ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 12, 2011

4

ನೊಂದ ಹುಡುಗಿಯ ಡೈರಿಯಿಂದ…

‍ನಿಲುಮೆ ಮೂಲಕ

– ವಿದ್ಯಾ ರಮೇಶ್

ದೇವರೆ,

ಇದೊ ನಿನಗೊಂದು ಪತ್ರ. ಏನು ಈ ಹುಚ್ಚು ಹುಡುಗಿ ನನಗೆ ಪತ್ರ ಬರೆಯುತ್ತಿದ್ದಾಳೆ ಎಂದುಕೊಳ್ಳುತ್ತಿದ್ದೀಯ? ಏನು ಮಾಡಲಿ, ನಿನ್ನ ಜೊತೆ ಯಾವಗಲೊ ಒಂದು ಸರತಿ ಸಂಪರ್ಕಿಸುವ ನಾನು, ಒಂದೇ ಕ್ಷಣದಿ ಎಲ್ಲಾ ಹೇಳಲು ಹೇಗೆ ಸಾಧ್ಯ? ಅದು ಅಲ್ಲದೆ ನಿನಗೆ ಎಲ್ಲಾ ಕೇಳುವ ತಾಳ್ಮೆಯಾದರು ಎಲ್ಲಿದೆ? ಎಷ್ಟೋ ಜನರ ಕೋರಿಕೆಗಳನ್ನ ನೋಡ್ಕೊಬೇಕು ನೀನು.., ಅಂತಹದರಲ್ಲಿ ನನ್ನ ನಿಧಾನಗತಿಯಲ್ಲಿ ಹೇಳುವ ಮಾತುಗಳ ಕೇಳಿಸಿಕೊಳ್ಳಲು ಸಧ್ಯವೆ ನಿನಗೆ? ಕಂಡಿತಾ ಇಲ್ಲ. ಇನ್ನು ನೀನು ಈ ಪತ್ರವನ್ನೂ ಓದ್ತಿಯಾ ಅಂತ ನಾ ಅಂದುಕೊಂಡಿಲ್ಲ…ಹಾಗೆ ಅಂದುಕೊಳ್ಳುವುದು ಮೂರ್ಖತನ ಅಂತಲೂ ಗೊತ್ತು. ಆದ್ರೇನು ಮಾಡ್ಲಿ, ಹೇಗಾದರು ನಿನಗೆ ಕನಿಕರ ಬಂದೋ ಏನೊ ಒಮ್ಮೆ ಈ ಪತ್ರ ಓದಿ ನನ್ನ ಮನಸ್ಥಿತಿ ತಿಳಿದಿಕೊಳ್ತಿಯೇನೋ ಅನ್ನೊ ಒಂದು ಚೂರು ನಂಬಿಕೆ…, ಅದಕ್ಕೆ ನಿನಗೆ ಪತ್ರ ಬರೆಯುತಿರುವುದು…

ನಿನಗೆ ತಿಳಿದಿದೆ ಅಲ್ವ ದೇವ್ರೆ, ನಾನು ನಿನ್ನನ್ನು ಜಾಸ್ತಿ ಏನೂ ಕೇಳಿಕೊಳ್ಳುವುದಿಲ್ಲ. ಅಲ್ಲದೆ ನಿನ್ನ ಬಳಿ ಬರುವುದು ನಾನು ಎಂದೊ ಒಂದು ದಿನ, ಯಾವುದೋ ಹಬ್ಬದಂದು. ಆಗ “ಎಲ್ಲರನ್ನು ಚೆನ್ನಾಗಿ ಇಡು” ಅಥವಾ ಪರೀಕ್ಷೆಗಳು ಹತ್ತಿರ ಬರುತಿದ್ದರೆ “ಓದು ಚೆನ್ನಾಗಿ ಆಗಲಿ, ಪರೀಕ್ಷೆ ಸುಲಭವಾಗಿ ಇರಲಿ” ಎಂದು ಕೇಳಿಕೊಳ್ಳುತೀನಿ. ಅದು ಬಿಟ್ಟು ಬೇರೆ ಏನಾದರು ಕೇಳಿರುವೆನೇನು? ಬೆಳಗೆ ಎದ್ದಾಗ ಒಮ್ಮೆ ನಿನ್ನ ಆ ಫೋಟೊ ನೋಡಿದರೆ ಮತ್ತೆ ನಿನ್ನ ನೋಡುವುದು ಮಾರನೆ ದಿನವೇ! ಇದೇ ನಿನಗೆ ಕೋಪವನ್ನುಂಟು ಮಾಡುತಿದೇಯ? ಮನಸ್ಸಿನಲ್ಲಿರುವ ಭಕ್ತಿ ಸಾಲದೆ? ಬೂಟಾಟಿಕೆಗಾಗಿ ನಡೆಸುವವರ ಭಕ್ತಿಯೇ ನಿನಗೆ ಮೆಚ್ಚೆ?

ಮಧ್ಯಮ ವರ್ಗದಲ್ಲಿದ್ದರೂ ನಿನ್ನ ಎಂದೂ ಇಶ್ವರ್ಯಕ್ಕಾಗಿ ಕೇಳಿಲ್ಲ. ನನ್ನನ್ನು ಸಿರಿಯುಳ್ಳವರ ಮನೆಯಲ್ಲಿ ಹುಟ್ಟಿಸಲಿಲ್ಲವಲ್ಲ ಎಂದು ದೂಡಿಲ್ಲ.., ಅಂತಹದರಲ್ಲಿ ಇದ್ದ ಅಲ್ಪ ಸ್ವಲ್ಪ ಖುಷಿಗೂ ಕಲ್ಲೊಡೆಯುವುದೆ ನೀನು? ಸಂತೊಷವ ಬಯಸಲೇ ಬಾರದೆ ನಾನು? ಬಯಸಬಾರದಂತಾದರೆ ನಾನು ಮಾಡಿರುವ ತಪ್ಪಾದರೂ ಏನು?

ಚಿಕ್ಕಂದಿನಿಂದಲೂ ಒಂದು ಥರ ಭಾವಜೀವಿ ನಾನು. ಮೃಧು ಮನಸ್ಸುಳ್ಳವಳು. ಚಿಕ್ಕ ಸಂಗತಿಯನ್ನೂ ಮನಸ್ಸಿಗಚ್ಚಿಕೊಳ್ಳುವವಳು. ಸ್ನೇಹ ಬಳಗಕ್ಕಾಗಿ ಚಡಪಡಿಸುತ್ತಿದ್ದವಳು. ಸ್ನೇಹಿತರೇ ಹಿತೈಶಿಗಳು ಎಂದು ನಂಬಿದ್ದವಳು. ಆದರೆ ಏಕೆ ನನಗೆ ಆ ರೀತಿಯ ಹಿಂಸೆ? ಎಲ್ಲರೂ ನನ್ನ ಕಡೆಗಣಿಸುವಂತೇಕೆ ಮಾಡಿದೆ?ಮರದ ಕೆಳಗಿದ್ದ ಜಾರುಗುಪ್ಪೆಯ ಮೇಲೆ ಹರಿಯುತ್ತಿದ್ದ ಆ ಕಪ್ಪಿರುವೆಯ ಮರಕ್ಕೆ ಬಿಟ್ಟವಳನ್ನು ಆಡಿ ಹೀಯಾಳಿಸಿದ್ದರಲ್ಲ.. ಎಷ್ಟು ನೋವಾಗಿತ್ತು ನನಗೆ ಅಂದು ಗೊತ್ತ ನಿನಗೆ? ಎಲ್ಲಿ ಹೋಗಿ ಅತ್ತಿದ್ದೆ ಅಂತ ಗೊತ್ತ ನಿನಗೆ? ನಿನಗೆಲ್ಲಿ ತಿಳಿದೀತು.., ತಿಳಿದಿದ್ದರೆ ಮುಂದೇಂದೂ ಹಾಗಾಗದಂತೆ ನೋಡಿಕೊಳ್ಳುತಿದ್ದೆ. ಈ ರೀತಿ ಸುಮ್ಮನ್ನಿರುತಿರಲಿಲ್ಲ. ಮುಂದಿನ ತರಗತಿಗಳಲ್ಲಿ ಹೇಗೋ ಚೆನ್ನಾದ ಸ್ನೇಹ ಬಳಗದಲಿ ಎಲ್ಲರಿಗೂ ದೊರೆಯುತ್ತಿದ್ದ ಗೌರವ, ಪ್ರೀತಿ ನನಗೂ ದೊರೆಯುತಿದೆ ಅಂದುಕೊಂಡಿದ್ದೆ…ಆದರೇನು ಮಾಡುವುದು ಎಳೆ ಮನಸ್ಸು ಬೆಳ್ಳಗಿರುವುದೆಲ್ಲ ಹಾಲು ಎಂದು ನಂಬಿದ್ದೆ. ಆದರೆ ತಿಳಿತಿದೆ ಎಲ್ಲಾವು ಬರೀ ಡೊಳ್ಳು ಎಂದು. ಇನ್ನು ಮುಂದಿನ  ದಿನಗಳಲಂತು ನಾ ಪಟ್ಟ ಪಾಡು ಯಾರಿಗೂ ಬೇಡ…

use and throw ಆಗಿಬಿಟ್ಟಿದ್ದೆ ನಾನು. ಸ್ನೇಹಕ್ಕೆ ಬೆಲೆ ಇಲ್ಲದವರ, ಸ್ನೇಹ ಅಂದರೇನೆಂದು ಅರಿಯದವರ ಬಳಿ ಸೇರಿಬಿಟ್ಟಿದ್ದೆ. ಆದರೆ ಅವರದ್ದೇನು ತಪ್ಪಿಲ್ಲ ಬಿಡು..ಅವರಿಗೆ ಬೇಕಾದಂತವರು ಅವರಂತಿದ್ದವರು, ಆದರೆ ನಾನು ಅವರಂತಿರಲಿಲ್ಲವಲ್ಲ, ಅವರಂತೆ ನೀ ನನ್ನ ಹುಟ್ಟಿಸಲಿಲ್ಲವಲ್ಲ. ಅದಕ್ಕಾಗಿ ಅವರನ್ನ ದೂಡಲಾರದು. ಅವರ ಪಾಡಿಗೆ ಅವರ ಬಿಟ್ಟು ಸ್ನೇಹ ಶೋಧನೆಗೆ ನಾನು ಸಿದ್ಧಳಾದೆ. ಮತ್ತೆ ದೊರೆತವರು ಒಂದು ರೀತಿ ನನ್ನಂತವೆ ಆದರೆ ಅಲ್ಲೂ ಏನೂ ಸ್ನೇಹಕ್ಕೆ ಗೌರವ ಇರಲಿಲ್ಲ. ತಮಗೆ ನೋವಾದಾಗ ಮಾತ್ರ ಬಂದು ಅತ್ತುಕರೆದು ಸಮಾಧಾನ ಮಾಡಿಸಿಕೊಂಡು ಒಂದು thanks ಹೇಳಿ ನೀನ್ ನನ್ನ best friend ನೀನೇ ನನ್ನ ಎಲ್ಲಾ ದುಃಖಕ್ಕೂ ಸಮಾಧಾನ ಮಾಡೋಳು. thank you so much ಎಂದು ಹೇಳುತಿದ್ದರು. ಆದರೆ ನನಗೂ ದುಃಖಗಳಿರುತ್ತದೆ ನನಗೂ ಸಮಾಧಾನ ಮಾಡಬೇಕೆಂಬುದ ಮರೆತರು. ಹೀಗಲೂ ಕರೆ ಮಾಡುತ್ತಾರೆ ನಿನ್ನ ಹತ್ತಿರ ಏನೋ ಹೇಳ್ಕೊಬೇಕು ಒಂದು ದಿನ ಸಿಗು, ಇಲ್ಲ ಮನೆಗೆ ಬಾ ಎಂದು ಕರೆಯುತ್ತಾರೆ. ಆದರೆ “ಚೆನ್ನಾಗಿದ್ದೀಯ? ಎಲ್ಲವೂ ಕ್ಷೇಮವ? …..ನಲ್ಲಿ ಎಲ್ಲಾ ಸರಿ ಇದೆಯ? ಎಂದು ಕೇಳರು. ತಮ್ಮ ದುಖಃಕ್ಕಾಗಿ ನನ್ನ ನೆನಪಿಸಿಕೊಳ್ಳುವವರೋ ಹೊರತಾಗಿ ಬೆರ್ಯಾವುದಕ್ಕೂ ಅಲ್ಲ.tissue paper ಆಗಿ ಹೋಗಿದ್ದೀನಿ.., ಮನಸ್ಸಿಗೆ ದುಃಖವಾದಾಗ ಆದ ಕಲೆ ಹೊರೆಸಲು ಬೇಕು ನಾನು, ಹೊರೆಸಿದ ನಂತರ ಬಿಸಾಡಿಬಿಡುತ್ತಾರೆ…!!

collegeನಲ್ಲಿಯಾದರು ಒಂದೊಳ್ಳೆ ಬಳಗ ಸಿಗುವುದೆಂದುಕೊಂಡೆ..ಸಿಕ್ಕೂ ಇದೆ..ಆದರೆ ನೆಮ್ಮದಿಯೇ ಇಲ್ಲ! ನಿನಗೆ ತಿಳಿದಿದೆ ನನಗೆ ಪಾಠ ತಲೆಗತ್ತುವುದಿಲ್ಲ…ನಾನು ಓದುವುದರಲ್ಲಿ ಹಿಂದು ಅಂತ. ಅಷ್ಟು ಗೊತ್ತಿದ್ದರೂ ಇಂತಹ ಬಳಗ ನೀಡುವುದೆ? ಗೆಳತಿಯರೆಲ್ಲ ಓದುವುದರಲ್ಲಿ ಮುಂದು. ನಾನೊಬ್ಬಳೇ ಹಿಂದೆ ಎಂತಾದರೆ ನನಗಲ್ಲಿ ಗೌರವ ಸಿಗುವುದೆ? ತಿಳಿಕೋ ದೇವರೆ ಈ ಜಗದಲ್ಲಿ ಓದುವವರಿಗೆ ಮಾತ್ರ ಗೌರವ, ಪ್ರೀತಿ ದೊರಕುವುದು. ಮನೆಯಲ್ಲಾಗಲಿ, ಹೊರಗಲ್ಲಾಗಲಿ ನಮ್ಮಂತ ಭಾವುಕರಿಗೆ ಸಿಗುವುದು ಕೇವಲ ದುಃಖ…ಆದರಿಂದ ನಾವೂ ಚೆನ್ನಾಗಿ ಓದಬೇಕೆಂದು ಹೋದರೂ ಹಾಳಾದ ಮನಸ್ಸು ಆ ನೋವಲ್ಲೆ ಕೊರಗಿ ಕೊರಗಿ ಓದುವುದನ್ನೂ ನಿಲ್ಲಿಸಿಬಿಡುತ್ತದೆ..!

ಎಲ್ಲರಿಂದಲೂ ದೂರವಾಗುತಿರುವವಳು ನಾನು. ಹೆತ್ತಮ್ಮನಿಗೆ ಇದು ತಿಳಿಯಲಾಗುತಿಲ್ಲ. ನನ್ನ ಆ ಹುರುಳಿಲ್ಲದ ನಗುವನ್ನೇ ನಂಬಿಕುಳಿತಿದ್ದಾಳೆ. ಅದೇ ನನಗೂ ಬೇಕಾಗಿರುವುದು ನನ್ನಿಂದ ಅವಳು ದುಃಖಿಸುವುದು ನನಗಿಷ್ಟವಿಲ್ಲ ಬಿಡು. ನನಗಾಗಿ ಅವಳು ಯಾಕೆ ದುಃಖಿಸಬೇಕು? ಅದು ಈ ಪಾಪಿಗಾಗಿ?

ಏನೇ ಆದರು ನೀ ಮಾಡಿದ್ದು ತಪ್ಪು ದೆವರೆ. ಎಷ್ಟೇ ಹೀಯಳಿಕೆಗೆ, ನೋವಿಗೆ ಒಳಗಾಗಿದ್ದರೂ ಎಂದೂ ಈ ರೀತಿ ದುಃಖಿಸಿದವಳಲ್ಲ ನಾನು. ಆದರೆ ಇಂದು ಸುಮ್ಮನ್ನಿದ್ದರೂ ಕಣ್ಣು ಸೋರುತಿರುವುದು, ಒಂತಿ ರಸ್ತೆಯಲ್ಲಿ ಹೋಗುತಿದ್ದರೆ ಬಿಕ್ಕಳಿಸುತಿರುವೆ.. ಎಲ್ಲರಿಂದಲೂ ದೂರವಾಗುತ್ತಿರುವೆ. ನನ್ನಲ್ಲಿದ್ದ ಆ ನಲಿವು, ವಿನೋದ ಎಲ್ಲವನ್ನೂ ಯಾರೋ ದೋಚಿಕೊಂಡು ಹೋಗಿದ್ದಾರೆ. ಖುಷಿಯಿಂದ ಇದ್ದ ನನ್ನನ್ನು ನಾನೇ “yet happiest girl in the world” ಎಂದು ಹೇಳಿಕೊಳ್ಳಿತ್ತಿದ್ದವಳು, ಇಂದು ಅವೆಲ್ಲ ಜಂಬದ ಮಾತು, ಸೋಲು ಒಪ್ಪಿಕೊಳ್ಳಲಾಗದೆ ಅಹಂಕಾರದಲ್ಲಿ ಹೇಳುತ್ತಿದ್ದ ಮಾತು ಎಂದು ಅನ್ನಿಸುತಿರುವುದು.

ಇಷ್ಟೊಂದು ನೋವು ನನಗೆ ಕೊಡಬೇಕೆಂದು ನಿನಗೆ ಹೇಗೆ ಅನ್ನಿಸಿತು? ನಾನಷ್ಟು ಪಾಪಿನ? ಇಲ್ಲ ನನ್ನ ಮೇಲೆ ನಿನಗೆ ಕರುಣೆಯೇ ಇಲ್ಲವ? ಒಂದು ದಿನ ನನ್ನ ಜಾಗದಲ್ಲಿ ಬಂದು ನೋಡು ನಾನೇಷ್ಟು ದುಃಖಿಸುತಿರುವೆನೆಂದು ತಿಳಿಯುತ್ತೆ  ನಿನಗೆ. ದೂರ ಮಾಡಿಸಿರುವೆ…ಸ್ನೇಹಿತರಿಂದ..ಗೆಳೆಯನಿಂದ…ಸಂತೋಷದಿಂದ…ಭಾವದಿಂದ ಎಲ್ಲದರಿಂದಲೂ..!!!! ಈಗ ನಾನು ಕೇವಲ ಉಸಿರಾಡುತಿರುವ ಶವ! ಹುಟ್ಟಿಸಿದ್ದಿಯಲ್ಲ ನೀನು, ಅದಕ್ಕೆ ಬದುಕಬೇಕಲ್ಲ ಎಂದು ಬದುಕಿದ್ದೀನಿ. ಆತ್ಮಹತ್ಯೆ ಮಾಡಿಕೊಂಡರೆ ನನ್ನ ನಾ ಗೌರವಿಸುತಿರುವುದು ಕೂಡ ನಾಟಕವೇನೊ ಅನ್ನಿಸಿಬಿಡುತ್ತದೆ. ಅದಕ್ಕಾದರು..,ನನ್ನಮ್ಮ, ಅಪ್ಪನ ನಗುವಿಗಾದರು ನಾ ಏನಾದರು ಸಾಧಿಸಬೇಕು.

ದಯಮಾಡಿ ಈ ಯೋಜನೆಗೂ ಕಲ್ಲೊಡೆಯಬೇಡ. ಈ ಪತ್ರವ ಎಂದಾರು ಓದಿ ಕೊಂಚವೇ ಕೊಂಚ ಕನಿಕರಿಸು. ಅಷ್ಟೇ ಸಾಕು ಸದಾಕಾಲ ಋಣಿಯಾಗಿರುವೆ. ಸಿಗುವ ಕೊಂಚ ಖುಷಿಯಲ್ಲೆ ಹೇಗೊ ಬದುಕಿಕೊಳ್ಳುವೆ ಬಡಪಾಯಿ.

ಇತಿ..,
………………!!?

4 ಟಿಪ್ಪಣಿಗಳು Post a comment
  1. pavan's avatar
    ಆಗಸ್ಟ್ 12 2011

    nimma bharaha mana muttuvanide. danyavadagalu.

    ಉತ್ತರ
  2. ರವಿ's avatar
    ರವಿ
    ಆಗಸ್ಟ್ 12 2011

    ಹುಡುಗಿ, ನಮ್ಮ ಬದುಕು ನಮ್ಮ ಆಯ್ಕೆ. ಭಾವ ಜೀವಿಯಾಗುವುದೂ ಒಂದು ರೀತಿ ನಮ್ಮ ಆಯ್ಕೆಯೇ. ಭಾವಜೀವಿಗೆ ದುಃಖ ಮಾತ್ರ ಅತಿಯಲ್ಲ. ಸಂತೋಷವೂ ಅಷ್ಟೇ. ಸಂತೋಷವೇ ಇರಲಿ, ದುಃಖವೆ ಇರಲಿ, ಭಾವನೆಗಳನ್ನು ತುಸು ಹೆಚ್ಚೇ ಅನುಭವಿಸುವ ನೀನು ತುಂಬಾ ಅದೃಷ್ಟವಂತೆ. ಸದ್ಯ ಸ್ವಲ್ಪ ಬೇಸರದಲ್ಲಿದ್ದಿಯ. ಸಂತೋಷದ ದಿನಗಳೂ ಬೇಗ ಬರಲಿ. ದೂರವಾದವರು ಹೆಚ್ಚು ದಿನ ದೂರ ಇರಲಾರರು. ಈ ದುಃಖ ಅನ್ನುವುದು ಹಾಗೆಯೇ. ದುಃಖ ಚಿಕ್ಕದಾದರೂ ಕೊರಗು ಯಾವತ್ತೂ ದೊಡ್ಡದು. ಆ ಮಧ್ಯೆ ಸಿಗುವ ಸಂತೋಷಗಳಿಗೆಲ್ಲ ಸಮಯವೇ ಇಲ್ಲದಂತೆ ಮಾಡುತ್ತದೆ. ಆತ್ಮಹತ್ಯೆಯ ಯೋಚನೆ ಗೆದ್ದಿದ್ದಿಯ ಅಂದರೆ ನೀನು ಇನ್ನೂ happiest ಗರ್ಲ್ ಆಗೇ ಇದ್ದೀಯ. happiest ಅಂದ್ರೆ ದುಃಖವೇ ಇಲ್ಲಂತ ಅಲ್ವೇ ಹುಡುಗಿ, ದುಃಖಗಳನ್ನೆಲ್ಲಾ ಗೆದ್ದಿದ್ದಿಯ ಅಂತ, ನಿನ್ನ ದುಃಖವನ್ನ ಅಮ್ಮನಿಗೆ ತಿಳಿಯದಂತೆ ಮಾಡಿದ್ದಿಯ ಅಂತ. ನೀನು ಖಂಡಿತವಾಗಿಯೂ ಪಾಪಿ ಅಲ್ಲ. ದೇವರು ಇವೆಲ್ಲವನ್ನೂ ಗೆಲ್ಲುವ ಶಕ್ತಿಯನ್ನು ನೀಡಿದ್ದಾನೆ ನಿನಗೆ. ಆ ದಯಾಮಯಿ ದೇವರಿಗೆ ಮೊದಲು ನನ್ನ ವಂದನೆಗಳು. ಈಗ ನಿನ್ನ ದುಃಖಕ್ಕೆ ನಾವೆಲ್ಲಾ ಕಿವಿಯಾಗಿದ್ದೇವೆ. ಸಂತಸ ನಿನ್ನ ಬದುಕಿನಲ್ಲಿ ಮರಳಿದಾಗಲೂ ತಿಳಿಸು. ನಾವೆಲ್ಲಾ ಖುಷಿ ಪಡುವಂತಾಗಲಿ.
    ಒಂದು ಹೊಸ ಹಾಡು ನೆನಪಾಯಿತು.. ಚಿಂತೆಯನ್ನು ಚಿಂದಿ ಮಾಡಿ ಒಮ್ಮೆ ನೀ ನಗು.. 🙂

    ಉತ್ತರ
  3. ಆಸು ಹೆಗ್ಡೆ's avatar
    ಆಗಸ್ಟ್ 12 2011

    ಜೀವನದಲ್ಲಿ ಕಷ್ಟ ಅಥವಾ ನೋವು ಅನುಭವಿಸಬೇಕಾಗಿ ಬಂದಾಗ ನಾವು ದೇವರನ್ನು ದೂರುವುದೇಕೆ?
    ಸಮಾಧಾನ ಮಾಡಿಕೊಂಡು, ಇದನ್ನು ಓದಿ, ಯೋಚಿಸಿ ನೋಡಿ!

    ಪರೀಕ್ಷೆ!
    ಸಖೀ,
    ರಾಮಾಯಣದಲಿ,
    ವನವಾಸ ಮಾಡಬೇಕಾಗಿ
    ಬಂದುದು ಸಾಧ್ವಿ ಸೀತೆಗೆ;
    ಕ್ರೂರಿ ಮಂಥರೆಗೂ ಅಲ್ಲ,
    ದುಷ್ಟೆ ಕೈಕಯಿಗೂ ಅಲ್ಲ.

    ಮಹಾಭಾರತದಲಿ ಕಷ್ಟವನುಂಡವರು,
    ಕೃಷ್ಣನ ಸಖರಾದ ಪಾಂಡವರು;
    ಧರ್ಮ ಭ್ರಷ್ಟರಾದ ಕೌರವರಲ್ಲ.

    ಅಂದು ಸತ್ಯವಾದಿ ಹರಿಶ್ಚಂದ್ರನಿಗೂ
    ಬಂದಿತ್ತು ಕೇಡುಗಾಲ,
    ಆಗಿದ್ದ, ಆತನೂ
    ಸ್ಮಶಾನದಲಿ ದ್ವಾರಪಾಲ.

    ರಾಮನ ಪಾದ ಸ್ಪರ್ಶಕ್ಕಾಗಿ
    ಕಲ್ಲಾಗಿ ಕಾದಿರಲಿಲ್ಲವೇ ಅಹಲ್ಯೆ?
    ಒಮ್ಮೆ ಯೋಚಿಸಿ ನೋಡು,
    ನಿಜವಾಗಿ ನೀನಿದನೆಲ್ಲ ಬಲ್ಲೆ.

    ಜೀವನದಲಿ ಕಷ್ಟವನು
    ಅನುಭವಿಸ ಬೇಕಾದವರು,
    ಆ ದೇವನಿಗೆ ಪ್ರಿಯರಾದ,
    ಸದ್ಗುಣಿಗಳು ಸಖೀ.

    ದುರ್ಗುಣಿಗಳು ಎಂತಿದ್ದರೆ
    ಅವನಿಗೆ ಏನಂತೆ?
    ತನಗೆ ಪ್ರಿಯರಾದವರ
    ಪರೀಕ್ಷೆ ನಿತ್ಯ ನಡೆಸ
    ಬೇಕಾಗಿದೆಯಂತೆ

    ಚಿನಿವಾರನ ಪೆಟ್ಟಿಂದಲೇ
    ಚಿನ್ನಕ್ಕೆ ಶೋಭೆ ಬರುವಂತೆ
    ಈ ನಿತ್ಯ ಪರೀಕ್ಷೆಗಳಿಂದಲೇ
    ನಾವೂ ಪರಿಶುದ್ಧರಾಗಬೇಕಂತೆ

    ಅದಕಾಗಿ ಜೀವನದಲಿ
    ಸದಾ ಎಚ್ಚರವಿರಬೇಕು
    ಯಾವುದೇ ಅನಾಚಾರ
    ಆಗದಂತೆ ದೃಢ ಚಿತ್ತರಾಗಿರಬೇಕು

    ಕಷ್ಟ-ಕಾರ್ಪಣ್ಯಗಳನು ನಾವು,
    ಅಂದು ಕಲ್ಲಾಗಿದ್ದ ಅಹಲ್ಯೆಯಂತಿದ್ದು
    ಸಹಿಸಬೇಕು, ಜಯಿಸಬೇಕು
    ಜಲಧಾರೆಗೆ ಎದುರಾಗಿ
    ಈಜಿ ದಡವ ಸೇರುವಂತೆ
    ಎಲ್ಲವನೂ ದಾಟಿ ಈ ಆತ್ಮವನು,
    ಆ ಪರಮಾತ್ಮನಲಿ ಲೀನವಾಗಿಸಬೇಕು!
    *-*-*-*-*-*-*-*-*-*

    ಉತ್ತರ
  4. Pradee's avatar
    Pradee
    ಆಗಸ್ಟ್ 14 2011

    Nonda hudugi- Bandege uli pettu biddagale adu shileyaguvudu, namma paapa-punyada mele namma jivana roopithavagirutadde chintisadiri aa devarannu nindisadiri olleyavarige shoshane maduvanu aa devaru.

    ಉತ್ತರ

Leave a reply to ಆಸು ಹೆಗ್ಡೆ ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments