ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 15, 2013

39

ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೨

‍ನಿಲುಮೆ ಮೂಲಕ

– ಮು.ಅ ಶ್ರೀರಂಗ,ಬೆಂಗಳೂರು

S L Byrappa(“ನಿಲುಮೆ”ಯಲ್ಲಿ  ೧೦-೧೦-೨೦೧೩ರಂದು ಪ್ರಕಟವಾದ ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧ ಲೇಖನದ   ಎರಡನೇ  ಭಾಗ)

ವಂಶವೃಕ್ಷ  ಮತ್ತು  ಸಂಸ್ಕಾರ
—————————-

ಭೈರಪ್ಪನವರ ಮುಖ್ಯ ಕಾದಂಬರಿಗಳಲ್ಲಿ ಒಂದಾದ “ವಂಶವೃಕ್ಷ”ದ ವಸ್ತು,ಪಾತ್ರಗಳು,ಕಾದಂಬರಿಯ ವಿನ್ಯಾಸ ಇತ್ಯಾದಿಗಳ ಬಗ್ಗೆ ನಮ್ಮ ವಿಮರ್ಶಕರು ಈಗಾಗಲೇ ಸಾಕಷ್ಟು ವಿವರವಾಗಿ ಚರ್ಚಿಸಿದ್ದಾರೆ; ವಿವೇಚನೆ ನಡೆಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಆ ಕಾದಂಬರಿಯ ಪೂರ್ಣ ವಿಮರ್ಶೆ ನನ್ನ ಉದ್ದೇಶವಲ್ಲ.
“ವಂಶವೃಕ್ಷ”ದ ವಿಮರ್ಶೆಗಳಲ್ಲಿ ಸಹಜವಾಗಿ ಶ್ರೀನಿವಾಸ ಶ್ರೋತ್ರಿ ಮತ್ತು ಅವರ  ಸೊಸೆ  ಕಾತ್ಯಾಯನಿಯ ಜೀವನದಲ್ಲಿ ಅವರುಗಳು ಎದುರಿಸಬೇಕಾಗಿ ಬಂದಂತಹ ಸನ್ನಿವೇಶಗಳು ಮತ್ತು ಸಂಘರ್ಷಗಳು ವಿಶೇಷವಾಗಿ ಚರ್ಚೆಗೆ ಒಳಪಟ್ಟಿರುವ ಅಂಶಗಳು. ಶ್ರೋತ್ರಿಯವರು ತಮ್ಮ ಜೀವನಕ್ಕೆ ಸನಾತನ ಧರ್ಮವನ್ನು ಅಧಾರವನ್ನಾಗಿಟ್ಟುಕೊಂಡವರು. ಅದರಲ್ಲಿ ನಂಬಿಕೆಯಿಟ್ಟವರು. ಆದರೆ ಕರ್ಮಠರಲ್ಲ. ಧರ್ಮದ ಪದಶಃ,ವಾಕ್ಯಶಃ ಅರ್ಥಗಳಿಗೆಗಷ್ಟೇ ಅಂಟಿಕೊಂಡವರಲ್ಲ.ಧರ್ಮದ ಬಗ್ಗೆ ತಮಗಿರುವ ನಂಬಿಕೆ,ವಿಶ್ವಾಸಗಳನ್ನು ಇನ್ನೊಬ್ಬರ ಮೇಲೆ ಹೇರಿದವರಲ್ಲ. ಅವರ ಮಗ ಅಕಾಲ ಮರಣಕ್ಕೆ ತುತ್ತಾದಾಗ ವಿಧವೆಯಾದ ಸೊಸೆ ಕಾತ್ಯಾಯನಿ ಆ ಕಾಲದ(೧೯೨೪ರ ಆಸುಪಾಸಿನದು)ಪದ್ಧತಿಯಂತೆ ಮಡಿ ಹೆಂಗಸು” (ತಲೆಗೂದಲು ತೆಗೆಸುವುದು, ಕೆಂಪು ಸೀರೆ ಉಡುವುದು ಇತ್ಯಾದಿ)ಆಗಲಿಲ್ಲ.

ತಮ್ಮ ಪತ್ನಿಯ ವಿರೋಧವನ್ನು ಲೆಕ್ಕಿಸದೆ ವಿಧವೆ ಸೊಸೆಯನ್ನು ಕಾಲೇಜಿಗೆ ಓದಲು ಕಳುಹಿಸಿದರು. ನಂತರದಲ್ಲಿ ಆಕೆ ಎರಡನೇ ಮದುವೆ ಮಾಡಿಕೊಳ್ಳುತ್ತೇನೆ ಎಂಬ ಪ್ರಸ್ತಾಪ ಮುಂದಿಟ್ಟಾಗ ಆಕೆಯ ವಿಚಾರ,ಮಾತುಗಳನ್ನೆಲ್ಲಾ ಶಾಂತವಾಗಿ ಕೇಳಿ ತಮ್ಮ ವಿಚಾರ, ನಂಬಿಕೆಗಳನ್ನು ತಿಳಿಸುತ್ತಾ “ಸಹಜ ಧರ್ಮವೆನ್ನುವುದೇ ಧರ್ಮವಲ್ಲ” ಎಂದರೂ ಸಹ ಕೊನೆಗೆ “ಹೊರ ಜಗತ್ತು ಬಲವಂತದಿಂದ ವ್ಯಕ್ತಿಯ ಮೇಲೆ ಹೇರುವ ಕಟ್ಟಳೆಗಳು ಧರ್ಮದ ಪೂರ್ಣರೂಪವಲ್ಲ ಅನ್ನೋದ್ರಲ್ಲಿ ನನಗೂ ವಿಶ್ವಾಸವಿದೆ” (ವಂಶವೃಕ್ಷ  ಪುಟ ೧೭೯) ಎಂದು ಹೇಳುವಷ್ಟರಮಟ್ಟಿಗೆ ಅವರ ನಡೆ-ನುಡಿ-ನಂಬಿಕೆಗಳಲ್ಲಿ flexibility ಇದೆ. ಆಕೆಯ ಎರಡನೇ ಮದುವೆಗೆ ಅಡ್ಡ ನಿಂತವರಲ್ಲ.

ಆದರೆ ಈ ಮದುವೆಯ ನಂತರ “ಕಾತ್ಯಾಯನಿಗಾಗುವ ಗರ್ಭಪಾತಗಳು ಪಾಪಪ್ರಜ್ಞೆಯ ಸಾಂಕೇತಿಕ ನಿರೂಪಣೆ “ಎಂದು ಅಭಿಪ್ರಾಯಪಡುವ ಕೀರ್ತಿನಾಥಕುರ್ತಕೋಟಿ (ಸಹಸ್ಪಂದನ ಪುಟ ೫೫ )ಮತ್ತು “ಸಹಜ ಸುಖವನ್ನು ಹುಡುಕಿಕೊಂಡು ಹೋಗಿ ಹತಾಶಳಾದ ಕಾತ್ಯಾಯನಿಯದು ಇನ್ನೊದು ಬಗೆಯ ದುರಂತ”ಎನ್ನುವ ಗಿರಡ್ಡಿ ಗೋವಿಂದರಾಜ  (ಅದೇ ಪುಟ ೨೫೦) ಅವರ ಅಭಿಪ್ರಾಯಗಳಲ್ಲಿ “ಭೈರಪ್ಪನವರು ಮತ್ತು ವಂಶವೃಕ್ಷ”ವಿಧವಾ ವಿವಾಹಕ್ಕೆ ವಿರೋಧವಾಗಿರಬಹುದು ಎಂಬ ಅನುಮಾನದ ಎಳೆಗಳಿವೆ. ಶ್ರೋತ್ರಿಯರಂತು ಪ್ರಕಟವಾಗಿಯೇ ಈ ಮದುವೆಯ ವಿರುದ್ಧ ಇದ್ದಾರೆ. ಎಂಬ ಎಚ್. ಎಸ್. ವೆಂಕಟೇಶಮೂರ್ತಿ(ಎಚ್ಚೆಸ್ವಿ) ಅವರ ಮಾತನ್ನು ಒಪ್ಪಲಾಗದಿದ್ದರೂ “ಕಾತ್ಯಾಯನಿಯ ಸೋಲು ಹೀಗೆ ಆಧುನಿಕ ಪ್ರಜ್ಞೆಯ ಬಹು ದೊಡ್ಡ ಸೋಲಿನ ಅಂಶವಾಗುತ್ತದೆ. ಇದರಿಂದ ಭೈರಪ್ಪನವರು ಆಧುನಿಕ ಪ್ರಜ್ಞೆಗೆ ವಿರುದ್ಧವಾಗಿದ್ದಾರೆಂದು ಹೇಳುವುದು ದುಡುಕಿನ ಮಾತಾಗಬಹುದು. ಹೊಸ ವಿಚಾರಗಳು, ಮೌಲ್ಯ ವ್ಯವಸ್ಥೆ ಫಲಪ್ರದವಾಗಿ ಸ್ಥಾಪಿತವಾಗಲು ಕಾಲವಿನ್ನೂ ಪಕ್ವವಾಗಿಲ್ಲ ಎಂಬುದನ್ನಷ್ಟೇ ಇದು ಸೂಚಿಸುತ್ತದೆ”  ಎಂಬುದು ಗಮನಿಸಬೇಕಾದ ಅಂಶ ( ಪುಟ ೩೩೭ ಡಾ।। ಎಸ್ ಎಲ್ ಭೈರಪ್ಪನವರ ಕಾದಂಬರಿಗಳಲ್ಲಿ ಧರ್ಮ ಮತ್ತು ಸಂಸ್ಕೃತಿ ಪ್ರಕಾಶಕರು:ಸುಂದರ ಸಾಹಿತ್ಯ ಬೆಂಗಳೂರು-೧೯  ೨೦೧೧)

ಇನ್ನು ವಂಶವೃಕ್ಷದ ಶ್ರೋತ್ರಿಯರು ಮತ್ತು ಸಂಸ್ಕಾರದ ಪ್ರಾಣೇಶಾಚಾರ್ಯರು ಎದುರಿಸಬೇಕಾಗಿಬಂದಂತಹ ದಾಂಪತ್ಯದ ಹೊರಗಿನ “ಹೆಣ್ಣಿನ ಸಂಪರ್ಕ”ದ ಪ್ರಸಂಗಗಳ ಬಗ್ಗ ವಿಮರ್ಶಕರಲ್ಲಿ ನಾನಾ ರೀತಿಯ ಅಭಿಪ್ರಾಯಗಳಿವೆ. ಶ್ರೋತ್ರಿಯರ ಹೆಂಡತಿಗೆ ಮೊದಲನೇ ಹೆರಿಗೆಯಲ್ಲಿ ಸಮಸ್ಯೆಯಾಗಿ ತಾಯಿ ಮತ್ತು ಮಗುವಿನ ಜೀವ ಉಳಿಸುವ ಸಲುವಾಗಿ ಆಪರೇಷನ್ ಮಾಡಬೇಕಾಗುತ್ತದೆ. “ಆಕೆ ಪುನಃ ಗರ್ಭಿಣಿಯಾದರೆ ಸಾವು ಖಂಡಿತ.ಆದ್ದರಿಂದ ದೈಹಿಕ ಸಂಬಂಧ ನಿಲ್ಲಿಸಬೇಕು” ಎಂದು ವೈದ್ಯರು ಹೇಳುತ್ತಾರೆ. (ಕಾದಂಬರಿಯಲ್ಲಿ ಚಿತ್ರಣಗೊಂಡಿರುವ ಕಾಲ  ಸುಮಾರು ೧೯೨೪ರದ್ದು ಎಂಬ ಅಂಶ ಮೊದಲನೇ ಪುಟದಲ್ಲೇ ತಿಳಿದುಬರುತ್ತದೆ). ಹೀಗಾಗಿ ಶ್ರೋತ್ರಿಯರು ತಮ್ಮ ಇಪ್ಪತ್ತಾರನೆಯ ವಯಸ್ಸಿಗೇ ದೈಹಿಕ ಸುಖದಿಂದ ದೂರ ಉಳಿಯಬೇಕಾಯ್ತು. ಮೊದಲನೇ ಹೆಂಡತಿ ಬದುಕಿರುವಾಗ ಮತ್ತು ವಂಶದ ಮುಂದುವರಿಕೆಗಾಗಿ ಗಂಡು ಮಗುವೂ ಇರುವಾಗ ಕೇವಲ ದೈಹಿಕವಾದ ಕಾಮನೆಗಳಿಗಾಗಿ ಮಾತ್ರ ಎರಡನೇ ಮದುವೆಯಾಗುವುದು  “ಅಧರ್ಮ”ಎಂದು ನಿಶ್ಚಯಿಸಿದರು.

ಮನಸ್ಸಿನ ಚಂಚಲತೆಯನ್ನು ನಿವಾರಿಸಿಕೊಳ್ಳಲು ಬೆಳಗಿನ ವೇಳೆ ದೈಹಿಕ ಶ್ರಮದ ಕೆಲಸಗಳನ್ನು ಜಾಸ್ತಿ ಮಾಡಲು ಪ್ರಾರಂಭಿಸಿದರು. ಹೀಗಾಗಿ ರಾತ್ರಿ ಮಲಗಿದ ಕೂಡಲೇ ನಿದ್ದೆ ಬರುವಂತಾಗಿ ಅನ್ಯ ವಿಚಾರಗಳು ಮನಸ್ಸಿಗೆ ಬಾರದಂತೆ ಆಯಿತು. ಇದರ ಜತೆಗೆ ತಮ್ಮ ದಿನನಿತ್ಯದ ಆಹಾರ ಸೇವನೆಯಲ್ಲಿ ಕಟ್ಟುನಿಟ್ಟನ್ನು ಪಾಲಿಸುತ್ತಾಯಿದ್ದರು. ಈ ಎಲ್ಲಾ ಕಾರಣಗಳಿಂದ ದಿನಕಳೆದಂತೆ ಕೃಶವಾಗಿ ಹೋದರು. ಇದರಿಂದ ನೊಂದ ಅವರ ಹೆಂಡತಿ ಅವರ ಮನೆಯಲ್ಲಿ ಕೆಲಸಕ್ಕಿದ್ದ ವಿಧವೆ “ಲಕ್ಷಿ”ಯನ್ನು ಆಕೆ ತನ್ನ ಒಪ್ಪಿಗೆ ಸೂಚಿಸಿದ ನಂತರ ಶ್ರೋತ್ರಿಯರನ್ನೂ ಒಪ್ಪಿಸಿ “ಲಕ್ಷಿ-ಶ್ರೋತ್ರಿ”ಯರ ಸಮಾಗಮಕ್ಕೆ ಏರ್ಪಾಟು ಮಾಡುತ್ತಾರೆ. ಶ್ರೋತ್ರಿಯರು ತಮ್ಮ ಕಾಮನೆಗಳನ್ನು ಇನ್ನೂ ಪೂರ್ಣವಾಗಿ ನಿವಾರಿಸಿಕೊಳ್ಳದ ಆ ಹಂತದಲ್ಲಿ “ಆ ಆಸೆ”ಗೆ ಒಪ್ಪಿದ್ದು ಮಾನವ ಸಹಜವಾದ ಸಂಗತಿಯಾಗಿದೆ. “ಆ ಏರ್ಪಾಟನ್ನು” ಎದುರಿಸಬೇಕಾಗಿ ಬರುವ ಮುನ್ನ ಶ್ರೋತ್ರಿಯರ ಮನಸ್ಸಿನಲ್ಲಿ ನಡೆದ ಹೊಯ್ದಾಟ,ಮಾನಸಿಕ ತುಮುಲ,ಯಾವುದು ಸರಿ ಯಾವುದು ತಪ್ಪು ಇವುಗಳ ವಿಚಾರ ಇತ್ಯಾದಿಗಳ ವಿವರಕ್ಕೆ ಕಾದಂಬರಿಯನ್ನೇ ಓದಬೇಕು. (ಪುಟ ೧೯೨-೨೦೧ ವಂಶವೃಕ್ಷ).

ಯಾವ ಲೌಕಿಕ ತಾಪತ್ರ್ಯಗಳೂ ಇಲ್ಲದೆ,ಮನೆಯಲ್ಲೇ ನಾಲ್ಕು ಗೋಡೆಗಳ ನಡುವೆ, ಹೊರಗಿನ ಸಮಾಜದಲ್ಲಿ ತಮಗಿದ್ದ ಗೌರವಕ್ಕೆ ಯಾವ ಚ್ಯುತಿಯೂ ಬಾರದಂತೆ ಅನುಭವಿಸಬಹುದಾದಂತಹ ಈ ದೈಹಿಕ ಸುಖವನ್ನು ಶ್ರೋತ್ರಿಯವರು ತಿರಸ್ಕರಿಸಿದರು.  “ಆದರೆ ಈ ಆತ್ಮ ಸಂಘರ್ಷದ ಬೆಲೆಯೇನು?……… ಇದರಲ್ಲಿ ಶ್ರೋತ್ರಿಯವರು ಗೆದ್ದರೂ ಅಷ್ಟೇ,ಸೋತರೂ ಅಷ್ಟೇ. ಲಕ್ಷ್ಮಿ ಮತ್ತು ಹೆಂಡತಿ ಇವರಿಬ್ಬರ ಗೌರವಾದರಗಳು ಕಡಿಮೆಯಾಗುವಂತಿಲ್ಲ ………. ” ಎಂದು ಕೀರ್ತಿನಾಥ ಕುರ್ತಕೋಟಿಯವರು ಅಭಿಪ್ರಾಯಪಟ್ಟಿದ್ದಾರೆ. (ಸಹಸ್ಪಂದನ  ಪುಟ ೨೧೦-೨೧೧) ಆದರೆ ಶ್ರೋತ್ರಿಯವರು ನಂಬಿಕೊಂಡು ಬಂದಿದ್ದ ಧರ್ಮ,ತತ್ವಗಳ ದೃಷ್ಟಿಯಿಂದ ಅವರು ಅಕಸ್ಮಾತ್ ಕಾಲು ಜಾರಿದ್ದರೆ ಅದು ಅವರ ಪಾಲಿಗೆ ವ್ಯಭಿಚಾರ ಮತ್ತು ನೈತಿಕತೆಯ ಅಧಃಪತನವಾಗುತ್ತಿತ್ತು. ಮನೆಯ ಒಳಗಡೆ ನಡೆಯಲಿ, ಹೊರಗಡೆ ನಡೆಯಲಿ ವ್ಯಭಿಚಾರ ವ್ಯಭಿಚಾರವೇ ಹೊರತು ಬೇರೇನೂ ಅಲ್ಲ ಎಂಬುದು ಶ್ರೋತ್ರಿಯವರ ನಿಲುವು,ನಂಬಿಕೆ. ಇಲ್ಲಿ ತಮ್ಮ ಹೆಂಡತಿ ಮತ್ತು ಲಕ್ಷಿಯ ಗೌರವಾದರಗಳ ಪ್ರಶ್ನೆಗೂ,ಶ್ರೋತ್ರಿಯವರ ಜೀವನದ ರೀತಿ ನೀತಿಗಳಿಗೂ ಸಂಬಂಧ ಕಲ್ಪಿಸುವುದೇ ಹಾಸ್ಯಾಸ್ಪದ. ಗೌರವಯುತ ವ್ಯಭಿಚಾರ ಮತ್ತು ಗೌರವರಹಿತ ವ್ಯಭಿಚಾರ ಎಂಬ ಕಲ್ಪನೆ ಇನ್ನೂ ಹಾಸ್ಯಾಸ್ಪದವಲ್ಲವೇ?. ಈ ಅಂಶವನ್ನು ಕುರ್ತಕೋಟಿಯವರು ಏಕೆ ಗಮನಿಸಲಿಲ್ಲವೋ ತಿಳಿಯದಾಗಿದೆ.

ಯು. ಆರ್. ಅನಂತಮೂರ್ತಿಯವರ ಕಾದಂಬರಿ “ಸಂಸ್ಕಾರ”ದ ಪ್ರಾಣೇಶಾಚಾರ್ಯರು ಸನ್ಯಾಸಿಯಾಗಬೇಕು ಇಲ್ಲವೇ ತ್ಯಾಗದ ಬಾಳನ್ನು ನಡೆಸಬೇಕೆಂಬ “ಹುಳಿ ಛಲ”ದಿಂದ ಹುಟ್ಟಿನಿಂದಲೇ ರೋಗಿಷ್ಟೆಯಾಗಿದ್ದ ಹೆಣ್ಣನ್ನು ಮದುವೆಯಾದವರು.(ಸಂಸ್ಕಾರ ಪುಟ ೭೭). ಅವರ ಹೆಂಡತಿಯೇ “ನನ್ನನ್ನು ಕಟ್ಟಿಕೊಂಡು ನಿಮಗೇನು ಸುಖ? ಮಗು ಬೇಡವೇ? ಇನ್ನೊಂದು ಮದುವೆಯಾಗಿ” ಎಂದು ಆಗಾಗ ಹೇಳುತ್ತಿದ್ದರೂ ಸಹ ಎರಡನೇ ಮದುವೆ ಆಗಿರಲಿಲ್ಲ.(ಅದೇ ಪುಟ ೧) ಇವಳು ರೋಗಿಯಾಗಿದ್ದರಿಂದ ನಾನು ಇನ್ನಷ್ಟು ಹದವಾದೆ ಎಂದು ಪ್ರಾಣೇಶಚಾರ್ಯರು ತಮ್ಮ ಪಾಡಿನ ಬಗ್ಗೆ ಹಿಗ್ಗುತ್ತಿದ್ದರು.(ಪುಟ ೨). ಹೀಗಾಗಿ ಚಂದ್ರಿಯೊಡನೆ ಸಮಾಗಮ ಆಗುವವರೆಗೆ ಅವರು ಅಂತಹ ಅನುಭವದಿಂದ ವಂಚಿತರಾಗಿದ್ದವರು. ಆ ಘಟನೆಯ ನಂತರ “……. ನನ್ನನ್ನು ಇಷ್ಟು ದಿನ ನಡೆಸಿಕೊಂಡು ಬಂದಿದ್ದ ಧರ್ಮ ಪಳಗಿಸಿಟ್ಟ ಹುಲಿಯಂತಹ ಕಾಮ ಇದ್ದಿರಬೇಕು ಅಷ್ಟೇ …….. ಚಂಗನೆ ನೆಗೆದು ಹಲ್ಲು ತೋರಿಸಿಬಿಟ್ಟಿತು” ಎಂದು ಕೊಳ್ಳುತ್ತಾರೆ. (ಅದೇ ಪುಟ ೮೪). ಅವರ ಕಾಮಕ್ಕೆ ಅವರೇ ಸೃಷ್ಟೀಕರಣ ಕೊಟ್ಟುಕೊಂಡು ಬಿಟ್ಟಿರುವುದರಿಂದ ಓದುಗರು ಅವರು ಮಾಡಿದ್ದು ಸರಿಯೇ ಅಥವಾ ತಪ್ಪೇ ಎಂಬ ಯಾವುದೇ ತೀರ್ಮಾನಕ್ಕೆ ಬರುವುದು ಬಹುಶಃ ಸಾಧ್ಯವಾಗದೆ ಇರಬಹುದು. ಏಕೆಂದರೆ ಚಂದ್ರಿಗಂತೂ ಇದು “ಬಲಾತ್ಕಾರ”ಎಂದು ಅನಿಸಿಲ್ಲ; ಆಕೆಯಲ್ಲಿ ಆ ಭಾವನೆಯೇ ಬಂದಿಲ್ಲ. ಅದರ ಬದಲಾಗಿ ಆಕೆಯಲ್ಲಿ ಧನ್ಯತೆಯ,ಸಂತೋಷದ ಭಾವವೇ ತುಂಬಿದೆ. ಆದರೆ ಆ ಅನುಭವವನ್ನು ಆಚಾರ್ಯರು ಪದೇಪದೇ ಜ್ಞಾಪಿಸಿಕೊಳ್ಳುತ್ತಾರೆ. (ಪುಟ ೬೯ರಿಂದ ಕಾದಂಬರಿಯ ಕೊನೆತನಕ ಈ ಅಂಶ ಹೆಚ್ಚಿನ ಒತ್ತು ಪಡೆದಿದೆ) ಇದರ ಜತೆಗೆ ಪ್ರಾಣೇಶಾಚಾರ್ಯರು ತಾವೆಂದೂ ಗಮನಿಸದಿದ್ದ, ಲೆಖ್ಖಕ್ಕೆ ತಾರದ “ಬೆಳ್ಳಿ” ಎಂಬ ತರುಣಿಯ ದೇಹದ ಬಗ್ಗೆ ನಾನಾ ರೀತಿಯ ಆಸೆಗಳ, ಕಲ್ಪನೆಗಳ ಕನಸುಗಳನ್ನು ತಮ್ಮ ಜಾಗೃತ ಸ್ಥಿತಿಯಲ್ಲೇ ಕಾಣಲು ತೊಡಗುತ್ತಾರೆ!(ಸಂಸ್ಕಾರ ಪುಟ ೮೪ ಮತ್ತು ೧೨೮). ಇಂತಹ ಒಂದು ಪ್ರಕರಣವನ್ನು ಎಚ್. ಎಸ್. ವೆಂಕಟೇಶಮೂರ್ತಿಯವರು “ಪ್ರಾಣೇಶಾಚಾರ್ಯರು ತಮ್ಮ ಜೀವನ ಶ್ರದ್ಧೆಯನ್ನು ಕಾಪಾಡಿಕೊಂಡು, ತಾವು ಒಪ್ಪಿಕೊಂಡ “ದರ್ಶನ”ವನ್ನು “ಭಿನ್ನವಾಗದಂತೆ” ಉಳಿಸಿಕೊಳ್ಳುತ್ತಾರೆ ಎಂಬ ತೀರ್ಮಾನಕ್ಕೆ ಬರುತ್ತಾರೆ.

(ಡಾ।।ಎಸ್ ಎಲ್ ಭೈರಪ್ಪನವರ ಕಾದಂಬರಿಗಳಲ್ಲಿ ಧರ್ಮ ಮತ್ತು ಸಂಸ್ಕೃತಿ  ಪುಟ ೩೩೬–ಶ್ರೋತ್ರಿಯವರ ಪ್ರಕರಣದ ಜೊತೆ ಹೋಲಿಸುತ್ತಾ). ಭೈರಪ್ಪನವರ “ಅನ್ವೇಷಣ”ಕಾದಂಬರಿಯಲ್ಲಿ ಬರುವ “….. … ವರ್ಣನೆ ಮಾಡುಕ್ಕೆ ಹೊರಟರೆ ಮನಸ್ಸು ಲಂಪಟವಾಗುತ್ತದೆ. ವಾಸ್ತವ ಅನುಭವಕ್ಕಿಂತ ಲಂಪಟತನ ಯಾವಾಗಲೂ ಕೆಟ್ಟದ್ದು ……… (ಪುಟ ೧೪೬  ಪ್ರಥಮ ಮುದ್ರಣ ೧೯೭೬) ಎಂಬ ಮಾತಿನ ಹಿನ್ನಲೆಯಲ್ಲಿ ಪ್ರಾಣೇಶಾಚಾರ್ಯರು ಒಪ್ಪಿಕೊಂಡ “ದರ್ಶನ”ವನ್ನು ಓದುಗರೇ ನಿರ್ಧರಿಸಬೇಕು.
(ಈ ಲೇಖನದಲ್ಲಿ ಪ್ರಸ್ತಾಪಿಸಿರುವ “ವಂಶವೃಕ್ಷ” ಕಾದಂಬರಿಯ ಪುಟಗಳು ಐದನೇ ಮುದ್ರಣ ೧೯೮೧ರದ್ದು ಮತ್ತು “ಸಂಸ್ಕಾರ”ದ ಪುಟಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ೧೯೮೨ರಲ್ಲಿ ಪ್ರಕಟಿಸಿದ “ವಿಶ್ವ ಕನ್ನಡ ಸಮ್ಮೇಳನ” ಮಾಲಿಕೆಯದು).

(ಮುಂದಿನ ಮುಖಾಮುಖಿ —-“ದಾಟು ಮತ್ತು ಭಾರತೀಪುರ” ಕಾದಂಬರಿಗಳ ಬಗ್ಗೆ)

39 ಟಿಪ್ಪಣಿಗಳು Post a comment
 1. ನವೆಂ 15 2013

  ಶಿವಪೂಜೆಯಲ್ಲಿಯೂ ಕರಡಿಯನ್ನು ತರುವ ಉದ್ದೇಶ ಸ್ಪಷ್ಟವಾಗಲಿಲ್ಲ. ಭೈರಪ್ಪನವರ ಕಾದಂಬರಿಗಳ ವಿಮರ್ಶೆ ಎನ್ನುತ್ತ ಅನಂತಮೂರ್ತಿಗಳನ್ನು ಕೂರಿಸಿದ್ದು ಯಾಕೆ?

  ಉತ್ತರ
  • M.A.Sriranga
   ನವೆಂ 15 2013

   In my first article (mukhamukhi -1 dtd 10-10-2013) I have explained in detail for your doubt. Please refer to it

   ಉತ್ತರ
 2. Nagshetty Shetkar
  ನವೆಂ 17 2013

  ಶ್ರೀರಂಗ ಅವರೇ, ನೀವು ಈ ಜಿಜ್ಞಾಸಾ ಸರ್ಕಸ್ ಮೂಲಕ ಏನನ್ನು ಸಾಬೀತು ಪಡಿಸ ಹೊರಟಿದ್ದೀರಿ?

  ಉತ್ತರ
 3. M. S. Chaitra
  ನವೆಂ 18 2013

  ಸಂಸ್ಕಾರ ಮತ್ತು ವಂಶವೃಕ್ಷ ಎರಡೂ ಕೃತಿಗಳು ಧರ್ಮವನ್ನು ಕುರಿತು ಗಂಭೀರ ಚರ್ಚೆಯನ್ನು ಮಾಡುತ್ತವೆ. ಈ ಎರಡೂ ಕೃತಿಗಳಲ್ಲಿ ಧರ್ಮವನ್ನು ರಿಲಿಜನ್ ಪರಿಕಲ್ಪನೆಗೆ ಸಮಾನಾರ್ಥಕವಾಗಿ ಬಳಸಲಾಗಿದೆ. ಹಾಗಾಗಿ ಧರ್ಮವೆಂದರೆ ಈ ಇಬ್ಬರೂ ಲೇಖಕರ ಪ್ರಕಾರ ರಿಲಿಜನ್ ಎಂಬ ಅರ್ಥವನ್ನಂತೂ ನಿರಾಕರಿಸುವುದಿಲ್ಲ. ಈ ಎರಡೂ ಕೃತಿಗಳು ನಮ್ಮ ಸಾಮಾಜಿಕ ಜೀವನದಲ್ಲಿ ಧರ್ಮಗ್ರಂಥಗಳು ಅತ್ಯಂತ ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನೂ ನಂಬಿರುವಂತಿದೆ. ಹಾಗಿದ್ದ ಪಕ್ಷದಲ್ಲಿ ಅವರ ಕಥೆ ಮತ್ತು ಕಥಾವಸ್ತುಗಳೇನೇ ಇರಲಿ ಇಬ್ಬರಿಗೂ ಕೆಲವು ಸಾಮಾನ್ಯ ನಂಬಿಕೆಗಳು ಇರುವಂತೆ ಕಾಣಿಸುತ್ತಿದೆಯಲ್ಲ? ಶ್ರೀ ಅನಂತ ಮೂರ್ತಿಯವರು ಮತ್ತು ಶ್ರೀ ಭೈರಪ್ಪನವರು ಒಂದರ್ಥದಲ್ಲಿ ಓರಿಯೆಂಟಲಿಸಂನ ಪುನರುತ್ಪಾದನೆ ಮಾಡುತ್ತಿಲ್ಲವೇ?
  — ಎಂ. ಎಸ್. ಚೈತ್ರ, ಬೆಂಗಳೂರು

  ಉತ್ತರ
  • M.A.Sriranga
   ನವೆಂ 19 2013

   It is very clear in the two novels that the important characters have faith in sanatana dharma. No doubt in it. The main problem discussed in these novels is how the two main characters differs in some aspects. Even now U R Ananthamurthy is not against to hindudharma If we read his chintana grantagalu, ankana barahagalu, sankruti kathanagalu we can observe this fact. No doubt he
   criticise some aspects. Like wise Bhyrappa is also not a spokesman of hindudharma. Both Bhyrappa and Ananthamurthy are misinterpreted by some corners of our media. And regarding your question about reproduction of orientalisam we have to remember that by recent socialism aspects it is not fair to come to a conclusion about those novels. Because we have to consider the period also to which the story relates. If you are interested in URA’s books other than novels I can give a list of them which I have read so far. Thanks for your good comments. Sorry for replying in english. I could not use KANNADA SLATE of nilume. Now I am learning about it.

   ಉತ್ತರ
   • ನವೆಂ 20 2013

    ಚೈತ್ರಾರವರು ಹೇಳುವಂತೆ, ಅನಂತ ಮೂರ್ತಿಯಷ್ಟೇ ಭೈರಪ್ಪನವರೂ ಓರಿಯಂಟಲಿಸಂ ಅನ್ನು ಪುನರುತ್ಪಾಧಿಸುತ್ತಾರೆ ಎನ್ನುವುದು ಅವರ ‘ದಾಟು’ ಕಾದಂಬರಿಯಲ್ಲಿ ಎದ್ದುಕಾಣುತ್ತದೆ. ಅನಂತ ಮೂರ್ತಿಯವರು ಪ್ರಾಣೇಶಾಚಾರ್ಯನ ಶವದ ‘ಸಂಸ್ಕಾರ’ ಸಮಸ್ಯೆಯನ್ನು ಬಿಡಿಸಲು ಅಗ್ರಹಾರದದ ಬ್ರಾಹ್ಮಣೋತ್ತಮರು “ಶಾಸ್ತ್ರ” ಗ್ರಂಥಗಳನ್ನು ದುರ್ಬೀನು ಹಾಕಿಕೊಂಡು ಹುಡುಕುತ್ತಾರೆ. ಅದೇ ರೀತಿಯಲ್ಲಿ ಭೈರಪ್ಪನವರ ‘ದಾಟು’ವಿನಲ್ಲಿ ಸೆನ್ಸಸ್ ಅಧಿಕಾರಿಗಳು ಜಾತಿಗಳ ಅಂತಸ್ತನ್ನು ನಿರ್ಧರಿಸಲು ಬರುತ್ತಾರೆ ಎಂದಾಗ ಊರಿನ ವಿಭಿನ್ನ ಜಾತಿಗಳ (ವಿಭಿನ್ನ ಬ್ರಾಹ್ಮಣ ಜಾತಿಗಳವರನ್ನೂ ಸೇರಿದಂತೆ) ಮುಖಂಡರುಗಳು ರಹಸ್ಯವಾಗಿ ಊರಿನ ಪುರೋಹಿತ (ಅರ್ಚಕ) ನಿಗೆ ಕಾಣಿಕೆ (ಲಂಚ) ಕೊಟ್ಟು ‘ಧರ್ಮಶಾಸ್ತ್ರ’ಗಳ ಪ್ರಕಾರ ತಮ್ಮ ತಮ್ಮ ಜಾತಿಗಳು ಶ್ರೇಷ್ಟ ಜಾತಿಗಳೆಂದು ಹೇಳಬೇಕೆಂದು ಅರ್ಚಕನಿಗೆ ನಿವೇದಿಸಿಕೊಳ್ಳುತ್ತಾರೆ. ಹಾಗೆಯೇ ‘ಶಾಸ್ತ್ರ’ಗಳ ಪ್ರಕಾರ ಜಾತಿ ಶ್ರೇಣೀಕರಣ ನಿರ್ಧಾರ ಪ್ರಸಂಗವನ್ನೂ ಭೈರಪ್ಪನವರು ಚಿತ್ರಿಸುತ್ತಾರೆ. ಇದು ಅಪ್ಪಟ ಓರಿಯಂಟಲಿಸಂ ಗ್ರಹಿಕೆಯ ಪುನರುತ್ತಾಧನೆ!!! ಅದರಲ್ಲೂ ಜಾತಿ ಅಂತಸ್ತು ನಿರ್ಣಯ ಪುರೋಹಿತನೋರ್ವನ ಕೈಯಲ್ಲಿರುವಂತೆ ಚಿತ್ರಿಸಿರುವ ರೀತಿಯಂತೂ ಹಾಸ್ಯಾಸ್ಪದ ರೀತಿಯಲ್ಲಿ ಚಿತ್ರತವಾಗಿದೆ. ಮತ್ತು ಆತ ಹಣದಾಸೆಗಾಗಿ ಇಲ್ಲದ ಶ್ಲೋಕಗಳನ್ನು ಹುಡುಕಿ ತೆಗೆದು ಇಲ್ಲವೇ ಇಲ್ಲದ ಅರ್ಥನೀಡಿ ಜಾತಿ ಅಂತಸ್ತನ್ನು ಹೆಚ್ಚಿಸಬಲ್ಲ ಮತ್ತು ಕೆಳಗಿಳಿಸಬಲ್ಲ!!!.. ಇದು ಭಾರತದ ಜಾತಿವ್ಯವಸ್ಥೆ ಮತ್ತು ಬ್ರಾಹ್ಮಣ ಪುರೋಹಿತಶಾಹಿಯ ಬಗ್ಗೆ ಇರುವ ‘ಓರಿಯಂಟಲಿಸಂ’ ನ ಗ್ರಹಿಕೆಯ ಯಥಾವತ್ತಾದ ಚಿತ್ರಣವೇ ಆಗಿದೆ.

    ಉತ್ತರ
    • ಕ್ರಾಂತಿಕೇಶ್ವರ
     ನವೆಂ 20 2013

     ಪ್ರಿಯ ಷಣ್ಮುಖ, ದಾಟು ಕಾದಂಬರಿಯ ಬಗ್ಗೆ ನೀವು ಮೇಲೆ ಮಾಡಿರುವ ಟಿಪ್ಪಣಿ ಗಮನಾರ್ಹವಾಗಿದೆ. ಆದರೆ ನೀವು ಉದಾಹರಿಸುವ ಸಂದರ್ಭವನ್ನು ಇನ್ನೊಂದು ರೀತಿಯಲ್ಲೂ ಅರ್ಥೈಸಬಹುದು ಅಂತ ನನಗೆ ಅನ್ನಿಸುತ್ತದೆ. ದಾಟು ಕಾದಂಬರಿಯ ಈ ‘ಶ್ರೇಣೀಕರಣ’ದ ಕತೆ ಬಾಲಗಂಗಾಧರ ಅವರು ಹೇಳುತ್ತಾ ಬಂದಿರುವ ಹಾಗೆ ಸ್ಥಳೀಯ ಜೀವನಕ್ರಮಗಳು ತಮ್ಮ ಅಸ್ತಿತ್ವಕ್ಕಾಗಿ ಸೆಕ್ಯೂಳರೈಸ್ ಆಗುವ ದುರಂತಮಯ ಸನ್ನಿವೇಶ ಅಂತ ನಿಮಗೆ ಅನ್ನಿಸಲಿಲ್ಲವೇ? ಒಂದು ಹಳ್ಳಿಯಲ್ಲಿ ಸ್ವಾಭಾವಿಕವಾಗಿಯೇ ಇರಬಹುದಾದ ವಿವಿಧ ಜಾತಿಗಳ ನಡುವಿನ ಅಧಿಕಾರ ಹಂಚಿಕೆಯ ವೈವಿಧ್ಯತೆಯನ್ನು ಹಿಂದೂ ರಿಲಿಜನ್ನಿನ ಧರ್ಮ ಶಾಸ್ತ್ರದ ನೆಲೆಯಲ್ಲಿ ಸಮರ್ಥಿಸಿಕೊಳ್ಳುವ ಅನಿವಾರ್ಯತೆ ಹಳ್ಳಿಯ ಜನರಿಗೆ ಉಂಟಾಗಿದೆ. ಇದಕ್ಕೆ ಸೆಕ್ಯೂಲರ್ ಪ್ರಭುತ್ವದ ಸೆನ್ಸಸ್ ಕಾರ್ಯಕ್ರಮ ಪ್ರಚೋದಕವಾಗಿ ಕೆಲಸ ಮಾಡಿದೆ. ಓರಿಯಂಟಲಿಸಂ’ ನ ಗ್ರಹಿಕೆಗಿಂತ ಸೆಕ್ಯೂಲರ್ ಪ್ರಭುತ್ವ ತಂದು ಒದಗಿಸಿದ ವಿಕೃತಿಯ ಚಿತ್ರಣ ಅಂತ ನನ್ನ ಅನ್ನಿಸಿಕೆ.

     ಉತ್ತರ
     • ನವೆಂ 20 2013

      ಪ್ರಿಯ ಕ್ರಾಂತಿಕೇಶ್ವರರೇ, ಹಳ್ಳಿಯ ವಿಭಿನ್ನ (ಶಿಕ್ಷಿತರಲ್ಲದ) ಜಾತಿಯವರಿಗೆ ಇದು ಗ್ರಹಿಕೆಗೆ ನಿಲುಕದ ಸಂಗತಿ. ಆದರೆ ಪಾಶ್ಚಿತ್ಯ ಶಿಕ್ಷಣದ ಪರಿಚಯವಿದ್ದ ಪಂಡಿತರುಗಳ ಪ್ರತಿಕ್ರಿಯೆಯಷ್ಟೇ ಹೀಗಿರುತ್ತದೆ. (ಬಾಲುರವರು ತಮ್ಮ ಲೇಖನದಲ್ಲಿ ಅದನ್ನೇ ತೋರಿಸುತ್ತಾರೆ.) ಈ ಪ್ರಸಂಗದ ಉಧಾಹರಣೆಯಲ್ಲಿ ಮಾತ್ರವೇ ಆಗಿದ್ದರೆ ನೀವು ಹೇಳಿದ್ದು ಸರಿ. ಆದರೆ, ಊರ ಗೌಡ ಮತ್ತು ಪೂಜಾರಿಯ ಸಂಬಂದಗಳಲ್ಲಿ, ಅಸ್ಪೃಶ್ಯ ಜಾತಿಗಳು, ಶೂದ್ರ ಜಾತಿಗಳು ಬ್ರಾಹ್ಮಣ ಜಾತಿಗಳು ನಡುವಣ ಸಂವಹನ, ವ್ಯವಹಾರಗಳನ್ನು ಚಿತ್ರಿಸಿರುವ ಸ್ವರೂಪ ಮತ್ತು ಮತ್ತು ಅದು ಆ ಸ್ವರೂಪದಲ್ಲಿಯೇ ಇರಲಿಕ್ಕೆ ವಿಭಿನ್ನ ಜಾತಿಗಳವರ ಬಾಯಿಯಿಂದ ಪದೇ ಪದೇ ‘ ದರ್ಮಶಾಸ್ತ್ರಗಳು, ಧಾರ್ಮಿಕ ಕಟ್ಟಳೆ, ಜಾತಿವ್ಯವಸ್ಥೆಯ ಕಟ್ಟಪಾಡುಗಳ ಬಗ್ಗೆ ಧಿರ್ಘ ವಿವರಣೆಗಳನ್ನು ಕೊಟ್ಟಿರುವುದು ಹಳ್ಳಿಯ ಸಂಧಿಗ್ದ ಸ್ಥಿತಿಯನ್ನು ಸೂಚಿಸುವುದಿಲ್ಲ; ಬದಲಿಗೆ ನಮ್ಮ ಸಮಾಜದ ಕುರಿತ ಕಾದಂಬರಿಕಾರರ ‘ಗ್ರಹಿಕೆ’ಯನ್ನು ಸೂಚಿಸುತ್ತದೆ ಎಂದು ನನಗನಿಸುತ್ತದೆ.

      ಉತ್ತರ
      • ನವೀನ
       ನವೆಂ 20 2013

       >>ಅನಂತ ಮೂರ್ತಿಯವರು ಪ್ರಾಣೇಶಾಚಾರ್ಯನ ಶವದ ‘ಸಂಸ್ಕಾರ’ ಸಮಸ್ಯೆಯನ್ನು ಬಿಡಿಸಲು ಅಗ್ರಹಾರದದ ಬ್ರಾಹ್ಮಣೋತ್ತಮರು “ಶಾಸ್ತ್ರ” ಗ್ರಂಥಗಳನ್ನು ದುರ್ಬೀನು ಹಾಕಿಕೊಂಡು ಹುಡುಕುತ್ತಾರೆ. <<

       ಷಣ್ಮುಖ ಸರ್,
       ಇದು ಓರಿಯಂಟಲಿಸಂ ಆದೀತೆ? ಯಾಕೆಂದರೆ ಆಯಾ ಪಂಗಡಗಳಲ್ಲಿ ಪದ್ದತಿಗಳಿರುವಂತೆ, ಬ್ರಾಹ್ಮಣರಲ್ಲೂ ಇರುತ್ತದಲ್ಲವೇ? 'ಶಾಸ್ತ್ರ ಗ್ರಂಥ'ಗಳನ್ನು ಹುಡುಕುವುದರ ಬಗ್ಗೆ ಹೇಳುತಿದ್ದಿರೇ? ಬಿಡಿಸಿ ಹೇಳಿ

       ಉತ್ತರ
      • ಕ್ರಾಂತಿಕೇಶ್ವರ
       ನವೆಂ 20 2013

       ಪ್ರಿಯ ಷಣ್ಮುಖ, ನೀವು ಈ ಕುರಿತು ಒಂದು ಲೇಖನವನ್ನು ಬರೆದು ಪ್ರಕಟಿಸಿದರೆ ಚೆನ್ನಾಗಿರುತ್ತದೆ ಅಂತ ನಿಮ್ಮಲ್ಲಿ ಕೋರಿಕೆ.

       ಉತ್ತರ
       • Nagshetty Shetkar
        ನವೆಂ 20 2013

        ಷಣ್ಮುಖ, ಕ್ರಾಂತಿಕೇಶ, ಚೈತ್ರಾ etc ಗಳೇ, ನೀವು ಸಿ ಎಸ್ ಎಲ್ ಸಿ ಯ ನಿವೃತ್ತ ಸಂಶೋಧಕರೂ ಅಭಿಮಾನಿಗಳೂ ಎಲ್ಲ ಕೂಡಿ ರಾಷ್ಟ್ರೋತ್ಥಾನ ಪ್ರಕಾಶನದ ವತಿಯಿಂದ ಕನ್ನಡದ ಪ್ರಮುಖ ಸಾಹಿತ್ಯ ಕೃತಿಗಳ ಮೇಲೆ ನಿಮ್ಮ ಈ ಓರಿಯೆಂಟಲಿಸ್ಟ್ ವಿಮರ್ಶೆ ಮಾಡಿ ಒಂದು ದೊಡ್ಡ ಪುಸ್ತಕ ಪ್ರಕಟಿಸಿ ಅದನ್ನು ಪೇಜಾವರ ಸ್ವಾಮಿಗಳ ಸಮ್ಮುಖದಲ್ಲಿ ನಮೋ ಕೈಲಿ ಬಿಡುಗಡೆ ಮಾಡಿಸಿ ಕನ್ನಡಪ್ರಭಾ ವಿಜಯವಾಣಿ ಪತ್ರಿಕೆಗಳ ಮುಖಪುಟದಲ್ಲಿ ರಿಪೋರ್ಟ್ ಬರೆಸಿ. ಒಳ್ಳೆ ಐಡಿಯಾ! ಹೇ ಹೇ!

        ಉತ್ತರ
       • ಪ್ರವೀಣ್
        ನವೆಂ 20 2013

        ನವೀನ್ ರವರೇ,
        ನೀವು ಹೇಳಿರುವಂತೆ ಎಲ್ಲಾ ಪಂಗಡಗಲ್ಲಿಯೂ ಅವರವರ ಪದ್ಧತಿಗಳಿರುತ್ತವೆ. ಆದರೆ ಆ ಪದ್ಧತಿಗಳನ್ನು ತಿಳಿದುಕೊಳ್ಳಲು ಧರ್ಮಶಾಸ್ತ್ರಗಳನ್ನು ಹುಡುಕಲು ಹೋಗುವುದಿಲ್ಲ. ಬದಲಿಗೆ ಹಿರಿಯರು ಹೇಳಿರುವಂತೆ/ನಡೆಸಿಕೊಂಡು ಬಂದಂತೆ ಆಚರಣೆಗಳನ್ನು ನಡೆಸಿಕೊಂಡು ಬರುತ್ತಾರೆ. ಆದರೆ ‘ಸಂಸ್ಕಾರ’ದ ಸಂದರ್ಭದಲ್ಲಿ ಅನಂತಮೂರ್ತಿಯವರು ನಾರಾಯಣಪ್ಪನ ಶವ ಸಂಸ್ಕಾರವನ್ನು ಹೇಗೆ ನಡೆಸಬೇಕೆಂಬುದನ್ನು ತಿಳಿಯಲು ಧರ್ಮಶಾಸ್ತ್ರದಲ್ಲಿ ಹುಡುಕಾಡುತ್ತಾರೆ. ಇದು ಓರಿಯಂಟಲಿಸ್ಟರ ಗ್ರಹಿಕೆ ಏಕೆಂದರೆ ಆಚರಣೆಗಳನ್ನು ಹೇಗೆ ನಡೆಸಬೇಕು ನಡೆಸಬಾರದು ಎಂಬುದನ್ನು ಕ್ರಿಶ್ಚಿಯಾನಿಟಿ ಮತ್ತು ಇಸ್ಲಾಮ್ ನಲ್ಲಿ ರಿಲಿಜನ್ನಿನ ಗ್ರಂಥಗಳು ತಿಳಿಸುತ್ತವೆ. ಓರಿಯೆಂಟಲಿಸ್ಟರ ಪ್ರಕಾರ ಹಿಂದೂಯಿಸಂ ಭಾರತೀಯರ ರಿಲಿಜನ್ ಆಗಿದ್ದು, ಧರ್ಮಶಾಸ್ತ್ರಗಳು ಅದರ ರಿಲಿಜನ್ನಿನ ಸ್ಕ್ರಿಪ್ಚರ್ ಗಳೆಂದು ಭಾವಿಸಿದರು. ಹಾಗೆಯೇ ಇಲ್ಲಿನ ಆಚರಣೆಗಳಿಗೆ ನಿರ್ದೇಶನವನ್ನು ನೀಡುವ ಕೆಲಸವನ್ನು ಆ ಧರ್ಮಶಾಸ್ತ್ರಗಳು ಮಾಡುತ್ತವೆಂದು ವಿವರಿಸಿದರು. ಅದೇ ರೀತಿಯಾಗಿ ಅನಂತಮೂರ್ತಿಯವರು ತಮ್ಮ ಕಾದಂಬರಿಯಲ್ಲಿ ನಿರೂಪಿಸುತ್ತಾರೆ. ಹಾಗಾಗಿ ಅದು ಓರಿಯೆಂಟಲಿಸ್ಟ್ ಗ್ರಹಿಕೆಯೇ ಹೊರತು ಭಾರತದ ವಾಸ್ತವವಲ್ಲ.

        ಉತ್ತರ
        • ನವೀನ
         ನವೆಂ 20 2013

         ಪ್ರವೀಣ್ ಸರ್,

         ವೇದಗಳಂತೆ ಅಥವಾ ನಾವು ದಿನ ನಿತ್ಯ ಮಾಡುವ ಬೇರೆ ಬೇರೆ ಪೂಜೆಯ ಮಂತ್ರಗಳೆಲ್ಲ ಗ್ರಂಥಗಳ ರೂಪದಲ್ಲಿ ದಾಖಲಾಗಿಹುದಲ್ಲವೇ.ಆ ರೀತಿಯಲ್ಲೆ ಕೆಲವು ಪಂಗಡಗಳ ಪದ್ದತಿಗಳು ದಾಖಲಾಗಿರಬಹುದಾದ ಸಾಧ್ಯತೆಗಳು ಇರಬಹುದಾಗಿದೆ ಅನ್ನುವುದು ನನ್ನ ಅನಿಸಿಕೆಯಾಗಿದೆ.

         ಉತ್ತರ
       • ಪ್ರವೀಣ್
        ನವೆಂ 20 2013

        ಮಿ. ನಾಗ್ಶೆಟ್ಟಿ…
        ಟೀಕೆ ಮಾಡಲೆಂದೇ ಕಾಮೆಂಟು ಬರಿಯುತ್ತಿರಲ್ಲ. ಇದುವರೆಗೂ ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಅನಂತಮೂರ್ತಿ ವರ್ಸಸ್ ಬೈರಪ್ಪ ಎಂದೇ ಬಿಂಬಿತವಾಗಿರುವುದು. ಅವರ ಕಾದಂಬರಿಗಳನ್ನು ಮುಖಾಮುಖಿ ಮಾಡಿ ಅವರ ಮೂಲಭೂತ ವಿಚಾರಗಳಲ್ಲಿ ಕೂಡ ಇಬ್ಬರೂ ಭಿನ್ನವೆಂದೇ ತರ್ಕಿಸುತ್ತಿರುವುದು. ಹೀಗಿರುವಾಗ ಇಬ್ಬರ ಗ್ರಹಿಕೆಯೂ ಒಂದೇ ತಳಹದಿಯ ಮೇಲೆ ನಿಂತಂತಿದೆ ಎಂಬ ವಿಚಾರವನ್ನು ಮಂಡಿಸಿದರೆ, ಅದರ ಕುರಿತು ಕುತೂಹಲ ಹುಟ್ಟಬೇಕು. ಅದು ಬಿಟ್ಟು….!

        ಉತ್ತರ
        • Nagshetty Shetkar
         ನವೆಂ 20 2013

         ಮಿ. ಪ್ರವೀಣ್, ಅಯ್ಯೋ ಕೂಡಲಸಂಗಮದೇವರೇ! ನೀವುಗಳು ಕನ್ನಡದ ಪ್ರಮುಖ ಸಾಹಿತಿಗಲೆಲ್ಲರೂ ಒಂದೇ ತಳಹದಿಯ ಮೇಲೆ ನಿಂತಂತಿದೆ ಅಂತ ಸಾಧಿಸುವ ಪುಸ್ತಕ ಪ್ರಕಟಿಸಿ ಅಂತ ಅಂದದ್ದು ತಪ್ಪೇ?

         ಉತ್ತರ
         • ನವೀನ
          ನವೆಂ 20 2013

          ಹೂಂ.ಪ್ರಕಟಿಸಬಹುದಾಗಿದೆ.ನಮ್ಮ ಶೆಟ್ಕರ್ ಸರ್ ಅವರದು ವಿಶಾಲ ಹೃದಯವಾಗಿದೆ (ಎಷ್ಟಾದರೂ ಎಡಪಂಥೀಯರಲ್ಲವೇ) ಅವರೇ ಮುದ್ರಣದ ಖರ್ಚು ವೆಚ್ಚ ನೊಡಿಕೊಳ್ಳುತ್ತಾರೆ ಎನ್ನುವ ಭರವಸೆಯಿದೆ.

          ಉತ್ತರ
          • ನವೆಂ 20 2013

           “ಮುದ್ರಣದ ಖರ್ಚು ವೆಚ್ಚ” NaMo hai naa!

       • ನವೆಂ 20 2013

        ಪ್ರಿಯ ಕ್ರಾಂತಿಕೇಶ್ವರರೇ, ತಮ್ಮ ಸಲಹೆಗೆ ಧನ್ಯವಾದಗಳು. ಈ ಕುರಿತು ಪ್ರವೀಣ್ ರವರು ಲೇಖನ ಬರೆಯುತಿದ್ದಾರೆ. ಶೀಘ್ರವೇ ಅದು ಇಲ್ಲಿ ಪ್ರಕಟಗೊಳ್ಳುವುದು ಅಂದುಕೊಂಡಿದ್ದೇನೆ.

        ಉತ್ತರ
   • Nagshetty Shetkar
    ನವೆಂ 20 2013

    ಶ್ರೀರಂಗ ಅವರೇ, ಸಂಸ್ಕಾರದ ಪ್ರಾಣೇಶ ಹಾಗೂ ವಂಶವೃಕ್ಷದ ಶ್ರೋತ್ರಿ ಇಬ್ಬರೂ ಬ್ರಾಹ್ಮಣ್ಯದ ಪತಾಕೆಗಳು. ಪ್ರಾಣೇಶನಿಗೆ ಕೊನೆಗೆ ಬ್ರಾಹ್ಮಣ್ಯ ತನ್ನ ವೈಯಕ್ತಿಕ ಬದುಕನ್ನು ನರಕವಾಗಿಸಿದೆ ಎಂದು ಜ್ಞಾನೋದಯವಾಗುತ್ತದೆ. ಚಂದ್ರಿಯೊಡನೆ ಕೂಡಿ ಬ್ರಾಹ್ಮಣ್ಯದ ಪತಾಕೆಯನ್ನ ಕೆಳಗಿಳಿಸುತ್ತಾನೆ. ಆದರೆ ಶ್ರೋತ್ರಿಗೆ ಜ್ಞಾನೋದಯವಾದಂತಿಲ್ಲ. ತನ್ನ ಸೊಸೆಯ ಮರುಮದುವೆಗೆ ಆತ ವಿರೋಧಿಸದೇ ಇದ್ದದ್ದು ಆತನ ಲಿಬರಲ್ ಧೋರಣೆ ಏನಲ್ಲ. ಡಿಬೇಟರ್ ಭೈರಪ್ಪನವರು ಕುಣಿಸಿದ ಹಾಗೆ ಕುಣಿಸುವ ಪಾತ್ರ ಶ್ರೋತ್ರಿಯದ್ದು. ಭೈರಪ್ಪನವರಿಗೆ ಆಧುನಿಕ ಧೋರಣೆಯ ಕಾತ್ಯಾಯಿನಿಯನ್ನು ಸೋಲಿಸಲೇ ಬೇಕು ಎಂಬ ಹುಳಿ ಛಲ. ಬ್ಯಾಡ್ ಫೈತ್.

    ಉತ್ತರ
    • M.A.Sriranga
     ನವೆಂ 20 2013

     Mr Shetkar please once again read what H S Venkateshamurthy has said about Kathyayani’s second marriage. And also we have to consider the backgrounds of social life prevailing in those days.

     ಉತ್ತರ
 4. ನವೆಂ 19 2013

  ಪ್ರಾಣೇಶಾಚಾರ್ಯರು ಯಾವ ಧರ್ಮಕ್ಕಾಗಿ ತ್ಯಾಗಜೀವನ ನಡೆಸಿದರೋ ತಿಳಿಯದು. ಧರ್ಮಶಾಸ್ತ್ರಗಳೇ ನಾಕು ಬಗೆಯ ಪುರುಷಾರ್ಥಗಳನ್ನು ಹೇಳುತ್ತವಲ್ಲ, ಅದರಲ್ಲಿ ಕಾಮವೂ ಒಂದೆಂದು ಕಾಶಿಯಲ್ಲಿ ಧರ್ಮಶಾಸ್ತ್ರ ಅಭ್ಯಸಿಸಿದ ಆಚಾರ್ಯರಿಗೆ ತಿಳಿಯದೆ ಹೋಯಿತೇ?

  ಉತ್ತರ
  • Nagshetty Shetkar
   ನವೆಂ 19 2013

   ಪ್ರಾಣೇಶಾಚಾರ್ಯರು ತ್ಯಾಗ ಜೀವನ ನಡೆಸಿದ್ದು ಹೆಂಡತಿಯ ಮೇಲಿನ ಪ್ರೀತಿ ಹಾಗೂ ನಿಷ್ಥೆಯಿಂದ.

   ಉತ್ತರ
   • ನವೀನ
    ನವೆಂ 19 2013

    >> ಯು. ಆರ್. ಅನಂತಮೂರ್ತಿಯವರ ಕಾದಂಬರಿ “ಸಂಸ್ಕಾರ”ದ ಪ್ರಾಣೇಶಾಚಾರ್ಯರು ಸನ್ಯಾಸಿಯಾಗಬೇಕು ಇಲ್ಲವೇ ತ್ಯಾಗದ ಬಾಳನ್ನು ನಡೆಸಬೇಕೆಂಬ “ಹುಳಿ ಛಲ”ದಿಂದ ಹುಟ್ಟಿನಿಂದಲೇ ರೋಗಿಷ್ಟೆಯಾಗಿದ್ದ ಹೆಣ್ಣನ್ನು ಮದುವೆಯಾದವರು.(ಸಂಸ್ಕಾರ ಪುಟ ೭೭).

    ಉತ್ತರ
    • Nagshetty Shetkar
     ನವೆಂ 19 2013

     You are right. Typical vaidik attitude.

     ಉತ್ತರ
     • ನವೀನ
      ನವೆಂ 19 2013

      ಯಾರದ್ದು ಅನಂತಮೂರ್ತಿಯವರದ್ದೇ?

      ಉತ್ತರ
      • Nagshetty Shetkar
       ನವೆಂ 19 2013

       “ಹುಳಿ ಛಲ”

       ಉತ್ತರ
 5. ಡಿಸೆ 2 2013

  “ಸಾಹಿತ್ಯವು ಜೀವಪರವಾದ ಮೌಲ್ಯಗಳನ್ನು ಹುಡುಕುವ ಮಾಧ್ಯಮ”

  ladaiprakashanabasu.blogspot.in/2013/12/blog-post_5578.html

  ಉತ್ತರ
  • ವಿಜಯ್ ಪೈ
   ಡಿಸೆ 2 2013

   ನನ್ನ ಪ್ರಪಂಚ ಪ್ರಾರಂಭವಾಗುವುದು ಈ …………ಯಿಂದ, .ಮುಂದುವರೆಯುವುದು ಈ ……………ಯಲ್ಲಿ, ಕೊನೆಗೊಳ್ಳುವುದು ಈ ………ಲ್ಲೇ!. ನನಗೆ ಬೇರೆ ಲೋಕವಿಲ್ಲ.

   ಇಂತಿ …………….

   ಉತ್ತರ
   • Nagshetty Shetkar
    ಡಿಸೆ 2 2013

    ಏನಿದು ಮಿ. ವಿಜಯ್, ಸೂಯಿಸೈಡ್ ನೋಟ್ ಇದ್ದ ಹಾಗಿದೆ ನಿಮ್ಮ ಕಮೆಂಟು! ಪ್ಲೀಸ್ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಬೇಡಿ.

    @ರಾಕೇಶ್ ಶೆಟ್ಟಿ: ದಯವಿಟ್ಟು ವಿಜಯ್ ಅವರನ್ನು ಉಳಿಸಿಕೊಳ್ಳಿ.

    ಉತ್ತರ

Trackbacks & Pingbacks

 1. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೩ | ನಿಲುಮೆ
 2. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊದಿಗೆ ಮುಖಾಮುಖಿ – ೪ | ನಿಲುಮೆ
 3. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫ | ನಿಲುಮೆ
 4. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೬ | ನಿಲುಮೆ
 5. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೭ | ನಿಲುಮೆ
 6. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೮ | ನಿಲುಮೆ
 7. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೯ | ನಿಲುಮೆ
 8. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦ | ನಿಲುಮೆ
 9. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೫ – ನಿಲುಮೆ
 10. ಭೈರಪ್ಪನವರ ಕಾದಂಬರಿಗಳ ವಿಮರ್ಶೆಗಳೊಂದಿಗೆ ಮುಖಾಮುಖಿ – ೧೦ – ನಿಲುಮೆ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments