ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 5, 2011

2

ಸಂಸ್ಕೃತಿ ಸಂಕಥನ – ೪

‍ನಿಲುಮೆ ಮೂಲಕ

– ರಮಾನಂದ ಐನಕೈ

ಧರ್ಮದ ಮೈಮೇಲೆ – ರಿಲಿಜನ್ನಿನ ಅಂಗಿ 

 ವಿಪರ್ಯಾಸ ನೋಡಿ. ಒಂದು ಕಡೆ ‘ಹಿಂದೂ ಧರ್ಮ’ ಅನ್ನುತ್ತೇವೆ. ಇನ್ನೊಂದು ಕಡೆ ಅದನ್ನೇ ‘ಹಿಂದೂ ರಿಲಿಜನ್’ ಅನ್ನುತ್ತೇವೆ. ಯಾವುದೇ ಭಾರತೀಯರನ್ನು ಕೇಳಿದರೆ ಇವೆರಡರ ನಡುವೆ ವ್ಯತ್ಯಾಸವೇ ಇಲ್ಲ ಎಂದು ಆತ್ಮವಿಶ್ವಾಸದಿಂದ ಪ್ರತಿಪಾದಿಸುತ್ತಾರೆ. ಇವೆರಡರ ವ್ಯತ್ಯಾಸ ತಿಳಿಯದಿದ್ದದ್ದೇ ಭಾರತೀಯರ ಮುಖ್ಯ ಮಾನಸಿಕ ತೊಂದರೆ. ಹಾಗಾಗೇ ನಿತ್ಯ ಗೊಂದಲದಲ್ಲಿ ಒದ್ದಾಡುತ್ತೇವೆ.

‘ರಾಜಕೀಯದಲ್ಲಿ ಧರ್ಮ ಇರಬಾರದು’, ‘ಸಾಹಿತ್ಯದಲ್ಲಿ ಧರ್ಮ ಬರಬಾರದು’, ‘ಕೋಮು ಗಲಭೆಗೆ ಧರ್ಮ ಕಾರಣ’ – ಇತ್ಯಾದಿ ಹೇಳಿಕೆ ಕೇಳಿದಾಗ ನಮಗೆ ಪುನಃ ಗೊಂದಲ. ಏಕೆಂದರೆ ಈ ಹೇಳಿಕೆಯನ್ನು ತೇಲಿ ಬಿಡುವವರು ಬುದ್ಧಿಜೀವಿಗಳು. ಅವರು ರಿಲಿಜನ್ ಎಂಬ ಪರಿಕಲ್ಪನೆಯ ಮೇಲೆ ಪ್ರಜ್ಞಾಪೂರ್ವಕವಾಗಿ ವಾದಿಸುತ್ತಾರೆ. ಆದರೆ ನಾವು ಸಾಮಾನ್ಯ ನಾಗರಿಕರು ಧರ್ಮ ಎಂಬ ಅರ್ಥದ ನೆಲೆಯಲ್ಲಿ ಅದನ್ನು ಗ್ರಹಿಸುತ್ತೇವೆ. ಹಾಗಾಗಿ ಎಲ್ಲವೂ ನಮ್ಮ ಮನಸ್ಸಿಗೆ ಅರ್ಧಸತ್ಯ ಅನಿಸುತ್ತದೆ. ಧರ್ಮ ಬೇಡ ಅಂದರೆ ಪ್ರತಿಯೊಂದಕ್ಕೂ ಅದರದ್ದೇ ಆದ ಕರ್ತವ್ಯ ಬೇಡವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂದರೆ ಧರ್ಮ ಹಾಗೂ ರಿಲಿಜನ್ ಮಧ್ಯೆ ವ್ಯತ್ಯಾಸ ಇರಲೇಬೇಕೆಂಬುದು ನಮ್ಮ ಗೃಹಿಕೆಗೆ ಸೂಚಿಸುತ್ತದೆ. ಎರಡೂ ಒಂದೇ ಆಗಿದ್ದರೆ ಈ ರೀತಿ ಗೊಂದಲ ಏಕೆ ಸೃಷ್ಟಿಯಾಗುತ್ತದೆ? ಇದೇ ಅರ್ಥವಾಗದ ಒಗಟು.

ಧರ್ಮ ಅನ್ನುವುದನ್ನು ಹಿಂದೂ ಪರಂಪರೆಯಲ್ಲಿ ಬೇರೆಬೇರೆ ರೀತಿಯಲ್ಲಿ ಅರ್ಥೈಸಲಾಗುತ್ತದೆ. ಹಾಗೆ ಮಾಡುವಾಗ ನಮ್ಮ ಸಂಪ್ರದಾಯಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಧರ್ಮದ ಪರಿಧಿಯಲ್ಲಿ ಸೇರಿಕೊಳ್ಳುತ್ತವೆ. ಹಾಗಾಗಿ ಇಡೀ ಹಿಂದೂ ಧರ್ಮ ಅಥವಾ ಭಾರತೀಯ ಧರ್ಮಕ್ಕೆ ವ್ಯಾಕರಣ ಸಹ ಏಕಸಾಮ್ಯತೆ ಇರಲಾರದು. ಆಯಾ ಸಂದರ್ಭಗಳಿಗೆ ಒಳಿತನ್ನು ನೀಡುವಾಗ ಧರ್ಮದ ಅರ್ಥಸಾಧ್ಯತೆ ಭಿನ್ನವಾಗಿರುವ ಸಂಭವವಿದೆ. ನಮ್ಮಲ್ಲಿ ಧರ್ಮ ಅನ್ನುವ ವಾಸ್ತವ ಆಯವುದೇ ಸಿದ್ಧ ಶಾಸನಗಳ ಮೂಲಕ ನಿರೂಪಿತವಾಗುವುದಿಲ್ಲ. ಆಯಾ ಸಂದರ್ಭಗಳ ಅನುಭವಗಳ ಮೂಲಕ ಅರ್ಥ ಪಡೆಯುತ್ತ ಸಾಗುತ್ತದೆ. ಧರ್ಮ ಸಂದಿಗ್ಧತೆಯನ್ನು ವ್ಯಕ್ತಿಗಳು ತಮ್ಮ ವೈಯಕ್ತಿಕ ನಿಷ್ಕರ್ಷೆಗಳ ಮೂಲಕ ನಿಬಾಯಿಸುತ್ತಾರೆ ವಿನಾ ಯಾವುದೇ ಶಾಸನಗಳ ಆಧಾರವಾಗಿಯಲ್ಲ. ಧರ್ಮ ಅಂದರೆ ನಿಜವಾದ ‘ಕರ್ತವ್ಯ’ ಎಂಬುದು ನಮ್ಮ ನಂಬಿಕೆ. ಧರ್ಮವನ್ನು ಸ್ಥೂಲವಾಗಿ ಮೂರು ರೀತಿಯಲ್ಲಿ ಲಕ್ಷಣೀಕರಿಸಬಹುದು.

1) ವಿಧಿ: ಮನುಷ್ಯ ಅವಶ್ಯವಾಗಿ ಮಾಡಲೇಬೇಕಾದ ಧರ್ಮ.  ಇದನ್ನು ನಾವು ವಿಧಿ ಅನ್ನುತ್ತೇವೆ. ಮುಂದುವರಿದು ಅದನ್ನು ಪ್ರಶ್ನಿಸುವುದು ನಮಗೆ ಅವಶ್ಯಕತೆ ಅನಿಸಲಾರದು.

2) ನಿಷೇಧ: ಮನುಷ್ಯ ಅವಶ್ಯವಾಗಿ ಮಾಡಲೇಬಾರದಾದ ಸಂಗತಿಗಳು. ಇದಕ್ಕೆ ಪಾಪ-ಪುಣ್ಯಗಳೇ ಕಟ್ಟುಪಾಡು.

3) ಆಪದ್ಧರ್ಮ: ಅನಿವಾರ್ಯ ಸಂದರ್ಭಗಳಲ್ಲಿ ಮಾಡಬಹುದಾದ ಸಂಗತಿಗಳು. ಒಂದು ಕ್ರಿಯೆಯನ್ನು ಮಾಡುವುದರಿಂದ ಅಥವಾ ಮಾಡದೇ ಇರುವುದರಿಂದ ಆ ಸಂದರ್ಭಕ್ಕೆ ಒಳಿತಾಗುತ್ತದೆ ಎಂದರೆ ಹಾಗೆ ಮಾಡಬಹುದು.

 

ಹೀಗೆ ಧರ್ಮದಲ್ಲಿ ಕಾನೂನು ಇದೆ. ನೀತಿ ಇದೆ. ನಿಷ್ಕರ್ಷೆ ಇದೆ, ಮನುಷ್ಯತ್ವ ಇದೆ, ವ್ಯಕ್ತಿಗತ ತರಬೇತಿ ಇದೆ. ಆದರೆ ಯಾವುದೂ ಶಾಸನ ರೂಪದಲ್ಲಿ ಇಲ್ಲ. ಧರ್ಮದ ಒಟ್ಟೂ ಆಶಯ ಒಂದೇ ಆದರೂ ವ್ಯಕ್ತಿಯಿಂದ ವ್ಯಕ್ತಿಗೆ ಅದರ ಕುರಿತು ನಿರ್ಣಾಯಕ ನಿಲುವು ಭಿನ್ನವಾಗಿರುತ್ತದೆ. ಯಾವುದರಲ್ಲಿ ನಿಜವಾಗಿ ಏನು ಇರಬೇಕೋ ಅದು ಇರುವುದೇ ಧರ್ಮ. ನಮ್ಮ ಪ್ರತಿಯೊಂದು ಸಂಪ್ರದಾಯದಲ್ಲೂ ಈ ಧರ್ಮ ಇದೆ. ಧರ್ಮ ತನ್ನ ನೈತಿಕ ಚೌಕಟ್ಟಿನಲ್ಲೇ ವ್ಯಕ್ತಿಗೆ ಸ್ವಾತಂತ್ರ್ಯದ ಪರಮಾಧಿಕಾರ ನೀಡುತ್ತದೆ. ಒಂದು ಸಮುದಾಯವನ್ನು ನೆಮ್ಮದಿಯಲ್ಲಿ ಬೆಸೆದಿಡಬಹುದಾದ ಸೂತ್ರವೇ ಧರ್ಮ. ಧರ್ಮ ಮನುಷ್ಯನ ಕ್ರಿಯಾಜ್ಞಾನದಲ್ಲಿ ಅರ್ಥ ಪಡೆಯುತ್ತ ಸಾಗುತ್ತದೆ.

ವಸ್ತುಸ್ಥಿತಿ ಹೀಗಿದ್ದಾಗ ಪ್ರಸ್ತುತ ಭಾರತದ ಅಸಂಖ್ಯಾತ ಸಮಸ್ಯೆಗಳಿಗೆಲ್ಲ ಈ ಧರ್ಮವೇ ಕಾರಣ ಎಂದುಕೊಳ್ಳುತ್ತಿರುವುದು ಎಷ್ಟರಮಟ್ಟಿಗೆ ನಿಜ? ನಮ್ಮಲ್ಲಿ ಈ ಭಾವನೆ ಬರಲು ಕಾರಣವೇನು? ಇದಕ್ಕೆಲ್ಲ ಮುಖ್ಯ ಕಾರಣ ಭಾರತದಲ್ಲಿ ವಸಾಹತು ಆಳ್ವಿಕೆಯಿಂದ ಆ ಮುಂದಾಗಿ ಬಂದ ರಿಲಿಜನ್ನಿನ ಕಥೆಗೆ ಈ ‘ಧರ್ಮ’ ಎನ್ನುವ ತಲೆಬರಹ ಕೊಟ್ಟಿದ್ದು ನಮಗೆ ಯಾವುದು ಧರ್ಮದ ಸಮಸ್ಯೆಯೆಂದು ಕಾಣುತ್ತವೆಯೋ ಅವೆಲ್ಲ ನಿಜವಾಗಿ ರಿಲಿಜನ್ನಿನ ಸಮಸ್ಯೆಗಳು. ಪ್ರೊ. ಬಾಲಗಂಗಾಧರರು ತಮ್ಮ ಸ್ಮೃತಿ-ವಿಸ್ಮೃತಿ ಭಾರತೀಯ ಸಂಸ್ಕೃತಿಯಲ್ಲಿ ಈ ಸಂಗತಿಯನ್ನು ತರ್ಕಸಮೇತ ಪ್ರಮಾಣಿಕರಿಸುತ್ತಾರೆ. ನಮ್ಮ ಧರ್ಮಕ್ಕೆ ರಿಲಿಜನ್ನಿನ ಬಟ್ಟೆ ತೊಡಿಸಲಾಗಿದೆ. ಈ ಬಟ್ಟೆಯನ್ನು ಬಿಚ್ಚಿ ಧರ್ಮವನ್ನು ನೋಡಿದಾಗ ಮಾತ್ರ ಭಾರತಕ್ಕೆ ಸದ್ಗತಿ. ಹಾಗಾದರೆ ರಿಲಿಜನ್ ಅಂದರೆ ಏನು?

ರಿಲಿಜನ್ ಅಂದರೆ ಒಂದು ವರ್ಣನೆ. ಪಾಶ್ಚಾತ್ಯರ ಪ್ರಕಾರ ರಿಲಿಜನ್ ಅಂದರೆ ಸತ್ಯದೇವನು (ಗಾಡ್) ಮನುಕುಲಕ್ಕೆ ನೀಡಿದ ಕೊಡುಗೆ. ಅವರ ಪ್ರಕಾರ ಸತ್ಯದೇವ (ಗಾಡ್) ಒಬ್ಬನೇ ನಿಜವಾದ ದೇವರು. ಉಳಿದ ದೇವರು (ಗಾಡ್)ಗಳೆಲ್ಲ ಸುಳ್ಳು ದೇವರು  (False Gods) ಇದರ ಹಿಂದೆ ಒಂದು ಥಿಯಾಲಜಿ ಇದೆ. ರಿಲಿಜನ್ ಅನ್ನುವುದು ಒಂದು ಬೌದ್ಧಿಕವಾದ ಸಂಗತಿ. ಇದರಲ್ಲಿ ತಿಳಿದುಕೊಳ್ಳಬೇಕಾದದ್ದು ಬಹಳ ಇದೆ. ಮತ್ತು ಅವುಗಳನ್ನು  ಅದೇ ಅರ್ಥದಲ್ಲಿ ತಿಳಿದುಕೊಳ್ಳಬೇಕೆಂಬ ನಿರ್ಬಂಧ ಕೂಡ ಇದೆ. ತೀರ ಸರಳವಾಗಿ ಹೇಳಬಹುದಾದರೆ ರಿಲಿಜನ್ ಅಂದರೆ ಸಂವಿಧಾನಾತ್ಮಕವಾಗಿ ನೇಯಲ್ಪಟ್ಟ ಕಥೆ. ಬೈಬಲ್, ಕುರಾನ್ಗಳೇ ಈ ಸಂವಿಧಾನ. ನಮ್ಮ ಧರ್ಮಕ್ಕೆ ಈ ರೀತಿಯ ಏಕರೂಪಿ ಸಂವಿಧಾನ ಇಲ್ಲ.

ಈ ಬ್ರಹಾಂಡ ಹೇಗೆ ಉಗಮವಾಯಿತು ಅಷ್ಟೇ ಅಲ್ಲ, ಏಕೆ ಉಗಮವಾಯಿತೆಂದು ರಿಲಿಜನ್ ತಿಳಿಸುತ್ತದೆ. ಸತ್ಯದೇವನು (ಗಾಡ್) ಈ ಪ್ರಪಂಚವನ್ನು ಸೃಷ್ಟಿ ಮಾಡಿದ್ದಲ್ಲದೇ ಅದು ತನ್ನ ಉದ್ದೇಶಗಳನ್ನು ಒಳಗೊಂಡಿದೆಯೆಂಬುದನ್ನು ತಿಳಿಸುತ್ತ ‘ರಿಲಿಜನ್’ ನೀಡುತ್ತಾನೆ ಎಂಬುದು ಪಾಶ್ಚಾತ್ಯರ ನಂಬಿಕೆ. ಆದ್ದರಿಂದ ರಿಲಿಜನ್ ತಿಳಿಸುವ ಸಂಗತಿಗಳನ್ನು ಸತ್ಯವೆಂದು ನಂಬಬೇಕು. ನಂಬದಿದ್ದರೆ ಭ್ರಷ್ಟನಾಗುತ್ತಾನೆ. ರಿಲಿಜನ್ನಿನ ಪ್ರತಿಪಾದನೆಗಳು ಮನುಷ್ಯ ಜ್ಞಾನವಲ್ಲ, ದೈವೀಜ್ಞಾನ ಎಂಬುದಾಗಿ ನಂಬಬೇಕು. ಪ್ರತಿಯೊಬ್ಬ ಮಾನವನ ಗುರಿ ಈ ಸದ್ಯದೇವನ (ಗಾಡ್) ತಲುಪುವುದು. ಮನುಷ್ಯರ ಈ ಗುರಿ ತಪ್ಪಿಸಲಿಕ್ಕಾಗಿ ಸೈತಾನರು ಸುಳ್ಳುದೇವರನ್ನು ಸೃಷ್ಟಿಸುತ್ತಾರೆ. ಈ ಸುಳ್ಳುದೇವರುಗಳನ್ನು ಪೂಜಿಸುವವರು ಭ್ರಷ್ಟರಾಗಿ ಹಾಳಾಗುತ್ತಾರೆ. ಹಾಗಾಗಿ ರಿಲಿಜನ್ ಒಂದೇ ದೇವರನ್ನು ನಂಬುತ್ತದೆ. ಸಾವಿರ ದೇವರನ್ನು ಪೂಜಿಸುವ ನಮ್ಮ ಧರ್ಮ ಅವರಿಗೆ ನೀತಿ ಭ್ರಷ್ಟತೆಯ ಹಾಗೆ ಕಾಣುತ್ತದೆ. ಅರಿಗೆ ಅದನ್ನೇ ಹೇಳಿದರು. ನಾವು ನಂಬಿದೆವು. ಆಗ ನಮಗೇ ನಮ್ಮ ಧರ್ಮ ಮೌಢ್ಯವಾಗಿ ಕಾಣತೊಡಗಿತು.

ಪರಿಸ್ಥಿತಿ ಅರ್ಥವಾಗಬೇಕಾದರೆ ಧರ್ಮ ಮತ್ತು ರಿಲಿಜನ್ ನಡುವಿನ ಮುಖ್ಯ ವ್ಯತ್ಯಾಸವನ್ನು ಗುರುತಿಸಿಕೊಳ್ಳಬೇಕು.

1) ರಿಲಿಜನ್ ಸತ್ಯದೇವ (ಗಾಡ್) ಎಂಬ ಕೇಂದ್ರ ಕಲ್ಪನೆಯ ಮೇಲೆ ನಿಂತಿದೆ. ಧರ್ಮದಲ್ಲಿ ದೇವರ ಕಲ್ಪನೆಗೆ ಕೇಂದ್ರ ಸ್ಥಾನ ಇಲ್ಲ.

2) ರಿಲಿಜನ್ಗೆ ಒಬ್ಬ ಸಂಸ್ಥಾಪಕ ಅಥವಾ ಪ್ರವಾದಿ ಇರುತ್ತಾನೆ. ಧರ್ಮ ಯಾವುದೇ ನಿದರ್ಿಷ್ಟ ಏಕವ್ಯಕ್ತಿಯನ್ನು ತನ್ನ ಪ್ರವಾದಿ ಎಂದು ತಿಳಿಯುವುದಿಲ್ಲ.

3)ರಿಲಿಜನ್ಗೆ ಒಂದು ನಿರ್ಧಿಷ್ಟ ಅಧಿಕಾರವಾಣಿಯ ಗ್ರಂಥ ಇರುತ್ತದೆ. ಬೈಬಲ್, ಕುರಾನ್ ಇದ್ದಹಾಗೆ ಧರ್ಮಕ್ಕೆ ನಿರ್ದೀಷ್ಟ ಧರ್ಮಗ್ರಂಥ ಇರಲಾರದು.

4) ರಿಲಿಜನ್ ಲೋಕಜ್ಞಾನದ ಮೇಲೆ ನಿಂತಿದೆ. ಆದರೆ ಧರ್ಮ, ಕ್ರಿಯಾಜ್ಞಾನದ ಮೇಲೆ ಕೆಲಸ ಮಾಡುತ್ತದೆ.

5) ಒಂದು ರಿಲಿಜನ್ ಇನ್ನೊಂದು ರಿಲಿಜನ್ನ್ನು ಸಹಿಸಲಾರದು. ಆ ಸಹಿಷ್ಣುತೆ ರಿಲಿಜನ್ನಿನ ಲಕ್ಷಣ. ಆದರೆ ಸಹಿಷ್ಮುತೆ ಧರ್ಮ ಲಕ್ಷಣ. ಧರ್ಮ ಇನ್ನೊಂದು ಧರ್ಮದೊಡನೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ.

6) ರಿಲಿಜನ್ ಅನ್ನುವುದು ಥಿಯಾಲಜಿಯಿಂದ ಹೆಣೆಯಲ್ಪಟ್ಟ ಏಕೈಕ ನೈತಿಕ ವ್ಯವಸ್ಥೆ. ಆದರೆ ಧರ್ಮ ಅನುಭವ ಪ್ರಮಾಣಿತವಾದದ್ದು.

7) ರಿಲಿಜನ್ ಏಕೈಕ ನೈತಿಕ ವ್ಯವಸ್ಥೆಯಾದ್ದರಿಂದ ಮತಾಂತರ ಅದರ ಅನಿವಾರ್ಯ ಲಕ್ಷಣ. ಧರ್ಮ ಮತಾಂತರವನ್ನು ವಿರೋಧಿಸುತ್ತದೆ. ಇನ್ನೊಂದು ಧರ್ಮ ಸ್ವಾಯತ್ತತೆಯನ್ನು ಗೌರವಿಸುತ್ತದೆ. ಪಾಶ್ಚಾತ್ಯರು ಭಾರತೀಯ ಸಂಸ್ಕೃತಿಯನ್ನು ಮೌಢ್ಯ ಎಂದು ಗುರುತಿಸಿದ್ದು ಭಾರತೀಯರು ಪಾಶ್ಚಾತ್ಯ ಸಂಸ್ಕೃತಿಯನ್ನು ಗೌರವಿಸಿದ್ದು ಈ ನೆಲೆಯಲ್ಲಿ.

8) ರಿಲಿಜನ್ನಿನ ಒಂದೇ ಒಂದು ಪವಿತ್ರ ಸ್ಥಳ ಇರಬೇಕು. ಹಾಗೂ ಒಂದು ನಿರ್ದಿಷ್ಟ ಸಂಸ್ಥೆ ಬೇಕು. ಆದರೆ ಧರ್ಮ ನಿರ್ದಿಷ್ಟ ಪವಿತ್ರ ಸ್ಥಳ ಹಾಗೂ ಸಂಸ್ಥೆಯನ್ನಾಧರಿಸಿ ನಿಂತಿಲ್ಲ.

9) ರಿಲಿಜನ್ನಿನಲ್ಲಿ ಸಾರ್ವತ್ರಿಕ ಆಚರಣೆ ಅಥವಾ ನಂಬಿಕೆಯನ್ನು ಕಾಣುತ್ತೇವೆ. ಆದರೆ ಧರ್ಮದ ಶ್ರದ್ಧಾ ಸಮೂಹದಲ್ಲಿ ಪರಸ್ಪರ ಸಾಮ್ಯತೆ ಕಾಣದೇ ಇರುವ ಸಾಧ್ಯತೆ ಇದೆ.

ಇವುಗಳ ಹೊರತಾಗಿಯೂ ರಿಲಿಜನ್ನಿನ ಅಂತರ್ಗತವಾದ ಇನ್ನೂ ಹಲವು ಸಂಗತಿಗಳಿವೆ. Faith, Belief, Doctrine ಇತ್ಯಾದಿಗಳು ರಿಲಿಜನ್ನಿನ ಪರಿಮಿತಿಯಲ್ಲಿ ಅದರದ್ದೇ ಆದ ವಿಶೇಷ ಅರ್ಥ ಪಡೆಯುತ್ತವೆ. ಇವನ್ನು ಭಾರತೀಯ ಭಾಷೆಗೆ ತರ್ಜುಮೆ ಮಾಡುವಲ್ಲಿ ಅವಾಂತರವಾಗಿದೆ. ಇಂಗ್ಲೀಶಿನ  Faith, ಮತ್ತು  Belief ಎರಡನ್ನೂ ನಾವು ನಂಬಿಕೆ ಎಂದು ಕರೆಯುತ್ತವೆ. ಅದು ಅರ್ಥ ಸಂಕುಚಿತತೆಗೆ ಕಾರಣವಾಗುತ್ತದೆ. ಈ ತೊಂದರೆಯಿಂದಲೇ ನಮಗೆ ನಮ್ಮ ಧರ್ಮದಲ್ಲೂ ರಿಲಿಜನ್ನಿನ ಹಲವು ಸಂಗತಿಗಳು ಇವೆ ಅಂತ ಭಾಸವಾಗುತ್ತದೆ. ಉದಾಹರಣೆಗೆ ಥಿಯಾಲಜಿಗೆ ಕನ್ನಡದಲ್ಲಿ ‘ಅಧ್ಯಾತ್ಮ’ ಎಂಬ ನಿಘಂಟುವಿನ ಅರ್ಥ ಇದೆ. ಅದು ನಿಜವಾದ ಶಬ್ಧ ಅಲ್ಲ. ರಿಲಿಜನ್ನಿನಲ್ಲಿ  ಅಧ್ಯಾತ್ಮ ಇದೆ. ಆದ್ದರಿಂದ ರಿಲಿಜನ್ ಧರ್ಮ ಒಂದೇ ಎಂದು ಸರಳೀಕರಿಸಿಬಿಡುತ್ತೇವೆ.

ರಿಲಿಜನ್ ಹೊಂದಿದವರೆಂದರೆ ಕೇವಲ ಸತ್ಯದೇವನು ಇದ್ದಾನೆ ಎಂಬ ಹೇಳಿಕೆಯನ್ನು ಒಪ್ಪುವುದು ಮಾತ್ರವಲ್ಲ, ನಮ್ಮ ಜೀವನವೇ ಸತ್ಯದೇವನ ಉದ್ದೇಶದ ಒಂದು ಭಾಗವಾಗಿದೆ ಎಂಬಂತೆ ನೋಡಬೇಕಾಗುತ್ತದೆ. ರಿಲಿಜನ್ನಿನಲ್ಲಿ ಬದುಕುವವನಿಗೆ ತಿಳುವಳಿಕೆ ಹಾಗೂ ಜ್ಞಾನವೇ ಮುಖ್ಯವಾಗುತ್ತದೆ. ಧರ್ಮದಲ್ಲಿ ಬದುಕುವವರಿಗೆ ಅನುಭವ ಮುಖ್ಯವಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಧರ್ಮಕ್ಕಿರುವ ಸರ್ವಸಾಧ್ಯತೆ ಅರಿವಿಗೆ ಬರುತ್ತದೆ.

ಮನುಷ್ಯ ಸಂಸ್ಕೃತಿಗಳನ್ನು ರಚಿಸುವುದೇ ರಿಲಿಜನ್. ಆದ್ದರಿಂದ ಪ್ರಪಂಚದ ಎಲ್ಲ ಸಂಸ್ಕೃತಿಗಳಲ್ಲೂ ರಿಲಿಜನ್ ಇರುತ್ತದೆ ಎಂಬುದು ಪಾಶ್ಚಾತ್ಯರ ವಾದ. ಅದೇ ದೃಷ್ಟಿಯಲ್ಲಿ ಅವರು ಭಾರತವನ್ನು ನೋಡಿದರು. ಆದರೆ ರಿಲಿಜನ್ ಸಂಸ್ಕೃತಿಗಳ ಸಾಮಾನ್ಯ ಲಕ್ಷಣವಲ್ಲ ಎಂಬುದು ಇತ್ತೀಚಿನ ಸಂಶೋಧನೆ. ರಿಲಿಜನ್ ಇಲ್ಲದ ಸಂಸ್ಕೃತಿ ರಿಲಿಜನ್ಅನ್ನು ಆರೋಪಿಸಿಕೊಂಡಾಗ ಸಮಸ್ಯೆಗಳು ಹೇಗೆ ಸೃಷ್ಟಿಯಾಗಬಹುದೆಂಬುದನ್ನು ಬಾಲಗಂಗಾಧರರು ತಮ್ಮ ಸಂಶೋಧನೆಯಲ್ಲಿ ತೋರಿಸಿದ್ದಾರೆ. ಭಾರತದ  ಮಟ್ಟಿಗಂತೂ ಇದು ನೂರಕ್ಕೆ ನೂರರಷ್ಟು ನಿಜ ಎಂಬುದು ನಮ್ಮ ಅರಿವಿಗೆ ಬರುತ್ತವೆ. ಆದ್ದರಿಂದ ಧರ್ಮದ ಕುರಿತಾಗಿ ವಿಚಾರಿಸುವಾಗ ರಿಲಿಜನ್ ಅನ್ನುವ ಸಂಗತಿಯನ್ನು ನಮ್ಮ ಮನಸ್ಸಿನಿಂದ ತೊರೆದು ಹಾಕಿಕೊಳ್ಳಬೇಕಾಗುತ್ತದೆ.

ಪಾಶ್ಚಾತ್ಯರು ರಿಲಿಜನ್ನಿನ ಹಿನ್ನೆಲೆಯಿಂದ ಭಾರತವನ್ನು ಗ್ರಹಿಸಿದರು. ಮೊದಲಮೊದಲು ಅವರಿಗೂ ಗೊಂದಲವಾಗಿರಬಹುದು. ರಿಲಿಜನ್ನಿನ ಸಂಗಿತಗಳನ್ನು ಪರ್ಯಾಯವಾಗಿ ಹಿಂದೂ ಸಂಪ್ರದಾಯಗಳಲ್ಲಿ ಗುರುತಿಸಿದರು. ಅವುಗಳಿಗೆ ಭಾರತೀಯ ಭಾಷೆಗಳಲ್ಲಿ ಪರ್ಯಾಯ ಶಬ್ದಗಳನ್ನು ಸೃಷ್ಟಿಸಿದರು. ಆಗ ಹಿಂದೂ ಸಂಪ್ರದಾಯ ಅಪಭ್ರಂಶ ರಿಲಿಜನ್ ಆಗಿ ಹಿಂದೂಯಿಸಂ ಎಂದು ಕರೆಸಿಕೊಂಡಿತು. ಆಗಲೇ ಧರ್ಮ ರಿಲಿಜನ್ಗೆ ಪರ್ಯಯ ಪದವಾಯಿತು.

ಈ ತಪ್ಪು ತಿಳುವಳಿಕೆಯ ಮೇಲೆ ಭಾರತೀಯ ಸಮಾಜ ವಿಜ್ಞಾನಗಳು ರಚಿತವಾದವು. ಈ ಸಮಾಜವಿಜ್ಞಾನಕ್ಕೆ ಪೂರಕವಾಗಿ ಇಲ್ಲಿನ ರಾಜಕೀಯ, ಆಡಳಿತ, ಚಿಂತನಾಕ್ರಮ, ಕಾನೂನು, ಸಾಮಾಜಿಕ ನ್ಯಾಯದ ಕಲ್ಪನೆ ಬೆಳೆಯುತ್ತ ಬಂತು. ಅಂತಿಮವಾಗಿ ನಮ್ಮ ಧರ್ಮವೇ ನಮಗೆ ಅರ್ಥವಾಗದ ಪರಿಸ್ಥಿತಿ ಎದುರಾಯಿತು. ಇದಕ್ಕೆ ಪೂರಕವಾಗಿ ಪಾಶ್ಚಾತ್ಯರು ಹಿಂದೂಯಿಸಂನ್ನು ಒಂದು ಅರ್ಥಹೀನ ಮುಖಾಭಿನಯ ಎಂದರು. ಅಸಹ್ಯಕರ ಕೊಳಕುಗಳ ರಾಶಿ, ವಿಷಯಲಂಪಟತೆ, ಅಪ್ರಾಮಾಣಿಕತೆ, ಅನ್ಯಾಯ, ಕ್ರೌರ್ಯ, ಸುಲಿಗೆ ಇವುಗಳ ಆಗರವೇ ಹಿಂದುಯಿಸಂ ಎಂದು ಬಾಯಿಗೆ ಬಂದಂತೆ ವ್ಯಾಖ್ಯಾನಿಸಿದರು. ಅಷ್ಟರಲ್ಲೇ ನಮಗೆ ರಿಲಿಜನ್ನಿನ ಅಮಲೇರಿದ್ದರಿಂದ ಅವರ ಹೇಲಿಕೆಗಳು ಅನುಭವಗಳು ನಿಜ ಅನಿಸತೊಡಗಿದವು. ನೂರಾರು ವರ್ಷಗಳು ಕಳೆದರೂ ನಮ್ಮ ತಪ್ಪು ನಂಬಿಕೆಯನ್ನು ಪುನರ್ವಿಮರ್ಶೆಗೆ ಒಳಪಡಿಸಲಿಲ್ಲ.

ಈಗ ಕಾಲ ಬಂದಿದೆ…!

2 ಟಿಪ್ಪಣಿಗಳು Post a comment
  1. Vinayak Inamdar's avatar
    ಆಗಸ್ಟ್ 5 2011

    ಸೂಕ್ಷ್ಮ ವಿಶ್ಲೇಷಣೆ ಚೆನ್ನಾಗಿ ಮೂಡಿ ಬಂದಿದೆ.

    ಉತ್ತರ
  2. parupattedara's avatar
    ಆಗಸ್ಟ್ 5 2011

    ಇಂತಹ ಉತ್ತಮವಾದ ಲೇಖನವನ್ನು ನಮ್ಮ ನಿಲುಮೆಗೆ ಕೊಟ್ಟಿದ್ದಕ್ಕೆ ಧನ್ಯವಾದಗಳು….

    ಉತ್ತರ

Leave a reply to parupattedara ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments