ವಿಷಯದ ವಿವರಗಳಿಗೆ ದಾಟಿರಿ

ಜುಲೈ 21, 2017

ನಮ್ಮೂರ ಹಬ್ಬ:- ಕಂಬಳ

‍ನಿಲುಮೆ ಮೂಲಕ

ಶ್ರೀಮತಿ. ಶೈನಾ ಶ್ರೀನಿವಾಸ ಶೆಟ್ಟಿ.
ಕುಂದಾಪುರ

ದೂರ ತೀರದ ಕಡಲ ಕಿನಾರೆಯಲ್ಲಿ ಭೋರ್ಗರೆವ ಅಲೆಗಳ ಅಬ್ಬರದಲ್ಲಿ, ತಣ್ಣನೆ ಬೀಸುವ ತಂಗಾಳಿಯಲಿ, ಸುಡುಬಿಸಿಲ ನಡುನಡುವೆ ತಂಪೆರೆವ ಸೋನೆ ಮಳೆ, ಉದ್ದನೆಯ ರಸ್ತೆಯ ಇಕ್ಕೆಲೆಗಳಲಿ ಕಂಗೊಳಿಸುವ ಹಸಿರ ಸಿರಿ, ಹಸಿರು ಸೀರೆ ಉಟ್ಟ ನಾರಿಯಂತೆ ತಳುಕು ಬಳುಕಿನ ವ್ಯಯ್ಯಾರದಲಿ ತನು ಮನಕ್ಕೆ ತಂಪೆರೆವ ನನ್ನೂರು… ಆಹಾ ಹೌದು! ಅದುವೇ ನನ್ನೂರು ಕರಾವಳಿ ಕುಂದಾಪುರ.

ಕಂಬಳವೆಂಬ ನನ್ನೂರ ಹಬ್ಬ :
ನನ್ನೂರು ಹಬ್ಬಗಳ ನಾಡು, ಸಂಪ್ರದಾಯದ ಬೀಡು. ತನ್ನದೇ ಸೊಗಡು ತನ್ನದೇ ಆಚರಣೆಯ ಚೌಕ್ಕಟ್ಟಿನಲ್ಲಿ ನೂರಾರು ಹಬ್ಬ, ಸಾವಿರಾರು ವೈವಿಧ್ಯತೆ, ಲಕ್ಷಾಂತರ ಮನದಲ್ಲಿ ನೆಲೆ ನಿಲ್ಲುವ, ಕೋಟ್ಯಾಂತರ ವರ್ಷದ ಇತಿಹಾಸದ ಈ ಕರಾವಳಿಯನ್ನು “ಪರಶುರಾಮ ಸೃಷ್ಠಿ”ಯೆಂದು ಉಲ್ಲೇಖಿಸಲಾಗಿದೆ.

ಶುದ್ಧ ಚಾರಿತ್ರ್ಯ, ಸತ್ಯ ಸಂಧತೆ, ಪ್ರಾಮಾಣೆಕತೆ, ನಿಸ್ವಾರ್ಥ ಸೇವಾ ಮನೋಭಾವ ಮೊದಲಾದ ಮಾನುಷ ಮೌಲ್ಯಗಳು ಸದಾ ಜೀವಂತವಾಗಿರುವ ಈ ಕರಾವಳಿಯಿಂದ ನಾನು “ಕಂಬಳ” ವೆಂಬ ನಮ್ಮೂರ ಹಬ್ಬವನ್ನು ಪ್ರಬಂಧ ಬರೆಯಲು ಆಯ್ಕೆ ಮಾಡಿಕೊಂಡಿದ್ದೇನೆ.

ದೂರದಲ್ಲಿ ಕಾಣುವ ಆ ಹೆಬ್ಬಾಗಿಲ ಮನೆ, ಹೆಬ್ಬಾಗಿಲ ಮನೆಯ ಕಂಬಗಳಿಗೂ ಗೊತ್ತು ಪಟೇಲರ ಮನೆಯ ಗತ್ತು ಗಮ್ಮತ್ತು, ಮನೆ ತುಂಬ ಗೀಜಿಗುಟ್ಟುವ ಜನಜಂಗುಳಿ, ಮಕ್ಕಳು ಮೊಮ್ಮಕ್ಕಳು, ಮರಿಮಕ್ಕಳ ಪ್ರೀತಿ ಓಕುಳಿ, ಮನೆಯ ಎದುರೊಂದು ದೊಡ್ಡದಾದ ಗದ್ದೆ. ಆ ಗದ್ದೆ ಎಷ್ಟು ದೊಡ್ಡದೆಂದರೆ ಐದಾರು ಎಕರೆಗಳಷ್ಟು. ಈ ಗದ್ದೆಯನ್ನು ಊರಿನವರೆಲ್ಲರೂ ಸೇರಿ ಕರೆಯುವರು “ಕಂಬಳ ಗದ್ದೆಯೆಂದು”. ಕಂಬಳ ಗದ್ದೆಯಲ್ಲಿ ನಡೆಯುವ ಹಬ್ಬಕ್ಕೆ ಸೇರುವ ಜನರ ಸಂತೆಯನ್ನು ಕಣ್ತುಂಬಿಕೊಳ್ಳುವುದು ರೋಚಕದ ಕ್ಷಣ. ಹೌದು ನಾ ಹೇಳ ಹೊರಟದ್ದು ನಮ್ಮೂರ ಹಬ್ಬ “ಕಂಬಳ”ದ ಬಗ್ಗೆ. ಕಂಬಳವು ಕೇವಲ ಒಂದು ಜಾನಪದ ಕ್ರೀಡೆಯಲ್ಲ, ಊರು ಊರುಗಳನ್ನ, ಮನಸು ಮನಸುಗಳನ್ನು ಬೆಸೆಯುವ, ಆಟಕ್ಕೂ ಮೀರಿದ ಜೀವನ ಮೌಲ್ಯಗಳನ್ನು ಕಲಿಸುವ ಆತ್ಮಾವಲೋಕನದ ಕಚಗುಳಿ. ಕರಾವಳಿಯಲ್ಲಿ ಕಂಬಳಕ್ಕೆ ಅತೀ ಎತ್ತರದ ಸ್ಥಾನವಿದೆ. ಕಂಬಳ ಒಂದು ಜಾನಪದ ಹಬ್ಬ. ಕನ್ನಡ ಕರಾವಳಿಯಲ್ಲಿ ಮಾತ್ರ ಕಾಣ ಸಿಗುವ ಕಂಬಳ ಗ್ರಾಮೀಣ ರೈತರ ಒಂದು ಪ್ರಧಾನ ಮನರಂಜನೆಯ ಹಬ್ಬ. ಕಂಬಳವನ್ನು ನಡೆಸುವ ಮನೆಯವರು ಕಂಬಳಕ್ಕಾಗಿಯೇ ಕೋಣವನ್ನು ಸಾಕುತ್ತಾರೆ. ಮನೆಯ ಮಗನೆಂಬಂತೆ ಕೋಣಗಳನ್ನು ಬೆಳೆಸುವ ರೀತಿ ಮೈ ಜುಮ್ಮೆನಿಸುತ್ತದೆ. ಮನೆಯಲ್ಲಿ ಎ.ಸಿ. ಇಲ್ಲದಿದ್ದರೂ ಕೋಣಗಳನ್ನು ಕಟ್ಟುವ ಹಟ್ಟಿಯು ಎ.ಸಿ., ಫ್ಯಾನ್‍ಗಳಿಂದ ಕಂಗೊಳಿಸುತ್ತದೆ. ಕಂಬಳಕ್ಕೆ ದಿನವಿಟ್ಟ ನಂತರ ಹಳ್ಳಿಗರ ಸಂತಸಕ್ಕೆ ಪಾರವೇ ಇಲ್ಲ, ಯಾರ ಕೋಣ ಈ ಸಾರಿ ಗೆಲ್ಲಬಹುದು ? ಕೋಣ ಓಡಿಸುವುದರಲ್ಲಿ ಯಾರು ಬಲಾಢ್ಯರು ? ಹಲಗೆಯಲ್ಲಿ ಯಾವುದು? ಹಗ್ಗದಲ್ಲಿ ಯಾವುದು? ಯಾರಿಗೆಲ್ಲ ಆಮಂತ್ರಣ ತಲುಪಿಸಬೇಕು? ಇತ್ಯಾದಿ ಇತ್ಯಾದಿ ಪ್ರಶ್ನೆಗಳ ತರ್ಕ ನಡೆಯುತ್ತಿರುತ್ತದೆ. ನಾವು ಕಂಡ ಹೆಚ್ಚಿನ ಎಲ್ಲಾ ಕಂಬಳಗದ್ದೆಯಲ್ಲಿಯೂ ನಾಗದೇವರ ಮೂರ್ತಿ ಇದ್ದು ಪ್ರತಿದಿನ ಪೂಜೆ ಆಗಬೇಕು. ಕಂಬಳದ ಗದ್ದೆಯ ಕಂಟದಲ್ಲೋ ಅಥವಾ ಅಲ್ಲೆ ಬದಿಯಲ್ಲೊ ನಾಗದೇವರ ಮೂರ್ತಿ ಇರುತ್ತದೆ. ಹೀಗೆ ದೇವರ ಆರಾಧನೆಯ ಮೂಲಕ ನಡೆಯುವ ಈ ಕಂಬಳವು ಜನರಲ್ಲಿ ದೈವೀಕಲ್ಪನೆ, ದೈವತಾ ಮನೋಭಾವವನ್ನು ಸೃಷ್ಠಿಸಿರುವುದರಲ್ಲಿ ಎರಡು ಮಾತಿಲ್ಲ.

ಕಂಬಳದಲ್ಲಿ ನಡೆಯುವ ಆಚರಣೆಗಳು :
ದಕ್ಷಿಣಕನ್ನಡ ಜಿಲ್ಲೆಯಲ್ಲಿಯೇ ಕಂಬಳಕ್ಕೆ ತನ್ನದೆ ಆದ ಸ್ಥಾನ ಮಾನವಿದೆ. ಕಂಬಳವು ನಿಯಮಬದ್ಧವಾಗಿ, ಅತ್ಯಂತ ವೈಭೋಗದಿಂದ ನಡೆಯುವ, ಜಾನುವಾರು ಮತ್ತು ಜನರಿಂದ ತುಂಬಿ ತುಳುಕುವ ಕರಾವಳಿ ಕನ್ನಡಿಗರ ಹಬ್ಬವೆಂದರೆ ಅತಿಶಯೋಕ್ತಿಯ ಮಾತಲ್ಲ. ಈ ಕಂಬಳ ಗದ್ದೆಯ ಇನ್ನೊಂದು ವಿಶೇಷವೇನೆಂದರೆ, ಹರಕೆ ಸಲ್ಲಿಸುವವರು ಕಂಬಳದ ದಿನ ರಾಶಿ ರಾಶಿ ಸಂಖ್ಯೆಯಲ್ಲಿ ಬರುತ್ತಾರೆ. ಜಾನುವಾರುಗಳಿಗೆ ಯಾವುದಾದರು ಕಾಯಿಲೆ, ಅಸೌಖ್ಯ ಬಂದರೂ ಕಂಬಳದ ಗದ್ದೆಗೆ ಇಳಿಸುತ್ತೇನೆಂದು ಹರಕೆ ಹೊತ್ತರೆ ಅದು ತಕ್ಷಣ ಗುಣಮುಖವಾಗುತ್ತದೆ ಮತ್ತು ಮನುಷ್ಯನ ಮೈಮೇಲೆ ಆಗುವ ಚಮಕಲು, ಬಿಳಿಕಲೆ ಮುಂತಾದ ಅನೇಕ ಕಾಯಿಲೆಗಳೂ ವಾಸಿಯಾಗಲು ಇಲ್ಲಿಗೆ ಹರಕೆ ಹೊರುತ್ತಾರೆ. ಕಂಬಳದ ದಿನ ಬಂದು ಗದ್ದೆಯ ಕಂಟ(ಅಂಚು) ದ ಸುತ್ತಲೂ ಬೆಳ್ತಕ್ಕಿ ಹಾಕಲಾಗುವುದು. ಇದಕ್ಕೆ “ಸುತ್ತಕ್ಕಿ ತಳುವುದು” ಎಂಬ ಹೆಸರು. ಕಂಬಳಗದ್ದೆ ಇಳಿದು ಹೋಗುವುದೂ ಸಹ ಒಂದು ಹರಕೆ. ಇದು ಕಂಬಳದ ದೇವರ ವಿಶೇಷವಾಗಿರುತ್ತದೆ. ಕಂಬಳ ಗದ್ದೆಯ ಕಂಟ (ಅಂಚು) ಸೇರಿ 40-50 ಮುಡಿ ಇರುತ್ತದೆ. ಗದ್ದೆಯ ಮಧ್ಯೆ ಕೂರ್ಚಿ ಕಂಬ ಇದೆ. ಇದರ ಕೆಳಗೆ ಬಾವಿ ಇದೆಯೆನ್ನುತ್ತಾರೆ. ಕಂಟದ ಪಡುಬದಿ ಮತ್ತು ಮೂಡು ಬದಿಯಲ್ಲಿ (ಪಶ್ಚಿಮ ದಿಕ್ಕು ಮತ್ತು ಪೂರ್ವ ದಿಕ್ಕು) ಎರಡು ಚಿಕ್ಕ ಚಕ್ಕ ಕಂಬಗಳಿದ್ದು ಅದಕ್ಕೆ ‘ದೀಪಾವಳಿ ಕಂಬ’ ಎನ್ನುತ್ತಾರೆ. ದೀಪಾವಳಿ ಹಬ್ಬದ ದಿನ ಆ ಕಂಬದ ಬುಡದಲ್ಲಿ ಅರಿಶಿಣದಿಂದ ಮತ್ತು ಉದ್ದಿನಿಂದ ಹಿಟ್ಟನ್ನು ಮಾಡಿ ಬೇಯಿಸಿ ನೈವೇದ್ಯ ಇಡುತ್ತಾರೆ. ಎಂತಹ ದೈವೀಕಲ್ಪನೆ ಮತ್ತು ದೇವರನ್ನು ಆಹ್ವಾನಿಸುವ ರೀತಿ ನಿಜಕ್ಕೂ ರೋಚಕವಾಗಿದೆ. ಚಿಕ್ಕ ವಯಸ್ಸಿನಲ್ಲಿ ಈ ದೈವ, ಭೂತಗಳ ಆರಾಧನೆಯನ್ನು ಕಣ್ಣಾರೆ ಕಂಡ ನನಗೆ, ನನ್ನ ಊರ ಹಬ್ಬ, ಅಲ್ಲಿನ ಆಚರಣೆ, ದೈವ ಭಕ್ತಿ, ಧರ್ಮ, ಶಾಸ್ತ್ರಗಳ ಬಗ್ಗೆ, ಭಕ್ತಿಯ ಜೊತೆ ಜೊತೆಯಲ್ಲಿ ಭಯವೇ ಜಾಸ್ತಿ. ನಮ್ಮ ತಂದೆಯವರು ಯಾವಾಗಲೂ ಒಂದು ಮಾತನ್ನು ಹೇಳುತ್ತಾರೆ ‘ದೇವರ ಕಾಲ ಬುಡದಲ್ಲಿ ಹೂವಾಗುವ ಸುಖವ ಪಡೆಯಲು ಏಳೇಳು ಜನ್ಮದ ಪುಣ್ಯ ಬೇಕೆಂದು’. ನಿಜವಾದ ಮಾತು.

ಕಂಬಳ ನಿಶ್ಚಯವನ್ನು ಊರ ಪ್ರಮುಖರ ಅಂದರೆ ನಾಲ್ಕೂ ಕಡೆಯ (ಪಡುಬೆಟ್ಟು, ಮೂಡುಬೆಟ್ಟು, ಬಡಾಯಬೆಟ್ಟು, ತೆಂಕುಬೆಟ್ಟು) ಜನರು ಸೇರಿ ಕಂಬಳ ಗದ್ದೆಯ ಮೇಲ್ಬಾಗದಲ್ಲಿರುವ ‘ಅಂಬಾಗಲು’ ಎಂಬ ಸ್ಥಳದಲ್ಲಿ ಮನೆಯ ಯಜಮಾನರಾದ ಹೆಗ್ಗಡೆಯವರು ಮನೆಯ ಒಳಗಿನಿಂದ ದೀಪವನ್ನು ತಂದ ನಂತರ ಅದರ ಎದುರು ಕುಳಿತು ಮಾಡುತ್ತಾರೆ. ಈ ಕಂಬಳ ಗದ್ದೆಯ ಮೇಲ್ಭಾಗದಲ್ಲಿ ಗದ್ದೆಗಳಿದ್ದು ಒಂದಕ್ಕೆ ‘ಕೋಳಿ ಅಂಕ ಗದ್ದೆಯಂತಲೂ ಇನ್ನೊಂದಕ್ಕೆ ‘ಹಸ್ರ ಮೇಲ್ಗದ್ದೆ ಎಂದೂ, ಮತ್ತೊಂದಕ್ಕೆ ‘ಹಣಬಿನ ಗದ್ದೆ’ ಎಂದೂ ಕರೆಯುತ್ತಾರೆ. ಒಂದರಲ್ಲಿ ಕಂಬಳದ ದಿನ ಕೇವಲ ತಿಂಡಿ ಸಾಬೂನುಗಳನ್ನು ಮಾರುತ್ತಾರೆ. ಕೋಳಿ ಅಂಕದ ಗದ್ದೆಯಲ್ಲಿ ಕಂಬಳದ ಮರುದಿನ ಕೋಳಿಪಡೆ ಮಾಡುತ್ತಾರೆ. ಈ ಕಂಬಳ ಗದ್ದೆಯಲ್ಲಿ ಕಂಬಳ ನಡೆಯುವ ಎರಡು ದಿನದ ಮೊದಲೇ ನೆರೆಯ ಊರಿನವರ ಎಲ್ಲಾ ಕೋಣಗಳನ್ನು ಸೇರಿಸಿ ಗದ್ದೆಯಲ್ಲಿ ಹೂಡುತ್ತಾರೆ. ಇದಕ್ಕೆ ‘ಉಕ್ಕಿ’ ಎಂದು ಹೆಸರು. ಮಧ್ಯೆ ಒಂದು ದಿನದ ನಂತರ ಕಂಬಳ.

ಇಲ್ಲಿ ಕಂಬಳಕ್ಕಾಗಿಯೇ ಹೋರಿ ಇದ್ದು (ಅಂದರೆ ಕಂಬಳಕ್ಕಾಗಿ ಮಾತ್ರ ಉಪಯೋಗಿಸುವುದು) ಇದಕ್ಕೆ ‘ಪಟ್ಟದ ಕೋಣ’ ಎಂದು ಹೆಸರು. ಈ ಕೋಣಕ್ಕೆ ಬೇರೆ ಕೊಟ್ಟಿಗೆ(ಕೋಣೆ) ಇದೆ. ಇಲ್ಲಿ ಕೋಣ ತಂದ ಮೇಲೆ ಯಾವುದೇ ಗಾಯ ಮಾಡಬಾರದು. ಅಂದರೆ ಸೀಲ್ ಮಾಡಬಾರದು. ಮೂಗುದಾರ ಹಾಕಬಾರದು ಅಂದರೆ ರಕ್ತ ಚೆಲ್ಲಬಾರದು. ಕೋಣವನ್ನು ತರುವಾಗಲೇ ಮಾಡಿದ್ದರೆ ತೊಂದರೆ ಇಲ್ಲ. ಪಟ್ಟದ ಕೋಣ ವಯಸ್ಸಾದರೆ ಬೇರೆ ಕೋಣವನ್ನು ತಂದು ಅದಕ್ಕೆ ಪಟ್ಟ ಕಟ್ಟಿ ಕೋಣವನ್ನು ಆಭರಣದೊಂದಿಗೆ ಶೃಂಗರಿಸುತ್ತಾರೆ. ಪಟ್ಟದ ಕೋಣಕ್ಕೆ ಹಾಕುವ ಆಭರಣಗಳು ಯಾವುವೆಂದರೆ : ಬೆನ್ನಿಗೆ ಗಮ್ಮಚಣ, ಕೋಡಿಗೆ ಕೋಡುಮಿಟ್ಟಿ, ನೇಸಲಿಗೆ ನೇಸಲ ಗಂಧ ಎಂಬ ಚಿನ್ನದ ಆಭರಣಗಳಿವೆ. ವಾದ್ಯಘೋಷ, ಹರಿಜನರ ಕುಣೆತದೊಂದಿಗೆ ಗದ್ದೆಯ ಸುತ್ತು ತಿರುಗಿಸಿ ಕೊಟ್ಟಿಗೆಯಲ್ಲಿ ಪಟ್ಟದ ಕೋಣವನ್ನು ಕಟ್ಟಬೇಕು. ಈ ಕೊಟ್ಟಿಗೆಯಲ್ಲಿ ಒಂದು ದಿನವೂ ಕೋಣ ಇಲ್ಲದಂತೆ ಆಗಬಾರದು.

ಕಂಬಳದ ದಿನ ಪ್ರಥಮವಾಗಿ ಕಂಬಳಗದ್ದೆಗೆ ಇಳಿಯುವ ಎತ್ತುಗಳನ್ನು “ಮೂರ್ತದ ಎತ್ತು ಅಥವಾ ಗಾಣದ ಎತ್ತು” ಎಂದು ಕರೆಯುತ್ತಾರೆ. ಇದು ಇಳಿದ ನಂತರ ಊರ ಮತ್ತು ಪರ ಊರ ಕೋಣ ಮತ್ತು ಜಾನುವಾರುಗಳನ್ನು ಕಂಬಳ ಗದ್ದೆಗೆ ಇಳಿಸುತ್ತಾರೆ. ಕೊನೆಗೆ ಎಲ್ಲರ ಕೋಣಗಳ ಓಟ ಆದ ನಂತರ ಪಟ್ಟದ ಕೋಣದ ಓಟ. ಇಲ್ಲಿಗೆ ಕಂಬಳ ಮುಗಿಯಿತೆಂದೇ ಅರ್ಥ. ಇದಾದ ನಂತರ ಯಾರೂ ಕಂಬಳ ಗದ್ದೆಗೆ ಕೋಣವನ್ನು ಇಳಿಸಲಿಕ್ಕೆ ಇಲ್ಲ.

ಕಂಬಳದ ದಿನ ಸಂಜೆಯ ಹೊತ್ತಿಗೆ ಗಿರಿಜನರಲ್ಲಿ ಒಬ್ಬ ಹುಡುಗನಿಗೆ ಚುಣ್ಣ ಕಟ್ಟುತ್ತಾರೆ. ಈ ಚುಣ್ಣ ಕಟ್ಟಿದ ಹುಡುಗನಿಗೆ ಮನೆಯ ಯಜಮಾನ್ತಿಯವರು ಬೂದಿ ನೀರನ್ನು ಎರೆಯಬೇಕು. ಚುಣ್ಣ ಕಟ್ಟುವುದೆಂದರೆ ಮೈ ಮೇಲೆ ಪಟ್ಟೆ ಪಟ್ಟೆ ಬಣ್ಣವನ್ನು ಹಚ್ಚಿಕೊಂಡು ಕೊರಳಿಗೆ ಕೆಸಕಾರು ಎಂಬ ಗಿಡದ ಎಲೆಯನ್ನು ಕಟ್ಟಿಕೊಳ್ಳುತ್ತಾರೆ. ಇಲ್ಲಿ ಬಂದವರನ್ನು ಆದರ ಪೂರ್ವಕವಾಗಿ ಎದುರುಗಾಣಿಸಲು ಪಾಣಾರರಲ್ಲಿ ಒಬ್ಬ ಬಂಟ ವೇಷವನ್ನು ಹಾಕಿಕೊಂಡು ನಿಂತಿರುತ್ತಾನೆ. ಹೀಗೇ ಹೇಳುತ್ತಾ ಹೋದರೆ ಇನ್ನೂ ಅನೇಕ ಪದ್ಧತಿಗಳಿವೆ. ಕಂಬಳ ಗದ್ದೆಯಲ್ಲಿ ಕೋಣಗಳ ಓಟ ಮೈ ಜುಮ್ಮೆನಿಸುತ್ತದೆ. ಅವರವರ ಊರಿನ ಕೋಣಗಳನ್ನು ಪೋತ್ಸಾಹಿಸುವಾಗ ತಟ್ಟುವ ಚಪ್ಪಾಳೆ, ಕೇಕೇ ,ಕುಣ್ಣೆತ ಎಂಥವರರನ್ನು ಒಂದು ಕ್ಷಣ ಭಾವಪರವಶರನ್ನಾಗಿಸುವುದರಲ್ಲಿ ಎರಡು ಮಾತಿಲ್ಲ.

ಪ್ರಸ್ತುತ ವಸ್ತುಸ್ಥಿತಿ:
ಹಿಂದೆ ಪ್ರತಿಯೊಬ್ಬರ ಮನೆಯಲ್ಲಿ ಕೋಣ ಮತ್ತು ಮನೆಯ ವ್ಯಕ್ತಿಗಳೊಂದಿಗೆ ಅವೀನಾಭಾವ ಸಂಬಂಧವಿತ್ತು. ಬೆಳಿಗ್ಗೆ ಬೇಗ ಎದ್ದು ಕೋಣಗಳ ಮೈ ತಿಕ್ಕಿ, ಎಣ್ಣೆ ಸವರಿ, ತಿನ್ನಲು ತಿನಿಸು ಕೊಡುವುದು ದಿನನಿತ್ಯದ ಪರಿಪಾಠವಾಗಿತ್ತು. ಎಲ್ಲರ ಮನೆಯಲ್ಲಿಯೂ ಒಂದೊಂದು ಜೋಡು ಕೋಣವಿತ್ತು. ಆವಾಗ ಟಿಲ್ಲರ್, ಟ್ಯಾಕ್ಟರಗಳಿರಲಿಲ್ಲ. ಆ ದಿನಗಳಲ್ಲಿ ಬೆಳಿಗ್ಗೆ 4-5 ಗಂಟೆಗೆ ಎಬ್ಬಿಸಿ ಅವುಗಳನ್ನು ಗದ್ದೆ ಉಳಲು ಕರೆದೊಯ್ಯುತ್ತಿದ್ದರು. ಮನೆಯ ಮಗನಂತೆ ಅವುಗಳನ್ನು ಸಾಕಿ ಸಲಹುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಆಧುನಿಕತೆಯ ಸೊಗಡಿನಲ್ಲಿ ಕೋಣಗಳು ಮರೆಯಾಗಿ, ಟಿಲ್ಲರ್, ಟ್ಯಾಕ್ಟರಗಳು ತುಂಬಿದೆ. ಈಗ ಪ್ರತಿಯೊಬ್ಬರ ಮನೆಯಲ್ಲಿ ಕೋಣವಿಲ್ಲ, ಕೋಣವಿರುವುದು ಕಂಬಳ ನಡೆಸುವವರ ಮನೆಯಲ್ಲಿ ಮಾತ್ರ ಎನ್ನುವುದು ವಿಷಾದನೀಯ. ಬುದ್ಧಿಜೀವಿಗಳ ಚಿಂತನೆಯಿಂದ, ಪ್ರಾಣಿದಯಾ ಸಂಘದವರಿಂದ ಕಂಬಳಕ್ಕೆ ಕುತ್ತು ಬಂದಿದೆ. ಕಂಬಳ ನಡೆಸುವುದೇ ತಪ್ಪೆಂಬ ಅರ್ಥದಲ್ಲಿ ತಮ್ಮ ಮೂಗಿನ ನೇರಕ್ಕೆ ಆಲೋಚಿಸುವ ಈ ಮನೋಭಾವದಿಂದ ಕಂಬಳ ನಿಷೇಧದ ಹಂತವನ್ನು ತಲುಪಿದೆ ಎಂದರೆ ಎದೆ ತುಂಬಿ ಬರುತ್ತದೆ. ಆದರೆ ಸಾವಿರಾರು ಸಂಖ್ಯೆಯ ಕಂಬಳದ ಅಭಿಮಾನಿಗಳು, ಕರಾವಳಿ ಕನ್ನಡಿಗರು “ಕಂಬಳ ನಮ್ಮ ಹೆಮ್ಮೆ, ಇದು ನಮ್ಮೂರ ಹಬ್ಬ”ವೆಂದು ವಾದಿಸಿ ಸುಪ್ರಿಂಕೋರ್ಟಿನ ತಡೆಯಾಜ್ಞೆಯನ್ನು ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ನಾನು ಚಿಕ್ಕವಳಿದ್ದಾಗ ಕಂಬಳದ ದಿನ ಶಾಲೆಗೆ ರಜೆ ನೀಡುತ್ತಿದ್ದರು. ನನ್ನೆಲ್ಲ ಸ್ನೇಹಿತರ ಜೊತೆ ಕಂಬಳಕ್ಕೆ ಹೋಗುವುದೆಂದರೆ ಎಲ್ಲಿಲ್ಲಿದ ಸಂತೋಷ. ಕೆಸರು ತುಂಬಿಸಿ ಗದ್ದೆಯನ್ನು ನಯವಾಗಿ ಹದಗೊಳಿಸುವ ಪ್ರಕ್ರಿಯೆಯನ್ನು ಕಣ್ತುಂಬಿಕೊಳ್ಳುತ್ತಿದ್ದ ರೀತಿ ರೋಚಕ ಮತ್ತು ಮನಮೋಹಕ. ಕಂಬಳ ಗದ್ದೆಯ ಇಕ್ಕೆಲಗಳಲ್ಲಿ ಜಾತ್ರೆಯ ಸಂತೆ ನಡೆಯುತ್ತದೆ. ಮಕ್ಕಳಿಗೆ ರೈಲು ಬಂಡಿ, ತೊಟ್ಟಿಲಾಟ ಹೀಗೇ ನೂರಾರು ಆಟ ಸಾಮಾಗ್ರಿಗಳು ಬರುತ್ತಿತ್ತು. ಊರಿಗೆ ಊರೇ ಸೇರಿ ಕುಣಿದಾಡುವ ಕ್ಷಣ ಅದ್ಭುತವಾಗಿತ್ತು. ಎಳೆಯ ಮಕ್ಕಳಿಂದ ಹಣ್ಣು ಹಣ್ಣು ಮುದುಕರವರೆಗೆ ವಯಸ್ಸಿನ ಬೇಧವಿಲ್ಲದೆ ಸಂಭ್ರಮಿಸುವ ಹಬ್ಬವೇ ನಮ್ಮೂರ ಹಬ್ಬ ಕಂಬಳ.

ಕಂಬಳ ಚಿರಾಯುವಾಗಲಿ:
ಕರಾವಳಿ ತೀರದ ಈ ಹೆಮ್ಮೆಯ ಹಬ್ಬ ನಮ್ಮೊಂದಿಗೆ ಸದಾ ಇರುವಂತಾಗಲಿ. ಕಂಬಳಕ್ಕೆ ಹೆಚ್ಚಿನ ಪ್ರೋತ್ಸಾಹ ಕೊಡಬೇಕು. ಇದರ ಬಗ್ಗೆ ಮುಂದಿನ ಪೀಳಿಗೆಗೆ ಆಸಕ್ತಿ ಬೆಳೆಸಬೇಕು. ಹಿಂದೆ ರಾಜಾಶ್ರಯ ಇದ್ದಂತೆ ಈಗ ಸರಕಾರದ ಆಶ್ರಯ ಅವಶ್ಯಕವಾಗಿದೆ. ಸರಕಾರ ಈ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ಬೆಂಬಲ ಕೊಡಬೇಕು. ಕಂಬಳವು ಜಾತಿ, ಧರ್ಮ, ಮತ, ಪಂಥ, ರಾಜಕೀಯದಿಂದ ಮುಕ್ತವಾದ ಜಾನಪದ ಹಬ್ಬವಾಗಿ ಈ ಸಮಾಜದಲ್ಲಿ ಚಿರಾಯುವಾಗಲಿ. ಈಗ ಕಂಬಳ ಗದ್ದೆಯಲ್ಲಿ ಮನುಷ್ಯರ ಓಟವು (ಕೆಸರುಗದ್ದೆ ಓಟ) ಪ್ರಾರಂಭವಾಗಿದೆ. ಇದು ಒಂದು ಒಳ್ಳೆಯ ಲಕ್ಷಣವೇ. ಆದರೆ ಇದರಿಂದಾಗಿ ಕಂಬಳಕ್ಕೆ ಧಕ್ಕೆ ಬರಬಾರದು. ಕಂಬಳವು ತನ್ನ ಪೂರ್ವ ಸಂಪ್ರದಾಯವನ್ನು ಹಾಳುಮಾಡಿಕೊಳ್ಳದೆ ವರ್ಷದಿಂದ ವರ್ಷಕ್ಕೆ ವಿಜ್ರಂಭಣೆಯಿಂದ ಮೂಡಿ ಬರಲಿ ಎನ್ನವುದೇ ನನ್ನ ಆಶಯ. ಈ ವರ್ಷದ ಕಂಬಳದ ಹಬ್ಬಕ್ಕೆ ನೀವು ಸಕುಟುಂಬ ಸಮೇತರಾಗಿ ಬನ್ನಿ. ಕನ್ನಡದ ತೇರನ್ನು ಎಳೆಯೋಣ. ಕರಾವಳಿಯ ‘ಕಂಬಳದ ಹಬ್ಬ’ವು ಶಾಶ್ವತವಾಗಲಿ ಎನ್ನುವುದು ನನ್ನ ಮತ್ತು ನಮ್ಮೆಲ್ಲರ ಆಶಯವಾಗಿದೆ.

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments