ಬುದ್ಧಿಜೀವಿಗಳ ಐಡಿಯಾಲಜಿ ಹಾಗೂ ಭಾರತೀಯ ಸಾಧಕರ ಸಹಜತರ್ಕ
– ವಿನಾಯಕ ಹಂಪಿಹೊಳಿ
“ಕಡಲೆಯು ಬಡವರ ಗೋಡಂಬಿ” ಎಂಬ ಮಾತನ್ನು ನಾವೆಲ್ಲರೂ ಕೇಳಿರುತ್ತೇವೆ. ಇದರ ಅರ್ಥವೇನು ಎಂಬುದು ಏನೂ ಕಲಿಯದ ಮನುಷ್ಯನಿಗೂ ಬೇಗನೇ ಅರ್ಥವಾಗುತ್ತದೆ. ಈ ಮಾತನ್ನು ನಮ್ಮ ಅಜ್ಜನಿಗೋ, ಅಜ್ಜಿಗೋ ಹೇಳಿ, ಇದರ ಅರ್ಥವೇನು ಎಂದು ಕೇಳಿದರೆ ಅವರು ಏನು ಹೇಳಬಹುದು? “ಗೋಡಂಬಿಯಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನವಿದೆಯೋ, ಆ ಪ್ರಯೋಜನವನ್ನು ಕಡಲೆಯಿಂದಲೂ ಪಡೆಯಬಹುದು; ಅದೂ ಕೂಡ ಕಡಿಮೆ ಖರ್ಚಿನಲ್ಲಿ.” ಎಂಬ ವಿವರಣೆ ಅವರಿಂದ ಬರಬಹುದು.
ಈಗ ನಾವು ನಮ್ಮ ಹಿರಿಯರ ಬಳಿ, “ಈ ಮಾತಿನಲ್ಲಿ ಬಹಳ ಗಹನ ಅರ್ಥವಿದೆ, ಇದು ಗೋಡಂಬಿಯ ಶ್ರೇಷ್ಠತೆಯನ್ನು ಧಿಕ್ಕರಿಸಿ, ಆಹಾರಗಳೆಲ್ಲವೂ ಸಮಾನ ಎಂಬುದನ್ನು ಸಾರುವ ಅರ್ಥವು ಇದರಲ್ಲಿ ಅಡಗಿದೆ” ಎಂದರೆ ಅವರಿಗೇನು ಅರ್ಥವಾಗಲು ಸಾಧ್ಯ? “ಏನೋಪ್ಪಾ! ಅಷ್ಟೆಲ್ಲ ಗೊತ್ತಿಲ್ಲ” ಎಂದು ನುಣುಚಿಕೊಳ್ಳುತ್ತಾರೆ. ಆಗ ನಮಗೆ “ನಮ್ಮ ಪೂರ್ವಜರಲ್ಲಿ ತಾರ್ಕಿಕ ಸಾಮರ್ಥ್ಯವೇ ಇರಲಿಲ್ಲ. ತರ್ಕಮಾಡಿ ವಿಚಾರಿಸುವ ಬುದ್ಧಿಯೇ ಇಲ್ಲದೇ ಮೌಢ್ಯದಲ್ಲಿ ಇದ್ದರು. ತರ್ಕಬದ್ಧವಾಗಿ ಯೋಚಿಸುವದನ್ನು ನಾವು ರೂಢಿಸಿಕೊಂಡು ಮೌಢ್ಯದಿಂದ ಹೊರಬರಬೇಕು.” ಎಂದೆಲ್ಲ ಭಾವಿಸುತ್ತೇವೆ.
ಈ ಎರಡು ತರ್ಕಗಳಲ್ಲಿ ವ್ಯತ್ಯಾಸವೇನು? ಹಿರಿಯರು ಹೇಳಿದ ತರ್ಕದಿಂದ ಹೊರಡುವ ಅರ್ಥವು, ಆಹಾರಪದ್ಧತಿಯನ್ನು ರೂಢಿಸಿಕೊಳ್ಳುವದರಲ್ಲಿ ನಿರ್ಣಾಯಕವಾಗಬಹುದು. ನಿಮ್ಮ ಆದಾಯ ಕಮ್ಮಿಯಿದ್ದರೆ, ಮಕ್ಕಳಿಗೆ ಗೋಡಂಬಿಯಿಂದ ಸಿಗುವ ಪೌಷ್ಟಿಕತೆಯನ್ನು ಕಡಲೆಯಿಂದ ಸರಿದೂಗಿಸುವಲ್ಲಿ ಇದು ಸಹಾಯಕ. ನಿಮ್ಮ ಮಗುವಿಗೆ ಗೋಡಂಬಿಯಿಂದ ಅಲರ್ಜಿಯಾಗುತ್ತಿದ್ದರೆ, ಕಡಲೆ ತಿನ್ನಿಸಿಯೂ ಆ ಪೌಷ್ಟಿಕತೆಯನ್ನು ನೀಡಬಹುದು. ಇನ್ನೂ ಹತ್ತು ಹಲವು ನಿರ್ಣಯಗಳಿಗೆ ಇದು ಸಹಕಾರಿ.
ಈಗ ನಮ್ಮ ತರ್ಕವನ್ನು ತೆಗೆದುಕೊಳ್ಳಿ. ಇದು ಗೋಡಂಬಿಯ ಶ್ರೇಷ್ಠತೆಯನ್ನು ಧಿಕ್ಕರಿಸುವ ಹೇಳಿಕೆಯಾಗಿದೆ ಎಂಬ ನಿರ್ಣಯಕ್ಕೆ ನಮ್ಮ ತರ್ಕವು ಬಂದು ನಿಲ್ಲುತ್ತದೆ. ಇದರಿಂದ ಏನು ಕಡಿದು ಗುಡ್ಡೆ ಹಾಕಿದಂತಾಯಿತು? ಈ ರೀತಿಯ ತರ್ಕವು ಯಾವ ನಿರ್ಣಯದಲ್ಲಿ ಸಹಾಯಕಾರಿ? ಇದರಿಂದ ಉದ್ರೇಕಗೊಂಡವರು ಗೋಡಂಬಿ ತೋಟಗಳನ್ನು ನಾಶ ಮಾಡಬಹುದು ಅಷ್ಟೇ ಬಿಟ್ಟರೆ ನಿಜ ಜೀವನದಲ್ಲಿ ಯಾವ ನಿರ್ಣಯಕ್ಕೂ ಇದು ಸಹಾಯಕವಾಗಲಾರದು.
ವೈಜ್ಞಾನಿಕ ತರ್ಕಕ್ಕೆ ಒಂದು ಮುಖ್ಯ ಲಕ್ಷಣವಿದೆ. ಅದು ನಿಮಗೆ ಒಂದಾನೊಂದು ಸಂದರ್ಭದಲ್ಲಿ ನಿಮಗೆ ನಿರ್ಣಯವನ್ನು ತೆಗೆದುಕೊಳ್ಳುವಲ್ಲಿ ಉಪಯೋಗವಾಗುತ್ತದೆ. ಉದಾಹರಣೆಗೆ, ಬಾಹ್ಯಾಕಾಶದಲ್ಲಿ, ಆಸ್ಟ್ರೊನಾಟ್ ಒಬ್ಬ ಸ್ಪೇಸ್-ಶಿಪ್ಪಿಂದ ದೂರದಲ್ಲಿದ್ದು, ಅದರ ಬಳಿ ಹೋಗಬೇಕೆಂದರೆ ಏನು ಮಾಡಬೇಕು? ಇಲ್ಲಿ ಆತನಿಗೆ ನ್ಯೂಟನ್ನಿನ ಮೂರನೇ ನಿಯಮ ಸಹಾಯಕ್ಕೆ ಬರುತ್ತದೆ. ಈಗ ನಾವು ಬಳಸುವ ವಾಹನಗಳು ನಿರ್ಮಿತವಾಗಿರುವದೇ ಈ ವೈಜ್ಞಾನಿಕ ತರ್ಕಗಳಿಂದ.
ನಮ್ಮ ಹಿರಿಯರು, ವಾಕ್ಯವೊಂದನ್ನು, ಯಾವ ಸಂದರ್ಭದಲ್ಲಿಟ್ಟರೆ, ನಿರ್ಣಾಯಕವಾಗುವ ಜ್ಞಾನವನ್ನು ಅದು ನೀಡಬಲ್ಲದೋ, ಆ ಸಂದರ್ಭದಲ್ಲಿಟ್ಟು, ತರ್ಕವನ್ನು ಉಪಯೋಗಿಸುತ್ತಿದ್ದರು. ಆದ್ದರಿಂದ ಅವರ ಅನ್ವಯ ಪದ್ಧತಿಯೇ ವೈಜ್ಞಾನಿಕವಾಗಿತ್ತು. ಆದರೆ ನಾವು ಈಗ ಹೇಗೆ ತರ್ಕವನ್ನುಪಯೋಗಿಸುತ್ತಿದ್ದೇವೆಯೋ ಅದು ವಾಸ್ತವವಾಗಿ ಕ್ರಿಶ್ಚಿಯನ್ ತರ್ಕವಾಗಿದ್ದು, ಅದನ್ನೇ ವೈಜ್ಞಾನಿಕ ಎಂದು ಒಪ್ಪಿಕೊಂಡಿರುವದರ ಪರಿಣಾಮ. ಇದರಲ್ಲಿ ಯಾವ ವೈಜ್ಞಾನಿಕತೆಯೂ ಇಲ್ಲ.
ಈಗ ಉಳ್ಳವರು ಶಿವಾಲಯ ಮಾಡುವರು ಎಂಬ ಬಸವಣ್ಣನವರ ವಚನವನ್ನೇ ತೆಗೆದುಕೊಳ್ಳಿ. ಕಡಲೆಯು ಬಡವರ ಗೋಡಂಬಿ ಎಂಬ ಮಾತಿನಂತೆಯೇ ಈ ವಚನವೂ ಇದೆಯಲ್ಲವೇ? ಇದರ ಅರ್ಥವನ್ನು ಪರಂಪರಾಗತವಾಗಿ ವಚನಕಾರರು ಹೇಗೆ ತೆಗೆಯುತ್ತಾರೆ? “ಶಿವಾಲಯ ನಿರ್ಮಿಸುವದರಿಂದ ಶಿವ ಒಲಿಯುತ್ತಾನೆ. ಅದು ಬಹಳ ಪುಣ್ಯದ ಕೆಲಸ. ಹಾಗೆಯೇ ಬಡವರೂ ಕೂಡ ಶಿವನನ್ನು ಒಲಿಸಿಕೊಳ್ಳಬಹುದು. ಅದೇ ಪುಣ್ಯವನ್ನೇ ಪಡೆಯಬಹುದು. ಹೇಗೆಂದರೆ, ತಮ್ಮ ದೇಹವನ್ನೇ ಶಿವಾಲಯವನ್ನಾಗಿಸಿಕೊಳ್ಳುದರ ಮೂಲಕ ಇದು ಸಾಧ್ಯ. ಅಲ್ಲದೇ ಸ್ಥಾವರ ಶಿವಾಲಯವನ್ನು ನಾಶಮಾಡಬಹುದು ಆದರೆ ನಮ್ಮಲ್ಲಿ ನಾವು ಕಟ್ಟಿಕೊಂಡಿರುವ ಶಿವಾಲಯವನ್ನು ನಾಶಮಾಡಲಾಗದು.” ಎಂಬರ್ಥವನ್ನು ನಮ್ಮ ಪೂರ್ವಜರು ಮಾಡಿಕೊಳ್ಳುತ್ತಾರೆ.
ಇದು ವಾಸ್ತವವಾಗಿ ಹಲವಾರು ನಿರ್ಣಯಗಳಲ್ಲಿ ಸಹಕಾರಿಯಾಗುತ್ತದೆ. ಶರಣನೊಬ್ಬನು ತನ್ನ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಂಡಂತೆ, ನಾವೂ ಕೂಡ ನಮ್ಮ ಕಾರ್ಯಕ್ಷೇತ್ರವನ್ನೇ ದೇವಾಲಯವನ್ನಾಗಿ ಮಾಡಿಕೊಳ್ಳಬಹುದಾಗಿದೆ. ಆಟೋ-ಟ್ಯಾಕ್ಸಿ ಚಾಲಕರು ತಮ್ಮ ವಾಹನವನ್ನೇ ದೇವಾಲಯವನ್ನಾಗಿ ಮಾಡಿಕೊಂಡು ಬೆಳಿಗ್ಗೆ ಅದನ್ನು ಪೂಜಿಸುತ್ತಾರೆ. ಕೆಲವು ನೌಕರರು ತಾವು ಕೆಲಸ ಮಾಡುವ ಡೆಸ್ಕಿನ ಮೇಲೆ ತಮ್ಮ ಇಷ್ಟದೇವತೆಯನ್ನು ಇಟ್ಟುಕೊಂಡು, ನಮಸ್ಕಾರ ಮಾಡಿ ಕೆಲಸ ಆರಂಭಿಸುತ್ತಾರೆ. ನಾವು ದಿನದ ಬಹು ಹೆಚ್ಚು ಸಮಯವನ್ನು ಎಲ್ಲಿ ಕಳೆಯುತ್ತೇವೆಯೋ, ಆ ಕಾರ್ಯಕ್ಷೇತ್ರವನ್ನೇ ದೇವಾಲಯವನ್ನಾಗಿಸಿಕೊಳ್ಳುವದು ಅತ್ಯಂತ ಸುಲಭವಾಗುತ್ತದೆ.
ಅಂದರೆ ೧೨ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದ ಉಪಾಯವು ೨೧ನೇ ಶತಮಾನದಲ್ಲಿಯೂ ಅನ್ವಯವಾಗುತ್ತದೆ. ಆದ್ದರಿಂದಲೇ ನಮ್ಮ ಪೂರ್ವಜರು ಈ ವಚನವನ್ನು ಅರ್ಥೈಸಿ, ಅನ್ವಯಿಸಿದ್ದ ರೀತಿಯೇ ವೈಜ್ಞಾನಿಕ ಎನ್ನುವದು ಇದರಿಂದ ಸಾಬೀತಾಗುತ್ತದೆ. ಅಥವಾ ಇನ್ನೊಂದು ಅರ್ಥದಲ್ಲಿ ಹೇಳುವದಾದರೆ, ಬಸವಣ್ಣನವರು ತಿಳಿಸುವ ತತ್ತ್ವವು, ದೇಶದಾದ್ಯಂತ ಹರಡಿರುವ ಸಜ್ಜನರಲ್ಲಿ, ಈಗಾಗಲೇ ಅನ್ವಯವಾಗಿಬಿಟ್ಟಿದೆ ಎಂದರೂ ತಪ್ಪಲ್ಲ.
ಇಂದಿನ ಐಟಿ ಕ್ಷೇತ್ರ, ಬ್ಯಾಂಕ್ ಕ್ಷೇತ್ರ ಮುಂತಾದ ಕಾರ್ಯಕ್ಷೇತ್ರಗಳು ಉದ್ಯೋಗಿಗಳಲ್ಲಿ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತಿವೆ. ಇಂಥ ಉದ್ಯೋಗಿಗಳ ಮಾನಸಿಕ ಒತ್ತಡ ಕಡಿಮೆ ಮಾಡಲು ಎಚ್.ಆರ್. ವಿಭಾಗಗಳು ಬಹಳ ಪರಿಶ್ರಮ ಪಡುತ್ತಿವೆ. ವಾರಕ್ಕೆ ಒಂದೇ ಇದ್ದ ರಜೆಯನ್ನು ಎರಡು ಮಾಡಿದ ಮೇಲೂ ಒತ್ತಡ ಜಾಸ್ತಿಯಾಯಿತೇ ಹೊರತು ಕಡಿಮೆಯಾಗಿಲ್ಲ. ಇದರಿಂದ ಏನು ಸಿದ್ಧವಾಗುತ್ತದೆ? ಉದ್ಯೋಗಿಗಳ ಮನಸ್ಸನ್ನು ಅರಿಯಲು ಇಂದು ನಾವು ಬಳಸುತ್ತಿರುವ ಮನೋವಿಜ್ಞಾನ, ಸಂಪೂರ್ಣವಾಗಿ ಸೋತಿದೆ ಎಂಬುದು ಗೊತ್ತಾಗುತ್ತದೆ. ಅಂದರೆ ಮನುಷ್ಯನ ಮನಸ್ಸನ್ನರಿಯಲು ಇಂದು ಹೊಸ ವಿಜ್ಞಾನ ಬೇಕಾಗಿದೆ. ಮತ್ತು ಆ ವಿಜ್ಞಾನವನ್ನು ಇಂದು ನಾವು ಜಗತ್ತಿಗೆ ನೀಡಬಹುದೇ? ಮೇಲೆ ಹೇಳಿದ “ಉಳ್ಳವರು ಶಿವಾಲಯ ಮಾಡುವರು” ಎಂಬುದರ ಅನ್ವಯವನ್ನು ಜನಸಮಾನ್ಯರು ಎಷ್ಟು ಚೆನ್ನಾಗಿ ಮಾಡಿಕೊಂಡಿದ್ದಾರೆ ಎನ್ನುವದನ್ನು ಗಮನಿಸಿಕೊಂಡರೆ, ಅಂಥದೊಂದು ವಿಜ್ಞಾನ ನಮ್ಮಿಂದ ಹುಟ್ಟಲು ಸಾಧ್ಯ ಎನ್ನುವದು ನನ್ನಿಸಿಕೆ.
ಮನಸ್ಸಿನ ಕುರಿತು ನಮ್ಮಲ್ಲಿ ಮೊದಲೇ ವೈಜ್ಞಾನಿಕವಾದ ಪರಿಕಲ್ಪನೆ ನಮ್ಮಲ್ಲಿದೆ. ಅದನ್ನಿಟ್ಟುಕೊಂಡೇ ಬಸವಣ್ಣ ದೇಹವನ್ನು ದೇವಾಲಯವನ್ನಾಗಿಸುವ ಉಪಾಯ ಹೇಳಿದ್ದಾರೆ. ಅದು ವೈಜ್ಞಾನಿಕ ಪರಿಕಲ್ಪನೆಯಿಂದ ಹುಟ್ಟಿರುವುದರಿಂದಲೇ, ಆ ಉಪಾಯ ಈಗಲೂ ಅನ್ವಯವಾಗುತ್ತಿದೆ. ಯಾವ ಪರಿಕಲ್ಪನೆಯಿಂದ ಬಸವಣ್ಣ ಈ ಉಪಾಯವನ್ನು ತೆಗೆದರೋ, ಆ ಪರಿಕಲ್ಪನೆಯನ್ನು ಪುನಃ ಸಂಶೋಧಿಸಿಕೊಳ್ಳುದು ಈಗ ನಾವು ಮಾಡಬೇಕಿರುವ ಸದ್ಯದ ಕೆಲಸ. ಅದು ವೈಜ್ಞಾನಿಕವೇ ಆಗಿದ್ದರೆ, ಈಗಿನ ಉದ್ಯೋಗಿಗಳ ಮಾನಸಿಕ ಒತ್ತಡ ಕಡಿಮೆ ಮಾಡಲು ಅದು ಸಮರ್ಪಕವಾದ ಮಾದರಿಯನ್ನು ಖಂಡಿತ ನೀಡುತ್ತದೆ.
ಆದ್ದರಿಂದ, ಮೊದಲು ಆಗಬೇಕಾದ ಕೆಲಸ, “ಉಳ್ಳವರು ಶಿವಾಲಯ ಮಾಡುವರು” ಎಂಬ ವಚನಕ್ಕೆ ಈಗ ಹುಟ್ಟಿಕೊಂಡಿರುವ, ಅಪವ್ಯಾಖ್ಯಾನವನ್ನು ಬಿಡಬೇಕು. ಇದೊಂದು ಪುರೋಹಿತಶಾಹೀ ಪ್ರೇರಿತ ದೇವಸ್ಥಾನ ವ್ಯವಸ್ಥೆಯ ವಿರೋಧಿಧೋರಣೆ ಎಂಬ ಅನುಪಯುಕ್ತ ತರ್ಕಗಳನ್ನು ಬಿಡಬೇಕು. ಅಲ್ಲೆಲ್ಲೋ ಯೂರೋಪಿನಲ್ಲಾದ ಪ್ರಾಟೆಸ್ಟಂಟ್ ಚಳುವಳಿ ನಮ್ಮಲ್ಲಿ ನಡೆದಿಲ್ಲವಲ್ಲ ಎಂಬ ಇನ್ಫೀರಿಯಾರಿಟಿ ಕಾಂಪ್ಲೆಕ್ಸಿನಿಂದ ಹುಟ್ಟಿರುವ ಈಚಿನ ಸಂಶೋಧನೆಗಳಿಗೆಲ್ಲ ತಿಲಾಂಜಲಿ ಇಟ್ಟು, ಬಸವಣ್ಣನವರ ವಚನಗಳನ್ನು ಹೊಸದೊಂದು ದೃಷ್ಟಿಕೋನದಿಂದ ಅಧ್ಯಯನ ಮಾಡಬೇಕು.
“ನಮ್ಮ ಹಿರಿಯರು, ವಾಕ್ಯವೊಂದನ್ನು, ಯಾವ ಸಂದರ್ಭದಲ್ಲಿಟ್ಟರೆ, ನಿರ್ಣಾಯಕವಾಗುವ ಜ್ಞಾನವನ್ನು ಅದು ನೀಡಬಲ್ಲದೋ, ಆ ಸಂದರ್ಭದಲ್ಲಿಟ್ಟು, ತರ್ಕವನ್ನು ಉಪಯೋಗಿಸುತ್ತಿದ್ದರು. ಆದ್ದರಿಂದ ಅವರ ಅನ್ವಯ ಪದ್ಧತಿಯೇ ವೈಜ್ಞಾನಿಕವಾಗಿತ್ತು”
ಇದನ್ನು ರಾಷ್ಟ್ರೀಯವಾದಿ ಚಿಂತನೆ ಎನ್ನಬೇಕೊ, ಎನ್ನಬೇಕೊ, ಅಥವಾ ’ವಸಾಹತುಶಾಹಿ ಪ್ರಜ್ನೆ’ ಥಿಯರಿಯ ಭಾಗವಾಗಿ ಓದಿಕೊಳ್ಳಬೇಕೊ, ಅಥವಾ ಈ ಎರಡೂ ಚಿಂತನೆಯಿಂದ ಹುಟ್ಟಿದ ಕೂಸು ಎನ್ನಬೇಕೊ ತಿಳಿಯುತ್ತಿಲ್ಲ [ಈ ಎರಡೂ ಚಿಂತನೆಯಿಂದ ಹುಟ್ಟಿದ ಈ ಕೂಸನ್ನು ’ಮರುತ್ಪಾದಕ ಶಿಷ್ಯಕೋಟಿ”(ಮ.ಶಿ) ಎಂದು ಹೆಸರಿಸೋಣ]. ಒಟ್ಟಾರೆ ಈ ಮ.ಶಿ Prodigal child ಎನ್ನುವದರಲ್ಲಿ ಸಂಶಯವಿಲ್ಲ. ಪಾಪ, ತಮ್ಮ ಥಿಯರಿಯನ್ನು(ವಸಾಹತುಶಾಹಿ ಪ್ರಜ್ನೆ) ರಾಷ್ಟ್ರೀಯವಾದಿಗಳ ಮೇಲೆ ಸುರಿದರೆ ಎಂತಹ ಪ್ರಮಾದ ಸಂಭವೀಸೀತು ಎಂದು ಈ ಲೇಖನ ಓದಿದ ನಂತರ ಬಾಲು ಹಾಗೂ ಶಿಷ್ಯಕೋಟಿಗಳಿಗೆ ಅರ್ಥವಾಗಬಹುದಾ ಅಥವಾ ಎರಡೂ ಚಿಂತನೆಗಳಿಂದ ಹುಟ್ಟಿದ ’ಮಶಿ’ಯನ್ನು ಶಿಷ್ಯಕೋಟಿಗಳು ಮುದ್ದಾಡುತ್ತಿದ್ದಾರಾ ಎನ್ನುವದು ನನಗೆ ಇನ್ನೂ ಅರ್ಥವಾಗದ ವಿಷಯ. ಶಿಷ್ಯಕೋಟಿಗಳು ತಮ್ಮ ಚಿಂತನೆಗೆ ಬದ್ಧರಾಗಿದ್ದರೆ ಇಂತಹ ಮೂರ್ಖ ಕೆಲಸ ಮಾಡುತ್ತಿರಲಿಲ್ಲ ಎಂಬುದು ನಮ್ಮ ಅನಿಸಿಕೆ.
೧. ಈಗ ಲೇಖನದ ವಿಷಯಕ್ಕೆ ಬರೋಣ. ಬಾಲು ಹಾಗೂ ಶಿಷ್ಯಕೋಟಿಗಳ ವಾದವನ್ನೊಮ್ಮೆ ನೋಡಿ. ಅವರ ಪ್ರಕಾರ ವಿಜ್ನಾನ ಅಂದರೆ ಸೈನ್ಸ್ ಕ್ರಿಶ್ಚಿಯಾನಿಟಿಯಿಂದ ಬಂದಿದ್ದು. ಆದರೆ ಈ ಲೆಖನ ಬರೆದ ’ಮಶಿ’ ಯ ಪ್ರಕಾರ ನಮ್ಮ ಹಿರಿಯರ ಪ್ರಜ್ನೆಯೆ ವೈಜ್ನಾನಿಕ. ಇದನ್ನು ಶಿಷ್ಯಕೋಟಿಗಳು ನುಂಗುತ್ತಾರಾ, ಜಗೆದು ತಿನ್ನುತ್ತಾರಾ, ಅಥವಾ ಬಾಯಿಂದ ಉಗುಳಿ ತಿಂದಂತೆ ನಟಿಸುತ್ತಾರಾ ಎನ್ನುವದು ಪ್ರಶ್ನೆ. ಇದು ಸೆಲ್ಫ್ ಕಾಂಟ್ರಾಡಿಕ್ಟರಿ.
೨. ಒಮ್ಮೆ ಮಶಿಯು ಹೇಳಿದ ವಾದದಂತೆಯೆ ನಮ್ಮ ಹಿರಿಯರ ತಿಳುವಳಿಕೆ, ಜ್ನಾನವೆ ವೈಜ್ನಾನಿಕ ಎಂದು ಒಪ್ಪಿಕೊಳ್ಳೋಣ. ಹಾಗಿದ್ದರೆ ದೇವದಾಸಿ ಪದ್ದತಿ, ಸತಿ ಸಹಗಮನ ಪದ್ದತಿ(ಇನ್ನೂ ಬಹಳಷ್ಟಿವೆ) ಇವುಗಳಲ್ಲಿ ವೈಜ್ನಾನಿಕ ಎನ್ನುವದು ಯಾವುದಿದೆ? ಮಶಿಯವರೆ ತಿಳಿಸಿ.
೩. ಉದ್ಯೋಗಿಗಳ ಮಾನಸಿಕ ಒತ್ತಡವನ್ನು ’ಉಳ್ಳವರು ಶಿವಾಲಯವ ಮಾಡುವರು’ ಎಂಬ ವಚನ ಹೇಗೆ ಕಡಿಮೆ ಮಾಡುವದೊ, ಅದು ಹೇಗೆ ವೈಜ್ನಾನಿಕವಾಗುವದೋ ಶಿವನೆ ಬಲ್ಲ.
೪. ವಚನದ ಅಪವ್ಯಾಖ್ಯಾನವನ್ನು ಬಿಡಬೇಕು ಎನ್ನುವದು ಲೇಖನದ ಆಶಯ ಆಗಿದ್ದರೆ ಒಂದು ಪ್ರಶ್ನೆ ಏಳುತ್ತದೆ. ಈ ಅಪವ್ಯಾಖ್ಯಾನವನ್ನು ಬಿಟ್ಟರೆ ಆಗುವ ಲಾಭ ಏನು? ಆ ವಚನವು ದೇವಸ್ಥನ ವ್ಯವಸ್ಥೆಯನ್ನು ವಿರೋಧಿಸುತ್ತದೆ ಎಂಬ ಅರ್ಥದಿಂದ ಅರ್ಥೈಸಿಕೊಂಡರೆ ಆಗುವ ನಷ್ಟವೇನು? ಹೀಗೆ ಅರ್ಥೈಸಿಕೊಳ್ಳಬೇಕು ಎಂದು ಹೇಳಲು ನೀವ್ಯಾರು? ಬೈಬಲ್, ವೇದ, ಕುರಾನ್, ಸಾಹಿತ್ಯ, ಪದ್ಯ ಇತ್ಯಾದಿಗಳನ್ನು ತುಂಬಾ ರೀತಿಯಲ್ಲಿ ಅರ್ಥೈಸಿದವರಿದ್ದಾರೆ. ಇದೆ ರೀತಿಯ ಅರ್ಥವೆ ಸರಿ, ಹೀಗೆ ಅರ್ಥೈಸಿಕೊಳ್ಳಬೇಕು ಎನ್ನುವ ಮನಸ್ಥಿತಿಯೆ ಬಾಲುವವರು ಹೇಳಿದ ’ರಿಲಿಜಿಯಸ್ ಕಾನ್ಷಿಯಸ್ನೆಸ್’. ವ್ಯಂಗ್ಯವೇನೆಂದರೆ ಯಾವ ’ರಿಲಿಜಿಯಸ್ ಕಾನ್ಷಿಯಸ್ನೆಸ್’ ಬಗ್ಗೆ ಬಾಲುವವರು ಥಿಯರಿಯನ್ನು ಬರೆದರೋ ಅದೆ ’ರಿಲಿಜಿಯಸ್ ಕಾನ್ಷಿಯಸ್ನೆಸ್’ ಅವರನ್ನು ಹಾಗೂ ಅವರ ಶಿಷ್ಯಕೋಟಿಯನ್ನು ಆವರಿಸಿದೆ.
ಉಳ್ಳವರು ಶಿವಾಲಯ ಮಾಡುವರು ವಚನವನ್ನು ಉಪನಿಷತ್‌ನಿಂದ ಎತ್ತಿ ಬರೆಯಲಾಗಿದೆ.ಸ್ಥಾವರಕ್ಕಳಿವುಂಟು…. ವಚನ ಬಳಸಿ ವಿಗ್ರಹ, ದೇವಸ್ಥಾನಗಳನ್ನ , ಆಸೀನೋ ದೂರಂ ವ್ರಜತಿ, ಶಯನೇ ಯಾತಿ ಸರ್ವತಃ‘ ಅಂತ ಉಪನಿಷತ್ತೇ ಹೇಳಿದೆ
ಉಳ್ಳವರು ಅಂದರೆ ಬ್ರಾಹ್ಮಿನಿಸ್ಟ್ ಹಾಗೂ ಶಿವಾಲಯವನ್ನು ಪ್ಯಾಟ್ರಿಯಾರ್ಚಿ ಅಂತ ಓದಿ ಕೊಳ್ಳತಕ್ಕದ್ದು. ಉಳ್ಳವರು ಶಿವಾಲಯವ ಮಾಡುವರು ಎಂಬುದರ ಅರ್ಥ ಬ್ರಾಹ್ಮಿನಿಸ್ಟ್ ಜನ ಪ್ಯಾಟ್ರಿಯಾರ್ಚಿ ಅನ್ನು ಸಮಾಜದ ಮೇಲೆ ಹೇರುತ್ತಾರೆ ಅಂತ. ಬ್ರಾಹ್ಮಿನಿಕಲ್ ಪ್ಯಾಟ್ರಿಯಾರ್ಚಿಯ ವಿರುದ್ಧ ಬಸವಣ್ಣನವರು ಹೋರಾಡಿದರು. ಆ ಹಿನ್ನೆಲೆಯಲ್ಲಿ ಬರೆದ ವಚನವಿದು.