ವಿಷಯದ ವಿವರಗಳಿಗೆ ದಾಟಿರಿ

ನವೆಂಬರ್ 30, 2018

1

ಸ್ವದೇಶೀ ಆಂದೋಲನದ ಭಗೀರಥ: ರಾಜೀವ ದೀಕ್ಷಿತ!

‍ನಿಲುಮೆ ಮೂಲಕ

– ತುರುವೇಕೆರೆ ಪ್ರಸಾದ್

ಕಂಪ್ಯೂಟರ್ ಇಂಜನಿಯರಿಂಗ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಒಬ್ಬ ಪ್ರತಿಭಾವಂತ ಯುವಕ, ಇಲೆಕ್ಟ್ರಾನಿಕ್ ಹಾಗೂ ಟೆಲಿಕಮ್ಯುನಿಕೇಶನ್‍ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದ ಒಬ್ಬ ಮೇಧಾವಿ,ಹೆಸರಾಂತ ಸಂಶೋಧನಾ ಸಂಸ್ಥೆ ಸಿ.ಎಸ್.ಐ.ಆರ್‍ನಲ್ಲಿ ಸೆಟೆಲೈಟ್ ಕಮ್ಯುನಿಕೇಶನ್‍ನಲ್ಲಿ ವಿಜ್ಞಾನಿಯಾಗಿ ದುಡಿದಿದ್ದವರು, ಮನಸ್ಸು ಮಾಡಿದ್ದರೆ ವಿದೇಶಗಳಲ್ಲಿ ವೈಭವದ ಐಶಾರಾಮಿ ಜೀವನ ನಡೆಸಬಹುದಾಗಿದ್ದ ಒಬ್ಬ ಯುವಕ ಈ ದೇಶದ ದುರ್ಘಟನೆಯೊಂದರ ಸಂತ್ರಸ್ತರಿಗಾಗಿ ತನ್ನ ಸುಖ, ಸಂತೋಷ ಎಲ್ಲಾ ತ್ಯಾಗ ಮಾಡುತ್ತಾರೆ. ಸಂತ್ರಸ್ತರಿಗೆ, ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವುದಕ್ಕಾಗಿ ಒಂದು ಅಂದೋಲನವನ್ನೇ ಆರಂಭಿಸಿ ತನ್ನ ಜೀವನವನ್ನೇ ಅದಕ್ಕಾಗಿ ಮೀಸಲಿಡುತ್ತಾರೆ. ಭಾರತ ಎದೆಂದಿಗೂ ಎದೆಯುಬ್ಬಿಸಿ, ತಲೆಎತ್ತಿ ಹೆಮ್ಮೆಯಿಂದ ಕೂಗಿ ಹೇಳಿಕೊಳ್ಳಬಹುದಾದ ಆ ಅದಮ್ಯ ಚೇತನವೇ ದೇಶಭಕ್ತ ರಾಜೀವ್ ದೀಕ್ಷಿತ್, ಅವರು ಪ್ರಾರಂಭಿಸಿದ ಆಂದೋಲನವೇ ‘ಆಜಾದಿ ಬಚಾವೋ’ ಆಂದೋಲನ.

ಅಲಹಾಬಾದಿನಲ್ಲಿ ಹುಟ್ಟಿದ…ರಾಜೀವ್ ದೀಕ್ಷಿತ್ 16 ವರ್ಷದ ಹುಡುಗನಾಗಿದ್ದಾಗ ಮಧ್ಯಪ್ರದೇಶದ ಭೂಪಾಲ್‍ನಲ್ಲಿ ಯೂನಿಯನ್ ಕಾರ್ಬೈಡ್ ಕಾರ್ಖಾನೆಯಿಂದ ಮೀಥೈಲ್ ಐಸೋಸಯನೈಡ್ ರಾಸಾಯನಿಕವೊಂದು ಸೋರಿಕೆಯಾಗಿ ನೂರಾರ ಜನ ಪ್ರಾಣತೆತ್ತಿದ್ದರು. ವಾಸ್ತವವಾಗಿ ಇದು ಅಕಸ್ಮಾತ್ ನಡೆದ ದುರಂತವಾಗಿರಲಿಲ್ಲ, ಅಮೇರಿಕಾದಲ್ಲಿ ಶಸ್ತ್ರಾಸ್ತ್ರ ತಯಾರಿಸುವ ಯೂನಿಯನ್ ಕಾರ್ಬೈಡ್ ಕಂಪನಿ ರಾಸಾಯನಿಕ ಬಾಂಬಿಗೆ ಬಳಸುವ ಈ ವಿಷಾನಿಲ ಎಷ್ಟು ಪರಿಣಾಮಕಾರಿ ಎಂದು ತಿಳಿದುಕೊಳ್ಳಲು ಭಾರತವನ್ನು ಕರ್ಮಭೂಮಿಯಾಗಿ ಆರಿಸಿಕೊಂಡು ಲಕ್ಷಾಂತರ ಜನರನ್ನು ಬಲಿಪಶುವನ್ನಾಗಿ ಮಾಡಿತ್ತು. ಅಮೇರಿಕಾದ ಸಾರ್ವಭೌಮತೆಯ ದಬ್ಬಾಳಿಕೆಗೆ, ದೇಶವನ್ನೇ ಮಾರಿಕೊಳ್ಳುವ ಹಂತ ತಲುಪಿದ್ದ ರಾಜಕಾರಣಿಗಳ ಬೌದ್ದಿಕ ದೀವಾಳಿತನಕ್ಕೆ ಇದು ಸಾಕ್ಷಿಯಾಗಿತ್ತು. ಈ ದುರಂತದಿಂದ ಸಾವಿರಾರು ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಸಾವಿರಾರು ಕುಟುಂಬಗಳು ಬೀದಿಗೆ ಬಿದಿದ್ದವು. ಇಂದಿಗೂ ಲಕ್ಷಾಂತರ ಜನ ಹಲವು ಕಾಯಿಲೆಗಳಿಂದ ನರಳುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಈ ಜನರ ಕೈಗೆ ಬಿಡಿಗಾಸು ಹಾಕಿ ಕೈ ತೊಳೆದುಕೊಳ್ಳುವ ಹುನ್ನಾರ ನಡೆಸಿದ್ದರು. ವರುಷಗಟ್ಟಲೆ ಈ ಸಂತ್ರಸ್ತರಿಗೆ ಅನ್ಯಾಯವಾಗುತ್ತಿರುವುದನ್ನು ನೋಡುತ್ತಲೇ ಬಂದಿದ್ದ ರಾಜೀವ್ ಸಿಟ್ಟಿಗೆದ್ದು ಇವರಿಗೆ ನ್ಯಾಯಯುತ ಪರಿಹಾರ ದೊರಕಿಸಿಕೊಡಲೆಂದೇ 1992ರಲ್ಲಿ ಡಾ.ಬನ್ವಾರಿಲಾಲ್ ಶರ್ಮಾ ಮತ್ತು ಪ್ರೊ. ಧರ್ಮಪಾಲ್ ಮಾರ್ಗದರ್ಶನದಲ್ಲಿ ‘ಆಜಾದಿ ಬಚಾವೋ’ ಆಂದೋಲನ ಪ್ರಾರಂಭಿಸಿದರು. ಈ ಆಂದೋಲನದ ಮೂಲಕ ಯೂನಿಯನ್ ಕಾರ್ಬೈಡ್ ಕಂಪನಿಯನ್ನು ಭಾರತದಿಂದ ಒದ್ದೋಡಿಸಲಾಯಿತು.

ರಾಜೀವ್ ದೀಕ್ಷಿತರ ಈ ಆಂದೋಲನದ ಕಿಚ್ಚು ಬಹುಬೇಗ ದೇಶವ್ಯಾಪಿ ಹರಡಿತು. ರಾಜೀವ್ ದೀಕ್ಷಿತ್ ವ್ಯವಸ್ಥೆಯೊಂದಿಗೆ ರಾಜಿಮಾಡಿಕೊಳ್ಳದೆ ಸಿಡಿದೆದ್ದರು.ದೇಶದಲ್ಲಿ ನಡೆಯುತ್ತಿದ್ದ ಒಂದೊಂದೇ ಹಗರಣಗಳನ್ನು ಜನರ ಮುಂದೆ ಬಿಚ್ಚಿಡುತ್ತಾ ಹೋದರು. ಅದರ ಪರಿಣಾಮವಾಗಿ ಮಾರಿಷಸ್ ಮೂಲಕ ಭಾರತಕ್ಕೆ ಸರಕು ಸಾಗಿಸಿ ಸಾವಿರಾರು ಕೋಟಿ ತೆರಿಗೆ ವಂಚಿಸುತ್ತಿದ್ದ ಅಮೇರಿಕನ್ ಕಂಪನಿಗಳಿಂದ ತೆರಿಗೆ ಹಣವನ್ನು ಜಪ್ತಿ ಮಾಡಲಾಯಿತು.ಗುಜರಾತಿನ ಬಂದಿರನಲ್ಲಿ ಉಪ್ಪು ತಯಾರಿಸುವ ನೆಪದಲ್ಲಿ ಬಂದು ಪಕ್ಕದ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಮಾಡುವ ಹುನ್ನಾರ ನಡೆಸಿದ್ದ ಕಾರ್ಗಿಲ್ ಎಂಬ ಕಂಪನಿಯನ್ನು ಮುಚ್ಚಿಸಲಾಯಿತು. ಅಮೇರಿಕಾದ ಇನ್ನೊಂದು ಕಂಪನಿ ವಿಲ್ಸನ್ ಕೆಡಿಯಾ ರೈತರಿಂದ ಸಾವಿರಾರು ಎಕರೆ ಬೆಲೆಬಾಳುವ ಕೃಷಿಭೂಮಿ ಕಿತ್ತುಕೊಂಡು ಹೆಂಡದ ಕಾರ್ಖಾನೆ ಸ್ಥಾಪಿಸಲು ನಡೆಸಿದ್ದ ಹುನ್ನಾರವನ್ನು ಹತ್ತಿಕ್ಕಲಾಯಿತು.

ಈ ಆಂದೋಲನ ಪ್ರಾರಂಭವಾಗುವ ವೇಳೆಗೇ ನರಸಿಂಹರಾವ್ ಸರ್ಕಾರ ಮುಕ್ತ ವ್ಯಾಪಾರ ನೀತಿಗೆ ಸಹಿ ಹಾಕಿತು. ಜಾಗತೀಕರಣ,ಖಾಸಗೀಕರಣ, ಉದಾರೀಕರಣದ ನೆಪದಲ್ಲಿ ಅಮೇರಿಕಾ, ಇಂಗ್ಲೆಂಡ್ ಮತ್ತು ಯೂರೋಪ್ ರಾಷ್ಟ್ರಗಳು ಭಾರತದಂತಹ ಅಭಿವೃದ್ಧಿಶೀಲ ದೇಶಗಳನ್ನು ದೋಚುವ ವ್ಯವಸ್ಥಿತ ಪಿತೂರಿ ನಡೆಸಿದವು. ಗ್ಯಾಟ್, ಡಂಕಲ್, ಡಬ್ಲ್ಯುಟಿಓ ಒಪ್ಪಂದಗಳ ಕಪಿಮುಷ್ಠಿಗೆ ಸಿಲುಕಿ ಭಾರತವೂ ನರಳುವಂತಾಯಿತು. ಬಹುರಾಷ್ಟ್ರೀಯ ಬೀಜ ಕಂಪನಿಗಳು ನಮ್ಮ ರೈತರನ್ನು ಮೋಸ ಮಾಡಲು ಸಾಲುಗಟ್ಟಿ ನಿಂತವು. ಆ ಕಾಲಕ್ಕೇ 4500ಕ್ಕೂ ಹೆಚ್ಚು ವಿದೇಶೀ ಕಂಪನಿಗಳು ಭಾರತದಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿದವು. ಇದರಿಂದ ಭಾರತದ ಗುಡಿ ಕೈಗಾರಿಕೆ ಹಾಗೂ ಸಣ್ಣ ಪುಟ್ಟ ಕೈಗಾರಿಕೆಗಳು ಹೇಳ ಹೆಸರಿಲ್ಲದಂತೆ ಛಿದ್ರವಾದವು. ಇವುಗಳನ್ನೇ ನಂಬಿದ್ದ ಲಕ್ಷಾಂತರ ಜನರು ತಮ್ಮ ಕೌಶಲಗಳಿಗೆ ಬೆಲೆಯಿಲ್ಲದೆ ಪರದಾಡುವಂತಾಯಿತು. ಭಾರತ ಸರ್ಕಾರ ಎಂತಹ ದುಸ್ಥಿತಿಯಲ್ಲಿತ್ತೆಂದರೆ ತಾನು ಮಾಡಿದ್ದ ಅಗಾಧ ಸಾಲ ಹಾಗೂ ವಸಾಹತುಶಾಹಿ ಆರ್ಥಿಕ ನೀತಿಯ ಪರಿಣಾಮವಾಗಿ ಸ್ವಂತ ಬಜೆಟ್ ತಯಾರಿಸಿಕೊಳ್ಳುವ ಸ್ಥಿತಿಯಲ್ಲೂ ಇರಲಿಲ್ಲ,. ಅಮೇರಿಕಾ ಮತ್ತು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಭಾರತದ ಬಜೆಟ್ ಹೇಗಿರಬೇಕು, ವಿತ್ತ ಸಚಿವರು ಯಾರಾಗಬೇಕು ಎಂಬುದನ್ನು ನಿರ್ಧರಿಸುತ್ತಿದ್ದವು. ಡೆನ್ಮಾರ್ಕಿನ ಹಂದಿಗಳ ಸಗಣಿಯನ್ನೂ ಅಮದು ಮಾಡಿಕೊಳ್ಳುವ ಮಟ್ಟಕ್ಕೆ ನಮ್ಮ ರಾಜಕೀಯದವರು ಬೌದ್ಧಿಕ ದೀವಾಳಿ ಎದ್ದಿದ್ದರು. ಸ್ವತಂತ್ರ ಭಾರತದ ಈ ಹೀನಾಯ ಸ್ಥಿತಿಯನ್ನು ಸಮಸ್ತ ಭಾರತೀಯರ ಮುಂದೆ ಕಂತೆ ಕಂತೆ ದಾಖಲೆಗಳ ಮೂಲಕ ತೆರೆದಿಟ್ಟವರೇ ರಾಜೀವ್ ದೀಕ್ಷಿತ್!

ಕೇವಲ ವ್ಯವಸ್ಥೆ ಹಾಗೂ ಸರ್ಕಾರಗಳನ್ನೇ ದೂಷಿ ಪ್ರಯೋಜನವಿಲ್ಲ ಎಂದು ಅರಿತ ರಾಜೀವ್ ಬಹುರಾಷ್ಟ್ರೀಯ ಕಂಪನಿಗಳ ಪ್ರಭಾವ ಕುಗ್ಗಿಸಬೇಕೆಂದರೆ ಸ್ವದೇಶೀ ಜೀವನ ಶೈಲಿಯ ಪುನರ್ ಪ್ರತಿಷ್ಠಾಪನೆ ಆಗಬೇಕು ಎಂಬುದನ್ನು ಮನಗಂಡರು. ಗಾಂಧೀಜಿ, ಸ್ವಾಮಿ ವಿವೇಕಾನಂದ, ಬಾಲಗಂಗಾಧರ ತಿಲಕರು ಈ ಹಿಂದೆ ಸ್ವದೇಶೀ ಚಿಂತನೆಯ ವಿಶ್ವರೂಪವನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟಿದ್ದರು. ಅದನ್ನು ಮರೆತು ಬಹುರಾಷ್ಟ್ರೀಯ ಕಂಪನಿಗಳ ತೆಕ್ಕೆಯಲ್ಲಿ ಮಲಗಿದ ಭಾರತವನ್ನು ಮತ್ತೆ ಸ್ವದೇಶೀ ಆಂದೋಲನದ ಮೂಲಕ ಎಚ್ಚರಿಸುವ ಪ್ರಯತ್ನ ಮಾಡಿದರು. “ಸ್ವದೇಶಿ ಎನ್ನುವುದು ಕೇವಲ ಕಲ್ಪನೆಯಲ್ಲ, ಅದು ಪ್ರಕೃತಿ ದತ್ತವಾದದ್ದು. ಅದೊಂದು ಜೀವನ ಶೈಲಿ, ಸ್ವದೇಶಿ ಇಲ್ಲದೆ ಭಾರತೀಯತೆಯೇ ಇಲ್ಲ, ಸ್ವಾತಂತ್ಯ್ರದ ನಿಜವಾದ ಅರ್ಥ ಸಿಗುವುದೇ ಸ್ವದೇಶಿ ಚಿಂತನೆ ಮತ್ತು ಅದರ ಪರಿಣಾಮಕಾರಿ ಅನುಷ್ಠಾನದಿಂದ. ನಮ್ಮ ಸ್ವದೇಶೀ ಪರಿಸರಲ್ಲಿ ಉತ್ಪಾದನೆಯಾಗುವ ವಸ್ತುಗಳಲ್ಲಿ ಈ ನೆಲದ ಸಂಸ್ಕøತಿ ಹಾಗೂ ಪರಂಪರೆಯ ಸೊಗಡಿದೆ. ಹಾಗಾಗಿ ಸ್ವದೇಶಿ ವಸ್ತುಗಳನ್ನೇ ಉತ್ಪಾದಿಸಬೇಕು ಮತ್ತು ದಿನಬಳಕೆಯಲ್ಲಿ ಅವನ್ನೇ ಉಪಯೋಗಿಸಬೇಕು, ಬಹುರಾಷ್ಟ್ರೀಯ ಉತ್ಪನ್ನಗಳನ್ನು ಧಿಕ್ಕರಿಸಿ ತಿರಸ್ಕರಿಸಬೇಕು” ಎಂದು ರಾಜೀವ್ ದೇಶಾದ್ಯಂತ ತಮ್ಮ ಆಂದೋಲನದ ಮೂಲಕ ಕರೆ ನೀಡಿದರು.

ಹಾಗೆಂದು ರಾಜೀವ್ ದೀಕ್ಷಿತ್ ಆಧುನಿಕತೆಯ, ಕೈಗಾರಿಕೀಕರಣದ ಅಥವಾ ಅಭಿವೃದ್ಧಿಯ ವಿರೋಧಿಯಾಗಿದ್ದರು ಎಂದಲ್ಲ. ಸ್ವತಃ ಅವರೇ ಒಬ್ಬ ಸಮರ್ಥ ಸಂಪರ್ಕ ವಿಜ್ಞಾನಿಯಾಗಿದ್ದರು ಎಂಬುದನ್ನು ನಾವು ಮರೆಯುವಂತಿಲ್ಲ. ಅವರು ನಮ್ಮ ಪಾರಂಪರಿಕ ದೇಶೀ ಜ್ಞಾನ ಹಾಗೂ ಕೃಷಿ ಜ್ಞಾನದ ಸಂರಕ್ಷಣೆಯ ಬಗ್ಗೆ ತೀವ್ರ ಕಳಕಳಿ ಹೊಂದಿದ್ದರು. ಗುಡಿ ಕೈಗಾರಿಕೆಗಳಿಂದ ಸಾಧ್ಯವಾಗದ ಉತ್ಪನ್ನಗಳನ್ನು ಅಗತ್ಯವಾಗಿ ಮಧ್ಯಮ ಅಥವಾ ದೊಡ್ಡ ಕೈಗಾರಿಕೆಗಳ ಮೂಲಕವೇ ಉತ್ಪಾದಿಸುವುದಲ್ಲಿ ತಪ್ಪಿಲ್ಲ. ಆದರೆ ನಮ್ಮ ಜನರ ಕೌಶಲ್ಯಪೂರ್ಣ ಉದ್ಯೋಗವನ್ನು ಕಿತ್ತುಕೊಂಡು ಪರಕೀಯರಿಗೆ ಏಕೆ ನಾವು ಮಣೆ ಹಾಕಬೇಕು? ನಮ್ಮವರನ್ನು ಏಕೆ ನಿರ್ಗತಿಕರನ್ನಾಗಿ ಮಾಡಬೇಕು? ಹೀಗೆ ಮಾಡಿದರೆ ದೇಶ ಅಭಿವೃದ್ದಿ ಹೊಂದುವುದು ಸಾಧ್ಯವಾ? ಖಂಡಿತಾ ಇಲ್ಲ, ಕೈಗಾರಿಕಾ ಕ್ಷೇತ್ರವನ್ನು ತಮ್ಮ ಹಿಡಿತದಲ್ಲಿ ಹೊಂದಿರುವ ಶೇ.3ರಷ್ಟು ಶ್ರೀಮಂತರು ಮಾತ್ರ ಇನ್ನೂ ಉದ್ಧಾರವಾಗುತ್ತಾರೆ. ಸಾಬೂನು, ಉಪ್ಪಿನಕಾಯಿ, ಟೊಮೊಟೋ ಗೊಜ್ಜು, ಗೊಜ್ಜವಲಕ್ಕಿ, ಹಲ್ಲುಜ್ಜುವ ಪೇಸ್ಟ್, ಹಾಲು,ಸಣ್ಣ ಪುಟ್ಟ ಔಷಧಗಳು, ಚಾಕಲೇಟ್,ಬಿಸ್ಕತ್ತು, ಚಟ್ನಿ, ಕಾಫಿ, ಜಾಮು, ಆಲೂಗಡ್ಡೆ ಚಿಪ್ಸ್ ,ಆಟದ ಸಾಮಾನುಗಳು. ಸಣ್ಣ ಪುಟ್ಟ ಒಳ ಉಡುಪುಗಳು, ಇವನ್ನು ತಯಾರಿಸಲೂ ನಮಗೆ ಯೋಗ್ಯತೆ ಇಲ್ಲವಾ? ನಮ್ಮದೇ ಬಂಡವಾಳದಿಂದ ಯಾವುದೇ ತಾಂತ್ರಿಕತೆ ಇಲ್ಲದೆ ನಮ್ಮದೇ ಸಂಪನ್ಮೂಲ ಬಳಸಿ ಫ್ರಾಂಚೈಸಿ ಅಥವಾ ಉಪಗುತ್ತಿಗೆಯ ಆಧಾರದ ಮೇಲೆ ಇಲ್ಲಿ ಬಂದು ದೋಚುವ ಬಹುರಾಷ್ಟ್ರೀಯ ಕಂಪನಿಗಳಿಗೆ ನಾವೇಕೆ ಮಣೆ ಹಾಕಬೇಕು ಎಂದು ಅವರು ಪ್ರಶ್ನಿಸುತ್ತಿದ್ದರು. ಬಾಬಾ ರಾಮ್‍ದೇವ್‍ರವರ ಸ್ವದೇಶೀ ಆಂದೋಲದನ ಮೂಲ ಪ್ರೇರಣೆಯಾಗಿದ್ದವರೇ ರಾಜೀವ್ ದೀಕ್ಷಿತ್.ಹಳೇ ತೆರಿಗೆ ಪದ್ಧತಿಯಿಂದ ಅಧಿಕಾರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.ಅದನ್ನು ಬದಲಿಸಬೇಕು. ಸ್ವಿಸ್ ಬ್ಯಾಂಕ್‍ನಲ್ಲಿನ ಹಣವನ್ನು ಮಟ್ಟುಗೋಲು ಹಾಕಿಕೊಂಡು ರಾಷ್ಟ್ರೀಯ ಸೊತ್ತು ಎಂದು ಘೋಷಿಸಬೇಕು ಎಂದು ಅವರು ಒತ್ತಾಯಿಸಿದ್ದರು.

ರಾಜೀವ್ ಗತಿಸಿ ಇಂದಿಗೆ 8 ವರ್ಷಗಳಾದವು. ವಿಪರ್ಯಾಸವೆಂದರೆ ರಾಜೀವ್ ತಾವು ಹುಟ್ಟಿದ ದಿನವೇ ( 30-11-1967-30-11-2010) ಛತ್ತೀಸ್‍ಘಡದ ಬಿಲಾಯ್‍ನಲ್ಲಿ ವಿಧಿವಶರಾದರು. ಬಹುರಾಷ್ಟ್ರೀಯ ಕಂಪನಿಗಳ ಹಾಗೂ ಅಂದಿನ ಯುಪಿಎ ಸರ್ಕಾರದ ಪಾಲಿಗೆ ಸಿಂಹಸ್ವಪ್ನವಾಗಿದ್ದ ರಾಜೀವ್ ದೀಕ್ಷಿತ್ ಸಾವು ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆ ಸತ್ಯಗಳು ಅವರೊಂದಿಗೇ ಇತಿಹಾಸ ಸೇರಿಬಿಟ್ಟವು. ನಾವೂ ಸಹ ಅವರೊಂದಿಗೆ ಸ್ವದೇಶಿ ಸಂಸ್ಕೃತಿ ಮತ್ತು ಚಿಂತನೆಗೆ ತಿಲಾಂಜಲಿ ಇತ್ತಿದ್ದೇವೆ.ಕಳೆದ ವರ್ಷ ನಮ್ಮೆಲ್ಲರಲ್ಲಿ ರಾಷ್ಟ್ರಪ್ರಜ್ಞೆ, ದೇಶಭಕ್ತಿ ಓತಪ್ರೋತವಾಗಿ ಜಾಗೃತಗೊಂಡಿತ್ತು. ಆಗ ಚೀನ ಡೊಕ್ಲಾಮ್ ಬಳಿ ಕಾಲು ಕೆರೆದು ಬುಸುಗುಡುತ್ತಾ ನಿಂತಿತ್ತು. ಆಗ ನಾವೆಲ್ಲಾ ವೀರರೂ, ಶೂರರೂ ಆಗಿ ಚೀನಾ ಕೃತ್ಯವನ್ನು ಕಟು ಮಾತುಗಳಲ್ಲಿ ಖಂಡಿಸಿ ತುಂಡು ತುಂಡು ಮಾಡಿದೆವು. ವ್ಯಾಟ್ಸಪ್‍ಗಳಲ್ಲಿ ದೇಶಭಕ್ತಿಯ ಸಂದೇಶಗಳು ಹರಿದಾಡಿದವು. ಯಾವುದು ದೇಶೀ, ಯಾವುದು ಚೀನಾ ಮೇಡ್ ಎಂಬ ಸರಕುಗಳ ಪಟ್ಟಿಯನ್ನೇ ಬಿಡುಗಡೆ ಮಾಡಿ ಜನರನ್ನು ಕೇವಲ ಸ್ವದೇಶಿ ನಿರ್ಮಿತ ವಸ್ತುಗಳನ್ನೇ ಕೊಳ್ಳುವಂತೆ ಆಗ್ರಹಿಸಲಾಯಿತು. ನಮ್ಮಲ್ಲಿನ ಸ್ವಾಭಿಮಾನ, ಆತ್ಮಾಭಿಮಾನದ ಸರ್ಪ ಬುಸ್ ಎಂದು ಬುಸುಗುಟ್ಟಿ ಹೆಡೆಯೆತ್ತಿ ನಿಂತಿತ್ತು. ನಮ್ಮ ದೇಶಭಕ್ತಿ ಸಂಘಟನೆಗಳು ಚೀನಾದ ಷಡ್ಯಂತ್ರ ಕುರಿತು ಉಗ್ರ ಪ್ರತಿಭಟನೆ ನಡೆಸಿದವು. ಚೀನಾದ ಸರಕುಗಳನ್ನು ಕೊಳ್ಳದಂತೆ, ಅಲ್ಲಿ ತಯಾರಾದ ವಸ್ತುಗಳನ್ನು ಬಹಿಷ್ಕರಿಸುವಂತೆ ಸಾಲು ಸಾಲು ಕರೆಗಳನ್ನು ನೀಡಲಾಯಿತು. ಮೋದಿ ಸರಕಾರ ಪ್ರತೀಕೂಲ ಪರಿಸ್ಥಿತಿಯಲ್ಲೂ ಚೀನಾ ವಿರುದ್ಧ ತನ್ನ ಬಿಗಿನಿಲುವು ಪ್ರದರ್ಶಿಸಿ ಚೀನಾವನ್ನು ಎಚ್ಚರಿಸಿದೆ. ಆದರೆ ನಾವು ಮಾಡಿದ್ದೇನು? ಚೀನಾ ಡೊಕ್ಲಾಮ್‍ನಿಂದ ಹಿಂದೆ ಸರಿಯುತ್ತಿದ್ದಂತೆ ನಾವೂ ನಮ್ಮ ಧೃಡ ಸಂಕಲ್ಪ, ನಿರ್ಧಾರಗಳಿಂದ ಸಲೀಸಾಗಿ ಹಿಂದೆ ಸರಿದುಬಿಟ್ಟೆವು. ನಮ್ಮ ಸ್ವದೇಶೀ ಸಂಕಲ್ಪಗಳೆಲ್ಲಾ ಗಾಳಿ ಹೋದ ಬಲೂನಿನಂತೆ ಠುಸ್ ಆದವು.ನಾವು ನಿರಾಳವಾಗಿ, ಯಾವುದೇ ಮುಜಗರ, ನಾಚಿಕೆ ಇಲ್ಲದೆ ಚೀನಾ ವಸ್ತುಗಳನ್ನೇ ಕೊಳ್ಳುವುದನ್ನು ಮುಂದುವರೆಸಿದ್ದೇವೆ. ಭಾರತದ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ 5 ವರ್ಷಗಳ ಹಿಂದೆ 2013ರಲ್ಲಿ ನಮ್ಮ ದೇಶೀಯ ಕಂಪನಿ ಮೈಕ್ರೊಮ್ಯಾಕ್ಸ್ ಫೋನುಗಳು ಸ್ಯಾಮ್‍ಸಂಗ್ ಮೊಬೈಲ್‍ಗಳ ಜೊತೆ ಸ್ಪರ್ಧೆ ನಡೆಸಿದ್ದವು. ಚೀನಾದ ಡೊಕ್ಲಮ್ ಕ್ಯಾತೆಯ ನಂತರವೂ ಸಹ ನಮ್ಮ ಜನ ಹೆಚ್ಚುಚ್ಚು ಚೀನಾ ಫೋನುಗಳ ದಾಸರಾಗಿದ್ದಾರೆ. ದೇಶೀಯ ಮೈಕ್ರೊಮ್ಯಾಕ್ಸ್ ಕಂಪನಿಯ ಸ್ಥಿತಿಯಂತೂ ಶೋಚನೀಯ ಎನಿಸಿದೆ. ಸ್ಯಾಮ್‍ಸಂಗ್ ನಂತರದ ಎರಡನೇ ಸ್ಥಾನದಲ್ಲಿದ್ದ ಮೈಕ್ರೋಮ್ಯಾಕ್ಸ್ ಫೋನುಗಳು ಮಾರುಕಟ್ಟೆಯಲ್ಲಿ ಸತತ ಕುಸಿತ ಕಂಡು 2016ರ ಕೊನೆಗೆ ಅತಿಹೆಚ್ಚು ಮಾರಾಟವಾಗುವ ಫೋನ್‍ಗಳ ಪಟ್ಟಿಯಿಂದ ಆಚೆ ಹೋಗಿದೆ. ಆಗ ಮಾರುಕಟ್ಟೆ ಪ್ರವೇಶಿಸಿದ ಜಿಯೋ ಸಹ ಶೇ.7ರ ಮಾರುಕಟ್ಟೆ ವಹಿವಾಟು ನಡೆಸಿತ್ತಾದರೂ ಮತ್ತೆ ಒಂದೇ ವರ್ಷದಲ್ಲಿ ಆಪೋ, ವಿವೋ, ಶಿಯೋಮಿ ಆಕ್ರಮಣಕ್ಕೆ ಶರಣಾಗಿದೆ. ಇನ್ನು ನಾವು ಅಮೇರಿಕಾದ ಇನ್‍ಫೋಕಸ್ ಎ2ಗೆ ಶರಣಾಗುವುದು ಬಾಕಿ ಇದೆ.

ಇಷ್ಟೇ ಅಲ್ಲ, ಶಾಲಾಚೀಲಗಳು, ಕಛೇರಿ ಉಪಕರಣಗಳು, ಪೆನ್‍ಗಳು, ಸಂಗೀತ ಸಾಧನಗಳು, ಗೃಹೋಪಯೋಗಿ ವಸ್ತುಗಳು, ಟೈರ್‍ಗಳು ಇವೆಲ್ಲಾ ಇನ್ನೂ ಚೀನೀಮಯವಾಗೇ ಉಳಿದಿವೆ. ಚಪ್ಪಲಿಯಿಂದ ಹಿಡಿದು,ಧರಿಸುವ ಬಟ್ಟೆ,ಕೈ ಗಡಿಯಾರ, ಮೊಬೈಲ್, ಕಣ್ಣಿಗೆ ಹಾಕುವ ಕನ್ನಡದವರೆಗೆ ಎಲ್ಲಾ ನಮಗೆ ವಿದೇಶೀ ವಸ್ತುಗಳೇ ಬೇಕು. ನಾವು ತಿನ್ನಲು ವಿದೇಶೀ ಪಿಜ್ಜಾ, ಬರ್ಗರ್ರೇ ಬೇಕು, ಕುಡಿಯಲು ಕೋಕೋಕೋಲಾ ಬೇಕು.ಮನರಂಜನೆಗೆ ವಿ-ಚಾನಲ್, ಎಂ-ಚಾನಲ್‍ಗಳೇ ಬೇಕು, ಮೋಜು ಮಸ್ತಿಗೆ ಪಾಶ್ಚಾತ್ಯ ರ್ಯಾಪ್, ರಾಕ್ ಸಂಗಿತ ಬೇಕು, ರಾಜೀವ್‍ರಂತಹ ದೇಶಭಕ್ತರ ಸೊಲ್ಲೂ ಎತ್ತದ ಮೆಕಾಲೆ ಸಿದ್ಧಾಂತಗಳ ಪ್ರಣೀತ ಶಿಕ್ಷಣವೇ ಬೇಕು, ಎಂಎನ್‍ಸಿಗಳಲ್ಲೇ ಉದ್ಯೋಗ ಬೇಕು,ಅವಕಾಶ ಸಿಕ್ಕಿದರೆ ಹೊರದೇಶಕ್ಕೆ ಹಾರಬೇಕು..ಇದು ಸಾಲದೆಂಬಂತೆ ನಮ್ಮ ಪರಂಪರೆಯನ್ನೇ ಜರಿಯುವ ಪರಕೀಯ ಪ್ರೇತಗಳನ್ನೂ ಕೆಲವರು ಆಹ್ವಾನಿಸಿಕೊಳ್ಳುತ್ತಾರೆ. ಇದು ನಮ್ಮ ಮನಸ್ಥಿತಿ. ಇಂದಿಗೂ ಭಾರತೀಯರಾದ ನಾವು ಗುಣಮಟ್ಟಕ್ಕಿಂತ ಹೆಚ್ಚಾಗಿ ಬೆಲೆ ಆಧರಿಸಿಯೇ ವಿದೇಶೀ ಉತ್ಪನ್ನಗಳಿಗೆ ಮಣೆ ಹಾಕುತ್ತಿರುವುದು ಕಡಿಮೆ ಆಗಿಲ್ಲ.ಮಂಗಳಕ್ಕೆ ಉಪಗ್ರಹ ಕಳಿಸುವ, ಚಂದ್ರಯಾನ ನಡೆಸುವ ನಮಗೆ ಚೀನಾಗೆ ಸಡ್ಡು ಹೊಡೆಯುವಂತೆ ಒಂದು ಸ್ಪರ್ಧಾತ್ಮಕ ಮೊಬೈಲ್ ಫೋನ್ ತಯಾರಿಸಲು ಯಾಕೆ ಆಗುತ್ತಿಲ್ಲ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ. ದೇಶಾಭಿಮಾನ, ರಾಷ್ಟ್ರಭಕ್ತಿ, ಇವೆಲ್ಲಾ ಸಂಚಾರಿ ಭಾವಗಳಾಗಿ ಮೈ ಮೇಲೆ ಬಂದು ಆರ್ಭಟಿಸಿ ಹೋಗುವ ಅವೇಶದ ದೆವ್ವಗಳಾಗಬಾರದು. ಅವು ಚಿರಸ್ಥಾಯೀ ಭಾವಗಳಾಗಿ ರಾಷ್ಟ್ರಪ್ರೇಮ, ಸ್ವದೇಶಿ ಜಾಗೃತಿಯ ಪ್ರೇರಕ ಶಕ್ತಿ, ಚೈತನ್ಯಗಳಾಗಿ ಉಳಿಯಬೇಕು. ಮೇಕ್ ಇನ್ ಇಂಡಿಯಾ, ನೋಟ್ಯಂತರ, ಜಿಎಸ್‍ಟಿ, ಚೀನಾ ಮೇಲೆ ವಹಿವಾಟು ನಿರ್ಬಂಧ ಹೇರುವ ಮೂಲಕ ಮೋದಿ ಸರ್ಕಾರ ರಾಜೀವ್ ದೀಕ್ಷಿತ್ ಅವರ ಹಲವು ಚಿಂತನೆಗಳನ್ನು ಅನುಷ್ಠಾನಕ್ಕೆ ತರುವ ಸಾರ್ಥಕ ಪ್ರಯತ್ನ ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಚೀನಾ ವಸ್ತುಗಳನ್ನು ನಿಷೇಧಿಸಿ ಗುಡಿ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಲು ಹೊರಟಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರೂ ಅಭಿನಂದನೀಯರು.

1 ಟಿಪ್ಪಣಿ Post a comment
  1. ಡಿಸೆ 2 2018

    Wonderful article sir.one should think.

    ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments