ಕೊಳಕು ಪ್ಯಾಂಟಿನಲ್ಲಿದ್ದ ಹರಿದ ನೋಟು …
– ಸುಜಿತ್ ಕುಮಾರ್
ಅದೊಂದು ದೊಡ್ಡ ವೇದಿಕೆ. ವ್ಯಕ್ತಿಯೊಬ್ಬ ಕಿಕ್ಕಿರಿದು ನೆರೆದಿದ್ದ ಜನಸ್ತೋಮದ ಮುಂದೆ ಕಿವಿತಮಟೆಯೇ ಉದುರುವಂತೆ ಅರಚುತಿದ್ದ. ಏಳಿಗೆ ಎಂದರೆ ತಮ್ಮೆಲ್ಲ ಕೆಲಸಕಾರ್ಯಗಳನ್ನು ಬಿಟ್ಟು ಇಂತಹ ಬಿಟ್ಟಿ ಭಾಷಣವನ್ನು ಕೇಳುವುದು ಮಾತ್ರವೆಂದೇ ಅಂದುಕೊಂಡಿದ್ದ ಸಾವಿರಾರು ಜನ ಆತನ ಒಂದೊಂದು ಮಾತಿಗೂ ‘ಓ…’ ಎನ್ನುತ್ತಾ, ಶಿಳ್ಳೆಯೊಡೆಯುತ್ತ, ಬೊಬ್ಬೆಯಾಕುತ್ತಾ ಕುಣಿದಾಡುತಿದ್ದರು. ನೆರೆದಿದ್ದ ಜನಸ್ತೋಮದಲ್ಲಿ ಅಪ್ಪನೂ ಒಬ್ಬನಾಗಿರುವಾಗ ಮನೆಯಲ್ಲಿನ ಮಕ್ಕಳು ಪೋಲಿ ಬೀಳುವ ಮೊದಲ ದಿನಕ್ಕೆ ನಾಂದಿಯನ್ನು ಹಾಡಿದ್ದರು. ತನ್ನ ಗೂಡು ಪೆಟ್ಟಿಗೆಯ ಡಬ್ಬದಿಂದ ಬೀಡಿಯ ಕಟ್ಟು, ಬೆಂಕಿಯಪೊಟ್ಟಣವನ್ನು ಯಾವುದೇ ಭಾವಗಳಿಲ್ಲದೆ ಮಕ್ಕಳಿಗೆ ಕೊಟ್ಟ ಗೂಡಂಗಡಿಯ ತಾತ ಚಡ್ಡಿ ಹಾಕಿರುವ ಅವುಗಳಿಂದ ಪಡೆದ ಹರಿದ ಐವತ್ತು ರೂಪಾಯಿಗಳಿಗೆ ಚಿಲ್ಲರೆಯನ್ನು ಹಿಂದುರಿಗಿಸುವ ಮುನ್ನತಪ್ಪು ಲೆಕ್ಕವನ್ನೇನಾದರೂ ಹೇಳಿ ಒಂದೆರೆಡು ರೂಪಾಯಿ ಲಪಟಾಯಿಸುವುದರ ಬಗ್ಗೆ ಆಲೋಚಿಸುತ್ತಿದ್ದನೇ ವಿನಹ ಎಳೆಯ ವಯಸ್ಸಿಗೆ ಬೀಡಿಯ ಮೋಹಕ್ಕೆ ಬಿದ್ದಿರುವ ಆ ಕುಡಿಗಳಿಗೆ ಗದರಿಸುವ ಗುರುತರ ಕಾರ್ಯವನ್ನು ನಿಭಾಯಿಸಲಿಲ್ಲ. ಬೀಡಿಯ ನಂತರ ಕೊನೆಗೊಂದು ಸಿಗರೇಟಿಗೂ ಬೇಕಿದ್ದ ಹಣವಷ್ಟನ್ನೇ ಅಪ್ಪನ ಪ್ಯಾಂಟಿನ ಜೇಬಿನಿಂದ ಎಗರಿಸಿಕೊಂಡು ಬಂದಿದ್ದ ಮಕ್ಕಳು ಅರ್ವತ್ತು ವಯಸ್ಸಿನ ತಾತಪ್ಪನ ಕುತಂತ್ರವನ್ನು ಸಫಲವಾಗಲು ಬಿಡುತ್ತಾರೆಯೇ?! ಮತ್ತಷ್ಟು ಓದು