ವಿಷಯದ ವಿವರಗಳಿಗೆ ದಾಟಿರಿ

ಫೆಬ್ರವರಿ 4, 2019

5

ತೊತ್ತೋಚಾನ್ (ಪುಸ್ತಕ ಪರಿಚಯ)

‍ನಿಲುಮೆ ಮೂಲಕ

– ವಲವಿ ವಿಜಯಪುರ

scan0015“ಕನಸುಗಳನ್ನು ಕಾಣಬೇಕು. ಉನ್ನತೋನ್ನತವಾದ ಹಗಲು ಕನಸು ಕಾಣಿರಿ.”
ಇದು ಭಾರತದ ಮಾಜಿ ರಾಷ್ಟ್ರಪತಿ, ಕ್ಷಿಪಣಿ ಜನಕ ದಿ| ಶ್ರೀ ಅಬ್ದುಲ್ ಕಲಾಂ ಅವರ ಅಮೃತ ನುಡಿ.

ಹೌದು, ಕನಸು ಕಾಣಬೇಕು. ಉನ್ನತೋನ್ನತವಾದ ಕನಸನ್ನೇ ಕಾಣಬೇಕು. ಮತ್ತು ಅದನ್ನು ನನಸಾಗಿಸುವತ್ತ ಸತತ ಪ್ರಯತ್ನಿಸಬೇಕು. ಅಂಥ ಉನ್ನತ ಕನಸನ್ನು ಕಂಡು ಅದನ್ನು ನನಸಾಗಿಸಲು ಹಗಲಿರುಳು ಶ್ರಮಿಸಿದ, ಖ್ಯಾತ ಶಿಕ್ಷಣ ಪ್ರೇಮಿ, ಮಕ್ಕಳ ಪ್ರೇಮಿ, ಪ್ರಯೋಗಶೀಲ ವ್ಯಕ್ತಿತ್ವದ ಶ್ರೀ ಸೋಸಾಕು ಕೊಬಾಯಾಶಿ ಅವರ ಪ್ರಾಯೋಗಿಕ ಶಾಲೆ ತೊಮೆಯೆ ಗಾಕುಯೆನ್ ಹೇಗಿತ್ತು ಎಂದು ತಿಳಿಸುವ ಪ್ರಯತ್ನವನ್ನು ಆ ಶಾಲೆಯ ಹಾಗೂ ಕೊಬಾಯಾಶಿ ಅವರ ಪ್ರಯೋಗದ ನೇರ ಭಾಗೀದಾರಳಾದ ತೊಮೆಯೆ ಶಾಲೆಯ ಮಾಜಿ ವಿದ್ಯಾರ್ಥಿನಿ ಶ್ರೀಮತಿ ತೆತ್ಸುಕೋ ಕುರೊಯಾನಾಗಿ ಬರೆದ ಪುಸ್ತಕವೇ ಈ ‘ತೊತ್ತೋ ಚಾನ್’

ಸಾಹಿತ್ಯವೆಂದರೇನು ಎಂಬುದಕ್ಕೆ ಸಂಸ್ಕೃತದ ಖ್ಯಾತ ಲಕ್ಷಣಕಾರ ಆನಂದವರ್ಧನ ಒಂದೊಳ್ಳೆ ಮಾತನ್ನು ಹೇಳುತ್ತಾನೆ. ಅದೇನೆಂದರೆ “ಕಾಂತಾ ಸಮ್ಮಿತತಿ ಯೋಪದೇಶಯುಜೇ ಕಾವ್ಯಂ” ಕಾವ್ಯವೆಂದರೆ ಕಾಂತೆಯಂತೆ ಉಪದೇಶ ನೀಡುವದು ಎಂದರ್ಥ. ಸಾಹಿತ್ಯದಲ್ಲಿ ಮೂರು ವಿಧ. ಅವು ಪ್ರಭು ಸಮ್ಮಿತ, ಮಿತ್ರ ಸಮ್ಮಿತ, ಕಾಂತಾ ಸಮ್ಮಿತ ಎಂದು. ಪ್ರಭು ಸಮ್ಮಿತವು ಆಜ್ಞೆ ಮಾಡುತ್ತದೆ. ವೇದೋಪನಿಷತ್ತು ಈ ಸಾಲಿನಲ್ಲಿ ಬರುತ್ತವೆ. ಮಿತ್ರ ಸಮ್ಮಿತವು ನೀನು ಹೀಗೆ ಮಾಡಿದರೆ ಇಂಥ ಫಲ ಸಿಗುತ್ತದೆ ಎಂದು ಹೇಳುವಂಥವು. ಮಾಡುವದು ಬಿಡುವದು ನಿನ್ನಿಷ್ಟ ಎನ್ನುವಂಥವು. ಇವುಗಳಲ್ಲಿ ನಮ್ಮ ಪುರಾಣಗಳನ್ನು ಸೇರಿಸಬಹುದು. ಆದರೆ, ಕಾಂತಾಸಮ್ಮಿತವೆಂದರೆ ಹೇಳುವದನ್ನು ರಸವತ್ತಾಗಿ ಹಾವಭಾವಗಳೊಂದಿಗೆ ಹೇಳಿಯೂ ಆಗಿರಬೇಕು. ಹೇಳದಂತೆಯೂ ಇರಬೇಕು. ಜಾಣ ಗಂಡ ಮಾತ್ರ ಅರ್ಥ ಮಾಡಿಕೊಳ್ಳುವಂತೆ ಹೇಳುವ ಹೆಂಡತಿಯಂತೆ ಉಪದೇಶಿಸುವಂಥ ಸಾಹಿತ್ಯಗಳಿಗೆ ಕಾಂತಾ ಸಮ್ಮಿತ ಎನ್ನುತ್ತಾರೆ. ಕಾಂತಾ ಸಮ್ಮಿತದ ಸಾಹಿತ್ಯ ಹೆಚ್ಚು ಜನರನ್ನು ತಲುಪುತ್ತದೆ. ಹೆಚ್ಚಿನ ಪ್ರಭಾವ ಕೂಡಾ ಉಂಟುಮಾಡುತ್ತದೆ. ಅವುಗಳಲ್ಲಿ ನಮ್ಮ ಭಾರತೀಯರ ಮೇರು ಕಾವ್ಯಗಳಾದ ರಾಮಾಯಣ ಮಹಾಭಾರತ ಮುಂತಾದವುಗಳನ್ನು ಹೆಸರಿಸಬಹುದು. ಇದರ ಚರ್ಚೆಗೆ ಇದು ಜಾಗವಲ್ಲವಾದ್ದರಿಂದ ಹೆಚ್ಚು ವಿವರಿಸುವದಿಲ್ಲ.

ಪುಸ್ತಕ ಪರಿಚಯದ ಹೆಸರಲ್ಲಿ ಸಾಹಿತ್ಯದ ಕುರಿತಾದ ಚರ್ಚೆ ಏಕೆ ಬಂತೆಂದು ಆಶ್ಚರ್ಯವಾಯಿತೇ?! ಖಂಡಿತ ಈ ಪುಸ್ತಕಕ್ಕೂ ಕಾಂತಾಸಮ್ಮಿತಕ್ಕೂ ಸಂಬಂಧವಿದೆ. ಅದನ್ನು ಹೇಳಲೆಂದೇ ಈ ಪೀಠಿಕೆ ಹಾಕಿರುವೆ.

“ಶಿಕ್ಷಣದ ಬೇರು ಬಲು ಕಹಿ. ಹಣ್ಣು ಮಾತ್ರ ಬಲು ಸಿಹಿ.” ಎಂಬ ಗಾದೆಯೊಂದಿದೆ. ಈ ಗಾದೆಯಂತೆ ಶಿಕ್ಷಣ ಪಡೆಯುವದು ಶಿಕ್ಷೆ ಪಡೆಯುವಂತೆ ಪ್ರತೀ ವ್ಯಕ್ತಿಯ ಜೀವನದಲ್ಲಿ ಯಾತನಾದಾಯಕವಾದದ್ದೇ. ಶಿಕ್ಷಾ ಎಂಬುದು ಶಿಸ್ತು, ನಿಯಮ ಇತ್ಯಾದಿಗಳನ್ನು ಒಳಗೊಳ್ಳುವದರಿಂದ ಅದು ಸುಲಭ ಸಾಧ್ಯವಾಗಿ ಮಗುವಿಗೆ ಇಷ್ಟದ ಕೆಲಸವಾಗುವದಿಲ್ಲ. ಅದನ್ನು ಇಷ್ಟದ ಕೆಲಸವಾಗುವಂತೆ, ಮಗು ಬೇಸರದಿಂದ ಕಲಿಯದಂತೆ, ಕಲಿಕೆ ಸಂತಸದಾಯಕವಾಗುವಂತೆ ಕಲಿಸುವದೇ ನಮಗಿರುವ ಇವತ್ತಿನ ದೊಡ್ಡ ಸವಾಲಾಗಿದೆ.

ನಾವಿವತ್ತು ಮಗುವಿಗೆ ಕಲಿಯುತ್ತಿದ್ದೇನೆಂಬ ಅನುಭವ ಬಾರದಂತೆ ಆದರೆ ಕಲಿಕೆ ಆಗುವಂತೆ ಕಲಿಸಬೇಕಾಗಿದೆ. ಅಂದರೆ ಉಪದೇಶ ಕೇಳುತ್ತಿದ್ದೇವೆಂಬ ಭಾವ ಬಾರದಂತೆ ಉಪದೇಶಿಸುವ ‘ಕಾಂತಾಸಮ್ಮಿತ’ ಸಾಹಿತ್ಯದಂತೆ ನಮ್ಮ ಕಲಿಸುವಿಕೆ ಆಗಬೇಕಿದೆ. ಈ ರೀತಿ ಕಲಿತ, ಕಲಿಸಿದ ಕಲಿಕೆಯೇ ಹೆಚ್ಚು ಜನರನ್ನು ನಮ್ಮ ರಾಮಾಯಣ, ಭಾರತಗಳಂತೆ ತಲುಪುತ್ತದೆ. ಮತ್ತು ಹೆಚ್ಚು ಕಾಲ ಉಳಿಯುವ ಶಕ್ತಿಯನ್ನೂ ಹೊಂದಿರುತ್ತದೆ.

ಇಂಥ ಕಾಂತಾಸಮ್ಮಿತ ಸಾಹಿತ್ಯದಂತಿರುವ ಶಿಕ್ಷಣವನ್ನು ಯಾವ ರೀತಿ ಕೊಡಲು ಸಾಧ್ಯ ಎಂದು ಹಗಲಿರುಳು ಚಿಂತಿಸಿ ಪರಿಹಾರ ಕಂಡುಕೊಂಡು ಆ ಪರಿಹಾರಗಳ ಲಾಭ ನಷ್ಟಗಳನ್ನು ನೋಡಲು ಸ್ವತಃ ಪ್ರಯೋಗ ಕೈಗೊಂಡ ಖ್ಯಾತ ಮಕ್ಕಳ ಪ್ರೇಮಿ, ಶಿಕ್ಷಣ ತಜ್ಞ ಕೊಬಾಯಾಶಿಯವರ ಶಾಲೆಯ ವಿವರಗಳನ್ನು ಒಳಗೊಂಡಿದೆ ಇಡೀ ಪುಸ್ತಕ.

ಕೊಬಾಯಾಶಿಯವರ ಶಾಲೆ ಯಾವೆಲ್ಲ ರೀತಿಯಲ್ಲಿ ಭಿನ್ನವಾಗಿತ್ತು. ಹಾಗೂ ಮಕ್ಕಳಿಗೆ ಅದರಿಂದ ಯಾವ ಅನುಕೂಲತೆಗಳಾದವೆಂಬುದನ್ನು ನಾವು ಓದುವ ಜೊತೆಗೆ ಶಿಕ್ಷಕರಾದ ನಮ್ಮ ವರ್ತನೆಗಳು ಹೇಗಿರಬೇಕು? ಯಾವ ಶಿಕ್ಷಣದ ಅಗತ್ಯ ಮಕ್ಕಳಿಗೆ ಹೆಚ್ಚಾಗಿದೆ? ಶಾಲಾ ಕಟ್ಟಡಗಳು ಪಾಠ ಪ್ರವಚನಗಳು ಹೇಗಿರಬೇಕು? ಮಗುವಿನ ಸರ್ವಾಂಗೀಣ ಅಭಿವೃದ್ಧಿ ಸಂತಸದಾಯಕವಾಗಿಯೇ ನಡೆಸುವದು ಹೇಗೆ ಸಾಧ್ಯ ಎಂಬ ತಿಳುವಳಿಕೆಯನ್ನು ಪುಸ್ತಕ ಹೇಳುತ್ತದೆ. ಸಂಪೂರ್ಣವಾಗಿ ಮಗು ಕೇಂದ್ರಿತ ಶಿಕ್ಷಣ ಸಾಧ್ಯವಾಗಿಸುವ ಸಾಧ್ಯತೆಗಳನ್ನು ಕೋಬಾಯಾಶಿ ತಮ್ಮ ಪ್ರಯೋಗಗಳ ಮೂಲಕ ತೆರೆದಿಡುತ್ತಾರೆ. ಅವುಗಳಲ್ಲಿ ಕೆಲವನ್ನು ನಾನು ಸಂಕ್ಷಿಪ್ತವಾಗಿ ವಿವರಿಸುತ್ತೇನೆ.

ತೊತ್ತೊ ಚಾನ್ ಹುಡುಗಿಯನ್ನು (ಲೇಖಕಿಯನ್ನು) ಹಿಂದಿನ ಶಾಲೆಯಿಂದ ಹೊರಹಾಕಿರುತ್ತಾರೆ. ಕಾರಣವೆಂದರೆ ಅವಳ ವಿಪರೀತ ತುಂಟತನ. ಉತ್ಸಾಹದ ಬುಗ್ಗೆ ಅವಳು. ವಿಪರೀತ ಕುತೂಹಲದಿಂದ ಏನಾದರೂ ತುಂಟತನ ಮಾಡುತ್ತಲೇ ಇರುತ್ತಾಳೆ. ಇದರಿಂದ ಬೇರೆ ಮಕ್ಕಳೂ ಅವಳೊಂದಿಗೆ ಸೇರಿ ಕಲಿಕೆಯಲ್ಲಿ ಆಸಕ್ತಿ ತೋರುವದಿಲ್ಲವೆಂಬುದು ಶಿಕ್ಷಕರ ದೂರು. ಹೊಸ ಶಾಲೆಯಲ್ಲಾದರೂ ಇವಳಿಗೆ ಪ್ರವೇಶ ಸಿಗುತ್ತದಾ? ಎಂಬುದು ಅವಳಮ್ಮನ ಚಿಂತೆ. ಚಿಂತೆಯಲ್ಲೇ ‘ತೊಮೆಯೆ ಗಾಕುಯೆನ್’ ಶಾಲೆಗೆ ಮಗಳೊಂದಿಗೆ ಬರುತ್ತಾಳೆ. ಆದರೆ ಆ ಶಾಲೆ ಗೇಟಿನಿಂದಲೇ ತೊತ್ತೋಳಿಗೆ ಆಕರ್ಷಣೀಯವಾಗಿ ಬಿಡುತ್ತದೆ. ಏಕೆಂದರೆ ಆ ಶಾಲೆ ರೈಲು ಬಂಡಿಗಳಲ್ಲಿ ನಡೆಯುತ್ತಿರುತ್ತದೆ!! ರೈಲು ಬಂಡಿಗಳಲ್ಲಿ ಶಾಲೆಯಾ?!! ತೊತ್ತೋಳಿಗೆ ಆಶ್ಚರ್ಯ! ಕುತೂಹಲ, ಸಂತಸ ಎಲ್ಲವೂ ಮೇಳೈಸಿ ಅಮ್ಮನ ಕೈ ಬಿಡಿಸಿಕೊಂಡು ಶಾಲೆಯ ಕಡೆ ಓಡಿ ಹೋಗತೊಡಗುತ್ತಾಳೆ.

ಶಾಲಾ ಕಟ್ಟಡಗಳು ನೂರಕ್ಕೆ ತೊಂಬತ್ತೊಂಬತ್ತರಷ್ಟು ಶಿಶು ಸ್ನೇಹಿಯಾಗಿಲ್ಲವೆಂದೇ ಹೇಳಬೇಕು. ಯಾಕೆಂದರೆ ಶಾಲೆಗಳ ಹೊರಗೋಡೆಗಳ ಮೇಲೆ ತೆರೆದ ಖಡ್ಗಧಾರಿಯಾಗಿ ವೈರಿಗಳನ್ನು ಸದೆಬಡಿಯುವ ಸಮರಾಂಗಣ ವೇಷದಲ್ಲಿ ನಿಂತಿರುವ ಶಿವಾಜಿಯೋ, ಸುಭಾಸರೋ, ಚನ್ನಮ್ಮಾಜಿಯೋ ಕೆಂಡಾಮಂಡಲ ಕಣ್ಣುಗಳಿಂದ ನಿಂತ ಚಿತ್ರಗಳಿರುತ್ತವೆ. (ಈ ಮಹನೀಯರ ಕುರಿತು ನನಗೆ ಅಪಾರ ಗೌರವಾದರಗಳಿವೆ. ಪ್ರಾಥಃ ಸ್ಮರಣೀಯರಿವರು.) ಇವುಗಳನ್ನು ನೋಡಿ ಅದೇ ತಾನೆ ಅಕ್ಕರೆಯ ಅಮ್ಮನ ಮಡಿಲು ಬಿಟ್ಟು ಶಾಲೆಯ ಮೆಟ್ಟಿಲು ಏರುವ ಮಗು ಹೆದರುತ್ತದೆ. ಅದಕ್ಕೆ ಶಾಲೆಯೂ ತನ್ನ ಮನೆಯಂತೆಯೇ ಭಾಸವಾಗಬೇಕು. ಶಾಲೆ ನೋಡಿದರೆ ಮಗುವಿನ ಕಣ್ಣು ಅರಳಬೇಕು. ಅದಕ್ಕಾಗಿ ಶಾಲೆಗಳ ಹೊರಗೋಡೆಗಳ ಮೇಲೆ ಅಮ್ಮನ ಚಿತ್ರ, ಟಡ್ಡಿ ಬೇರ್ ಚಿತ್ರ, ಕಾರ್ಟೂನ್ಗಳು ದೊರೆಮಾನ್, ಬಾಲ ಹನುಮಾನ್, ಛೋಟಾಭೀಮ್, ಮಿ| ಬೀನ್‌ನಂಥ ಚಿತ್ರಗಳಿರಬೇಕು. ಶಾಲೆಯ ಒಳಗೋಡೆಗಳಲ್ಲಿ ದೊಡ್ಡತರಗತಿಗಳಲ್ಲಿ ಮಾತ್ರ ಶಿವಾಜಿ…. ಮುಂತಾದ ವೀರರ ಮಹನೀಯರ ಚಿತ್ರಗಳಿರಬೇಕು. ಹಾಗೇ ಶಾಲಾ ಕಟ್ಟಡಗಳು ಕನಿಷ್ಟ ಎಲ್ ಕೆ ಜಿ ಯಿಂದ ಮೂರನೇ ತರಗತಿವರೆಗಾದರೂ ರೈಲಿನಂತೆ, ವಿಮಾನದಂತೆ, ಕಾರ್ಟೂನ್ ಪಾತ್ರಗಳಂತೆ ಕಟ್ಟಿಸಬೇಕು. ಕೆಲವು ಕಡೆ ಇಂಥ ಪ್ರಯೋಗವನ್ನೂ ಮಾಡುತ್ತಿದ್ದಾರೆ. ವಾಟ್ಷಾಪ್‌ನಲ್ಲಿ ರೈಲಿನ ಬೋಗಿಗಳಂತೆ ವಿನ್ಯಾಸಗೊಳಿಸಿದ ಶಾಲೆಯ ಚಿತ್ರ ಬಂದಿತ್ತು. ಬಹುಶಃ ಅದಕ್ಕೆ ಈ ಪುಸ್ತಕದ ಪ್ರೇರಣಯೇ ಇರಬೇಕೆಂದು ನನ್ನ ಅನಿಸಿಕೆ.

ಕೊಬಾಯಾಶಿ ಈ ತೊತ್ತೋಳ ಮಾತುಗಳನ್ನು ನಾಲ್ಕು ಗಂಟೆ ಕೇಳಿದರಂತೆ!! ಇದು ಮಗುವಿಗೆ, ಮತ್ತು ಮಗುವಿನ ಭಾವನೆಗಳ ಅಭಿವ್ಯಕ್ತಿಗೆ ಕೊಬಾಯಾಶಿ ಕೊಡುತ್ತಿದ್ದ ಗೌರವವನ್ನು ತೋರಿಸುತ್ತದೆ. ನಾಲ್ಕು ಗಂಟೆಗಳ ಕಾಲ ಒಂದನೇ ತರಗತಿಯ ಮಗು ಮಾತನಾಡಬಲ್ಲದೆಂಬುದೇ ಒಂದು ಅದ್ಭುತ. ಮತ್ತು ಅದನ್ನು ನಾಲ್ಕು ಗಂಟೆ ಮಾತನಾಡಿಸಲು ಸಾಧ್ಯವಾಗಿಸಿದ್ದು ಕೊಬಾಯಾಶಿಯವರ ಅದ್ಭುತ ವ್ಯಕ್ತಿತ್ವದ ದರ್ಶನವನ್ನು ನಮಗೆ ಮಾಡಿಸುತ್ತದೆ. ಮಗುವಿನ ಸುಪ್ತ ಭಾವಗಳ ಅಭಿವ್ಯಕ್ತಿಸುವಿಕೆಯನ್ನು ಅನಾವರಣಗೊಳಿಸುವಿಕೆಯೂ ಶಿಕ್ಷಕನ ಕರ್ತವ್ಯವಾಗಬೇಕೆಂಬುದು ಕೊಬಾಯಾಶಿ ಬಯಕೆಯಾಗಿತ್ತು. ಅಂಥ ವಾತಾವರಣ ಅವರ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೂ ಅವರು ಒದಗಿಸಿದ್ದರು. ಸಾಯಂಕಾಲ ಎಲ್ಲಾ ಮಕ್ಕಳೂ ತಮ್ಮ ಭಾವಗಳನ್ನು ಹಂಚಿಕೊಳ್ಳುವಂಥ ವಾತವರಣ ಅವರು ನಿರ್ಮಿಸುತ್ತಿದ್ದರು. ಏನೂ ಗೊತ್ತಿರದಿದ್ದರೂ ಮಗು, ನಾನು ಎದ್ದೆ. ಸ್ನಾನ ಮಾಡಿದೆ. ಶಾಲೆಗೆ ಬಂದೆ ಇತ್ಯಾದಿಯಷ್ಟೇ ಆರಂಭದಲ್ಲಿ ನಾಚುತ್ತಾ ಭಯಪಡುತ್ತಾ ಹೇಳಿದರೂ ಕೊನೆಗೆ ಅದ್ಭುತವಾದ ಮಾತುಗಾರರಾಗುವದೂ ಇತ್ತು.

ಈ ಶಾಲೆಯಲ್ಲಿ ಮಕ್ಕಳನ್ನು ಕೇಳಿ ಕಲಿಸುವ ವಿಷಯಗಳನ್ನು ಆಯ್ಕೆ ಮಾಡುತ್ತಿದ್ದರು. ವೇಳಾಪಟ್ಟಿ ಇರಲಿಲ್ಲ. ಮಕ್ಕಳು ಯಾವುದನ್ನು ಕಲಿಯುತ್ತೇನೆನ್ನುವರೋ ಅದನ್ನೇ ಶಿಕ್ಷಕರು ಹೇಳಬೇಕಿತ್ತು. ಅಲ್ಲದೇ ಮಕ್ಕಳಿಗೆ ಸಾಧ್ಯವಿದ್ದಷ್ಟು ಹಳೆ ಬಟ್ಟೆ ತೊಡಿಸಿ ಕಳಿಸಲು ಕೊಬಾಯಾಶಿ ಹೇಳುತ್ತಿದ್ದರಂತೆ ಯಾಕೆಂದರೆ ಮಕ್ಕಳು ಬಟ್ಟೆ ಕೊಳೆ ಮಾಡಿಕೊಂಡರೆ ಹರಿದುಕೊಂಡರೆ ತಾಯಂದಿರು ಶಿಕ್ಷಿಸಬಾರದೆನ್ನುವದು ಕಾಳಜಿಯಾಗಿತ್ತು. ಮಕ್ಕಳು ತಮಗಿಷ್ಟ ಬಂದಂತೆ ಆಡಬಹುದಿತ್ತು.

ಮಕ್ಕಳು ಶಾರೀರಿಕವಾಗಿ ಸಧೃಢರಾಗಲು ವ್ಯಾಯಾಮ ಅತೀ ಅಗತ್ಯ. ಆದರೆ ವ್ಯಾಯಾಮ ಶಿಸ್ತಿನ ಚಟುವಟಿಕೆಯಾದ್ದರಿಂದ ಮಕ್ಕಳು ಸಂತಸದಿಂದ ಪಾಲ್ಗೊಳ್ಳದೇ ಕಾಟಾಚಾರಕ್ಕೆ ಪಾಲ್ಗೊಳ್ಳುವರು. ಹಾಗಾದರೆ ಮಕ್ಕಳು ಅಸಕ್ತಿಯಿಂದ ಪಾಲ್ಗೊಳ್ಳಲು ಸಂತಸದಿಂದ ವ್ಯಾಯಾಮ ಮಾಡಲು ಏನು ಮಾಡಬೇಕೆಂದು ಚಿಂತಿಸಿ ಸಂಗೀತದ ತಾಳಗಳೊಂದಿಗೆ ವ್ಯಾಯಾಮ ಮಾಡುವದನ್ನು ಪ್ರಥಮವಾಗಿ ರೂಢಿಗೆ ತಂದವರು ಕೋಬಾಯಾಶಿ ಎಂದು ಲೇಖಕಿ ಹೇಳುತ್ತಾರೆ.

ಕ್ರೀಡೋತ್ಸವಗಳನ್ನು ಕೂಡಾ ವಿಶೇಷವಾಗಿ ಈ ಶಾಲೆಯಲ್ಲಿ ಆಯೋಜಿಸುತ್ತಿದ್ದರಂತೆ. ಕೇವಲ ಶಕ್ತಿವಂತರೆ ಸ್ಪರ್ಧೆ ಗೆಲ್ಲುವಂತಾಗದೇ ಶಕ್ತಿ ಯುಕ್ತಿ ಮೇಳೈಸಿದವರು ಸ್ಪರ್ಧೆ ಗೆಲ್ಲುವಂತೆ ಸ್ಪರ್ಧೆಗಳನ್ನೇರ್ಪಡಿಸುತ್ತಿದ್ದರಂತೆ. ದೊಡ್ಡ ಬಟ್ಟೆಯಿಂದ ಶಾರ್ಕ್ ಮೀನು ತಯಾರಿಸಿ ಅದರ ಬಾಲದಲ್ಲಿ ಹಾದು ಬಾಯಲ್ಲಿ ಹೊರಗೆ ಬರಬೇಕು. ಆದರೆ ಕೆಲವು ಸಲ ಸರಿಯಾಗಿ ಗುರುತಿಸದ ಮಕ್ಕಳು ಬಾಲದಲ್ಲೇ ಪುನಃ ಹೊರ ಬರುತ್ತಿದ್ದಂತೆ. ಹಾಗೇ ಅಮ್ಮನನ್ನು ಗುರುತಿಸುವ ಸ್ಪರ್ಧೆ, ಹೀಗೆ ಎಲ್ಲವೂ ವಿಭಿನ್ನ ವಿನೂತನವಾಗಿದ್ದು ಅಂಗವಿಕಲ ಮಕ್ಕಳೂ ಕೂಡಾ ಭಾಗವಹಿಸಿ ಬಹುಮಾನ ಪಡೆಯುವಂತಿರುತ್ತಿದ್ದವಂತೆ.

ಹ್ಞಾ ! ಅಂಗವಿಕಲ ಮಕ್ಕಳೆಂದಾಗ ಒಂದು ಪ್ರಸಂಗ ನೆನಪಾಯಿತು. ತಾಕಾಹಾಶಿ ಎಂಬ ಬಾಲಕನಿಗೆ ಬೆಳವಣಿಗೆ ನಿಂತುಹೋಗಿರುತ್ತದೆ. ಒಂದು ದಿನ ಶಿಕ್ಷಕಿ ಮಂಗನಿಂದ ಮಾನವ ಪಾಠ ಮಾಡುವಾಗ ಅಚಾನಕ್ಕಾಗಿ ತಾಕಾಹಾಶಿಗೆ ನಿನಗೆ ಬಾಲ ಇದೆಯೇನೋ ಎಂದು ಕೇಳಿದ್ದನ್ನು ಕೋಬಾಯಾಶಿ ಕೇಳಿಸಿಕೊಂಡು ಆ ಶಿಕ್ಷಕಿಯನ್ನು ಒಬ್ಬಳನ್ನೇ ಅಡುಗೆ ಮನೆಗೆ ಕರೆಸಿಕೊಂಡು ಕೋಪದಿಂದ ತಾಕಾಹಾಶಿ ಬೆಳವಣಿಗೆ ನಿಂತ ಮಗು, ಅವನನ್ನು ನೀವು ಹಾಗೆ ಕೇಳಿದರೆ ಅವನಿಗೆ ನೋವಾಗುತ್ತದೆಂದು ಗದರಿಸಿದರಂತೆ. ಇಲ್ಲಿ ಅಂಗವಿಕಲ ಮಕ್ಕಳ ಮಾನಸಿಕ ನೋವಿಗೆ ಅವರು ಎಷ್ಟು ನೊಂದುಕೊಳ್ಳುತ್ತಿದ್ದರೆಂಬುದೂ ಹಾಗೂ ವಿಕಲಾಂಗರಿಗೆ ವಿಕಲತೆ ನೋವು ಭಾದಿಸದಂತೆ ಹೇಗೆ ವರ್ತಿಸಬೇಕೆಂಬುದೂ ಕೋಬಾಯಾಶಿಯವರ ಶಾಲೆಯಿಂದ ನಾವು ಕಲಿಯುತ್ತೇವೆ. ಹಾಗೇ ಶಿಕ್ಷಕರನ್ನು ಎಲ್ಲರೆದುರು, ಅದರಲ್ಲೂ ಮಕ್ಕಳೆದುರು ಬೈಯ್ಯಬಾರದೆನ್ನುವ ಕಾಳಜಿ ಕೂಡಾ ಎದ್ದು ಕಾಣುತ್ತದೆ.

ಶಿಕ್ಷಕರು ಯಾರೂ ಆಗಬಹುದಿತ್ತು, ಈ ಶಾಲೆಯಲ್ಲಿ. ಒಂದು ದಿನ ರೈತನೊಬ್ಬನಿಂದ ಮಕ್ಕಳಿಗೆ ಪಾಠ ಹೇಳಿಸುತ್ತಾರೆ. ಆರನೇ ತರಗತಿಯ ಕನ್ನಡ ಪುಸ್ತಕದಲ್ಲೂ ಇಂಥದ್ದೇ ಪಾಠವಿದೆ. ಮಕ್ಕಳ ಚಟುವಟಿಕೆಗಳಿಗೆ ಮತ್ತು ಸರ್ವಾಂಗೀಣ ಸುಪ್ತಚೇತನದ ಅನಾವರಣಕ್ಕೆ ಈ ಶಾಲೆ ಬಹಳ ಮಹತ್ವ ಕೊಡುತ್ತಿತ್ತು. ಮಕ್ಕಳು ಒಂದು ದಿನ ಬಯಲಲ್ಲಿ ತಾವೇ ಅಡಿಗೆ ಮಾಡಿ ಉಣ್ಣುತ್ತಾರೆ. ತಾವು ಮಾಡಿದ್ದು ಅವರಿಗೆ ಹೆಚ್ಚು ಖುಷಿ ಕೊಡುತ್ತದೆ.

ಮಕ್ಕಳಿಗೆ ಸಮತೋಲಿತ ಆಹಾರ ತಿನ್ನಿಸಿ ಎಂದು ಹೇಳದೇ “ಸ್ವಲ್ಪ ನೆಲದ, ಸ್ವಲ್ಪ ಜಲದ ಆಹಾರ” ಕೊಡಿ ಎನ್ನುತ್ತಿದ್ದರು. ಮಕ್ಕಳ ಬುತ್ತಿಯನ್ನೂ ಪರೀಕ್ಷಿಸಿ ಅವರಿಂದಲೇ ನೆಲದ ಜಲದ ಆಹಾರ ವಿಂಗಡಿಸಲು ಹೇಳುತ್ತಿದ್ದರು. ಹೀಗೆ ಕಲಿಯುತ್ತಿದ್ದೇನೆಂಬ ಅನುಭವ ಬರದಂತೆ ಸಂತಸದಾಯಕವಾಗಿ ಕಲಿಸುತ್ತಿದ್ದರು. ಸಸ್ಯಗಳು, ಭಾಗಗಳು, ಹೂಗಳು, ಹಣ್ಣುಗಳು ಇವನ್ನೆಲ್ಲಾ ಆಯಾ ಪ್ರದೇಶಕ್ಕೇ ಹೋಗಿ ತೋರಿಸಿ ಕಲಿಸಲಾಗುತ್ತಿತ್ತು. ವಾಕಿಂಗ್ ಹೋಗೋಣವಾ ಎಂದು ಹೊರಟ ಶಿಕ್ಷಕಿ ಸಾಸಿವೆ ಗಿಡಗಳತ್ತ ಕರೆದೊಯ್ದು ಪರಾಗಸ್ಪರ್ಶ ಇತ್ಯಾದಿ ಕುರಿತು ಹೇಳುತ್ತಾಳೆ. ಹೀಗೆ ಶಿಕ್ಷಣ ಶಿಕ್ಷೆಯಾಗದೇ ಸಂತಸದಾಯಕವಾಗಿತ್ತು.

ಒಟ್ಟಾರೆಯಾಗಿ ಹೇಳಬೇಕೆಂದರೆ ತುಂಟಿಯಾಗಿ ‘ಕೆಟ್ಟ ಹುಡುಗಿ’ ಎಂಬ ಕೆಟ್ಟ ಬಿರುದು ಪಡೆದ ತೊತ್ತೋ ಚಾನ್ ಈ ಶಾಲೆಯ ದೆಸೆಯಿಂದಾಗಿ ‘ಒಳ್ಳೆಯ ಹುಡುಗಿ’ ಯಾಗಿ ಪರಿವರ್ತನೆಗೊಂಡ ಬಗೆಯನ್ನು ಪುಸ್ತಕ ಬಿಚ್ಚಿಡುತ್ತದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅರಳಲು ಸಮಾಜಯೋಗ್ಯವಾದ ವ್ಯಕ್ತಿಯಾಗಿ ಒಬ್ಬಾಕೆ ಬೆಳೆಯಲು ಶಿಕ್ಷಕನೆಷ್ಟು ಕಾರಣೀಕರ್ತನೆಂಬುದನ್ನು ಓದುಗನಿಗೆ ಮನವರಿಕೆ ಮಾಡಿಕೊಡುತ್ತದೆ ಈ ಪುಸ್ತಕ. ಮುಖಪುಟದ ಚಿತ್ರವೂ ಯೋಗ್ಯವಾಗಿದೆ. ಮೊದಲ ಶಾಲೆಯಲ್ಲಿ ಬಣ್ಣಗಳಿಲ್ಲದೇ ಹಿಮದಲ್ಲಿ ಮರಗಟ್ಟಿದಂತಿರುವ ಹುಡುಗಿ ನಂತರದ ಶಾಲೆಯಲ್ಲಿ ಬಣ್ಣವಾಗಿ ಬದಲಾವಣೆಗೊಂಡ ಬಗೆಯನ್ನು ಚಿತ್ರದಲ್ಲೇ ಎತ್ತಿ ತೋರಿಸಲಾಗಿದೆ.

ಮುಗಿಸುವ ಮುನ್ನ:
ಇಷ್ಟೆಲ್ಲ ಶಿಕ್ಷಣ ಸುಧಾರಕರು ಬಂದರೂ ಮಗು ಕೇಂದ್ರಿತ ಶಿಕ್ಷಣ ಸಾಧ್ಯವಾಗಿದೆಯೇ ಇಲ್ಲವೇ ಇಲ್ಲ. ಬೆಳಿಗ್ಗೆ 5 ಗಂಟೆಗೆ ಮಗು ಏಳಬೇಕು. ಚಳಿ ಎಂದು ಮಲಗಿದರೆ ಅಮ್ಮ ಬಡಿದೆಬ್ಬಿಸುತ್ತಾಳೆ. ಚಳಿಯಲ್ಲೇ ಟ್ಯೂಷನ್ ಹೋಗಬೇಕು. ಬಂದು ತಿಂಡಿ ತಿನ್ನುವಷ್ಟರಲ್ಲಿ ಬಸ್ಸಿನ ಹಾರ್ನ್ ಕೇಳಿಸುತ್ತದೆ. ಶಾಲೆಗೆ ಹೋದರೆ ಅದೇ ಅರ್ಥವಾಗದ ಇಂಗ್ಲೀಷು, ಶಿಸ್ತು, ಮತ್ತದೇ ಕೊರೆತ, ಮನೆಗೆ ಬಂದರೆ ಮತ್ತೆ ಟ್ಯೂಷನ್, ಹೋಂ ವರ್ಕ್, ಮಲಗು. ಮತ್ತೆ ಮರುದಿನ ಅದೇ ದಿನಚರಿ. ಇದು ನಗರದ ಮಕ್ಕಳ ಕತೆಯಾದರೆ ಹಳ್ಳಿಗಳದೂ ಇದಕ್ಕಿಂತ ಭಿನ್ನವಿಲ್ಲ. ಮನೆಯ ಎಲ್ಲಾ ಕೆಲಸ ಮಾಡಿ ಮಕ್ಕಳು ಕಲಿಯಬೇಕು. ಹೀಗೆ ಒತ್ತಡದ ಬದುಕು ಮಗುವಿನ ಬಾಲ್ಯ ಆಟ, ಮನರಂಜನೆ ಗೆಳೆಯರು, ಬಂಧುಗಳನ್ನು ಕಸಿಯುತ್ತದೆ. ಎಂದು ಹೇಳುತ್ತಾ ಶ್ರೀಮತಿ ವೈದೇಹಿ ಅವರ ಕಾವ್ಯದ ಕೆಲ ಸಾಲುಗಳನ್ನು ಹೇಳುತ್ತಿದ್ದೇನೆ.

ಸರಪಳಿ ಇಲ್ಲದ ಬಂಧಿ ಈ ಮಗು
ಬಂಧಿಸಿದ ಕೈಗಳನು ಕಾಣೆ.
ಯಾರಿಲ್ಲದವರಿಲ್ಲ ಈ ಪುಟ್ಟ ಹುಡುಗ
ನಾವಿಲ್ಲವೇ ಇವನ ಸುತ್ತಮುತ್ತ??
ಚುಮು ನಸುಕಿನ್ನೂ, ಹೊತ್ತುಅರಳುವ ಮುನ್ನ
ಎದ್ದು ಬರುವನು ವೃದ್ಧ ಮಾತೆಯಂತೆ.
ತೆರೆದ ಬಾಗಿಲ ಬೀಗ ಒಡೆದು ಒಳ ನುಗ್ಗಿ
ಮಾಡಲೊಲ್ಲೆವೋ ಯಾಕೆ ಬಂಧ ಮುಕ್ತ ??

ಇವತ್ತಿನ ಮಗುವಿನ ಬದುಕಿನ ಕನ್ನಡಿ ಈ ಕವನ. ನಿಜಕ್ಕೂ ಮಗುವಿನ ಬಾಲ್ಯವನ್ನು ಸಮಾಜ ಕಸಿದುಕೊಂಡಿದೆ. ಸೋಲಿಗೆ ಹೆದರದಂತೆ ಮಗುವನ್ನು ಬೆಳೆಸುತ್ತಿಲ್ಲ ನಾವು. ಸಣ್ಣ ಆಘಾತಕ್ಕೂ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿವೆ ಮಕ್ಕಳು. ಇಂಥ ಪರಿಸ್ಥಿತಿಯಲ್ಲಿ ಈ ಪುಸ್ತಕದ ಕೆಲವಾದರೂ ಅಂಶಗಳನ್ನು ಶಿಕ್ಷಕ ಮತ್ತು ಪಾಲಕರು ಅನುಸರಿಸಿದರೆ ಬಹುಶಃ ಮಗುವಿನ ಬವಣೆ ತಪ್ಪೀತು. ಶ್ರೀ ಕೋಬಾಯಾಶೀ ಅವರ ಆತ್ಮಕ್ಕೆ ಕೊಂಚ ನೆಮ್ಮದಿ ಸಿಕ್ಕೀತೇನೋ.

ಈ ಕಂದವ್ವಗಳ ಕನಸುಗಳಿಗೆ ಕಿಡಿ ಸಿಡಿಸಬೇಡಿ. ನಗೆಬಾಡದಂತೆ ಕಾಯೆ ಮಾಸ್ತರವ್ವ/ಣ್ಣ ದಯವಿರಲೇ ಕೈ ಮುಗಿವೆ.

5 ಟಿಪ್ಪಣಿಗಳು Post a comment
 1. ಅರುಣಾ
  ಫೆಬ್ರ 4 2019

  Thank u for giving such a wonderful information…
  Definitely I’ll follow it…
  And I’ll read this complet book..
  ಧನ್ಯವಾದ

  ಉತ್ತರ
  • ವಲವಿ
   ಫೆಬ್ರ 4 2019

   ಧನ್ಯವಾದಗಳು ಮೆಡಂ

   ಉತ್ತರ
 2. Sudarshan Rao
  ಫೆಬ್ರ 5 2019

  ಸಕಾಲಿಕವಾದ,ಉಪಯುಕ್ತ ಚಿಂತನಾಶೀಲ ಬರಹ. ಧನ್ಯವಾದಗಳು

  ಉತ್ತರ
  • ವಲವಿ
   ಫೆಬ್ರ 7 2019

   ಸ್ಪಂದನೆಗೆ ಧನ್ಯವಾದಗಳು ಸರ್

   ಉತ್ತರ
 3. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments