ಇದು ಸತ್ಯಕಥೆ – ಮಾನವ ಕಳ್ಳಸಾಗಣೆಯ ಕರಾಳ ಮುಖದ ದರ್ಶನ !
-ನಿತ್ಯಾನಂದ ವಿವೇಕವಂಶಿ.ಮಂಡ್ಯ
ಒಂದು ವರ್ಷಗಳ ದೀರ್ಘ ಅವಧಿಯ ನಂತರ ಮತ್ತೆ ಅರುಣಾಚಲ ಪ್ರದೇಶ ಮತ್ತು ಅಸ್ಸಾಂ ಪ್ರವಾಸ ಮಾಡಿದ ಖುಷಿಯೊಂದಿಗೆ ವಾಪಾಸು ಬರಬೇಕಾದರೆ ಮನಸ್ಸಿಗೆ ಹಾಯೆನಿಸಿತ್ತು. ನಾಲ್ಕು ಸಾವಿರ ಕಿಲೋಮೀಟರುಗಳ ದೂರ ಕ್ರಮಿಸಿ ಭೇಟಿಯಾದ ಅರುಣಾಚಲದ ನನ್ನ ಪ್ರಿಯ ವಿದ್ಯಾರ್ಥಿಗಳ ಮಕ್ಕಳ ಮುದ್ದು ಮುಖ, ಬೆಟ್ಟದಿಂದ ಬೀಸುವ ಗಾಳಿ, ತುಂತುರು ಮಳೆ, ಮೋಡ, ಅಸ್ಸಾಮಿನ ಚಹಾ ತೋಟ, ಕಾಡುಗಳು, ಬ್ರಹ್ಮಪುತ್ರ ನದಿಯ ವೈಭವವನ್ನು ನೋಡಿಕೊಂಡು ಬರಬೇಕಾದರೆ, ವಾಪಾಸು ಹೋಗಲೇಬೇಕಾ? ಎನ್ನಿಸುವಂತೆ ಆಗಿತ್ತು.
ಏಪ್ರಿಲ್ ಐದನೇ ತಾರೀಖು ಮದ್ಯಾಹ್ನ ಮೂರು ಘಂಟೆಗೆ ಗುವಾಹಟಿಯಿಂದ ಹೊರಟ ಟ್ರೈನು ಏಪ್ರಿಲ್ 7ರ ರಾತ್ರಿ ಚೆನ್ನೈ ತಲುಪಲಿತ್ತು. ಮೊದಲೇ ಬುಕ್ ಮಾಡಿದ್ದ ನನ್ನ ಸೀಟಿನಲ್ಲಿ ಕುಳಿತೆ. ನನ್ನ ಅಕ್ಕ ಪಕ್ಕದ ಸೀಟುಗಳಲ್ಲಿ ಅದಾಗಲೇ ಪ್ರಯಾಣಿಕರು ಬಂದು ಕುಳಿತಿದ್ದರು. ಎಲ್ಲರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನ ಅನಕ್ಷರಸ್ಥ ಮುಸ್ಲಿಮ್ ಹುಡುಗರು. ಕೆಲಸ ಮಾಡಲು ಅಸ್ಸಾಮಿನಿಂದ ಚೆನ್ನೈಗೆ ವಲಸೆ ಹೊರಟಿದ್ದರು. ಹಿಂದಿ ಭಾಷೆಯಲ್ಲಿ ನಾನು ಸರಾಗವಾಗಿ ಮಾತಾಡುತ್ತಿದ್ದರಿಂದಲೋ ಅಥವಾ ದಕ್ಷಿಣದವನೆಂಬ ಕಾರಣಕ್ಕೋ, ಬಹುಬೇಗ ಎಲ್ಲರೂ ಪರಿಚಯವಾದರು. ರೈಲು ಅಸ್ಸಾಮ್, ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಒರಿಸ್ಸಾ, ಆಂಧ್ರ ಪ್ರದೇಶ ರಾಜ್ಯಗಳನ್ನು ದಾಟಿ ತಮಿಳುನಾಡಿನ ಚೆನ್ನೈ ತಲುಪಬೇಕಿತ್ತು. ರೈಲಿನ ಕಿಟಕಿಯ ಬಳಿ ಕುಳಿತು ಆಗಾಗ ಬರುವ ಸ್ಟೇಷನ್‍ಗಳಲ್ಲಿ ರೋಟಿ, ವೆಜಿಟೆಬಲ್ ಪಲಾವ್‍ಗಳನ್ನು ತಿಂದುಕೊಂಡು ಬಾಟಲಿ ನೀರು ಕುಡಿಯುತ್ತಾ, ಹೊರಗಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಿದ್ದೆ. ರೈಲಿನಲ್ಲಿ ದೂರದ ಪ್ರಯಾಣ ಮಾಡಬೇಕಾದರೆ ಆಗಾಗ ಮಾರಾಟಕ್ಕೆ ಬರುವ ಆಯಾ ರಾಜ್ಯದ ವಿಶೇಷ ಹಣ್ಣು, ತಿಂಡಿ-ತಿನಿಸುಗಳನ್ನು ಕೊಂಡು ತಿನ್ನುವುದು ಬಹಳ ಮಜವಾದ ಸಂಗತಿ. ಅದರ ಜೊತೆಗೆ ಬೇರೆ ಬೇರೆ ರಾಜ್ಯಗಳ ಹವಾಮಾನ, ಭೌಗೋಳಿಕ ವೈವಿಧ್ಯತೆಗಳು, ಜನರ ಜೀವನ ಮತ್ತು ನದಿ ತೊರೆಗಳನ್ನು ನೋಡುವುದು ಅದಕ್ಕಿಂತಲೂ ಮಜವಾದ ಸಂಗತಿ. ಆದರೆ ನನ್ನ ಮಿದುಳು ಮತ್ತು ಹೃದಯ ಬಹಳ ಸಮಯ ಯೋಚಿಸುತ್ತಿದ್ದುದು, ಅಲ್ಲಿ ಕಾಣುತ್ತಿದ್ದ ಜನರ ಬಡತನ ಮತ್ತು ಅನಕ್ಷರತೆಯ ಬಗ್ಗೆ. ಅಸ್ಸಾಮಿನ ಗುವಾಹಟಿ ನಗರದಲ್ಲಿ ರೈಲ್ವೇ ಸ್ಟೇಶನ್ನಿನಲ್ಲಿ ಬರುತ್ತಿದ್ದ ಭಿಕ್ಷುಕರ, ಅಂಗವಿಕಲರ, ಅನಾಥ ಮಕ್ಕಳ ಗೋಳು, ರೈಲಿನ ಹೊರಗೆ ಪ್ಲಾಟ್ ಫಾರಮ್‍ನಲ್ಲಿ ಪ್ರಾಣಿಗಳಿಗಿಂತಲೂ ಕಡೆಯಾಗಿ ಬಿದ್ದಿರುತ್ತಿದ್ದ ಜನರ ಹೃದಯ ವಿದ್ರಾವಕ ದೃಶ್ಯಗಳು ನನ್ನನ್ನು ಮೂಕನನ್ನಾಗಿ ಮಾಡುತ್ತಿದ್ದವು. ಕುಡಿದು ಬಿದ್ದಿರುತ್ತಿದ್ದ ಜನರು, ತಂಬಾಕು, ಸಿಗರೇಟುಗಳನ್ನು ಸೇದಿ ಪ್ರಜ್ಞಾಹೀನ ಸ್ಥಿತಿ ತಲುಪಿದ್ದ ಅನೇಕರ ದರ್ಶನವೂ ಆಯಿತು. ಇದಲ್ಲದೇ ದುಡ್ಡಿಗಾಗಿ ಪೀಡಿಸುತ್ತಾ, ನಮಗೆ ತೊಂದರೆ ಕೊಟ್ಟ ಹಿಜಿಡಾಗಳ ಘೋರ ಮುಖದ ಪರಿಚಯವೂ ಆಯಿತು. ಹೀಗೆ ಮೊದಲನೇ ದಿನ ಬಹುಬೇಗ ಕಳೆದು ಹೋಯಿತು.
ಎರಡನೆಯ ದಿನ ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳಲ್ಲೂ ಅದೇ ಪರಿಸ್ಥಿತಿ. ರೈಲಿನ ಹಳಿಗಳ ಅಕ್ಕ ಪಕ್ಕ ಕಟ್ಟಿರುತ್ತಿದ್ದ ಮುರುಕಲು ಗುಡಿಸಲುಗಳು, ಹರಕಲು ಬಟ್ಟೆಗಳನ್ನು ಉಟ್ಟು, ಬಡತನವನ್ನೇ ಉಂಡು, ಬಡತನವನ್ನೇ ಕುಡಿಯುತ್ತಿದ್ದ ಜನಗಳನ್ನು ನೋಡಿ ಹೊಟ್ಟೆ ಉರಿಯುತ್ತಿತ್ತು. ಕೆಸರು, ಕೊಚ್ಚೆ ಗುಂಡಿಗಳಲ್ಲಿ ಬೆತ್ತಲೆಯಾಗಿ ಆಟ ಆಡುತ್ತಿದ್ದ ಪುಟಾಣಿ ಮಕ್ಕಳು ತಮ್ಮ ಮುಂದಿರುವ ಘೋರ ಭವಿಷ್ಯವನ್ನು ಎದುರು ನೋಡದೇ ತಮ್ಮನ್ನೇ ಮರೆತಿವೆಯೆಬಂತೆ ಭಾಸವಾಗುತ್ತಿತ್ತು. ಇದೆಲ್ಲವನ್ನು ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಅದೇಕೋ ಮನಸ್ಸು ಒಪ್ಪಲಿಲ್ಲ. ಇಷ್ಟರಲ್ಲೇ ನಮ್ಮ ಪಕ್ಕದ ಹಳಿಗಳಲ್ಲಿ ಅಸ್ಸಾಮ್, ಜಾರ್ಖಂಡ್, ಒರಿಸ್ಸಾ ರಾಜ್ಯದ ಅಪಾರ ಖನಿಜ ಸಂಪನ್ಮೂಲಗಳನ್ನು ಹೊತ್ತೊಯ್ಯುತ್ತಿದ್ದ ರೈಲು ಡಬ್ಬಿಗಳು ಕಣ್ಣಿಗೆ ಬಿದ್ದವು. ಪೆಟ್ರೋಲ್, ಮ್ಯಾಂಗನೀಸ್, ಕಲ್ಲಿದ್ದಲು ಸೇರಿದಂತೆ ಹಲವಾರು ಬೆಲೆಬಾಳುವ ಸಂಪತ್ತನ್ನು ಬೃಹದಾಕಾರದ ರೈಲು ದಬ್ಬಿಗಳು ಕೊಂಡೊಯ್ಯುತ್ತಿದ್ದುದನ್ನು ನೋಡಿ ಹೊಟ್ಟೆ ಉರಿಯಿತು. ಇದಕ್ಕೆಲ್ಲಾ ನಿಜವಾದ ಒಡೆಯರಾದ ಅಲ್ಲಿನ ಸ್ಥಳೀಯ ಜನ ತಮ್ಮ ಜಾಗದಲ್ಲೇ ಇರುವ ಶ್ರೀಮಂತಿಕೆಯ ಕಿಂಚಿತ್ ಅರಿವೂ ಇಲ್ಲದೇ ನಾಯಿ ನರಿಗಳಂತೆ ಬದುಕುತ್ತಿರುವುದನ್ನು ನೋಡಿ ಭ್ರಷ್ಟಾಚಾರದ ಬಗ್ಗೆ ಅಸಹ್ಯ ಹುಟ್ಟುತ್ತಿತ್ತು. ಶಿಕ್ಷಣ ನೀಡದೇ ಅಲ್ಲಿನ ಜನರನ್ನು ವಂಚಿಸುತ್ತಿರುವ ಸರ್ಕಾರಗಳು, ಜನಪ್ರತಿನಿಧಿಗಳ ಮೇಲೆ ಕ್ರೋಧ ಉಕ್ಕುತ್ತಿತ್ತು.
ಇದೇ ವೇಳೆಗೆ ನನ್ನ ಸೀಟಿನ ಬಳಿಗೆ ಬಂದ ರೈಲು ಅಧಿಕಾರಿ ನನ್ನ ಪಕ್ಕದಲ್ಲಿದ್ದ ಹುಡುಗರಲ್ಲಿ ಕೆಲವರ ಬಳಿ ಐ.ಡಿ. ಕಾರ್ಡ್ ಇಲ್ಲವೆಂದು 500 ರೂಪಾಯಿ ಲಂಚ ತಿಂದು ಹೋದ. ನನ್ನ ಪಕ್ಕದ ಸೀಟಿನಲ್ಲೇ ಕುಳಿತು ಪ್ರಯಾಣ ಮಾಡುತ್ತಿದ್ದ ರೈಲ್ವೇ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ರೈಲು ಅಧಿಕಾರಿ ಹೋದ ಮೇಲೆ ಹೇಳಿದ ವಿಷಯ, ವ್ಯವಸ್ಥೆಯ ಮೇಲೆ ನನಗೆ ಮತ್ತಷ್ಟು ಜಿಗುಪ್ಸೆ ಹುಟ್ಟಿಸಿತು. ಒಂದು ಟಿಕೇಟ್‍ನಲ್ಲಿ 6 ಜನರ ಹೆಸರಿರುವಾಗ ಒಬ್ಬನ ಬಳಿ ಐ.ಡಿ.ಕಾರ್ಡ್ ಇದ್ದರೆ ಸಾಕಾಗಿತ್ತು. ಇವರ ಬಳಿ ಮೂರು ಜನರ ಐ.ಡಿ.ಕಾರ್ಡ್ ಇತ್ತು. ಆದರೂ ರೈಲು ಅಧಿಕಾರಿ ಸುಳ್ಳು ನಿಯಮಗಳನ್ನು ಹೇಳಿ ಅವರನ್ನು ವಂಚಿಸಿದ್ದ. ಒಟ್ಟಿನಲ್ಲಿ ಈ ರೀತಿ ಮಾಡಿ ಒಂದು ಭೋಗಿಯಲ್ಲಿ ಏನಿಲ್ಲವೆಂದರೂ 5,000 ರೂಪಾಯಿ ಲಂಚ ತಿಂದು ಹೋಗಿದ್ದ. ನನ್ನ ಪಕ್ಕದಲ್ಲಿ ಕುಳಿತಿದ್ದ ರೈಲ್ವೇಯಲ್ಲೇ ಕೆಲಸ ಮಾಡುತ್ತಿದ್ದ ಆ ಪ್ರಯಾಣಿಕ ಮನನೊಂದು “ಏನು ಮಾಡೋಕೆ ಆಗಲ್ಲ ಸರ್. ಬೇಲಿನೇ ಎದ್ದು ಹೊಲ ಮೇಯ್ತಾ ಇದೆ.” ಎಂದು ಹೇಳಿ, ಆ ರಾಜ್ಯದಲ್ಲಿ ಲೂಟಿಯಾಗುತ್ತಿರುವ ಖನಿಜಗಳ ಬಗ್ಗೆ ಮಾತಾಡಲು ಶುರುವಿಟ್ಟ. ನಮ್ಮ ಬಳ್ಳಾರಿ ಗಣಿಯಲ್ಲಿ ಆಗಿದ್ದು ಇದೇ ಕಥೆ ಅಂತ ಅನಿಸಿತು. ಸುಮಾರು ಹೊತ್ತು ಇದೇ ವಿಚಾರ ಚರ್ಚಿಸಿ ತನ್ನ ನಿಲ್ದಾಣ ಬಂದಾಗ ಇಳಿದು ಹೋದ.
ಅಷ್ಟು ಹೊತ್ತಿಗೆ ಹಾಫ್ ಪ್ಯಾಂಟ್ ಮತ್ತು ಟೀಶರ್ಟ್ ತೊಟ್ಟ ಒಂದು ಹುಡುಗಿ ಪದೇ ಪದೇ ನಮ್ಮ ಬೋಗಿಯಲ್ಲಿ ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದಳು. ಸ್ವಲ್ಪ ಕಪ್ಪಗಿದ್ದರೂ ಲಕ್ಷಣವಾಗಿದ್ದ ಅವಳ ರೂಪ ಎಲ್ಲರನ್ನೂ ಆಕರ್ಷಿಸುತ್ತಿತ್ತು. ಸ್ವಲ್ಪ ಹೊತ್ತಿನ ಬಳಿಕ ಒಬ್ಬ ಬನಿಯನ್ ಧರಿಸಿದ್ದ ಹುಡುಗ ಆ ಹುಡುಗಿಯನ್ನು ಕರೆದುಕೊಂಡು ಬಂದು ನಾನು ಕುಳಿತಿದ್ದ ಸೀಟಿನ ಪಕ್ಕದ ಸೀಟಿನಲ್ಲಿ ಬಂದು ಕುಳಿತ. ನನ್ನ ಸಹಪ್ರಯಾಣಿಕನಿಗೆ ಆ ಬನಿಯನ್ ಧರಿಸಿದ್ದ ಹುಡುಗನ ಪರಿಚಯ ಮೊದಲೇ ಇತ್ತು. ಹುಡುಗಿಯೂ ಅಲ್ಲೇ ಕುಳಿತಳು. ಮೂವರೂ ಅಸ್ಸಾಮಿ ಭಾಷೆಯಲ್ಲೋ ಅಥವಾ ಬೆಂಗಾಲಿ ಭಾಷೆಯಲ್ಲೋ ಸ್ವಲ್ಪ ಹೊತ್ತು ಮಾತಾಡಿದರು. ನಂತರ ಹುಡುಗಿ ನನ್ನ ಸಹಪ್ರಯಾಣಿಕನೊಂದಿಗೂ ಮತ್ತು ಬನಿಯನ್ ಧರಿಸಿದ್ದ ಆ ಹುಡುಗನೊಂದಿಗೂ ಬಹಳಷ್ಟು ಹೊತ್ತು ಮಾತನಾಡಿದಳು. ನನಗೆ ಏನೂ ಅರ್ಥವಾಗದಿದ್ದರೂ ಏನೋ ಗಂಭಿರವಾದ ವಿಚಾರ ಚರ್ಚೆಯಲ್ಲಿದೆಯೆಂಬುದು ಮಾತ್ರ ಗೊತ್ತಾಯಿತು. ಮೊದಮೊದಲು ಬೇರೆಯವರ, ಅದರಲ್ಲೂ ಹುಡುಗಿಯ ವಿಚಾರ ನನಗ್ಯಾಕೆ ಎಂದುಕೊಂಡು ಸುಮ್ಮನಿದ್ದರೂ, ಇವರ ಗಂಭಿರ ಚರ್ಚೆಯನ್ನು ನೋಡಿ ಕುತೂಹಲ ತಡೆಯಲಾಗದೇ “ಏನು ವಿಷಯ?” ಎಂದು ಆ ಹುಡುಗನಿಗೆ ಕೇಳಿದೆ. “ಅಂಥಾದ್ದೇನು ಇಲ್ಲ” ಅಂತ ಏನೋ ಅಸ್ಪಷ್ಟವಾಗಿ ನಾಲ್ಕು ಮಾತುಗಳನ್ನು ಹೇಳಿ ಸುಮ್ಮನಾಗಿಬಿಟ್ಟ. ನಾನೂ ಅಮೇಲೆ ನನ್ನ ಸಹಪ್ರಯಾಣಿಕನನ್ನು ಕೇಳಿದರಾಯ್ತು, ಎಂದುಕೊಂಡು ಸುಮ್ಮನಾಗಿಬಿಟ್ಟೆ. ಸ್ವಲ್ಪ ಹೊತ್ತಿನ ನಂತರ ಇಬ್ಬರೂ (ಹುಡುಗಿ ಮತ್ತು ಬನಿಯನ್ ಧರಿಸಿದ್ದ ಹುಡುಗ) ಹೊರಟು ಹೋದರು. ಇದಾದ ಮೇಲೆ ನಾನೂ ಆ ವಿಷಯ ಮರೆತುಬಿಟ್ಟೆ. ಅದರೆ ಕೆಲವು ಘಂಟೆಗಳ ಬಳಿಕ ನನ್ನ ಜೊತೆ ಪ್ರಯಾಣ ಮಾಡುತ್ತಿದ್ದ ಹುಡುಗರು ಯಾವುದೋ ವಿಚಾರ ಚರ್ಚಿಸುತ್ತಾ ಮಧ್ಯೆ ಈ ಹುಡುಗಿಯ ವಿಚಾರ ಬಂತು. ನಾನು ಮತ್ತೆ ಕೇಳಿದೆ. “ಏನು ಆ ಹುಡುಗಿಯ ವಿಷಯ?” ಎಂದಾಗ ಗಂಭೀರವಾದ ವಿಚಾರವೊಂದು ಬೆಳಕಿಗೆ ಬಂತು!
ನನ್ನ ಸಹಪ್ರಯಾಣಿಕ ಹೇಳುತ್ತಾ ಹೋದ. “ಆ ಬೆಂಗಾಲಿ ಹಿಂದೂ ಹುಡುಗಿ, ಅಸ್ಸಾಮಿನ ‘ರೋಂಗ್ಯಾ’ ಎಂಬ ಜಾಗದವಳು. ತಾಯಿ ತೀರಿ ಹೋಗಿದ್ದಾಳೆ. ತಂದೆ ಮುದುಕ. ಬಡತನದಲ್ಲಿ ಬೇಯುತ್ತಿದ್ದ ಆ ಹುಡುಗಿಗೆ ಅವಳ ದೂರದ ಸಂಬಂಧಿ (ಅಣ್ಣ ಎಂದು ಕರೆಯುತ್ತಿದ್ದಳು) ಚೆನ್ನೈನಲ್ಲಿ ಕೆಲಸ ಕೊಡಿಸುತ್ತೇನೆಂದು ಹೇಳಿ ರೈಲು ಹತ್ತಿಸಿಕೊಂಡಿದ್ದಾನೆ. ಮಾರ್ಗ ಮಧ್ಯೆ ತನ್ನ ಸ್ನೇಹಿತರೆಂದು ಹೇಳಿ ಹತ್ತು ಜನ ಮುಸ್ಲಿಮ್ ಯುವಕರನ್ನು ಪರಿಚಯಿಸಿದ್ದಾನೆ. ಆ ಹತ್ತು ಜನರಲ್ಲಿ ಒಬ್ಬರೂ ಟಿಕೇಟ್ ರಿಸರ್ವ್ ಮಾಡಿಸಿಲ್ಲ. ಅಲ್ಲೊಬ್ಬರು ಇಲ್ಲೊಬ್ಬರಂತೆ ಬೇರೆಯವರ ಸೀಟುಗಳಲ್ಲಿ ಕುಳಿತಿದ್ದಾರೆ. ಹುಡುಗಿಯನ್ನು ಯಾವುದೋ ಒಂದು ಸೀಟಿನಲ್ಲಿ ಕೂರಿಸಿದ ಆ ಅಣ್ಣ ಎನಿಸಿಕೊಂಡವನು ಮಧ್ಯ ದಾರಿಯಲ್ಲೇ ಏನೋ ಕಾರಣ ಹೇಳಿ ಹುಡುಗಿ ಒಬ್ಬಳನ್ನೇ ಬಿಟ್ಟು ಪರಾರಿಯಾಗಿದ್ದಾನೆ. ಈಗ ಈ ಹುಡುಗಿ ರೈಲಿನಲ್ಲಿ ಅಣ್ಣ ಪರಿಚಯಿಸಿದ ಹತ್ತು ಜನ ಮುಸ್ಲಿಮ್ ಹುಡುಗರನ್ನೇ ನಂಬಿಕೊಂಡಿದ್ದಾಳೆ. ಕೈಲಿ ನಯಾ ಪೈಸೆ ಇಲ್ಲ. ಉಟ್ಟಿರುವ ಬಟ್ಟೆ ಬಿಟ್ಟು ಬೇರೊಂದು ಬಟ್ಟೆ ಇಲ್ಲ. ಈ ಹತ್ತು ಜನ ಧಾಂಡಿಗರು ಆ ಹುಡುಗಿಗೆ ಸರಿಯಾಗಿ ಊಟ ತಿಂಡಿ ಕೊಡದೇ ಸತಾಯಿಸುತ್ತಿದ್ಧಾರೆ. (ಅವರು ಹೇಳಿದಂತೆ ಕೇಳುವಂತೆ ಮಾಡಿಕೊಳ್ಳುವ ಸಲುವಾಗಿ ಬಹುಶ ಅಫೀಮಿನಂಥಾ ಮಾದಕ ದ್ರವ್ಯವನ್ನು ಅವಳಿಗೆ ತಿನ್ನಿಸಿದ್ದರೆಂದು ಆನಂತರ ತಿಳಿಯಿತು.) ಇಷ್ಟೆಲ್ಲಾ ಆದ್ದರಿಂದ ಈ ಹುಡುಗಿಗೆ ಅನುಮಾನ ಬಂದಿದೆ. ಭಯವಾಗಿದೆ. ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಬೇರೊಂದು ಮುಸ್ಲಿಮ್ ಹುಡುಗರ ಗುಂಪನ್ನು ಪರಿಚಯ ಮಾಡಿಕೊಂಡಿದ್ದಾಳೆ. ಅವರೊಂದಿಗೆ ಅಲ್ಲೇ ಕುಳಿತುಕೊಂಡಿದ್ದಾಳೆ. ಆ ಗುಂಪಿನಲ್ಲಿ ಇದ್ದವರೂ ಅಪಾಪೋಲಿಗಳೇ. ಹುಡುಗಿಯನ್ನು ಬೇಕಾದಷ್ಟು ಚುಡಾಯಿಸಿದ್ದಾರೆ. ಹುಡುಗಿ ಹೇಗೋ ಸಹಿಸಿಕೊಂಡು. ಇರುವವರಲ್ಲಿ ಸ್ವಲ್ಪ ಸಭ್ಯನಂತೆ ಕಾಣುತ್ತಿದ್ದ ಬನಿಯನ್ ಧರಿಸಿದ್ದ ಒಬ್ಬ ಹುಡುಗನನ್ನು ಪರಿಚಯ ಮಾಡಿಕೊಂಡು, ನಿನ್ನೊಂದಿಗೆ ಮಾತನಾಡಬೇಕೆಂದು ಕೇಳಿಕೊಂಡಿದ್ದಾಳೆ. ಅವನು ಅವಳನ್ನು ಕರೆದುಕೊಂಡು ನಮ್ಮ ಬೋಗಿಗೆ ಬಂದು, ಮೊದಲೇ ಪರಿಚಯವಿದ್ದ ನನ್ನ ಸಹಪ್ರಯಾಣಿಕನ ಬಳಿ ಕುಳಿತು ಮಾತನಾಡಲು ಪ್ರಾರಂಭಿಸಿದ್ದಾರೆ.
ಹುಡುಗಿ “ನನಗೆ ಅವರೊಂದಿಗೆ ಹೋಗಲು ಇಷ್ಟವಿಲ್ಲ, ದಯಮಾಡಿ ನನ್ನನ್ನು ವಾಪಾಸ್ಸು ಮನೆಗೆ ಕಳುಹಿಸಿ” ಎಂದು ಆ ಬನಿಯನ್ ಧರಿಸಿದ್ದ ಹುಡುಗನನ್ನು ಬೇಡಿಕೊಂಡಿದ್ದಾಳೆ. ಅದಕ್ಕೆ ಈ ಹುಡುಗ “ನಾನು ಅವರೊಂದಿಗೆ (10 ಜನರೊಂದಿಗೆ) ದ್ವೇಷ ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನೀನು ಹೋಗಲೇ ಬೇಕೆಂದಿದ್ದರೆ ಹೀಗೆ ಮಾಡು. ಚೆನ್ನೈ ರೈಲ್ವೇ ಸ್ಟೇಷನ್ನಿನಲ್ಲಿ ಇಳಿಯಬೇಕಾದರೆ ಅವರ (10 ಜನರ) ಕಣ್ತಪ್ಪಿಸಿ ನಮ್ಮ ಹಿಂದೆ ಬಂದುಬಿಡು. ನಾವು ನಿನ್ನನ್ನು ನಮ್ಮ ರೂಮಿಗೆ ಕರೆದುಕೊಂಡು ಹೋಗುತ್ತೇನೆ. ಒಂದು ತಿಂಗಳ ನಂತರ ಸಂಬಳ ಬಂದ ಮೇಲೆ ನಿನ್ನನ್ನು ಕಳುಹಿಸಿಕೊಡುತ್ತೇವೆ” ಎಂದಿದ್ದಾನೆ. ಅದಕ್ಕೆ ಈ ಹುಡುಗಿ “ನಿನ್ನನ್ನೇನೋ ನಂಬಬಹುದು. ಆದರೆ ನಿನ್ನ ಜೊತೆ ಇರುವ ಹುಡುಗರ ಬಗ್ಗೆ ನನಗೆ ನಂಬಿಕೆ ಇಲ್ಲ (ಆ ಹುಡುಗರು ಮೊದಲೇ ಈ ಹುಡುಗಿಯನ್ನು ಚುಡಾಯಿಸಿದ್ದರಿಂದಾಗಿ ಅವರ ಯೋಗ್ಯತೆ ಏನು ಎಂಬುದು ಹುಡುಗಿಗೆ ತಿಳಿದುಹೋಗಿತ್ತು) ರೂಮಿನಲ್ಲಿ ಒಂದು ತಿಂಗಳು ಒಟ್ಟಿಗೆ ಇರುವಾಗ ನನಗೆ ರಕ್ಷಣೆ ಸಿಗಲಾರದು” ಎಂದಿದ್ದಾಳೆ. ಅದಕ್ಕೆ ಈ ಹುಡುಗ, ಸರಿ ನಿನ್ನಿಷ್ಟ. ಬರುವುದಿದ್ದರೆ ಬಾ ಇಲ್ಲದಿದ್ದರೆ ಅವರೊಂದಿಗೆ (10 ಜನರೊಂದಿಗೆ) ಹೋಗು.” ಎಂದು ಹೇಳಿಬಿಟ್ಟಿದಾನೆ. ನಂತರ ಇಬ್ಬರೂ ಎದ್ದು ಅವರವರ ಜಾಗಕ್ಕೆ ಹೊರಟಿದ್ದಾರೆ. ಆದರೆ ಇಷ್ಟೆಲ್ಲಾ ಅವರು ಮಾತಾಡಿಕೊಂಡದ್ದು ಅಸ್ಸಾಮೀ ಭಾಷೆಯಲ್ಲಿ. ಹೀಗಾಗಿ ನನಗೆ ಏನೊಂದೂ ಅರ್ಥವಾಗಿರಲಿಲ್ಲ.
ಈಗ ನನ್ನ ಸಹಪ್ರಯಾಣಿಕ ಇದೆಲ್ಲವನ್ನೂ ಹೇಳಿದ ನಂತರ ನನ್ನಲ್ಲಿ ಅನುಮಾನ ಹೊಗೆಯಾಡತೊಡಗಿತು. ಇದರಲ್ಲೇನೋ ಇದೆ ಎಂದುಕೊಂಡೆ. ನನ್ನ ಜೊತೆಯಲ್ಲಿದ್ದ ಸಹಪ್ರಯಾಣಿಕನನ್ನು (ಅವನೂ ಮುಸ್ಲಿಮನೇ ಆಗಿದ್ದ) “ನನ್ನನ್ನು ಆ ಹುಡುಗಿಯ ಬಳಿ ಕರೆದುಕೊಂಡು ಹೋಗು, ಮಾತನಾಡಬೇಕು.” ಎಂದು ಕೇಳಿಕೊಂಡೆ. ಮೊದಮೊದಲು ‘ನಿಮಗ್ಯಾಕೆ ಬೇಕು ಸಾರ್. ಸುಮ್ಮನೆ ಬೇಡದ ವಿಷಯದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ಸುಮ್ಮನೆ ಕುಳಿತುಕೊಳ್ಳಿ.” ಎಂದ. ನಂತರ ನಾನು ಬಿಡದಿದ್ದಾಗ, ಇನ್ನೊಬ್ಬ ಹುಡುಗ “ಹುಡುಗೀನೇ ಸರಿ ಇಲ್ಲ ಬಿಡಿ ಸಾರ್, ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ? ಎಂದ. ಆದರೆ ನಾನು “ನೋಡಪ್ಪಾ ಆ ಹುಡುಗಿ ಚಿಕ್ಕವಳು. ಹೆದರಿಸಿ, ಬೆದರಿಸಿ ಸುಮ್ಮನಿರಿಸಿದ್ದಾರೆಂದು ಕಾಣುತ್ತದೆ. ಅದಲ್ಲದೇ ನೀನೆ ಹೇಳಿದೆ – ಆ ಹುಡುಗಿಗೆ ಸರಿಯಾಗಿ ಊಟ ತಿಂಡಿ ಕೊಡುತ್ತಿಲ್ಲ ಎಂದು. ಹೀಗಾಗಿ ಅವಳು ಹಾಗೆ ಆಡುತ್ತಿರಬಹುದು. ಅವಳನ್ನು ಪಾರು ಮಾಡುವುದು ನಮ್ಮ ಕರ್ತವ್ಯ. ನಮ್ಮ ಅಕ್ಕ ತಂಗಿಯರಾಗಿದ್ದರೆ ಸುಮ್ಮನಿರುತ್ತಿದೆವಾ?” ಎಂದಾಗ “ಆಯಿತು” ಎಂದು ಹೇಳಿ ಅವರಿರುವ ಬೋಗಿಗೆ ಕರೆದುಕೊಂಡು ಹೋಗಲು ಒಪ್ಪಿದ. ಆದರೆ ನಾನು ನೇರವಾಗಿ ಆ ಹುಡುಗಿಯ ಬಳಿ ಹೋಗಿ ಮಾತನಾಡುವುದು ಅಸಾಧ್ಯದ ಮಾತು. ಕಾರಣ ಅವಳ ಜೊತೆಯಲ್ಲಿಲ್ಲದಿದ್ದರೂ, ಅವಳ ಹತ್ತಿರವೇ ಅಲ್ಲೊಬ್ಬ, ಇಲ್ಲೊಬ್ಬರಂತೆ ಕುಳಿತಿರುವ ಜನರು (10 ಜನರು). ಜೊತೆಗೆ ವಿಷಯದ ಬಗ್ಗೆ ನನಗೆ ಸ್ಪಷ್ಟ ಅರಿವಿಲ್ಲದಿರುವುದು. ಅಲ್ಲದೇ ಪರಿಸ್ಥಿತಿ ಎತ್ತೆತ್ತಲೋ ತಿರುಗಿ ನನ್ನ ತಲೆಯ ಮೇಲೆ ಬರುವ ಸಾಧ್ಯತೆ ಕೂಡಾ ದಟ್ಟವಾಗಿತ್ತು.
ಆದರೆ ಅಷ್ಟರಲ್ಲಿ ಬನಿಯನ್ ಧರಿಸಿದ್ದ ಹುಡುಗ ಕಂಡ. ನನ್ನ ಸಹಪ್ರಯಾಣಿಕನಿಗೆ ಆತ ಮೊದಲೇ ಪರಿಚಯವಿದ್ದುದರಿಂದ ಉಪಾಯ ಮಾಡಿ ಮೊದಲು ಅವನನ್ನು ಕರೆದುಕೊಂಡು ನನ್ನ ಬೋಗಿಗೆ ಬಂದೆ. ಅವನನ್ನು ಕೂರಿಸಿ ಮಾತನಾಡಲು ಆರಂಭಿಸಿದೆ. ಆ ಹುಡುಗಿ ಆಪತ್ತಿನಲ್ಲಿದ್ದಾಳೆಂದು ನನಗೆ ಅನ್ನಿಸುತ್ತಿದೆ. ಬಹುಶಃ ಆ ಹುಡುಗಿಯನ್ನು ರೆಡ್ ಲೈಟ್ ಏರಿಯಾಗೆ ಮಾರುವ ಕೆಲಸ ನಡೆಯುತ್ತಿರಬೇಕು ಎಂದೆ. ಅದಕ್ಕೆ ಆ ಹುಡುಗ ಎಲ್ಲವನ್ನೂ ಹೇಳಲು ಶುರು ಮಾಡಿದ. “ಹುಡುಗಿ ಆಪತ್ತಿನಲ್ಲಿರುವುದು ನಿಜ. ಅವಳನ್ನು ಕೇರಳಕ್ಕೆ ಮಾರಿಬಿಡಲು ಕರೆದೊಯ್ಯುತ್ತಿದ್ದಾರೆ. ಆದರೆ ಅದು ಪಕ್ಕಾ ಆಗುತ್ತಿಲ್ಲ. ಯಾಕೆಂದರೆ ಹುಡುಗಿಯೇ ನಿಮಿಷಕ್ಕೊಂದು ಮಾತನಾಡುತ್ತಿದ್ದಾಳೆ. ನಾನು ಆಗಾಗ ಅವರ (10ಜನರ) ಕಣ್ಣು ತಪ್ಪಿಸಿ ಪ್ರಶ್ನೆಗಳನ್ನು ಕೇಳುತ್ತಿದ್ದೇನೆ. ಆದರೆ ಹುಡುಗಿ ಒಮ್ಮೆ ಒಂದು ಮಾತನಾಡಿದರೆ, ಇನ್ನೊಮ್ಮೆ ಇನ್ನೊಂದು ಮಾತಾಡುತ್ತಾಳೆ. ಹೀಗಾಗಿ ಸ್ವಲ್ಪ ಕಷ್ಟವಾಗಿದೆ.” ಎಂದ. ನಾನು ಹೇಳಿದೆ “ನೋಡು ಅವಳಿಗೆ ಮಾದಕ ದ್ರವ್ಯ ತಿನ್ನಿಸಿರಬಹುದಾದ ಸಾಧ್ಯತೆ ಇದೆ. ಹೀಗಾಗಿ ಮನಸ್ಸು ಚಂಚಲವಾಗಿರಬಹುದು. ಅಲ್ಲದೇ ಹೆದರಿಕೆಯಿಂದಲೂ ಆ ರೀತಿ ವರ್ತಿಸುತ್ತಿರಬಹುದು. ಹೀಗಾಗಿ ಆ ಹುಡುಗಿಯನ್ನು ಪಾರು ಮಾಡಬೇಕಾಗಿರುವುದು ನಮ್ಮೆಲ್ಲರ ಧರ್ಮವಾಗಿದೆ. ಆ ಹುಡುಗಿ ಹಿಂದು. ನಾನೂ ಕೂಡಾ ಹಿಂದು. ನೀನು ಮುಸಲ್ಮಾನ. ಆದರೆ ನಾವು ಮೊದಲು ಮನುಷ್ಯರು. ನಮ್ಮೆಲ್ಲರ ರಕ್ತದ ಬಣ್ಣ ಒಂದೇ. ಕೆಟ್ಟದ್ದನ್ನು ವಿರೋಧಿಸೋದು ನಮ್ಮ ಕರ್ತವ್ಯ. ಒಳ್ಳೇ ಕೆಲಸ ಮಾಡಿದರೆ ದೇವರು ಮೆಚ್ಚುತ್ತಾನೆ.” ಎಂದು ಬಹಳಷ್ಟು ಮಾತಾನಾಡಿದೆ. ಹುಡುಗನೂ ಕೂಡಾ ನನ್ನ ಮಾತನ್ನು ಅನುಮೋದಿಸಿದ. “ನೀವು ಇಷ್ಟು ಹೇಳಿದ ಮೇಲೆ ಹಾಗೇ ಆಗಲಿ. ಆದರೆ ಹೋರಾಟ, ವಿರೋಧ ನನ್ನ ಕೈಲಿ ಸಾಧ್ಯವಾಗದು. ಬೇಕಾದರೆ ರೈಲ್ವೇ ಸ್ಟೇಷನ್ನಿನಲ್ಲಿ ಹುಡುಗಿ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತೇವೆ” ಎಂದ. ಸರಿ ಅಷ್ಟಾದರೂ ಆಗಲಿ ಎಂದುಕೊಂಡು ಸಮ್ಮತಿಸಿದೆ. “ಆದರೆ ಅದಕ್ಕೆ ಮೊದಲು ನಾನು ಆ ಹುಡುಗಿಯನ್ನು ಮಾತನಾಡಿಸಲು ಸಾಧ್ಯವಾಗಬಹುದೇ?” ಎಂದೆ. ಅದಕ್ಕವನು “ಕರೆದುಕೊಂಡು ಬರಲು ಪ್ರಯತ್ನ ಮಾಡುತ್ತೇನೆ.” ಎಂದು ಹೇಳಿ ತನ್ನ ಜಾಗಕ್ಕೆ ಹೊರಟ.
ಈಗ ನನ್ನ ತಲೆ ಹೆಚ್ಚು ಕಡಿಮೆ ಕಾದ ಕುಕ್ಕರ್‍ನಂತಾಗಿತ್ತು. ಇಂಥಾ ಪರಿಸ್ಥಿತಿಯಲ್ಲಿ ನಾನೇನು ಮಾಡಲಿ? ಒಬ್ಬನೇ ಪ್ರಯಾಣ ಮಾಡುತ್ತಿದ್ದೇನೆ. ಇತ್ತ ಇಡೀ ರೈಲಿನಲ್ಲಿ ನನ್ನವರೆಂಬುವವರು ಯಾರೂ ಇಲ್ಲ. ರೈಲಿನಲ್ಲಿರುವ ಬಹುಪಾಲು ಜನ ಮುಸಲ್ಮಾನರು. ಜೊತೆಗೆ ಸುಮ್ಮನೆ ಕುಳಿತಿರುವ, ಹೇಡಿಗಳೆಂದು ಹಣೆಪಟ್ಟಿ ಹೊತ್ತಿರುವ ಹಿಂದುಗಳು. ಹುಡುಗಿ ಸರಿಯಾಗಿ ವಿಚಾರ ಹೇಳುತ್ತಿಲ್ಲ. ಹುಡುಗಿ ಪಕ್ಕಾ ಮುಗ್ಧಳೇ? ಅಂತ ತಿಳಿದಿಲ್ಲ. ದುರದೃಷ್ಟ ನನ್ನ ಮೊಬೈಲ್‍ನಲ್ಲಿ ಕರೆನ್ಸಿ ಖಾಲಿಯಾಗಿದೆ. ಒಂದು ವೇಳೆ ಬೇರೆಯವರ ಮೊಬೈಲ್‍ನಿಂದ ಕಾಲ್ ಮಾಡುವುದಾದರೂ, ಯಾರಿಗೆ ಮಾಡುವುದು? ಒಂದು ವೇಳೆ ನನಗೆ ಪರಿಚಯವಿದ್ದ ಹಿರಿಯರೊಬ್ಬರನ್ನು ಸಂಪರ್ಕಿಸಿದರೆ, ಅವರು ನನ್ನ ಮಾತನ್ನು ನಂಬುವರೇ? ಒಂದು ವೇಳೆ ನಂಬಿದರೂ, ಏನಾದರೂ ಮಾಡಿ ಅದು ಉಲ್ಟಾ ಹೊಡೆದಾಗ, ಅವರು ನನ್ನನ್ನು ಏನೆಂದು ತಿಳಿದುಕೊಳ್ಳಬಹುದು. ನಾನು ಮುಠ್ಠಾಳನಾಗುವುದಿಲ್ಲವೇ? ಹೀಗಾಗಿ ನನ್ನ ತಲೆಯಲ್ಲಿ ನೂರೆಂಟು ಆಲೋಚನೆಗಳು ಗಿರಕಿ ಹೊಡೆಯಲಾರಂಭಿಸಿದವು. ಒಂದು ವೇಳೆ ಪೊಲಿಸರಿಗೆ ಪೋನ್ ಮಾಡಿದೆ ಎಂದಿಟ್ಟುಕೊಳ್ಳಿ, ಆ ಹುಡುಗಿಯನ್ನು ರೆಡ್ ಲೈಟ್ ಏರಿಯಾಗೆ ಮಾರುತ್ತಿರಬಹುದೆಂಬ ನನ್ನ ಊಹೆ ಒಂದು ವೇಳೆ ಪೂರ್ಣ ಸುಳ್ಳಾಗಿದ್ದರೆ ಪೊಲೀಸರಿಂದ ನನಗೆ ಆಗಬಹುದಾಗಿದ್ದ ಮತ್ತು ಆ 10 ಜನರ ಕಡೆಯಿಂದ ನನಗೆ ಆಗಬಹುದಾಗಿದ್ದ ತೊಂದರೆಗಳನ್ನು ಮನಸ್ಸು ಪೂರ್ವಭಾವಿಯಾಗಿ ಕಲ್ಪಿಸಿಕೊಳ್ಳಲಾರಂಭಿಸಿತ್ತು. ಯಾರನ್ನು ನಂಬಬಹುದು. ಯಾರನ್ನು ಸಹಾಯ ಕೇಳಬಹುದು ಎಂದು ಯೋಚಿಸುತ್ತಾ ಸುತ್ತ ಮುತ್ತಲಿರುವ ಎಲ್ಲಾ ಹುಡುಗರನ್ನು ಬೇಡಿಕೊಂಡೆ. ಏನಾದರೂ ಮಾಡೋಣ. ನನ್ನ ಸಹಾಯಕ್ಕೆ ಬನ್ನಿ ಎಂದೆ. ಹುಡುಗರು ಮೊದಲು ನನ್ನತ್ತ ವ್ಯಂಗ್ಯ ನಗೆ ಬೀರಲು ಆರಂಭಿಸಿದರು. ನಂತರ ನನ್ನ ಬೇಡಿಕೆ ತೀವ್ರಗೊಂಡಾಗ ನನ್ನತ್ತ ವಿಚಿತ್ರವಾಗಿ ನೋಡಲಾರಂಭಿಸಿದರು. ಆನಂತರ “ಸಾರ್ ನಾವು ಬಡ ಕಾರ್ಮಿಕರು. ಕೆಲಸ ಮಾಡೋಕೆ ಊರಿಂದ ಊರಿಗೆ ಹೋಗ್ತಾ ಇದ್ದೀವಿ. ನಾಳೆ ದಿನ ಪೊಲೀಸ್, ಗೀಲೀಸ್, ಕೇಸು ಅಂತ ಆದರೆ ನಮ್ಮ ಕೈಲಿ ಅದನ್ನ ಅರಗಿಸಿಕೊಳ್ಳೊಕೆ ಆಗಲ್ಲ ಸಾರ್. ನಮಗ್ಯಾಕೆ ಸಾರ್ ಇಲ್ಲದ ತಲೆ ನೋವು?” ಎಂದರು.
ಚೆನ್ನೈ ಸ್ಟೇಷನ್ ಹತ್ತಿರ ಬರಲು ಕೇವಲ 30 ನಿಮಿಷಗಳು ಬಾಕಿ ಇದ್ದವು. ನನ್ನ ಎದೆಬಡಿತ ತೀವ್ರವಾಗತೊಡಗಿತು. ಬಹಳಷ್ಟು ಕೇಳಿಕೊಂಡ ನಂತರ ಒಬ್ಬೇ ಒಬ್ಬ ನನ್ನ ಜೊತೆ ಹೊರಡಲು ಸಿದ್ಧನಾದ. “ಅದರೆ ಒಂದು ಷರತ್ತು, ನಾನು ಏನೂ ಮಾತನಾಡುವುದಿಲ್ಲ. ನೀನು ಮಾತನಾಡಬೇಕು ನಾವು ಸುಮ್ಮನೆ ನಿನ್ನೊಂದಿಗೆ ನಿಂತಿರುತ್ತೇವೆ.” ಎಂದ. “ಸರಿ ಆಯ್ತು. ಅಷ್ಟಾದರೂ ಮಾಡಿ. ಒಂದು ವೇಳೆ ಪೊಲೀಸ್ ಕೇಸ್ ಆದರೂ, ನಾನೇ ಹಾಕಿಸಿಕೊಳ್ಳಲು ತಯಾರಾಗಿದ್ದೇನೆ. ನೀವು ನನ್ನೊಂದಿಗೆ ಬನ್ನಿ ಸಾಕು.” ಎಂದು ಹೇಳಿ ಆ ಹುಡುಗಿ ಕುಳಿತಿದ್ದ ಬೋಗಿಯ ಕಡೆ ಹೊರಟೆ. ಒಂದೆರಡು ಹೆಜ್ಜೆ ನನ್ನೊಂದಿಗೆ ಹೆಜ್ಜೆ ಹಾಕಿದ ಅವರು ಮತ್ತೆ ಹೆದರಿ ವಾಪಾಸ್ಸು ಹೊರಟು ಹೋದರು. ನಾನು ಅವರ ಮೇಲಿನ ನಂಬಿಕೆ ಕೈಬಿಟ್ಟೆ. ನಾನೇ ಏನಾದರೂ ಮಾಡಬೇಕೆಂದುಕೊಂಡು ಹುಡುಗಿ ಕುಳಿತಿದ್ದ ಬೋಗಿಯ ಕಡೆ ಒಬ್ಬನೇ ನಡೆದೆ. ನಾನು ಹೋಗುತ್ತಿದ್ದಂತೆ ಹುಡುಗಿಯ ಮುಂದಿನ ಸೀಟಿನಲ್ಲಿ ಕುಳಿತಿದ್ದ ಬನಿಯನ್ ಧರಿಸಿದ್ದ ಹುಡುಗ ನನ್ನನ್ನು ಮಾತಾಡಿಸಿದ. ನಾನು ಅದೇ ಅವಕಾಶವನ್ನು ಬಳಸಿಕೊಂಡು ಸೀದಾ ಹೋಗಿ ಅವನ ಪಕ್ಕದಲ್ಲೇ ಕೂತುಬಿಟ್ಟೆ. ಅಂದರೆ ಹುಡುಗಿಯ ಮುಂದೆಯೇ! ಹುಡುಗ “ಭಾಯ್, ಏನೂ ಪ್ರಾಬ್ಲಮ್ ಇಲ್ಲ. ಹುಡುಗೀನೆ ಅವರ ಜೊತೆ ಹೋಗಲು ತಯಾರಿದ್ದಾಳೆ. ಬೇಕಾದರೆ ಕೇಳಿ ನೋಡಿ?” ಎಂದ. ಅವನನ್ನು ವಿಚಾರಿಸಿ, ನಾನು ಹುಡುಗಿಯ ಜೊತೆ ಇರುವವರು ಯಾರು ಯಾರು ಎಂದು ಕಂಡು ಹಿಡಿದುಕೊಂಡೆ. ಒಬ್ಬ ಸ್ವಲ್ಪ ದೂರದಲ್ಲಿ ಮಿಲಿಟರಿ ಹಾಫ್ ಪ್ಯಾಂಟ್ ಧರಿಸಿ ಕುಳಿತಿದ್ದ. ನೋಡಲು ಕುಳ್ಳಗೆ, ದಪ್ಪಗೆ, ಬೆಳ್ಳಗೆ ಇದ್ದ. ಮುಖ ಮಂಗೋಲಿಯನ್ ತರದ್ದಾಗಿತ್ತು. ಇನ್ನೊಬ್ಬ ಎತ್ತರವಾಗಿ, ಸಣ್ಣಗೆ ಇದ್ದ, ಆಗಲೇ ಸ್ವಲ್ಪ ಕುಡಿದಿದ್ದ. ಆತ ರೈಲಿನ ಬಾಗಿಲ ಬಳಿ ನಿಂತಿದ್ದ. ಇನ್ನೊಬ್ಬ ಸುಮಾರಾಗಿ ಎತ್ತರಕ್ಕೆ ಇದ್ದ ಮತ್ತು ಆಕಡೆ ಈ ಕಡೆ ಓಡಾಡುತ್ತಿದ್ದ. ಇನ್ನು ಕೆಲವು ಚಿಕ್ಕ ಹುಡುಗರು ಬೇರೆ ಬೇರೆ ಬೋಗಿಗಳಲ್ಲಿ ಕುಳಿತಿದ್ದರು ಅಥವಾ ನಿಂತಿದ್ದರು. ಇಷ್ಟೆಲ್ಲವನ್ನೂ ಕನ್‍ಫರ್ಮ್ ಮಾಡಿಕೊಳ್ಳುವಷ್ಟರಲ್ಲಿ ನನ್ನ ಪಕ್ಕದ ಬನಿಯನ್ ಧರಿಸಿದ್ದ ಹುಡುಗ ನನ್ನನ್ನು ಪ್ರಶ್ನೆ ಕೇಳಲು ಆರಂಭಿಸಿದ. ನಿಮ್ಮ ಊರು ಯಾವುದು? ಕೆಲಸ ಹೇಗಿದೆ? ನಿಮ್ಮ ಪೋನ್ ನಂಬರ್ ಕೊಡಿ. ಇತ್ಯಾದಿ. ನಾನು ಹೇಳಿದೆ. “ಅಲ್ಲಪ್ಪಾ ಮೊದಲು ಈ ಹುಡುಗಿ ಕಥೆ ಕೇಳೋಣ. ಆಮೇಲೆ ಮುಂದಿನ ಮಾತು ಎಂದೆ. ಅದಕ್ಕೆ ಅವನು ಹೇಳಿದ “ಸಾರ್ ಆ ಹುಡುಗೀಗೆ ಇಷ್ಟ ಇಲ್ಲ ಬಿಟ್ಟುಬಿಡಿ ಸಾರ್. ನಿಮ್ಮ ನಂಬರ್ ಕೊಡಿ.” ಅಂದ. ನನಗ್ಯಾಕೋ ಇವನೇ ಕೇಡಿಯಂತೆ ಕಾಣತೊಡಗಿದ. ಯಾಕೋ ನಾನು ದುಷ್ಟವ್ಯೂಹದಲ್ಲಿ ಸಿಕ್ಕಿರುವಂತೆ ಭಾಸವಾಗುತ್ತಿತ್ತು. ಆದರೂ ಧೈರ್ಯಗೆಡದೇ ಆ ಹುಡುಗಿಯನ್ನು ಮಾತನಾಡಿಸಲು ಪ್ರಾರಂಭಿಸಿದೆ.“ಯಾವ ಊರು ಮಗು?” ಎಂದೆ. ಅವಳಿಗೆ ನಾನು ಆ ಬನಿಯನ್ ಧರಿಸಿದ್ದ ಹುಡುಗನ ಸ್ನೇಹಿತನಂತೆ ಕಂಡಿರಬೇಕು. ಹಾಗೂ ಜುಬ್ಬ ಧರಿಸಿ, ಗಡ್ಡ ಬಿಟ್ಟಿದ್ದರಿಂದ ನನ್ನನ್ನೂ ಮುಸ್ಲಿಮ್ ಎಂದೇ ತಿಳಿದಿದ್ದಳೆನಿಸುತ್ತದೆ.
“ಅಸ್ಸಾಮಿನ ರೋಂಗ್ಯಾ.” ಎಂದಳು. ತಂದೆ ತಾಯಿ? ಎಂದೆ. ತಾಯಿ ಇಲ್ಲ. ಸತ್ತು ಹೋದಳು. ಅಂದಳು. “ತಂದೆ ಮುದುಕನಾಗಿದ್ದಾನೆ” ಎಂದಳು. “ನಿನ್ನ ಕಡೆಯವರು ಯಾರಾದರೂ ಇದ್ದಾರಾ?” ಎಂದೆ. ಅದಕ್ಕೆ ಅವಳು “ಇದ್ದಾರಲ್ಲಾ ಬಾಡಿಗಾರ್ಡ್ಸ್” ಅಂದಳು. “ಈ ಹುಡುಗರು ಯಾರು?” ಎಂದೆ. “ಅವರು ನನ್ನನ್ನು ಕೆಲಸ ಕೊಡಿಸಲು ಕರೆದೊಯ್ಯುತ್ತಿದ್ದಾರೆ.” ಎಂದಳು. ಆದರೆ ಇಷ್ಟು ಉತ್ತರ ಕೊಡುವಾಗ ಸಹಜವಾಗಿ ಉತ್ತರ ಹೇಳದೇ. ಎಳಸು ಏಳಸಿನಂತೆ. ಅರ್ಧಂಬರ್ಧ ನಗುತ್ತಾ ಹೇಳುತ್ತಿದ್ದಳು. ನನಗೆ ಒಮ್ಮೊಮ್ಮೆ ಈ ಹುಡುಗಿಯ ಮೇಲೆ ವಿಶ್ವಾಸ ಹೋಗಿಬಿಡುತ್ತಿತ್ತು. ಆದರೂ ವಿಶ್ವಾಸ ಕಳೆದುಕೊಳ್ಳದೇ ನಾನು ಕೇಳಿದೆ. “ಅಲ್ಲಮ್ಮಾ ಏನಾದರೂ ಸಮಸ್ಯೆ ಇದಿಯಾ?” ಎಂದೆ. ಅದಕ್ಕವಳು. “ಇಲ್ಲವಲ್ಲಾ. ನೀವು ಬಂದಿದ್ದೀರಾ, ದೇವರ ಥರಾ!” ಎಂದು ನಕ್ಕು ನಂತರ ಗಂಭೀರವದನಳಾಗಿಬಿಟ್ಟಳು. ನನಗೆ ಈ ಮಾತುಗಳನ್ನು ಯಾವ ಥರಾ ಅರ್ಥ ಮಾಡಿಕೊಳ್ಳಬೇಕೆಂದೇ ತಿಳಿಯಲಿಲ್ಲ. ನಾ ಹೇಳಿದೆ. “ಏನಾದರೂ ತೊಂದರೆ ಇದ್ದರೆ ಹೇಳು. ನಾವಿದ್ದೇವೆ.” ಎಂದೆ. ಮೊದಲೇ ಬನಿಯನ್ ಧರಿಸಿದ್ದ ಹುಡುಗನ ಸ್ನೇಹಿತರ ಲಂಪಟ ಆಟಗಳನ್ನು ನೋಡಿದ್ದ ಆ ಹುಡುಗಿ ನನ್ನನ್ನೂ ಆ ಲಿಸ್ಟಿಗೇ ಸೇರಿಸಿದ್ದಳೋ ಏನೋ. “ಏನಿಲ್ಲ. ನನಗೆ ಕೆಲಸ ಕೊಡಿಸಲು ಕರೆದುಕೊಂಡು ಹೋಗುತ್ತಿದ್ದಾರೆ. ಆರಾಮಾಗೆ ಇದ್ದೀನಿ” ಎಂದಳು.
ಅಷ್ಟರಲ್ಲಿ ಎತ್ತರಕ್ಕಿದ್ದ ಒಬ್ಬ ಬಾಡಿಗಾರ್ಡ್(ಹುಡುಗಿಯ ಭಾಷೆಯಲ್ಲಿ!) ಬಂದ. ಬನಿಯನ್ ಧರಿಸಿದ್ದ ಹುಡುಗನ ಸ್ನೇಹಿತರಲ್ಲಿ ಒಬ್ಬ ತಂಬಾಕು ಪಾಕೇಟ್ ಹರಿದು ತಾನೂ ತಿಂದು, ಆ ಹುಡುಗಿಗೂ ಕೊಟ್ಟ. ಮೊದಲೇ ಹಸಿದಿದ್ದ ಹುಡುಗಿ ಪಾಕೇಟ್ ತೆಗೆದು ಕೈಮೇಲೆ ತಂಬಾಕು ಹಾಕಿಕೊಂಡು ತಿನ್ನಲು ಮುಂದಾದಳು. ಅಷ್ಟರಲ್ಲಿ ಆ ಉದ್ದನೆಯ ಬಾಡಿಗಾರ್ಡ್ ಬಂದು ತನ್ನ ಕೈಯಿಂದ ಹುಡುಗಿಯ ತಲೆ ಮೇಲೆ ಜೋರಾಗಿ ಏಟು ಕೊಟ್ಟು ಹೊರಟು ಹೋದ. ಹುಡುಗಿ ನೋವನ್ನು ಸಹಿಸಿಕೊಂಡು ಸುಮ್ಮನಾದಳು. ನನಗೆ ಏನು ಮಾಡಬೇಕೆಂಬುದೇ ತಿಳಿಯಲಿಲ್ಲ. ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ನಾನು ಆ ಹುಡುಗಿಗೆ ಕೇಳಿದೆ. “ನೋಡು ಮಗೂ ಇನ್ನೂ ಕಾಲ ಮಿಂಚಿಲ್ಲ. ಒಂದು ಮಾತು ನಮಗೆ ಹೇಳು. ನಾವು ನಿನ್ನ ರಕ್ಷಣೆ ಮಾಡುತ್ತೇವೆ.” ಎಂದೆ. ಹುಡುಗಿ ಮಾತನಾಡಲಿಲ್ಲ. ನಾನು ಕಡೆಗೆ ಹೇಳಿದೆ. “ನೋಡು ನಿನಗೋಸ್ಕರ ಆ ಬೋಗಿಯಿಂದ ಬಂದಿದ್ದೇನೆ. ನೀನು ಏನು ಸಹಾಯ ಬೇಡವೆಂದರೆ ಹೊರಟುಹೋಗುತ್ತೇನೆ.” ಎಂದೆ. “ಸರಿ” ಎಂದಳು. “ಸರಿ, ರಾಮಕೃಷ್ಣ ನಿನಗೆ ಒಳ್ಳೆಯದು ಮಾಡಲಿ” ಎಂದು ಎದ್ದು ಹೊರಡಲು ಅನುವಾದೆ. ಪಕ್ಕದ ಹುಡುಗ “ಕೂತ್ಕೊಳ್ಳಿ ಸಾರ್. ಇನ್ನೊಂದು ಸ್ವಲ್ಪ ಹೊತ್ತು ನೋಡೋಣ.” ಎಂದ. “ಸರಿ” ಎಂದು ಅಲ್ಲೇ ಕುಳಿತೆ. ಈ ಮಧ್ಯೆ ಆ ಹುಡುಗಿ ಒಂದೊಂದು ಸಲ ನನ್ನತ್ತ ನೋಡಿ. ಕಣ್ಣು ಪಕ್ಕಕ್ಕೆ ಮಿಟುಕಿಸಿ ಅವರಿದ್ದಾರೆ. ಜೋರಾಗಿ ಕೇಳಬೇಡಿ. ಸುಮ್ಮನಿರಿ. ಎಂಬಂತೆ ಸನ್ನೆ ಮಾಡುತ್ತಿದ್ದಳು. ನನಗೆ ಸ್ವಲ್ಪ ಸ್ವಲ್ಪ ವಿಶ್ವಾಸ ಬರತೊಡಗಿತು. ನಾನು ಸ್ವಲ್ಪ ಗಟ್ಟಿಯಾಗಿ ಮಾತನಾಡತೊಡಗಿದೆ. ಅಷ್ಟರಲ್ಲಿ ಯಾರಿಗೋ ಮಿಸ್ ಕಾಲ್ ಬಂತು. ನಾನು ಬೇಕಂತಲೇ “ಯಾರ್ದಪ್ಪಾ ಮಿಸ್ ಕಾಲ್? ಪೋಲೀಸ್ ನವರದಾ?” ಎಂದೆ. ಅಷ್ಟರಲ್ಲಿ ಆ ಮೂವರು ಬಾಡಿ ಗಾರ್ಡ್ಸ್ ಗಳಿಗೆ ನನ್ನ ಮೇಲೆ ಬಲವಾದ ಅನುಮಾನ ಬಂದಿತ್ತು.
ಚೆನ್ನೈ ಸ್ಟೇಷನ್‍ಗೆ ಇನ್ನು 15 ನಿಮಿಷ ಬಾಕಿ ಉಳಿದಿತ್ತು. ಕ್ರಾಸಿಂಗ್ ಒಂದರಲ್ಲಿ ಆ ಮೂವರೂ ಇಳಿದುಕೊಂಡರು ಮತ್ತೆ ಇಬ್ಬರು ಸೇರಿ ಮೀಟಿಂಗ್ ಮಾಡತೊಡಗಿದರು. ನಾನು ಮತ್ತೆ ಮತ್ತೆ ಆ ಹುಡುಗಿಗೆ ಧೈರ್ಯ ತುಂಬಲು ಪ್ರಯತ್ನಿಸಿದೆ. ಬಾಯಿ ಬಿಡಿಸಲು ಪ್ರಯತ್ನಿಸಿದೆ. “ನೋಡಮ್ಮಾ ಪ್ರಪಂಚದಲ್ಲಿ ಒಳ್ಳೆ ರಸ್ತೆ,ಕೆಟ್ಟ ರಸ್ತೆ ಅಂತ ಎರಡು ಮಾರ್ಗಗಳಿರುತ್ತವೆ. ಸದಾ ಒಳ್ಳೆಯ ರಸ್ತೆಯನ್ನೇ ಆಯ್ಕೆ ಮಾಡಿಕೊಳ್ಳಬೇಕು.” ಎಂದೆ. ಅವಳು ಹೂಂ. ಎಂದಳೇ ಹೊರತು ಬೇರೆ ಬಾಯಿ ಬಿಡಲಿಲ್ಲ. ಅಷ್ಟರಲ್ಲಿ ರೈಲು ಹೊರಟಿತು. ನಾಲ್ವರೂ ಹತ್ತಿ ಕುಳಿತರು. ಬನಿಯನ್ ಹುಡುಗ ಎತ್ತರಕ್ಕಿದ್ದ ಆ ಬಿಳಿ ಬಟ್ಟೆಯ ಬಾಡಿಗಾರ್ಡ್ ಗೆ “ಏನು ಭಾಯ್?” ಎಂದ. ಅದಕ್ಕೆ ಅವನು “ಏನಿಲ್ಲಾ ತುಂಬಾ ಟೆನ್ಷನ್ ಆಗ್ತಿದೆ” ಅಂದವನೇ ನನ್ನ ಬಳಿಗೆ ಬಂದು “ಯಾರಿವನು?” ಎಂದು ಕೇಳಿದ. ಅದಕ್ಕೆ ಬನಿಯನ್ ಹುಡುಗ “ಪಕ್ಕದ ಬೋಗಿಯವರು. ಇಲ್ಲೇ ಪರಿಚಯವಾದರು.” ಎಂದ. ಸ್ವಲ್ಪ ಅನುಮಾನದ ದೃಷ್ಟಿಯಲ್ಲಿ ನೋಡಿ ಆಮೇಲೆ. “ಯಾವ ಊರಿಗೆ ಹೋಗುತ್ತೀರಿ?” ಎಂದ. “ಬೆಂಗಳೂರು” ಎಂದೆ. “ಮಂಗಳೂರಾ? ಬೆಂಗಳೂರಾ?” ಎಂದ. “ಬೆಂಗಳೂರು. ಯಾಕೆ?” ಎಂದೆ. “ಹಾಗೆ ಸುಮ್ಮನೆ ಕೇಳಿದೆ. ನಾವು ಮಂಗಳೂರಿಗೆ ಹೋಗಬೇಕು. ಚೆನ್ನೈ ಇಂದ ಮಂಗಳೂರಿಗೆ ಹೋಗೋ ಟ್ರೈನ್‍ಗೇ ಹೋಗಬೇಕು ಅದಕ್ಕೆ” ಎಂದು ಮತ್ತೆ ಬಾಗಿಲ ಬಳಿ ಹೋಗಿ ನಿಂತ. ಸರಿ ಎನ್ನುವಷ್ಟರಲ್ಲಿ ಚೆನ್ನೈ ತಲುಪುವ ಮೊದಲು ಸಿಕ್ಕ ಕೊನೆಯ ಸ್ಟೇಷನ್ ಬಂದಿತು. ಇನ್ನು 5 ನಿಮಿಷ ಸಮಯವಿದೆ. ಏನಾದರೂ ಮಾಡಬೇಕು. ಏನಾದರೂ ಹೆಚ್ಚು ಕಡಿಮೆಯಾದರೆ ಸಾಕ್ಷಿಗೆ ಇರಲಿ ಅಂತ ಕೆಮೆರಾಗೆ ಶೆಲ್ ಹಾಕಿ ರೆಡಿ ಮಾಡಿ ಇಟ್ಟುಕೊಂಡೆ. ಒಂದು ಗ್ರೂಪ್ ಫೋಟೋ ತೆಗೆಯುವ ನೆಪದಲ್ಲಿ ಆ ಹುಡುಗಿಯ ಮತ್ತು ಸಾಧ್ಯವಾಧರೆ ಆ ಕಳ್ಳರ ಫೋಟೋ ತೆಗೆಯೋಣವೆಂದುಕೊಂಡೆ. ಆದರೆ ಸಾಧ್ಯವಾಗಲಿಲ್ಲ. ಹೊರಗಿನಿಂದ ಒಬ್ಬ ಚಿಕ್ಕ ಹುಡುಗ ಬಂದು ಆ ಹುಡುಗಿಯನ್ನು ಹೊರಗೆ ಕರೆಯುತ್ತಿದ್ದಾರೆಂದು ಹೇಳಿದ. ಆ ಹುಡುಗಿ ಹೆದರಿದ ಕುರಿಯಂತೆ ವಿಧೇಯತೆಯಿಂದ ಹೊರಗೆ ಹೋದಳು. 2 ನಿಮಿಷದ ನಂತರ ಟ್ರೈನು ಹೊರಡಲು ಪ್ರಾರಂಭಿಸಿತು. ಆ ಹುಡುಗಿ ಬಂದು ತನ್ನ ಜಾಗದಲ್ಲಿ ಕುಳಿತಳು. ಅಷ್ಟೇ. ಆ ಹುಡುಗಿಯ ಬಾಯಿ ಬಂದಾಗಿತ್ತು. ಉಸಿರು ಕೂಡಾ ಬಿಡಲಿಲ್ಲ. ಆದರೆ ಕಣ್ಣಲ್ಲಿ 2 ಹನಿ ನೀರು ಮುತ್ತಿನ ಹನಿಯಂತೆ ತೊಟ್ಟಿಕ್ಕಿತ್ತು. ನನಗೆ ನನ್ನ ಜೀವ ಹೋಗಿಬಿಡಬಾರದೇ ಎನಿಸಿತು. ಆ ತಾಯಿ ಒಂದು ಮಾತು ನನ್ನ ಬಳಿ ಹೇಳಿದ್ದರೂ ಎಂಥಾ ತ್ಯಾಗಕ್ಕಾದರೂ ಸಿದ್ಧವಾಗಿ ಅವಳನ್ನು ಕಾಪಾಡುವ ಸಾಹಸ ಮಾಡುತ್ತಿದ್ದೆ. ಆದರೆ ಆ ಕಡೆಯಿಂದ ಒಂದು ಪ್ರತಿಕ್ರಿಯೆಯಿಲ್ಲ.
ಚೆನ್ನೈ ನಿಲ್ದಾಣ ಬಂದಿತು. ನಾನು ನನ್ನ ಧೈರ್ಯವನ್ನು ಜಾಸ್ತಿ ಮಾಡಿಕೊಳ್ಳತೊಡಗಿದೆ. ಆ ಹುಡುಗಿ ಬಾಯಿ ಬಿಡದಿದ್ರೂ ಪರವಾಗಿಲ್ಲ ಪೂರ್ಣ ರಿಸ್ಕ್ ಅನ್ನು ನಾನೇ ತೆಗೆದುಕೊಂಡು ಅಟ್ಲೀಸ್ಟ್ ಹೋಗಬೇಕಾದರೆ ಏನಾದರೂ ಮಾಡೋಣ , ಆ ಹುಡುಗಿ ತಪ್ಪಿಸಿಕೊಳ್ಳಲು ಸಪೋರ್ಟ್ ಮಾಡೋಣ ಎಂದುಕೊಂಡೆ. ಆದರೆ ಆ ಖದೀಮರು, ಎಂಥಾ ಕುಶಾಗ್ರಮತಿಗಳು ಎಂದರೆ. ಆ ಹುಡುಗಿಗೆ ರೈಲಿನಿಂದ ಎಲ್ಲರೂ ಇಳಿದ ಮೇಲೆ ಇಳಿಯಬೇಕೆಂಬ ಸೂಚನೆ ಕೊಟ್ಟಿದ್ದರು. ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರೆ ಅಥವಾ ಯಾರೊಡನೆಯಾದರೂ ಬಾಯಿ ಬಿಟ್ಟರೆ ಸರಿ ಇರುವುದಿಲ್ಲವೆಂಬ ಬೆದರಿಕೆಯನ್ನೊಡ್ಡಿದ್ದರೆಂದು ಕಾಣುತ್ತದೆ. ಹೀಗಾಗಿ ಆ ಹುಡುಗಿ ನಮ್ಮೊಂದಿಗೆ ಇಳಿಯಲೇ ಇಲ್ಲ. ನಮ್ಮೊಂದಿಗೆ ಬಾ ಎಂದು ಕರೆದಿದ್ದ ಆ ಬನಿಯನ್ ಹುಡುಗ ಕೆಳಗೆ ಇಳಿದ. ನಂತರ ನನ್ನ ಕಡೆ ನೋಡಿ “ಸರಿ ಹಾಗಾದರೆ ಮತ್ತೆ ಸಿಗೋಣ.” ಎಂದು ಶೇಕ್ ಹ್ಯಾಂಡ್ ಕೊಡಲು ಬಂದ. ಅಷ್ಟರಲ್ಲಿ ಆ ಹುಡುಗಿಯನ್ನು ಆ ಬಿಳಿಬಟ್ಟೆಯ ಆಸಾಮಿ ಎಳೆದುಕೊಂಡು ಹೋಗುತ್ತಿದ್ದ. ನಾನು ಹುಡುಗಿಯ ಕಡೆಯೇ ನೋಡುತ್ತಿದ್ದೆ. ತಲೆಮೇಲೆ ಟೋಪಿ ಹಾಗೂ ಒಂದು ಕೈನ ಉಗುರನ್ನು ಕಚ್ಚುತ್ತಾ ಆ ಹುಡುಗಿ ನನ್ನನ್ನೇ ನೋಡುತ್ತಾ ಅಳುತ್ತಾ, ಹೋಗುತ್ತಿದ್ದಳು. ಈಗ ನನಗೆ ಪಕ್ಕಾ ಕನ್‍ಫರ್ಮ್ ಆಯಿತು. ಇದು ಮಾನವ ಸಾಗಣೆ ಎಂಬುದರಲ್ಲಿ ಅನುಮಾನವೇ ಇಲ್ಲ. ಎಂದು. ಆ ಹುಡುಗಿ ನನ್ನನ್ನು ಕಾಪಾಡುವೆಯಾ? ಎಂಬಂತೆ ನನ್ನತ್ತ ನೋಡುತ್ತಿರುವಂತೆ ಭಾಸವಾಯಿತು. ನಾನು ಕ್ಯಾಮೆರಾ ಹಿಡಿದು ಆವರ ಹಿಂದೆಯೇ ಹೋಗಲು ಸಿದ್ಧನಾದೆ. ಇದನ್ನು ಆ ಮಿಲಿಟರಿ ಹಾಫ್ ಪ್ಯಾಂಟ್ ತೊಟ್ಟಿದ್ದ ಖದೀಮ ನೋಡುತ್ತಿದ್ದ. ನನ್ನನ್ನೇ ಬಹು ಎಚ್ಚರಿಕೆಯಿಂದ ಗಮನಿಸುತ್ತಾ ಹೋಗುತ್ತಿದ್ದ. ಬಹುಶಃ ನಾನೇನಾದರೂ ಹುಡುಗಿಯನ್ನು ಫಾಲೋ ಮಾಡಿದರೆ ಅವನು ನನ್ನನ್ನು ಫಾಲೋ ಮಾಡಿ ಒಂದು ವೇಳೆ ನಾನು ಗಲಾಟೆ ಮಾಡಿದರೆ ಕೇಸನ್ನೇ ಉಲ್ಟಾ ಮಾಡುವ ಪ್ಲಾನ್ ಮಾಡಿದ್ದನೆಂದು ಅನಿಸಿತು. ನಾನು ಒಬ್ಬನೇ ಹೋಗುವ ಬದಲು ಇಬ್ಬರಾದರೆ ಒಳ್ಳೆಯದೆಂದುಕೊಂಡು ಆ ಬನಿಯನ್ ಹುಡುಗನನ್ನು “ಭಾಯ್ ನನ್ನೊಂದಿಗೆ ಬಾ ಆ ಹುಡುಗಿಯನ್ನು ಕಾಪಾಡೋಣ ಎಂದು ಗೋಗರೆದೆ. ಅವನು ಬರುವ ಸ್ಥಿತಿಯಲ್ಲಿ ಇರಲಿಲ್ಲ. “ಏ ಬಿಡಿ ಸಾರ್ ಆ ಹುಡುಗಿ ಕಥೆ ಆಯ್ತು. ನಿಮ್ ಫೋನ್ ನಂಬರ್ ಕೊಡಿ” ಎಂದ. ನನಗೆ ಏನು ಮಾಡಬೇಕೆಂಬುದು ತಿಳಿಯದೇ ಮಾನಸಿಕವಾಗಿ ಕುಸಿದುಹೋದೆ. ಅಷ್ಟರಲ್ಲಿ ಆ ಹುಡುಗಿಯನ್ನು ಆ ಬಿಳಿ ಬಟ್ಟೆಯ ಖದೀಮ ಸುಮಾರು ದೂರ ಕರೆದುಕೊಂಡು ಹೋಗಿಬಿಟ್ಟಿದ್ದ. ನಾನು ನಿರ್ಧರಿಸಿದೆ. ಇನ್ನು ಯಾರನ್ನು ನಂಬಿ ಉಪಯೋಗವಿಲ್ಲ. ಒಬ್ಬನೇ ಏನಾದರೂ ಮಾಡಲೇಬೇಕೆಂದು ಹೊರಟೆ. ಅಷ್ಟರಲ್ಲಿ ಆ ಹುಡುಗಿ ಮತ್ತು ಆ ದಾಂಢಿಗ ಮರೆಯಾಗಿಬಿಟ್ಟಿದ್ದರು. ನಾನು ನನ್ನ ಲಗೇಜನ್ನು ಹೆಗಲಿಗೇರಿಸಿ. ರೈಲ್ವೇ ನಿಲ್ದಾಣದಲ್ಲಿ ಅವರು ಹೋದ ದಿಕ್ಕಿಗೆ ಓಡತೊಡಗಿದೆ. ಇಡೀ ರೈಲ್ವೇ ಸ್ಟೇಷನ್ನನು ಅರ್ಧಗಂಟೆ ಹುಡುಕಿದೆ. ಆ ಸಮಯದಲ್ಲಿ ಅದ್ಯಾವ ಪರಿಯ ಆವೇಶ ನನ್ನನ್ನು ಆವರಿಸಿತ್ತೆಂದರೆ ಏನು ಮಾಡಲೂ ಸಿದ್ಧನಾಗಿಬಿಟ್ಟಿದ್ದೆ. (ಈ ಆವೇಶ ಒಂದು ಅರ್ಧ ಗಂಟೆ ಮುಂಚೆ ಇದ್ದಿದ್ದರೆ ಬಹುಶಃ ಬೇರೆಯದೇ ಫಲಿತಾಂಶ ದೊರೆಯುತ್ತಿತ್ತೇನೋ. ಆದರೆ ಬೇರೆಯವರನ್ನು ನಂಬಿಕೊಂಡು ಕೆಟ್ಟೆ.) ಆದರೆ ಹುಡುಗಿ ಮತ್ತು ಆ ಧಾಂಡಿಗ ಅದಾಗಲೇ ನಾಪತ್ತೆಯಾಗಿಬಿಟ್ಟಿದ್ದರು.
ಚೆನೈ ಎಗ್ಮೋರ್ ರೈಲ್ವೇ ನಿಲ್ದಾಣದ ಅಷ್ಟೂ ಪ್ಲಾಟ್ ಫಾರಮ್ ಗಳಲ್ಲಿ ಓಡಾಡುತ್ತಿರಬೇಕಾದರೆ ನನ್ನ ರಕ್ತ ಕುದಿಯುತ್ತಿತ್ತು. ಅಷ್ಟು ದಿನ ಲವ್ ಜಿಹಾದ್ ಅನ್ನು ಬರೀ ಕೇಳಿ, ಪತ್ರಿಕೆಗಳಲ್ಲಿ ಓದಿ ತಿಳಿದಿದ್ದ ನನಗೆ ಇಂದು ಆ ಘೋರ ಘಟನೆಯ ಪ್ರತ್ಯಕ್ಷ ದರ್ಶನವಾಗಿತ್ತು. ಮೊದಲೆಲ್ಲಾ ಈ ಆರ್.ಎಸ್.ಎಸ್. ನವರು ಮತ್ತು ಇತರ ಹಿಂದೂ ಪರ ಸಂಘಟನೆಯ ನಾಯಕರು ಲವ್ ಜಿಹಾದ್ ಅನ್ನು ಸ್ವಲ್ಪ ವೈಭವೀಕರಿಸಿ ಚಿತ್ರಿಸುತ್ತಿದ್ದಾರೆಂಬ ಅನುಮಾನವಿತ್ತು. ಆದರೆ ಇಂದು ಆ ಹುಡುಗಿಯನ್ನು ಕೇವಲ ಮಾರಾಟದ ವಸ್ತುವಿನಂತೆ, ಸ್ವಲ್ಪವೂ ಮಾನವೀಯತೆ, ಕರುಣೆಗಳಿಲ್ಲದೇ ಮಾಂಸಕ್ಕಾಗಿ ಸಾಕಿ ಕಡಿಯುವ ಕುರಿಯಂತೆ ಎಳೆದುಕೊಂಡು ಹೋಗುತ್ತಿದ್ದ ಆ ಮಾನವರೂಪಿ ಮೃಗಗಳನ್ನು ನೋಡಿ ನಗ್ನ ಸತ್ಯದ ದರ್ಶನವಾಗಿತ್ತು. ಹೊಟ್ಟೆ ಉರಿದು ಹೋಗಿತ್ತು. ನನ್ನ ಕಣ್ಣೆದುರೇ ಒಬ್ಬ ಹಿಂದೂ ಹುಡುಗಿಯನ್ನು ಅನ್ಯ ಕೋಮಿನವರು ಬಲಾತ್ಕಾರವಾಗಿ ಎಳೆದೊಯ್ಯಬೇಕಾದರೆ ಪಾರು ಮಾಡದೇ ಹೇಡಿಯಾಗಿಬಿಟ್ಟೆನಲ್ಲಾ ಎನ್ನುವ ಪಾಪಪ್ರಜ್ಞೆ ಈಟಿಯಂತೆ ಹೃದಯವನ್ನು ಚುಚ್ಚತೊಡಗಿತು. ಅಷ್ಟರಲ್ಲಿ ಇಡೀ ಸ್ಟೇಷನ್ನನ್ನೇ ಹುಡುಕಿ ಆಗಿತ್ತು. ಇನ್ನು ಹುಡುಕಿ ಪ್ರಯೋಜನವಿಲ್ಲವೆಂದು ತೋರಿದಾಗ ಒಂದು ಕಡೆ ಬಂಡೆಯಂತೆ ಶೂನ್ಯದೆಡೆಗೆ ನೋಡುತ್ತಾ ನಿಂತುಬಿಟ್ಟೆ. ಕಡೆಗೆ ಅಲ್ಲಿ ಇಬ್ಬರು ಲೇಡಿ ಪೊಲೀಸರು ಬರುತ್ತಿರುವುದು ಕಾಣಿಸಿತು. ಓಡಿ ಓಡಿ ಅವರ ಬಳಿ ಹೋದೆ. “ಮ್ಯಾಡಮ್ ನಿಮಗೆ ಹಿಂದಿ ಬರುತ್ತದೆಯೇ?” ಎಂದೆ. “ಬೋಲೊ” ಎಂದರು. ನಾನು ನಡೆದುದೆಲ್ಲವನ್ನೂ ಅವರಿಗೆ ಹೇಳಿ ಹೇಗಾದರೂ ಮಾಡಿ ಅವಳನ್ನು ಪಾರು ಮಾಡುವಂತೆ ಕೇಳಿಕೊಂಡೆ. ನಾನು ಹೇಳಿದ ಮಾಹಿತಿಯೆಲ್ಲವನ್ನೂ ಕೇಳಿದ ಮೇಲೆ “ಇದು ಪಕ್ಕಾ ಮಾನವ ಸಾಗಣೆ” ಎಂದ ಅವರು ಈಗ “ಆ ಹುಡುಗಿ ಎಲ್ಲಿ” ಎಂದು ಕೇಳಿದಾಗ ಅವರು ಹೋದ ದಿಕ್ಕಿನ ಕಡೆ ಕೈ ತೋರಿಸಿದೆ. “ಬಹುಶಃ ಅವರು ಈಗ ಮಂಗಳೂರಿಗೆ ಹೋಗುವ ರೈಲಿನಲ್ಲಿ ಕೇರಳದವರೆಗೂ ಹೋಗುತ್ತಾರೆ. ಮಾರ್ಗ ಮಧ್ಯದಲ್ಲಿ ಹಿಡಿಯಬಹುದು ಎಂದೆ.” ಹುಡುಗಿಯ ಉಡುಪು, ವಯಸ್ಸು, ಬಣ್ಣ, ಎಲ್ಲವನ್ನೂ ಹೇಳಿದೆ. ಅವರಿಗೆ “ದಯವಿಟ್ಟು ಏನಾದರೂ ಮಾಡಿರಿ” ಎಂದು ಕೈಮುಗಿದೆ. ನನ್ನನ್ನು ನೋಡಿ ಅವರ ಕಣ್ಣುಗಳೂ ತುಂಬಿ ಬಂದವು. “ನಮ್ಮ ಪ್ರಯತ್ನವನ್ನು ನಾವು ಮಾಡುತ್ತೇವೆ. ನೀನು ಹೋಗು.” ಎಂದರು. ಭಾರವಾಧ ಹೆಜ್ಜೆಗಳನ್ನಿಡುತ್ತಾ ಹೊರಗೆ ಬರುವಾಗ, ಚೆನ್ನೈನ ರೈಲ್ವೇ ಸ್ಟೇಶನ್ನಿನ ಬಳಿ ನಿಂತಿದ್ದ ಪೊಲೀಸ್ ಮತ್ತು ಮಿಲಿಟರಿಯವರ ಬಂದೂಕುಗಳು ನನ್ನನ್ನು ಅಣಕಿಸುತ್ತಿರುವಂತೆ ಭಾಸವಾಗುತ್ತಿತ್ತು!
ಚೆನ್ನೈನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಹೊರಟ ನನಗೆ ಊಟ ಮಾಡಲೂ ಮನಸ್ಸು ಬರಲಿಲ್ಲ. ಟಿಕೆಟ್ ತೆಗೆದುಕೊಂಡು ಬಸ್ಸಿನಲ್ಲಿ ಕುಳಿತ ನನಗೆ ನಿದ್ರೆಯೇ ಬರಲಿಲ್ಲ. ಕಣ್ಮುಚ್ಚಿದರೆ. ಆ ಹುಡುಗಿ ಅಳುತ್ತಿರುವ ದೃಶ್ಯ. ಅವಳನ್ನು ಹೇಗಾದರೂ ಪಾರು ಮಾಡಬೇಕೆಂದು ಅನ್ನಿಸುತ್ತಿತ್ತು. ಆ ರೈಲಿನಲ್ಲಿ ನಡೆದ ಆ ಘಟನೆಯ ಕೊನೇ ಸೀನ್ ಮತ್ತೆ ಬಂದುಬಿಟ್ಟರೆ, ಅದ್ಯಾವುದಾದರೂ ಬೆಲೆ ತೆತ್ತು ಅವಳನ್ನು ಪಾರು ಮಾಡಬೇಕು ಎನಿಸುತ್ತಿತ್ತು. ಆ ದಾಂಡಿಗರನ್ನು ತುಂಡು ತುಂಡಾಗಿ ಕತ್ತರಿಸಿಹಾಕಿಬಿಡಬೇಕು ಅನ್ನಿಸುತ್ತಿತ್ತು. ರಾತ್ರಿಯೆಲ್ಲಾ ನಿದ್ರೆ ಬಾರದೇ ಹಾಗೇ ಕಳೆದೆ. ಬೆಂಗಳೂರಿಗೆ ಬರುವಷ್ಟರಲ್ಲಿ ಬೆಳಗ್ಗೆ 8 ಗಂಟೆಯಾಗಿತ್ತು. ಬಂದ ತಕ್ಷಣ ನನಗೆ ಪರಿಚಯವಿದ್ದ ಒಬ್ಬ ಸ್ನೇಹಿತರ ಮನೆಯಲ್ಲಿ ಇಂಟರ್ ನೆಟ್‍ನಲ್ಲಿ ನೆನ್ನೆ ರಾತ್ರಿ ಚೆನ್ನೈನಿಂದ ಎಷ್ಟು ರೈಲುಗಳು ಕೇರಳ ಮರ್ಗವಾಗಿ ಮಂಗಳೂರಿಗೆ ಹೋಗುತ್ತಿವೆ. ಎಂಬುದನ್ನು ಚೆಕ್ ಮಾಡಿದೆ. ಒಂದೇ ಒಂದು ಟ್ರೈನ್ ಮಾತ್ರ ರಾತ್ರಿ 10.30 ಕ್ಕೆ ಹೊರಟಿರುವುದು ಖಚಿತವಾಯಿತು. 12 ಗಂಟೆ ಹೊತ್ತಿಗೆ ಆ ರೈಲು ಕೇರಳ ತಲುಪುವುದೆಂಬ ಮಾಹಿತಿ ದೊರೆಯಿತು. ನನ್ನ ಸ್ನೇಹಿತರೊಬ್ಬರಿಗೆ ಫೋನ್ ಮಾಡಿದೆ. ಅವರು ವಿ.ಹೆಚ್.ಪಿ. ಆಲ್ ಇಂಡಿಯಾ ಹೆಲ್ಪ್ ಲೈನ್ ನಂಬರ್ ಕೊಟ್ಟರು. ಫೋನ್ ಮಾಡಿ ಎಲ್ಲವನ್ನೂ ವಿವರಿಸಿದೆ. ವಿ.ಹೆಚ್.ಪಿ.(ವಿಶ್ವ ಹಿಂದೂ ಪರಿಷತ್) ಯವರು ಚೆನ್ನೈನಿಂದ ಮಂಗಳೂರಿಗೆ ಹೋಗುವ ರೈಲಿನಲ್ಲಿ ಹುಡುಕಿಸುವ ಪ್ರಯತ್ನ ಮಾಡಿದರಾದರೂ ಅಂತಹಾ ಯಾವುದೇ ಹುಡುಗಿ ಸಿಗಲಿಲ್ಲವೆಂದು ರಾತ್ರಿ ಪೋನ್ ಮಾಡಿ ತಿಳಿಸಿದರು. ಅಲ್ಲಿಗೆ ಆ ಹುಡುಗಿಯನ್ನು ಪಾರು ಮಾಡುವ ನನ್ನ ಪ್ರಯತ್ನ ಸಮಾಧಿ ಸೇರಿತು.
ರಾತ್ರಿ ಮನೆಗೆ ಬಂದು ಅಸ್ಸಾಮಿನಲ್ಲಿ ನಾಣು ಉಳಿದುಕೊಂಡಿದ್ದ ಕಾರ್ಬಿ ಬುಡಕಟ್ಟಿನ ಸ್ನೇಹಿತರ ಮನೆಗೆ ಫೊನ್ ಮಾಡಿದೆ. ಮಾತನಾಡುವಾಗ ರೋಂಗ್ಯಾ ಅನ್ನೋ ಊರು ನಿಮ್ಮ ಊರಿಗೆ ಎಷ್ಟು ದೂರ? ಎಂದೆ. ಅದಕ್ಕವರು. ತುಂಬಾ ಹತ್ತಿರ ಸಾರ್ ಯಾಕೆ? ಎಂದರು. ನಾನು ಈ ಹುಡುಗಿಯ ವಿಷಯ ಹೇಳಲೆಂದು ಒಂದೆರಡು ವಾಕ್ಯಗಳನ್ನೂ ಪೂರೈಸಿರಲಿಲ್ಲ. ಅಷ್ಟರಲ್ಲಿ ಆ ನನ್ನ ಸ್ನೇಹಿತರು ನನ್ನ ಮಾತನ್ನು ಅರ್ಧಕ್ಕೇ ತುಂಡರಿಸುತ್ತಾ ಹೇಳಿದರು. “ರೋಂಗ್ಯಾದಲ್ಲಿ ಈ ಥರದ್ದು ನಡೀತನೇ ಇರತ್ತೆ.” ಅಂದರು. ನನಗೆ ಒಂದು ಕ್ಷಣ ಗಾಬರಿಯಾಗಿಬಿಟ್ಟಿತು. ಮುಂದುವರೆಸುತ್ತಾ ಅವರು ಹೇಳಿದರು “ಮುಸ್ಲೀಮ್ ಪುಂಡರು ಹಿಂದೂ ಹುಡುಗಿಯರನ್ನು, ಬಲವಂತವಾಗಿಯೋ, ಆಮಿಷ ಒಡ್ಡಿಯೋ, ಮೋಸದಿಂದಲೋ ಹೇಗಾದರೂ ಸರಿ ಕೇರಳಕ್ಕೇ ಮತ್ತು ಗಲ್ಫ್ ರಾಷ್ಟ್ರಗಳಿಗೆ ಮಾರುವುದು ಸಾಮಾನ್ಯದ ಸಂಗತಿಯಾಗಿ ಬಿಟ್ಟಿದೆ.” ಎಂದರು. ನನಗೆ ಮಾತು ಮುಂದುವರೆಸುವ ಧೈರ್ಯ ಸಾಲದೇ ಫೋನ್ ಕೆಳಗಿಟ್ಟಿದ್ದೆ.
ನೀವು ಈ ಲೇಖನ ಓದುವ ಹೊತ್ತಿಗೆ ಆ ಹುಡುಗಿಯ ದೇಹದ ಮೇಲೆ ಅದೆಷ್ಟು ನರರೂಪಿ ರಕ್ಕಸರ ಆಕ್ರಮಣವಾಗಿದೆಯೋ, ಯಾವ ದೇಶ ವಿದೇಶಗಳಿಗೆ ಮಾರಾಟವಾಗಿದ್ದಾಳೋ, ಅದೆಷ್ಟು ನೋವು ಅನುಭವಿಸುತ್ತಿದ್ದಾಳೋ. ಪಾಪ, ಶಾಲೆಗೋ ಕಾಲೇಜಿಗೋ ಹೋಗುತ್ತಾ ಆಡಿ ನಲಿಯಬೇಕಿದ್ದ ಆ ಚಿಕ್ಕ ಹುಡುಗಿ ಈ ಹೊತ್ತಿಗೆ ಅದೆಷ್ಟು ನೋವುಂಡಿದ್ದಾಳೋ? ನನಗೆ ಆವತ್ತಿನಿಂದ ಈವತ್ತಿನವರೆಗೂ ರಾತ್ರಿ ಸರಿಯಾಗಿ ನಿದ್ರೆ ಬಂದಿಲ್ಲ. ಮಾನವ ಸಾಗಣೆಯ ಈ ಕರಾಳ ಮುಖದ ದರ್ಶನವನ್ನು ಆ ಭಗವಂತ ಅದೇಕೆ ನನಗೆ ಮಾಡಿಸಿದನೋ ಅರ್ಥವಾಗುತ್ತಿಲ್ಲ. ಆದರೆ ಒಂದಂತೂ ಸತ್ಯ. ಲವ್ ಜಿಹಾದ್ ಆಗಲೀ, ವೇಶ್ಯಾವಾಟಿಕೆಯಾಗಲಿ, ಹೆಣ್ಣುಮಕ್ಕಳ ಅಪಹರಣವಾಗಲೀ ನಡೆಯಲು ಕಾರಣ ಈ ಭ್ರಷ್ಟ ವ್ಯವಸ್ಥೆ, ವೋಟ್ ಬ್ಯಾಂಕ್ ರಾಜಕಾರಣ, ಹಿಂದುಗಳ ನಿರ್ವೀರ್ಯತೆ. ಗುವಾಹಟಿಯಿಂದ ಚೆನ್ನೈವರೆಗಿನ 3 ದಿನಗಳ ರೈಲು ಪ್ರವಾಸದಲ್ಲಿ ಅದೆಷ್ಠೊ ಜನ ಟಿ.ಸಿ.ಗಳು ಬಂದು ಹೋದರು. ದಂಡ ಹಾಕುವ ಭಯ ತೋರಿಸಿ ಸಾವಿರಾರು ರೂಪಾಯಿ ಲಂಚ ಹೊಡೆದರೇ ಹೊರತು. ಈ ರೀತಿಯ ಒಂದು ಜಾಲ ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಕಿಂಚಿತ್ತಾಧರೂ ವಿಚಾರಿಸಲಿಲ್ಲ. ಅಥವಾ ಗೊತ್ತಾದರೂ ಸುಮ್ಮನಿದ್ದರೋ ಏನೊ?! ಇನ್ನು ಪೊಲೀಸರಂತೂ ಶಾಸ್ತ್ರಕ್ಕಾದರೂ ನಮ್ಮ ಬೋಗಿಯ ಕಡೆ ತಲೆಯೇ ಹಾಕಲಿಲ್ಲ. ನನಗೆ ಗೊತ್ತು. ಆ ಹುಡುಗಿಯನ್ನು ಗಲ್ಫ್ ರಾಷ್ಟ್ರಗಳಿಗೆ ವಿಮಾನ ಹತ್ತಿಸಿದರೂ ವ್ಯವಸ್ಥೆ ಅದನ್ನು ಪತ್ತೆ ಹಚ್ಚುವ ಅಥವಾ ಅದನ್ನು ತಡೆಯುವ ಪ್ರಯತ್ನ ಮಾಡುವುದಿಲ್ಲ. ಕಾರಣ ನಮ್ಮ ವ್ಯವಸ್ಥೆ ಅಷ್ಟು ಭ್ರಷ್ಟಗೊಂಡಿದೆ. ಅಸ್ಸಾಮಿನಲ್ಲಿ ಅಸ್ಸಾಮೀ ಜನರಿಗೆ ವೋಟರ್ ಐಡಿ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಬಾಂಗ್ಲಾ ದೇಶದಿಂದ ವಲಸೆ ಬಂದ ಮುಸ್ಲೀಮರಿಗೆ ವೋಟರ್ ಐಡಿಗಳನ್ನು ಕೊಡಲು ಸಿದ್ಧವಿರುವ ಮುಸ್ಲೀಮ್ ದೇಶದ್ರೋಹಿಗಳ ಪಡೆಯೇ ಅಲ್ಲಿದೆ. ಇನ್ನಾದರೂ ನಮ್ಮ ಜನರು ವ್ಯವಸ್ಥೆಯ ಶುದ್ಧೀಕರಣಕ್ಕೆ ಕೈ ಹಾಕದಿದ್ದರೆ ಪರಿಣಾಮ ಭೀಕರವಾಗುವುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ ನೀವು ಹಿಂದೂಗಳು ಹಾಗೂ ನಿಮ್ಮ ಮನೆಯಲ್ಲೂ ಹೆಣ್ಣುಮಕ್ಕಳಿದ್ದಾರೆ! ಎಚ್ಚರ!





ಮಾನ್ಯರೇ, ಇದು ಒಂದು ರೀತಿಯ ಹೃದಯವಿದ್ರಾವಕ ಕಥೆ. ಇಲ್ಲಿ ಒಬ್ಬ ಸಹೃದಯ ಮನುಷ್ಯ ಕಣ್ಣೆದುರಿಗೆ ನಡೆಯುತ್ತಿರುವ ಅನ್ಯಾಯವನ್ನು ತಡೆಗಟ್ಟಲು ಪ್ರಯತ್ನ.ಆ ಪ್ರಯತ್ನದಲ್ಲಿ ಸೋಲು. ಅಂಗಲಾಚಿದರೂ ಯಾವ ಸಹ ಪ್ರಯಾಣಿಕನೂ ಸಹಾಯಕ್ಕೆ ಬಾರದಿರುವುದು. ಲೇಖಕನ ಮಾನಸಿಕ ತೊಳಲಾಟ. ಓದುಗರ ಮನಸ್ಸನ್ನು ಕಲಕುತ್ತದೆ. ಇಂತಹ ಘಟನೆಗಳಿಗೆ ಅಂತ್ಯ ಯಾವಾಗ. ಮನವ ಕಳ್ಳಸಾಗಣೆ, ಹೆಣ್ಣಿನ ಮೇಲೆ ಮಕ್ಕಳ ಮೇಲೆ ಹತ್ಯಾಚಾರ. ಇಂತಹ ಸಮಯದಲ್ಲಿ ಇಲ್ಲದ ಉಸಾಬಾರಿ ನಮಗೇಕೆಂದು ನೋಡಿಯೂ ನೋಡದವರಂತೆ, ಕುಳಿತುಕೊಳ್ಳುವ ಜನರು. ಇದು ನೈಜ ಘಟನೆ ಮನಕಲಕುತ್ತದೆ. ಇದಕ್ಕೆ ಸಮಾಜ ಸೇವಾ ಸಂಸ್ಠೆಗಳು ಮನಸ್ಸು ಮಾಡಬೇಕು. ೨೪ ಗಂಟೆಗಳು ಕೆಲಸಮಾಡಬೇಕು. ಇಂತಹ ಸಮಯದಲ್ಲಿ ಘಟನೆಯನ್ನು ನೋಡಿದವರು,ಅಥವಾ ಅಸಹಾಯಕರು, ತಮಗೆ ತೊಂದರೆಯಾದಾಗ, ಸಹಾಯ ಹಸ್ತ ಚಾಚಲು ಎಲ್ಲಾ ರೈಲು,ಬಸ್ ನಿಲ್ದಾಣಗಳಲ್ಲು ದೂರವಾಣಿ ಸಂಖ್ಯೆಗಳನ್ನು ಹಾಕುವುದಲ್ಲದೆ. ಕರೆ ಬಂದಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ಮುಖ್ಯವಾಗಿ ನಮ್ಮ ಹಿಂದು ಸಂಸ್ಕೃತಿ ಉಳಿಯಬೇಕಾದರೆ. ಸರಕಾರ ಮತ್ತು ಸಮಾಜ ಸೇವಕರು, ಸಮಾಜ ಸೇವಾ ಸಂಸ್ಠೆಗಳು ಮನಸ್ಸು ಮಾಡಬೇಕು ಅಲ್ಲವೆ?
Nimma anisikege dhanyavadagalu…
ನಿತ್ಯಾನಂದರವರೆ ನಮ್ಮ ದರಿದ್ರ ವ್ಯವಸ್ಥೆ ಹಾಳಾಗಿ ಹೋಗಿದೆ. ಇದೇ ರೀತಿ ದುಬೈನಲ್ಲೋ ಅಥವಾ ಸೌದಿಯಲ್ಲೋ ಮುಸ್ಲಿಂ ಹುಡುಗಿಗೆಗೆ ಯಾವನಾದರೂ ಹಿಂದೂ ಹುಡುಗರು ಮಾಡಿದ್ದರೆ ಅದರ ಕತೆಯೇ ಬೇರೆ ಆಗುತ್ತಿತ್ತು. ಮೊದಲು ಇಲ್ಲಿನ ರಾಜಕಾರಣಿಗಳಿಗೆ ಮೆ….ಹೊಡಿಬೇಕು. ಇಲ್ಲಾ ಅಂದ್ರೆ ವ್ಯವಸ್ಥೆ ಹೀಗೆಯೇ ಇರುತ್ತದೆ. ನಮ್ಮಂತಹ ನಿಮ್ಮಂತವರು ಸುಮ್ಮನೆ ಕೊರಗುವುದು ಅಷ್ಟೆಯಾಗುತ್ತದೆ. ನಿಜಕ್ಕೂ ಬೇಸರವೆನಿಸಿತು.
😦 😦 😦
Tragedy.
ಓದಿ ಮನಸಿಗೆ ತುಂಬಾ ನೋವಾಯಿತು …. ಆಕೆ ಹಿಂದುವೋ ಮುಸ್ಲಿಂ ಳೋ ಅನ್ನುವುದಕ್ಕಿಂತ, ಆಕೆ ಕೂಡ ಮನುಷ್ಯಳು ಎಂಬುದು ಮಹತ್ವವಾಗಲಿ …. ಯಾವ ಹೆಣ್ಣಿಗೂ ಇಂತಹ ಸ್ತಿತಿ ಬರದಿರಲಿ
Dhanyavaadagalu. 😦 😦 😦
ಈ ಲೇಖನವನ್ನು ಚೆನ್ನಾಗಿದೆ ಎಂದು ಹೇಳುವ ಹಾಗಿಲ್ಲ ಹೇಳದೆ ಇರೋ ಹಾಗೂ ಇಲ್ಲ ಯಾಕೆಂದರೆ ನಮ್ಮ ದೇಶದಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿ ಯಾವ ನೆಲೆಗೆ ಬಂದು ನಿಂತಿದೆ ಎಂಬುದನ್ನು ಈ ಲೇಖನ ತೋರಿಸುತ್ತದೆ. ನೀವು ಸ್ವತಃ ಕಂಡ ನಿಮ್ಮ ಅನುಭವದ ಮಾತುಗಳನ್ನು ನಮ್ಮ ಕಣ್ಣ ಮುಂದೆ ಕಂಡಂತೆ ಬರೆದಿದ್ದೀರಿ, ಆ ಪರಿ ಇಷ್ಟವಾಯಿತು. ಹಾಗೇ ನೋವು ಕೂಡ. ಆದರೆ ಬೇಸರಿಸಿ ಪ್ರಯೋಜನವಾದರೂ ಏನು? ಇಂದು ನಮ್ಮ ದೇಶದಲ್ಲಿ ಇಂಥಹ ಪ್ರಸಂಗಗಳು ಅದೆಷ್ಟು ನಡೆಯುತ್ತಿದೆಯೋ ಗೊತ್ತಿಲ್ಲ. ಹೆಣ್ಣು ಮಾರಾಟದ ವಸ್ತುವಾಗಿ ಮಾರ್ಪಡಾಗಿದ್ದಾಳೆ. ಇದಕ್ಕೆ ಕೊನೆ ಎಂದು. ಪ್ರತಿದಿನ ಅದೆಷ್ಟು ಹೆಣ್ಣು ಮಕ್ಕಳು ಈ ರಾಕ್ಷಸೀಯ ಪ್ರವೃತ್ತಿಗೆ ಬಲಿಯಾಗುತ್ತಿದ್ದಾರೆ… ಊಹಿಸಲು ಸಾಧ್ಯವಿಲ್ಲ. ಈಗಷ್ಟೆ ಹುಟ್ಟಿದ ಮಕ್ಕಳನ್ನು ಬಿಡದ ಈ ಪಾಪಿಗಳಿಗೆ, ಬೆಳೆದ ಹೆಣ್ಣು ಮಕ್ಕಳು ಏನೂ ಅಲ್ಲ ಕೇವಲ ವಸ್ತು ಅಷ್ಟೆ. ಇದರ ಬಗ್ಗೆ ಮಾತನಾಡುತ್ತಾ ಹೋದರೆ ಪ್ರಯೋಜನವಿಲ್ಲ. ನಾವು ಮಾತನಾಡುತ್ತಿದ್ದಂತೆ. ಇಂಥಾ ಘಟನೆಗಳು ಮತ್ತೊಂದಷ್ಟು ನಡೆಯುತ್ತಲೇ ಇರುತ್ತ್ತದೆ ಅಷ್ಟೆ. ಇಷ್ಟೆಲ್ಲಾ ಆದರೂ ನಮ್ಮ ಸರಕಾರ, ಕಾನೂನು ಯಾಕೆ ಈ ರೀತಿ ನಿದ್ದೆ ಮಾಡುತ್ತಿದೆ ಎಂದೆ ಅರ್ಥವಾಗುತ್ತಿಲ್ಲ. ಇಂಥಾ ಕಾನೂನು ನಮಗೆ ಬೇಕಾ? ಹೆಣ್ಣು ಮಕ್ಕಳ ಸಾಗಾಣಿಕೆ ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ನಮ್ಮ ದೊಡ್ಡ ದೊಡ್ಡ ಜನ ಕಾನೂನು ಕಣ್ಣು ಮುಚ್ಚಿ ಕುಳಿತಂತಿದೆ. ನಿದ್ದೆಯಲ್ಲಿದ್ದವರನ್ನು ಎಚ್ಚರಿಸಬಹುದು ಆದರೆ ಈ ರೀತಿ ನಿದ್ದೆಯಲ್ಲಿದ್ದಂತೆ ನಟಿಸುವವರನ್ನು ಎಚ್ಚಿಸುವವರು ಯಾರು….?
Nija 😦 😦 😦 anisikege Dhanyavaadagalu.
ಛೇ, ಓದಿದರೇನೇ ಈ ಪರಿಯ ಅಸಹಾಯಕತೆ ಕಾಡುತ್ತಿದೆ, ರಕ್ತ ಕುದಿಯುತ್ತದೆ. ಇನ್ನು ಅದನ್ನೆಲ್ಲಾ ಕಣ್ಣಾರೆ ಕಂಡು ಪ್ರಯತ್ನಪಟ್ಟೂ ಏನೂ ಮಾಡಲಾಗದ ನಿಮ್ಮ ಅಸಹಾಯಕತೆಯ ಅಸಹನೀಯತೆ ಅರ್ಥವಾಗುತ್ತಿದೆ. ಯಾವ ಧರ್ಮದವರೇ ಆಗಿರಲಿ ಇಂಥ ಹೇಯ ಕೃತ್ಯವೆಸಗುವುದು ಅಮಾನವೀಯ. ಸ್ವಲ್ಪ ಗಮನಿಸಿ ನೋಡಿದಲ್ಲಿ ಬರೀ ಆ ನೀಚರಷ್ಟೇ ನೀಚರಲ್ಲ, ನಮಗ್ಯಾಕೆ ಬೇಕು ಇಲ್ಲದ ಉಸಾಬರಿ ಎಂದುಕೊಂಡು ನೋಡಿಯೂ ತಮ್ಮ ಪಾಡಿಗೆ ತಾವು ಇದ್ದರಲ್ಲ ಅವರೂ ಮಾನವೀಯತೆ ಕಳೆದುಕೊಂಡವರೇ. ಮಾನವೀಯತೆಗೆ, ಅಮಾನವೀಯತೆಗೆ ಧರ್ಮದ ಹಣೆಪಟ್ಟಿ ಕಟ್ಟುವುದು ಬೇಡ.
Dharma bere mata bere Jayalakshmiyavare… idu mataandhara kelasa. adannu oppikolloke intha naubhavagalu agabeku…. anisikege dhanyavaadagalu…
ಇದನ್ನ ಲವ್-ಜಿಹಾದ್ ಅಂತ ಯಾಕೆ ಕರೆದಿದ್ದೀರಿ? ಹಿಂದೂ ಹುಡುಗಿಯ ಕಳ್ಳಸಾಗಾಣಿಕೆಯನ್ನು ಮುಸ್ಲಿಮ್ ಪುಂಡರು ಮಾಡಿದರೆ ಅದು ಲವ್ಜಿಹಾದೇ?
innenantha kariyona??? neeve heli…
ದರಿದ್ರ ವ್ಯವಸ್ಥೆಯಲ್ಲಿ ಇಲಿಯಾಗಿ 100 ವರ್ಷ ಬಾಳುವುದಕ್ಕಿನ್ನ ಹುಲಿಯಾಗಿ 3 ದಿನ ಬದುಕುವುದು ಮೇಲು…ಓದಿದವದರ ರಕ್ತ ಕುದಿದರೆ ಅದಕ್ಕೆ ಈ ದರಿದ್ರ ವ್ಯವಸ್ಥೆಯೇ ಕಾರಣ…ಕ್ಷಮಿಸಿ..
😦 😦 😦