ಕುಂ.ವೀ ಮತ್ತೆ ಕುಳಿತು ಮೊದಲಿಂದ ಹೇಳಿದ ಕತೆ – “ಶಾಮಣ್ಣ”
– ಶ್ರೀರಂಗ ಯಲಹಂಕ
ನಾನು ‘ಶಾಮಣ್ಣ’ ಕಾದಂಬರಿ ಓದುವುದಕ್ಕೂ ಮುಂಚೆ ಕುಂ ವೀ ಅವರ ‘ಡೋಮ ಮತ್ತಿತರ ಕಥೆಗಳು’, ‘ಯಾಪಿಲ್ಲು’ ಕಾದಂಬರಿ, ‘ರಾಯಲಸೀಮಾ’ (ಆತ್ಮಕಥಾನಕ ಮಾದರಿಯ ಬರಹಗಳು), ಅವರ ಆತ್ಮ ಕಥೆ ‘ಗಾಂಧೀ ಕ್ಲಾಸು’, ‘ಅರಮನೆ’ ಕಾದಂಬರಿ ಇವುಗಳನ್ನು ಓದಿದ್ದೆ. ಯಾಪಿಲ್ಲು ಕಾದಂಬರಿಯು ಪುಸ್ತಕರೂಪ ಪಡೆದ ಬಗ್ಗೆ ಬರೆಯುತ್ತಾ ಕುಂ ವೀ ಅವರು ‘ಇದು ಶಾಮಣ್ಣ ಕಾದಂಬರಿಗಿಂತ ಮೊದಲೇ ಬರೆದು ಗೊಂಗಡಿಯಲ್ಲಿ ಅಡಗಿಸಿಟ್ಟಿದ್ದೆ… ‘ ಎಂದು ಬರೆದಿದ್ದಾರೆ.ಅದನ್ನು ಓದಿದ ಮೇಲೆ ‘ಶಾಮಣ್ಣ’ ಕಾದಂಬರಿಯನ್ನು ಓದಬೇಕೆಂಬ ಆಸೆಯನ್ನು ತಡೆಯಲಾರದೆ ಹೋದೆ. ಕೊಂಡುಕೊಂಡು ಓದಿದೆ. ಆಸೆ ನಿರಾಸೆಯಾಯಿತು. ಅದರ ವಿವರಗಳಿಗೆ ಹೋಗುವ ಮುನ್ನ ಒಂದೆರೆಡು ವಿಷಯಗಳನ್ನು ಮೊದಲೇ ಸ್ಪಷ್ಟಪಡಿಸುವುದು ಮುಖ್ಯ. ಈ ನನ್ನ ಬರಹ ‘ಶಾಮಣ್ಣ’ ಕಾದಂಬರಿಯ ಪೂರ್ಣ ಪ್ರಮಾಣದ ವಿಮರ್ಶೆಯಲ್ಲ.ನಾನು ಇದುವರೆಗೆ ಓದಿರುವ ಅವರ ಕೃತಿಗಳು ಕೆಲವೊಂದು ಮಿತಿಗಳ ನಡುವೆಯೂ ನನಗೆ ಓದಿನ ಸಂತೋಷವನ್ನು ಕೊಟ್ಟಿದೆ. ‘ಅರಮನೆ’ ಕಾದಂಬರಿಯಂತೂ ಒಂದು ಮಾಸ್ಟರ್ ಪೀಸ್.( ಅದಕ್ಕೆ ೨೦೦೭ನೇ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದಿದೆ.). ಪ್ರಶಸ್ತಿ ಬಂದ ಕೃತಿಗಳೆಲ್ಲಾ ಉತ್ತಮವಾಗಿರಲೇಬೇಕು ಎಂಬ ನಿಯಮವೇನಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ‘ಅರಮನೆ’ ಕಾದಂಬರಿ ನಿಜವಾಗಲೂ ಆ ಪ್ರಶಸ್ತಿಗೆ ಅರ್ಹವಾದ ಕೃತಿ. ‘ಅರಮನೆ’ ಓದಿದ ಮೇಲೆ ಕುಂ ವೀ ಅವರ ಎಲ್ಲಾ ಕಾದಂಬರಿಗಳನ್ನು ಓದಬೇಕೆಂಬ ಆಸೆ ಇತ್ತು. ಇತ್ತೀಚೆಗೆ ಅವರ ‘ಕತ್ತೆಗೊಂದು ಕಾಲ’ ಎಂಬ ಕಾದಂಬರಿ ಬಿಡುಗಡೆ ಆಯಿತು. ಸದಾ ಪ್ರಯೋಗಶೀಲರಾದ ಕುಂ ವೀ ಅವರ ಆ ಕೃತಿಯ ಬಗ್ಗೆ ನನಗೆ ತುಂಬಾ ಕುತೂಹಲವಿದೆ. ಆದರೆ ‘ಶಾಮಣ್ಣ’ ಕಾದಂಬರಿ ಓದಿದ ಮೇಲೆ ನನ್ನ ಆ ಕುತೂಹಲಕ್ಕೆ ಸ್ವಲ್ಪ ಬ್ರೇಕ್ ಹಾಕಿರುವೆ.