ISROಗೆ ಸಾಧ್ಯವಾಗಿದ್ದು HALಗೇಕೆ ಸಾಧ್ಯವಾಗಲಿಲ್ಲ?
– ಅಜಿತ್ ಶೆಟ್ಟಿ ಹೆರಾಂಜೆ
ಸುಮಾರು 78 ವರ್ಷ ಇತಿಹಾಸ ಇರುವ ವಿಮಾನ ತಯಾರಿಕ ಕಂಪೆನಿಯೊಂದು ಇಂದಿಗೂ ತೆವಳುತ್ತ ಕುಂಟುತ್ತಾ ಸಾಗುತ್ತಿದೆ ಅಂದರೆ ಅದಕ್ಕೆಯಾರುಹೊಣೆ? ಅದನ್ನ ನಿರ್ವಹಣೆ ಮಾಡುತ್ತಿರುವ ಸರಕಾರವಾ? ಅಥವಾ ಅಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಾ? ಅಥವಾ ಕಾರ್ಮಿಕರಿಂದ ಕೆಲಸ ತೆಗೆಸುತ್ತಿರುವ ಅಧಿಕಾರಿ ವರ್ಗವಾ? ಅಥವಾ ಇವರೆಲ್ಲರೂ ಕಾರಣರ? ಹೌದು ನಾನು ಎತ್ತಿರುವ ಪ್ರಶ್ನೆ ಹೆಚ್ಎಎಲ್ ಬಗ್ಗೆ.ಈ ಪ್ರಶ್ನೆ ಈಗ ಯಾಕೆ ಗಂಭೀರ ಸ್ವರೂಪ ಪಡೆದಿದೆ ಎಂದರೆ ಇಂದು ಬಹಳಷ್ಟು ಮಂದಿಗೆ ಎಚ್ಎಎಲ್ ಅಂದರೆ ಅಮೇರಿಕದ ಬೋಯಿಂಗ್ ಕಂಪೆನಿಯ ತರವೋ ಅಥವಾ ರಶ್ಯಾದ ಸುಕೋಯಿ ಕಂಪೆನಿಯ ತರಹವೋ ಎಂದು ಅನಿಸೋಕೆ ಶುರು ಆಗಿದೆ. ಆದರೆ ವಾಸ್ತವಾಂಶ ಹಾಗಿಲ್ಲ. ಎಚ್ಎಎಲ್ ಸ್ಥಾಪನೆಯಾಗಿ 79 ವರ್ಷ ಕಳೆದರೂ ಇವತ್ತಿಗೂ ಈ ಕಂಪೆನಿ 79 ವರ್ಷಗಳ ಹಿಂದೆ ತಾನೇನನ್ನು ಮಾಡುತ್ತಿದಯೋ ಬಹುತೇಕ ಅದೇ ಕೆಲಸವನ್ನು ಇಂದಿಗೂ ಮಾಡುತ್ತಿರುವುದು ಈ ದೇಶದ ಬಹುದೊಡ್ಡ ದುರಂತ. ಎಚ್ಎಎಲ್ ಇಂದಿಗೂ ಬಹುತೇಕ ಕೆಲಸ ವಿದೇಶಿ ನಿರ್ಮಿತ ಯುದ್ದ ವಿಮಾನಗಳ ಬಿಡಿಬಾಗಾಗಳನ್ನ ಇಲ್ಲಿಗೆ ತಂದು ಅದೇ ಕಂಪೆನಿಗಳ ಸಹಯೋಗದೊಂದಿಗೆ ಜೋಡಿಸುವ ಕಾರ್ಯವಷ್ಟೆ. ಒಂದು ಸಣ್ಣವ್ಯತ್ಯಾಸ ಅಂದರೆ 79 ವರ್ಷದ ಹಿಂದೆ Harlow PC-5 ವಿಮಾನವನ್ನು ಜೋಡಿಸಿತ್ತು ಇವತ್ತು ಸುಕೋಯಿ ಯಯದ್ದ ವಿಮಾನದ ಬಿಡಿ ಭಾಗವನ್ನ ಜೋಡಿಸಸುತ್ತಿದೆ ಅಷ್ಟೆ. ಎಚ್ಎಎಲ್ ತಾನಾಗಿಯೇ ಅಭಿವೃದ್ಧಿಪಡಿಸಿದ ವಿಮಾನ ಹಾಗು ಹೆಲಿಕಾಪ್ಟರ್ ಸಂಖ್ಯೆ ಬಹಳಾ ಕಡಿಮೆ.
ಹಿಂದುಸ್ಥಾನ್ ಏರೋನೋಟಿಕ್ಸ್ ಲಿಮಿಟೆಡ್ ಇದರ ಮೂಲ ಹೆಸರು ಹಿಂದುಸ್ಥಾನ್ ಏರ್ಕ್ರಾಫ್ಟ್ ಲಿಮಿಟೆಡ್ ಎಂದು.ಇದನ್ನ 1940 ರಲ್ಲಿ ಅಂದಿನ ಮೈಸೂರು ಸರಕಾರದ ಸಹಯೋಗದೊಂದಿಗೆ 25 ಲಕ್ಷ ರೂಪಾಯಿ ಬಂಡವಾಳ ಹಾಕಿ ಸ್ಥಾಪಿಸಿದವರು ವಾಲ್ ಚಂದ ಹೀರಾಚಂದ್ ಎನ್ನುವವರು.1941ರಲ್ಲಿ ಅಂದಿನ ಬ್ರಿಟಿಷ್ ಸರಕಾರ ಈ ಕಂಪನಿಯ ಮೂರನೇ ಒಂದರಷ್ಟು ಪಾಲನ್ನು ಖರೀದಿಸಿತು. ಕಾರಣ ಅಂದಿನ ಕಾಲಕ್ಕೆ ಬ್ರಿಟಿಷರ ಸೈನ್ಯಕ್ಕೆ ಆಧುನಿಕ ಮಿಲಿಟರಿ ಉಪಕರಣವನ್ನು ಸರಬರಾಜು ಮಾಡಲು ಏಷ್ಯಾ ಖಂಡದಲ್ಲಿ ಒಂದು ವ್ಯವಸ್ಥೆ ಬೇಕಿತ್ತು.ಅದರಂತೆಯೇ 1942 ರಲ್ಲಿ ಅಮೆರಿಕಾದ Central Aircraft Manufacturing Company (CAMCO) ಎನ್ನುವ ಕಂಪೆನಿಯ ಸಹಯೋಗದೊಂದಿಗೆ Harlow PC-5 ಎನ್ನುವ ವಿಮಾನವನ್ನು ನಿರ್ಮಿಸಿತು.ನಂತರ ಇದು ಭಾರತೀಯ ವಾಯು ಪಡೆಯ ಒಂದು ಮುಖ್ಯ ಯುದ್ಧ ವಿಮಾನವಾಗಿ ಬಹಳಷ್ಟು ವರ್ಷ ಸೇವೆ ಸಲ್ಲಿಸಿತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಮೇಲೆ ಈ ಸಂಸ್ಥೆ ಯನ್ನು ಭಾರತ ಸರ್ಕಾರ ಸಂಪೂರ್ಣ ತನ್ನ ಅಧೀನಕ್ಕೆ ತೆಗೆದುಕೊಂಡಿತು, ಅಕ್ಟೋಬರ್ 1, 1964 ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇದನ್ನ ಹಿಂದುಸ್ಥಾನ್ ಏರೋನೋಟಿಕ್ಸ್ ಲಿಮಿಟೆಡ್ ಎಂದು ಮರು ನಾಮಕರಣ ಮಾಡಿ ಇದಕ್ಕೊಂದು ಮರು ಹುಟ್ಟು ಕೊಟ್ಟರು.ಹೆಚ್ಎಎಲ್ ಅನ್ನು ಆಧುನಿಕ ಭಾರತದ ಸೇನೆಯ ಬೇಡಿಕೆಯನ್ನು ಪೂರೈಸುವ ಒಂದು ಉತ್ತಮ ಸಂಸ್ಥೆಯನ್ನಾಗಿ ಮಾಡ ಬೇಕೆಂಬ ಶಾಸ್ತ್ರಿಯವರ ಕನಸನ್ನ ನಂತರದ ದಿನಗಳಲ್ಲಿ ಬಂದ ಸರ್ಕಾರಗಳು ಸಾಕಾರಗೊಳಿಸುವಲ್ಲಿ ಸೋತಿವೆ. ಹೆಚ್ ಎ ಎಲ್ ಸಂಸ್ಥೆಗೆ ಸುಮಾರು 79 ವರ್ಷದ ಇತಿಹಾಸ ಇದೆ.ಆದರೆ ಇಂದಿಗೂ ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಅಭಿವೃದ್ಧಿಪಡಿಸುವ ವಿಷಯದಲ್ಲಿ ಯಾವುದೇ ಕಂಪೆನಿಗಳ ಹತ್ತಿರಕ್ಕೂ ನಿಲ್ಲುವುದಿಲ್ಲ.