ಮಂಗಳನ ಜೀವಿಗಳು ಭೂಮಿಗೆ ಬರುತ್ತಿವೆ
-ವಿಷ್ಣು ಪ್ರಿಯ
ಮಂಗಳನಲ್ಲಿ ಇರುವಂಥ ಜೀವಿಗಳನ್ನು ನಾವು ಭೂಮಿಗೆ ತೆಗೆದುಕೊಂಡು ಬರುತ್ತಿದ್ದೇವೆ. ನೀಲಿ ಬಣ್ಣದ ಈ ಜೀವಿಗಳ ಬಗ್ಗೆ ಭೂಮಿಯಲ್ಲಿಯೇ ಅಧ್ಯಯನ ನಡೆಸುತ್ತೇವೆ. ಅವು ಭೂಮಿಯಲ್ಲಿ ಬದುಕುವ ಶಕ್ತಿ ಹೊಂದಿವೆಯೇ ಎಂಬುದನ್ನು ಪರೀಕ್ಷಿಸುತ್ತೇವೆ….
ಹೀಗಂತ ನಾಸಾದ ವಿಜ್ಞಾನಿಗಳು ಘೋಷಿಸಿದ್ದಾರೆ. ಮಂಗಳನ ಜೀವಿಗಳು ಎಂದಾಕ್ಷಣ ಹಾಲಿವುಡ್ ಚಲನಚಿತ್ರಗಳು ನೆನಪಾದರೆ ಅದರಲ್ಲಿ ಅಚ್ಚರಿಯಿಲ್ಲ. ಸ್ಫೀಶೀಸ್-2, ಮೆನ್ ಇನ್ ಬ್ಲಾಕ್ 3, ಪ್ರಾಮೆಥೌಸ್ ಮೊದಲಾದ ಚಿತ್ರಗಳೆಲ್ಲ ಅನ್ಯಗ್ರಹಗಳ ಜಿವಿಗಳ ಕಲ್ಪನೆಯನ್ನಿಟ್ಟುಕೊಂಡೇ ನಿರ್ಮಿಸಿರುವಂಥದ್ದು. ಬೇರೆ ಗ್ರಹದ ಜೀವಿಗಳು ಭೂಮಿಗೆ ಬಂದರೆ ಹೇಗಿರುತ್ತದೆ ಎಂಬುದನ್ನು ಹಲವು ಶತಮಾನಗಳ ಹಿಂದಿನಿಂದಲೇ ನಾವು ಕಲ್ಪಿಸಿಕೊಳ್ಳುವುದಕ್ಕೆ ಶುರು ಮಾಡಿದ್ದೆವು. ಆದರೆ ಆ ಕಲ್ಪನೆಗಳು ವಾಸ್ತವ ರೂಪಕ್ಕೆ ಬರುತ್ತಿರುವುದು ಮಾತ್ರ ಈಗ!ಮಂಗಳನಲ್ಲಿರುವ ಜೀವಿಗಳು ಇಲ್ಲಿಗೆ ಬರುತ್ತಿವೆ ಎಂದರೆ ಅವು ಹೇಗಿರಬಹುದು ಎಂಬ ಯೋಚನೆ ಹುಟ್ಟಿಕೊಳ್ಳುವುದು ಸಹಜ. ಸಿನೆಮಾಗಳಲ್ಲಿ ನೋಡಿದಂತೆ ಚಿತ್ರ-ವಿಚಿತ್ರ ಆಕಾರದ ಮಾನವರಂಥ ಜೀವಿಗಳು, ತಲೆ ಮೇಲೆ ಕೋಡು ಇರುವಂಥ ಮನುಷ್ಯರು, ಹಾರು ತಟ್ಟೆಗಳಲ್ಲಿ ಹಾರಾಡಿಕೊಂಡು ಬಂದು ಮನುಷ್ಯರ ಮೇಲೆ ಯುದ್ಧ ಮಾಡುವಂಥ ಜೀವಿಗಳು… ಅಲ್ಲ, ಈ ಸಿನೆಮಾಗಳು, ಫಿಕ್ಷನ್ನುಗಳಲ್ಲಿ ಅನ್ಯಗ್ರಹ ಜೀವಿಗಳ ಬಗೆಗಿನ ಕಲ್ಪನೆಯೇ ಅದ್ಭುತ. ಆದರೆ ಮಂಗಳಗ್ರಹದಿಂದ ತರಲಾಗುತ್ತಿರುವ ಜೀವಿಗಳು ಇಂಥವಲ್ಲ.
ಸೂಕ್ಷ್ಮ ಜೀವಿಗಳು
ಸಧ್ಯಕ್ಕೆ ಮಂಗಳನ ಅಂಗಳದಿಂದ ಭೂಮಿಗೆ ಬರುತ್ತಿರುವುದು ಸೂಕ್ಷ್ಮ ಜೀವಿಗಳು. ಮಂಗಳಗ್ರಹದ ಉಪಗ್ರಹ ಫೋಬೋಸ್ ನಿಂದ ಮಣ್ಣಿನ ಸ್ಯಾಂಪಲ್ ಭೂಮಿಗೆ ತರುತ್ತಿದ್ದಾರೆ ಜೇ ಮೆಲೋಷ್ ನೇತೃತ್ವದ ವಿಜ್ಞಾನಿಗಳು. ಈ ಸ್ಯಾಂಪಲ್ ಸೂಕ್ಷ್ಮಾಣುಜೀವಿಗಳನ್ನು ಒಳಗೊಂಡಿದ್ದು, ಅವುಗಳ ಬಗೆಗಿನ ಅಧ್ಯಯನವು ಮಂಗಳನಲ್ಲಿನ ಜೀವಾಸ್ತಿತ್ವದ ಬಗ್ಗೆ ಸ್ಪಷ್ಟ ಚಿತ್ರಣ ಕೊಡಲಿದೆ ಎನ್ನುತ್ತಾರೆ ವಿಜ್ಞಾನಿಗಳು. ಈ ತಂಡವು ಫೋಬೋಸ್ ಅಧ್ಯಯನಕ್ಕೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿದ್ದು, ಫೋಬೋಸ್ ಅಧ್ಯಯನವು ಮಂಗಳನ ಬಗ್ಗೆ ಎಲ್ಲ ರೀತಿಯ ಮಾಹಿತಿಯನ್ನೂ ಕೊಡುತ್ತದೆ. ಮಂಗಳನ ಬಗ್ಗೆ ನಮ್ಮಲ್ಲಿ ಈಗಿರುವ ಕಲ್ಪನೆಗಳಲ್ಲಿ ಎಷ್ಟು ನಿಜ ಎಂಬುದು ಗೊತ್ತಾಗಲಿದೆ.
ಹೇಗೆ ಮಾಹಿತಿ?
ಫೋಬೋಸ್ ಉಪಗ್ರಹದಲ್ಲಿನ ಪ್ರತಿ 200 ಗ್ರಾಂ ಸ್ಯಾಂಪಲ್ಲಿನಲ್ಲಿ 10ನೇ ಒಂದು ಭಾಗವು ಕಳೆದ 1 ಕೋಟಿ ವರ್ಷಗಳಲ್ಲಿ ಮಂಗಳ ಗ್ರಹದ ಮೇಲ್ಮೈಯಲ್ಲಿ ಸೃಷ್ಟಿಯಾದ ವಸ್ತುಗಳೂ, ಮಂಗಳ ಗ್ರಹದಲ್ಲಿರುವ 5000 ಕೋಟಿ ವಸ್ತುಗಳೂ, 50 ಗ್ರಾಂ ಭಾಗವು 350 ವರ್ಷಗಳ ಹಿಂದೆ ಮಂಗಳಗ್ರಹದಲ್ಲಿ ಸೃಷ್ಟಿಯಾದ ವಸ್ತುಗಳೂ ಒಳಗೊಂಡಿರುತ್ತವೆ. ನಿಗದಿತ ಕಾಲವನ್ನು ಪರಿಗಣಿಸಿ ಈ ಸ್ಯಾಂಪಲ್ಲಿನ ವೈಜ್ಞಾನಿಕ ಸಂಶೋಧನೆಯನ್ನು ನಡೆಸಿದಾಗ ಮಂಗಳ ಗ್ರಹದ ಚಿತ್ರಣ ಸಿಗುತ್ತದೆ.
ಬಹುಶಃ ಇನ್ನು ಕೆಲವೇ ವರ್ಷಗಳಲ್ಲಿ ಮಂಗಳ ಗ್ರಹದ ಬಗ್ಗೆ ಸಂಪೂರ್ಣ ವಿವರಗಳು ನಮಗೆ ಸಿಗುವುದು ಖಂಡಿತ. ಆಗ ಅನ್ಯಗ್ರಹ ಜೀವಿಗಳು, ವಿವಿಧ ಆಕಾಶಕಾಯಗಳಲ್ಲಿ ಜೀವಾಸ್ತಿತ್ವ ಸಾಧ್ಯತೆ, ಜೀವ ಪೋಷಕ ಅಂಶಗಳು ಮತ್ತಿತರ ವಿಚಾರಗಳ ಬಗ್ಗೆಯೂ ನಮ್ಮ ಜ್ಞಾನ ವೃದ್ಧಿಯಾಗಲಿದೆ.





ವಿಷ್ಣು ಪ್ರಿಯರವರೇ, ಅತ್ಯುತ್ತಮವಾದ ಮಾಹಿತಿಪೂರ್ಣವಾದ ಲೇಖನ. ಮಂಗಳನಲ್ಲಿ ಜೀವ ಇದ್ದರೂ ನಮ್ಮ ಭೂಮಿಗೆ ಬಂದು ಬದುಕುವ ಸಾಧ್ಯತೆ ಇಲ್ಲ ಅಂದುಕೊಂಡಿದ್ದೇನೆ. ಆದರೂ ಕುತೂಹಲ ಹೆಚ್ಚಾಗಿಯೇ ಇದೆ
ಅರಿಮೆಯ ಅಂಕಣವನ್ನ ಅಚ್ಚಾಕಿದ ನಿಲುಮೆಗೆ ನಲ್ವಾರಯ್ಕೆಗಳು. ಆದರೆ ಅಂಕಣದಲ್ಲಿ ಹಲವು ತಪ್ಪುಗಳಿವೆ.
ಮೇಲಿನ ಅಂಕಣದಲ್ಲಿರುವ ತಪ್ಪುಗಳು:
೧. ಮಂಗಳನಲ್ಲಿ ಇರುವಂಥ ಜೀವಿಗಳನ್ನು ತೆಗೆದುಕೊಂಡು ಬರುತ್ತಿದ್ದೇವೆ: ತಪ್ಪು! ಮಂಗಳ ಗ್ರಹದಲ್ಲಿ ನಚ್ಚು ಜೀವಿಗಳೂ ಸೇರಿ ಯಾವುದೇ ತರದ ಜೀವಿಗಳು ಇರುವಿಕೆಗೆ ಯಾವ ಆದಾರವೂ ಇಲ್ಲ. ವಿಗ್ನಾನಿಗಳು ಅವನ್ನು ತರುತ್ತಿಲ್ಲ!
೨. ನೀಲಿ ಬಣ್ಣದ ಈ ಜೀವಿಗಳ ಬಗ್ಗೆ ಭೂಮಿಯಲ್ಲಿಯೇ ಅಧ್ಯಯನ ನಡೆಸುತ್ತೇವೆ: ತಪ್ಪು! ‘ಹಸಿರು’ ಬಣ್ಣದ ನಚ್ಚು ಜೀವಿಗಳು ಇರಬಹುದೇ ಎಂದು ವಿಗ್ನಾನಿಗಳು ಕೇಳಿಕೊಳ್ಳುತ್ತಿದ್ದಾರೆ. ‘ನೀಲಿ’ ಜೀವಿಗಳು ಇವೆ ಎಂದು ಹೇಳುತ್ತಿಲ್ಲ! ಇನ್ನು ಅವುಗಳ ಮೇಲೆ ಬೂಮಿಯಲ್ಲಿ ಅರಕೆ ಮಾಡುವುದು ಬೋ ದೂರದ ಮಾತಾಯಿತು. ಹಸಿರು ನಚ್ಚು ಜೀವಿಯು (ಬ್ಲೂಗ್ರೀನ್ ಆಲ್ಗೆ) ಬೂಮಿಯ ಹಳೇಯ/ಮೊದಲ ಜೀವಿ. ಹಾಗಾಗಿ ಅದರಂತಾ ನಚ್ಚು ಜೀವಿಗಳು ಇರುವ ಸಾದ್ಯತೆ ಹೆಚ್ಚು. ಅಶ್ಟೆ!!
೩. ಅವು ಭೂಮಿಯಲ್ಲಿ ಬದುಕುವ ಶಕ್ತಿ ಹೊಂದಿವೆಯೇ ಎಂಬುದನ್ನು ಪರೀಕ್ಷಿಸುತ್ತೇವೆ….: ತಪ್ಪು!!
೪. ಸಧ್ಯಕ್ಕೆ ಮಂಗಳನ ಅಂಗಳದಿಂದ ಭೂಮಿಗೆ ಬರುತ್ತಿರುವುದು ಸೂಕ್ಷ್ಮ ಜೀವಿಗಳು: ತಪ್ಪು! ಮಂಗಳನ ಉಪಗ್ರಹವಾದ ಪೋಬೋಸ್ನ ಅಂಗಳದಿಂದ ‘ಚೂರನ್ನು’ ತರವುದರ ಸಾದಕ ಬಾದಕಗಳ ಮೇಲೆ ಸಂಸೋದನೆ ನಡೆಯುತ್ತಿದೆ!
೫. ಮಂಗಳಗ್ರಹದ ಉಪಗ್ರಹ ಫೋಬೋಸ್ ನಿಂದ ಮಣ್ಣಿನ ಸ್ಯಾಂಪಲ್ ಭೂಮಿಗೆ ತರುತ್ತಿದ್ದಾರೆ ಜೇ ಮೆಲೋಷ್ ನೇತೃತ್ವದ ವಿಜ್ಞಾನಿಗಳು: ತಪ್ಪು!! ಜೇ ಮೆಲೋಶ್ ಮುಂದಾಳತ್ವಡ ಅರಿಮೆಗಾರನ್ನು ‘ಪೋಬೋಸ್ನಿಂದ ತಂದ ಚೂರು ಮಂಗಳದಲ್ಲಿ ನಚ್ಚು ಜೀವಿಗಳ ಇರುವಿಕೆಯ ಬಗ್ಗೆ ತಿಳಿವು ಕೊಡಬಲ್ಲದೆ’ ಎಂಬ ವಿಶಯದ ಮೇಲೆ ಅರಕೆ ಮಾಡಲು ನಾಸ ಆರಿಸಿತ್ತು. ಅವರು ತಮ್ಮ ವರದಿಯನ್ನೂ ಸಲ್ಲಿಸಿದ್ದಾರೆ ಅಶ್ಟೆ.
೬. 200 ಗ್ರಾಂ ಸ್ಯಾಂಪಲ್ಲಿನಲ್ಲಿ 10ನೇ ಒಂದು ಭಾಗವು ಕಳೆದ 1 ಕೋಟಿ ವರ್ಷಗಳಲ್ಲಿ ಮಂಗಳ ಗ್ರಹದ ಮೇಲ್ಮೈಯಲ್ಲಿ ಸೃಷ್ಟಿಯಾದ ವಸ್ತುಗಳೂ: ತಪ್ಪು! ಪೋಬೋಸ್ನ ೨೦೦ ಗ್ರಾಂ ಚೂರಿನಲ್ಲಿ ಇಪ್ಪತ್ತುಲಕ್ಶಕ್ಕೊಂದರಶ್ಟು ಬಾಗ (ಅಂದರೆ ೦.೧ ಮಿಲಿಗ್ರಾಂ) ಕಳೆದ ಒಂದು ಕೋಟಿ ವರ್ಶಗಳಲ್ಲಿ ಮಂಗಳದಿಂದ ಸಿಡಿದು ಪೋಬೋಸ್ಗೆ ಬಂದಿದ್ದಿರಬಹುದು!
೭. ಬಹುಶಃ ಇನ್ನು ಕೆಲವೇ ವರ್ಷಗಳಲ್ಲಿ ಮಂಗಳ ಗ್ರಹದ ಬಗ್ಗೆ ಸಂಪೂರ್ಣ ವಿವರಗಳು ನಮಗೆ ಸಿಗುವುದು ಖಂಡಿತ: ತಪ್ಪು! ಮಂಗಳನ ಬಗ್ಗೆ ಪೂರ್ತಿ ವಿವರ ಮಾನವ ಜಾತಿ ಇರುವವರೆಗೆ ಹುಡುಕಿದರೂ ಸಿಗುವುದಿಲ್ಲ!
ಮೇಲಿನ ಅಂಕಣ ಈ ಕೊಂಡಿಯಲ್ಲಿರುವ ಅಂಕಣದ (http://www.purdue.edu/newsroom/general/2012/120628T-MeloshHowellPhobos.html) ನುಡಿಮಾರ್ಪಿನಂತಿದೆ. ನುಡಿಮಾರುವಾಗ ಹಲವು ತಪ್ಪುಗಳಾಗಿವೆ. ಬರಹಗಾರರು ಮೂಲ ಅಂಕಣಗಳನ್ನ ಉಲ್ಲೆಕಿಸಿದ್ದಲ್ಲಿ ಒಳ್ಳೆಯದಿತ್ತು. ನುಡಿಮಾರುವುದು ತಪ್ಪಲ್ಲ. ಒಳ್ಳೆಯದೇ. ಕನ್ನಡಕ್ಕೆ ಬೇಕಾಗಿರುವಂತದ್ದೆ. ಆದರೆ ಮೂಲಗಳನ್ನ ಹೆಸರಿಸಬೇಕು. ಇಲ್ಲವಾದಲ್ಲಿ ಅದು ಅರಿಮೆಯ ಅಂಕಣವಾಗಲಾರದು.
ನಿಲುಮೆಗೆ: ನೀವು ಮುಂದೆ ಉಸಿರರಿಮೆಗೆ (ಬಯಾಲಜಿಗೆ) ನಂಟಿದ ಯಾವುದೇ ಅರಿಮೆಯ ಅಂಕಣಗಳನನ್ನ ನನಗೆ ಕಳಿಸಿಕೊಟ್ಟು ಒಂದೆರಡು ದಿನ ಕಾಲಾವಕಾಶ ಕೊಟ್ಟರೆ ತಪ್ಪು-ಒಪ್ಪುಗಳನ್ನ ಹೇಳುವ ಸೇವೆ ಮಾಡುತ್ತೇನೆ. ಆಮೇಲೆ ನೀವು ಅವುಗಳನ್ನ ಬರೆದವಿಗೆ ತಿದ್ದಲು ಹೇಳಲೂ, ಅಚ್ಚಾಕಲೂ ತೀರ್ಮಾನಿಸಬಹುದು.