ಇರುವುದೆಲ್ಲವ ಬಿಟ್ಟು …
– ಗುರುರಾಜ ಕೊಡ್ಕಣಿ, ಯಲ್ಲಾಪುರ
ಯಶವಂತಪುರದ ಬಸ್‌ನಿಲ್ದಾಣಕ್ಕೆ ವೇಗವಾಗಿ ನುಗ್ಗಿದ ಬಸ್ಸಿನೊಳಗೆ ಅವಸರವಸರವಾಗಿ ತೂರಿಕೊಂಡ ಪ್ರಸನ್ನ. ಹಾಗೆ ಕ್ಷಣಮಾತ್ರದಲ್ಲಿ ತೂರಿಕೊಳ್ಳದಿದ್ದರೇ ಕುಳಿತುಕೊಳ್ಳಲು ಸೀಟು ಸಿಗುವುದಿಲ್ಲವೆನ್ನುವುದು ಬೆಂಗಳೂರಿನಲ್ಲಿನ ಅವನ ಐದು ವರ್ಷಗಳ ಒಡನಾಟದಲ್ಲಿ ಕಂಡುಕೊಂಡ ಸತ್ಯ. ಬಸ್ಸಿನ ಮುಂದಿನ ಬಾಗಿಲಲ್ಲಿ ನಿಂತು ’ಮೆಜೆಸ್ಟಿಕ್, ಮೆಜೆಸ್ಟಿಕ್,ಮೆಜೆಸ್ಟಿಕ್’ ಎಂದು ನಿರ್ವಾಹಕ ಕೂಗುವಷ್ಟರಲ್ಲಿ ಬಸ್ಸು ಸಂಪೂರ್ಣವಾಗಿ ತುಂಬಿ ಹೋಗಿ ಸ್ವತ: ನಿರ್ವಾಹಕನಿಗೆ ಬಸ್ಸಿನೊಳಕ್ಕೆ ಓಡಾಡುವುದು ಕಷ್ಟವಾದಂತಾಯಿತು. ’ಮುಂದಕ್ಕೆ ಹೋಗ್ರಿ , ಇಲ್ಲೇ ಡೋರ್‌ನಲ್ಲಿ ನಿಲ್ಬೇಡಿ’ ಎಂದು ಜನರನ್ನು ಗದರುತ್ತ, ’ಪಾಸಿನೋರು, ಪಾಸು, ಟಿಕೆಟಿನವರು ಕಾಸು ಕೈಯಲ್ಲಿ ಹಿಡ್ಕೊಳ್ಳಿ’ ಎಂದು ಪ್ರಾಸಬದ್ಧವಾಗಿ ಧ್ವನಿಯೇರಿಸಿದ ಕಂಡಕ್ಟರ್ ತುಂಬಿಹೋಗಿದ್ದ ಬಸ್ಸಿನೊಳಕ್ಕೆ ಕಷ್ಟಪಟ್ಟು ನಡೆಯಲಾರಂಭಿಸಿದ. ಮಹಿಳೆಯರ ಸೀಟಿನಲ್ಲಿ ಕುಳಿತಿದ್ದ ಗಂಡಸರನ್ನು ಬಯ್ಯುತ್ತ ಎಬ್ಬಿಸುತ್ತಿದ್ದ ಮಹಿಳೆಯರು, ಸ್ಕೂಲ್ ಬ್ಯಾಗನ್ನು ಬೆನ್ನಿನಿಂದಿಳಿಸಿ ’ಅಂಕಲ್ ಸ್ವಲ್ಪ ಬ್ಯಾಗ್ ಹಿಡ್ಕೊಳ್ಳಿ’ ಎನ್ನುತ್ತ, ಕುಳಿತವರ ಉತ್ತರಕ್ಕೂ ಕಾಯದೇ ಅವರ ತೊಡೆಯ ಮೇಲೆ ತಮ್ಮ ಚೀಲಗಳನ್ನಿಡುತ್ತ ತಮ್ಮ ಹೋಂ ವರ್ಕಿನ ಬಗ್ಗೆ ಜೋರಾದ ಧ್ವನಿಯಲ್ಲಿ ಚರ್ಚಿಸುತ್ತಿದ್ದ ಮಕ್ಕಳು, ’ಇನ್ನೇನು ಹತ್ತು ನಿಮಿಷದಲ್ಲಿ ಮೆಜೆಸ್ಟಿಕ್ಕಿಗೆ ಬಂದುಬಿಡ್ತೇನೆ ಕಣೊ, ಇಲ್ಲಿ ಫುಲ್ ಟ್ರಾಫಿಕ್ ಜಾಮ್’ ಎಂದು ಎಲ್ಲರೆದುರೇ ರಾಜಾರೋಷವಾಗಿ ಫೋನಿನಲ್ಲಿ ಸುಳ್ಳು ಹೇಳುತ್ತಿದ್ದ ಕಾಲೇಜು ಯುವಕರ ಗಲಾಟೆಯ ನಡುವೆಯೇ ಬಸ್ಸು ನಿಧಾನವಾಗಿ ಚಲಿಸಲಾರಂಭಿಸಿತ್ತು. ಬಸ್ಸು ಶುರುವಾಗುತ್ತಲೇ ಸಣ್ಣಗೆ ಬೀಸಿದ್ದ ಗಾಳಿ, ಕಿಟಕಿಯ ಪಕ್ಕಕ್ಕೆ ಕುಳಿತಿದ್ದ ಪ್ರಸನ್ನನಿಗೆ ಕೊಂಚ ನೆಮ್ಮದಿಯನ್ನು ಕೊಟ್ಟಿತ್ತು. ಬೆಳಿಗ್ಗೆ ಆರುಗಂಟೆಗೆಲ್ಲ ಎದ್ದು, ಸ್ನಾನ ಮಾಡಿ, ತಿಂಡಿ ತಿಂದು ಬಸ್ಸು ಹತ್ತುವಷ್ಟರಲ್ಲಿ ಮೈಯೆಲ್ಲ ಬೆವತು ಹೋಗುವುದು ಪ್ರಸನ್ನನಿಗೆ ದಿನನಿತ್ಯದ ರೂಢಿ. ಬಹುಶಃ ಕೆಲಸಕ್ಕಾಗಿ ಸಿಟಿಬಸ್ಸುಗಳನ್ನು ಅವಲಂಬಿಸುವ ಪ್ರತಿಯೊಬ್ಬ ಬೆಂಗಳೂರಿಗನಿಗೂ ಅದು ಅಭ್ಯಾಸವಾಗಿ ಹೋಗಿರುತ್ತದೆ. ಹಾಗಾಗಿ ಬಸ್ಸಿನ ಕಿಟಕಿಯಿಂದ ಹಾದು ಬರುವ ಗಾಳಿ ತಂಪಾಗಿರದಿದ್ದರೂ ಮೈತುಂಬ ಆವರಿಸಿಕೊಂಡ ಬೆವರಿನ ಪರಿಣಾಮವಾಗಿ ಮೈಯೆಲ್ಲ ತಂಪಾದ ಅನುಭವ. ಕ್ಷಣಕಾಲ ಹಾಯೆನಿಸಿ ತಲೆಯನ್ನು ಸಿಟಿಗೊರಗಿಸಿ ಕಣ್ಣು ಮುಚ್ಚಿದ ಪ್ರಸನ್ನ. ಮುಚ್ಚಿದ ಕಣ್ಣುಗಳ ಹಿಂದೆ ಹತ್ತು ಹಲವು ಆಲೋಚನೆಗಳು. ಯಶವಂತಪುರದಿಂದ ಮೆಜೆಸ್ಟಿಕ್ಕಿನ ಬಸ್ ನಿಲ್ದಾಣಕ್ಕೆ ತೆರಳಲು ಕನಿಷ್ಟ ಅರ್ಧ ತಾಸು ಬೇಕು. ವಾಹನದಟ್ಟಣೆ ಜಾಸ್ತಿಯಿದ್ದರಂತೂ ಇನ್ನೂ ಹೆಚ್ಚೇ ಸಮಯ ಬೇಕಾಗಬಹುದು. ಅಲ್ಲಿಳಿದು ಮತ್ತೊಂದು ಬಸ್ಸು ಹಿಡಿದು ಬನ್ನೆರುಘಟ್ಟ ರಸ್ತೆಯಲ್ಲಿರುವ ತನ್ನ ಕಚೇರಿಗೆ ತೆರಳುವಷ್ಟರಲ್ಲಿ ಇನ್ನೊಂದು ಗಂಟೆಯ ಪ್ರಯಾಣ. ಬೆಳಿಗ್ಗೆ ಎರಡು ಗಂಟೆಗಳ ಪ್ರಯಾಣವಾದರೆ ಸಾಯಂಕಾಲದ ವಾಹನದಟ್ಟಣೆಯಿಂದಾಗಿ ಸಂಜೆ ಅದೇ ಮಾರ್ಗದಲ್ಲಿ ಮರಳಿ ಬರಲು ಕನಿಷ್ಟ ಮೂರು ಗಂಟೆಗಳ ಕಾಲಾವಕಾಶವಂತೂ ಬೇಕು. ಕಚೇರಿಯ ಒಂಭತ್ತು ಗಂಟೆಗಳ ಕಾರ್ಯಾವಧಿಯನ್ನು ಸೇರಿಸಿಕೊಂಡರೆ ಪ್ರತಿದಿನ ಹದಿನಾಲ್ಕು ಗಂಟೆಗಳಷ್ಟು ಕಾಲದ ತನ್ನ ಬದುಕು ಬೀದಿಯಲ್ಲಿಯೇ ಮುಗಿದುಹೋಗಿರುತ್ತದೆ ಎಂದುಕೊಂಡ ಪ್ರಸನ್ನ. ಈ ಗಡಿಬಿಡಿಯ ಬದುಕಿಗಾಗಿ ಬೆಂಗಳೂರಿಗೆ ಬರಬೇಕಿತ್ತೇ ತಾನು ಎಂದೆನ್ನಿಸಿತು ಅವನಿಗೆ. ಬೆಳಿಗ್ಗೆ ಏಳು ಗಂಟೆಗೆ ಮನೆ ಬಿಟ್ಟರೇ ಪುನಃ ಮನೆ ಸೇರಿಕೊಳ್ಳುವುದು ರಾತ್ರಿಯ ಒಂಭತ್ತು ಗಂಟೆಗೆ. ಆಫೀಸಿನ ಕೆಲಸದಿಂದ ಸುಸ್ತಾಗಿ ಹೋದ ದೇಹಕ್ಕೆ ರಾತ್ರಿ ಊಟ ಮುಗಿಯುವಷ್ಟರಲ್ಲಿ ನಿದ್ರೆಯ ಸೆಳೆತ. ಬೆಳಗೆದ್ದರೆ ಮತ್ತದೇ ಅಡಾವುಡಿಯ ಓಟ. ಕೊಂಚ ಸಮಾಧಾನ ಸಿಗುವುದು ವಾರಾಂತ್ಯದಲ್ಲಿ ಎನ್ನಿಸಿದರೂ, ಕೋಣೆಯ ಸ್ವಚ್ಛತೆ, ಬಟ್ಟೆ ಒಗೆತದಂತಹ ಕೆಲಸ ಮುಗಿಸುವಷ್ಟರಲ್ಲಿ ವಾರಾಂತ್ಯವೂ ಮುಗಿದುಹೋಗಿರುತ್ತದೆ. ಅದೆಷ್ಟೋ ಸಲ ವಾರಾಂತ್ಯಕ್ಕೂ ರಜೆಯಿಲ್ಲದೇ ಕೆಲಸ ಮಾಡಿದ್ದಿದೆ. ಇಂಥಹ ಅವಸರದ ಜೀವನಕ್ಕೆ ದುಡಿಮೆಯಾದರೂ ಜಾಸ್ತಿಯಿದೆಯಾ ಎಂದುಕೊಂಡರೆ ತನ್ನ ಕೈಗೆ ಸಿಗುವ ಸಂಬಳವೂ ಇಪ್ಪತ್ತೈದು ಸಾವಿರ ಮಾತ್ರ. ದುಬಾರಿ ಮನೆಯ ಬಾಡಿಗೆ, ಕರೆಂಟು, ನೀರಿನ ಬಿಲ್ಲುಗಳ ಪಾವತಿಯ ನಂತರ ಕೈಯಲ್ಲುಳಿಯುವ ದುಡ್ಡಾದರೂ ಎಷ್ಟು ಎಂಬ ಪ್ರಶ್ನೆ ಅವನ ಮನದಲ್ಲಿ ಮೂಡಿ ಅವನಿಗರಿವಿಲ್ಲದಂತೆ ಮುಖದಲ್ಲೊಂದು ಪೆಚ್ಚುನಗೆ ಅರಳಿತ್ತು. ಹಾಳಾದ್ದು ತನ್ನ ಕಚೇರಿಯಲ್ಲಿ ಕಂಪನಿ ಬಸ್ಸಿನ ಸವಲತ್ತು ಸಹ ಇಲ್ಲ. ಹಾಗಾಗಿ ತನ್ನ ಖರ್ಚಿಗೆ ಬಸ್ ಪಾಸಿನ ಎರಡು ಸಾವಿರಗಳ ಹೆಚ್ಚುವರಿ ಹೊರೆ ತಪ್ಪಿದ್ದಲ್ಲ ಎಂದುಕೊಳ್ಳುವಷ್ಟರಲ್ಲಿ ಬಸ್ಸು ಮೆಜೆಸ್ಟಿಕ್ ನಿಲ್ದಾಣವನ್ನು ತಲುಪಿತ್ತು. ನಿಲ್ದಾಣದಲ್ಲಿ ಇಳಿಯುವ ಜನರ ನಡುವೆಯೇ ಹತ್ತಿಕೊಳ್ಳುವ ಆತುರದಲ್ಲಿದ್ದ ಜನರನ್ನು ತಳ್ಳುತ್ತ ಕೆಳಗಿಳಿದ ಪ್ರಸನ್ನ ತನ್ನ ಕಚೇರಿಯತ್ತ ತೆರಳುವ ಬಸ್ಸುಗಳು ನಿಲ್ಲುವ ಪ್ಲಾಟಫಾರ್ಮಿನತ್ತ ನಡೆದ. ಮತ್ತಷ್ಟು ಓದು