ವಿಷಯದ ವಿವರಗಳಿಗೆ ದಾಟಿರಿ

ಏಪ್ರಿಲ್ 17, 2019

3

“ರೋಟಿ ಕಪಡಾ ಔರ್ ಮಕಾನ್ ನಿಂದ ಹೊಸ ಆಶೋತ್ತರದತ್ತ ಯುವ ಸಮೂಹ”

‍ನಿಲುಮೆ ಮೂಲಕ

–  ಪ್ರೊ. ಪುನೀತ್‌ರಾಜ್‌ ಕೆ. ಎನ್
ಜೈನ್‌ ಯೂನಿವರ್ಸಿಟಿ

Modiandthemillenial1ವಿಶ್ವದ ಐದನೇ ಒಂದರಷ್ಟು ಯುವಜನರು ಭಾರತದಲ್ಲಿದ್ದಾರೆ. ದೇಶದ ಅರ್ಧದಷ್ಟು ಜನರ ವಯೋಮಾನ 25 ವರ್ಷಕ್ಕಿಂತ ಕಡಿಮೆ ಇದೆ. ದೇಶ ಮುನ್ನಡೆ ಸಾಧಿಸಬೇಕು ಎಂದರೆ ಈ ಯುವಜನರ ಆಶೋತ್ತರಗಳನ್ನು ಈಡೇರಿಸುವುದು ಬಹಳ ಮುಖ್ಯವಾದ ಸಂಗತಿ. ಕೈಬೆರಳ ತುದಿಯಲ್ಲಿ ಸಿಗುತ್ತಿರುವ ತಂತ್ರಜ್ಞಾನದ ಪರಿಣಾಮವಾಗಿ ಯುವಜನರ ಆಶೋತ್ತರಗಳಲ್ಲಿ ಗಣನೀಯ ಬದಲಾವಣೆ ಆಗಿರುವುದು ಗೋಚರಿಸುತ್ತದೆ. ವಿಶ್ವಾದಾದ್ಯಂತ ಏನಾಗುತ್ತಿದೆ ಎಂಬುದನ್ನು ಅರಿಯುವುದರ ಮೂಲಕ ಜೀವನದ ಬಗ್ಗೆ ತಮ್ಮದೇ ಆದ ವಿಶ್ವನೋಟವನ್ನು ಬೆಳೆಸಿಕೊಳ್ಳಲು ತಂತ್ರಜ್ಞಾನ ಸಹಕರಿಸುತ್ತ್ತಿದೆ. ಇತ್ತೀಚಿನ ವರ್ಷಗಳಲ್ಲಿ “ಸಫಲತೆ” ಎಂಬ ಅಂಶವೇ ಸಾಕಷ್ಟು ಬದಲಾವಣೆ ಕಂಡಿರುವುದನ್ನು ನಾವು ನೋಡಬಹುದು. ಇಂದಿನ ಯುವಕರು ಧೈರ್ಯಶಾಲಿಗಳು, ನಿರ್ಧಾರ ಕೈಗೊಳ್ಳಲು ಹಿಂಜರಿಯದ, ಖಂಡಿಸುವ, ಮುಕ್ತವಾಗಿ ಟೀಕಿಸುವ, ತಮಗೆ ಯಾವುದು ಉತ್ತಮ ಎಂಬುದನ್ನು ಅರಿಯುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ 20 ವರ್ಷಗಳ ಮುನ್ನ ಪರಿಸ್ಥಿತಿ ಹೀಗೆ ಇರಲಿಲ್ಲ. ಅದು ಐಐಟಿ/ಐಐಎಂಗಳಿಂದ ಪದವಿ ಪಡೆಯುವುದು, ಅಧಿಕಾರಿಯಾಗಿ ನೇಮಕವಾಗುವುದು, ಉತ್ತಮ ಸಂಬಳ ಹೊಂದಿರುವ ಸುರಕ್ಷಿತ ಕೆಲಸ ಅರಸುವುದು, ವಿದೇಶಗಳಲ್ಲಿರಬಹುದಾದ ಕೆಲಸದ ಅವಕಾಶಗಳತ್ತ ಆಕರ್ಷಣೆಗಳೇ ಸಫಲತೆಗೆ ಮಾನದಂಡವಾಗಿದ್ದವು. ಇದಕ್ಕೆ ತದ್ವಿರುದ್ಧವಾಗಿ, ಕುಟುಂಬ ಆಡಳಿತಕ್ಕೆ ಸಮಾನವಾಗಿದ್ದ ಹಾಗೂ ಸಫಲತೆಯ ಪ್ರಮಾಣ ಕಡಿಮೆಯಿದ್ದ ಕ್ರೀಡೆ, ಸಿನಿಮಾ ಹಾಗೂ ರಾಜಕೀಯ ಕ್ಷೇತ್ರಗಳು ಬಹುತೇಕಯುವಕ/ಯುವತಿಯರ ಆಯ್ಕೆಯೇ ಆಗುತ್ತಿರಲಿಲ್ಲ. ಕ್ರೀಡಾತಾರೆಯ ಪುತ್ರನೊಬ್ಬ ತನ್ನ ಕ್ರೀಡಾ ಸಾಮರ್ಥ್ಯಕ್ಕಿಂತಲೂ ತನ್ನ ತಂದೆಯ ಪ್ರಭಾವದ ಕಾರಣಕ್ಕೆ ಕ್ರೀಡಾಪಟುವಾಗುವ ಅವಕಾಶ ಹೊಂದಿರುತ್ತಿದ್ದ. ಸಿನಿಮಾತಾರೆಯ ಪುತ್ರನನ್ನು ತನ್ನ ಪ್ರಭಾವದ ಕಾರಣದಿಂದಲೇ ಬೆಳ್ಳಿತೆರೆಗೆ ಕರೆತರುವ ಹಾಗೂ ರಾಜಕಾರಣಿಯ ಪ್ರಭಾವದಿಂದಲೇ ತನ್ನ ಪುತ್ರನನ್ನು ರಾಜಕೀಯಕ್ಕೆ ಕರೆತರುತ್ತಿದ್ದರು. ವಿಫಲವಾಗುವ ಹಾಗೂ ತಿರಸ್ಕಾರಕ್ಕೆ ಒಳಗಾಗುವ ಅಪಾಯಕ್ಕೆ ಹೆದರುತ್ತಿದ್ದ ಬಹುಪಾಲು ಯುವಕರು ಈ ಕ್ಷೇತ್ರಗಳಿಂದ ದೂರವೇ ಉಳಿಯುತ್ತಿದ್ದರು. ನಂತರದ ದಿನಗಳಲ್ಲಿ, ಅಷ್ಟೇನೂ ಉತ್ಸಾಹದಿಂದ ಸ್ವಾಗತಿಸದ ಪರಿಸ್ಥಿತಿ ಬಂದಿತು. ಘಟಾನುಘಟಿಗಳನ್ನು ದಾಟಿ ಈ ಬಾಗಿಲುಗಳನ್ನು ದಾಟಿ ಒಳಹೋಗುವುದು ಅಸಾಧ್ಯ ಎಂಬಷ್ಟೇ ಕಠಿಣ ಕೆಲಸವಾಗಿತ್ತು. ಈ ಪ್ರವಾಹದ ವಿರುದ್ಧ ಈಜಿ ದಡ ಸೇರಿದವರು ಬೆರಳೆಣಿಕೆ ಮಂದಿ ಮಾತ್ರ. ಶಾರೂಖ್‍ಖಾನ್, ಅಕ್ಷಯಕುಮಾರ್‌ನಂತಹ ಕೆಲ ಸಿನಿಮಾ ಸ್ಟಾರ್‍ಗಳು ಹಾಗೂ ಕೆಲವೇ ಕ್ರೀಡಾಪಟುಗಳು ಮಾತ್ರವೇ ಎಲ್ಲ ಅಡೆತಡೆಗಳನ್ನು ದಾಟಿ ಸಫಲರಾಗಲು ಸಾಧ್ಯವಾಯಿತೇ ಹೊರತು ಬಹುತೇಕ ಯುವಕರು ಇದು ತಮ್ಮ ಕೈಲಾಗುವ ಕೆಲಸವಲ್ಲ ಎಂದುಕೊಂಡು ಈ ಕ್ಷೇತ್ರಗಳಿಂದ ದೂರವುಳಿಯುತ್ತಿದ್ದರು.

ವ್ಯಾಪಾರ ಹಾಗೂ ಉದ್ಯಮ ಕ್ಷೇತ್ರಗಳೂ ಕೂಡಾ ಇದಕ್ಕೆ ಭಿನ್ನವಾಗಿರಲಿಲ್ಲ. ಕುಟುಂಬ ಉದ್ಯಮವನ್ನು ಮುಂದುವರಿಸಿಕೊಂಡು ಬರುವವರ ಬಳಿಯಷ್ಟೇ ಹಣವಿರುತ್ತಿತ್ತು, ಅವರಷ್ಟೇ ಮತ್ತೆ ಉದ್ಯಮ ಆರಂಭಿಸುತ್ತಿದ್ದರು. ರೋಟಿ-ಕಪಡಾ ಘೋಷಣೆಗೆ ಅನುಗುಣವಾಗಿ ಇತರೆ ಯುವಕರು ಕೇವಲ ಉದ್ಯೋಗಾಕಾಂಕ್ಷಿಗಳಾಗೇ ಇರುತ್ತಿದ್ದರೇ ಹೊರತು ಉದ್ಯಮಿಗಳಾಗುವ ಧೈರ್ಯ ತೋರಿಸುತಿರಲಿಲ್ಲ ಮತ್ತು ಅದರಿಂದಾಗುವ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಇಚ್ಛಿಸುತ್ತಿರಲಿಲ್ಲ. ಕುಟುಂಬಗಳಲ್ಲೂ ಸಹ ಉದ್ಯಮವನ್ನು ಆರಂಭಿಸಲು ಉತ್ತೇಜನ ನೀಡುತ್ತಿರಲಿಲ್ಲ. ತಮ್ಮ ಮಗಳಿಗೆ ವರ ಹುಡುಕುವಾಗಲಂತೂ ಯುವ ಉದ್ಯಮಿಗಳು ಕೊನೆಯ ಆಯ್ಕೆಯಾಗುತ್ತಿದ್ದರು ಮತ್ತು ಕೆಲಸದಲ್ಲಿದ್ದವರಿಗೆ (ಸರ್ಕಾರಿ) ಹೆಚ್ಚಿನ ಬೇಡಿಕೆಇರುತ್ತಿತ್ತು.

ಇಂದಿನ ಕಾಲಘಟ್ಟದಲ್ಲಿ ಪರಿಸ್ಥಿತಿ ಬದಲಾಗಿದ್ದು, ಕುಟುಂಬದ ಹಿನ್ನೆಲೆಗಿಂತಲೂ ಸಾಧನೆಯನ್ನೇ ಸಫಲತೆಯ ಮಾನದಂಡವಾಗಿ ಪರಿಗಣಿಸಲಾಗುತ್ತಿದೆ. ಕ್ರಿಕೆಟಿಗರಾದ ಮಹೇಂದ್ರಸಿಂಗ್ ಧೋನಿ, ವಿರಾಟ್‍ಕೊಹ್ಲಿ, ಬ್ಯಾಡ್ಮಿಂಟನ್‍ ಆಟಗಾರ್ತಿ ಪಿ.ವಿ.ಸಿಂಧು, ಪುಟ್ಬಾಲ್‍ ಆಟಗಾರ ಸುನೀಲ್‍ಚೆಟ್ರಿ ಮುಂತಾದವರು ತಮ್ಮ ಕಠಿಣ ಪರಿಶ್ರಮದಿಂದ ಮೇಲೆ ಬಂದು ಯಶಸ್ವಿಗಳಾಗಿ ಇಂದು ಭವಿಷ್ಯದ ಕ್ರೀಡಾಪಟುಗಳಿಗೆ ಆಶಾಭಾವನೆಯನ್ನು ಮೂಡಿಸಿದ್ದಾರೆ. ಸಿನಿಮಾ ತಾರೆಗಳಾದ ಯಶ್(ಕನ್ನಡ), ಸಾಯಿ ಪಲ್ಲವಿ(ತೆಲಗು) ಮುಂತಾದವರು ಅತ್ಯಂತ ಕಠಿಣ ಸವಾಲು ಎದುರಿಸಿ ಉತ್ತುಂಗಕ್ಕೇರಿದ್ದಾರೆ. ಕೇವಲ ತಮ್ಮ ಕಠಿಣ ಪರಿಶ್ರಮದಿಂದಲೇ ಗುರಿ ಸಾಧಿಸಿದ ಇಂಥವರುಗಳೇ ಇಂದಿನ ಯುವಜನರನ್ನು ಉತ್ತೇಜಿಸುತ್ತಿರುವ ಮಾದರಿ ವ್ಯಕ್ತಿಗಳಾಗಿದ್ದಾರೆ.

ಇನ್ನು ಉದ್ಯಮದ ಕಡೆ ತಿರುಗಿದರೇ ಒಂದು ಆಶ್ಚರ್ಯಕರ ಬೆಳವಣಿಗೆಯನ್ನು ನೋಡಬಹುದಾಗಿದೆ. ಇಂದು ಯುವಕರು ಉದ್ಯೋಗಾಕಾಂಕ್ಷಿಗಳು ಎಂಬ ಹಣೆಪಟ್ಟಿ ಕಳಚಿ ಉದ್ಯೋಗದಾತರಾಗುತ್ತಿದ್ದಾರೆ. ನಾಸ್ಕಾಂ ಅಂಕಿ ಅಂಶದ ಪ್ರಕಾರ2018ರಲ್ಲಿ ಭಾರತದಲ್ಲಿ 4.2 ಶತಕೋಟಿ ಅಮೆರಿಕನ್‍ ಡಾಲರ್ ಹೂಡಿಕೆಯಾಗಿದೆ. ಈ ಹಿಂದಿದ್ದ 2 ಶತಕೋಟಿ ಅಮೆರಿಕನ್‍ ಡಾಲರ್‍ಗಿಂತ ಇದು ಬರೊಬ್ಬರಿ ಶೇ.108 ಹೆಚ್ಚಳವಾಗಿದೆ. (ಏPಒಉ) ಕೆಪಿಎಂಜಿ ಸಂಸ್ಥೆಯ 2019ರ ಫೆಬ್ರವರಿ ವರದಿ ಪ್ರಕಾರ, 2008ರಲ್ಲಿ ದೇಶದಲ್ಲಿದ್ದ 7 ಸಾವಿರ ಸ್ಟಾರ್ಟಆಪ್‍ಗಳ ಸಂಖ್ಯೆ 2018ರ ಡಿಸೆಂಬರಷ್ಟರಲ್ಲ್ಲಿ50 ಸಾವಿರಕ್ಕೇರಿದೆ. ಬಹುತೇಕ 7.14ಪಟ್ಟು ಹೆಚ್ಚಳವಾಗಿರುವ ಈ ಸ್ಟಾರ್ಟ ಆಪ್‍ ಉದ್ಯಮದಲ್ಲಿ ಶೇ.95 ಜನರುಯುವ ಉದ್ಯಮಿಗಳು ಎಂಬುದು ಗಮನಾರ್ಹ ಅಂಶ. ಓಯೋರೂಮ್ಸ್(OYO Rooms CEO) ಸಿಇಒ ರಿತೇಶ್‍ ಅಗರ್ವಾಲ್‍ರಿಂದ ಸೆಲ್ವಿಟೇಟ್ ಸಿಇಒ (Selvitate – CEO)ಚರಿತ್‍ವರೆಗೆ, ಮಿಟ್ಟಿಕೆಫೆಯ(Mitti Cafe) ಅಲಿನಾರಿಂದ ಜಿಮಾವೆ ಡಾಟ್‍ ಕಾಮ್‍ನ(Zivame.com)ರಿಚಾಕರ್‍ವರೆಗಿನ ಸಾಧಕರು, ಇಂದು ಯುವಕರನ್ನು “ಉದ್ಯೋಗದಾತ’ರಾಗಲು ಪ್ರೇರೆಪಿಸುತ್ತಿದ್ದಾರೆ. ದೇಶ ಭಾಷೆಯ ಗಡಿಯನ್ನು ಮೀರಿ ಉದ್ಯಮಶೀಲತೆಗೆ ಸಿಕ್ಕಿರುವ ಅವಕಾಶ ಹಾಗೂ ಇಂಟರ್ನೆಟ್‍ ತಂತ್ರಜ್ಞಾನದ ಕಾರಣದಿಂದ ಇದೆಲ್ಲವನ್ನು ಸಾಧ್ಯವಾಗಿಸಿದೆ. ಈ ಅಗಾಧ ಬದಲಾವಣೆಯ ಕಾರಣದಿಂದಲೇ ಭಾರತ ಇಂದು ವಿಶ್ವದ ಸ್ಟಾರ್ಟಪ್‍ನ ಕೇಂದ್ರಬಿಂದು ಆಗಿದೆ.

ಇತ್ತ ರಾಜಕೀಯದಲ್ಲೂ ಕೆಲವು ಆಶ್ಚರ್ಯಕರ ವಿಚಾರಗಳಿವೆ. 20 ವರ್ಷದ ಹಿಂದಿನ ಸ್ಥಿತಿಗೆ ಅಪವಾದ ಎಂಬಂತೆ, ಇಂದಿನ ರಾಜಕೀಯ ನಾಯಕತ್ವದಲ್ಲಿ ಯುವಕರು ಆಶಾಭಾವನೆ ಹೊಂದಿದ್ದಾರೆ. ಪ್ರಸ್ತುತ ಭಾರತದಲ್ಲಿ ರಾಜಕೀಯದ ಪರಿಭಾಷೆಯನ್ನೇ ಬದಲಾಯಿಸಿದ ಕೀರ್ತಿ ಮೋದಿ ಮತ್ತವರ ತಂಡಕ್ಕೆ ಸಲ್ಲುತ್ತದೆ.ಈ ಹಿಂದೆ ರಾಜಕೀಯ ಎಂದರೆ ಅಭಿವೃದ್ಧಿಗೆ ತೊಡಕು, ಸಮಾಜಘಾತುಕಗಳ ಕೇಂದ್ರ ಮತ್ತು ಕುಟುಂಬ(ವಂಶ) ರಾಜಕಾರಣದ ಆಯ್ಕೆ ಎಂಬಂತಿತ್ತು. ಇಂದು ಮೋದಿಯವರ ನಾಯಕತ್ವ ಯುವ ಮನಗಳಲ್ಲಿ ನಿರೀಕ್ಷೆ ಮತ್ತು ಕನಸು ಬಿತ್ತಿದೆ. ಯುವಜನರ ಜತೆ ಸಂಪರ್ಕಕ್ಕೆ ಮೋದಿ ತೆರೆದುಕೊಳ್ಳುವ ರೀತಿಯೇ ಅದ್ಭುತ. ಕೇವಲ ಒಂದು ಇ-ಮೇಲ್‍ನಲ್ಲಿ ಸಾಮಾನ್ಯ ಜನರ ಕೋರಿಕೆಗೆ ಕ್ಷಣ ಮಾತ್ರದಲ್ಲಿ ಪ್ರಧಾನಮಂತ್ರಿ ಕಾರ್ಯಾಲಯ ಸ್ಪಂದಿಸುತ್ತಿದೆ. ಮೋದಿಯವರ ನಿರ್ಧಾರ ತೆಗೆದುಕೊಳ್ಳುವಲ್ಲಿನ ಕುಶಲತೆ ಮತ್ತು ತಂಡವನ್ನು ಮುನ್ನಡೆಸುವ ರೀತಿಯ ಜತೆಗೆ ಯುವಕರನ್ನು ಹುರಿದುಂಬಿಸಿ ರಾಜಕೀಯ ವಿಚಾರದಲ್ಲಿ ತೊಡಗಿಸಿಕೊಳ್ಳುವ ರೀತಿ ಹಾಗೂ ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ. ಇದಕ್ಕೆ ಉದಾಹರಣೆ ಎಂಬಂತೆ ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ, ಜಯಮಾಂಗ್‍ತ್ಸೆರಿಂಗ್ ನಾಮ್‍ಗ್ಯಾಲ್(ಲಡಾಖ್) ಅವರಂತಹ, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಯುವ ನಾಯಕರನ್ನು ಲೋಕಸಭೆಗೆ ಕಣಕ್ಕಿಳಿಸಿರುವುದು ಯುವ ಸಮೂಹ ರಾಜಕೀಯದತ್ತ ಆಸೆಭರಿತ ಕಣ್ಣುಗಳಿಂದ ನೋಡುವಂತೆ ಮಾಡಿದೆ. ರಾಜಕೀಯ ಪಕ್ಷದಲ್ಲಿ ಕೊನೆಯ ಸಾಲಿನಲ್ಲಿರುವವರಷ್ಟೇ ಅಲ್ಲ, ಹೊಸದಾಗಿ ರಾಜಕೀಯ ಪ್ರವೇಶಿಸಿದವರೂ ರಾಜಕೀಯ ಕ್ಷೇತ್ರದಲ್ಲಿ “ಉತ್ತಮ ಭವಿಷ್ಯ” ದ ನಿರೀಕ್ಷೆ ಹೊಂದುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಯುವ ಸಮೂಹ ರಾಜಕೀಯವನ್ನು ಸಕರಾತ್ಮಕವಾಗಿ ನೋಡುವಂತಾಗಿದ್ದು ಭವಿಷ್ಯದ ದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ.

ಈ ವಿಚಾರವನ್ನು ಇಟ್ಟುಕೊಂಡು ನೀವು ರಾಜಕೀಯ ಪ್ರವೇಶ ಮಾಡುತ್ತೀರ ಎಂದು ಬೆಂಗಳೂರಿನ ಕೆಲವು ಕಾಲೇಜು ವಿದ್ಯಾರ್ಥಿಗಳನ್ನು ನಾನು ಪ್ರಶ್ನಿಸಿದಾಗ, ಕೆಲವರು ನಿರಾಕರಿಸಿದರೆ, ಕೆಲವರು ಮಿಶ್ರ ಪ್ರತಿಕ್ರಿಯೆ ನೀಡಿದ್ದರು. ಆದರೆ ಅದೇ ಪ್ರಶ್ನೆಯನ್ನು ಬೇರೆ ರೀತಿಯಲ್ಲಿ ಕೇಳಿದಾಗ. ಅಂದರೆ ಮೋದಿ ಕೆಲಸ ನಿಮಗೆ ಇಷ್ಟವಾಗಿದೆಯೇ? ಮೋದಿ ರೀತಿ ಆಗಲು ನಿಮಗೆ ಇಷ್ಟವೇ? ಸದೃಢ ಭಾರತ ನಿರ್ಮಾಣಕ್ಕೆ ರಾಜಕೀಯ ಪ್ರವೇಶಿಸುತ್ತೀರಾ? ಎಂದು ಕೇಳಿದಾಗ ಬಹುಪಾಲು ಯುವಕ/ಯುವತಿಯರ ಉತ್ತರವೂ “ಹೌದು’ ಎಂದಿತ್ತು. ಹಾಗಾದರೆ, ಭಾರತದ ಯುವಕರು ರಾಜಕೀಯ ಪ್ರವೇಶಿಸದಂತೆ ತಡೆಯುತ್ತಿರುವುದು ಯಾವುದೆಂಬ ಪ್ರಶ್ನೆಗೆ ಉತ್ತರ ಇಂದು ಸ್ಪಷ್ಟವಾಗಿ ಕಾಣುತ್ತಿದೆ. ಅದೇನೆಂದರೆ “ಉತ್ತಮ ನಾಯಕತ್ವ” ದ ಕೊರತೆ. ಇದಕ್ಕೆ ಅಪವಾದ ಎಂಬಂತೆ ಕಳೆದ 5 ವರ್ಷಗಳಲ್ಲಿ ಮೋದಿಯವರ ನಾಯಕತ್ವ ಇಂದು ಯುವ ಸಮೂಹವನ್ನು ರಾಜಕೀಯದತ್ತ ಆಕರ್ಷಿಸಿದೆ. ಇದಕ್ಕೆ ಸಮರ್ಥನೆ ಎಂಬಂತೆ ಕಳೆದ 4 ಮಹಾ ಚುನಾವಣೆಯ ಅಂಕಿಅಂಶವನ್ನು ಗಮನಿಸಿದರೇ ಈ ಸಂಗತಿ ಸ್ಪಷ್ಟವಾಗಿ ಗೋಚರಿಸುತ್ತದೆ.

2014ರಲ್ಲಿ ದೆಹಲಿಯ ಸೆಂಟರ್ ಫಾರ್ ಸ್ಟಡೀ ಆಫ್‍ಡೆವಲಪಿಂಘ್ ಸೊಸೈಟೀಸ್(ಸಿಎಸ್‍ಡಿಎಸ್) ಸಂಸ್ಥೆ ಬಿಡುಗಡೆ ಮಾಡಿದ ಚುನಾವಣೋತ್ತರ ಸಮೀಕ್ಷೆ ವರದಿ ಪ್ರಕಾರ, 18-25 ವರ್ಷದೊಳಗಿನ ಶೇ.68 ಯುವಕರು ಮತದಾನ ಮಾಡಿದ್ದರು. ಆದರೆ 2009ರಲ್ಲಿ ಈ ಪ್ರಮಾಣ ಶೇ.54 ಇದ್ದರೆ 2004ರ ಚುನಾವಣೆಯಲ್ಲಿ ಕೇವಲ ಶೇ.52 ಇತ್ತು. ಈ ಕುರಿತು ಸಿಎಸ್‍ಡಿಎಸ್ ನಿರ್ದೇಶಕ ಸಂಜಯ್‍ಕುಮಾರ್ ಪ್ರಕಟಿಸಿದ ಲೇಖನದಲ್ಲಿ ಈ ಬಗ್ಗೆ ವಿಶ್ಲೇಷಿಸುತ್ತ, “ಸರಾಸರಿ ಮತದಾನ ಪ್ರಮಾಣಕ್ಕಿಂತ ಸುಮಾರು ಶೇ.4ರಷ್ಟು ಕಡಿಮೆ ಪ್ರಮಾಣದಲ್ಲಿ ಮತದಾನದಲ್ಲಿ ಭಾಗವಹಿಸುತ್ತಿದ್ದ ಯುವಕರು 2014ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಯತ್ತ ಆಗಮಿಸಿದ್ದರು. ಸರಾಸರಿ ಮತದಾನಕ್ಕಿಂತ ಶೇ.2 ಹೆಚ್ಚಳ ಅಂದರೆ ಶೇ.68 ಯುವಕರು ಮತದಾನ ಮಾಡಿದ್ದರು. ”ಯುವಕರು ಪೂರ್ಣ ಮನಸ್ಸಿನಿಂದ ಒಂದು ರಾಜಕೀಯ ಪಕ್ಷದ(ಬಿಜೆಪಿ) ಪರವಾಗಿ ಮತ ಚಲಾಯಿಸಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ಬಿಜೆಪಿ ತನ್ನ ಒಟ್ಟಾರೆ ಸರಾಸರಿ ಮತದಾನ ಪ್ರಮಾಣ(ಶೇ.31.1) ಕ್ಕಿಂತ ಶೇ.3 ಹೆಚ್ಚಳ ಅಂದರೆ ಶೇ.34.4 ಪ್ರಮಾಣದ ಯುವಕರ ಮತವನ್ನು ಪಡೆದಿತ್ತು. ಕಾಂಗ್ರೆಸ್‍ಗೆ ಮತ ನೀಡಿದ್ದು ಕೇವಲ ಶೇ.19 ಯುವ ಮತದಾರರು. ಈ ಕಾರಣದಿಂದಲೇ ಬಿಜೆಪಿ ಒಂದುದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಎಂದುರಾಜಕೀಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ. ಈ ಬಾರಿ ಸರಿಸುಮಾರು 45 ದಶಲಕ್ಷಯುವಕರು ಮತಚಲಾಯಿಸಲಿದ್ದಾರೆ. ದೇಶಾದ್ಯಂತ ಸರಾಸರಿ ಶೇ.5 ನವಮತದಾರರಿದ್ದರೆ, ಅಸ್ಸಾಂನಲ್ಲಿ ಶೇ.13 ಹಾಗೂ ರಾಜಸ್ಥಾನದಲ್ಲಿ ಶೇ.10ರಷ್ಟಿದ್ದಾರೆ. ಆಗಸ್ಟ್ 15ಕ್ಕೆ ಕೆಂಪುಕೋಟೆಯ ಮೇಲೆ ತ್ರಿವರ್ಣ ದ್ವಜವನ್ನು ಯಾರು ಹಾರಿಸುತ್ತಾರೆ ಎಂಬುದನ್ನು ನಿರ್ಧರಿಸುವವರು ಇದೇ ಮತದಾರರಾಗಿರುವ ಕಾರಣ, ಎಲ್ಲ ರಾಜಕೀಯ ಪಕ್ಷಗಳಿಗೂ ಯುವ ಮತದಾರರ ಬೆಂಬಲ ಅತ್ಯವಶ್ಯಕ.

ಹೊಸ ಮತದಾರರ ಸೇರ್ಪಡೆ ಪ್ರಮಾಣ ಮತ್ತು ಅವರ ನಿರೀಕ್ಷೆ ಪ್ರಮಾಣ ಹೆಚ್ಚುತ್ತಲೇ ಇದ್ದು,ಇದರಿಂದಾಗಿ, ಯುವಮತದಾರರನ್ನು ನಿರ್ಲಕ್ಷಿಸದಂತೆ ಮತ್ತು ಈ ಹಿಂದೆ ನೀಡಿದ್ದ ಭರವಸೆಗಳನ್ನು ಪರಾಮರ್ಷಿಸಲು ರಾಜಕೀಯ ಪಕ್ಷಗಳಿಗೆ ಅನಿವಾರ್ಯತೆ ಎದುರಾಗಿದೆ. ರಾಜಕಾರಣದ ಹೊರಗಿನ ಚಿತ್ರಣ ಹಾಗೂ ಯುವಕರ ನಿರೀಕ್ಷೆಗಳು ಬದಲಾಗುತ್ತಿರುವ ವೇಗವನ್ನು ಗಮನಿಸಿದರೆ, ಮುಂದಿನ 10 ವರ್ಷಗಳಲ್ಲಿ ಇಡೀ ದೇಶದ ರಾಜಕೀಯ ಮನಸ್ಥಿತಿಯೇ ಬದಲಾಗುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಈ ಬದಲಾವಣೆ, ಮೊದಲು ನಾನು ಮತ್ತು ನನ್ನ ಕುಟುಂಬ ಎಂಬಲ್ಲಿಂದ, ದೇಶ ಮೊದಲು ಎಂಬಲ್ಲಿಗೆ ಕಡೇಪಕ್ಷ 2024ರಷ್ಟೊತ್ತಿಗೆ ರಾಜಕೀಯ ವಾತಾವರಣ ಬದಲಾವಣೆ ಆಗಿರುತ್ತದೆ. ಈ ಬದಲಾವಣೆಯ ಶ್ರೇಯ ಇಂದಿನ ಯುವಸಮೂಹಕ್ಕೆ ಸಲ್ಲುತ್ತದೆ. ಯುವಕರನ್ನು ರಾಜಕೀಯ ಮುಖ್ಯಧಾರೆಯಲ್ಲಿ ಸೇರ್ಪಡೆ ಮಾಡಿಕೊಳ್ಳುವುದು ದೇಶದ ಭವಿಷ್ಯದದೃಷ್ಟಿಯಿಂದ ಮುಖ್ಯ. ದೇಶದ ಕಟ್ಟಕಡೆಯ ನಾಗರಿಕನಿಗೂ ಸೇವೆಗಳ ಲಾಭ ಸಿಗಬೇಕಿದ್ದರೆ, ಯುವಕರನ್ನು ನೀತಿ ನಿರ್ಧಾರಗಳಲ್ಲಿ ಪಾಲುದಾರರಾಗಿಸಿಕೊಳ್ಳಬೇಕಾದ್ದು ಸರ್ಕಾರಗಳ ಕರ್ತವ್ಯ. ದೇಶದ ಶೇ.60 ಯುವಕರು ದುಡಿಯುವ ವಯೋಮಾನದಲ್ಲಿರುವುದು ಅತ್ಯಂತ ಸಂತಸದ ವಿಷಯ. ವಿಶ್ವದ ಯಾವುದೇ ದೇಶ ಈ ಸಂಪತ್ತನ್ನು ಹೊಂದಿಲ್ಲ. ಯುವಕರ ಶಕ್ತಿಯನ್ನು ಬಳಸಿಕೊಳ್ಳುವ ಪಕ್ಷವೇ ಭವಿಷ್ಯದಲ್ಲಿ ದೇಶವನ್ನು ಆಳುತ್ತದೆ. ಆದ್ಧರಿಂದ ಎಲ್ಲ ರಾಜಕೀಯ ಪಕ್ಷಗಳೂ ತಮ್ಮತ್ತ ಯುವಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿವೆ. 2019ರಲ್ಲಿ ಚುನಾವಣೆ ಜಯ ಸಾಧಿಸಲು ತಮ್ಮತ್ತ ಹೆಚ್ಚು ಯುವಕರನ್ನು ಸೆಳೆಯಬೇಕೆಂದು ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಸ್ಪರ್ಧೆಯಲ್ಲಿ ತೊಡಗಿವೆ. ಯಾವ ಕಡೆ ಹೆಚ್ಚು ಯುವಕರು ನಿಲ್ಲುತ್ತಾರೊ, ಅವರೇ ಚುನಾವಣೆಯಲ್ಲಿ ಜಯಿಸುತ್ತಾರೆ.

ಈ ಮೇಲ್ಕಂಡ ಅಂಶಗಳನ್ನು ಹಿಂದೆ ಚರ್ಚಿಸಿದ ವಿಚಾರಗಳ ಜತೆ ಅಳೆದು ತೂಗಿದರೆ, ಮೋದಿ ಮತ್ತವರ ತಂಡವು ಇಂದಿನ ರಾಜಕೀಯದ ಟ್ರೆಂಡ್‍ ಸೆಟ್ಟರ್‍ಗಳಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುವ ಸಂಗತಿ. ಈ ಬದಲಾವಣೆಯಿಂದಾಗಿ ಇತರೆ ರಾಜಕೀಯ ಪಕ್ಷಗಳು ಹಿಂದೆ ಮುಂದೆ ಯೋಚಿಸದೆ ಇವರನ್ನು ಹಿಂಬಾಲಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಇಂದಿನ ಯುವಕರು ಸಾಮಾಜಿಕವಾಗಿ, ಜಾಗೃತ ಹಾಗೂ ಜವಾಬ್ದಾರಿಯುತ ನಾಗರೀಕರಾಗಿ, ರಾಷ್ಟ್ರೀಯ ಒಳಿತು ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಪ್ರಚಾರಗೊಳಿಸುವ ಹೊಣೆ ಹೊತ್ತಿದ್ದಾರೆ. ಇನ್ನು ನಿಮ್ಮ ಕೊನೆಯ ದಿನಗಳನ್ನು ಎಣಿಸಿ ಎಂದು ಕುಟುಂಬ ರಾಜಕಾರಣದಲ್ಲಿ ಮುಳುಗಿರುವವರಿಗೆ ಈ ಜಾಗೃತ ನಾಗರೀಕರು ಎಚ್ಚರಿಕೆ ನೀಡಿದ್ದಾರೆ. ಕುಟುಂಬ ರಾಜಕಾರಣದ ‘ರೋಟಿ, ಕಪಡಾಔರ್ ಮಕಾನ್’ಘೋಷಣೆಯಿಂದ ಮುಂದುವರಿದು ಕುಟುಂಬ ರಾಜಕಾರಣರಹಿತ ಅಭಿವೃದ್ಧಿ ಹೊಂದಿದ ಭಾರತದತ್ತ ಯುವಕರುದೃಷ್ಟಿ ನೆಟ್ಟಿದ್ದಾರೆ. ಕುಟುಂಬ ರಾಜಕಾರಣದ ಮುಂದುವರಿಕೆ ಆಗುತ್ತದೆ ಎಂದು ಕಾದು ಕುಳಿತಿರುವವರು 2019ರ ಚುನಾವಣೆಯಲ್ಲಿ ಭಾರೀ ಬೆಲೆ ತೆರಬೇಕಾಗಬಹುದು.

ವಿವೇಕಾನಂದರು ಹೇಳಿದಂತೆ, “ಯುವಜನರ ಮೇಲೆಯೇ ನನ್ನ ವಿಶ್ವಾಸ. the modern generation out of them will come my workers. ಸಿಂಹದ ರೀತಿಯಲ್ಲಿ ಅವರು ಸಮಸ್ಯೆಗಳನ್ನು ಎದುರಿಸುತ್ತಾರೆ.ಈ ಸೂತ್ರವನ್ನು ರೂಪಿಸುವುದರ ಜತೆಗೆ ಅದಕ್ಕೆ ನನ್ನ ಚೈತನ್ಯ ನೀಡಿದ್ದೇನೆ. ನಾನು ಈ ಕಾರ್ಯದಲ್ಲಿ ಸಫಲನಾಗದಿದ್ದಲ್ಲಿ, ಭವಿಷ್ಯದಲ್ಲಿ ನನಗಿಂತ ಉತ್ತಮವಾದವನೊಬ್ಬ ಇದನ್ನು ಸಾಧ್ಯವಾಗಿಸುತ್ತಾನೆ. ನಾನು ಹೋರಾಡಲು ಸಿದ್ಧನಿದ್ದೇನೆ”. ಸ್ವಾಮೀಜಿ ಹೇಳಿದಂತೆ, ಯುವಕರು ದೇಶದ ದಿಕ್ಕನ್ನು ಬದಲಿಸುತ್ತಿದ್ದಾರೆ ಮತ್ತು ಬದಲಾವಣೆಗೆ ಹೊಸ ಹಾದಿಯನ್ನು ಸೃಷ್ಟಿಸುತ್ತಿದ್ದಾರೆ. ಅವರು ಕೇವಲ ಪ್ರಸ್ತುತ ಭಾರತದ ಬದಲಾವಣೆಯ ಕಾರಣರಲ್ಲ; ಅವರು ನವಭಾರತದ ನಿರ್ಮಾತೃಗಳು. ಈ ಕಾರಣಕ್ಕಾಗಿ ಯುವ ಸಮೂಹಕ್ಕೊಂದು ನಮಸ್ಕಾರ.

3 ಟಿಪ್ಪಣಿಗಳು Post a comment
 1. ಬಾಲಾಜಿ ಟಿ ಎಸ್
  ಏಪ್ರಿಲ್ 17 2019

  “ಮುಂದಿನ 10 ವರ್ಷಗಳಲ್ಲಿ ಇಡೀ ದೇಶದ ರಾಜಕೀಯ ಮನಸ್ಥಿತಿಯೇ ಬದಲಾಗುವ ಸಾಧ್ಯತೆಯಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಈ ಬದಲಾವಣೆ, ಮೊದಲು ನಾನು ಮತ್ತು ನನ್ನ ಕುಟುಂಬ ಎಂಬಲ್ಲಿಂದ, ದೇಶ ಮೊದಲು ಎಂಬಲ್ಲಿಗೆ ಕಡೇಪಕ್ಷ 2024ರಷ್ಟೊತ್ತಿಗೆ ರಾಜಕೀಯ ವಾತಾವರಣ ಬದಲಾವಣೆ ಆಗಿರುತ್ತದೆ. ”

  -ಈ ಸಾಲುಗಳು, ತುಂಬ ಆಶಾದಾಯಕವಾಗಿದೆ👌
  Very nice article Puneeth👌🙏👍
  Well written with facts n research👍

  ಉತ್ತರ
 2. ಏಪ್ರಿಲ್ 18 2019

  ಮೇಲಿನ ಅಂಶಗಳು ಖಂಡಿತ ಒಪ್ಪುತ್ತೇನೆ, ಮೋದಿ ಮಾಡಿದ ಕೆಲಸಗಳು ಮತ್ತು ಆ ಕೆಲಸಗಳ ಬಗ್ಗೆ ಜನರಿಗೆ ತಿಳಿಸುವುದು ಮುಖ್ಯವಾದ ಅಂಶ. ಇದರಿಂದಾಗಿಯೇ ಯುವಜನ ರಾಜಕೀಯದ ಬಗ್ಗೆ ಆಸಕ್ತಿ ಮೂಡಿಸುವಂತಾಗಿದೆ. ಭಾರತದ ಈಗಿನ ಯುವ ಪೀಳಿಗೆ ಎಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬಲ್ಲವರಾಗಿದ್ದಾರೆ ಮತ್ತು ಹೆಣ್ಣು ಮಕ್ಕಳು ಅದರಲ್ಲಿ 50 ಕಿಂತ ಹೆಚ್ಚಿನ ಸರಾಸರಿಯಲ್ಲಿ ಪಾಲ್ಗೊಳ್ಳುತ್ತಿರುವುದು ಭಾರತದ ಮಟ್ಟಿಗೆ ವಿಷೇಶ. ಧನ್ಯವಾದಗಳು ಪುನೀತ್. ನಿಮ್ಮ ಮುಂದಿನ ಅಧ್ಯಯನ ಈ ಯುವ ಪೀಳಿಗೆಯ ಆಯಸ್ಸು ವೃದ್ದಿಸುವ ಭಾರತದ ಆಹಾರದ ಗುಣಮಟ್ಟ ಆಗಿರಲಿ.

  ಉತ್ತರ
 3. s.dinni
  ಏಪ್ರಿಲ್ 19 2019

  ಮಾಧ್ಯಮದ ಘನತೆ ಹಾಗೂ ಗಣನೀಯತೆ!
  Please read editorial comments in prajaavani a prominent Kannada daily dated 15,April,2019

  ‘Prajaavani’ ಸಂಪಾದಕೀಯ ಏಪ್ರಿಲ್ ೧೫,೨೦೧೯,ಕೋಮು ಭಾವನೆ ಕೆರಳಿಸುವ ಮಾತಿಗೆ ಬಿಜೆಪಿ ಸೀಮಿತವಾಗಿರುವುದೇಕೆ?,ಎಂಬ ನೇರ ಪ್ರಶ್ನೆ ಕೇಳುವುದಲ್ಲದೆ, ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಧಾನಿ ಸ್ಥಾನದಲ್ಲಿ ಕುಳಿಯ ಯಾರೂ ದೇಶವನ್ನು ಹೀಗೆ ಕೋಮು ಆಧಾರಿತವಾಗಿ ವಿಭಜಿಸಿ ಮಾತಾಡಿರಲಿಲ್ಲ ಎಂಬ ಬಹು ದಿಟ್ಟ, ಗಾಭೀರ್ಯ,ಪ್ರಸ್ತುತ ಪ್ರಶ್ನೆ ಕೇಳುವಲ್ಲಿ ಮಾಧ್ಯಮದ ಘನತೆ,ಗಣನೀಯತೆಯೆನ್ನು ಎತ್ತಿಹಿಡಿದಿದ್ದೀರಿ. ಎಲ್ಲ ಮೌಲ್ಯಗಳು ನಶಿಸುತ್ತಿರುವ ಈ ದುರದೃಷ್ಟ ಕಾಲದಲ್ಲಿ, ಭಾರತೀಯ ಸಂವಿಧಾನ ನಮ್ಮ ದೇಶದ ಬಹುತ್ವವನ್ನು,ಧರ್ಮನಿರಪೇಕ್ಷತೆಯನ್ನು ಗುರುತಿಸುತ್ತದೆ ಎಂಬುದನ್ನು ಬಿಜೆಪಿಯಲ್ಲಿರುವ ಪ್ರಜ್ಞಾವಂತರೂ? ತಿಳಿಯದೆ ಸೇರ್ಪಡೆಯಾಗಿರುವದು ಕಳವಳಕಾರಿ ವಿಷಯ. ಇಲ್ಲವೇ ಅವರಿಗೆ ಬಿಚ್ಚು ಮನಸ್ಸಿನಿಂದ ಮಾತಾಡಯುವ ಸ್ವಾತಂತ್ರ್ಯವಿಲ್ಲ.
  ಬಹು ಸೂಕ್ಷ್ಮ ಸಂವಿಧಾನದ ವಿಷಯ ಬಂದಾಗ ಇಂದಿರಾ ಗಾಂಧಿಯ ‘ಅಧಿಕಾರ ಲಾಲಸೆ’ ಹಾಗೂ ಈಗಿನ ‘ ಮೋದಿ ಅಲೆ ‘ ಗೂ ಬಹಳ ವ್ಯತ್ಯಾಸವಿಲ್ಲ.ಇವರು ಸಂವಿಧಾನವನ್ನು ದುರ್ಬಲಗೊಳಿಸಿದ್ದು ನಿಜ. ಆದರೆ ಇಂದಿರಾ ಗಾಂಧಿ ಅಧಿಕಾರ ವ್ಯಾಮೋಹ ಒಂದು ನಿರ್ಧಿಷ್ಟ ಸಮಯದಲ್ಲಿ ಕಾಣಿಸಿ ಮಾಯವಾಯಿತು. ಆದರೆ ಮೋದಿಯವರ ಐದು ವರ್ಷ ಆಳಿಕೆಯಲ್ಲಿ ಇದನ್ನು ಬರೆಯುವಾಗಲೇ ಒಂದು ರೀತಿಯ ಭಯ,ಅಸಹಿಷ್ಣುತೆ (ಇಡೀ ಪ್ರಜ್ಞಾವಂತ ಸಮಾಜವೇ ಬೆಚ್ಚಿ,ಬೆರಗಾಗಿಲ್ಲವೇ?)ಇಣುಕುತ್ತದೆಯೆಲ್ಲ ಯಾಕೆ? ಪಕ್ಕದ ದೇಶ ಪಾಕಿಸ್ತಾನದಲ್ಲಿ ಧರ್ಮ ರಾಜಕೀಯವೆಂಬ ವಿಷ ಬೆರೆತು ಅಲ್ಲಿಯ ಸ್ಥಿತಿ – ಗತಿ ನೆನೆಸಿ ಕೊಂಡಾಗ ಭಯ,ಆತಂಕ ಒಮ್ಮೆಲೇ ದುತ್ತೆಂದು ಎದುರಾಗುತ್ತವೆ.ಇಂತಹ ರಾಷ್ಟ್ರ ……?
  Let us first build of a kind of communion where heads are put to rest and hearts speak.
  That is true democracy and not i impose my ideas and you impose your ideas.
  When both side ideology and inevitable ego emerging out of it, is at rest, flowering of goodness begins.

  ಉತ್ತರ

ನಿಮ್ಮ ಅನಿಸಿಕೆ...

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Note: HTML is allowed. Your email address will never be published.

Subscribe to comments