ಕಾರ್ಗಿಲ್ ಕದನ; ಕಡಲಲ್ಲಿ ಐಎನ್ ಎಸ್ ತಾರಾಗಿರಿ ಕಲರವ
– ಸಂತೋಷ್ ತಮ್ಮಯ್ಯ
ವಿಜಯ ಎಂಬುದೇ ಹಾಗೆ. ಅದಕ್ಕೆ ನಾನಾ ಅರ್ಥಗಳು. ನಾನಾ ಮಜಲುಗಳು. ಅದು ಕಂಡಷ್ಟೇ ಅಲ್ಲ. ವಿಜಯ ಯಾರಿಗೂ ಪುಕ್ಕಟೆಯಾಗಿ ಒಲಿದಿಲ್ಲ. ಜಿದ್ದಿಗೆ ಬೀಳದೆ ಅದು ದಕ್ಕುವುದೂ ಇಲ್ಲ. ಅದರ ಹಿಂದೋಡಿದವರನ್ನು ವಿಜಯ ಪಾತಾಳಕ್ಕೆ ತಳ್ಳಿದ, ಹೇಳಹೆಸರಿಲ್ಲದಂತೆ ಮಾಡಿದ ಉದಾಹರಣೆಗಳಿವೆ. ತಾನೊಲಿಯಲು ನೆಲವನ್ನೂ ಹದಗೊಳಿಸಿ, ಮಾಯಾಮೃಗದಂತೆ ದಿಕ್ಕುತಪ್ಪಿಸಿ ಪರೀಕ್ಷೆಗೊಳಪಡಿಸಿ ಎಲ್ಲವನ್ನೂ ತೂಕಕಿಟ್ಟ ನಂತರ ವಿಜಯ ಒಲಿಯುತ್ತದೆ. ಹಾಗಾಗಿ ವಿಜಯಕ್ಕೆ ಮೆಟ್ಟಿಲುಗಳು ಹೆಚ್ಚು. ಎತ್ತರವೂ ಜಾಸ್ತಿ.
ವಿಜಯವೆಂಬುದು ಯಜ್ಞದಂತೆ. ಅದು ಹವಿಸ್ಸನ್ನು ಬೇಡುತ್ತದೆ. ತನ್ನ ಹಾದಿಯಲ್ಲಿ ನೋವನ್ನೂ ಕೊಡುತ್ತದೆ. ಇನ್ನೇನು ಸಿಕ್ಕೇ ಬಿಟ್ಟಿತು ಎಂಬಷ್ಟರಲ್ಲಿ ಸಕಾಲವಲ್ಲ ಎಂಬಂತೆ ಮುಂದೋಡುತ್ತದೆ. ವಿಜಯವೆಂಬುದು ಮಾಯೆಯೂ ಹೌದು. ಅದು ರುಚಿ ಹಿಡಿಸುತ್ತದೆ, ಮೋಹಗೊಳಿಸುತ್ತದೆ. ಆದರೆ ಮೋಹದಿಂದಲೇ ವಿಜಯ ಒಲಿಯದು. ಒಲಿದ ವಿಜಯ ಪಡೆದವನನ್ನ್ನೇ ಒರೆಗೆ ಹಚ್ಚುತ್ತದೆ. ಗೆಲುವಿನಿಂದ ಆರ್ಭಟಿಸಿದವನನ್ನು ಕಾಲ ಕೆಳಗೆ ಹೊಸಕಿಹಾಕುತ್ತದೆ. ಆದರೆ ಪ್ರಾಯಾಸದಿಂದ ವಿಜಯಿಯಾದವನನ್ನು, ವಿಜಯದ ತತ್ವವನ್ನು ಕಾಪಿಟ್ಟುಕೊಂಡವನನ್ನು ವಿಜಯವೇ ಆರಾಧಿಸುತ್ತದೆ. ಬಹುಕಾಲ ಆ ವಿಜಯವನ್ನು ಲೋಕ ನೆನಪಿಟ್ಟುಕೊಂಡಿರುತ್ತದೆ.
ಪ್ರತಿ ವರ್ಷ ವಿಜಯ ದಿನ ಅದೇ ಪುಳಕವನ್ನು ತರುವುದರ ಹಿಂದೆ ಈ ಎಲ್ಲಾ ಸಂಗತಿಗಳು ಅಡಗಿವೆ. ನಮಗೆ ಕಾರ್ಗಿಲ್ ವಿಜಯ ದಿನ ಮಹತ್ವವಾಗುವುದು ಅದಕ್ಕೆ.
ವರ್ಷ ಹದಿನೆಂಟಾಯಿತು. ಅಂದಿನ ಎಲ್ಲವೂ ಇಂದು ಬದಲಾಗಿದೆ. ಆದರೆ ಆ ವಿಜಯದ ತೀವ್ರತೆ ಒಂಚೂರೂ ಮರೆಯಾಗಿಲ್ಲ. ಅಂದಿನ ಬಹುತೇಕ ಯೋಧರಿಂದು ಸಮವಸ್ತ್ರದಲ್ಲಿಲ್ಲ. ಆ ವಿಜಯಕ್ಕೆ ಸಾಕ್ಷಿಯಾದ ಹಲವು ಟ್ಯಾಂಕರುಗಳು, ವಿಮಾನಗಳು, ಬಂದೂಕುಗಳು ತಮ್ಮ ಪಾಳಿ ಮುಗಿಸಿ ಮರೆಗೆ ಸರಿದಿವೆ. ನೆನಪು ಇನ್ನೂ ಹಸಿರಾಗಿದೆ. ಅಂದರೆ ಅದಕ್ಕೆ ಕಾರಣ ಅದೇ ಜಿದ್ದಿಗೆ ಬಿದ್ದು ಪಡೆದುಕೊಂಡ ವಿಜಯ, ಅದು ಒಡ್ಡಿದ ಪರೀಕ್ಷೆಗಳನ್ನು ಮೀರಿ ನಿಂತ ಛಲ, ಹವಿಸ್ಸನ್ನರ್ಪಿಸಿ ಪಡೆದಿದ್ದನ್ನು ಆರಾಧಿಸಿದ ಪರಂಪರೆ.
ಈ ಹದಿನೆಂಟು ವರ್ಷಗಳಲ್ಲಿ ಕಾರ್ಗಿಲ್ ಕಾರ್ಯಾಚರಣೆಯ ಬಗ್ಗೆ ಭಾರಿ ಚರ್ಚೆಗಳಾಗಿವೆ. ಯುವಜನರ ಕಣ್ಣಮುಂದೆಯೇ ಶೌರ್ಯಪದಕಗಳು ಪ್ರಧಾನವಾಗಿ ಪ್ರೇರಣೆ ಹುಟ್ಟಿಸಿವೆ. ಯುದ್ಧ ಸ್ಮಾರಕ ಎದ್ದು ನಿಂತಿದೆ. ಯುದ್ಧದ ಸಾಕ್ಷಿಗಳು ಕಥೆ ಹೇಳುತ್ತಿವೆ. ಹಾರಿದ ವಿಮಾನಗಳು, ಸಿಡಿದ ಗುಂಡುಗಳು, ಮಡಿದ ಯೋಧರ ಲೆಕ್ಕ ಇಂದಿಗೂ ದೇಶಕ್ಕೆ ನೆನಪಿದೆ. ಹದಿನೆಂಟು ವರ್ಷದ ನಂತರ ಕೂಡಾ ಅವು ಪುಳಕ ತರುತ್ತಿವೆ. ಕಾರ್ಗಿಲ್ ಕಥೆಗಳು ಜನಪ್ರೀಯವಾಗಿವೆ. ಸೇನಾಪಡೆಗಳು ತಮ್ಮ ಸಾಧನೆಗಳನ್ನು ಮುಂದಿಡತೊಡಗುತ್ತಿದ್ದಂತೆ ಅಚಾನಕ್ಕಾಗಿ ಕಾರ್ಗಿಲ್ ನುಸುಳಿಕೊಳ್ಳುತ್ತದೆ. ವಿದೇಶಾಂಗ ನೀತಿಯ ಚರ್ಚೆಗಳು, ಚಾರಿತ್ರಿಕ ಒಪ್ಪಂದಗಳು ಕಾರ್ಗಿಲ್‌ನತ್ತ ಸುತ್ತುತ್ತವೆ. ಒಟ್ಟಿನಲ್ಲಿ ಕಾರ್ಗಿಲ್ ವಿಜಯ ಅರ್ಥಪೂರ್ಣ ವಿಜಯದ ಉಪಾಸನೆಯಂತೆ ಉಳಿದುಕೊಂಡಿದೆ.
ವಿಚಿತ್ರವೆಂದರೆ ಕಾರ್ಗಿಲ್ ವ್ಯಾಖ್ಯಾನಕಾರರು ಏನೇ ಕಾರಣಗಳನ್ನು ಕೊಟ್ಟುಕೊಂಡರೂ ಸೇನಾಪಡೆಗಳು ಈ ವಿಜಯಕ್ಕೆ ಇದೇ ಕಾರಣ ಎಂದು ಹೇಳಿಕೊಳ್ಳಲಿಲ್ಲ. ಜಿದ್ದಿಗೆ ಬಿದ್ದವನಿಗಿಂತ ಇನ್ನಾರು ತಾನೇ ವಿಜಯವನ್ನು ವರ್ಣಿಸಬಲ್ಲರು? ಈ ಹದಿನೆಂಟು ವರ್ಷಗಳಲ್ಲಿ ಕಾರ್ಗಿಲ್ ಬಗ್ಗೆ ನೂರಾರು ಪುಸ್ತಕಗಳು ಬಂದಿವೆ, ಮೂರೂ ಪಡೆಗಳ ಮುಖ್ಯಸ್ಥರೂ ಬದಲಾಗಿದ್ದಾರೆ. ಆದರೆ ಯಾವ ಪಡೆಗಳೂ ಕಾರ್ಯಾಚರಣೆಯಲ್ಲಿ ತಮ್ಮ ಪಾತ್ರವನ್ನು ಕೊಚ್ಚಿಕೊಂಡಿಲ್ಲ. ನಾಲ್ಕು ಪರಮವೀರ ಚಕ್ರವನ್ನು ಪಡೆದ ಭೂಪಡೆಯಾಗಲಿ, ತನ್ನ ಫೈಟರು-ಹೆಲಿಕಾಪ್ಟರುಗಳನ್ನು ಕಳೆದುಕೊಂಡ ವಾಯುಪಡೆಯಾಗಲಿ ವಿಜಯಕ್ಕೆ ತಾನೇ ಕಾರಣ ಎಂದುಕೊಳ್ಳಲಿಲ್ಲ. ಬದಲಿಗೆ ಇವೆರಡೂ ಪಡೆಗಳು ಕಾರ್ಯಾಚರಣೆಯ ಹೊತ್ತಲ್ಲಿ ನೌಕಾ ಪಡೆಯ ಪಾತ್ರ ಹಿರಿದು ಎಂದು ಹೇಳಿಕೆ ಕೊಟ್ಟವು!
ಹಿಮಚ್ಛಾಧಿತ ಬೆಟ್ಟಗಳಲ್ಲಿ ನೌಕಾಪಡೆ!? ಟೈಗರ್ ಹಿಲ್ಲಿನಲ್ಲಿ ನೇವಿಯೇನು ಮಾಡೀತು್? ಹೆಚ್ಚೆಂದರೆ ಅರಬ್ಬಿ ಸಮುದ್ರದಲ್ಲಿ ನೌಕೆಗಳು ಗಸ್ತು ತಿರುಗಿರಬಹುದು ಎನಿಸಬಹುದು. ಆದರೆ ಸುಮಾರು ಮೂರು ತಿಂಗಳುಗಳ ಕಾಲ ನಡೆದ ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಭಾರತೀಯ ನೌಕಾಪಡೆಗಳು ಅರಬ್ಬಿ ಸಮುದ್ರವನ್ನು ಅಕ್ಷರಶಃ ಆಳಿದ್ದವು. ಆದರೆ ವಿಜಯದ ಭಾವುಕ ವ್ಯಾಖ್ಯಾನಗಳೆಡೆಯಲ್ಲಿ ನೌಕಾಪಡೆಗೆ ಯಾಕೋ ಸ್ಥಾನ ಸಿಗಲಿಲ್ಲ. ದೇಶದ ಗಮನ ಎತ್ತರದ ಟೈಗರ್ ಬೆಟ್ಟದ ಮೇಲಿದ್ದಾಗ ನೌಕಾ ಪಡೆಗಳು ಕಡಲಲ್ಲಿ ಯುದ್ಧದ ನಿರ್ಧಾರಕ ಶಕ್ತಿಯಾಗಿದ್ದವು ಎಂಬುದು ಇಂದಿಗೂ ದೇಶಕ್ಕೆ ಅಪರಿಚಿತ.
೧೯೯೯ರ ಜುಲೈ ಆರಂಭ. ಸುದ್ಧಿಗಳೆಲ್ಲವೂ ಕಾಶ್ಮೀರಕೇಂದ್ರಿತವಾಗಿದ್ದವು. ವಾಯುಪಡೆಯ ಮಿರಾಜ್‌ಗಳು ರಂಗಕ್ಕಿಳಿದಿದ್ದವು. ರಕ್ಷಣಾ ಸಚಿವರು ಸಮರಾಂಗಣಕ್ಕೆ ಭೇಟಿ ನೀಡಿದರು ಎಂದು ದೂರದರ್ಶನ ವಾರ್ತೆ ಪ್ರಸಾರ ಮಾಡುತ್ತಿತ್ತು. ಅದೇ ಹೊತ್ತಲ್ಲಿ ಶಾಂತವಾಗಿದ್ದ ಅರಬ್ಬಿ ಸಮುದ್ರದಲ್ಲಿ ಚಟುವಟಿಕೆಗಳು ಬಿರುಸುಕೊಳ್ಳುತ್ತಿತ್ತು. ಐಎನ್‌ಎಸ್ ತಾರಾಗಿರಿ ಎಂಬ ಫ್ರಿಗೇಟ್ ನೌಕೆ ಜಲದೊಳಗಿದ್ದೇ ಬೆಟ್ಟವನ್ನು ನಿಯಂತ್ರಿಸುವೆ ಎನ್ನುವ ಧಾವಂತದಲ್ಲಿ ಸಜ್ಜಾಗುತ್ತಿತ್ತು. ಫ್ರಿಗೇಟ್ ನೌಕೆಗಳೆಂದರೆ ವಿಮಾನ ವಾಹಕಗಳಂತಲ್ಲ. ನೆಪಮಾತ್ರಕ್ಕೆ ಒಂದು ಡೆಕ್, ಉಳಿದಂತೆ ಬ್ಯಾಟರಿ ಮತ್ತು ತೈಲದ ದಾಸ್ತಾನು. ಆದರೆ ಫ್ರಿಗೇಟ್‌ಗಳೆಂದರೆ ಹೊರಗಿಂದ ಕಂಡಷ್ಟೆ ಅಲ್ಲ. ಭೂಸೇನೆಯಲ್ಲಿ ನಲ್ವತ್ತು ಟ್ಯಾಂಕರುಗಳ ತುಕಡಿ ಹೇಗೋ ನೌಕಾ ಪಡೆಯಲ್ಲಿ ಒಂದು ಫ್ರಿಗೇಟ್ ಎಂದರೆ ಹಾಗೆ. ಅದು ಜಲಾಂತರ್ಗಾಮಿಗಳನ್ನು ನೀರೊಳಗೇ ಮುಳುಗಿಸಬಲ್ಲ ಶಕ್ತಿಶಾಲಿ. ಗಂಟೆಗೆ ೫೨ ಕಿಮೀ ವೇಗದಲ್ಲಿ ಸಾಗುವ ಈ ಐಎನ್‌ಎಸ್ ತಾರಾಗಿರಿ ಎಂಬ ಫ್ರಿಗೇಟ್ ರಾಡಾರು ಮತ್ತು ಪ್ರಬಲ ಸಿಗ್ನಲ್ ವ್ಯವಸ್ಥೆಯನ್ನು ಹೊಂದಿತ್ತು. ಪರ್ವತ ಭೂಮಿಯಲ್ಲಿ ಹೋರಾಡಲು ಸಶಕ್ತವಾದ ಶಸ್ತ್ರಗಳು ಮತ್ತು ಎರಡು ಹೆಲಿಕಾಪ್ಟರುಗಳನ್ನು ಹೊತ್ತು ಅರಬ್ಬಿ ಸಮುದ್ರದಲ್ಲಿ ಸಮುದ್ರದಲ್ಲಿ ಗಸ್ತು ತಿರುಗುವುದು ಅದರ ಕೆಲಸ. ಐಎನ್‌ಎಸ್ ತಾರಾಗಿರಿಗೆ ನೌಕಾ ಪಡೆಯ ಕ್ಯಾಪ್ಟನ್ ದರ್ಜೆಯ ರ್ಯಾಂಕನ್ನು ನೀಡಲಾಗಿತ್ತು. ಅದರಲ್ಲಿ ತ್ರಜ್ಞರು ಮತ್ತು ನುರಿತ ಕಮಾಂಡೊಗಳು ಮತ್ತು ಅಧಿಕಾರಿಗಳು ಸೇರಿದಂತೆ ೨೬೭ಜನ ಯೋಧರಿದ್ದರು.
ತಾರಾಗಿರಿಯೊಂದಿಗೆ ಮುಂಬೈ ಕೇಂದ್ರಿತವಾಗಿ ಗಸ್ತು ತಿರುಗುತ್ತಿದ್ದ ಐಎನ್‌ಎಸ್ ವಿನಾಶ್ ಡೆಸ್ಟಾಯರ್ ನೌಕೆ ಏರ್ ಡಿಫೆನ್ಸ್ ಮಿಸೈಲ್, ಅಪಾರ ಶಸ್ತ್ರಾಸ್ತ್ರ, ೪೧ ಜನ ಸಾಗರ ಯುದ್ಧ ಪರಿಣತ ಕಮಾಂಡೋಗಳು ಮತ್ತು ೫ ಅಧಿಕಾರಿಗಳನ್ನು ಹೊತ್ತು ಪೋರಬಂದರನ್ನು ದಾಟಿ ಇನ್ನೂ ಮುಂದಕ್ಕೆ ಹೊರಟವು. ಅವುಗಳ ಜೊತೆಗೆ ಜಲಾಂತರ್ಗಾಮಿಗಳು, ಡೆಸ್ಟಾಯರ್ ಹಡಗುಗಳು, ಕಿರು ಹಡಗುಗಳು, ಕರ್ವೆಟ್ಟರುಗಳು, ಬೆಂಗಾವಲು ಮತ್ತು ಸರ್ವೇ ಹಡಗುಗಳು ಸೇರಿ ೩೦ ಸಣ್ಣ ಪುಟ್ಟ ದೋಣಿಗಳು ಜೊತೆಯಾದವು. ಅವುಗಳ ಗುರಿ ಕರಾಚಿ ಬಂದರು. ಜುಲೈ ಎರಡನೆ ವಾರ. ಕಾರ್ಗಿಲ್ ಅಬ್ಬರಿಸುತಿತ್ತು. ಪಾಕಿಸ್ಥಾನ ತನ್ನಲ್ಲಿದ್ದ ಅತ್ಯಾಧುನಿಕ ಎಫ್-೧೬ರನ್ನಿಟ್ಟುಕೊಂಡು ಅಬ್ಬರಿಸುತ್ತಿತ್ತು. ಆದರೆ ನೌಕಾಪಡೆಗೆ ಪಾಕಿಸ್ಥಾನ ಎಂಬುದೊಂದು ಶತಮೂರ್ಖ ದೇಶ ಎಂಬುದು ಅರಿವಾಗಿಹೋಗಿತ್ತು. ಏಕೆಂದರೆ ಕಾರ್ಯಾಚರಣೆ ತೀವ್ರವಾಗುತ್ತಿದ್ದಂತೆ ಪಾಕಿಸ್ಥಾನ ತೀವ್ರ ತೈಲದ ಅಭಾವವನ್ನು ಎದುರಿಸುತ್ತಿತ್ತು. ಪಾಕಿಸ್ಥಾನದಲ್ಲಿ ಕೇವಲ ಮೂರು ತೈಲ ಸಂಸ್ಕರಣ ಘಟಕಗಳು ಮಾತ್ರವಿದ್ದವು. ಕರಾಚಿ ಮತ್ತು ರಾವಲ್ಪಿಂಡಿಗಳು ಪಾಕಿಸ್ಥಾನದ ಪ್ರಮುಖ ತೈಲ ಸಂಸ್ಕರಣ ಘಟಕಗಳಾಗಿದ್ದವು, ಕರಾಚಿ ಮತ್ತು ಖ್ವಾಸಿಂ ಬಂದರುಗಳ ಮೂಲಕ ಸಮಸ್ತ ಪಾಕಿಸ್ಥಾನಕ್ಕೆ ತೈಲ ಸರಬರಾಜಾಗುತ್ತಿದ್ದವು. ಕಾರ್ಗಿಲ್ ಬಿಸಿಯಿಂದ ಈ ಎರಡೂ ಬಂದರುಗಳಲ್ಲಿ ತೈಲದ ದಾಸ್ತಾನು ಕೇವಲ ಏಳು ದಿನಗಳಿಗಾವಷ್ಟು ಇಳಿಯಿತು. ಅಲ್ಲದೆ ಪಾಕಿಸ್ಥಾನಕ್ಕೆ ಶೇ ೮೦ರಷ್ಟು ತೈಲ ಕೊಲ್ಲಿ ರಾಷ್ಟ್ರಗಳಿಂದ ಕರಾಚಿ ಬಂದರಿಗೆ ಬರುತ್ತಿತ್ತು. ಇನ್ನೊಂದೆಡೆ ಭಾರತದ ಬಳಿ ನಾಗರಿಕ ಮತ್ತು ಮಿಲಿಟರಿ ಬಳಕೆಗೆ ಇದ್ದ ತೈಲ ದಾಸ್ತಾನಿನ ಪ್ರಮಾಣ ೧೫:೧ರ ಪ್ರಮಾಣದಲ್ಲಿತ್ತು. ಅಂದರೆ ಭಾರತದ ಬಳಿ ನಾಗರಿಕ ವ್ಯವಸ್ಥೆಗೆ ಹೊರೆಯಾಗದೆ ಮಿಲಿಟರಿ ಬಳಕೆಗೂ ಸಮೃದ್ಧವಾದ ತೈಲ ದಾಸ್ತಾನಿತ್ತು. ಪಶ್ಚಿಮ ಕರಾವಳಿಯಿಂದ ತೆರಳಿದ ಭಾರತೀಯ ನೌಕೆಗಳು ಪಾಕಿಸ್ಥಾನದ ಜಲ ಮಾರ್ಗವನ್ನು ಕತ್ತರಿಸಿಹಾಕಿದವು. ಕೊಲ್ಲಿ ರಾಷ್ಟ್ರಗಳಿಂದ ತೈಲ ಹೊತ್ತು ಬರುತ್ತಿದ್ದ ನೌಕೆಗಳಿಗೆ ಧಿಗ್ಭಂಧನ ಹಾಕಿದವು. ಆದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಕರಾಚಿಯಿಂದ ಪಾಕಿಸ್ಥಾನದ ಯುದ್ಧ ನೌಕೆಗಳು ನೀರಿಗಿಳಿದವು. ಆ ಹೊತ್ತಿಗೆ ಮುಂಬೈಯಿಂದ ಭಾರತೀಯ ನೌಕಾಪಡೆಯ ಬ್ರಹ್ಮಾಸ್ತ್ರ ಐಎನ್‌ಎಸ್ ವಿರಾಟ್ ಗುಟುರು ಹಾಕುತ್ತಾ ಕರಾಚಿ ಬಂದರಿನತ್ತ ತೆರಳಿತು. ಸಾಕ್ಷಾತ್ ಐಎನ್‌ಎಸ್ ವಿಕ್ರಾಂತ್ ರಂಗಪ್ರವೇಶಿಸಲಿದೆ ಎಂಬ ಸುದ್ಧಿ ಮಾತ್ರದಿಂದಲೇ ಪಾಕಿಸ್ಥಾನಿ ನೌಕೆಗಳು ಮರಳಿದವು. ಅಷ್ಟರ ಹೊತ್ತಿಗೆ ಭಾರತೀಯ ನೌಕೆಗಳು ಕರಾಚಿಯಿಂದ ಕೇವಲ ೧೩ ನಾಟೆಕಲ್ ದೂರಕ್ಕೆ ತಲುಪಿದ್ದವು. ವಿಶೇಷವೆಂದರೆ ಭಾರತೀಯ ನೌಕಾ ಪಡೆ ಕರಾಚಿಯತ್ತ ಒಂದೇ ಒಂದು ಗುಂಡನ್ನು ಹಾರಿಸಲಿಲ್ಲ. ಅತ್ತ ಟೈಗರ್ ಹಿಲ್ಲಿನಲ್ಲಿ ಮಿರಾಜುಗಳು, ಶೆಲ್ಲುಗಳು, ಮೋರ್ಟಾರುಗಳು ಸಿಡಿಯುತ್ತಿದ್ದರೆ ಇತ್ತ ಕಡಲಿನಲ್ಲಿ ಮೊಳಗುತ್ತಿದ್ದದ್ದು ಭಾರತೀಯ ನೌಕೆಗಳ ಸೈರನ್‌ಗಳೊಂದೇ. ಕರಾಚಿಗೆ ಆ ಸೈರನ್ನುಗಳೇ ಎಚ್ಚರಿಕೆಯ ಗಂಟೆಗಳಾಗಿದ್ದವು. ಅದುವರೆಗೆ ಪಾಯಿಂಟ್ ೪೬೬೦ನಲ್ಲಿ ಉತ್ತರ ಕುಮಾರನ ಪೌರುಷ ತೋರುತ್ತಿದ್ದ ಪಾಕಿಸ್ಥಾನದ ನರವನ್ನು ನೌಕಾಪಡೆಗಳು ಕತ್ತರಿಸಿಹಾಕಿದ್ದವು. ಪಾಯಿಂಟ್ ೪೬೬೦ ವಶವಾಯಿತು. ಇನ್ನು ಒಂದೇ ಒಂದು ದಿನ ಬಾಕಿ ಉಳಿದಿದ್ದರೆ ಪಾಕಿಸ್ಥಾನಕ್ಕೆ ಸೈನ್ಯ ಮಾತ್ರವಲ್ಲ, ತನ್ನ ನಾಗರಿಕರೇ ಸಿಗದಂಥಾ ವಾತಾವರಣ ಉಂಟಾಗುತ್ತಿತ್ತು. ಯುದ್ಧದಲ್ಲಿ ಸೈನಿಕ ಬಲಾಬಲವೊಂದೇ ಅಂತಿಮವಲ್ಲ ಎಂಬುದನ್ನು ಕಾರ್ಗಿಲ್ ಕಾರ್ಯಾಚರಣೆ ತೋರಿಸಿಕೊಟ್ಟಿತ್ತು.
ಅದಕ್ಕೇ ವಿಜಯಕ್ಕೆ ಯಾರೂ ವಾರಿಸುದಾರರಿಲ್ಲ. ವಿಜಯ ಪತಾಕೆ ಹಿಡಿದವರಷ್ಟೇ ವಿಜಯದ ರೂವಾರಿಗಳಲ್ಲ. ವಿಜಯಕ್ಕೆ ನಾನಾ ಅರ್ಥಗಳು, ವಿಜಯಕ್ಕೆ ನಾನಾ ಮಜಲುಗಳು. ವಿಜಯವೆಂಬುದೇ ಹಾಗೆ. ಕಾರ್ಗಿಲ್ ವಿಜಯದಂತೆ.