ವಿಷಯದ ವಿವರಗಳಿಗೆ ದಾಟಿರಿ

ಜನವರಿ 14, 2015

14

5ನೇ ವರ್ಷದ ಸಂಭ್ರಮದಲ್ಲಿ ಶುರುವಾಗಲಿದೆ “ನಿಲುಮೆ ಪ್ರಕಾಶನ”

‍ನಿಲುಮೆ ಮೂಲಕ

Nilume 5 Years Celebration

ನಿಲುಮೆಯ ಪ್ರಿಯ ಓದುಗರೇ,

“ಯಾವುದೇ ಜಾತಿ,ಮತ,ತತ್ವಗಳಿಗೆ ಗಂಟು ಬೀಳದೆ,ಎಡ-ಬಲ ಪಂಥೀಯರ ನಡುವೆ ಸಿಕ್ಕಿಕೊಳ್ಳದೆ,ಯಾವುದೇ ಮತ್ತು ಯಾರದೇ ಮರ್ಜಿಗೇ ಬೀಳದೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ಆ ಮೂಲಕ ಯಾವ ಗುಂಪಿಗೂ ಸೇರದೆಯೆ ಸ್ವತಂತ್ರವಾಗಿ ಯೋಚಿಸುವ ಬಯಕೆ ನಮ್ಮದು.ಅಷ್ಟಕ್ಕೂ ‘ಸತ್ಯ’ ಅನ್ನುವುದು ಎಡ-ಬಲ ಪಂಥದ ಆಸ್ತಿಯೇನು ಅಲ್ಲವಲ್ಲ.ಅದು ಈ ಇಬ್ಬರ ನಡುವೆಯು ಸಿಲುಕದೆ ತನ್ನ ಪಾಡಿಗದು ಯಾವುದೋ ಮೂಲೆಯಲ್ಲಿ ನಿರ್ಲಿಪ್ತವಾಗಿರುತ್ತದೆ.ಅದನ್ನ ಹುಡುಕುವ ಮುಗ್ಧ ಆಸೆ ನಮ್ಮದು.ನೊಂದ ಜೀವಗಳಿಗೆ ದನಿಯಾಗುವ ಬಯಕೆ ನಮ್ಮದು” ಎನ್ನುವ “ನಿಲುವು” ಮತ್ತು “ಎಲ್ಲ ತತ್ವದ ಎಲ್ಲೆ ಮೀರಿ” ಎಂಬ ಅಡಿ ಬರಹದೊಂದಿಗೆ ನಾವೊಂದಿಷ್ಟು ಗೆಳೆಯರು ಸೇರಿಕೊಂಡು “ನಿಲುಮೆ” (nilume.net) ವೆಬ್ ತಾಣವನ್ನು ಪ್ರಾರಂಭಿಸಿ ನಾಲ್ಕು ವರ್ಷಗಳನ್ನು ಪೂರೈಸಿ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂದರ್ಭದಲ್ಲಿ “ನಿಲುಮೆ ಪ್ರಕಾಶನ”ವನ್ನು ಪ್ರಾರಂಭಿಸುತ್ತಿದ್ದೇವೆ.

ಈಗಾಗಲೇ ಕನ್ನಡದಲ್ಲಿ ಹಲವಾರು ಪ್ರಕಾಶನಗಳಿರುವಾಗ ಇನ್ನೊಂದು ಏಕೆ? ಅನ್ನೋ ಪ್ರಶ್ನೆ ಕೂಡ ಹುಟ್ಟಲಾರದ ಸಮಯವಿದು.ಹಾಗಾಗಿ ಈ ಮೇಲಿನ ಪ್ರಶ್ನೆ ಓದುಗರಲ್ಲಿ ಏಳುವ ಸಾಧ್ಯತೆಯೂ ಇಲ್ಲ.ಈ ಕಾರಣದಿಂದ ನಾವೇ ಈ ಪ್ರಶ್ನೆಯನ್ನು ಎತ್ತಿ ನಮ್ಮ ಉದ್ದೇಶದ ಕುರಿತು ತಮ್ಮ ಗಮನವನ್ನು ಸೆಳೆಯುವ ಪ್ರಯತ್ನ ಮಾಡುತ್ತೇವೆ.

ರಮಾನಂದ ಐನಕೈಯವರ ‘ಸಂಸ್ಕೃತಿ ಸಂಕಥನ” ಲೇಖನ ಸರಣಿಯ (ಈ ಲೇಖನಗಳು “ನಮಗೇ ನಾವೇ ಪರಕೀಯರು” ಪುಸ್ತಕವಾಗಿ ಹೊರಬಂದು ಇದೀಗ ಮೂರನೇ ಮುದ್ರಣವನ್ನು ಕಾಣುತ್ತಿದೆ) ಮೂಲಕ ಶುರುವಾದ ನಿಲುಮೆ ಮತ್ತು CSLC ತಂಡಗಳ ಬಾಂಧವ್ಯ ಇನ್ನಷ್ಟು ಆಪ್ತವಾಗಿದ್ದು ೨೦೧೩ರಲ್ಲಿ ಕರ್ನಾಟಕದ ಬೌದ್ಧಿಕ ವಲಯದಲ್ಲಿ ದೊಡ್ಡ ಸಂಚಲವನ್ನುಂಟು ಮಾಡಿದ್ದ “ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆ”ಯ ಚರ್ಚೆಯ ಸಂದರ್ಭದಲ್ಲಿ.ರಾಜ್ಯದ ಪ್ರಗತಿಪರ ಪತ್ರಿಕೆಯೊಂದರಲ್ಲಿ ಶುರುವಾದ ಈ ಚರ್ಚೆ ಏಕಮುಖವಾಗಿ ಸಾಗಿ ಒಂದು ಕಡೆಯವರ ಲೇಖನಗಳಿಗೆ ಮಾತ್ರ ಮನ್ನಣೆ ನೀಡಿ ಇನ್ನೊಂದು ಗುಂಪಿನ ವಾದವನ್ನೂ ಆಲಿಸುವ ನಿಲುವನ್ನು ತೋರಿಸದಿದ್ದಾಗ ಸಿ.ಎಸ್.ಎಲ್.ಸಿ ತಂಡದ ಜೊತೆ ನಿಂತು,ನಿಲುಮೆಯ ನಿಲುವಿಗೆ ಬದ್ಧವಾಗಿ ನಾವು ಬೌದ್ಧಿಕ ಫ್ಯಾಸಿಸಂ ಅನ್ನು ವಿರೋಧಿಸಿದೆವು.

ಈ ಚರ್ಚೆಯ ಸಮಯದಲ್ಲಿ ಮತ್ತು ಆ ನಂತರ ಕರ್ನಾಟಕದ ಬುದ್ಧಿಜೀವಿ ವಲಯ ನಡೆದುಕೊಂಡ ರೀತಿ ಆಘಾತಕಾರಿಯಾಗಿತ್ತು. ಅವರ ನಡೆ ಹೇಗಿತ್ತೆಂದರೆ,ತಮಗೇ ಬೇಕಾದ ವಾದಗಳಿಗೆ ಮಾತ್ರ ಮನ್ನಣೆ ನೀಡುತ್ತ,ಅಂತ ವಾದವನ್ನು ಮುಂದಿಡುವ ಜನರನ್ನು ಒಂದಾಗಿಸಿಕೊಂಡು ಉಳಿದವರನ್ನು ಬೌದ್ಧಿಕ ಅಸ್ಪೃಷ್ಯರನ್ನಾಗಿಸುವುದು.ಇಂತ ಬೌದ್ಧಿಕ ಫ್ಯಾಸಿಸಂನ ಉಸಿರುಗಟ್ಟಿಸುವ ಕಾಲದಲ್ಲಿ ಹೊಸತೊಂದು ಬೌದ್ಧಿಕ ಚಳುವಳಿ ಸಾಮಾನ್ಯ ಜನರನ್ನು ತಲುಪಬೇಕೆಂದರೆ ಅದಕ್ಕೊಂದು ಪ್ರಕಾಶನದ ಅಗತ್ಯವನ್ನು ನಾವು ಮನಗಂಡೆವು.ಹಾಗೇ ರೂಪು ತಳೆದಿದ್ದೇ ನಿಲುಮೆ ಪ್ರಕಾಶನ.

ನಿಲುಮೆ ಪ್ರಕಾಶನ

ನಮ್ಮ ಪ್ರಕಾಶನದ ಮೊದಲ ಪುಸ್ತಕ “ಬೌದ್ಧಿಕ ದಾಸ್ಯದಲ್ಲಿ ಭಾರತ”.ಈ ಪುಸ್ತಕ ಪ್ರೊ.ಬಾಲಗಂಗಾಧರ ಅವರ ಸಂಶೋಧನಾ ಗ್ರಂಥ “The Heathen in his Blindness” ನ ವಿಚಾರಧಾರೆಗಳನ್ನು ಆಧರಿಸಿ ಪ್ರೊ.ರಾಜಾರಾಮ್ ಹೆಗಡೆ ಅವರು ಬರೆದಿರುವ ಮತ್ತು ವಿಜಯವಾಣಿ ಪತ್ರಿಕೆಯಲ್ಲಿ ಕೆಲಕಾಲ “ವಸಾಹತುಶಾಹಿಯ ವಿಶ್ವಪ್ರಜ್ಞೆ” ಸರಣಿಯಾಗಿ ಪ್ರಕಟಗೊಂಡಿದ್ದ ಲೇಖನಗಳಗುಚ್ಛ.

ಪ್ರೊ.ಎಸ್ ಎನ್ ಬಾಲಗಂಗಾಧರ ಅವರ ನೇತೃತ್ವದಲ್ಲಿ 5 ವರ್ಷಗಳ ಹಿಂದೆ ಶಿವಮೊಗ್ಗದ ಕುವೆಂಪು ವಿವಿಯಲ್ಲಿ ಬೆಲ್ಜಿಯಂನ ಗೆಂಟ್ ವಿವಿಯ ಸಹಭಾಗಿತ್ವದೊಂದಿಗೆ ಶುರುವಾದ ಸ್ಥಳಿಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ(CSLC) ಭಾರತೀಯ ಸಮಾಜ, ಸ್ಥಳಿಯ ಸಂಸ್ಕೃತಿಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ.(ಕರ್ನಾಟಕದ ಕೆಲವು ಬುದ್ಧಿಜೀವಿಗಳ ಚಿತಾವಣೆಯಿಂದಾಗಿ ಈಗ ಆ ಸಂಶೋಧನಾ ಕೇಂದ್ರವನ್ನು ಮುಚ್ಚಿಸಲಾಗಿರುವುದು ನಿಮಗೇ ತಿಳಿದೇ ಇದೆ.)

ಕಳೆದ ಕೆಲವು ವರ್ಷಗಳಿಂದ ಪ್ರೊ.ಬಾಲಗಂಗಾಧರರಿಂದ ಕನ್ನಡದಲ್ಲಿ ಹೊಸ ಚಿಂತನೆಯ ಅಲೆ ಹುಟ್ಟಿಕೊಂಡಿದೆ.ಅವರು ಭಾರತೀಯ ಸಂಸ್ಕೃತಿಯ ಕುರಿತು ಹೊಸ ವಿಚಾರಗಳನ್ನು ತಿಳಿಸುತ್ತಿದ್ದಾರೆ.ಕನ್ನಡದ ಹಾಗೂ ಭಾರತೀಯ ಚಿಂತಕರು ಶತಮಾನಕ್ಕೂ ಹಿಂದಿನಿಂದ ಎದುರಿಸಿದ ಬೌದ್ಧಿಕ ಸಮಸ್ಯೆಗಳನ್ನು ತಮ್ಮ ಸಂಶೋಧನೆಗಳ ಮೂಲಕ ಉತ್ತರಿಸಲು ಬಾಲು ಪ್ರಯತ್ನಿಸುತ್ತಾರೆ.ಈ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಅವು ನಿರ್ದಿಷ್ಟವಾಗಿ ಏಕೆ ಹುಟ್ಟಿಕೊಳ್ಳುತ್ತವೆ,ಅವುಗಳಿಂದ ಹೊರಬರುವ ದಾರಿ ಯಾವುದು ಎಂಬುದನ್ನು ಕಂಡುಕೊಳ್ಳಲು ಅವರ ಸಂಶೋಧನೆ ಸಹಾಯಮಾಡುತ್ತದೆ. ಹಾಗಾಗಿ ಸ್ವಾಭಾವಿಕವಾಗಿಯೇ ಅವರ ಸಂಶೋಧನೆಗಳು ಸ್ವೀಕೃತ ವಿಚಾರಗಳನ್ನು ಅಲ್ಲಗಳೆಯುತ್ತವೆ ಹಾಗೂ ಪ್ರಶ್ನೆಗೀಡುಮಾಡುತ್ತವೆ.ಇಂದಿನ ಭಾರತೀಯ ಸಮಾಜದಲ್ಲಿ ಇಂಥ ಸ್ವೀಕೃತ ಚಿಂತನೆಗಳು ಬಗೆಹರಿಯದ ಸಮಸ್ಯೆಗಳನ್ನು ಸೃಷ್ಟಿಸಿವೆ.ಬಾಲಗಂಗಾಧರರ ವಿಚಾರಗಳು ತುಂಬ ಸಮರ್ಥವಾಗಿ ಅವುಗಳಿಂದ ಹೊರಬರುವ ದಾರಿಯನ್ನು ಸೂಚಿಸುತ್ತಿವೆ.ಜೊತೆಗೇ ನಮ್ಮ ಹಿಂದಿನ ಚಿಂತಕರ ಒಳನೋಟಗಳನ್ನು ಸ್ಪಷ್ಟವಾಗಿ ಗ್ರಹಿಸಿ ಅವುಗಳ ಮಹತ್ವವನ್ನು ಅರಿಯಲೂ ಅವು ಸಹಾಯ ಮಾಡುತ್ತವೆ.ಈ ಕಾರಣದಿಂದ ಕಳೆದ ಒಂದು ದಶಕದಿಂದ ರಾಷ್ಟ್ರ ಮತ್ತು ಅಂತರ್ರಾಷ್ಟ್ರೀಯ ಬೌದ್ಧಿಕ ವಲಯದಲ್ಲಿ ಅವರ ವಿಚಾರಗಳ ಕುರಿತು ತೀವ್ರ ಆಸಕ್ತಿ ಹಾಗೂ ಕುತೂಹಲ ಮೂಡಿದೆ.

ಬಾಲಗಂಗಾಧರ ಚಿಂತನೆಗಳು ಕೇವಲ ಶೈಕ್ಷಣಿಕ ಕಸರತ್ತುಗಳಲ್ಲ.ಅಥವಾ ಒಬ್ಬ ವ್ಯಕ್ತಿಯ ಖಾಸಗಿ ಸಂಗತಿಗಳಲ್ಲ.ಇದು ಭಾರತೀಯ ಸಂಸ್ಕೃತಿಯ ಪುನರುಜ್ಜೀವನದತ್ತ ನಡೆಯುತ್ತಿರುವ ಒಂದು ಬೌದ್ಧಿಕ ಚಳವಳಿಯಾಗಿದೆ.ಅವರು ಇದನ್ನು ಪ್ರತ್ಯಭಿಜ್ಞಾನ ಎಂದು ಗುರುತಿಸುತ್ತಾರೆ.ಅಂದರೆ ವಸಾಹತುಕಾಲದಲ್ಲಿ ನಾವೊಂದು ಸಾಂಸ್ಕೃತಿಕ ಮರೆವೆಗೆ ಒಳಗಾಗಿದ್ದೇವೆ.ಪ್ರತ್ಯಭಿಜ್ಞಾನ ಎಂದರೆ ಆ ಮರೆವೆಯಿಂದ ಹೊರಬಂದು ನಮ್ಮ ಸಂಸ್ಕೃತಿಯನ್ನು ಮತ್ತೆ ನೆನಪಿಗೆ ತಂದುಕೊಳ್ಳುವುದು.

ಇಂತಹ ಬೌದ್ಧಿಕ ಚಳವಳಿಯ ಮೂಲಕ ಒಂದು ಓದುಗರ ಬಳಗವನ್ನು ಕಟ್ಟುತ್ತಾ ಚಿಂತನ ಮಂಥನಗಳಿಗೆ ಕನ್ನಡದಲ್ಲಿ ಸರಾಗ ಮಾರ್ಗವನ್ನು ನಿರ್ಮಿಸುವುದೂ ನಿಲುಮೆ ಪ್ರಕಾಶನದ ಗುರಿ.ಪ್ರತ್ಯಭಿಜ್ಞಾನಕ್ಕಾಗಿ ತುಡಿಯುತ್ತಿರುವ ಕನ್ನಡ ಓದುಗರು ನಮ್ಮ ಈ ಪ್ರಯತ್ನವನ್ನು ಬೆಂಬಲಿಸಿ,ಪ್ರೋತ್ಸಾಹಿಸುತ್ತಾರೆ ಎಂಬ ಭರವಸೆಯೊಂದಿಗೆ ಮುಂದಡಿಯಿಡುತ್ತಿದ್ದೇವೆ.

ಈ ಬೌದ್ಧಿಕ ಚಳವಳಿಯ ಭಾಗವಾಗಿಸಿಕೊಂಡು ಇತರೆ ಉತ್ಸಾಹಿ ಚಿಂತಕರು ಬರೆಯಲು ಆರಂಭಿಸಿದ್ದಾರೆ.ಬಾಲು ಅವರ ಚಿಂತನೆಗಳನ್ನು ಅಧ್ಯಯನ ನಡೆಸಿ ಆ ಮೂಲಕ ತತ್ಕಾಲೀನ ಸಾಮಾಜಿಕ-ಸಾಂಸ್ಕೃತಿಕ ಸಂಗತಿಗಳನ್ನು ಅರ್ಥ ಮಾಡಿಕೊಳ್ಳಲು ಆರಂಭಿಸಿದ್ದಾರೆ.ಅವರ ಪುಸ್ತಕಗಳನ್ನೂ ಪ್ರಕಟಿಸುವ ಉದ್ದೇಶವಿದೆ.

ಇವೆಲ್ಲದರ ಜೊತೆಗೆ,”ಎಲ್ಲ ತತ್ವದ ಎಲ್ಲೆ ಮೀರಿ” ನಿಲ್ಲುವ ನಿಲುಮೆಯ ನಿಲುವಿಗೆ ಬದ್ಧವಾಗಿ ಎಲ್ಲಾ ಸಾಹಿತ್ಯ ಪ್ರಕಾರದ ಸೃಜನಶೀಲ ಕೃತಿಗಳನ್ನು ಪ್ರಕಟಿಸುವ ಮೂಲಕ ಮತ್ತು ಹೊಸ ಪ್ರತಿಭೆಗಳಿಗೆ ವೇದಿಕೆಯಾಗುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಳಿಲು ಸೇವೆ ಸಲ್ಲಿಸುವುದು ನಮ್ಮ ಯೋಜನೆಯಾಗಿದ್ದು ಆದ್ಯತೆಯ ಆಧಾರದಲ್ಲಿ ಕಾರ್ಯನಿರ್ವಹಿಸಲು ಯೋಚಿಸಲಾಗಿದೆ.

ನಿಮ್ಮ ಬೆಂಬಲ,ಹಾರೈಕೆ ನಮ್ಮ ಜೊತೆಗಿರಲಿ.

ನಿಮ್ಮೊಲುಮೆಯ,
ನಿಲುಮೆ ಬಳಗ

14 ಟಿಪ್ಪಣಿಗಳು Post a comment
  1. Umesh
    ಜನ 14 2015

    ನಿಮಗೆ ಶುಭವಾಗಲಿ. ಹುಸಿ ಜಾತ್ಯಾತೀತ ಹಾಗು ಸ್ವಯಂಗೋಷಿತ ಬುಧ್ಹಿಜೀವಿಗಳ ಕಪಿ ಮುಷ್ಟಿಯಲ್ಲಿ ಸಿಲುಕಿರುವ ಬೌಧ್ಹಿಕ ವಾತಾವರಣ ಉಸಿರು ಕಟ್ಟಿಸುವಂತಿದೆ. ತಮಗೆ ಸರಿಹೊಂದದ ವಿಚಾರಗಳನ್ನು ಸಹಿಸದ ಈ ಬುದ್ಧಿಜೀವಿಗಳು ಮಾಡುತ್ತಿರುವ ಅನಾಹುತಕ್ಕೆ ತಕ್ಕ ಉತ್ತರ ಈ ಪ್ರಕಾಶನದಿಂದ ಬರಲಿ. ಈ ನಾಡಿನ ಪ್ರಖರ ಚಿಂತಕ ಬಾಲು ಅವರ ವಿಚಾರಗಳು ಎಲ್ಲರಿಗೂ ತಲುಪಲಿ.

    ಉತ್ತರ
  2. ಪ್ರಿಯರೇ,

    ಇದು ಸಾಮೂಹಿಕ ಪ್ರಯತ್ನದ ಫಲಿತಾಂಶ.

    ಹಾಗಾಗಿ ನಿಲುಮೆಗೂ, ನಿಲುಮೆ ನಿರ್ವಾಹಕ ಬಳಗದ ಪ್ರತಿಯೊಬ್ಬ ಸದಸ್ಯರಿಗೂ, ನಿಲುಮೆಯ ಬರಹಗಾರರ ಬಳಗಕ್ಕೂ ಹಾಗೂ ನಿಲುಮೆಯ ಪ್ರತಿಯೊಬ್ಬ ಓದುಗರಿಗೂ ಹಾರ್ದಿಕ ಅಭಿನಂದನೆಗಳು.

    ತಮ್ಮ ಮುಂದಿನ ಯೋಜನೆಗಳಿಗೆ ಹಾರ್ದಿಕ ಶುಭಹಾರೈಕೆಗಳು.

    ನಿಲುಮೆ ಪ್ರಕಾಶನದ ಮೂಲಕ, ಮುಂದಿನ ದಿನಗಳಲ್ಲಿ, ಸೃಜನಶೀಲ, ಚಿಂತನಶೀಲ ಹಾಗೂ ಸಮಾಜಮುಖಿ ಕೃತಿಗಳು ಪ್ರಕಾಶಕ್ಕೆ ಬರಲಿ ಅನ್ನುವುದೇ ಈ ಮನದ ಹಾರೈಕೆ.

    ಆಸು ಹೆಗ್ಡೆ

    ಉತ್ತರ
  3. ಜನ 14 2015

    ಅಭಿನಂದನೆಗಳು. 🙂

    ಉತ್ತರ
  4. sandesha H Naik
    ಜನ 14 2015

    ಶುಭವಾಗಲಿ.. ವಿಭಿನ್ನ ಹಾದಿಯ ವಿನೂತನ ಹೆಜ್ಜೆಗಳ ಮೂಲಕ ಸಮಾಜದಲ್ಲಿನ ನಿರೀಕ್ಷೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವಂತಾಗಲಿ. ಅನಾವಶ್ಯಕ ವೈಚಾರಿಕ ತಿಕ್ಕಾಟಕ್ಕೆ ಮುಂದಾಗುವ ತಮ್ಮ ವಿಚಾರಗಳ ಮೂಲಕ ಅಪ್ರಸ್ತುತ ಅಂಶಗಳನ್ನೇ ವೈಭವೀಕರಿಸಿ ಸಮಾಜದ ದಿಕ್ಕು ತಪ್ಪಿಸುವವರ ಷಡ್ಯಂತ್ರಕ್ಕೆ ದಿಟ್ಟ ಎದುರುತ್ತರ ನೀಡುವಂತಾಗಲಿ… all the best

    ಉತ್ತರ
  5. Nagshetty Shetkar
    ಜನ 14 2015

    ಎಲ್ಲಾ ತತ್ವಗಳ ಎಲ್ಲೆ ಮೀರಿ ಅಂತ ಹೇಳುವವರು ಬಾಲಗಂಗಾಧರ ಅವರ ಚರ್ವಿತ ಚರ್ವಣಕ್ಕೆ ಆತು ಬಿದ್ದಿರುವುದು ಶೋಚನೀಯವಲ್ಲವೇ?

    ಉತ್ತರ
  6. bhaskarsn1982
    ಜನ 14 2015

    ನಿಜವಾಗಿಯೂ ಉತ್ತಮ ಬೆಳವಣಿಗೆ,ನಿಮ್ಮ ಪ್ರಯತ್ನಕ್ಕೆ ನಮ್ಮಿಂದ ಶುಭ ಹಾರೈಕೆಗಳು

    ಉತ್ತರ
  7. ವಿಜಯ್ ಪೈ
    ಜನ 15 2015

    ನಿಲುಮೆಯೊಂದಿಗೆ ನಾನೂ ಬೆಳೆದಿದ್ದೇನೆ..ಸಾಕಷ್ಟು ಒಳ್ಳೆಯ ಸ್ನೇಹಿತರು ಸಿಕ್ಕಿದ್ದಾರೆ ನಿಲುಮೆಯಿಂದಾಗಿ. ಮುಖ ಪರಿಚಯವಿಲ್ಲದಿದ್ದರೂ ಅಕ್ಕ-ಪಕ್ಕದಲ್ಲಿರುವವರಂತೆ ಸ್ನೇಹವಿದೆ. ನಿಲುಮೆ ಇನ್ನಷ್ಟು ಬೆಳೆಯಲಿ..ಇನ್ನಷ್ಟು ಸಾಧಿಸಲಿ. ಸಮಾಜಕ್ಕೆ ಸಕಾರಾತ್ಮಕ ಕಾಣಿಕೆ ಕೊಡಲಿ. ಮಕರ ಸಂಕ್ರಾಂತಿಯ ಶುಭಾಶಯಗಳು ಎಲ್ಲರಿಗೂ..:).

    ಉತ್ತರ
  8. hemapathy
    ಜನ 16 2015

    ಸದುದ್ದೇಶಪೂರಿತ ಪ್ರಯತ್ನಕ್ಕೆ ಯಶಸ್ಸು ದೊರೆಯಲೆಂದು ಆಶಿಸುತ್ತೇನೆ.

    ಉತ್ತರ
  9. ಜನ 21 2015

    I came to know about *nilume* two days back. Thanks to Aa ‘mean’mattu
    Any how I came in contact with such a great group.

    ಉತ್ತರ
  10. Nagshetty Shetkar
    ಜನ 22 2015

    ?ಬಾಲಗಂಗಾಧರ ಚಿಂತನೆಗಳು ಕೇವಲ ಶೈಕ್ಷಣಿಕ ಕಸರತ್ತುಗಳಲ್ಲ.ಅಥವಾ ಒಬ್ಬ ವ್ಯಕ್ತಿಯ ಖಾಸಗಿ ಸಂಗತಿಗಳಲ್ಲ.ಇದು ಭಾರತೀಯ ಸಂಸ್ಕೃತಿಯ ಪುನರುಜ್ಜೀವನದತ್ತ ನಡೆಯುತ್ತಿರುವ ಒಂದು ಬೌದ್ಧಿಕ ಚಳವಳಿಯಾಗಿದೆ.ಅವರು ಇದನ್ನು ಪ್ರತ್ಯಭಿಜ್ಞಾನ ಎಂದು ಗುರುತಿಸುತ್ತಾರೆ.ಅಂದರೆ ವಸಾಹತುಕಾಲದಲ್ಲಿ ನಾವೊಂದು ಸಾಂಸ್ಕೃತಿಕ ಮರೆವೆಗೆ ಒಳಗಾಗಿದ್ದೇವೆ.ಪ್ರತ್ಯಭಿಜ್ಞಾನ ಎಂದರೆ ಆ ಮರೆವೆಯಿಂದ ಹೊರಬಂದು ನಮ್ಮ ಸಂಸ್ಕೃತಿಯನ್ನು ಮತ್ತೆ ನೆನಪಿಗೆ ತಂದುಕೊಳ್ಳುವುದು.”

    revivalist.

    ಉತ್ತರ
  11. ಜನ 31 2017

    ಸರ್ ನಾನು ಯೋದ ರ ಬಗ್ಗೆ ಒಂದ ಪುಸ್ತಕ ಬರೆಬೇಕು ಅನ್ಕೋಡಿದೀನಿ ದಯವಿಟು ಮಾಹಿತೀ ಕೊಡಿ ಸರ್

    ಉತ್ತರ

Trackbacks & Pingbacks

  1. 6ನೇ ವರ್ಷದ ಹೊಸ್ತಿಲಲ್ಲಿ ನಿಲುಮೆ… | ನಿಲುಮೆ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments