ಹಿಂದೂ ಧರ್ಮಕ್ಕೆ ಹಿಂದು ಮುಂದಿಲ್ಲವೇ..?
– ಪ್ರೊ. ಪ್ರೇಮಶೇಖರ
ಹಿಂದೂ ಧರ್ಮದ ಅಪಹಾಸ್ಯ, ಅವಹೇಳನ ಇಂದು ನಿನ್ನೆಯದಲ್ಲ. ಅದು ಆರಂಭವಾಗಿ ಶತಮಾನಗಳೇ ಕಳೆದುಹೋಗಿವೆ. ತನ್ನ ಚಿಪ್ಪಿನೊಳಗೇ ಅಡಗಿಕೊಂಡು ಹೊರಪ್ರಪಂಚಕ್ಕೆ ಬಹುತೇಕ ಅಪರಿಚವಾಗಿಯೇ ಇದ್ದ ಹಿಂದೂ ಸಮಾಜ ತನ್ನ ಅಪರಿಚಿತತೆಯಿಂದಲೇ ಮೊದಲಿಗೆ ಅರಬ್ ಮುಸ್ಲಿಮ್ ಧಾಳಿಕಾರರಲ್ಲಿ, ನಂತರ ಕ್ರಿಶ್ಚಿಯನ್ ವರ್ತಕರು ಮತ್ತು ಸೈನಿಕರಲ್ಲಿ ಅಚ್ಚರಿಯನ್ನುಂಟುಮಾಡಿತು. ಅನೇಕ ದೇವದೇವಿಯರುಳ್ಳ, ಒಂದೇ ಒಂದು ನಿರ್ದಿಷ್ಟ ಧರ್ಮಗ್ರಂಥವಿಲ್ಲದ, ಶ್ರೇಣೀಕೃತ ಜಾತಿವ್ಯವಸ್ಥೆಯ ಅನಿಷ್ಟದಲ್ಲಿ ಒಡೆದು ಹಂಚಿಹೋಗಿದ್ದ ಹಿಂದೂ ಸಮಾಜ ಏಕದೈವವನ್ನು, ಏಕಧರ್ಮಗ್ರಂಥವನ್ನೂ ಹೊಂದಿದ್ದ, ಸಮಾನತೆಯ ತಳಹದಿಯ ಮೇಲೆ ರಚಿತವಾಗಿದ್ದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮಾಜಗಳಿಗೆ ಸಂಪೂರ್ಣ ವಿರುದ್ಧವಾಗಿದ್ದುದರಿಂದಾಗಿ ಆ ಧರ್ಮಗಳ ಅನುಯಾಯಿಗಳಲ್ಲಿ ಕುತೂಹಲ, ಅಪನಂಬಿಕೆಗಳನ್ನುಂಟುಮಾಡಿದ್ದು ಸಹಜವೇ ಆಗಿತ್ತು. ಆದರೆ ಈ ಭಾವನೆಗಳು ಕ್ಷಿಪ್ರಕಾಲದಲ್ಲೇ ಅವಹೇಳನದ ರೂಪ ಪಡೆದುಕೊಂಡದ್ದು ದುರ್ಭಾಗ್ಯದ ಬೆಳವಣಿಗೆ. ಅದಕ್ಕಿಂತಲೂ ದೌರ್ಭಾಗ್ಯದ ಸಂಗತಿಯೆಂದರೆ ಪರಧರ್ಮೀಯರು ಆರಂಭಿಸಿದ ಹಿಂದೂ ಅವಹೇಳನವನ್ನು ಈಗ ಸ್ವತಃ ಹಿಂದೂಗಳೇ ಮುಂದುವರೆಸಿಕೊಂಡುಹೋಗುತ್ತಿರುವುದು.ಅವರ ಈ ಕೃತ್ಯ ಆರೋಗ್ಯಕರವಾಗಿದ್ದು ಹಿಂದೂಧರ್ಮದ ಕೆಲವೊಂದು ಅನಾಚಾರಗಳನ್ನು ತೊಡೆದುಹಾಕುವಂತಿದ್ದರೆ ಅದು ಸ್ವಾಗತಾರ್ಹ ಹಾಗೂ ಶ್ಲಾಘನೀಯವಾಗಿರುತ್ತಿತ್ತು. ಆದರೆ ದುರದೃಷ್ಟವಶಾತ್ ವಾಸ್ತವ ಹಾಗಿಲ್ಲ. ಅವರ ಟೀಕೆಗಳಲ್ಲಿ ಎದ್ದುಕಾಣುತ್ತಿರುವುದು ಹೆಚ್ಚಿನಂಶ ಕಿಡಿಗೇಡಿತನ. ಅಂಥವರಿಗೆ ಚಿಂತಕರೆಂಬ ಹಣೆಪಟ್ಟಿ ದಕ್ಕುತ್ತಿರುವುದು ಸಮಕಾಲೀನ ಸಮಾಜದ ಒಂದು ವರ್ಗದ ಬೌದ್ಧಿಕ ದಾರಿದ್ರ್ಯದ ದ್ಯೋತಕ. ಇವರು ಈಗ ಎತ್ತುತ್ತಿರುವ ಪ್ರಶ್ನೆ ಹಿಂದೂಧರ್ಮದ ಅದಿಯ ಕುರಿತಾಗಿ, ಇತರ ಧರ್ಮಗಳಿಗಿರುವಂತೆ ಹಿಂದೂಧರ್ಮಕ್ಕೆ ಸ್ಥಾಪಕನೊಬ್ಬ ಇಲ್ಲ ಎನ್ನುವ ಕುರಿತಾಗಿ. ಮತ್ತಷ್ಟು ಓದು