ್ನು ಗಮನಿಸಬೇಕು. ‘ಮನೋವಿಜ್ಞಾನಿಗಳ ಪ್ರಕಾರ ತೀವ್ರವಾದ ದ್ವೇಷವು ತೀವ್ರವಾದ ಆಕರ್ಷಣೆಯ ಮತ್ತೊಂದು ರೂಪ. ನನಗೆ ತೋರುವಂತೆ ಮೋಹನದಾಸ ಮೂರ್ಛಿತನಾಗುವುದು ದೇವಾಲಯ ಪ್ರವೇಶಮಾಡಿದ ಪಾಪದಿಂದಾಗಿ ಅಲ್ಲ. ಆ ಮುಹೂರ್ತ(ಒಟ್ಟು ಸಂದರ್ಭ) ಅವನನ್ನು ತೀವ್ರವಾಗಿ ಆವರಿಸಿ ಬಿಡುವುದರಿಂದ ……… “(ಸಹಸ್ಪಂದನ ಪುಟ ೧೫೮) ಮೋಹನದಾಸನಿಗೆ ತನ್ನೂರಿನಲ್ಲಿ ಎಲ್ಲರೊಡನೆ ದೇವಸ್ಥಾನಕ್ಕೆ ಹೋಗಿ ತನ್ನ identityಯನ್ನು ಸ್ಥಾಪಿಸುವುದು ಮುಖ್ಯವಾಗಿದೆ. ಇದು ಆಕರ್ಷಣೆ. ಮತ್ತೊಂದೆಡೆ ಇಷ್ಟು ದಿನ ತನ್ನ ಜಾತಿಯವರು  ದೇವಾಲಯ ಪ್ರವೇಶಿಸಿದರೆ  ಪಾಪ ಎಂದು ಹೆದರಿಸಿ  ದೂರ ಇಟ್ಟ ಜನಗಳು , ದೇವರು ಮತ್ತು ದೇವಾಲಯದ ಬಗ್ಗೆ ದ್ವೇಷ. ಎರಡರ ಘರ್ಷಣೆ ಆತನ ಮನಸ್ಸಿನಲ್ಲಿ ನಡೆಯುತ್ತದೆ. ಇದನ್ನು ಕಾದಂಬರಿಯಲ್ಲಿ ಸಾಕಷ್ಟು ವಿವರವಾಗಿ ಹೇಳಲಾಗಿದೆ. ಶೇಷಗಿರಿರಾವ್ ಅವರು ತಮ್ಮ ವಿಶ್ಲೇಷಣೆಯನ್ನು ಮುಂದುವರಿಸುತ್ತ “…….       ಗೃಹಭಂಗ ಕಾದಂಬರಿಯಲ್ಲಿ ಬರುವ (ಬ್ರಾಹ್ಮಣರ) ಶವ ಸಂಸ್ಕಾರದ ಸನ್ನಿವೇಶದಲ್ಲಿ ಸ್ಮಶಾನದ ಹೊರಗೆ ದಕ್ಷಿಣೆಗಾಗಿ (ಬ್ರಾಹ್ಮಣ) ಮುದುಕನೊಬ್ಬ ತನ್ನ ಕೈ ಚಾಚುತ್ತಾನೆ. ಬ್ರಾಹ್ಮಣರನ್ನು ಕುರಿತು ಇಂಥ ಕಾಠಿಣ್ಯವನ್ನು ಚಿತ್ರಿಸಿದ ವ್ಯಕ್ತಿ(ಕಾದಂಬರಿಕಾರ ಭೈರಪ್ಪನವರು) ಬ್ರಾಹ್ಮಣರ ಪರ ವಕಾಲತ್ತು ವಹಿಸಲಾರ(ಅದೇ ಪುಟ ೧೫೮).

(೨) ಹರಿಜನನಾದ ಮೋಹನದಾಸನನ್ನು ಬ್ರಾಹ್ಮಣಳಾದ ಸತ್ಯಭಾಮೆಯ ಜತೆ ಮದುವೆಮಾಡಿಸಿ ಜಾತಿ ಸಮಸ್ಯೆಗೆ ಪರಿಹಾರ ನೀಡಬೇಕಾಗಿತ್ತು ಎಂಬುದು: —. ಇದನ್ನು ಸ್ವಲ್ಪ ವಿವರವಾಗಿ ಪರಿಶೀಲಿಸಬೇಕಾಗುತ್ತದೆ. ಈಗಾಗಲೇ ಅಬ್ರಾಹ್ಮಣನೊಡನೆ ಮದುವೆ ಮಾಡಿಕೊಳ್ಳುವ ಸತ್ಯಭಾಮೆಯ ಪ್ರಯತ್ನ ವಿಫಲವಾಗಿದೆ.(ಶ್ರೀನಿವಾಸನ ಜತೆಗಿನ ಮದುವೆ ಪ್ರಸ್ತಾಪದಲ್ಲಿ). ಆದರೂ ಸಹ ಆಕೆ ಮೋಹನದಾಸನೊಡನೆ ಏಕೆ ಮದುವೆಯಾಗಬಾರದು ಎಂದು ಯೋಚಿಸುತ್ತಾಳೆ. ಇಲ್ಲಿ ಆಕೆಗೆ ಜಾತಿಯ ಅಡ್ಡಗೋಡೆಯಿಲ್ಲ. ಏಕೆಂದರೆ ಇಡೀ ಊರೇ ಸತ್ಯಭಾಮೆಯನ್ನು ಬ್ರಾಹ್ಮಣಿಕೆಯನ್ನು,ಆ ಜಾತಿಯ ನಡವಳಿಕೆಗಳನ್ನು ಬೇಕೆಂದೇ ಕೈಬಿಟ್ಟಿರುವ ಹೆಂಗಸೆಂದು ತಿಳಿದುಕೊಂಡಿದ್ದಾರೆ. ಬಹಿಷ್ಕಾರದ ಪ್ರಶ್ನೆಯೂ ಇಲ್ಲ. ಈಗಾಗಲೇ ಅವಳು ಊರುಬಿಟ್ಟು ತನ್ನ ತೋಟದ ಮನೆಯಲ್ಲಿ ವಾಸಿಸುತ್ತಿದ್ದಾಳೆ. ಆದರೆ ಶ್ರೀನಿವಾಸನಿಗೂ ಮೋಹನದಾಸನಿಗೂ ಮೂಲತಃ ಸ್ವಭಾವದಲ್ಲೇ ಸಾಕಷ್ಟು ಅಂತರವಿದೆ. ಮೋಹನದಾಸನನ್ನು ತಾನು ಮದುವೆಯಾದರೆ ಅವನನ್ನು ನಾನು ತಿದ್ದಬೇಕು ಅಥವಾ ಅವನ ದಾರಿಯನ್ನು ಪೂರ್ಣವಾಗಿ ಅನುಮೊದಿಸಬೇಕು. ಅವನು ತನ್ನ ಕ್ರಾಂತಿಕಾರಿ ಸುಧಾರಣೆಯ ದಾರಿಯನ್ನು ಸ್ಪಷ್ಟವಾಗಿ ಹೇಳಿದ್ದಾನೆ. “…… ಇಷ್ಟು ದಿನ ಅವರು ನಮ್ಮ ಹೆಂಗಸರನ್ನು ಮಾಡಿದ ಹಾಗೆ ನಾವು ಅವರ ಹೆಂಗಸರನ್ನು ….. ಹೋಗಲಿ …ಸತ್ಯ,ತಪ್ಪು ತಿಳಿಕೋಬ್ಯಾಡಿ, ನಿಮ್ಮನ್ನು ನಾನು ಆ ಅರ್ಥದಲ್ಲಿ ಮೇಲಿನ ಜಾತಿಯೋರು ಅಂತ ತಿಳ್ಕೊಂಡಿಲ್ಲ ….. “(ದಾಟು ಪುಟ ೫೬೪).ಈ ತಾಮಸ ಪ್ರತೀಕಾರವಿರುವವನ ಜತೆ ಮದುವೆ ಸಾಧ್ಯವೇ? ಅವನನ್ನು ಮದುವೆ  ಆಗದಿದ್ದರೆ ತನ್ನ ವಿಚಾರದಲ್ಲಿ ಶ್ರದ್ಧೆಯಲ್ಲಿ ತಾನು ಸೋತಂತೆ ಆಗುತ್ತದಲ್ಲ. ಎಂದೂ ಆಕೆಗೆ ಅನಿಸುತ್ತದೆ. ಆಗಿನ ಸನ್ನಿವೇಶದಲ್ಲಿನ ಆಕೆಯ ಮಾನಸಿಕ ತುಮುಲವನ್ನು ನಾವು ಅರಿಯಬೇಕಾಗುತ್ತದೆ (ದಾಟು ಪುಟ ೫೬೪–೫೬೭). ಕೊನೆಗೆ ಆತನನ್ನು ವಿವಾಹವಾಗುವ ಯೋಚನೆ ಬಿಡುತ್ತಾಳೆ.

ಭೈರಪ್ಪನವರು ಮತ್ತು ದಾಟು ಪ್ರತಿಗಾಮಿ ಎಂಬ ಆಕ್ಷೇಪಗಳ  ಬಗ್ಗೆ ಡಾ।। ಅಜಕ್ಕಳ ಗಿರೀಶ್ ಭಟ್ ಅವರು “……… ಸಿದ್ದಲಿಂಗಯ್ಯನವರು ‘ಇಕ್ರಲಾ ವದೀರ್ಲಾ’ ಎಂದು ಹಾಡುವ ಮೊದಲೇ ಭೈರಪ್ಪನವರ ದಾಟುವಿನಲ್ಲಿ ‘ಮೇಲು ಜಾತಿಗೆ ಒದೀದೆ ಬುದ್ಧಿ ಬರೋದಿಲ್ಲ’ ಎಂಬ ಮಾತು ಬಂದುದು ಉಂಟು …… ಆನಂತರ ಬಂದ ದಲಿತ,ಬಂಡಾಯ ಸಾಹಿತ್ಯದ ಅಂಶಗಳನ್ನು ದಾಟು ಎದುರು ನೋಡುತ್ತಿತ್ತು ಎಂಬುದು ಅದರಲ್ಲಿರುವ ಹಲವಾರು ಅಂಶಗಳಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ” ….ಸತ್ಯಳಿಗೂ ಮೋಹನದಾಸನಿಗೂ ಮದುವೆ ಮಾಡಿಸುವಂತಹ ಸರಳ ಪರಿಹಾರಗಳನ್ನು ದಾಟು ನೀಡುವುದಿಲ್ಲ .ಎಂದು ಅಭಿಪ್ರಾಯಪಟ್ಟಿದ್ದಾರೆ (ಚಿಂತನ ಬಯಲು ಸಾಹಿತ್ಯಿಕ ತ್ರಿ ಮಾಸಿಕ ಎಪ್ರಿಲ್–ಜೂನ್ ೨೦೧೨ ಪುಟ ೬೭).

ದಾಟು ಕಾದಂಬರಿಯ  ವಸ್ತುವಾದ ಜಾತಿಯ ಸಮಸ್ಯೆ ಇಂದು ನಮ್ಮ ನಡುವೆ ಅಗಾಧವಾಗಿ ಬೆಳೆದಿದೆ. ಆದ್ದರಿಂದ ಈ ಬರಹ ಸಹ ದೀರ್ಘವಾಗಿದೆ. ಈ ಕಾದಂಬರಿಯ ಪೂರ್ತಿ ಹಿನ್ನೆಲೆ ಇಲ್ಲದ್ದಿದ್ದರೆ  ಜಾತಿಯ ವಸ್ತುವನ್ನೇ ಸ್ವಲ್ಪ ಮಟ್ಟಿಗೆ ಹೊಂದಿರುವ  ಯು ಆರ್ ಅನಂತಮೂರ್ತಿಯವರ “ಭಾರತೀಪುರ” ಕಾದಂಬರಿಯ ಜತೆ ಚರ್ಚಿಸುವುದು ಕಷ್ಟವಾಗಬಹುದು. ಹೀಗಾಗಿ ಮುಂದಿನ ಭಾಗದಲ್ಲಿ ಭಾರತೀಪುರ ಹಾಗು ದಾಟು ಕಾದಂಬರಿಗಳ  ತೌಲನಿಕ ಮಾತುಕತೆಯನ್ನು ನಡೆಸೋಣ .
(ಈ ಬರಹದಲ್ಲಿ ಬರುವ ದಾಟು ಕಾದಂಬರಿಯ ಪುಟಗಳ ಸಂಖ್ಯೆ ಎರಡನೇ ಮುದ್ರಣ ೧೯೭೮ ಮತ್ತು ಸಹಸ್ಪಂದನದ ಪುಟಗಳ ಸಂಖ್ಯೆ ಮೊದಲ ಮುದ್ರಣ ೧೯೭೮ರದ್ದು)

33 ಟಿಪ್ಪಣಿಗಳು Post a comment
  1. vidya
    ಡಿಸೆ 10 2013

    ಬೇರೆ ಜಾತಿಯವರು ದಲಿತರ ಶೋಷಣೆ ಮಾಡುವ ಬಗ್ಗೆ ಯಾರೂ ಮಾತನಾಡುವದಿಲ್ಲ ಯಾಕೆ? ದಲಿತರ ಶೋಷಣೆ ಕೇವಲ ಬ್ರಾಹ್ಮಣರಿಂದ ಮಾತ್ರವೇ ನಡಿದಿದೆ. ನಡೆಯುತ್ತಿದೆ. ಎಂಬಂತೆ ಬಿಂಬಿಸುತ್ತೀರಲ್ಲಾ ಯಾಕೆ? ಹಳ್ಳಿಗಳಲ್ಲಿ ಇನ್ನೂ ದಲಿತರ ಶೋಷಣೆ ನಿಂತಿಲ್ಲ . ಆದರೆ ಆ ಹಳ್ಳಿಗಳಲ್ಲಿ ಒಂದೂ ಬ್ರಾಹ್ಮಣ ಕುಟುಂಬಗಳಿರುವದಿಲ್ಲಾ ಆದರೂ ಗೂಬೆ ಮಾತ್ರ ಬ್ರಾಹ್ಮಣರ ಸುತ್ತ ಹೀಗೇಕೆ? ಅರ್ಥವಾಗುತ್ತಿಲ್ಲ. ಇನ್ನು ಆದಿಕಾಲಕಲ್ಲಾದರೂ ಸಹ ಬ್ರಾಹ್ಮಣರು ಕಾಡುಗಳಲ್ಲಿ ವಾಸವಾಗಿದ್ದು ಯಜ್ಞ ಯಾಗ ಮಾಡುತ್ತಾ ಇರುತ್ತಿದ್ದರು. ರಾಜರು ಊರುಗಳಲ್ಲಿ ವಾಸವಾಗಿರುತ್ತಿದ್ದರು. ಅವರ ಕೈಯಲ್ಲಿ ಅಧಿಕಾರ ಹಣ ಸೈನ್ಯ ಎಲ್ಲ ಇರುತ್ತಿತ್ತು.ಇಂಥ ರಾಜರುಗಳು ಕಾಡು ವಾಸಿ ಬ್ರಾಹ್ಮಣರ ಮಾತು ಕೇಳಿ ದಲಿತರನ್ನು ಶೋಷಣೆ ಮಾಡಿದರೆಂದು ಹೇಳುವದು ಹಾಸ್ಯಾಸ್ಪದ ಎನಿಸುತ್ತದೆ. ಇನ್ನು ಕೆಲವು ರಾಜರಂತೂ ತಾವೇ ದಲಿತರಾಗಿದ್ದರು. ಉದಾಹರಣೆಗೆ ಚಂದ್ರಗುಪ್ತ ಮೌರ್ಯ ಮೋಚಿಯಾಗಿದ್ದ. ಕರ್ನಾಟಕದ ಅನೇಕ ರಾಜ ಮಹಾರಾಜರು ಬೇಡ ಕುರುಬ ಜಾತಿಯವರಾಗಿದ್ದರು. ತಾವೂ ಶೋಷಿತರಾಗಿದ್ದರೂ ತಮ್ಮಂತೆ ಶೋಷಣೆಗೊಳಗಾದವರಿಗೆ ಅವರು ಸಹಾಯ ಮಾಡದೇ ತಾವೇ ಶೋಷಕರಾಗಿದ್ದುದು ಒಂದು ವಿಪರ್ಯಾಸವೆ. ಇದರ ಬಗ್ಗೆ ಯಾರೂ ದನಿ ಎತ್ತುವದಿಲ್ಲವೇಕೆ? ಇನ್ನು ದಲಿತರ ಕುರಿತು ಮೀಸಲಾತಿ ಕುರಿತು ಹೇಳುವವರು (ಮುಂದುವರಿದ ದಲಿತರು ) ಬಡ ಹಿಂದುಳಿದ ದಲಿತರಿಗೆ ಮೀಸಲಾತಿ ಬಿಟ್ಟು ಕೊಟ್ಟು ಅವರೂ ಮೇಲೆ ಬರಲು ಶ್ರಮಿಸುತ್ತಿಲ್ಲವೇಕೆ? ಕೇವಲ ಬ್ರಾಹ್ಮಣರ ಟೀಕೆ ಮಾಡಿದರೆ ದಲಿತರೆಲ್ಲಾ ಉದ್ಧಾರವಾಗುತ್ತಾರೆಯೆ? ಮೇಲ್ಜಾತಿಗಳ ಟೀಕೆಯನ್ನು ಬಿಟ್ಟು ಇನ್ನು ಮುಂದಾದರೂ ತಮ್ಮ ಜಾತಿ ಬಾಂಧವರಿಗೆ ತಾವು ಏನು ಮಾಡಬೇಕೆಂದು ಮುಂದುವರಿದ ದಲಿತ ಬಂಧುಗಳು ಯೋಚಿಸಬೇಕು. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಈಗಾಗಲೇ ಬ್ಯಾಂಕು ಐ.ಎ.ಎಸ್, ಐಪಿಎಸ್ ಮುಂತಾದ ಉನ್ನತ ಹುದ್ದೆಗಳಲ್ಲಿ ಇದ್ದವರು ತಮ್ಮ ಜಾತಿ ಬಾಂಧವರಿಗೆ ಉಚಿತ ಕ್ಲಾಸು ಹೇಳಿ , ಕಲಿಯಲು ಹಣಕಾಸು ಸಹಾಯ ಮಾಡಬಹುದಲ್ಲವೆ? ಹಿಂದೆ ಹಳ್ಳಿಗಳಿಂದ ನಗರಗಳಿಗೆ ಓದಲು ಬರುತ್ತಿದ್ದ ಮಕ್ಕಳಿಗೆ ಬ್ರಾಹ್ಮಣರು ವಾರಾನ್ನ ಕೊಡುತ್ತಿದ್ದರು. ದಲಿತರೂ ಹಳ್ಳಿ ಮಕ್ಕಳಿಗೆ ಇಂಥ ವ್ಯವಸ್ಥೆ ಮಾಡಿದರೆ ಹಾಸ್ಟೆಲುಗಳ ಹಂಗಿಲ್ಲದೇ ಈ ಮಕ್ಕಳೂ ಶಾಲೆ ಕಲಿಯುತ್ತಾರೆ. ಇನ್ನೂ ಅನೇಕ ಕಾರ್ಯಕ್ರಮಗಳನ್ನು ತಮ್ಮ ಜಾತಿ ಬಾಂಧವರಿಗಾಗಿ ಮೇಲು ಮಟ್ಟದ ದಲಿತರೆಲ್ಲ ಹಾಕಿಕೊಂಡು ಅವರ ಉದ್ಧಾರಕ್ಕೆ ಪ್ರಯತ್ನಿಸಬೇಕು. ಇನ್ನೊಬ್ಬರ ಟೀಕೆಯಿಂದ ಯಾರೂ ಏಳಿಗೆ ಹೊಂದುವದಿಲ್ಲ.

    ಉತ್ತರ
  2. M.A.Sriranga
    ಡಿಸೆ 10 2013

    ದಾಟು ಕಾದಂಬರಿಯಲ್ಲಿ ಕೇವಲ ಬ್ರಾಹ್ಮಣರು ದಲಿತರ ಶೋಷಣೆಮಾಡುತ್ತಿದ್ದಾರೆಂದು ಹೇಳಿಲ್ಲವಲ್ಲ. ನನ್ನ ಲೇಖನ ಆ ರೀತಿಯ ಅರ್ಥ ಬರುವಂತಿದೆಯೆ?

    ಉತ್ತರ
    • M.A.Sriranga
      ಡಿಸೆ 11 2013

      ಶ್ರೀ ಷಣ್ಮುಖ ಮತ್ತು ಶ್ರೀ ರಾಕೇಶ್ ಶೆಟ್ಟಿ ಅವರಿಗೆ- ತಾವು ಫೇಸ್ ಬುಕ್ಕಿನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದ ಬಗ್ಗೆ -ಸಾಹಿತಿಗಳು ತಮ್ಮ ಸಾಹಿತ್ಯ ಕೃತಿಗಳನ್ನು ಆಯಾ ಕಾಲಕ್ಕೆ ಚಾಲ್ತಿಯಲ್ಲಿರಬಹುದಾದ ರಾಜಕೀಯ ಪ್ರಣಾಳಿಕೆಗಳಿಗೆ,ಸಿದ್ಧಾಂತಗಳಿಗೆ ತಕ್ಕಂತೆ ಸಾಹಿತ್ಯ ರಚಿಸಿದಾಗ ಆ ರಾಜಕೀಯ ಸಿದ್ಧಾಂತ ಬಿದ್ದು ಹೋದಾಗ ಆ ಸಾಹಿತ್ಯ ಕೃತಿಯೂ ಬೆಲೆ ಕಳೆದುಕೊಳ್ಳುತ್ತದೆ. ಕನ್ನಡ ಸಾಹಿತ್ಯದಲ್ಲಿ ಇಂತಹ ಸಿದ್ಧಾಂತ ಆಧಾರಿತ ಸಾಹಿತ್ಯ ರಚನೆಯ ಕೂಗು ಒಮ್ಮೆ ಎದ್ದಿತ್ತು. ನವ್ಯ ಸಾಹಿತ್ಯದಿಂದ ಸಿಡಿದು ಹೋದ ದಲಿತ ಮತ್ತು ಬಂಡಾಯ ಸಾಹಿತ್ಯಗಳಿಗೆ ತಮ್ಮ ರಾಜಕೀಯ ಪ್ರಣಾಳಿಕೆಗಳು ಅದರ ಪ್ರಚಾರವೇ ಮುಖ್ಯವಾದ್ದರಿಂದ ಅವು ಜಾಸ್ತಿ ದಿನ ನಿಲ್ಲಲಿಲ್ಲ ಎಂಬುದು ತಮಗೆ ತಿಳಿದಿದೆ. ಇದನ್ನು ಅರಿತ ಆ ಗುಂಪಿನ ಕೆಲವು ಬರಹಗಾರರು ಆ ಸಮೂಹ ಸನ್ನಿಯಿಂದ ಹೊರ ಬಂದರು. ದಲಿತ ಕವಿ ಎಂದೇ ಹೆಸರುವಾಸಿಯಾದ ಸಿದ್ದಲಿಂಗಯ್ಯನವರು ಸುಮಾರು ಎರಡು ವರುಷಗಳ ಹಿಂದೆ ತಾವು ಇನ್ನು ಮುಂದೆ ಹಿಂದಿನ ರೀತಿಯ ಸಾಹಿತ್ಯ ರಚಿಸಲಾರೆ ಎಂದಾಗ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು.ಇನ್ನು ಭೈರಪ್ಪನವರಾಗಲಿ,ಅನಂತಮೂರ್ತಿಯವರಾಗಲೀ ಹಿಂದು ಧರ್ಮ/ರಿಲಿಜನ್ನಿನ ವಕ್ತಾರರು ಎಂದು ಹೇಳುವುದು ಬಹುಶಃ ಸರಿಯಾಗಲಾರದು. ಸಾಂಪ್ರದಾಯಿಕ ಮಹಾಭಾರತವನ್ನು ಹೊಸ ದೃಷ್ಟಿಕೋನದಿಂದ ಪುನರಚಿಸಿದ ಪರ್ವ ಕಾದಂಬರಿ ಬಗ್ಗೆ ತಮಗೆ ತಿಳಿದಿದೆ. ಇನ್ನು ಒಂದು ಕಾದಂಬರಿಯ ವಸ್ತು,ಪಾತ್ರಗಳನ್ನು ಸಮಾಜ ಶಾಸ್ತ್ರೀಯ ಸಿದ್ಧಾಂತ ನೆಲೆಯಲ್ಲಿ ಚರ್ಚಿಸಬಾರದು ಎಂಬ ಕಡ್ಡಾಯವೇನಿಲ್ಲ. ಆದರೆ ಅದರಿಂದ ಹೊರಬರುವ ನಿರ್ಣಯಗಲೇ ಅಂತಿಮ ಎಂದು ಹೇಳುವುದು ಸಾಹಿತ್ಯಿಕವಾಗಿ ಸರಿಯೆ? ಈ ಹಿಂದು ರಿಲಿಜನ್ನಿನ ಪುನರುತ್ಪಾದನೆ,ವೈದಿಕ ಸಂಸ್ಕೃತಿಯ ಹಿಡೆನ್ ಅಜೆಂಡಾದ ಆರೋಪದಿಂದ ಬೇಂದ್ರೆ, ಅಡಿಗರೂ ಪಾರಾಗಲಿಲ್ಲ ಏಕೆಂದರೆ ಅವರ ಕಾವ್ಯದಲ್ಲಿ ಪುರಾಣದ ರೂಪಕ ಮತ್ತು ಪ್ರತಿಮೆಗಳು ಇದ್ದಿದ್ದರಿಂದ. ನನ್ನ ಅಭಿಪ್ರಾಯದ ಹಿಂದಿನ ಆತಂಕ ಈ ಎಲ್ಲದರ ಮೊತ್ತ ಎಂದು ಭಾವಿಸುತ್ತೇನೆ.

      ಉತ್ತರ
  3. ಷಣ್ಮುಖ
    ಡಿಸೆ 12 2013

    [ಒಂದು ಕಾದಂಬರಿಯ ವಸ್ತು,ಪಾತ್ರಗಳನ್ನು ಸಮಾಜ ಶಾಸ್ತ್ರೀಯ ಸಿದ್ಧಾಂತ ನೆಲೆಯಲ್ಲಿ ಚರ್ಚಿಸಬಾರದು ಎಂಬ ಕಡ್ಡಾಯವೇನಿಲ್ಲ. ಆದರೆ ಅದರಿಂದ ಹೊರಬರುವ ನಿರ್ಣಯಗಲೇ ಅಂತಿಮ ಎಂದು ಹೇಳುವುದು ಸಾಹಿತ್ಯಿಕವಾಗಿ ಸರಿಯೆ?]
    ಕಾದಂಬರಿಗಳ/ಸಾಹಿತ್ಯ ಪಠ್ಯಗಳ ಸಮಾಜಶಾಸ್ತ್ರೀಯ ವಿಶ್ಲೇಷಣೆ/ವಿಮರ್ಶೆಯಿಂದ ಹೊರಬರುವ ನಿರ್ಣಯಗಳು ಅಂತಿಮ ಎಂದವರಾರು? ಇದರಲ್ಲಿ ‘ಸಾಹಿತ್ಯಿಕ’ವಾಗಿ ಸರಿಯೇ? ಎಂದರೇನೆಂದು ನನಗೆ ಅರ್ಥವಾಗಲಿಲ್ಲ. ಇದರಲ್ಲಿ ಸಾಹಿತ್ಯಕವೇನು ಬಂತು? ವೈಜ್ಞಾನಿಕ ತೀರ್ಮಾನಗಳು ಯಾವಾಗಲೂ ತಾತ್ಪೂರ್ತಿಕವಾದವುಗಳೇ.. ಅಂದರೆ ಅವು ಮುಂದಿನ ತಿದ್ದುಪಡಿಗೆ, ಬದಲವಾಣೆಗೆ ಇಲ್ಲವೇ ನಿರಾಕರಣೆಗೆ ಒಳಪಡುವಂತವೇ ಇದರಲ್ಲಿ ಸಮಾಜಶಾಸ್ತ್ರೀಯ ವಿವರಣೆಗಳೇನೂ ಹೊರತಲ್ಲ. ನಮ್ಮ ವಾದವೂ ಅದೇ ಆಗಿದೆ.
    ಆದರೆ ಇಲ್ಲಿಯ ಪ್ರಶ್ನೆ ಬೈರಪ್ಪನವರ ದಾಟುವನ್ನು ಸಾಹಿತ್ಯಕ ನೆಲೆಯಿಂದಲ್ಲದೆ ಸಮಾಜಶಾಸ್ತ್ರೀಯ ಪರಿಕರಗಳಿಂದ ವಿಮರ್ಶಿಸುವುದರ ಸಮಂಜಸತೆಯನ್ನು ತಾವು ಪ್ರಶ್ನಿಸಿದ್ದೀರಿ. ಆದರೆ ‘ಇಡೀ’ ಕಾದಂಬರಿ ಭಾರತೀಯ ಸಮಾಜದ ಕುರಿತ ಓರಿಯಂಟಲಿಸ್ಟ್ ವಿವರಣೆಗಳನ್ನು ಯತಾವತ್ತಾಗಿ ಪುನರುತ್ಪಾಧಿಸುತ್ತದೆ. ಕಾದಂಬರಿಯ ಎಲ್ಲಾ ಪಾತ್ರಗಳು ರಾತ್ರಿ-ಬೆಳಗಾದರೆ ಅವುಗಳ ಬಾಯಿಯಿಂದ ಹೊರಡುವ ಪ್ರತಿ ‘ಮಾತೂ’ ಅದರಲ್ಲೇ ಮುಳುಗಿ ಹೋಗಿದೆ. ಹೀಗಿರುವಾಗ ಇಲ್ಲಿ ‘ಸಾಹಿತ್ಯಿಕ’ ಎಂಬ ಗುರಾಣಿ ಏಕೆ?
    ಸೆನ್ಸಸ್ ಸಂಧರ್ಭದಲ್ಲಿ ಇತ್ತೀಚೆಗೆ ಕರಪತ್ರ ಹಂಚಿದ ಒಂದ fact ಮೂಲಕ ಕಾದಂಬರಿಯ ಚಿತ್ರಣವು ವಾಸ್ತವಿಕ ವಿವರಣೆ ಎನ್ನುವ ಪ್ರಯತ್ನ ಮಾಡುತ್ತೀರಿ. ಆದರೆ, ಆ ಸಂಧರ್ಭದಲ್ಲಿ ಜಾತಿಗಳ ಅಂತಸ್ತನ್ನು ನಿರ್ಣಯಿಸಲು ‘ಧರ್ಮಶಾಸ್ತ್ರಗಳ’ ಶ್ಲೋಕಗಳ ಉಧ್ದರಣೆಯ ಉಲ್ಲೇಖದ ಅಗತ್ಯತೆ ಮತ್ತು ‘ಓರ್ವ ಪುರೋಹಿತ’ ನ ಕೈಯಲ್ಲಿ ಅದರ ಸಾಧ್ಯತೆಯನ್ನು ಭೈರಪ್ಪನವರು ಚಿತ್ರಿಸುವಾಗ ‘ಯಾವ(ದೇಶ,ಕಾಲ,ಸಂಧರ್ಭದ) ಜೀವನಾನುಭವ ಇದೆ.?
    ಕಾದಂಬರಿಯ ಕಾಲಘಟ್ಟ ಮತ್ತು ವಿಮರ್ಶೆಯ ಕಾಲಘಟ್ಟದ ಪ್ರಶ್ನೆಯನ್ನು ನೀವು ಮುಂದೊತ್ತುವಾಗ ಒಂದು ಬಹುದೊಡ್ಡ ಪ್ರಮಾಧವಾಗುವುದನ್ನು ತಾವು ಗಮನಿಸಿದಂತೆ ಕಾಣುವುದಿಲ್ಲ. ಭಾರತದಲ್ಲಿ ‘ಧರ್ಮಶಾಸ್ತ್ರಾಧಾರಿತ ಸಾಮಾಜಿಕ ಜೀವನ’ವಿದೆ ಎನ್ನುವ ಓರಿಯಂಟಲಿಸ್ಟ್ ಚಿತ್ರಣ’ ಕಳೆದ ಮೂರು ಸಾವಿರಕ್ಕೂ ಹೆಚ್ಚಿನ ಭಾರತದ ಸಮಾಜಿಕ ಜೀವನಕ್ಕೆ ಸಂಬಂದಿಸಿದಂತದ್ದಾಗಿದೆ’ ಕಾದಂಬರಿಯ ಶಿಕ್ಷಿತ ಪಾತ್ರಗಳು (ಮತ್ತು ಊರ ಗೌಡ ಮತ್ತು ಪುರೋಹಿತ) ತಮ್ಮ ಮಾತುಗಳಲ್ಲಿ ಇದನ್ನು ಅನುಮೋದಿಸುತ್ತವೆ ಮತ್ತು ತಮ್ಮ ವರ್ತಮಾನದ ಜೀವನಕ್ಕೂ ಅದನ್ನು ಅನ್ವಯಿಸಿಕೊಂಡು ಒಂದುಕಡೆ ಅದರ ಪ್ರತಿಭಟನೆ ಮತ್ತೊಂದೆಡೆಯಿಂದ ಮುಂದವರಿಕೆಗೆ ಚಡಪಡಿಸುತ್ತವೆ. ಹೀಗಿರುವಾಗ ಇಂದಿನ ಕಾಲಘಟ್ಟದ ಸಮಾಜಶಾಸ್ತ್ರೀಯ ನೆಲೆಯಿಂದ ಅಂದಿನ ಸಾಹಿತ್ಯಿಕ ಕೃತಿಯನ್ನು ವಿಮರ್ಶಿಸುವುದು ಅಸಮಂಜಸ ಎನ್ನವಾಗ (ಸಂಚಯದಲ್ಲಿ ಸಂಸ್ಕಾರದ ಕುರಿತ ವಿಮರ್ಶೆಗೂ ಇದೇ ಪ್ರಶ್ನೆಯನ್ನೆತ್ತಿದ್ದಿರಿ) ಮಾಡುತ್ತಿರುವ ಪ್ರಮಾದವೇನು ಗೊತ್ತೆ. ‘ಮೂರು ಸಾವಿರಕ್ಕೂ ಹೆಚ್ಚು ಕಾಲ ಮುಂದುವರಿದುಕೊಂಡು ಬಂದ ಒಂದು ನಿರ್ಧಿಷ್ಟ ರೀತಿಯ ಜೀವನ ವಿಧಾನ 40-50 ವರ್ಷಗಳಲ್ಲಿ ಬದಲವಾಣೆಗೊಂಡು ಬಿಟ್ಟಿದೆ’ ಎನ್ನುವ ಕಲ್ಪನೆಯನ್ನು ಸೃಷ್ಟಿಸಿಬಿಡುತ್ತದೆ. ಈ ರೀತಿಯ ನಿಲುವಗಳು implication ಗಳನ್ನು ಸ್ವಲ್ಪ ತಾವೇ ಯೋಚಿಸಿ. ಏನೇನು ಪ್ರಮಾಧವಾಗುತ್ತದೆ ಎನ್ನುವುದು ತಮಗೇ ಮನದಟ್ಟಾಗುತ್ತದೆ.

    ಕೊನೆಯದಾಗಿ, ನಿಮ್ಮ ಮೇಲಿನ ವಿಮರ್ಶೆಯಲ್ಲಿ ‘ಸಾಹಿತ್ಯಿಕ’ವಾದದ್ದೇನಿದೆ? ಬರೆದಿರುವ ಪ್ರತಿ ವಾಕ್ಯವೂ ಸಮಾಜಶಾಸ್ತ್ರೀಯ ವಿಚಾರಗಳನ್ನೇ ಒಳಗೊಂಡಿದೆ. ನನ್ನ ತಿಳುವಳಿಕೆಯ ಒಳಗೆ ಹೇಳುವುದಾದರೆ, ಜಾತಿಯ ಬಗ್ಗೆ ಇದುವರೆಗೂ ಇರುವ ನಿಲುವು, ಒಲವು, ಪ್ರತಿಭಟನೆ, ವಿಮರ್ಶೆ, ಎಲ್ಲವೂ ಸಮಾಜ ವಿಜ್ಞಾನಗಳ ವಿವರಣೆಗಳನ್ನೇ ಆದರಿಸಿದೆ. ಹಾಗಿರುವಾಗ, ಇದರಲ್ಲಿ ಸಾಹಿತ್ಯಿಕವಾದದ್ದೇನು? ದಯವಿಟ್ಟು ಹೇಳಿ, ಜಾತಿಯ ಬಗ್ಗೆ (ಸಮಾಜವಿಜ್ಞಾನದ ವಿವರಣೆಗಳಿಂದ ಹೊರತಾದ) ಸಾಹಿತ್ಯಿಕ ವಿವರಣೆ ಹೇಗಿರುತ್ತದೆ ಎನ್ನುವ ಕುತೂಹಲ ನನಗಿದೆ.

    ಉತ್ತರ
    • ಷಣ್ಮುಖ
      ಡಿಸೆ 12 2013

      ತಿದ್ದುಪಡಿ: ‘ಮೂರ ಸಾವಿರಕ್ಕೂ’ ಎನ್ನುವುದನ್ನು “ಮೂರಸಾವಿರ ವರ್ಷಕ್ಕೂ” ಎಂದು ಓದಿಕೊಳ್ಳಿ…

      ಉತ್ತರ
  4. M.A.Sriranga
    ಡಿಸೆ 12 2013

    ಶ್ರೀ ಷಣ್ಮುಖ ಅವರಿಗೆ–
    (೧) ದಾಟು ಕಾದಂಬರಿಯ ಎಲ್ಲಾ ಪಾತ್ರಗಳ,ಕ್ರಿಯೆಗಳು,ಸಂಭಾಷಣೆಗಳು ಜಾಸ್ತಿಯಾಗಿ ಜಾತಿಯ ಸುತ್ತ-ಮುತ್ತಲೇ ಇರುವುದಕ್ಕೆ ಆ ಕಾದಂಬರಿಯ ವಸ್ತುವೇ ಜಾತಿ ಸಮಸ್ಯೆಯಾಗಿರುವುದು;ಜತೆಗೆ ಕಾದಂಬರಿಕಾರರು ಕೃತಿಯ ವಸ್ತುವಿಗೆ ನಿಷ್ಠವಾಗಿರಬೇಕಾಗಿರುವುದು ಅವರ ಪ್ರಾಥಮಿಕ ಅಗತ್ಯ ಎಂದು ನನ್ನ ಅಭಿಪ್ರಾಯ. ಒಂದು ವಸ್ತುವಿನ,ವಿಷಯದ ಹಂಗಿಲ್ಲದೆ ತನ್ನ ಲಹರಿ ಹರಿದಂತೆ ಬರೆದಾಗ ಅದು ಲಲಿತ ಪ್ರಬಂಧವಾಗುತ್ತದೆ.ಸಾಹಿತ್ಯದಲ್ಲಿ ಲಲಿತ ಪ್ರಬಂಧಕ್ಕೂ ಒಂದು ಸ್ಥಾನವಿದೆ.ಅದನ್ನು ನಾನು ಮರೆತಿಲ್ಲ.
    (೨) ದಾಟುವಿನಲ್ಲಿನ ಜಾತಿಗಳ ಚಿತ್ರಣ ಧರ್ಮಶಾಸ್ತ್ರಗಳ ರೀತಿಯಲ್ಲಿರಲಿ ಅಥವಾ ಓರಿಯಂಟಲಿಸ್ಟ್ ಮಾದರಿಯದ್ದಾಗಿರಲಿ ಅಂತಹ ಜಾತಿಯ ಸಮಸ್ಯೆಯ ನಿರಾಕರಣೆ ಅಲ್ಲಿಲ್ಲ;ಬದಲಾಗಿ ಅದನ್ನು “ದಾಟು”ವ ಬಗೆ ಹೇಗೆ ಎಂಬ ಪ್ರಯತ್ನಗಳು ಅಸಹಜವಾಗಿ/ಕೃತಕವಾಗಿ ಚಿತ್ರಿತವಾಗಿದೆಯೆ ಎಂಬುದಷ್ಟೇ ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ಮುಖ್ಯ ಅಲ್ಲವೆ? ನಮ್ಮ ಪಕ್ಕದ ಆಂಧ್ರದಲ್ಲಿ,ಉತ್ತರದ ರಾಜ್ಯಗಳಲ್ಲಿ ಪಟೇಲ್ ತಿರುಮಲೇಗೌಡನಂತಹ ದರ್ಪ,ದಬ್ಬಾಳಿಕೆ ನಡೆಸುವವರು ಈಗಲೂ ಇಲ್ಲವೆ? ಒಂದು ಸಾಹಿತ್ಯ ಕೃತಿಗೆ ಬೇಕಾಗಿರುವುದು ಆ ಸತ್ಯ ಮತ್ತು ಸಂಗತಿ. ಅದನ್ನು ಹೇಗೆ ಒಬ್ಬ ಸಾಹಿತಿ ತನ್ನ ಕೃತಿಯಲ್ಲಿ ನಿರ್ವಹಿಸಿದ್ದಾನೆ ಎಂಬುದರ ಮೇಲೆ ಆ ಕೃತಿಯ ಶಕ್ತಿ ಮತ್ತು ದೌರ್ಬಲ್ಯಗಳು ನಿರ್ಧಾರವಾಗುತ್ತದೆ ಎಂದು ನಾನು ನಂಬಿದ್ದೇನೆ.
    (೩)ಜನಗಣತಿ ಸಂದರ್ಭದ ಕರಪತ್ರದ ಸನ್ನಿವೇಶದ ಬಗ್ಗೆ– ಸತ್ಯಭಾಮೆಯ ಅಣ್ಣ ವೆಂಕಟೇಶನ ವ್ಯಕ್ತಿಚಿತ್ರಣ ನನ್ನ ಲೇಖನದಲ್ಲಿ ನಾನು ಮಾಡಿಲ್ಲ. ಏಕೆಂದರೆ ಆ ಲೇಖನದ ಉದ್ದೇಶಕ್ಕೆ ಅದು ಬೇಡವಾಗಿತ್ತು. ಈ ಸನ್ನಿವೇಶದಲ್ಲಿ ಸತ್ಯಭಾಮೆ ಮತ್ತು ವೆಂಕಟೇಶನ ನಡುವೆ ನಡೆಯುವ ಒಂದು ಸಂಭಾಷಣೆ ಹೀಗಿದೆ:–ಸತ್ಯಭಾಮೆ:-ದುಡ್ಡು ತಗಂಡು ಸುಳ್ಳು ಸಾಕ್ಶಿ ಹೇಳೂ ಕೀಳು ಕೆಲಸ ಯಾಕೆ ಮಾಡ್ತೀಯಾ?
    ವೆಂಕಟೇಶ:-ದುಡ್ಡೇನು ಪುಕಸಟ್ಟೆ ಕೊಡ್ತಾರೇನು? ಬಡ ಬ್ರಾಹ್ಮಣನಾಗಿದ್ದರೆ ಒಂದು ರೂಪಾಯಿ ಕೊಡ್ತಿರಲಿಲ್ಲ. ನಾನು ಬರೀ ಗ್ರಾಮ ಪುರೋಹಿತ ಅಲ್ಲ. ಅನುಕೂಲವಾಗಿದೀನಿ,ರಾಜಕೀಯ ಮಾಡ್ತೀನಿ. ಸುತ್ತ ಊರಲ್ಲಿ ನನ್ನ ಮಾತು ನಡೆಯುತ್ತೆ. ಅದರಿಂದಲೇ ನಾಡದ್ದಿನ ಸಭೇಲಿ ನನ್ನ ಬಾಯಿಂದ ಬಂದ ಮಾತು ಶಂಖದಿಂದ ಬಿದ್ದ ನೀರಾಗುತ್ತೆ.(ದಾಟು ಪುಟ ೩೮೫)
    ಸತ್ಯಭಾಮೆ ನಾನು ಆ ಸಭೆಗೆ ಬಂದು ಇದೆಲ್ಲಾ ಸುಳ್ಳು ಎಂದು ಹೇಳುತ್ತೇನೆ ಅಂದಾಗ…
    ವೆಂಕಟೇಶ:- ಇದು ಸುಳ್ಳು ಅಂತ ನೀನೇನು ಹೇಳೂದು!ಅದು ಎಲ್ಲರಿಗೂ ಗೊತ್ತಿದೆ. ಆದರೆ ಸುಳ್ಳೇ ಎಲ್ಲರಿಗೂ ಮಂತ್ರೋಕ್ತ ಬೇಕಾಗಿದೆ
    …….(ದಾಟು ಪುಟ ೩೮೮)
    ಕಾದಂಬರಿಯಲ್ಲಿ ವೆಂಕಟೇಶ ಮಾಡಿದ ಕೆಲಸವನ್ನು ಇಂದು ಅಯಾ ಜಾತಿ/ಉಪ ಜಾತಿ/ಪಂಗಡದ ಹಿರಿ-ಕಿರಿ ಸ್ವಾಮೀಜಿಗಳು ಮಾಡುತ್ತಿದ್ದಾರೆ
    (೪) ಜಾತಿಯ ಸಮಸ್ಯೆಗಳು ಕಳೆದ ೪೦-೫೦ ವರ್ಷಗಳಲ್ಲಿ ಬೆರಗುಗೊಳಿಸುವಷ್ಟು ಬದಲಾವಣೆ/ನಿವಾರಣೆ ಆಗಿದೆ ಎಂದು ನಾನು ಹೇಳಲಾರೆ. ಆದರೆ ಸ್ವಲ್ಪವೂ ಬದಲಾಗಿಯೇ ಇಲ್ಲ ಎಂದೂ ಸಹ ಹೇಳಲಾರೆ. ಏಕೆಂದರೆ ಈ ನನ್ನ ಅರವತ್ತು ವರ್ಷಗಳ ಅನುಭವವನ್ನು ನಾನು ನಿರಾಕರಿಸುವುದು ಅಸಹಜವಾಗುತ್ತದೆ. ಅಲ್ಲವೆ?
    .
    .

    ಉತ್ತರ
    • ಷಣ್ಮುಖ
      ಡಿಸೆ 13 2013

      1. ಕಾದಂಬರಿ ಜಾತಿಯ ಸುತ್ತಲೇ ಏಕಿಕದೆ ಎನ್ನುವುದು ನನ್ನ ಪ್ರಶ್ನೆಯಲ್ಲವಲ್ಲ. ಜಾತಿ/ಜಾತಿವ್ಯವಸ್ಥೆ ಯ ಕುರಿತ ಈ ಕಾದಂಬರಿಯ ಗ್ರಹಿಕೆ ವಸಾಹತುಶಾಹಿ ಚಿತ್ರಣಗಳನ್ನೇ ಪುನರುತ್ಪಾಧಿಸುತ್ತದೆಯೇ ವಿನಃ ವಾಸ್ತವದಲ್ಲಿರುವುದನ್ನಲ್ಲ ಎನ್ನುವುದು ನನ್ನ ತಕರಾರು.

      2. [ಜಾತಿಗಳ ಚಿತ್ರಣ ಧರ್ಮಶಾಸ್ತ್ರಗಳ ರೀತಿಯಲ್ಲಿರಲಿ ಅಥವಾ ಓರಿಯಂಟಲಿಸ್ಟ್ ಮಾದರಿಯದ್ದಾಗಿರಲಿ] ಮೊದಲಿಗೆ ಎತ್ತಿರುವ ಆಕ್ಷೇಪಗಳನ್ನು ಸರಿಯಾಗಿ ಗ್ರಹಿಸಬೇಕೆಂದು ವಿನಂತಿಸುತ್ತೇನೆ. ಜಾತಿಗಳ ಅಸ್ತಿತ್ವ ಮತ್ತು ವಿಭಿನ್ನ ಜಾತಿಗಳ ನಡುವಣ ಸಂಬಂದಗಳು ಮತ್ತು ಅವುಗಳ ಅಂತಸ್ತುಗಳ ನಿರ್ಧಾರ ಧರ್ಮಶಾಸ್ತ್ರಗಳನ್ನಾದರಿಸಿದೆ ಎನ್ನುವುದು ಓರಿಯಂಟಿಲಿಸಂ ನ ಗ್ರಹಿಕೆ ವಾಸ್ತವವಲ್ಲ. (ನಾವೂ ಕರ್ನಾಟಕದಾದ್ಯಂತ ಕ್ಷೇತ್ರಕಾರ್ಯಗಳ ಮೂಲಕ ದುರ್ಬೀನು ಹಾಕಿ ಹುಡುಕಿದರೂ ಇದಕ್ಕೆ ಪುರಾವೆ ಸಿಗುವುದಿಲ್ಲ.) ಹೀಗಿರುವಾಗ ಸಮಸ್ಯೆಯ ಸ್ವರೂಪವನ್ನೇ ತಪ್ಪಾಗಿ ಗ್ರಹಿಸಿರುವಾಗ ‘ದಾಟು’ ಇಲ್ಲದೇ ಇರುವ ಸಮಸ್ಯೆಯನ್ನು ಊಹಿಸಿಕೊಂಡಿದೆ ಅದನ್ನು ‘ದಾಟು’ವುದು ನಗೆಪಾಟೀಲಾಗುತ್ತದೆ ಅಷ್ಟೇ. ನಾನು ಜಾತಿ ಜಾತಿಗಳ ನಡುವ ಸಮಸ್ಯೆಗಳೇ ಇಲ್ಲವೇ ಎನ್ನುತ್ತಿಲ್ಲ. ಬದಲಿಗೆ ಕಾದಂಬರಿಯಲ್ಲಿ ಕಲ್ಪಿಸಿಕೊಂಡಿರುವ ಜಾತಿ ಸಮಸ್ಯೆಗಳು ಪುರಾಣ, ಧರ್ಮಶಾಸ್ತ್ರ ಬ್ರಾಹ್ಮಣಶಾಹಿಗಳಿಗೆ ಗಂಟು ಹಾಕಿ ಸೃಷ್ಟಿಸಿಕೊಂಡಿರುವ ಜಾತಿಯ ಸಮಸ್ಯೆಗಳ ಚಿತ್ರಣ ಓರಿಯಂಟಲಿಸಂನ ಗ್ರಹಿಕೆಯಿಂದ ಎರವಲು ಪಡಕೊಂಡವು. (ಪಕ್ಕದ ಆಂದ್ರ ಮತ್ತು ದೂರದ ಉತ್ತರ ಭಾರತಕ್ಕೆ ಏಕೆ ಹೋಗುತ್ತೀರಿ? ಕರ್ನಾಟಕದಲ್ಲಿ ಜಾತಿಗಳಿಲ್ಲವೇ ಮತ್ತು ಇದು ಭಾರತದ ಸಮಾಜದ ಅಂಗವಾಗಿಲ್ಲವೇ? ಇಲ್ಲಿಯ ಉಧಾಹರಣೆಗಳನ್ನೇ ಕೊಡಿ ಪರಿಶೀಲಿಸುವ )

      3. ನನ್ನ ಆಕ್ಷೇಪಕ್ಕೆ ನೀವು ಉಲ್ಲೇಖಿಸಿರುವ ಕಾದಂಬರಿಯ ಘಟನೆ ಹೇಗೆ ಉತ್ತರವಾಗುತ್ತದೆ ಎಂದು ಅರ್ಥವಾಗಲಿಲ್ಲ, ಕ್ಷಮಿಸಿ.
      ಬದಲಿಗೆ, ಈ ಘಟನೆಯೇ ನನ್ನ ಆಕ್ಷೇಪಕ್ಕೆ ಆಧಾರ. ಅಂದರೆ ಇದೊಂದು ಹಳ್ಳಿಗಳಲ್ಲಿ ನಡೆಯಲು ಸಾಧ್ಯವಿಲ್ಲದ ಘಟನೆ. ಇದು ನಿಜವಿದ್ದ ಪಕ್ಷದಲ್ಲಿ ಭಾರತದಾದ್ಯಂತ ಹೀಗೆಯೇ ಪುರೋಹಿತನಿಂದ ಎಲ್ಲಾ ಜಾತಿಗಳವರೂ ತಮ್ಮ ತಮ್ಮ ಜಾತಿಗಳ ಅಂತಸ್ತನ್ನು ನಿಗಧಿ ಮಾಡಿಕೊಳ್ಳಲು ಸಾಲುಗಟ್ಟಿ ನಿಂತು ಜೋತುಬೀಳುತ್ತಿದ್ದಲ್ಲಿ (ಅದು ಹಿಂದೆಯಾದರೂ ಸರಿ; ಈಗಲಾದರೂ ಸರಿ) ಇವರಿಗಿಂತ ಮೂರ್ಖರೂ ಮುಠ್ಠಾಳರೂ ಈ ಜಗತ್ತಿನಲ್ಲೇ ಯಾರೂ ಇರಲು ಸಾಧ್ಯವಿಲ್ಲ. ಅದನ್ನೇ ವಸಾಹತು ದೊರೆಗಳು ಹೇಳಿದ್ದು ಕೂಡ. ಬೈರಪ್ಪನವರು ಅದನ್ನೇ ಚಿತ್ರಿಸಿದರೆ ಅದರ್ಥವೇನು? ಇದನ್ನೇ ಈ ರೀತಿಯ ನಿಲುವುಗಳ implications ಗಳನ್ನು ಊಹಿಸಿ ಎಂದದ್ದು.

      [ಕಾದಂಬರಿಯಲ್ಲಿ ವೆಂಕಟೇಶ ಮಾಡಿದ ಕೆಲಸವನ್ನು ಇಂದು ಅಯಾ ಜಾತಿ/ಉಪ ಜಾತಿ/ಪಂಗಡದ ಹಿರಿ-ಕಿರಿ ಸ್ವಾಮೀಜಿಗಳು ಮಾಡುತ್ತಿದ್ದಾರೆ] ಅಂದರೆ ಇಂದಿಗೂ ಜಾತಿಯ ಅಂತಸ್ತುಗಳನ್ನು ಧರ್ಮಶಾಸ್ತ್ರಗಳನ್ನು ತಿರುಚುವ/ಬರೆಯುವ/ಸೇರಿಸುವ ಮೂಲಕ ಆಯಾ ಜಾತಿಗಳ ಹಿರಿ/ಕಿರಿ ಸ್ವಾಮೀಜಿಗಳು ಮಾಡುತ್ತಿದ್ದಾರೆ!! ಹೌದಾ?

      4. ನಾವು ಈ ಸಮಾಜದಲ್ಲಿ ಏನೇನೂ ಬದಲವಾಣೆಗಳಾಗುತ್ತಿಲ್ಲ ಎಂದೇನಾದರೂ ಹೇಳಿದೆನೆ. (ಸ್ವಲ್ಪ http://cslcku.wordpress.com/ ನಲ್ಲಿ ಬರೆಯುತ್ತಿರುವ ಲೇಖನಗಳನ್ನೂ ಓದಿ) ಮೂರು ಸಾವಿರ ವರ್ಷಗಳಿಂದ ಏನೂ ಬದಲಾವಣೆಗಳಾಗಲಿಲ್ಲ ಎನ್ನುವದು ಓರಿಯಂಟಲಿಸ್ಟರ ಮತ್ತು ಇಂದಿನ ಎಡ-ಬಲ ಚಿಂತಕರೆಲ್ಲರ (ಬೈರಪ್ಪನವರೂ ಸೇರಿ) ನಿಲುವು ನಮ್ಮದಲ್ಲ. (ಭಾರತೀಯ ಸಮಾಜ ಸಂಪ್ರಾದಾಯವನ್ನಾದರಿಸಿದೆ; ಸಂಪ್ರದಾಯಗಳ ಸ್ವರೂಪವೇ ನಿರಂತರ ಬದಲಾಣೆಯಾಗುತ್ತಿರುವುದರಿಂದ ಅದನ್ನಾದರಿಸಿರುವ ಭಾರತೀಯ ಸಮಾಜವೂ ನಿರಂತರ ಬದಲವಾಣೆಗಳಾಗುತ್ತಿರಲೇ ಬೇಕು ಹಾಗಾಗಿ ಕಳೆದು 40-50 ವರ್ಷಗಳಿಂದ ಮಾತ್ರವಲ್ಲ ಸಾವಿರಾರು ವರ್ಷಗಳಿಂದಲೂ ನಿರತಂರವಾಗಿ ಬದಲಾಗುತ್ತಲೇ ಇದೆ ಎನ್ನುವುದು ನಮ್ಮ ನಿಲುವು. -ಸದ್ಯಕ್ಕೆ ಇದು ಪಕ್ಕಕ್ಕಿರಲಿ) ಮೂರು ಸಾವಿರವರ್ಷಗಳಿಂದ ನಿಂತು ನೀರಾಗಿ ಕೊಳೆತು ನಾರುತ್ತಿದ್ದ ಭಾರತೀಯ ಸಮಾಜ ವಿಲಾಯಿತಿ ಶಿಕ್ಷಣ ಮತ್ತು ನಾಗರೀಕತೆಯ ಪ್ರವೇಶ ಚಲನೆ-ಪರವರ್ತನೆಯನ್ನುಂಟು ಮಾಡುತ್ತಿದೆ ಎನ್ನುವುದು ಓರಿಯಂಟಲಿಸ್ಟ್ ಪ್ರಭಾವಿತ ಚಿಂತಕರ ನಿಲುವು… ಬೈರಪ್ಪನವರೊಂದಿಗೆ ತಾವೂ ಕೂಡ ತಮ್ಮ ಅನುಭವದ ಪ್ರಮಾಣವನ್ನು ಮುಂದೊತ್ತಿ ಸಮರ್ಥಿಸುತ್ತಿದ್ದೀರಿ… ಇದು ನಾನು(ವು) ವೈಥೆಪಡುತ್ತಿರುವ ದುರಂತ!!!
      ಹಾಗಾಗಿ ಅನಂತ ಮೂರ್ತಿಯಷ್ಟೇ ಬೈರಪ್ಪನಂತ ಲೇಖಕರೂ ಸಹ ಭಾರತದ ಬಗ್ಗೆ ಹೆಮ್ಮೆ ಪಡುವಂತದ್ದೇನನ್ನೂ ಹೇಳುವುದಿಲ್ಲ ಬದಲಿಗೆ ಭಾರತದ ಬಗೆಗಿನ ರೊಮ್ಯಾಂಟಿಸ್ಟರ ಕೆಲವು ಸುಕೋಮಲ ಚಿತ್ರಣಗಳಿಗೆ (ಇದನ್ನು ನೋಡಿ: http://goo.gl/BlJUfs) ಮರುಳಾಗಿರುವುದನ್ನು ಬಿಟ್ಟರೆ ಉಳಿದಂತೆ ಅವರೂ ಸಹ ಪಾಶ್ಚಾತ್ಯ ಚಿತ್ರಣಗಳನ್ನೇ ಇಲ್ಲಿಯ ಕಥನವಾಗಿಸಿದ್ದಾರೆಯೇ ವಿನಃ ವಾಸ್ತವವನ್ನಲ್ಲ.

      ಉತ್ತರ
  5. vidya
    ಡಿಸೆ 12 2013

    ಆತ್ಮೀಯ ಶ್ರೀರಂಗ ಅವರೆ ನಾನು ನಿಮ್ಮ ಲೇಖನಕ್ಕೆ ನೇರವಾಗಿ ಈ ಪ್ರತಿಕ್ರೀಯೆ ಬರೆದಿಲ್ಲ ಆದರೆ ಇತ್ತೀಚೆಗೆ ಕೆಲವು ಪತ್ರಿಕೆಗಳಲ್ಲಿ ಇಂಥ ಧ್ವನಿ ಇರುವ ಲೇಖನಗಳೇ ಬರುತ್ತಿವೆ ಉಧಾಹರಣೆಗೆ ಕೆಳಗಿನ ಲೇಖನ ಓದಿ.
    ಕೇವಲ ಬ್ರಾಹ್ಮಣರ ಟೀಕೆಗೆ ಮಾತ್ರ ಮೀಸಲೇ ಈ ಪತ್ರಿಕೆ?
    ನವ್ಹಂಬರ್ 18 ನೇ ತಾರೀಖಿನಿಂದ ಇವತ್ತಿನ ವರೆಗೆ ವಾತಾ೯ಭಾರತಿ ಪತ್ರಿಕೆಯಲ್ಲಿನ ಅಂಕಣಗಳನ್ನು ನಾನು ಓದುತ್ತಿದ್ದೇನೆ. ಸುಮಾರು ನಾಲ್ಕೈದು ಅಂಕಣಗಳು ಕಾರಣವಿಲ್ಲದೇ ಬ್ರಾಹ್ಮಣರ ಟೀಕೆಯನ್ನು ಮಾಡಿವೆ. ಯಾಕೆ ಹೀಗೆ ಇವರೆಲ್ಲ ಕಾರಣವಿಲ್ಲದೇ ಬ್ರಾಹ್ಮಣರನ್ನು ಹುರಿದು ಮುಕ್ಕುತ್ತಿದ್ದಾರೆ ? ಮನನೊಂದು ಈ ಲೇಖನ ಬರೆಯುತ್ತಿದ್ದೇನೆ.
    ಯಾವ ಲೇಖನಗಳಲ್ಲಿ ಬ್ರಾಹ್ಮಣರನ್ನು ಎಳೆದು ತರುವ ಅವಶ್ಯಕತೆಯೇ ಇಲ್ಲವೋ ಅಲ್ಲೆಲ್ಲ ವಿನಾಕಾರಣ ಬ್ರಾಹ್ಮಣರನ್ನು ಎಳೆದು ತಂದು ಗೂಬೆ ಕೂರಿಸಿದ್ದಾರೆ . ಕೆಳಗಿನ ಉಧಾಹರಣೆಗಳಿಂದ ನೀವಿದನ್ನು ತಿಳಿಯಬಹುದು.
    1) ವಿಜಯಾ ಮಹೇಶ್ ಎಂಬುವವರು ‘ ರಾಜ ಕನಕನಾಯಕ ಕನಕದಾಸನಾದ ಕಥೆ’ ಎಂಬ ಅಂಕಣದಲ್ಲಿ ಕನಕದಾಸರ ಕೃತಿಗಳ ಬಗ್ಗೆ ವಿಮಶಾ೯ತ್ಮಕವಾಗಿ ಬರೆಯಬಹುದಿತ್ತು. ಆ ಮೂಲಕ ಕನಕರ ಕೆಲವು ಕೃತಿಗಳ ಬಗ್ಗೆ ಸಾಮಾನ್ಯ ಜನತೆಗೆ ವಿಷಯ ತಿಳಿಯುತ್ತಿತ್ತು. ಹೆಚ್ಚಿನ ಜನ ಕನಕರ ಕೃತಿಯಾದ ‘ರಾಮಧಾನ್ಯ ಚರಿತೆ’ಯನ್ನು ‘ರಾಮಧ್ಯಾನ ಚರಿತೆ’ ಎಂದು ತಪ್ಪಾಗಿ ಓದುತ್ತಾರೆ. ಇನ್ನು ಈ ಕೃತಿಗೆ ಅಷ್ಟಾಗಿ ವಿಮಶೆ೯ ಬಂದಿಲ್ಲವೆಂದು ಓದುಗ ವಲಯದಲ್ಲಿ ಅಪಸ್ವರವಿದೆ. ಈ ಎಲ್ಲವನ್ನು ಲೇಖಕಿ ಈ ಅಂಕಣದಲ್ಲಿ ವಿಮಶಿ೯ಸಬಹುದಿತ್ತು. ಆದರೆ ಇವರು ತಮ್ಮ ಲೇಖನವನ್ನು ಕನಕರ ಕೃತಿ ವಿಮಶೆ೯ಗೆ ಅಥವಾ ಅವರ ಜೀವನ ವಿಮಶೆ೯ಗೆ ಮೀಸಲಿಡದೇ ಕೇವಲ ಬ್ರಾಹ್ಮಣರ ಟೀಕೆಗೆ ಮೀಸಲಾಗಿರಿಸಿದ್ದಾರೆ. ಅವರು ಹೇಳುತ್ತಾರೆ ; ಕೃಷ್ಣದೇವರಾಯನ ಒಂದು ಯುದ್ಧದಲ್ಲಿ ಕನಕರ ಅಪಾರ ಶ್ರಮದಿಂದ ಸೋಲುವ ಹಂತದಲ್ಲಿದ್ದ ರಾಯ ಗೆಲುವು ಸಾಧಿಸಿದನಂತೆ.ಗೆಲುವಿನ ಸುದ್ದಿ ಕೇಳಿದ ವ್ಯಾಸರಾಯರು ಕನಕನನ್ನು ಯಾವುದೇ ರೀತಿಯಿಂದ ಗೌರವಿಸದೇ ಇತ್ತ ಕೃಷ್ಣದೇವರಾಯನೂ ಗೌರವಿಸದೆ ಕನಕರು ಬುದ್ಧಿಭ್ರಮಣರಾದರಂತೆ. “ಸನಾತನಿಗಳು ಕನಕನಿಗೆ ಉಡುಪಿಯ ಮಠದಲ್ಲಗಲೀ ಇನ್ನಾವುದೇ ದೇವಾಲಯದಲ್ಲಾಗಲೀ ಸಿಗಬೇಕಾದ ಗೌರವ ಸ್ಥಾನ ಮಾನಗಳು ಸಿಗದಂತೆ ಮಾಡಿದರು. ಅತ್ತ ಕನಕರು ಒಂದು ಜಾತಿ ಜನಾಂಗಕ್ಕೆ ಏನೂ ಸಹಾಯ ಮಾಡದಂತೆ ಇತ್ತ ಬ್ರಾಹ್ಮಣ ಸಮುದಾಯದಲ್ಲೂ ಗೌರವ ಸಿಗದಂತೆ ಮಾಡಿದರು.” ಎಂದು ಹೇಳುತ್ತಾರೆ. ಮುಂದುವರಿದು ಅವರು ಹೇಳುತ್ತಾರೆ.”ಕನಕನಾಯಕನೆಂಬ ಯುದ್ಧಕಲಿಯನ್ನು ದಕ್ಷ ಆಡಳಿತಗಾರನನ್ನು ಮಾನಸಿಕವಾಗಿ ಅಧ್ವಾನ ಮಾಡಿದರು.ಆಳುವ ಕನಕನಾಯಕನನ್ನು ಬಿಕ್ಷೆ ಬೇಡುವ ಕನಕನನ್ನಾಗಿಸಿದರು.”ಎಂದು ಬರೆದಿದ್ದಾರೆ. ಕನಕದಾಸರು ಬಿಕ್ಷುಕರಾಗಿದ್ದರೆ ಬಾಡದಲ್ಲಿ ಕಾಗಿನೆಲೆಯಲ್ಲಿ ದೇವಸ್ಥಾನಗಳನ್ನು ಹೇಗೆ ಕಟ್ಟಿಸುತ್ತಿದ್ದರು? ಅವರು ಮಾನಸಿಕವಾಗಿ ಅಧ್ವಾನಿಗಳಾಗಿದ್ದರೆ ‘ನಳಚರಿತ್ರೆ, ‘ಮೋಹನತರಂಗಿಣಿ, ‘ರಾಮಧಾನ್ಯ ಚರಿತೆ’, ಯಂಥ ಅದ್ಭುತ ಕೃತಿಗಳು ಅವರಿಂದ ಹೇಗೆ ಹೊರಬರುತ್ತಿದ್ದವು? ಮನಸ್ಥಿಮಿತವಿಲ್ಲದ ವ್ಯಕ್ತಿ ಅದ್ಬುತವಾದ ಕೀರ್ತನೆಗಳನ್ನು ರಚಿಸಲು ಸಾಧ್ಯವಿದೆಯೆ? ವಿಜಯಾ ಅವರು ಕನಕರ ಕೃಷ್ಣ ಭಕ್ತಿಯನ್ನೆ ಹುಚ್ಚುತನದ್ದು, ಮತಿಬ್ರಮಣೆಯದ್ದು ಎಂದು ಹೇಳಿ ಕನಕರನ್ನು ತಾವೇ ಅವಮಾನಿಸಿದ್ದಾರೆ.
    ಶ್ರೀ ವ್ಯಾಸರಾಯರು ಕನಕರಿಗೆ ಏನೋ ಮೋಡಿ ಮಾಡಿ ಅಥವಾ ಹೆದರಿಸಿ ಇಲ್ಲವೇ ಮತಿಹೀನನನ್ನಾಗಿಸಿ ಅವರಿಂದ( ಕನಕರಿಂದ ) ವಿಷ್ಣುವನ್ನು ಹೊಗಳುವ ಕಾವ್ಯಗಳನ್ನು ಬರೆಸಿದರೆಂಬ ಧ್ವನ್ಯಾರ್ಥದಲ್ಲಿ ಲೇಖಕಿ ಹೇಳುತ್ತಾರೆ. ಆದರೆ ಕಾವ್ಯ ಎಂಬುದು ನೆತ್ತಿಯ ಮೇಲೆ ಕತ್ತಿ ಊರಿ ಬರಸಿದರೆ ಬರುವಂಥದ್ದೇ? ಅದು ಹೃದಯದಿಂದ ಬರಬೇಕಲ್ಲವೆ? ಇಷ್ಟು ಸಣ್ಣ ವಿಚಾರವೂ ಲೇಖಕಿಗೆ ಹೊಳೆದಿಲ್ಲವೆ?! ಇಲ್ಲಿ ಬ್ರಾಹ್ಮಣರನ್ನು ಟೀಕಿಸುವ ಗುರಿ ಮಾತ್ರ ಇದೆಯೇ ಹೊರತು ಕನಕರ ಕುರಿತು ಹೇಳುವ ತಹತಹಿಕೆ ಇಲ್ಲವೇ ಇಲ್ಲ.

    ಉತ್ತರ
  6. M.A.Sriranga
    ಡಿಸೆ 13 2013

    ವಿದ್ಯಾ ಅವರಿಗೆ– ವಾರ್ತಾಭಾರತಿ ಪತ್ರಿಕೆಯಲ್ಲಿ ವಿಜಯಾ ಮಹೇಶ್ ಅವರು ಕನಕದಾಸರ ಬಗ್ಗೆ ಬರೆದಿರುವ ಲೇಖನವನ್ನು ತಾವು ತರ್ಕಬದ್ಧವಾಗಿ ವಿಶ್ಲೇಷಿಸಿದ್ದೀರಿ.ನನಗೆ ತೋರುವಂತೆ ಇಂತಹ ಲೇಖನಗಳ “ಉತ್ಪಾದನೆ”ಗೆ ನಾಲ್ಕು ಕಾರಣಗಳಿರಬಹುದು.
    (೧)ತಾವು ಬರೆಯಬೇಕೆಂದುಕೊಂಡಿರುವ ಲೇಖನದ ವಸ್ತುವಿನ ಬಗ್ಗೆ ಸರಿಯಾದ ಅಧ್ಯಯನ/ಯೋಚನೆ/ಆಧಾರಗಳ ಕೊರತೆ
    (೨)ಈ ಹಿಂದೆ ಇದೇ ವಿಷಯವನ್ನು ಕುರಿತಂತೆ ಬಂದಿರುವ ಯಾವುದಾದರೊಂದು ಲೇಖನವನ್ನೋ,ಪುಸ್ತಕವನ್ನೋ ಓದಿ ಅದಕ್ಕೆ ತಾವು ಯಾವುದನ್ನು “ಪ್ರಗತಿಪರ”ಎಂದು ಅಂದುಕೊಂದಡಿರುತ್ತಾರೋ ಅಂತಹ ಅಂಶಗಳನ್ನು ಸೇರಿಸಿ ಹೇಗೋ ಬರೆದರಾಯ್ತು ಎಂಬ ಅವಸರದ ನಿರ್ಣಯ.
    (೩)ಇವರು ವಾರ್ತಾಭಾರತಿ ಪತ್ರಿಕೆಯ ಅಂಕಣಕಾರರೆಂದು ಹೇಳಿದ್ದೀರಿ. ಆದ್ದರಿಂದ ಆ ಪತ್ರಿಕೆಯ ಧ್ಯೇಯ,ಧೋರಣೆಗಳು ಮತ್ತು ಆ ಪತ್ರಿಕೆಯ ಮಾಲೀಕರು ಹಾಗು ಸಂಪಾದಕರ “priority”ಗಳೂ ಇಲ್ಲಿ ಕೆಲಸ ಮಾಡಿರಬಹುದು.
    (೪) ಕೊನೆಯದಾಗಿ ಸದ್ಯದಲ್ಲಿ “ಗಾಳಿ” ಯಾವ ದಿಕ್ಕಿನಲ್ಲಿ ಬೀಸುತ್ತಿದೆ ಎಂಬುದನ್ನು ತಿಳಿದು ಆ ದಿಕ್ಕಿನಲ್ಲೇ ಸಾಗುವುದು ಉತ್ತಮ ಮತ್ತು ಕೆಲವೊಮ್ಮೆ ಲಾಭಕರ ಎಂಬ ಮುಂದಾಲೋಚನೆ!
    ನೀವು ಈ ನಿಮ್ಮ ಉತ್ತಮವಾದ ಪ್ರತಿಕ್ರಿಯೆಯನ್ನು ಆ ಪತ್ರಿಕೆಗೆ ಕಳುಹಿಸಿದ್ದೀರಾ? ಅದು ಪ್ರಕಟವಾಯ್ತೆ? ನನಗೆ ಅದನ್ನು ತಿಳಿಯುವ ಕುತೂಹಲವಿದೆ. ಸಾಧ್ಯವಾದರೆ ತಿಳಿಸಿ.

    ಉತ್ತರ
    • M.A.Sriranga
      ಡಿಸೆ 13 2013

      ಶ್ರೀ ಷಣ್ಮುಖ ಅವರಿಗೆ–
      (೧)ನಮ್ಮ ಜೀವನದಲ್ಲಿ ಸಾಹಿತ್ಯದ ನೆಲೆ-ಬೆಲೆ ಏನು?
      (೨)ನಾವು ಇದುವರೆಗೆ ಓದಿದ, ಮುಂದೆ ಓದಬಹುದಾದ ಸಾಹಿತ್ಯದಿಂದ ನಮಗೇನೂ ಉಪಯೋಗವಿಲ್ಲವೇ?
      (೩)ನಿಮ್ಮ ದೃಷ್ಟಿಯಲ್ಲಿ ಉತ್ತಮವಾದ ಸಾಹಿತ್ಯ ಅಂದರೆ ಏನು? ಅದರ ರೂಪ-ರೇಷೆಗಳೇನು?

      ಉತ್ತರ
  7. M.A.Sriranga
    ಡಿಸೆ 13 2013

    ವಿದ್ಯಾ ಅವರಿಗೆ– ವಾರ್ತಾಭಾರತಿ ಪತ್ರಿಕೆಯಲ್ಲಿ ವಿಜಯಾ ಮಹೇಶ್ ಅವರು ಕನಕದಾಸರ ಬಗ್ಗೆ ಬರೆದಿರುವ ಲೇಖನವನ್ನು ತಾವು ತರ್ಕಬದ್ಧವಾಗಿ ವಿಶ್ಲೇಷಿಸಿದ್ದೀರಿ.ನನಗೆ ತೋರುವಂತೆ ಇಂತಹ ಲೇಖನಗಳ “ಉತ್ಪಾದನೆ”ಗೆ ನಾಲ್ಕು ಕಾರಣಗಳಿರಬಹುದು.
    (೧)ತಾವು ಬರೆಯಬೇಕೆಂದುಕೊಂಡಿರುವ ಲೇಖನದ ವಸ್ತುವಿನ ಬಗ್ಗೆ ಸರಿಯಾದ ಅಧ್ಯಯನ/ಯೋಚನೆ/ಆಧಾರಗಳ ಕೊರತೆ
    (೨)ಈ ಹಿಂದೆ ಇದೇ ವಿಷಯವನ್ನು ಕುರಿತಂತೆ ಬಂದಿರುವ ಯಾವುದಾದರೊಂದು ಲೇಖನವನ್ನೋ,ಪುಸ್ತಕವನ್ನೋ ಓದಿ ಅದಕ್ಕೆ ತಾವು ಯಾವುದನ್ನು “ಪ್ರಗತಿಪರ”ಎಂದು ಅಂದುಕೊಂಡಿರುತ್ತಾರೋ ಅಂತಹ ಅಂಶಗಳನ್ನು ಸೇರಿಸಿ ಹೇಗೋ ಬರೆದರಾಯ್ತು ಎಂಬ ಅವಸರದ ನಿರ್ಣಯ.
    (೩)ಇವರು ವಾರ್ತಾಭಾರತಿ ಪತ್ರಿಕೆಯ ಅಂಕಣಕಾರರೆಂದು ಹೇಳಿದ್ದೀರಿ. ಆದ್ದರಿಂದ ಆ ಪತ್ರಿಕೆಯ ಧ್ಯೇಯ,ಧೋರಣೆಗಳು ಮತ್ತು ಆ ಪತ್ರಿಕೆಯ ಮಾಲೀಕರು ಹಾಗು ಸಂಪಾದಕರ “priority”ಗಳೂ ಇಲ್ಲಿ ಕೆಲಸ ಮಾಡಿರಬಹುದು.
    (೪) ಕೊನೆಯದಾಗಿ ಸದ್ಯದಲ್ಲಿ “ಗಾಳಿ” ಯಾವ ದಿಕ್ಕಿನಲ್ಲಿ ಬೀಸುತ್ತಿದೆ ಎಂಬುದನ್ನು ತಿಳಿದು ಆ ದಿಕ್ಕಿನಲ್ಲೇ ಸಾಗುವುದು ಉತ್ತಮ ಮತ್ತು ಕೆಲವೊಮ್ಮೆ ಲಾಭಕರ ಎಂಬ ಮುಂದಾಲೋಚನೆ!
    ನೀವು ಈ ನಿಮ್ಮ ಉತ್ತಮವಾದ ಪ್ರತಿಕ್ರಿಯೆಯನ್ನು ವಿದ್ಯಾ ಅವರಿಗೆ– ವಾರ್ತಾಭಾರತಿ ಪತ್ರಿಕೆಯಲ್ಲಿ ವಿಜಯಾ ಮಹೇಶ್ ಅವರು ಕನಕದಾಸರ ಬಗ್ಗೆ ಬರೆದಿರುವ ಲೇಖನವನ್ನು ತಾವು ತರ್ಕಬದ್ಧವಾಗಿ ವಿಶ್ಲೇಷಿಸಿದ್ದೀರಿ.ನನಗೆ ತೋರುವಂತೆ ಇಂತಹ ಲೇಖನಗಳ “ಉತ್ಪಾದನೆ”ಗೆ ನಾಲ್ಕು ಕಾರಣಗಳಿರಬಹುದು.
    (೧)ತಾವು ಬರೆಯಬೇಕೆಂದುಕೊಂಡಿರುವ ಲೇಖನದ ವಸ್ತುವಿನ ಬಗ್ಗೆ ಸರಿಯಾದ ಅಧ್ಯಯನ/ಯೋಚನೆ/ಆಧಾರಗಳ ಕೊರತೆ
    (೨)ಈ ಹಿಂದೆ ಇದೇ ವಿಷಯವನ್ನು ಕುರಿತಂತೆ ಬಂದಿರುವ ಯಾವುದಾದರೊಂದು ಲೇಖನವನ್ನೋ,ಪುಸ್ತಕವನ್ನೋ ಓದಿ ಅದಕ್ಕೆ ತಾವು ಯಾವುದನ್ನು “ಪ್ರಗತಿಪರ”ಎಂದು ಅಂದುಕೊಂದಡಿರುತ್ತಾರೋ ಅಂತಹ ಅಂಶಗಳನ್ನು ಸೇರಿಸಿ ಹೇಗೋ ಬರೆದರಾಯ್ತು ಎಂಬ ಅವಸರದ ನಿರ್ಣಯ.
    (೩)ಇವರು ವಾರ್ತಾಭಾರತಿ ಪತ್ರಿಕೆಯ ಅಂಕಣಕಾರರೆಂದು ಹೇಳಿದ್ದೀರಿ. ಆದ್ದರಿಂದ ಆ ಪತ್ರಿಕೆಯ ಧ್ಯೇಯ,ಧೋರಣೆಗಳು ಮತ್ತು ಆ ಪತ್ರಿಕೆಯ ಮಾಲೀಕರು ಹಾಗು ಸಂಪಾದಕರ “priority”ಗಳೂ ಇಲ್ಲಿ ಕೆಲಸ ಮಾಡಿರಬಹುದು.
    (೪) ಕೊನೆಯದಾಗಿ ಸದ್ಯದಲ್ಲಿ “ಗಾಳಿ” ಯಾವ ದಿಕ್ಕಿನಲ್ಲಿ ಬೀಸುತ್ತಿದೆ ಎಂಬುದನ್ನು ತಿಳಿದು ಆ ದಿಕ್ಕಿನಲ್ಲೇ ಸಾಗುವುದು ಉತ್ತಮ ಮತ್ತು ಕೆಲವೊಮ್ಮೆ ಲಾಭಕರ ಎಂಬ ಮುಂದಾಲೋಚನೆ!
    ನೀವು ಈ ನಿಮ್ಮ ಉತ್ತಮವಾದ ಪ್ರತಿಕ್ರಿಯೆಯನ್ನು ಆ ಪತ್ರಿಕೆಗೆ ಕಳುಹಿಸಿದ್ದೀರಾ? ಅದು ಪ್ರಕಟವಾಯ್ತೆ? ನನಗೆ ಅದನ್ನು ತಿಳಿಯುವ ಕುತೂಹಲವಿದೆ. ಸಾಧ್ಯವಾದರೆ ತಿಳಿಸಿ.ಆ ಪತ್ರಿಕೆಗೆ ಕಳುಹಿಸಿದ್ದೀರಾ? ಅದು ಪ್ರಕಟವಾಯ್ತೆ? ನನಗೆ ಅದನ್ನು ತಿಳಿಯುವ ಕುತೂಹಲವಿದೆ. ಸಾಧ್ಯವಾದರೆ ತಿಳಿಸಿ.

    ಉತ್ತರ
  8. M.A.Sriranga
    ಡಿಸೆ 13 2013

    ನಿಲುಮೆಯ ಸಂಪಾದಕರಿಗೆ,ಒದುಗರಿಗೆ ಮತ್ತು ವಿದ್ಯಾ ಅವರಿಗೆ– ನಾನು kannada slateನಲ್ಲಿ ಮಾಡಿದ ಒಂದು technical faultನಿಂದ ನನ್ನ ಪ್ರತಿಕ್ರಿಯೆ ಮೂರು ಬಾರಿ ಪ್ರಕಟವಾಗಿಬಿಟ್ಟಿದೆ. ಅದಕ್ಕಾಗಿ ವಿಷಾದಿಸುತ್ತೇನೆ—-ಶ್ರೀರಂಗ

    ಉತ್ತರ
  9. vidya
    ಡಿಸೆ 13 2013

    ನಾನು ವಾರ್ತಾ ಭಾರತಿ ಪತ್ರಿಕೆಗೆ ಈ ಲೇಖನ ಕಳಿಸಿಲ್ಲ. ಬೇರೆ ಕೆಲವು ಪತ್ರಿಕೆಗೆ (ಕನ್ನಡ ಪ್ರಭ, ವಿಜಯವಾಣಿ, ವಿಜಯಕರ್ನಾಟಕ, ಹಾಗೂ ಹೊಸದಿಗಂತ ) ಕಳಿಸಿದ್ದೆ. ಆದರೆ ಪ್ರಕಟವಾಗಿಲ್ಲ. ಬಹುಶಃ ನನ್ನ ಬರವಣಿಗೆಯ ಶೈಲಿ ಪಕ್ವವಾಗಿಲ್ಲದ ಕಾರಣ ಇರಬಹುದು. ಇಲ್ಲವೇ ಲೇಖನ ದೀರ್ಘವಗಿದ್ದಿರಬಹುದು. ಅಥವಾ ಹಳಸಲು ವಿಚಾರವೆಂಬ ಉಪೇಕ್ಷೆ ಇರಬಹುದು.ನಾನು ಈ ಪತ್ರಿಕೆಗಳಿಗೆ ಹಸ್ತ ಪ್ರತಿ ಕಳಿಸಿರುವೆ. ಟೈಪ್ ಮಾಡಿದ ಪ್ರತಿ ಕಳಿಸಿಲ್ಲ. ಇದೂ ಕಾರಣವಿರಬಹುದೇನೋ.

    ಉತ್ತರ
  10. M.A.Sriranga
    ಡಿಸೆ 13 2013

    ವಿದ್ಯಾ ಅವರಿಗೆ — ನೀವು ಬರೆದ ವಿಷಯ ಮತ್ತು ಶೈಲಿ ಸರಿಯಾಗಿದೆ;ಅದರಲ್ಲಿ ಏನೂ ಸಮಸ್ಯೆಯಿಲ್ಲ. ಹಸ್ತಪ್ರತಿ ಕಳುಹಿಸಿದರೆ ತಪ್ಪೇನಿಲ್ಲ. ಆದರೆ ನನ್ನ ಪ್ರಕಾರ ಸಾಮಾನ್ಯವಾಗಿ ಪತ್ರಿಕೆಗಳು ಬೇರೆ ಪತ್ರಿಕೆಗಳಲ್ಲಿ ಬಂದ ಅಂಕಣ ಬರಹಗಳ ಬಗ್ಗೆ ತಮ್ಮ ಪತ್ರಿಕೆಯಲ್ಲಿ ಪ್ರತಿಕ್ರಿಯೆಗಳನ್ನು ಪ್ರಕಟಿಸುವುದಿಲ್ಲ. ಈ ಕಾರಣದಿಂದ ನಿಮ್ಮ ಪ್ರತಿಕ್ರಿಯೆ ಪ್ರಕಟವಾಗಿಲ್ಲ ಎಂದು ಭಾವಿಸುತ್ತೆನೆ. ವಾರ್ತಾಭಾರತಿಯಲ್ಲೇ ಒಮ್ಮೆ ಪ್ರಯತ್ನಿಸಿನೋಡಿ.

    ಉತ್ತರ
  11. Nagshetty Shetkar
    ಡಿಸೆ 14 2013

    ಭೈರಪ್ಪ ಎಂಬ ಬಲಪಂಥೀಯ ಬಲೂನ್ ಅನ್ನು ಷಣ್ಮುಖ ಅವರು ‘ವಸಾಹತುಶಾಹಿ ಚಿತ್ರಣಗಳ ಪುನರುತ್ಪಾದನೆ’ ಎಂಬ ಸೂಜಿ ಮೊನೆಯಿಂದ ಚುಚ್ಚಿ ಪುಸ್ ಮಾಡಿದ್ದಾರೆ. ಆದರೆ ಇದನ್ನು ಈ ದರವೇಸಿ ಸೈಟಿನಲ್ಲಿ ಮಾಡುವ ಬದಲು ಪ್ರಜಾವಾಣಿಯಲ್ಲಿ ಮಾಡಿದ್ದರೆ ಬೆಸ್ಟ್ ಇತ್ತು.

    ಉತ್ತರ
    • Nagshetty Shetkar
      ಡಿಸೆ 14 2013

      ಡಾ. ಷಣ್ಮುಖ ಅವರೇ, ಕರ್ನಾಟಕ ರಾಜ್ಯದಲ್ಲಿ ಭಾಜಪ ಸರ್ಕಾರವಿದ್ದಾಗ ನೀವುಗಳು ‘ವಸಾಹತುಶಾಹಿ ಚಿತ್ರಣಗಳ ಪುನರುತ್ಪಾದನೆ’ ಎಂಬ ಬತ್ತಳಿಕೆ ಹಿಡಿದು ಅನಂತಮೂರ್ತಿ ಮೊದಲಾದ ಪ್ರಗತಿಪರರನ್ನು ಹೆದುರಿಸುತ್ತಿದ್ದಿರಿ. ಬಹುಶಃ ಅದರ ಲಾಭವನ್ನೂ ಕೂಡ ಪಡೆದಿರಬೇಕು ನೀವು ಭಾಜಪ ಸರ್ಕಾರದ ಮೂಲಕ. ಈಗ ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯನವರ ರಾಜ್ಯಭಾರ. ಅವರನ್ನು ಮೆಚ್ಚಿಸಲೆಂದೋ ಏನೋ ನೀವುಗಳು ಈಗ ‘ವಸಾಹತುಶಾಹಿ ಚಿತ್ರಣಗಳ ಪುನರುತ್ಪಾದನೆ’ ಎಂಬ ಅದೇ ಬತ್ತಳಿಕೆ ಹಿಡಿದು ಪ್ರಗತಿಪರರ ವಿರೋಧಿಗಳಲ್ಲಿ ಅಗ್ರಗಣ್ಯರಾದ ಭೈರಪ್ಪನವರನ್ನು ಹೆದುರಿಸಲು ಮುಂದಾಗಿದ್ದೀರಿ. ಬಹುಶಹ ಕಾಂಗ್ರೆಸ್ ಸರಕಾರದ ಮೂಲಕ ಒಂದಿಷ್ಟು ಲಾಭ ಮಾಡಿಕೊಳ್ಳಲು ಹೀಗೆ ಮಾಡುತ್ತಿದ್ದೀರಿ. ಒಟ್ಟಿನಲ್ಲಿ ಆಡಳಿತ ಪಕ್ಷದ ಪರವಾಗಿ ಅವರ ವಿರೋಧಿಗಳನ್ನು ನಿಮ್ಮ ಸಂಶೋಧನೆ ಮೂಲಕ ಹೆದುರಿಸುವ ಕೆಲಸ ಮುಂದುವರೆಸಿಕೊಂಡು ಬಂದು ನಿಮ್ಮ ನಿಜರೂಪ ದರ್ಶನ ಮಾಡಿಸಿದ್ದೀರಿ! ಲಾಭಸಿದ್ಧಿಗಾಗಿ ಸಂಶೋಧನೆ! ಚೆನ್ನಾಗಿದೆ.

      ಉತ್ತರ
    • Manohar
      ಡಿಸೆ 14 2013

      “ಈ ದರವೇಸಿ ಸೈಟಿನಲ್ಲಿ ಮಾಡುವ ಬದಲು ಪ್ರಜಾವಾಣಿಯಲ್ಲಿ ಮಾಡಿದ್ದರೆ ಬೆಸ್ಟ್ ಇತ್ತು.”
      ನಿಮ್ಮ ದರಿದ್ರ ಮೂತಿಯನ್ನು ಆಗಾಗ ಇಲ್ಲಿ ತೋರಿಸುವ ಬದಲು ನಿಮ್ಮ ಬಡಾಯಿ ಗಟಾರದಲ್ಲಿ ಹೊರಳಾಡಿಕೊಂಡಿದ್ದರೆ ಬೆಸ್ಟ್ ಇತ್ತು!.

      ತನಗೆ ತಾನೆ +೧ ಎಂದು ಹಾಕಿಕೊಳ್ಳುವುದು ಏಕೊ? ಸ್ವರತಿಯಾ?

      ಉತ್ತರ
      • Mukhesh
        ಡಿಸೆ 16 2013

        ಇಲ್ಲ ಮನೋಹರ್, ಮೇಲಿನ “ಕಮೆಂಟು” ಮತ್ತು ಅದಕ್ಕೆ ನೀಡಿರುವ “+1” ಬೇರೆ ಬೇರೆ ವ್ಯಕ್ತಿಗಳದ್ದು, ನಾಮವಷ್ಟೇ ಒಂದು!!!!! ನಾಮ(ಪಾತ್ರ)ವೊಂದು ವ್ಯಕ್ತಿ ಹಲವು!!!!

        ಉತ್ತರ
    • ನವೀನ
      ಡಿಸೆ 16 2013

      ಶೆಟ್ಕರ್ ಸರ್, ಅವರು ತಮ್ಮ ಇರುವಿಕೆಯನ್ನು ಈ ಕಮೆಂಟುಗಳ ಮೂಲಕ ಸಾಬೀತುಪಡಿಸಿದ್ದು ಸಂತೋಷವಾದುದಾಗಿದೆ.
      ತಮ್ಮನ್ನು ಹಂಬಲ್ ಶರಣ ಎಂದು ಎಮ್ಮೆಯಿಂದ ಕರೆದುಕೊಳ್ಳುವ ಶೆಟ್ಕರ್ ಸರ್ ಅವರು ‘ದರವೇಶಿ ಸೈಟು’ ಅನ್ನುವುದು ನೋಡಿದಾಗ ಶರಣ ಪದಕ್ಕೆ ಇವರು ಮಾಡುವ ಅವಮಾನ ಕಂಡು ನೋವಾಗುತ್ತದೆ.

      ಇಂತ ಕೆಟ್ಟ ಭಾಷೆಯನ್ನು ಅವರಿಗೆ ಅವರ ಗುರುಗಳೇ ಕಲಿಸಿರಬಹುದು ಎಂದು ಊಹಿಸಬಹುದಾಗಿದೆ.

      ಉತ್ತರ
  12. M.A.Sriranga
    ಡಿಸೆ 14 2013

    ನಮ್ಮ ಜೀವನ ಬಲ ಪಂಥೀಯವೂ ಅಲ್ಲ;ಎಡಪಂಥೀಯವೂ ಅಲ್ಲ. ನಿಮಗೆ ದ ರಾ ಬೇಂದ್ರೆ ಅವರ ಬಗ್ಗೆ ಯಾವ ಅಭಿಪ್ರಾಯವಿದೆಯೋ ನನಗೆ ಗೊತ್ತಿಲ್ಲ. ಆದರೂ ಅವರ ಒಂದು ಮಾತನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬಹುದು. “ಕಾವ್ಯವೆನ್ನುವುದು ಅಮೃತಕ್ಕೆ ಹಾರುವ ಗರುಡ”. ಇಲ್ಲಿ ಕಾವ್ಯ ಎಂದರೆ ಕೇವಲ ಕಾವ್ಯವಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳು ಎಂಬುದನ್ನು ಪ್ರಾಜ್ಞರಾದ ತಮಗೆ ವಿವರಿಸಿ ಹೇಳಬೇಕಿಲ್ಲ ಎಂದು ಭಾವಿಸುತ್ತೇನೆ. ಪ್ರಜಾವಾಣಿ ಮಾತ್ರ ಕನ್ನಡಿಗರ ವಾಣಿ ಎಂಬ ಅಭಿಪ್ರಾಯ ತರವಲ್ಲ. ಅದರ ಆದ್ಯತೆಗಳೇನು ಎಂಬುದು ಅದರ ಅಂಕಣ ಬರಹಗಳು,ಒಂದು ಸುದ್ದಿಯನ್ನು ಅದು ಯಾವ ರೀತಿ ಜನಗಳಿಗೆ present ಮಾಡುತ್ತದೆ ಎಂಬುದರಿಂದಲೇ ಅರಿಯಬಹುದು.

    ಉತ್ತರ
    • Mukhesh
      ಡಿಸೆ 14 2013

      ಮರ್ಯಾಧಸ್ತರಾದ ಶ್ರೀರಂಗಾರವರೆ,, ಈ ಶೆಟ್ಕರ್ರು… ಬಡ್ಡೆತ್ತದ್ದಕ್ಕು ಬರೀ ಕಿರಿಕ್ ಮಾಡ್ಕೊಂಡಿರೋದೆ ಕೆಲ್ಸ ಆಗ್ಬಿಟ್ಟಿದೆ ಅದನ್ಯಾಕ ಅಷ್ಟೊಂದು ಹಚ್ಕೊತ್ತೀರಿ.. ಬುಡಿ…ಬುಡಿ… ನಮ್ಮ ಬಾಲಣ್ಣ ಮೇಸ್ಟ್ರು ಯಾವಾಗ್ಲೂ ಹೇಳ್ತಿರ್ತಾರೆ.. “ಓರ್ವ ಇತರರ ಬಗ್ಗೆ ಚಿತ್ರಣಗಳನ್ನು ನೀಡಿದರೆ ಆ ಚಿತ್ರಣ ಯಾರ ಬಗ್ಗೆ ಇದೆಯೋ ಅವರಿಗಿಂತ ಹೆಚ್ಚಾಗಿ ಆ ಚಿತ್ರಣ ಕೊಟ್ಟವನ ಬಗ್ಗೆಯೇ ಹೆಚ್ಚು ಹೇಳುತ್ತದೆ” ಅಂತ!!!. ಸೋ ಹಂಗಾಗಿ ಮೇಲೆ ಆ ಯಪ್ಪ ಹೇಳ್ಕೊಂಡಿದ್ದು ಆತನ್ ಬಗ್ಗೇನೇ.. ನೀವು ವರಿ ಮಾಡ್ಕೋಂಬೇಡಿ.

      ಉತ್ತರ
  13. S Ganapathi Bhat
    ಸೆಪ್ಟೆಂ 25 2014

    Sorry, I am not able to write in Kannada,actually ashamed. But read the first three and all of them are excellent. The Shrothri of Vamsha Vriksha walks tall. Look his advice to his grand son on the death of Kathyayini “she is ur mother and u are her son. Do whatever a son is expected of to perform” I simply wept. Forget about isms.Pl write more.

    ಉತ್ತರ
  14. S Ganapathi Bhat
    ಸೆಪ್ಟೆಂ 25 2014

    Pl write a detailed comment on the similarities of VAMSHAVRIKSHA and KARMA. In both of them, we see the anti climax of discovering the true FATHER.

    ಉತ್ತರ

Trackbacks & Pingbacks

  1. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊದಿಗೆ ಮುಖಾಮುಖಿ – ೪ | ನಿಲುಮೆ
  2. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೪ | ನಿಲುಮೆ
  3. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫ | ನಿಲುಮೆ
  4. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬ | ನಿಲುಮೆ
  5. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭ | ನಿಲುಮೆ
  6. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮ | ನಿಲುಮೆ
  7. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯ | ನಿಲುಮೆ
  8. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦ | ನಿಲುಮೆ
  9. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭ – ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments