ವಿಷಯದ ವಿವರಗಳಿಗೆ ದಾಟಿರಿ

Archive for

19
ಜೂನ್

ನಕಲಿ ಜಾತಿ ಪ್ರಮಾಣ ಪತ್ರ ತೋರಿಸಿ 5 ಮೊಟ್ಟೆ ತಿಂದ ವಿದ್ಯಾರ್ಥಿ (ಸುಳ್ಸುದ್ದಿ)

ಪ್ರವೀಣ್ ಕುಮಾರ್ ಮಾವಿನಕಾಡು

  1. ನಕಲಿ ಜಾತಿ ಪ್ರಮಾಣ ಪತ್ರ ತೋರಿಸಿ ವಿದ್ಯಾರ್ಥಿಯೊಬ್ಬ ತನ್ನ ಜಾತಿಗೆ ಸೇರದ ಹೆಚ್ಚುವರಿ ಮೂರು ಮೊಟ್ಟೆಗಳನ್ನು ತಿಂದ ಘಟನೆ ಮೊಟ್ಟೇಚಿಪ್ಪನಹಳ್ಳಿ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ಅಪರಾಧಿ ವಿದ್ಯಾರ್ಥಿಯನ್ನು ಬಂಧಿಸಲಾಗಿದ್ದು ಅಪ್ರಾಪ್ತನಾಗಿರುವ ಕಾರಣ ಆತನನ್ನು ರಿಮ್ಯಾಂಡ್ ಹೋಮ್ ನಲ್ಲಿರಿಸಲಾಗಿದೆ.
 
ಘಟನೆಯ ವಿವರ: ಅಂದು ಬುಧವಾರ ಮೊಟ್ಟೇಚಿಪ್ಪನಹಳ್ಳಿ ಸರ್ಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯರು ಎಂದಿನಂತೆಯೇ ಮಕ್ಕಳಿಗೆ ಮೊಟ್ಟೆಯನ್ನು ನೀಡುತ್ತಿದ್ದರು.ಎರಡು ಮೊಟ್ಟೆ ವಿದ್ಯಾರ್ಥಿಗಳ ಕೋಟಾ ಹಿಂದಿನ ದಿನವೇ ಮುಗಿದಿದ್ದರಿಂದಾಗಿ ಆ ಮಕ್ಕಳನ್ನು ಹೊರಗೆ ಕೂರಿಸಿ ಐದು ಮೊಟ್ಟೆಯ ಮಕ್ಕಳನ್ನು ಮಾತ್ರ ಶಾಲಾ ಕೊಠಡಿಯೊಳಗೆ ಕೂರಿಸಿ ಮೊಟ್ಟೆಯನ್ನು ಹಂಚುತ್ತಿದ್ದರು.ಅದೇ ಸಂದರ್ಭದಲ್ಲಿ ಬಂದ ಆರೋಪಿ ವಿದ್ಯಾರ್ಥಿಯು ಮೊಟ್ಟೆ ನೀಡುವಂತೆ ಶಿಕ್ಷಕರೆಡೆಗೆ ಕೈ ಚಾಚಿದ್ದಾನೆ.ಅನುಮಾನಗೊಂಡ ಶಿಕ್ಷಕರು ಆತನನ್ನು ಪ್ರಶ್ನೆ ಮಾಡಿದಾಗ ನಕಲಿ ಜಾತಿ ಪ್ರಮಾಣಪತ್ರವೊಂದನ್ನು ತೋರಿಸಿದ್ದಾನೆ.ಇದನ್ನು ನಂಬಿದ ಮುಖ್ಯೋಪಾಧ್ಯಾಯರು ಆ ಬಾಲಕನಿಗೆ ಐದು ಮೊಟ್ಟೆಗಳನ್ನು ನೀಡಿದ್ದಾರೆ.
 
ಆದರೆ ವಾರಾಂತ್ಯದಲ್ಲಿ ಮೊಟ್ಟೆಗಳ ಅಂತಿಮ ಲೆಕ್ಕಪತ್ರಗಳನ್ನು ಪರಿಶೀಲಿಸಿದಾಗ ಮೂರು ಮೊಟ್ಟೆ ಕಡಿಮೆಯಾಗಿರುವುದು ಕಂಡುಬಂದಿದೆ.ನಂತರ ಎಲ್ಲಾ ಮಕ್ಕಳಿಗೂ ಮತ್ತೊಮ್ಮೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸುವಂತೆ ತಿಳಿಸಿದ್ದಾರೆ.ಹಾಗೆ ಎಲ್ಲಾ ಮಕ್ಕಳೂ ಮತ್ತೊಮ್ಮೆ ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಿದಾಗ ಆರೋಪಿ ಬಾಲಕ ನಕಲಿ ಜಾತಿ ಪ್ರಮಾಣಪತ್ರ ತೋರಿಸಿ ಮೂರು ಮೊಟ್ಟೆ ಹೆಚ್ಚುವರಿಯಾಗಿ ತಿಂದಿದ್ದು ಸಾಬೀತಾಗಿದೆ.ಮುಖ್ಯ ಶಿಕ್ಷಕರು ಕೂಡಲೇ ಆ ವಿದ್ಯಾರ್ಥಿಯ ವಿರುದ್ಧ ದೂರು ದಾಖಲಿಸಿದ್ದು ಪೊಲೀಸರು ಆ ಮೋಸಗಾರ ವಿದ್ಯಾರ್ಥಿಯನ್ನು ಬಂಧಿಸಿ ರಿಮ್ಯಾಂಡ್ ಹೋಮ್ ಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಘಟನೆಯ ಸಂಪೂರ್ಣ ಮಾಹಿತಿ ಕಲೆಹಾಕಿದ್ದು ಎಲ್ಲಾ ವಿವರಗಳನ್ನೂ ಇಲಾಖೆಯ ಆಯುಕ್ತರಿಗೆ ಕಳುಹಿಸುವುದಾಗಿ ತಿಳಿಸಿದ್ದಾರೆ.ಅಲ್ಲದೇ ಕೇವಲ ಚಿಕ್ಕ ಹುಡುಗನೊಬ್ಬ ತೋರಿಸಿದ ನಕಲಿ ಜಾತಿಪತ್ರವನ್ನು ಗುರುತಿಸಲಾಗದೇ ಶಿಕ್ಷಣ ಇಲಾಖೆಗೆ ಮೂರು ಮೊಟ್ಟೆಗಳ ನಷ್ಟ ಉಂಟುಮಾಡಿದ ಕಾರಣ ನೀಡಿ ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಿರುವುದಾಗಿಯೂ ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಮಾನ್ಯ ಶಿಕ್ಷಣ ಸಚಿವರನ್ನು ಪ್ರಶ್ನಿಸಿದಾಗ ‘ವಿಷಯವನ್ನು ಈಗಾಗಲೇ ನಾನು ವಾಟ್ಸಾಪ್ ಮೂಲಕ ತಿಳಿದುಕೊಂಡಿದ್ದೇನೆ.ಇಂತಹಾ ದುರ್ಬಳಕೆಯನ್ನು ತಡೆಯಲು ಮುಂದಿನ ದಿನಗಳಲ್ಲಿ ಪ್ರತೀ ಜಿಲ್ಲೆಯಲ್ಲೂ ಒಂದೊಂದು ವಿಶೇಷ ತನಿಖಾ ದಳವನ್ನು ಸ್ಥಾಪಿಸಲಾಗುವುದು.ಒಂದು ಜಾತಿಗೆ ಮೀಸಲಿಟ್ಟ ಮೊಟ್ಟೆಯನ್ನು ಇನ್ನೊಂದು ಜಾತಿಯ ಮಕ್ಕಳು ತಿನ್ನುವುದನ್ನು ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಸಹಿಸುವುದಿಲ್ಲ’ಎಂದು ಹೇಳಿದರು.
ವಿಷಯ ಕಾಡ್ಗಿಚ್ಚಿನಂತೆ ಎಲ್ಲಾ ಕಡೆ ವೇಗವಾಗಿ ಹರಡುತ್ತಿದ್ದು ರೊಚ್ಚಿಗೆದ್ದ ನೂರಾರು ಗ್ರಾಮಸ್ಥರು ಪ್ರಗತಿಪರ ಸಂಘಟನೆಗಳ ಜೊತೆ ಸೇರಿ ಟೈರಿಗೆ ಬೆಂಕಿ ಹಚ್ಚಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ.ಆ ಬಾಲಕನನ್ನು ನಮ್ಮ ಕೈಗೊಪ್ಪಿಸಿ ಎಂದು ಪಟ್ಟು ಹಿಡಿದಿದ್ದಾರೆ.ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು ಸ್ಥಳದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
 
ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಬಾಲಕನ ತಂದೆ ‘ತನ್ನ ಓರಗೆಯವರೆಲ್ಲಾ ಐದು ಮೊಟ್ಟೆ ತಿಂದು ಎಂಜಾಯ್ ಮಾಡುತ್ತಿರುವಾಗ ವಯೋ ಸಹಜ ಆಸೆ ಆಕಾಂಕ್ಷೆಗಳನ್ನು ತಡೆದುಕೊಳ್ಳಲಾಗದೇ ಆತ ಹಾಗೆ ಮಾಡಿರಬಹುದು.ಆದರೆ ಅದಕ್ಕಾಗಿ ಆತ ಬಳಸಿದ ಮಾರ್ಗ ಮಾತ್ರ ನಾಗರೀಕ ಸಮಾಜ ಒಪ್ಪಲು ಸಾಧ್ಯವಿಲ್ಲ.ಇದೊಂದು ಸಾರಿ ನನ್ನ ಮಗನನ್ನು ಕ್ಷಮಿಸಿಬಿಡಿ.ಮುಂದೆ ಹಾಗಾಗದಂತೆ ನೋಡಿಕೊಳ್ಳುತ್ತೇವೆ.ಜೊತೆಗೆ ಸಂವಿಧಾನಬದ್ಧ ಜಾತಿ ವ್ಯವಸ್ಥೆಯ ಬಗ್ಗೆಯೂ ಅವನಿಗೆ ತಿಳಿಹೇಳುತ್ತೇವೆ’ ಎಂದು ಹೇಳಿದರು.
 
ಈ ನಡುವೆ ಪ್ರಕರಣಕ್ಕೆ ಇನ್ನೊಂದು ರೋಚಕ ಟ್ವಿಸ್ಟ್ ಸಿಕ್ಕಿದ್ದು ಬಲಗೈ ಗೆ ಐದು ಮೊಟ್ಟೆ ಕೊಡುವುದಾದರೆ ಎಡಗೈಗೆ ಏಳು ಮೊಟ್ಟೆ ಕೊಡಿ ಎಂದು ‘ಮೊಟ್ಟೆಗಾಗಿ ನಾವು’ ಸಂಘಟನೆ ಒತ್ತಾಯಿಸಿದೆ.ಒಂದು ವೇಳೆ ಎಡಗೈ ಗೆ ಏಳು ಮೊಟ್ಟೆ ಕೊಡುವ ಬಗ್ಗೆ ಇನ್ನೊಂದು ತಿಂಗಳ ಒಳಗಾಗಿ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದಾಗಿ ಅದು ಎಚ್ಚರಿಸಿದೆ.
 
ವಿ.ಸೂ: ಇದೊಂದು ಕಾಲ್ಪನಿಕ ಬರಹವಾಗಿದ್ದು ಮಕ್ಕಳಿಗೆ ಜಾತಿಯಾಧಾರಿತ ಮೊಟ್ಟೆ ವಿತರಣೆ ಯೋಜನೆಯ ಬಗ್ಗೆ ವಿಧಾನಸಭೆಯಲ್ಲೇ ಚರ್ಚೆಯಾಗಿದ್ದು ಹಾಗೊಂದು ವೇಳೆ ಮುಂದೆ ಅಂತಹಾ ಯೋಜನೆಗಳು ಅನುಷ್ಠಾನಗೊಂಡರೆ ಏನೆಲ್ಲಾ ಅನಾಹುತಗಳು ಸಂಭವಿಸಬಹುದು ಎನ್ನುವುದನ್ನು ಕಲ್ಪಿಸಿಕೊಂಡು ಬರೆದಿದ್ದಾಗಿರುತ್ತದೆ.