ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 13, 2013

3

ಹಿಮ್ಮೇಳ – ಪಳಿಯುಳಿಕೆ ಒಂದರ ಉಳಿವಿಗೆ ಒಂದು ಪ್ರಯತ್ನ

‍ನಿಲುಮೆ ಮೂಲಕ

– ರಾಗು ಕಟ್ಟಿನಕೆರೆ,ಯಕ್ಷಮಿತ್ರ

himmela_n“ಹೋರಾಟ ಅಂದ್ರೆ ಹೊಡೆದಾಟ ಅಲ್ಲ ಕಾಣ್ರೋ” ಅಂತ ನಮ್ಮ ಮಾಸ್ತರು ಒಬ್ರು ಹೇಳ್ತಾ ಇದ್ರು. ನಮ್ಮ ಕನ್ನಡ ಸಂಸ್ಕೃತಿ ಉಳಿಬೇಕು ಅಂತ ನಾವು ಕಲ್ಲು ತೂರಾಡ್ಲೂ ಬಹುದು ಅಥವಾ ನಮ್ಮ ಸಂಸ್ಕೃತಿ ಯಾವುದು, ನಾವು ದಿನನಿತ್ಯ ಅದನ್ನ ಪಾಲಿಸ್ತಾ ಇದೀವಾ ಅಂತ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಲೂ ಬಹುದು. ಕನ್ನಡದಲ್ಲಿ ಬೋರ್ಡೇ ಹಾಕಲ್ಲ ಅನ್ನೋ ನಾವು, ಹಾಕಿರೋ ಬೋರ್ಡಗಳಲ್ಲಿ ಎಷ್ಟು ಕೆಟ್ಟದಾಗಿ ಕನ್ನಡ ಬರಿತೀವಿ, ಎಷ್ಟು ತಪ್ಪು ತಪ್ಪಾಗಿ ಬರಿತೀವಿ ಅಂತ ನೋಡ್ತೀವಾ, ಪ್ರತಿಭಟಿಸ್ತೀವಾ? ಬೆಂಗಳೂರು ಬಸ್ ನಿಲ್ದಾಣಗಳಲ್ಲೇ ನೋಡಿ: ಅಲ್ಸಸೂರು, ಹೊಯ್ಸಸಳ, ವಟರ್ ಟ್ಯಾಂಕ್ ಇತ್ಯಾದಿ. ನಮ್ಮ ಕನ್ನಡದ ಕಲೆಗಳು ನಮ್ಮ ಸಂಸ್ಕೃತಿಯ ಮೂರ್ತರೂಪಗಳು. ಈ ಕಲೆ ರೂಪದಲ್ಲಾದ್ರು ನಮ್ಮ ಸಂಸ್ಕೃತಿ ಉಳಿಬಹುದು ಅಂದ್ಕೋಬಹುದು. ಆದ್ರೆ ನಮ್ಮದೇ ಆದ ಕಲೆಗಳು ನಾಶ ಆಗ್ತಾ ಇದ್ರೂ ನಾವು ಫಿಲ್ಮ್ ನೋಡ್ಕೊಂಡು ಅರಾಮಿದ್ರೆ ನಮ್ಮ ಸಂಸ್ಕೃತಿ ಉಳಿಯತ್ತಾ? ಉಳಿಯತ್ತೋ ಇಲ್ವೋ ಆದ್ರೆ ಎನ್ ಕಳ್ಕೊಳ್ತಾ ಇದೀವಿ ಎನಾದ್ರು ಮಾಡ್ಲಿಕ್ಕೆ ಸಾದ್ಯನಾ ಅಂತಾದ್ರೂ ನೋಡ್ಬೇಕಲ್ವಾ?

ಕಲೆಗಳು ಅಂದ ತಕ್ಷಣ ನಮ್ಮ ಕನ್ನಡದ ಕಲೆಗಳಲ್ಲಿ ಎದ್ದು ಕಾಣೋದು ಯಕ್ಷಗಾನ ಬಯಲಾಟ. ಯಕ್ಷಗಾನ ಬಯಲಾಟ ಕೇವಲ ಕಲೆಯಷ್ಟೇ ಅಲ್ಲ ಇದು ನಮ್ಮ ಸಂಸ್ಕೃತಿಯ ಪಳಿಯುಳಿಕೆನೂ ಹೌದು. ಯಕ್ಷಗಾನದಲ್ಲಿ ಮಾತಾಡೋ ತರಾನೇ ಬೇರೆ – ಒಂದು ರೀತಿ ಚಂದ, ಶೃತಿ ಬದ್ಧ. ಇವತ್ತಿಗೂ ಹಳ್ಳಿಕಡೆ ಹೋದ್ರೆ ನಮ್ಮ ಈಡಿಗ ಸಮುದಾಯದವರು, ಹವ್ಯಕರು ಎಲ್ಲರೂ ಒಂತರಾ ಹಾಡಿದಾಗೆ ಶೃತಿಗೆ ಸರಿಯಾಗಿ ಮಾತಾಡ್ತಾರೆ. ಅದು ನಮ್ಮ ಮೂಲ ಕನ್ನಡ ಮಾತಾಡೊ ರೀತಿ ಇದ್ದಿರಬಹುದು. ಅದು ಯಕ್ಷಗಾನದಲ್ಲಿ ಉಳ್ಕೊಂಡಿದೆ ಅಂತ ಅನ್ನಿಸುತ್ತೆ. ಈಗ ತಮಿಳುನಾಡಿನಲ್ಲೇ ಹೆಚ್ಚು ಪ್ರಸಿದ್ಧವಾಗಿ ಇರೋ ನಮ್ಮ ಕರ್ನಾಟಕ ಸಂಗೀತದಲ್ಲಿನ ತಾಳಗಳ ಮೂಲರೂಪ ನಮ್ಮ ಯಕ್ಷಗಾನದಲ್ಲಿ ಇದೆ ಅಂತ ಡಾ.ರಾಘವ ನಂಬಿಯಾರ್ ಅಂತ ಒಬ್ಬ ಯಕ್ಷಗಾನ ಸಂಶೋಧಕರು ಪ್ರತಿಪಾದಿಸಿದಾರೆ. ಎಷ್ಟೋ ತಾಳಗಳು, ಕುಣಿತದ ಶೈಲಿ, ಹಾಡಿನ ಧಾಟಿ ಎಲ್ಲಾ ಕಳದು ಹೋಗಿದೆ ಅಂತೆ. ನಮ್ಮ ಬಾಡಿ ಲಾಂಗ್ವೇಜೇ ಬದಲಾಗಿಲ್ವಾ? ಇವನ್ನೇಲ್ಲಾ ನಂಬಿಯಾರರು ತಮ್ಮ ಪುಸ್ತಕ “ಹಿಮ್ಮೇಳ” ಅನ್ನೋದ್ರಲ್ಲಿ ಬರೆದಿಟ್ಟು ನಮ್ಮ ಯಕ್ಷಾಗನ ಮೂಲರೂಪ ಹಾಳಾಗದಹಾಗೆ ಉಳಿಬೇಕು ಅಂತ ಪ್ರಯತ್ನ ಮಾಡ್ತಾ ಇದಾರೆ.

ದೀವಟಿಗೆ ಬೆಳಕಲ್ಲಿ ಯಾವ್ದಾದ್ರೂ ಕಾರ್ಯಕ್ರಮ ನೋಡಿದೀರಾ? ನಮ್ಮ ಯಕ್ಷಗಾನ ಹಿಂದೆ ದೀವಟಿಗೆ ಬೆಳಕಲ್ಲಿ ನೆಡೀತಾ ಇತ್ತಂತೆ ಅದರ ಚಂದಾನೇ ಬೇರೆ ಅಂತ ನೋಡಿದವ್ರು ಹೇಳ್ತಾರೆ. ಆದ್ರೆ ಅವೆಲ್ಲಾ ಈಗ ಇಲ್ಲ. ಹೀಗೆ ಎಷ್ಟೋ ನಮ್ಮ ಸಂಸ್ಕೃತಿಯ ವಿಶೇಷಗಳು ವಿನಾಶವಾಗ್ತಾ ಇದ್ರೆ ನಾವು ನೋಡ್ತಾ ಇರೋದಾ? ಉಳಿಸಲ್ಲಿಕ್ಕೆ ಪ್ರಯತ್ನ ಮಾಡ್ಲೇ ಬೇಕಲ್ವಾ? ನಮಗೆ ಎಲ್ಲಾ ಮಾಡ್ಲಿಕ್ಕೆ ಆಗಲ್ಲ, ಆದರೆ ಹನಿಗೂಡಿ ಹಳ್ಳ ಅಂತಾರೆ. ಹಾಗಾಗಿ ಒಂದೊಂದಾಗಿ ನಮ್ಮ ಕೈಲಾದಲ್ಲಿ ನಮ್ಮತನ ಉಳ್ಸಿಕೊಳ್ಬೇಕು. ನಾವು ಯಕ್ಷಮಿತ್ರ ಅಂತ ಒಂದು ಗುಂಪು ಮಾಡಿಕೊಂಡು ನಮ್ಮ ಯಕ್ಷಗಾನವನ್ನ ಅದರ ಮೂಲ ರೂಪದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಉಳಿಸಬೇಕು ಅಂತ ಬರೆದಿರೋ “ಹಿಮ್ಮೇಳ” ಪುಸ್ತಕವನ್ನ ಮುದ್ರಿಸಿ ಎಲ್ಲಾರಿಗೂ ಸುಲಭವಾಗಿ ಸಿಗೋಹಾಗೇ ಮಾಡ್ಬೇಕು ಅಂತ ಪ್ರಯತ್ನ ಮಾಡ್ತಾ ಇದೀವಿ. ಸುಮಾರು ೨ ಲಕ್ಷ ಖರ್ಚು ಆಗುತ್ತೆ. ನಾವೇಲ್ಲ ಕೈಗೂಡಿಸ್ತಾ ಇದಿವಿ ನೀವೂ ಬನ್ನಿ. ನಿಮ್ಮ ಕೈಲಿ ಆದಷ್ಟು ವಾಗ್ದಾನ ಮಾಡಿ. ಈ ವೆಬ್ ಸೈಟ್ ಗೆ ಹೋಗಿ ನಿಮಗೆ ಎಷ್ಟು ಕೋಡ್ಲಿಕ್ಕೆ ಆಗುತ್ತೆ ಅಂತ ತಿಳಿಸಿ:  ಇದು ಹೊಡೆದಾಟ ಅಲ್ಲ;ನಮ್ಮ ನಿಮ್ಮ ಸಾತ್ವಿಕವಾದ ಹೋರಾಟ! ಎಲ್ಲರೂ ಒಗ್ಗಟ್ಟಾಗಿ ಒಳ್ಳೇ ಕೆಲಸ ಮಾಡೋಣ – ನಮ್ಮ ಸಂಸ್ಕೃತಿಗಾಗಿ. ನೀವೂ ಕೈಜೋಡಿಸಿ, ಕೈ ಕಲ್ಪವೃಕ್ಷವಾಗುತ್ತೆ!

ಹಿಮ್ಮೇಳ ಪುಸ್ತಕದ ಕುರಿತು :
ಹಿಮ್ಮೇಳ – ಯಕ್ಷಗಾನ ಬಯಲಾಟದ ಆಮೂಲಾಗ್ರ ಅಧ್ಯಯನ

ಆಟ, ದಶಾವತಾರ, ಬಯಲಾಟ ಎಂದೇ ನೂರಾರು ವರ್ಷಗಳಿಂದ ಪ್ರಸಿದ್ಧವಾಗಿದ್ದ ಕನ್ನಡದ ಕಲೆಯ ಇತ್ತೀಚಿನ ಹೆಸರೇ ಯಕ್ಷಗಾನ. ಜಾನಪದ ಕಲೆ ಎಂದು ಯಾವುದೇ ಪ್ರೊತ್ಸಾಹವಿಲ್ಲದೇ ತಿರಸ್ಕಾರಕ್ಕೆ ಒಳಗಾದ ಬಯಲಾಟದ ಅನೇಕ ವಿಧಗಳಲ್ಲಿ ಇದೂ ಒಂದು. ದೊಡ್ಡಾಟ, ಘಟ್ಟದಕೋರೆ, ಶ್ರೀ ಕೃಷ್ಣ ಪಾರಿಜಾತ ಹೀಗೆ ಅನೇಕ ರಂಗ ಕಲೆಗಳು ಮೂಲೆ ಗುಂಪಾಗಿ ನಶಿಸಿ ಹೋಗಿವೆ ಹೋಗುತ್ತಿವೆ. ಯಕ್ಷಗಾನವೆಂದು ಕರಾವಳಿ ಮತ್ತು ಮಲೆನಾಡಿನ ಬಡಗು ಮತ್ತು ತೆಂಕು ಶೈಲಿಯ ಆಟ ಇತ್ತೀಚೆಗೆ ಪ್ರಸಿದ್ಧಿಗೆ ಬಂದರೂ ಸಿನೆಮಾ, ಸುಗಮ ಸಂಗೀತ, ಟಿವಿ ಮತ್ತು ಶಾಸ್ತ್ರೀಯ ಎನಿಸಿಕೊಂಡ ಕಲೆಗಳ ಹಾವಳಿಗೆ ಸಿಕ್ಕು ಸಂಪೋರ್ಣ ವಿಕಾರಗೊಂಡು ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತ ತಲುಪಿದೆ. ಯಾವುದು ಯಕ್ಷಗಾನ ಯಾವುದು ಅಲ್ಲ ಎಂದು ದಿಟ್ಟವಾಗಿ ಪರಿಷ್ಕರಿಸಿ, ಯಕ್ಷಗಾನದ ಹಿಂದಿರುವ ತತ್ವಗಳು ಏನು, ಅದರ ರೂಪುರೇಷೆ ಯಾವುದು, ತಾಳ ರಾಗ ಕುಣಿತಗಳ ಹಿಂದಿರುವ ಚಾಲಕ ವ್ಯಾಕರಣ ಯಾವುದು ಎಂಬಿತ್ಯಾದಿ ಸಂಶೋಧನೆ ಮಾಡಿ ದಾಖಲಿಸುವ ಪ್ರಯತ್ನ ಸಂಪೂರ್ಣವಾಗಿ ಆಗಿರಲಿಲ್ಲ. ಅದಕ್ಕೆ ಪರಿಹಾರ ಸದೃಶವಾಗಿ ಡಾ ರಾಘವ ನಂಬಿಯಾರರ ಕೃತಿ ‘ಹಿಮ್ಮೇಳ’ ಈಗ ಪ್ರಕಟವಾಗಿದೆ.

ಯಕ್ಷಗಾನದ ಮೂಲ ಏನು ಎನ್ನುವುದರಿಂದ ಪ್ರಾರಂಭವಾಗುವ ಈ ಪುಸ್ತಕ, ಲಯ ಪ್ರಧಾನವಾದ ಯಕ್ಷಗಾನ ಕಲೆಯ ತಾಳಗಳ ರೂಪವನ್ನು ಶಾಸ್ತ್ರೀಯವಾಗಿ ನಿರೂಪಿಸುವ ಕೆಲಸ ಮಾಡುತ್ತದೆ. ಕರ್ನಾಟಕ ಸಂಗೀತಕ್ಕೆ ಹೋಲಿಸಿ, ತಾಳಗಳು, ಹಾಡುಗಳ ಸೊಲ್ಲಿಗೆ ಹೇಗೆ ಆಪ್ಯಾಯವಾಗಿ ಅಂಟಿಕೊಳ್ಳುತ್ತವೆ ಎಂದು ವಿವರಿಸುತ್ತದೆ. ಇಲ್ಲಿ ಎದ್ದು ಕಾಣುವ ಅಂಶ ಎಂದರೆ, ಯಕ್ಷಗಾನದಲ್ಲಿ ಕರ್ನಾಟಕ ಸಂಗೀತದ ತಾಳಗಳ ಮೂಲ ಸ್ವರೂಪ ಇನ್ನೂ ಜೀವಂತವಾಗಿದೆ ಎಂದು ನಂಬಿಯಾರರು ಸಿದ್ಧಮಾಡಿ ತೋರಿಸುವುದು. ಅಲ್ಲದೇ ತಾಳಗಳ ಹತ್ತು ಲಕ್ಷಣಗಳನ್ನು ಯಕ್ಷಗಾನದ ತಾಳಗಳಲ್ಲಿ ಹೇಗೆ ಕಾಣಬಹುದು ಎಂಬ ಅವರ ವಿವರಣೆ ಬಹಳ ಸ್ವಾರಸ್ಯಕರವಾಗಿ ಮೂಡಿಬಂದಿದೆ. ಇದರಲ್ಲಿ ಸಂಗೀತಕ್ಕೆ ಈ ಪುಸ್ತಕ ಕೊಡುವ ಒಂದು ಅಮೂಲ್ಯ ಕೊಡುಗೆ ಎಂದರೆ, ತಾಳಗಳ ಅಕ್ಷರ, ವಿಭಜನೆ ಮತ್ತು ಗತಿ ಎಲ್ಲಾವೂ ಒಂದೇ ಆಗಿದ್ದರೂ ಅಕ್ಷರದ ಕಾಲದ ಬದಲಾವಣೆ ಒಂದರಿಂದಲೇ ತಾಳ ಬದಲಾಗಬಹುದು ಎನ್ನುವ ಸಂಶೋಧನೆ.

ಯಕ್ಷಗಾನದ ಉಪಕರಣಗಳಾದ ಎರಡೂ ತಿಟ್ಟಿನ, ಕಂಚಿನ ತಾಳ, ಚಂಡೆ, ಮದ್ದಲೆ ಇತ್ಯಾದಿಗಳ ರಚನೆ, ಬಾರಿಸುವ ರೀತಿ ಮತ್ತು ಅವುಗಳ ಹಿಂದಿರುವ ತತ್ವ ಇವೆಲ್ಲವನ್ನೂ ಸಾದರಪಡಿಸಿ ಅವುಗಳನ್ನೂ ಸಂಪೂರ್ಣವಾಗಿ ರಚಿಸುವ ವಿವರನ್ನೂ ಈ ಪುಸ್ತಕದಲ್ಲಿ ನೀಡಿದ್ದಾರೆ ನಂಬಿಯಾರರು. ಯಕ್ಷಗಾನದ ಗುಟ್ಟು ಇರುವುದು ಮಟ್ಟುಗಳಲ್ಲಿ ಎಂದು ಬಲ್ಲವರು ಹೇಳಿದ್ದು! ಮಟ್ಟುಗಳೆಂದರೆ ವಿವಿಧ ಅಳತೆಯ ಛಂದೋಲಯಗಳಿಂದ ಉಂಟಾಗುವ ಹಾಡಿನ ಧಾಟಿ. ಒಂದೇ ರಾಗಗಳಲ್ಲಿ ಬರುವ ಬೇರೆ ಬೇರೆ ಮಟ್ಟುಗಳು ತಾಳಗಳಿಗೆ ಹೇಗೆ ಹೊಂದುತ್ತವೆ ಎಂದು ಕೋಷ್ಟಕಗಳ ಮೂಲಕ ತೋರಿಸುವ ಹೊಸ ಆವಿಷ್ಕಾರ ಇಲ್ಲಿ ಕಾಣಸಿಗುತ್ತದೆ. ಹೀಗೆ ಸುಮಾರು ೪೦ ವರ್ಷಕ್ಕೂ ಹೆಚ್ಚಿನ ಸಂಶೋಧನೆಯನ್ನು ಈ ಪುಸ್ತಕದಲ್ಲಿ ಹುದುಗಿಸಿಟ್ಟು ಯಕ್ಷಗಾನದ ರೂಪುರೇಷೆ ಮೂಲಧರ್ಮ ಅಜರಾಮರವಾಗಿ ಉಳಿಯುವಂತೆ ಮಾಡಿರುವುದು ರಾಘವ ನಂಬಿಯಾರರ ಹಿಮ್ಮೇಳ ಪುಸ್ತಕದ ಸಾಧನೆ.

ಎಲ್ಲಾ ಕಲೆಗಳಂತೆ ಯಕ್ಷಗಾನವೂ ಒಂದು ಮಾಧ್ಯಮ. ಬದಲಾವಣೆ ಒಳ್ಳೆಯದು, ಆದರೆ ಆ ಬದಲಾವಣೆಗಳು ಈ ಮಾಧ್ಯಮವನ್ನು ಬಲಪಡಿಸುವಂತಾಗಬೇಕೇ ಹೊರತು ಹಾಳುಮಾಡಿದಂತಾಗಬಾರದು. ಬುದ್ಧಿಪೂರ್ವಕವಾಗಿ, ಯಕ್ಷಗಾನದ ಮೂಲ ಚೌಕಟ್ಟಿನ ಅರಿವು ಮತ್ತು ಶ್ರೇಷ್ಟ ಕಲಾವಿದರ ಅನುಭವಗಳ ಸಂಮಿಶ್ರಣದಿಂದ ಬದಲಾವನಣೆ ಅಭಿವೃದ್ಧಿ ಬರಬೇಕು ಎನ್ನುವ ಕಳಕಳಿ ಈ ಪುಸ್ತಕದುದ್ದಕ್ಕೂ ಕಾಣಸಿಗುತ್ತದೆ. ನಮ್ಮ ಕನ್ನಡದ ಕಲೆಯಗಳ ಬಗ್ಗೆ ಒಲುಮೆ ಇದ್ದವರೆಲ್ಲರೂ ಓದಲೇ ಬೇಕಾದ ಗ್ರಂಥ – ಹಿಮ್ಮೇಳ.

ವೀ ಸೂ: ಈ ಗ್ರಂಥದ ಪುನರ್ಮುದ್ರಣಕ್ಕಾಗಿ ಪ್ರಯತ್ನ ನೆಡೆದಿದೆ. ತಾವೆಲ್ಲರೂ ಸಹಕರಿಸಬೇಕಾಗಿ ವಿನಂತಿ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ತಾಣವನ್ನು ಭೇಟಿಮಾಡಿ: http://www.shruti.hejje.com/pledge

3 ಟಿಪ್ಪಣಿಗಳು Post a comment
  1. Harihar Bhat, Bangalore's avatar
    ಫೆಬ್ರ 19 2013

    ಈ ರೀತಿ ಒಳ್ಳೆಯ ಕೆಲಸಗಳಿಗೆ Department of Kannada and Culture, Government of Karnataka ದಲ್ಲಿ ಕೋಟಿಗಟ್ಟಲೆ ಹಣ ಬಳಕೆಯಾಗದೆ ಉಳಿದಿದೆ ಎಂದು ಕೇಳಿದ್ದೇನೆ.

    ಸೂಕ್ತ ಯೋಚನೆ, ಯೋಜನೆಗಳ ಕೊರತೆ ಹಣ ಬಳಕೆಯಾಗದೆ ಉಳಿಯುವ ಕಾರಣ ಎಂತಲೂ ಕೇಳಿದ್ದೇನೆ.
    ಪ್ರಯತ್ನಿಸಬಹುದು.

    ಇನ್ನೊಂದು ಮಾತು. ಸರಕಾರದ ಕಾಸು ಗಿಟ್ಟಿಸಬೇಕೆಂದರೆ ಸರಿಯಾಗಿ ದಾರಿ ಕಾಣಲು ಅಧಿಕಾರ, ಪ್ರಭಾವ ಅತಿ ಅವಶ್ಯಕ. ಇಲ್ಲದಿದ್ದರೆ ಹುಲ್ಲು ಕಡ್ಡಿಯೂ ಅಲುಗುವದಿಲ್ಲ. ಕೇವಲ ವಿಶ್ವಾಸದ ಮಹಾಪೂರ ಹರಿಸಿ ಅಡ್ಡಾಡಿಸುತ್ತಾರೆ. ನೆನಪಿರಲಿ.

    ಹರಿಹರ ಭಟ್, ಬೆಂಗಳೂರು.
    http://www.hariharbhat.blogspot.com

    ಉತ್ತರ
    • Ragu Kattinakere's avatar
      ಮಾರ್ಚ್ 4 2013

      ಧನ್ಯವಾದಗಳು. ನಾವು ಸಾಧ್ಯವಾದಲೆಲ್ಲಾ ಪ್ರಯತ್ನಿಸುತ್ತೇವೆ.
      ರಾಗು ಕಟ್ಟಿನಕೆರೆ, ಯಕ್ಷಮಿತ್ರ

      ಉತ್ತರ

Trackbacks & Pingbacks

  1. ಹಿಮ್ಮೇಳ – ಪಳಿಯುಳಿಕೆ ಒಂದರ ಉಳಿವಿಗೆ ಒಂದು ಪ್ರಯತ್ನ | Yaksha ShrutiYaksha Shruti

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments