ದೆಹಲಿಯೇ ಬೆಂಗಳೂರಿಗೆ ಬಂತು ಮತ್ತು ಅದೇ ಸರಿಯಾದದ್ದು !

ಕಳೆದ 60 ವರ್ಷದಿಂದಲೂ ನಾವು ನೋಡಿರುವುದು ಏನೆಂದರೆ ಕರ್ನಾಟಕದ ರಾಜಕೀಯ ನಾಯಕರು ಒಂದು ಸಣ್ಣ ವಿಷಯಕ್ಕೂ ದೆಹಲಿಗೆ ಹೋಗಿ ಅಲ್ಲಿನ ದೊರೆಗಳ ಮುಂದೆ ಕೈ ಕಟ್ಟಿಕೊಂಡು ನಿಂತು, “ಅಪ್ಪಣೆ ಮಹಾಪ್ರಭು” ಅಂತ ನಿಂತುಕೊಳ್ಳೊರು. ಅವರು ಕೊಟ್ಟ ಆಜ್ಞೆನಾ ಪ್ರಸಾದ ಅಂಬಂತೆ ಕಣ್ಣಿಗೊತ್ತಿಕೊಂಡು ವಾಪಸ್ ಬರೋರು. “ನಮ್ದು ನ್ಯಾಶನಲ್ ಪಾರ್ಟಿ ರೀ, ನಾವು ಶಿಸ್ತಿನ ಸಿಪಾಯಿಗಳು ರೀ,,ಹೈಕಮಾಂಡ್ ಮಾಡಿದ ಆಜ್ಞೆ ನಾವ್ ಮೀರುವುದುಂಟೇನು” ಎಂದು ತಮ್ಮ ಗುಲಾಮಗಿರಿಯನ್ನೇ ಖುಷಿಯಾಗಿ ಸಮರ್ಥಿಸಿಕೊಳ್ಳೊರು. ಆದರೆ ಮೊಟ್ಟ ಮೊದಲ ಬಾರಿಗೆ ದೆಹಲಿಯ ಮೂರು ಮತ್ತೊಂದು ನಿವೃತ್ತ ನಾಯಕರಿಗೆ ಸೆಡ್ಡು ಹೊಡೆದು ದೆಹಲಿಯೇ ಬೆಂಗಳೂರಿಗೆ ಬರುವಂತೆ ಮಾಡಿದ್ದು, ಎರಡು ದಿನವಾದರೂ ಅವರಿಗೆ toughest ಫೈಟ್ ಕೊಟ್ಟಿದ್ದು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯದಿಂದ ಕೇಂದ್ರವಿರಬೇಕು, ಬಾಟಮ್ ಅಪ್ ಆಪ್ರೋಚ್ ಇರಬೇಕು ಅನ್ನುವ ಸಂದೇಶವನ್ನು ಕೊಟ್ಟ ಕಾರಣಕ್ಕೆ ಯಡಿಯೂರಪ್ಪನವರನ್ನು ಮೆಚ್ಚದಿರಲು ಆಗದು.
ಪ್ರಜಾತಂತ್ರದಲ್ಲಿ ಹೈಕಮಾಂಡ್ ಅನ್ನೋದೇ ತಪ್ಪು
ಪ್ರಜಾತಂತ್ರವಿರುವುದು ಜನರಿಂದ ಜನರಿಗಾಗಿ. ಜನರು ಆರಿಸಿ ಕಳಿಸಿದ ನಾಯಕರು ರಾಜ್ಯವಾಳಬೇಕು. ಅವರಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ಕೂತು ಮಾತನಾಡಿ ಬಗೆಹರಿಸಿಕೊಳ್ಳಲಿ. ಇದೇನಿದು ಹೈಕಮಾಂಡ್ ಅನ್ನೋದು? ಅಸಲಿಗೆ, ಕಮಾಂಡ್ ಅನ್ನೋದೆ ಪ್ರಜಾತಂತ್ರದಲ್ಲಿ ತಪ್ಪು. ಪಾಳೆಗಾರನಂತೆ ಕಮಾಂಡ್ ಮಾಡ್ತಿನಿ ಅನ್ನೋದು ಯಾವ ಸೀಮೆ ಜನತಂತ್ರ? ಬಂದ ಸೋ ಕಾಲ್ಡ್ ವರಿಷ್ಟರು facilitators ಆಗಬೇಕು, messengers ಆಗಬೇಕು. ಅದು ಬಿಟ್ಟು ಇಂತವರೇ ಸಿ.ಎಮ್ ಆಗಬೇಕು ಅಂತ ನಿರ್ಧಾರ ಮಾಡ್ಕೊಂಡು ಬಂದು ಇಲ್ಲಿ ಹೇರಲು ಹೊರಟರೆ ಅದು ಪ್ರಜಾತಂತ್ರವಾಗುತ್ತ? ಅಂತಹ ದೊಣ್ಣೆ ನಾಯಕರಿಗೆ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಸರಿಯಾದ್ದೊಂದು ಮುಟ್ಟಿ ನೋಡಿಕೊಳ್ಳುವಂತ ಫೈಟ್ ಕೊಟ್ಟಿದ್ದಾರೆ ಅಂತಲೇ ಅನ್ನಬಹುದು. ಒಂದಿಡಿ ದಿನ ಎಲ್ಲ ನ್ಯಾಶನಲ್ ಮಾಧ್ಯಮದಲ್ಲೂ ಕರ್ನಾಟಕದ ಸುದ್ದಿ ಆವರಿಸಿಕೊಂಡದ್ದು ನೋಡಿದರೆ ಈ ಮಟ್ಟಿಗೆ ಕನ್ನಡಿಗನೊಬ್ಬ ಫೈಟ್ ಕೊಟ್ನಲ್ಲ ಅನ್ನೋದೇ ನನಗೆ ಸಂತಸದ, ಸೋಜಿಗದ ಸಂಗತಿಯಾಗಿ ಕಾಣೋದು.
ನ್ಯಾಶನಲ್ ಲೀಡರ್ಸ್ ಅಂದ್ರೆ ದೇವರಾ?
ನ್ಯಾಶನಲ್ ಲೀಡರ್ಸ್ ಅಂದ ಕೂಡಲೇ “Paragon of Virtue” ಅನ್ನೋ ರೀತಿಯಲ್ಲಿ ನೈತಿಕತೆಯ ಚಾಂಪಿಯನ್ಸ್ ಅನ್ನೋ ರೀತಿಯಲ್ಲಿ ಅವರನ್ನು ಟ್ರೀಟ್ ಮಾಡುವ, ಅವರು ಹೇಳಿದ್ದೆಲ್ಲ ಸರಿ ಅನ್ನುವ ಗುಲಾಮಗಿರಿಯ ಮನಸ್ಥಿತಿ ನಮ್ಮಲ್ಲಿ ಹಲವು ನಾಯಕರಿಗಿದೆ. ಈಗ ನೈತಿಕತೆಯ ಎಳೆ ಹಿಡಿದು ರಾಜಿನಾಮೆ ಕೇಳಲು ಬಂದಿದ್ದಾರೆಂದು ನನಗಂತೂ ಅನ್ನಿಸಿಲ್ಲ. ಸಂಸತ್ತಿನ ಮಾನ್ಸುನ್ ಅಧಿವೇಶನದಲ್ಲಿ ಕಾಂಗ್ರೆಸ್ ಅನ್ನು ಹಣಿಯಲು ಹೊರಡುವ ಮುನ್ನ ಇವರಿಗೆ ತಾವು ಕೊಂಚ ಕ್ಲೀನ್ ಅನ್ನಿಸಿಕೊಳ್ಳಬೇಕಿತ್ತು. ಅದಕ್ಕೆ ಆರೋಪ ಕೇಳಿದ ತಕ್ಷಣ ಮುಖ್ಯಮಂತ್ರಿಗಳ ರಾಜಿನಾಮೆ ತೆಗೆದುಕೊಳ್ಳುವ ನಾಟಕ. ಅದಿಲ್ಲದಿದ್ದರೆ, ಮುಖ್ಯಮಂತ್ರಿಗಳ ಮೇಲೆ ಲೋಕಾಯುಕ್ತರು ಈ ಮೊದಲು ಆರೋಪ ಮಾಡಿದ್ದರು, ತಮ್ಮ ಮಧ್ಯಂತರ ವರದಿಯ ಬಗ್ಗೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದೂ ದೂರಿದ್ದರು, ಆಗೆಲ್ಲ ನ್ಯಾಶನಲ್ ಲೀಡರ್ಸ್ ನಿದ್ದೆ ಮಾಡುತ್ತಿದ್ದರೆ? ನ್ಯಾಶನಲ್ ಲೀಡರ್ಸ್ ಅಂದ್ರೆ ಹೆಚ್ಚು ಜವಾಬ್ದಾರಿ ಇರೋರು, ನೈತಿಕತೆ ಉಳ್ಳವರು ಅನ್ನೋದೆಲ್ಲ ಕಟ್ಟು ಕತೆ. ನೈತಿಕತೆ, ಜವಾಬ್ದಾರಿಯುತ ನಡವಳಿಕೆಯಲ್ಲಿ ಪ್ರಾದೇಶಿಕ ಪಕ್ಷಗಳು ಕೆಳಗೆ, ತಾವು ಮೇಲೆ ಅಂತ ತೋರಿಸಲು ಈ ಪೊಳ್ಳು ವಾದ ಬಳಸೋದೇ ಹೊರತು ಇದಕ್ಕೆ ಹೆಚ್ಚಿನ ಬೆಲೆಯೇನು ಕೊಡಬೇಕಿಲ್ಲ.
ಕೊನೆಹನಿ
ಯಡಿಯೂರಪ್ಪನವರು ಈಗ ತೋರಿದ ಧೈರ್ಯವನ್ನೇ ಕಾಂಗ್ರೆಸ್ ಹೈಕಮಾಂಡ್ ನ ಭೇಟಿ ಆಗೋಕೆ ಒಂದು ವಾರ ಕಾಯೋ ನಮ್ಮ ಸಿದ್ಧರಾಮಯ್ಯನಂತವರು ತೋರಿದ್ರೆ, ನಿಧಾನಕ್ಕಾದ್ರೂ ಸರಿ ಈ ಹೈಕಮಾಂಡ್ ನ ಕಮಾಂಡ್ ಸಂಸ್ಕೃತಿಯ ಬಿಗಿ ಪಟ್ಟಿನಿಂದ ಕರ್ನಾಟಕದ ರಾಜಕೀಯ ಆಚೆ ಬರುತ್ತೆನೋ. ಬೆಂಗಳೂರಿಂದ ದೆಹಲಿ ಇರಬೇಕೇ ಹೊರತು ದೆಹಲಿಯಿಂದ ಬೆಂಗಳೂರಲ್ಲ ಅನ್ನೋ ಬದಲಾವಣೆ ಇನ್ನಾದ್ರೂ ಕರ್ನಾಟಕದ ರಾಜಕೀಯದಲ್ಲಿ ಬರಲಿ.





ಹಿಂದೆ ಭಾಜಪಾ ಚುನಾವಣೆಯಲ್ಲಿ ಗೆದ್ದಾಗಲೂ ದೆಹಲಿಯಿಂದ ವೀಕ್ಷಕರು ಆಗಮಿಸಿ, ಯಡ್ಯೂರಪ್ಪನವರ ಅಭ್ಯರ್ಥಿತನವನ್ನು ಅನುಮೋದಿಸಿದ್ದರೆಂಬುದು ನನ್ನ ನೆನಪು. ಆ ಚುನಾವಣೆಯ ನಂತರ ಯಡ್ಯೂರಪ್ಪನವರು ಮುಖ್ಯಮಂತ್ರಿ ಆಗುವರೆಂಬುದು ಮೊದಲೇ ನಿರ್ಧಾರ ಆಗಿತ್ತಾದ್ದರಿಂದ ಆಗ ಪ್ರಶ್ನೆಗಳು ಎದ್ದಿರಲಿಲ್ಲ.
ನನಗನಿಸಿದಂತೆ ಎಲ್ಲಾ ಪಕ್ಷಗಳಲ್ಲೂ ಆಂತರಿಕವಾಗಿ ಕೇಂದ್ರ ನಾಯಕತ್ವ ಅನ್ನುವುದು ಇದ್ದೇ ಇದೆ. ಆದರೆ ಕೇಂದ್ರದ ಮಾತನ್ನೇ ಪಾಲಿಸಬೇಕೆಂಬ ನಿಯಮ ಭಾಜಪಾದಲ್ಲಿ ಇಲ್ಲ ಅನ್ನಬಹುದು.
ಅಥವಾ ಗುಲಾಮಗಿರಿ ಅನ್ನುವುದು ಭಾಜಪಾದಲ್ಲಿ ಇಲ್ಲ.
ಕಾಂಗ್ರೇಸಿನ ಬಗ್ಗೆ ಹೇಳುವುದಾದರೆ ಅದೊಂದು ರಾಷ್ಟ್ರೀಯ ಪಕ್ಷವೇ ಅಲ್ಲ. ಅಲ್ಲಿ ಗಾಂಧೀ ಕುಟುಂಬ ಮತ್ತು ಅದರ ಗುಲಾಮರಷ್ಟೇ ಇರುವುದು.
ಜೆಡಿಎಸ್ ಅನ್ನುವ ಪಕ್ಷದ ಬಗ್ಗೆ ಹೇಳುವುದಾದರೆ ಈ ಮೇಲಿನ ವಾಕ್ಯದಲ್ಲಿನ “ಗಾಂಧೀ” ಪದದ ಬದಲಿಗೆ “ಗೌಡ” ಅನ್ನುವ ಪದಗಳನ್ನು ಸೇರಿಸಿಕೊಂಡರಾಯ್ತು, ಅಷ್ಟೇ.
ಹೆಚ್ಚಿನ ವ್ಯತ್ಯಾಸವೇನೂ ಅಲ್ಲಿಲ್ಲ.
ಚೆನ್ನಾಗಿದೆ, ವಿಭಿನ್ನ ಯೋಚನಾ ಲಹರಿಯಿಂದ ಕೂಡಿರೋ ಲೇಖನ. ಹೀಗೆ ಯೋಚಿಸೋದು ಕೂಡಾ ಸರಿಯಾಗಿದೆ. ಧನ್ಯವಾದ.
ಚನ್ನಾಗಿದೆ ಬರಹ.
ಆದರೆ.. ಬಲವಾದ ನಾಯಕರ ಕೊರತೆಯನ್ನು ಭಾಜಪ ಎದುರಿಸುತ್ತಿರುವುದು ಹಾಗು ಯಡಿಯೂರಪ್ಪರ ಮಾತಿಗೆ ಕೊಲೆ ಬಸವನ ಹಾಗೆ ತಲೆಯಾಡಿಸುವ ದಿಲ್ಲಿ ನಾಯಕರು ಬೇರೆಯೇ ಸಂದೇಶವನ್ನು ಕೊಡುತ್ತಾರೆ ತಾನೇ! ಯಡಿಯೂರಪ್ಪರ ಜತೆಗೆ ಅವರ ‘ವ್ಯವಹಾರದಲ್ಲಿ’ ಲಾಭಾಂಕ್ಶಿಭಾಗಿ ಆಗಿದ್ದಾಗ ಹೇಗೆ …..!
ಇನ್ನೂ ಪ್ರಾಂತೀಯ ಪಕ್ಷಗಳನ್ನೆಲ್ಲ, ದೇವೇಗೌಡರ ಪಕ್ಷ, ಕರುಣಾನಿಧಿ ಪಕ್ಷ, ಮಮತಾ ಪಕ್ಷ ( ಈಕೆಯ ಸೋದರಳಿಯ ರಾಜಕೀಯಕ್ಕೆ ಬಂದಾಗಿದೆ ), ಠಾಕ್ರೆ ಪಕ್ಷ, ಪವಾರ್ ಪಕ್ಷ, ಬೀಜು ಪಕ್ಷ, ಏನ್.ಟಿ.ಆರ್. ಪಕ್ಷ , ಲಾಲು ಪಕ್ಷ, ಎಂದುಕೊಂಡು ಹೋದರೆ, ಸಕಳ ಪ್ರಾಂತೀಯ ಪಕ್ಷ ( ಬೆರಳಿಕೆಯಷ್ಟು ಬಿಟ್ಟು )ಗಳೂ ಕುಟುಂಬ ರಾಜಕಾರಣದವೇ! ಭಾಜಪದಲ್ಲೂ ಕುಟುಂಬ ರಾಜಕಾರಣವಿದೆ ತಾನೇ.
ಕಂಮುನಿಸ್ತರು ನೋಡಿ.. ಭ್ರಷ್ಟಚಾರವೆಸಗದ ಕುಟುಂಬ ರಾಜಕಾರಣವಿಲ್ಲದ ಪ್ರಾಮಾಣಿಕ ಮಂದಿ .! 🙂
>> ಕಂಮುನಿಸ್ತರು ನೋಡಿ.. ಭ್ರಷ್ಟಚಾರವೆಸಗದ ಕುಟುಂಬ ರಾಜಕಾರಣವಿಲ್ಲದ ಪ್ರಾಮಾಣಿಕ ಮಂದಿ .! <<
ಈ ವಿಷಯ ಒಪ್ಪುವಂತದ್ದು..ಬ್ರಷ್ಟಾಚಾರ ನಮ್ಮ ಕಮ್ಯುನಿಷ್ಟರಲ್ಲಿ ಸ್ವಲ್ಪ ಕಮ್ಮಿ. ಆದರೆ ಈ ಕಮ್ಯುನಿಷ್ಟರು ಮಹಾ ತಿಕ್ಕಲರು! :). ಇಡಿ ಜಗತ್ತಿನ ಕಮ್ಯುನಿಷ್ಟರು/ ಕಮ್ಯುನಿಷ್ಟ ದೇಶಗಳು ಬದಲಾದರೂ ನಮ್ಮವರದು ಅದೇ ಹಳೆ ಹರಕು ಸಿದ್ಧಾಂತ ಮತ್ತು ಚೀನಾ ಕಡೆ ಮುಖ ಮಾಡಿ ಪ್ರಾರ್ಥನೆ ಮಾಡುವ ನೀತಿ!.
ಮತ್ತೊಂದು ವಿಷಯವೆಂದರೆ, ನಮ್ಮ ದೇಶದಲ್ಲಿ ಕಮ್ಯೂನಿಷ್ಟ ಆಡಳಿತ ಪ್ರಜೆಗಳನ್ನೇನು ಉದ್ಧಾರ ಮಾಡಿಲ್ಲ..ಮಾದರಿಯಾಗಬಹುದಾದ ಆಡಳಿತವನ್ನೇನು ಅವರು ಕೊಡಲಿಲ್ಲ. ಸಿದ್ಧಾಂತದಲ್ಲೆ ಸ್ವರ್ಗ ತೋರಿಸುವವರು ಕಮ್ಯುನಿಷ್ಟರು. ಇದಕ್ಕೆ ಒಳ್ಳೆಯ ಉದಾಹರಣೆಗೆ ಪ.ಬಂಗಾಳದ ಜ್ಯೋತಿಬಸು ದೀರ್ಘ ಅವಧಿಯ ಆಡಳಿತ ಮತ್ತು ಉಳಿಸಿ ಹೋದ ದರಿದ್ರತೆ.
ಕಾಮ್ಮುನಿಸ್ತರು ಜನರನ್ನು ಹಣದಿಂದ ಶ್ರೀಮಂತರನ್ನಾಗಿ ಮಾಡದೆ ಇರಬಹುದು, ಆದರೆ, ಕಾಮ್ಮುನಿಸ್ತರು ಆಳಿದ ರಾಜ್ಯಗಳಲ್ಲಿ ವೈಚಾರಿಕ ಶ್ರೀಮಂತಿಕೆ ಅಪಾರ. ಅವರ rationality -ಯ ಪಾಠ ತಾರ್ಕಿಕವಾಗಿಯೂ, ವೈಜ್ಞಾನಿಕವಾಗಿಯೂ ಇರುವುದು.
ಅವರ ಎಡವಟ್ಟು ಇರುವುದು, ಸಮಾನತೆಯನ್ನು ಜನರಲ್ಲಿ ತರುವುದರ ಬದಲು ಹೇರುವ ಮಾರ್ಗ. ಸಮಾನತೆಯನ್ನು ಮನಃಪರಿವರ್ತನೆಯಿಂದ ತರಬೇಕು ಹೊರತು ಬಂದೂಕಿನ ನಳಿಕೆಯನ್ನು ಮೂತಿಗೆ ತಿವಿದು ಸಮಾನತೆಯನ್ನು ಒಪ್ಪಿಕೊ ಎಂದು ಬೆದರಿಸಬರದು. ಗಾಂಧಿ ಕೂಡ ಸಮನತಾವಾದಿ, ಆದರೆ ಕಾಮ್ಮುನಿಸ್ತರಲ್ಲ.
>>ಅವರ rationality -ಯ ಪಾಠ ತಾರ್ಕಿಕವಾಗಿಯೂ, ವೈಜ್ಞಾನಿಕವಾಗಿಯೂ ಇರುವುದು.<<
ಒಪ್ಪಿದೆ. ಬಲಪಂಥಿಯರಲ್ಲಿ emotionally driven ವಿಚಾರಗಳ ಪ್ರಮಾಣ ಸ್ವಲ್ಪ ಹೆಚ್ಚು.
ನೀವೆಲ್ಲಾದರೂ ಬಲ ಮತ್ತು ಎಡ ಪಂಥಿಯರ ತುಲನೆಯ ಪಟ್ಟಿಯನ್ನು ನೋಡಿದ್ದಿರ? ಇದ್ದರೆ ಕೊಂಡಿಯನ್ನು ಹಂಚಿಕೊಳ್ಳುತ್ತೀರಾ? ಓದುವ ಕುತೂಹಲವಿದೆ.
“ಬಲಪಂಥಿಯರಲ್ಲಿ emotionally driven ವಿಚಾರಗಳ ಪ್ರಮಾಣ ಸ್ವಲ್ಪ ಹೆಚ್ಚು.”
ಭಗವದ್ಗೀತೆ ಈ ಭಾವೋದ್ವೇಗವನ್ನು ಚೆನ್ನಾಗಿ ವಿವರಿಸುವುದು. ಓದಿ. ಅದು ಆಸೆ-ಕೋಪ-ಕ್ರೋಧ ಹಾಗು ಅತಿಕ್ರೋಧದಿಂದ ಮತಿ-ವಿಭ್ರಮವನ್ನು ಚೆನ್ನಾಗಿ ವಿವರಿಸಿದೆ. ಹಾಗೆ ತಾರ್ಕಿಕ ಸ್ಥಿತಪ್ರಜ್ಞೆ ಹಾಗು ಸಮಾನತೆಯನ್ನು ವಿವರಿಸುತ್ತದೆ.
Rationality , ತಾರ್ಕಿಕತೆ, ವೈಜ್ಞಾನಿಕತೆಯಾ ಜತೆಜತೆಗೆ ವ್ಯಕ್ತಿ/ಅಭಿವ್ಯಕ್ತಿ ಸ್ವತಂತ್ರ, ಎಲ್ಲ ಅಭಿಪ್ರಾಯ/ಅನಿಸಿಕೆಗಳಿಗೆ ಸೌಹಾರ್ಧವಿರುವ ಹದ-ಪಂಥ ತುಂಬಿರುವ ದೇಶ/ಆಡಳಿತಗಳೂ ಇವೆ.
“ನೀವೆಲ್ಲಾದರೂ ಬಲ ಮತ್ತು ಎಡ ಪಂಥಿಯರ ತುಲನೆಯ ಪಟ್ಟಿಯನ್ನು ನೋಡಿದ್ದಿರ? ಇದ್ದರೆ ಕೊಂಡಿಯನ್ನು ಹಂಚಿಕೊಳ್ಳುತ್ತೀರಾ? ಓದುವ ಕುತೂಹಲವಿದೆ.”
http://www.politicalcompass.org/test
ಯಡಿಯೂರಪ್ಪ ಸಾಹೇಬರದು ಸ್ವಾಭಿಮಾನದ ಫೈಟ್ ಅಲ್ಲ..ಬುಡ ಉಳಿಸಿಕೊಳ್ಳುವ ಫೈಟು!, ಅವರ ‘ಸ್ವಾಭಿಮಾನ’ದ ತುಣುಕುಗಳನ್ನು ಹಳೆಯ ಎಲ್ಲ ಅಧಿಕಾರ ಉಳಿಸಿಕೊಳ್ಳುವ ಪ್ರಹಸನಗಳಲ್ಲಿ ನಾವು, ನೀವು ಎಲ್ಲರೂ ನೋಡಿದ್ದೇವೆ.
ಯಡಿಯೂರಪ್ಪ ಎರಡು ದಿವಸ ತಳ್ಳಿದ್ದು ಆಷಾಡ ಮುಗಿಯುವ ತನಕ ಅಧಿಕಾರದಲ್ಲಿದ್ದರೆ, ಮುಂದೆ ರಾಜಕೀಯ ಭವಿಷ್ಯ ಉಜ್ವಲವಿದೆ ಎಂಬ ಜ್ಯೋತಿಷಿಗಳ ಮಾತು ಕೇಳಿ. ತನ್ನ ಮಾತಿನಂತೆ ಹೈಕಮಾಂಡನ್ನು ಬಗ್ಗಿಸುತ್ತೇನೆ ಎನ್ನುವುದಿದ್ದರೆ ‘ಸದಾನಂದ ಗೌಡರನ್ನು ಮುಖ್ಯಮಂತ್ರಿ ಎಂದು ಘೋಷಣೆ ಮಾಡಿದ ನಂತರವೆ ರಾಜಿನಾಮೆ’ ಎಂದು ಬೆದರಿಸಿದವರು ಅದರಂತೆ ಯಾಕೆ ನಡೆದುಕೊಳ್ಳಲಿಲ್ಲ?.. ತಮ್ಮ ಬೇಡಿಕೆ ತಿರಸ್ಕೃತವಾದಾಗ, ಮತ್ತಷ್ಟು ‘ಸ್ವಾಭಿಮಾನ’ ತುಂಬಿಕೊಂಡು, ತಾವೇ ಗಾಳಿಯಲ್ಲಿ ತೇಲಿ ಬಿಟ್ಟ ಸುದ್ದಿಯಂತೆ ಪ್ರಾದೇಶಿಕ ಪಕ್ಷ ಮಾಡುವ ನಿರ್ಧಾರ ಕೂಡಲೇ ಮಾಡಲಿಲ್ಲ? ( ಅದೂ ಎಪ್ಪತ್ತು ಶಾಸಕರ ಬೆಂಬಲವಿದೆಯೆಂದಿದ್ದವರು)
ಈ ಯಪ್ಪನ ನಾಟಕವನ್ನು ಕನ್ನಡಿಗನ ಸ್ವಾಭಿಮಾನಕ್ಕೆ ಹೋಲಿಸುವುದಾದರೆ..ಇಲ್ಲಿ ಇನ್ನೆರಡು ತಾಜಾ ಉದಾಹರಣೆಗಳಿವೆ..ಈ ಫೈಟಿಂಗ್ ಮಾಸ್ಟರ ಬಗ್ಗೆ:
– ವೆಂಕಯ್ಯ ನಾಯ್ಡು ಲ್ಯಾಪಟಾಪ್ ನ್ನು ಕುಟ್ಟಿ ಹಾಕಿದ್ದು ತನಗೆ ಬೆಂಬಲ ಸೂಚಿಸಿ ಪತ್ರ ಬರೆಯಲಿಲ್ಲವೆಂದು.
– ನಂತರ ಮನೆಯ ಹತ್ತಿರ ಒಬ್ಬ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದು.
ಸಾಹೇಬರು ನಿರಂತರವಾಗಿ ನಮಗಾಗಿ, ನಮ್ಮ ನಾಡಿನ ಒಳಿತಿಗಾಗಿ/ ಹೆಮ್ಮೆಗಾಗಿ ದುಡಿದಿದ್ದಾರೆ..ಈಗ ಅವರಿಗೆ ಸ್ವಲ್ಪ ವಿಶ್ರಾಂತಿಯ ಅಗತ್ಯವಿದೆ! 🙂
ನಂಗೂ ಸರಿ ಅನ್ನಿಸ್ತು