ವಚನ ಸಾಹಿತ್ಯ ಹಾಗೂ ಜಾತಿ ವ್ಯವಸ್ಥೆ: ರಾಜೇಂದ್ರ ಚೆನ್ನಿಯವರಿಗೊಂದು ಪ್ರತಿಕ್ರಿಯೆ
– ಡಂಕಿನ್ ಝಳಕಿ
ಇದು ರಾಜೇಂದ್ರ ಚೆನ್ನಿಯವರು ಲಡಾಯಿ ಬ್ಲಾಗ್ನಲ್ಲಿ ಬರೆದ ಲೇಖನಕ್ಕೆ ನನ್ನ ಪ್ರತಿಕ್ರಿಯೆ. ಅವರ ಲೇಖನ ಸಾಕಷ್ಟು ಉದ್ದವಿದ್ದರೂ ಅದರಲ್ಲಿ ಉತ್ತರ ಕೊಡಲು ಯೋಗ್ಯವಾದ ವಿಚಾರಗಳಿರುವುದು ಎರಡು ಅಥವಾ ಮೂರು ಮಾತ್ರ. ಉಳಿದದ್ದೆಲ್ಲಾ ವೈಯುಕ್ತಿಕ ನಿಂದನೆಗಳು, ಆಧಾರ ರಹಿತ ಆಪಾದನೆಗಳು, ಮತ್ತು ಬಾಲಿಶ ಹಾಸ್ಯಗಳು. ಅವುಗಳಿಗೆ ಉತ್ತರ ಕೊಡುವುದು ಘನತೆಯ ವಿಚಾರವಲ್ಲ.
೧.ಮೇಲುಚಲನೆಯ ಕುರಿತು: ಡಾ.ಷಣ್ಮುಖರವರು ಹೇಳುವ ನನ್ನ “ಪ್ರಬಂಧದಲ್ಲಿ ಎಲ್ಲೂ ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು ಎನ್ನುವ ವಾದವಿಲ್ಲ” ಎಂಬುದನ್ನು ಅಲ್ಲಗಳೆಯುತ್ತಾ ಚೆನ್ನಿಯವರು ನಾನು ನನ್ನ ಪ್ರಬಂಧದಲ್ಲಿ ತನ್ನ ಅಸ್ಮಿತೆ ಹಾಗೂ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಬ್ರಿಟಿಷರು ಕಟ್ಟಿಕೊಟ್ಟ ಚಿತ್ರಣಗಳನ್ನು ತನಗೆ ಅಪ್ಯಾಯಮಾನವಾಗಿ ಕಂಡಿದ್ದರಿಂದ ಆಧುನಿಕ ವೀರಶೈವ ಶಿಕ್ಷಿತ ವರ್ಗವು ಒಪ್ಪಿಕೊಂಡಿತು ಎಂದು ವಾದಿಸುತ್ತೇನೆ ಎಂದು ಹೇಳುತ್ತಾರೆ.





