ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 6, 2011

7

ಕಾಸರಗೋಡಿನ ಕನ್ನಡಿಗರ ತ್ಯಾಗ ಮತ್ತು ಬಲಿದಾನಗಳನ್ನು ಕರ್ನಾಟಕ ಮರೆತಿದೆಯೇ..!?

‍ನಿಲುಮೆ ಮೂಲಕ

– ಕುಮಾರ ರೈತ

 “ಕಾಸರಗೋಡು, ಕರ್ನಾಟಕದ ಕನ್ಯಾಕುಮಾರಿ. ಉತ್ತರದಲ್ಲಿ ಬೆಳಗಾವಿ, ಬಳ್ಳಾರಿಗಳಂತೆ ದಕ್ಷಿಣ ಕನ್ನಡದಲ್ಲಿ ನಮ್ಮದು ಕರ್ನಾಟಕದ ಕನ್ಯಾಕುಮಾರಿ. ಕನ್ನಡನಾಡಿನ ಈ ತೆಂಕಣ ಬಾಗಿಲನ್ನು ತೆರೆದಿಟ್ಟು ಕನ್ನಡಿಗರು ಎಚ್ಚರತಪ್ಪಿ ನಿದ್ರೆ ಹೋದುದ್ದೇ ಆದರೆ ನಮ್ಮ ಜನರಿಗೂ, ನಮ್ಮ ನಾಡಿಗೂ ಅಮೂಲ್ಯವಾದ ಕನ್ನಡ ಸಂಸ್ಕೃತಿಗೂ ಪ್ರಮಾದ ಒದಗುವುದರಲ್ಲಿ ಸಂಶಯವಿಲ್ಲ. ವಿಶಾಲ ಕೇರಳ ಚಳವಳಿಯು ಆರಂಭವಾಗಿ ಹತ್ತು ವರ್ಷಗಳು ಸಂದುಹೋದವು. ದಕ್ಷಿಣ ಕನ್ನಡ, ಕೊಡಗು, ನೀಲಗಿರಿ ಜಿಲ್ಲೆಗಳು ಮಲಬಾರಿನೊಂದಿಗೆ ಜತೆಗೊಂಡು ಕೇರಳ ಸಂಸ್ಥಾನ ಅಥವಾ ಪಶ್ಚಿಮ ಪ್ರಾಂತ ಸಂಸ್ಥಾನವೊಂದು ನಿರ್ಮಾಣವಾಗಬೇಕೆಂದು ಈ ಚಳವಳಿಯು ಪ್ರಬಲವಾಗುತ್ತಾ ನಡೆದಿದೆ. ಈ ಚಳವಳಿಯ ಮರ್ಮವನ್ನು ತಿಳಿದುಕೊಂಡು ಕನ್ನಡಿಗರು ಅದನ್ನು ಸಕಾಲದಲ್ಲಿಯೇ ಪ್ರತಿಭಟಿಸದೇ ಹೋದರೆ ಸ್ವಲ್ಪಕಾಲದೊಳಗಾಗಿಯೇ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡಾದರೂ ಮಲಬಾರಿನವರ ಮಡಿಲಿಗೆ ಬೀಳಬೇಕಾಗಬಹುದು”

ಭಾಷಾವಾರು ಪ್ರಾಂತ್ಯ ರಚನೆಯಾಗುವುದಕ್ಕೂ ಒಂಭತ್ತು ವರ್ಷಗಳಿಗೂ ಮೊದಲೇ ಶ್ರೀಧರ ಕಕ್ಕಿಲಾಯರು ಹೇಳಿದ್ದ ಖಚಿತ ಅಭಿಪ್ರಾಯವಿದು. ಇವರು ಕಾಸರಗೋಡಿನ ಸುಪ್ರಸಿದ್ಧ ವಕೀಲರಾಗಿದ್ದರು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಸತತ ೨೫ ವರ್ಷ ಹೋರಾಟ ಮಾಡಿದರು. ಅವರ ಜೀವಿತಾವಧಿಯವರೆಗೂ ಈ ಹೋರಾಟದಲ್ಲಿ ಸಕ್ರಿಯರಾಗಿದ್ದರು. ೧೯೪೭ರ ಡಿಸೆಂಬರ್ನಲ್ಲಿ ಕಾಸರಗೋಡಿನ ಬೋರ್ಡ್ ಹೈಸ್ಲೂಲ್ ಆವರಣದಲ್ಲಿ ೩೧ನೇ  ಕನ್ನಡ ಸಾಹಿತ್ಯ ಸಮ್ಮೇಳನ ನಡೆತು. ಈ ಸಂದರ್ಭದಲ್ಲಿ ಹೊರಬಂದ ಸ್ಮರಣ ಸಂಚಿಕೆ ‘ತೆಂಕುನಾಡು’ ಸ್ಮರಣ ಸಂಚಿಕೆಯಲ್ಲಿ ಶ್ರೀಧರ ಕಕ್ಕಿಲಾಯರ ಈ ಲೇಖನ ಪ್ರಕಟವಾಯಿತು. ಅದರ ಶೀರ್ಷಿಕೆ ‘ಕನ್ನಡ-ಮಲೆಯಾಳ ಸಮಸ್ಯೆ’

ಇದನ್ನೆಲ್ಲ ಪ್ರಸ್ತಾಪಿಸಲು ಕಾರಣವಿದೆ. ಕಾಸರಗೋಡಿಗೆ ಹೋದಾಗಲೆಲ್ಲ ನಾನು ಭೇಟಿ ಕೊಡುವ ಖಾಯಂ ಸ್ಥಳಗಳ ಸಾಲಿನಲಿಬೇಕಲ್ ಕೋಟೆ ಸೇರಿದೆ. ಇಲ್ಲಿ ಪ್ರಾಣದೇವರ ಗುಡಿಯಿದೆ. ಹೊರಭಾಗದಲ್ಲಿ ಗುಡಿ ಹೆಸರನ್ನು ಕನ್ನಡದಲ್ಲಿ ಬರೆಯಲಾಗಿದೆ. ಬೇಕಲ್ ಕೋಟೆ ನಿರ್ಮಾಣ ಮಾಡಿದ್ದು  ಕನ್ನಡಿಗ ರಾಮನಾಯಕ.  (ಟಿಪ್ಪು ಸುಲ್ತಾನ್ ಸೈನ್ಯದ  ದಂಡನಾಯಕ ( ಮೂಲತಃ ಬೇಕಲ್ ಕೋಟೆ ಕನ್ನಡ ಪ್ರದೇಶ. ಇದಕ್ಕೆ ಅನೇಕ ಕುರುಹುಗಳಿವೆ. ಕೋಟೆ ಇರುವ ಊರಿನ ಹೆಸರು ‘ಅಗಸರ ಹೊಳೆ. ಈ ಎರಡೂ ಪದಗಳು ಅಚ್ಚಗನ್ನಡ.

ಫೇಸ್ ಬುಕ್ನಲ್ಲಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂದು ಟಿಪ್ಪಣಿ ಹಾಕಿದ್ದೆ. ಇದಕ್ಕೆ ಸಾಕಷ್ಟು ಪ್ರತಿಕ್ರಿಯೆ ಬಂದಿದೆ. ಪತ್ರಕರ್ತ ರಮೇಶ್ ಎಸ್ ಪೆರ್ಲ (ಕೇರಳಕ್ಕೆ ಸೇರಿದ ಕಾಸರಗೋಡು ಜಿಲ್ಲೆಗೆ ಪೆರ್ಲ ಸೇರಿದೆ) ಅವರು “ನಿಮಗೆ ಕನ್ನಡಿಗರಿಗೆ ಬೇರೆ ಕೆಲಸವಿಲ್ಲ. ಮಂಗಳೂರು ಸಹ ಕೇರಳಕ್ಕೆ ಸೇರಬೇಕು” ಎಂದು ಕಾಮೆಂಟ್ ಮಾಡಿದರು  ಈ ಪ್ರತಿಕ್ರಿಯೆ ನನ್ನ ಮನಸಿಗೆ ನೋವುಂಟು ಮಾಡಿತು. ಕರ್ನಾಟಕಕ್ಕೆ ಕಾಸರಗೋಡನ್ನು ಸೇರಿಸಲು ಅಲ್ಲಿನ ಕನ್ನಡಿಗರು ಮಾಡಿದ ಹೋರಾಟ-ತ್ಯಾಗ-ಬಲಿದಾನಗಳ ಬಗ್ಗೆ ಕಿಂಚಿತ್ತು ಗೊತ್ತಿದ್ದರೂ ಇಂಥ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಈ ಪ್ರತಿಕ್ರಿಯೆಂದ ನನಗೆ ದಿಗ್ಬ್ರಮೆಯೂ ಆಗಿದೆ. ಏಕೆಂದರೆ ಕೇರಳಿಗರು ಮಂಗಳೂರು ತಮ್ಮದು ಎಂದು ಧ್ವನಿ ಎತ್ತಲು ಕಾಯುತ್ತಲೇ ಇದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಕನ್ನಡನಾಡಿನ ಪ್ರಮುಖ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುವ ಪತ್ರಕರ್ತರೊಬ್ಬರು ಇಂಥ ಧ್ವನಿ ಎತ್ತಿದರೆ ಆತಂಕವಾಗದೇ ಇರುತ್ತದೆಯೇ?

ಕಾಸರಗೋಡು ಕರ್ನಾಟಕದ್ದು. ಕರ್ನಾಟಕಕ್ಕೆ ಸೇರಬೇಕು ಎಂದು ಹೋರಾಟ ಮಾಡಿದವರು ಮನೆಮಾತು ತುಳು ಆಗಿದ್ದ ಕನ್ನಡಿಗರು. ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಸಂಭಸವಿಸಬಹುದಾದ ಅಪಾಯವನ್ನು ಇವರು ಶೀಘ್ರವಾಗಿ ಗ್ರಹಿಸಿದರು. ಇದರ ಪರಿಣಾಮವಾಗಿ ಕರ್ನಾಟಕ ಪ್ರಾಂತೀಕರಣ ಸಮಿತಿ ರಚನೆಯಾತು. ಶ್ರೀಉಮೇಶರಾಯರು, ಶ್ರೀಕಳ್ಳಿಗೆ ಮಹಾಬಲ ಭಂಡಾರಿ ಮೊದಲಾದವರು ಅದರ ಮುಂದಾಳತ್ವ ವಹಿಸಿದ್ದರು. ಇಷ್ಟರಲ್ಲಿ ಶ್ರೀಧರ ಕಕ್ಕಿಲಾಯರು ಮಂಗಳೂರಿನಲ್ಲಿಯೂ ವಕೀಲಿಕೆ ಮಾಡತೊಡಗಿದ್ದರು. ಇವರು ಸಮಿತಿಯ ಆಗುಹೋಗುಗಳಲ್ಲಿ ಮುಖ್ಯಪಾತ್ರ ವಹಿಸತೊಡಗಿದರು.

ಭಾಷಾವಾರು ಪ್ರಾಂತ ರಚನೆ ಸಲುವಾಗಿ ಕೇಂದ್ರ ಸರ್ಕಾರ ಫಜಲಾಲಿ ಎಂಬುವರ ನೇತೃತ್ವದಲ್ಲಿ ಆಯೋಗ ರಚನೆ ಮಾಡಿತು. ಇದರಲ್ಲಿ ಕೇರಳದ ಕೆ.ಎಂ. ಫಣಿಕರ್ ಸದಸ್ಯರು. ಆಯೋಗದವರು ಮಂಗಳೂರಿಗೂ ಬಂದರು. ಈ ಸಂದರ್ಭದಲ್ಲಿ ಆಯೋಗದ ಮುಖ್ಯಸ್ಥ ಫಜಲಾಲಿ ಅವರಿಗೆ ಅನಾರೋಗ್ಯ. ಇವರು ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದರು. ಇದರ ಪರಿಣಾಮ ಇವರ ಗೈರುಹಾಜರಿಯಲ್ಲಿ ಕೆ.ಎಂ ಫಣಿಕರ್ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುವಂತಾತು.

ಬೆನೆಗಲ್ ಶಿವರಾಯರು, ಜನಾಬ್ ಎಂ.ಎಸ್. ಮೊಗ್ರಾಲ್, ಶ್ರೀವೈಕುಂಠ ಬಾಳಿಗಾ, ಕೆ.ಎಸ್.ಹೆಗ್ಡೆ, ಎಂ. ಉಮೇಶ್ ರಾವ್ ಆಯೋಗದ ಮುಂದೆ ಸಾಕ್ಷಿ ಹೇಳಿದರು. ಕಕ್ಕಿಲಾಯರು ವಾದ ಮಂಡಿಸಿದರು. ಇದನೆಲ್ಲ ಆಲಿಸುವಂತೆ ನಟಿಸುತ್ತಿದ್ದ ಕೆ.ಎಂ ಫಣಿಕರ್ ಅವರು ಕೂಡ ಸಾಕ್ಷಿ ನುಡಿದವರ ಮಾತು ಅನುಮೋದಿಸಿದರು. ‘ಚಂದ್ರಗಿರಿ ನದಿ ಉತ್ತರ ಭಾಗದ ಮೇಲೆ ಕೇರಳಿಗರಿಗೆ ಯಾವುದೇ ಹಕ್ಕು ಇಲ್ಲ’ ಎಂದರು. ಇದಕ್ಕೆ ಉದಾಹರಣೆಯಾಗಿ “ಹಿಂದೆ ‘ಚಂದ್ರಗಿರಿ ನದಿ ದಾಟಿದ ಕೇರಳದ ನಾಯರ್ ಸ್ತ್ರೀಯರು ಸಮುದಾಯದಿಂದ ಬಹಿಷ್ಕೃತರಾಗುತ್ತಿದ್ದ ಸಂಗತಿಯನ್ನೂ ಸ್ವತಃ ಉಲ್ಲೇಖಿಸಿದರು’ ಇದರಿಂದ  ಹೋರಾಟಗಾರರಿಗೆ ಕರ್ನಾಟಕಕ್ಕೆ ಸೇರಲಿದೆ ಎಂಬ ನಂಬಿಕೆ.

ನವೆಂಬರ್ ೧, ೧೯೫೬ರಲ್ಲಿ ಇವರ ನಂಬಿಕೆ ಹುಸಿಯಾತು. ಕಾಸರಗೋಡು ಪ್ರದೇಶ ಕೇರಳಕ್ಕೆ ಸೇರಿದ ಆದೇಶ ಹೊರಬಿತ್ತು. ಕಾಸರಗೋಡು ಕನ್ನಡಿಗರ ನಂಬಿಕೆಗೆ ಫಣಿಕರ್ ದ್ರೋಹ ಬಗೆದರು. ಹೋರಾಟಗಾರರು ಸುಮ್ಮನಾಗಲಿಲ್ಲ. ಕರ್ನಾಟಕ ಪ್ರಾಂತೀಕರಣ ಸಮೀತಿ ನೇತೃತ್ವದಲ್ಲಿ ಹೋರಾಟ ಮುಂದುವರೆಸಿದರು. ಶ್ರೀಧರ ಕಕ್ಕಿಲಾಯ, ದೇಶಭಕ್ತ ಎಂ ಉಮೇಶರಾಯರು, ಕಯ್ಯಾರ ಕಿಯ್ಯಣ ರೈ, ಕೆ.ಆರ್ ಕಾರಂತ, , ಶ್ರೀಕಳ್ಳಿಗೆ ಮಹಾಬಲ ಭಂಡಾರಿ ಮತ್ತು ಕಾಸರಗೋಡು ಮತ್ತು ೧೯೫೨ರಲ್ಲಿ ಕಾಸರಗೋಡು ಪ್ರದೇಶದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ಬೆನಗಲ್ ಶಿವರಾಯರು ಕೂಡ ಹೋರಾಟದ ಮುಂಚೂಣಿಯಲ್ಲಿದ್ದರು. ಬೆನಗಲ್ ಶಿವರಾಯರು ಸಂಸತ್ನಲ್ಲಿಯೂ ವಿಷಯ ಪ್ರಸ್ತಾಪಿಸಿದರು. ರಾಷ್ಟ್ರನಾಯಕರೆನ್ನಿಸಿಕೊಂಡಿದ್ದ ಪ್ರಧಾನಿ ನೆಹ್ರು ಅವರೊಂದಿಗೂ ವಿಷಯ ಪ್ರಸ್ತಾಪಿಸಿ ಸಾಕಷ್ಟು ಮನವಿಪತ್ರಗಳನ್ನು ನೀಡಿದ್ದರು.

ಕಾಸರಗೋಡಿನಲ್ಲಿ ಬೃಹತ್ ಜಾಥಾ-ಸತ್ಯಾಗ್ರಹಗಳು ಆರಂಭವಾದವು. ಕಾಸರಗೋಡು ಪ್ರದೇಶದ ೨೦ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು ತೊರೆದು ಹೋರಾಟದಲ್ಲಿ ತೊಡಗಿಸಿಕೊಂಡರು. ಎಂ. ಉಮೇಶರಾಯರ ನೇತೃತ್ವದ ಬೃಹತ್ ಸಭೆ, ಭಾಷಾವಾರು ಪಾಂತ ವಿಂಗಡಣಾ ಆಯೋಗದ ಪಕ್ಷಪಾತಿ ವರದಿ ಖಂಡಿಸಿ ನಿರ್ಣಯ ತೆಗೆದುಕೊಂಡಿತು. ಮದ್ರಾಸಿನ ನ್ಯಾಯ ವಿಧಾಯಕ ಸಭೆ ಕೂಡ ವರದಿ ಮೇಲೆ ಸತತ ಚರ್ಚೆ ನಡೆಸಿತು. ಕಾಸರಗೋಡು, ಕರ್ನಾಟಕಕ್ಕೆ ಸೇರಬೇಕೆಂದು ನಿರ್ಣಯ ಮಾಡಿತು. ಧೀಮಂತ ನಾಯಕರಾದ ಕಾಮರಾಜ್, ಸಿ. ಸುಬ್ರಮಣ್ಯಂ ಮತ್ತು ಭಕ್ತವತ್ಸಲ ಅವರು ಕಾಸರಗೋಡು ಕನ್ನಡಿಗರ ಬೇಡಿಕೆ ನ್ಯಾಯಯುತವೆಂದು ಅಭಿಪ್ರಾಯಪಟ್ಟರು. ಈ ನಂತರ ಭಾಷಾವಾರು ಪ್ರಾಂತ ವಿಂಗಡಣಾ ಆಯೋಗದ ವರದಿ ಕುರಿತ ಅಸಮಾಧಾನಗಳ ಪರಿಹಾರಕ್ಕಾಗಿ ಜವಾಹರ್ ಲಾಲ್ ನೆಹ್ರು, ಪಂತ್, ಧೇಬರ್ ಮತ್ತು ಆಲಿ ಅವರಿದ್ದ ಸಮೀತಿ ರಚಿತಗೊಂಡಿತು. ಇದರಿಂದಲೂ ತಮಗೆ ನ್ಯಾಯ ದೊರೆಯಬಹುದೆಂದು ಹೋರಾಟಗಾರರು ನಿರೀಕ್ಷಿಸಿದ್ದರು. ಆದರೆ ಬಾರಿಯೂ ಅವರ ನಂಬಿಕೆ ನಿಜವಾಗಲಿಲ್ಲ.

ಅತ್ತ ಬೆಳಗಾವಿ ತನ್ನದೆಂದು ಮಹಾರಾಷ್ಟ್ರ ಕ್ಯಾತೆ ತೆಗೆಯತೊಡಗಿತು. ಈ ವಿವಾದ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ಮೆಹರ್ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿತು.ವಿವಾದ ಇತ್ಯರ್ಥಕ್ಕಾಗಿ ಆಯೋಗ ಪ್ರಾಮಾಣಿಕ ಪ್ರಯತ್ನ ಮಾಡಿತು. ಕಾಸರಗೋಡಿನ ಕುರಿತು ಸಾಕ್ಷ್ಯಾಧಾರ ಸಂಗ್ರಹಿಸುವ ಸಲುವಾಗಿ ಎಂ. ಮಹಾಜನ್ ಕಾಸರಗೋಡಿಗೆ ಬಂದರು. ಕರ್ನಾಟಕ ಪ್ರಾಂತೀಕರಣ ಸಮೀತಿಂದ ಅವರಿಗೆ ಕಾಸರಗೋಡು ಕರ್ನಾಟಕ್ಕೆ ಸೇರಬೇಕು ಎಂಬುದನ್ನು ಪ್ರತಿಪಾದಿಸುವ ಅನೇಕ ಆಧಾರಗಳಿದ್ದ ಪತ್ರವನ್ನು ನೀಡಲಾತು. ಈ ವಿಸ್ತಾರ ವರದಿಯನ್ನು ಶ್ರೀಧರ ಕಕ್ಕಿಲಾಯರು ಸಿದ್ಧಪಡಿಸಿದ್ದರು. ಸಮೀತಿ ಪರವಾಗಿ ಅತ್ಯಂತ ಪ್ರಬಲವಾಗಿ ಕೆ.ಆರ್. ಕಾರಂತರು ವಾದಿಸಿದರು.

ನ್ಯಾಯಮೂರ್ತಿ ಮೆಹರ್ಚಂದ್ ಅವರು ಮಂಗಳೂರಿಗೂ ಭೇಟಿ ನೀಡಿ ಸಾಕ್ಷಿಗಳನ್ನು ಸಂಗ್ರಹಿಸಿದರು. ಅಲ್ಲಿ ತುಳು, ಕನ್ನಡ, ಕೊಂಕಣಿ ಮಾತನಾಡುವವರು ಕಾಸರಗೋಡು ಅಚ್ಚ ಕನ್ನಡ ಪ್ರದೇಶ ಎಂದು ಸಾಕ್ಷಿ ಹೇಳಿದರು. ಗಮನಾರ್ಹ ಅಂಶವೆಂದರೆ ಮಲೆಯಾಳಂ ಮಾತೃಭಾಷೆಯಾಗಿರುವ ಸಮುದಾಯಗಳು ಕೂಡ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು. ಇದೇ ನ್ಯಾಯ ಎಂದು ಹೇಳಿದ್ದು.

ಬಾರಿ ಕಾಸರಗೋಡು ಹೋರಾಟಗಾರರ ನಂಬಿಕೆ ಸುಳ್ಳಾಗಲಿಲ್ಲ. ಕಾಸರಗೋಡು ಪ್ರದೇಶ ಕರ್ನಾಟಕಕ್ಕೆ ಸೇರಬೇಕೆಂದು ಮತ್ತು ಬೆಳಗಾವಿ ಕರ್ನಾಟಕಕ್ಕೆ ಸೇರಿರುವುದು ಸಮಂಜಸ-ನ್ಯಾಯಯುತವೆಂದು ಮಹಾಜನ್ ಆಯೋಗ ವರದಿ ನೀಡಿತು. ಚಂದ್ರಗಿರಿ ನದಿಯ ಉತ್ತರ ಭಾಗದ ೭೧ ಗ್ರಾಮಗಳು ಕರ್ನಾಟಕಕ್ಕೆ ಸೇರಬೇಕೆಂದು ಹೇಳಲಾಗಿತ್ತು. ಈ ವರದಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಲಿಲ್ಲ. ಇದನ್ನು ಜಾರಿಗೊಳಿಸುವಂತೆ ಮಾಡುವ ಸಲುವಾಗಿ ಮತ್ತೆ ಹೋರಾಟ ಪ್ರಾರಂಭವಾತು. ೧೯೫೭, ೧೯೬೦, ೧೯೬೫ ಮತ್ತು ೧೯೬೭ ಚುನಾವಣೆಗಳ ಫಲಿತಾಂಶ ಹೋರಾಟದ ಧ್ವನಿಯನ್ನು ಎತ್ತಿ ಹಿಡಿಯಿತು. ಆದರೂ ಕೇಂದ್ರ ಸರ್ಕಾರ ಕಣ್ಣು ತೆರೆಯಲಿಲ್ಲ.

ಆದರೆ ಕಾಸರಗೋಡಿನ ಹೋರಾಟಗಾರರು ಸುಮ್ಮನಾಗಲಿಲ್ಲ. ಸತತ ಪ್ರತಿಭಟನೆ, ಸತ್ಯಾಗ್ರಹ ಮತ್ತು ಸಭೆಗಳನ್ನು ನಡೆಸತೊಡಗಿದರು. ಮಾರ್ಚ್ ೧೨, ೧೯೭೧ರಂದು ಕಾಸರಗೋಡಿನಲ್ಲಿ ಬೃಹತ್ ಸಮ್ಮೇಳನ ನಡೆಸಿ ಕಾಸರಗೋಡು ಕರ್ನಾಟಕಕ್ಕೆ ಸೇರಲೇಬೇಕೆಂದು ನಿರ್ಣಯ ಕೈಗೊಂಡು ಇದರ ಪ್ರತಿಗಳನ್ನು ಕೇರಳ, ಕರ್ನಾಟಕ ಮತ್ತು ಕೇಂದ್ರ ಸರ್ಕಾರಗಳಿಗೆ ತಲುಪಿಸಿದರು. ಆದರೆ ಕರ್ನಾಟಕದ ಅಧಿಕಾರಸ್ಥ ರಾಜಕಾರಣಿಗಳ ಮಂದಗಾಮಿ ಧೋರಣೆಂದ ಇದುವರೆಗೂ ಕಾಸರಗೋಡು ಹೋರಾಟಕ್ಕೆ ನ್ಯಾಯ ದೊರೆತಿಲ್ಲ.

ಮಹಾಜನ್ ಆಯೋಗದ ವರದಿ ಜಾರಿಯಾಗದೇ ಇರುವ ಸಂದರ್ಭದಲ್ಲಿಯೂ ಕೇರಳದ ಮುಖ್ಯಮಂತ್ರಿಯಾಗಿದ್ದ ಕರುಣಾಕರನ್ ಸರ್ಕಾರ,ಮಲೆಯಾಳಂ ಭಾಷಿಕರು ಅಧಿಕವಾಗಿರುವ ಪ್ರದೇಶಗಳನ್ನು ಕಾಸರಗೋಡಿಗೆ ಸೇರಿಸಿ ಜಿಲ್ಲೆ ಮಾಡಿತು. ಇದಕ್ಕೆ ಕರ್ನಾಟಕ ಸರ್ಕಾರ ತಡೆಯೊಡ್ಡಬೇಕಾಗಿತ್ತು. ಆದರೆ ನೆಲ-ಜಲದ ಬಗ್ಗೆ ಕಾಳಜಿಲ್ಲದ ಜನ ಅಧಿಕಾರ ಮಾಡಿದ ಪರಿಣಾಮ ತಡೆ ಸಾಧ್ಯವಾಗಲಿಲ್ಲ

ಕಾಸರಗೋಡು ಕೇರಳದಲ್ಲಿಯೇ ಉಳಿಯಬೇಕು, ಮಂಗಳೂರು ಕೂಡ ಕೇರಳಕ್ಕೆ ಸೇರಬೇಕು ಎಂದು ಹೇಳುವವರು ಈ ಅಂಶ ನೆನಪಿನಲ್ಲಿಡಲೇಬೇಕು. ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಸಲುವಾಗಿ ಅಲ್ಲಿನ  ಮಹಿಳೆಯರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ನೂರಾರು ಮಹಿಳೆಯರು ಜೈಲು ಕಂಡಿದ್ದಾರೆ. ಶಾಲಾ-ಕಾಲೇಜು ತೊರೆದು ಹೋರಾಟ ನಡೆಸಿದ ವಿದ್ಯಾರ್ಥಿಗಳು ಲಾಠಿಯೇಟು ತಿಂದು ಸೆರೆವಾಸ ಅನುಭವಿಸಿದ್ದಾರೆ. ೧೯೬೭ರಲ್ಲಿ ನಡೆದ ಹೋರಾಟದಲ್ಲಿ ಶಾಂತರಾಮ ಮತ್ತು ಸುಧಾಕರ ಎಂಬ ವಿದ್ಯಾರ್ಥಿಗಳು ಕೇರಳ ಪೋಲಿಸರ ಗೋಲಿಬಾರಿಗೆ ಬಲಿಯಾಗಿದ್ದಾರೆ. ಈಗ ಹೇಳಿ ಕಾಸರಗೋಡು, ಕೇರಳದಲ್ಲಿಯೇ ಇರಬೇಕೇ…!?

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಿದ ಕರ್ನಾಟಕ ಸರ್ಕಾರ ಕಾಸರಗೋಡು ಪ್ರದೇಶ ಕರ್ನಾಟಕಕ್ಕೆ ಸೇರಲೇಬೇಕೆಂಬ ನಿರ್ಣಯ ತೆಗೆದುಕೊಳ್ಳಬೇಕಿತ್ತು. ದುರಾದೃಷ್ಟವಶಾತ್ ನಿರ್ಣಯ ಆಗಿಲ್ಲ. ಹಾಗಿದ್ದರೆ ಕಾಸರಗೋಡು ಕನ್ನಡಿಗರ ಹೋರಾಟ-ತ್ಯಾಗ ಮತ್ತು ಬಲಿದಾನಗಳನ್ನು ಕರ್ನಾಟಕ ಸರ್ಕಾರ ಮರೆತಿದೆಯೇ..!?

7 ಟಿಪ್ಪಣಿಗಳು Post a comment
  1. Vinay Sharma
    ಮಾರ್ಚ್ 1 2012

    ಕಾಸರಗೋಡಿಗೆ ಹೋದಾಗ ಕನ್ನಡದ ಹಳೆಯ ಬೋರ್ಡುಗಳನ್ನು ಕಾಣುತ್ತೇವೆ. ಹೊಸದಾದ ಎಲ್ಲ ಬೋರ್ಡುಗಳೂ ಮಲಯಾಳದಲ್ಲಿರುವುದು ಕಂಡಾಗ ಮನಸ್ಸಿಗೆ ನೋವಾಗುತ್ತದೆ.

    ಕಾಸರಗೋಡು ಕನ್ನಡ ಹೋರಾಟದಲ್ಲಿ ’ಬ್ಯಾರಿಬಾಶೆ’ ಮಾತನಾಡುವ ಮುಸ್ಲಿಂ ಸಹೋದರರು ಕೈಜೋಡಿಸಿದಲ್ಲಿ ಆಶಯ ಬೇಗ ಈಡೇರಬಹುದು. (ಬ್ಯಾರಿಭಾಶೆಯೆಂದರೆ ಮಲೆಯಾಳವಲ್ಲ, ತಿಳಿದಿರಲಿ)

    ಮುಂದಾದರೂ ಕಾಸರಗೋಡು ಕನ್ನಡನೆಲವಾಗಬಹುದೆಂಬ ನಂಬಿಕೆ.

    ಉತ್ತರ
  2. Yathish kumar
    ಆಗಸ್ಟ್ 13 2014

    ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಅಥವಾ ಕೇರಳಕ್ಕೆ ಸೇರಬೇಕು ಅನ್ನುವ ಮಾತು ಈಗ ಅಪ್ರಸುತ. ಭಾಷಾವಾರು ಪ್ರಾಂತ್ಯ ರಚನೆ ಸಂದರ್ಭದಲ್ಲಿ ಕಾಸರಗೋಡು ಸೇರಿ ತುಳು ಮಾತಾಡುವ ಬಾಗಗಳನ್ನು ಸೇರಿಸಿ ತುಳುರಾಜ್ಯ ಮಾಡುವ ಪ್ರಸ್ತಪನೆ ಕೇಂದ್ರ ಸರಕಾರದ ಮುಂದೆ ಇತ್ತು, ಆದರೆ ಗೋವದಿಂದ ಒಲಸೆ ಬಂದು ತುಳುನಾಡಿನಲ್ಲಿ ಆಶ್ರಯ ಪಡೆದ ಕೊಂಕಣಿಗಳು ಮತ್ತು ಕ್ರಿಶ್ಚಿಯನ್ ಜನರ ಕೆಲವು ನಾಯಕರು ತುಳು ಭಾಷೆಗೆ ಸ್ವಂತ ಲಿಪಿ ಇದ್ದರೂ ಇಲ್ಲ ಅಂತ ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿದರು, ಈ ಕುತಂತ್ರದಿಂದ ತುಳುರಾಜ್ಯ ನುಚ್ಚು ನೂರಾಯಿತು,
    ತುಳು ಕರ್ನಾಟಕದ ಒಂದು ಭಾಷೆ ಆದರೆ ಅಡಿಯಾಳು ಅಲ್ಲ! ತುಳು ಭಾಷೆ ಉಳಿಸಲು ಮತ್ತು ಬೆಳಸಲು ಕನ್ನಡಿಗರ ಸಹಕಾರ ಬೇಕು ಆದರೆ ಅದಕ್ಕೆ 5% ದಷ್ತು ಬೆಂಬಲ ಸಿಗುತ್ತಿಲ್ಲ ಅನ್ನುವುದು ಮಹಾ ಸತ್ಯ. ದ್ರಾವೀಡ ಭಾಷೆಯಲ್ಲಿ ತುಳು ಮೊದಲನೆಯ ಭಾಷೆ ನೆನಪಿರಲಿ, ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ತುಳುವರು ಕಳೆದ 20 ವರ್ಷದಿಂದ ಹೊರಡುತ್ತಿದ್ದಾರೆ, ಇದಕ್ಕೆ ಯಾವ ಕನ್ನಡಿಗನು ಬೆಂಬಲ ಕೊಡುತ್ತಿಲ್ಲ, ತುಳುವಿಗೆ 8ನೇ ಪರಿಚ್ಛೇದದ ಮಾನ್ಯತೆ ತುಳುವರ “ಹಕ್ಕು” ಯಾರ ಭಿಕ್ಷೆಯಲ್ಲ..
    ಎಲ್ಲ ಕಡೆ ಕನ್ನಡವೇ ಉಳಿಯಬೇಕು ಎನ್ನುವ ಮಹದಾಸೆಯಿಂದ ಇನ್ನು 30 ವರ್ಷದಲ್ಲಿ ತುಳುವ ಎನ್ನವ ಮನುಸ್ಯ ಉಪ್ಪಿನ ಕಾಯಿ ನೆಕ್ಕಲು ಸಿಗುದಿಲ್ಲ! ಕನಾಟಕದ ಉಳಿದ ಬಾಗದಲ್ಲಿ ಕನ್ನಡವೇ ಸತ್ಯ, ಇದಕ್ಕೆ ತುಳುವರ ಸಂಪೂರ್ಣ ಬೆಂಬಲ ಇದೆ. ಆದರೆ ತುಳುನಾಡಿನಲ್ಲಿ ತುಳು ಭಾಷೆ ಸತ್ತರೆ ಕನ್ನಡ ಇನ್ನು ಬೆಳೆಯುತ್ತದೆ ಅನ್ನುವ ಇವರು ತುಳು ಬಾಷೆಯನ್ನು ಹೇಗೆ ವ್ಯವಸ್ತಿತ ಕೊಲ್ಲುತಿದ್ದರೆ ಅನ್ನುವುದಕ್ಕೆ ಬೇಕಾದಷ್ಟು ಉದಾಹರಣೆ ಸಿಗುತ್ತದೆ. ಕುಂದಾಪುರದ ಬಾರ್ಕೂರು ಒಂದು ಕಾಲದಲ್ಲಿ ತುಳುವಿನ ರಾಜ್ಯದಾನಿ ಯಾಕೇ ಅಲ್ಲಿ ತುಳು ಭಾಷೆ ನಿರ್ನಾಮವಾಗಿ ಕನ್ನಡ ಉದಯಿಸಿತು ಹೇಳಿ? ಈ ಕನ್ನಡೀಕರಣ ಇಲ್ಲಿಗೆ ನಿಲುವುದಿಲ್ಲ ಪುರಾತನ ತುಳುನಾಡಿನ ಹೆಸರು ಬಸ್ ಸ್ಟಾಂಡ್, ಗುಡಿ, ದೇವಸ್ಥಾನ, ದೈವಸ್ಥಾನ ಎಲ್ಲ ಕನ್ನಡೀಕರಣಗೊಳ್ಳುತ್ತಿವೆ, ಯಾಕೇ ಸ್ವಾಮಿ ಇಂತಹ ಕೆಟ್ಟ ಬುದ್ದಿ?
    ನಿಮಗೆ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ತುಳು ಮಾತಾಡುವುದು ಶಿಕ್ಷೆಗೆ ಅರ್ಹವಾದ ಅಪರಾದ ಮತ್ತು ಅಲ್ಲಿ ತುಳು ಸಂಪೂರ್ಣ ನಿಷೇದ! ತುಳು ಮಾತಾಡಿದರೆ ಶಿಕ್ಷೆ ಕನ್ನಡ ಮಾತಾಡಿದರೆ ರಕ್ಷೆ !
    ತುಳುವಿನ ಈ ಸ್ಥಿತಿಗೆ ತುಳುವರೇ ಹೊರತು ಕನ್ನಡಿಗರು ಅಲ್ಲ ಅನ್ನುವ ವಿತಂಡವಾದವನ್ನು ಕೆಲವರು ಮಂಡಿಸುತ್ತಾರೆ. ಅಲ್ಲದೇ ತುಳು ಭಾಷೆಗೆ ಸಿಗಬೇಕಾಗಿದ್ದ ಪ್ರಾಶಸ್ತ್ಯಗಳು, ಸ್ಥಾನಮಾನಗಳಿಗೆ ತುಳುವರೇ ಹೋರಾಡಬೇಕು ಹೊರತು ಕನ್ನಡಿಗರು ಅಲ್ಲ ಅನ್ನುವ ಜನರೇ ಹೆಚ್ಚು. ಶಾಲೆಗಳಲ್ಲಿ ತುಳು ಮಾತಾಡುವುದು ಶಿಕ್ಷೆಗೆ ಅರ್ಹವಾದ ಅಪರಾದವಾದ ಮೇಲೆ ಯಾಕೇ ಸ್ವಾಮಿ ಮನೆಯಲ್ಲಿ ತುಳು ಮಾತಾಡಬೇಕು? ಇದು ತುಳು ಬಾಷೆಗೆ ಕರ್ನಾಟಕ ಸರಕಾರ ಕೊಡುತ್ತಿರುವ ಪ್ರೋಸ್ತಹ! ಆತಂಕಕಾರಿ ವಿಷಯ ಅಂದರೆ ಈಗಿನ ಕೆಲವು ವರ್ಷಗಳಲ್ಲಿ ಗೌಡ, ಅಚಾರಿ ಅಲ್ಲದೇ ಅನೇಕ ಜಾತಿಯ ಜನರು ತಮ್ಮ ಮಕ್ಕಳಿಗೆ ಮನೆಯಲ್ಲಿ ತುಳುವಲ್ಲಿ ಮಾತಾಡುವುದನ್ನು ನಿಷೇದ ಮಾಡಿದ್ದಾರೆ!

    ಉತ್ತರ
  3. ಕರಾವಳಿ ಕನ್ನಡಿಗ
    ಜೂನ್ 5 2016

    ಕಾಸರಗೋಡಿನ ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ, ಶಾಲಾ ಕಾಲೇಜುಗಳ ಶಿಕ್ಷಣದಲ್ಲಿ ಎಲ್ಲಾ ಕಡೆ ಮಲೆಯಾಳಿಗಳನ್ನು ಸ್ಥಾಪಿಸಿರುವ ಕೇರಳ ಸರಕಾರ ತನ್ನೆಲ್ಲಾ ಶಕ್ತಿಯಿಂದ ಕನ್ನಡವನ್ನು ಅಳಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದೆ. ಮಲೆಯಾಳಿಗಳ ಶಕುನಿ ಬುದ್ಧಿಯ ದಬ್ಬಾಳಿಕೆಯನ್ನು ಎದುರಿಸಿಕೊಂಡೇ ಕನ್ನಡವನ್ನು ಉಳಿಸಿಕೊಂಡಿರುವ ಕಾಸರಗೋಡು ಕನ್ನಡಿಗರಷ್ಟು ಅಪ್ಪಟ ಕನ್ನಡಿಗರು ಇನ್ಯಾರೂ ಇಲ್ಲ. ಈ ಬಾರಿಯ ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಇಂಥಾ ಸ್ವಾಭಿಮಾನಿ ಕನ್ನಡ ಪ್ರದೇಶವಾದ ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಲು ಎಲ್ಲಾ ಬೆಂಬಲವನ್ನು ಕರ್ನಾಟಕ ಸರಕಾರ ಮಾಡಬೇಕಿತ್ತು. ಉದಾಹರಣೆಗೆ, ಅಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಇಂಜಿನಿಯರಿಂಗ್/ಮೆಡಿಕಲ್‌/ಇತರೇ ಉನ್ನತ ಶಿಕ್ಷಣಕ್ಕಾಗಿ ವಿಶೇ‍ಷ ವ್ಯವಸ್ಥೆ ಮಾಡಬಹುದಾಗಿತ್ತು. ಅಲ್ಲಿನ ಕನ್ನಡ ಮಾಧ್ಯಮ ಶಾಲೆಗಳಿಗೆ ನಮ್ಮಿಂದ ವಿಶೇಷ ಅನುದಾನ ಘೋಷಿಸಬಹುದಾಗಿತ್ತು. ಆದರೆ ಎಲುಬಿಲ್ಲದ ದಕ್ಷಿಣ ಕನ್ನಡ, ಉಡುಪಿ ರಾಜಕಾರಣಿಗಳು ಇವ್ಯಾವುದರ ಬಗ್ಗೆಯೂ ಇಲ್ಲಿಯವರೆಗೆ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿಲ್ಲ, ಕರ್ನಾಟಕ ಸರ್ಕಾರಕ್ಕಂತೂ ಇಂಥಾ ಚಿಲ್ಲರೆ ವಿಷಯಗಳ ಬಗ್ಗೆ ತಲೆ ಕಡಿಸಿಕೊಳ್ಳುವ ಕಾಳಜಿಯೂ ಇಲ್ಲ, ವ್ಯವಧಾನವೂ ಇಲ್ಲ.

    ಉತ್ತರ
    • Goutham
      ಜೂನ್ 5 2016
    • Goutham
      ಜೂನ್ 5 2016

      ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ರವರಿಗೆ ಅಭಿನಂದನೆಗಳು

      ಉತ್ತರ
  4. Salam Bava
    ಜೂನ್ 5 2016

    “ಮಂಜೇಶ್ವರ ಶಾಸಕ ಪಿ.ಬಿ ಅಬ್ದುಲ್ ರಜಾಕ್ ಕೇರಳ ವಿಧಾನಸಭೆಯಲ್ಲಿ ಕನ್ನಡದಲ್ಲೇ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.”

    Muslims have contributed to Kannada selflessly though Kannada is not their mother tongue.

    ಉತ್ತರ
  5. ರಾಜೀವ್
    ಸೆಪ್ಟೆಂ 6 2021

    ನಮಸ್ಕಾರ,
    ನಿಮ್ಮ ಈ ಲೇಖನವನ್ನು ಓದಿ ನನಗೆ ಇತಿಹಾಸದ ಹಲವಾರು ವಿಷಯಗಳು ತಿಳಿದವು. ಇಲ್ಲಿ ಮತ್ತೊಂದು ವಿಷಯವನ್ನು ನಾನು ಹೇಳಬಯಸುತ್ತೇನೆ. ರಾಜ್ಯ ರಚನೆಯ ಸಂದರ್ಭದಲ್ಲಿ ಕೊರಗ, ಬಿಲ್ಲವ, ಮತ್ತು ಇತರ ಪಂಗಡಗಳ ಜನರನ್ನು ಮಲಯಾಳಿ ಎಂದು ದಾಖಲಿಸಿದ್ದಾರೆ. ಎಲ್ಲದಕ್ಕೂ ಮೇಲಾಗಿ ತುಳುವರನ್ನು ಪ್ರತ್ಯೇಕವಾಗಿ ಪರಿಗಣಿಸಿ, ಬ್ಯಾರಿಗಳನ್ನು ಮಾತ್ರ ಮಲಯಾಳಿಗರೆಂದು ಪರಿಗಣಿಸಿ, ಈ ಇಡಿ ಜಿಲ್ಲೆಯಲ್ಲಿ ಮಲಯಾಳ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂದು ತಪ್ಪು ಮಾಹಿತಿಯನ್ನು ಪ್ರಕಟಿಸಿ ಜನರಿಗೆ ಮೋಸ ಮಾಡಿದ್ದಾರೆ.

    ಕಾಸರಗೋಡಿನ ಜನಕ್ಕೆ ಬೇಗ ನ್ಯಾಯ ದೊರೆತು ಆ ಜಿಲ್ಲೆಯು ಸಂಪೂರ್ಣವಾಗಿ ಅಲ್ಲದಿದ್ದರೂ ಕಡೆಯಪಕ್ಷ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳಾದರೂ ದಕ್ಷಿಣ ಕನ್ನಡ ಜಿಲ್ಲೆಗೆ ಸೇರ್ಪಡೆಯಾಗಲೆಂದು ಕೋರುತ್ತೇನೆ.

    ಕನ್ನಡವನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಪುನರುತ್ಥಾನ ಕಾರ್ಯಗಳಲ್ಲಿ ತೊಡಗಿದ್ದೇನೆ.

    ತುಳುನಾಡು ರಾಜ್ಯ ರಚನೆಗೆ ಸಹ ನನ್ನ ಬೆಂಬಲವಿದೆ. ಆದರೆ ಆ ಕೆಲಸ ತುಂಬಾ ದೊಡ್ಡದಾದ ಮತ್ತು ಕಷ್ಟಕರವಾದುದಾಗಿದ್ದು ಸಧ್ಯಕ್ಕೆ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಕಾರ್ಯದಲ್ಲಿ ತೊಡಗುವುದು ಉತ್ತಮವೆಂದು ನನಗೆ ತೋರುತ್ತದೆ.

    ಕೇರಳದವರು, ಕನ್ನಡಿಗರು ಮತ್ತು ತುಳುವರು ಬೇರೆ ಎಂದು ಎರಡೂ ಸಮುದಾಯಗಳನ್ನು ಒಡೆಯುವ ಪ್ರಯತ್ನವನ್ನು ಮಾಡುತ್ತಿದ್ದು ನಾವು ಅದಕ್ಕೆ ಬಲಿಯಾಗದಂತೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ.

    ಉತ್ತರ

Leave a reply to Goutham ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments