ಸತ್ಯೇಂದ್ರನಾಥ್ ಬೋಸ್ – Another Forgotten Hero…
– ಭೀಮ ಸೇನ್ ಪುರೋಹಿತ್
ನಮ್ಮ ದೇಶದ ಸ್ವಾತಂತ್ರ್ಯಹೋರಾಟಕ್ಕೆ ಅತಿಹೆಚ್ಚು ಹಾಗು ಪ್ರಖರ ಕೊಡುಗೆಗಳನ್ನು ನೀಡಿದ ಯಶಸ್ಸು ‘ಪಶ್ಚಿಮ ಬಂಗಾಳ’ ರಾಜ್ಯಕ್ಕೆ ಸಲ್ಲುತ್ತದೆ. ಆ ಬಂಗಾಳದ ಮತ್ತೊಂದು ಹುಲಿಯೇ “ಸತ್ಯೇಂದ್ರನಾಥ್ ಬೋಸ್”. ಇವನ ಇಡೀ ಕುಟುಂಬವೇ ಸ್ವಾತಂತ್ರ್ಯಹೋರಾಟದಲ್ಲಿ ಭಾಗಿಯಾಗಿತ್ತು. ಅವನ ತಂದೆ ‘ರಾಜನಾರಾಯಣ ಬೋಸ್’, ಸಹೋದರರಾದ ‘ಜ್ಞಾನೇಂದ್ರನಾಥ್ ಬೋಸ್’,’ಭೂಪೆಂದ್ರನಾಥ್ ಬೋಸ್’,ಎಲ್ಲರೂ ಸ್ವಾತಂತ್ರ್ಯ ಹೋರಾಟಗಾರರೆ.. ಮಿಡ್ನಾಪುರ್ ಜಿಲ್ಲೆಯಲ್ಲಿ ಜನಿಸಿದ ಸತ್ಯೇನ್, ಓದಿನಲ್ಲಿ ಜಾಣ. ಬಿ.ಎ ತನಕ ಓದಿದರೂ, ಮುಂದೆ ಓದಲಾಗಲಿಲ್ಲ..ಇನ್ನೊಂದು ವಿಶೇಷ ಅಂದ್ರೆ, ಈ ಸತ್ಯೇಂದ್ರನಾಥ್, ಶ್ರೀ ಅರವಿಂದ್ ಘೋಶರಿಗೆ ಸಂಬಂಧಿ…
“ಅಲಿಪುರ ಬಾಂಬ್ ಪ್ರಕರಣ” ಮತ್ತು “ಮಾಣಿಕ್ ತೊಲಾ ಗಾರ್ಡನ್ ಬಾಂಬ್ ಪ್ರಕರಣ”, ಈ ಎರಡು ಪ್ರಕರಣಗಳೂ, ಸ್ವಾತಂತ್ರ್ಯಹೋರಾಟದ ಸಮಯದಲ್ಲಿ, ಬಂಗಾಳ ಪ್ರಾಂತದಲ್ಲಿ ನಡೆದ ಬಹುದೊಡ್ಡ ಬ್ರಿಟಿಶ್ ವಿರೋಧಿ ಕಾರ್ಯಗಳು.. ಇವೆರಡರ ಹಿಂದೆ ಇದ್ದಿದ್ದು ಬಂಗಾಳದ “ಅನುಶೀಲನ ಸಮಿತಿ” ಹಾಗು “ಯುಗಾಂತರ ಸಮಿತಿ”ಯ ಕ್ರಾಂತಿಕಾರಿಗಳು, ಹಾಗು ಈ ಕ್ರಾಂತಿಕಾರಿಗಳನ್ನ ಪ್ರೆರೆಪಿಸಿದವ್ರು, ಮಹಾನ್ ರಾಷ್ಟ್ರವಾದಿ ( ನಾನಂತೂ ಅವರನ್ನ ‘ಮಹರ್ಷಿ’ ಅಂತಾನೆ ಕರೆಯೋದು ) ಶ್ರೀ ಅರವಿಂದ್ ಘೋಷ್…. ಈ ಎರಡು ಪ್ರಕರಣಗಳಾದ ಮೇಲೆ ಬ್ರಿಟಿಷರು ಎಚ್ಚೆತ್ತು ತನಿಖೆ ಶುರು ಮಾಡಿದ್ರು.. ಎರಡರಲ್ಲಿಯೂ ಬಳಸಲಾದ ಬಾಂಬ್ ಗಳು ಒಂದೇ ಥರದ್ದು ಅಂತ ಗೊತ್ತಾಯ್ತು. ಹೀಗಾಗಿ ಅನುಶೀಲನ ಸಮಿತಿ ಹಾಗು ಯುಗಾಂತರದ ಕೆಲವು ಕ್ರಾಂತಿಕಾರಿಗಳನ್ನ ಬಂಧಿಸಲಾಯ್ತು. ಜೊತೆಗೆ ಇವರೆಲ್ಲರ ಹಿಂದೆ ಇರೋರು ಅರವಿಂದ ಘೋಶರೆ ಅಂತ ಅಪಾದನೆ ಹೊರಿಸಿ ಅವರನ್ನೂ ಜೈಲಿಗೆ ಕಳಿಸಿದರು..ಇದು ಕ್ರಾಂತಿಕಾರಿಗಳಲ್ಲಿ ಬೇಸರ ಹಾಗು ಆಕ್ರೋಶವನ್ನ ಮೂಡಿಸ್ತು..
ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಯ್ತು. ಬ್ರಿಟಿಷರು ಎಂದಿನಂತೆ ಕ್ರಾಂತಿಕಾರಿಗಳಿಗೆ ಚಿತ್ರಹಿಂಸೆ ಕೊಟ್ಟು ಬಾಯಿಬಿಡಿಸೋದಕ್ಕೆ ಪ್ರಯತ್ನಿಸಿದರು.. ಅದಕ್ಕೆ ಹೆದರಿ, ಬ್ರಿಟಿಷರ ಆಮಿಷಕ್ಕೆ ಸೋತು, ‘ನರೇನ್ ಗೋಸ್ವಾಮಿ’ ಅನ್ನೋನು approver ಆಗ್ಬಿಟ್ಟ.. ಭಾರತದ ಇತಿಹಾಸದುದ್ದಕ್ಕೂ ದೇಶಭಕ್ತರಷ್ಟೇ, ದೇಶದ್ರೋಹಿಗಳೂ ಇದಾರೆ..!!!
ಇತ್ತ ಕೋರ್ಟ್ ನಲ್ಲಿ ನರೇನ್ ಎಲ್ಲರ ವಿರುದ್ಧ ಸಾಕ್ಷಿ ಹೇಳೋದಕ್ಕೆ ಶುರು ಮಾಡಿದ. ಅಷ್ಟೇ ಆಗಿದ್ರೆ ಸುಮ್ನಿರ್ತಿದ್ರೆನೋ.. ಆದ್ರೆ ನರೇನ್, ಅರವಿಂದ ಘೋಷ್ ವಿರುದ್ಧನೂ ಸಾಕ್ಷಿ ಹೇಳೋದಕ್ಕೆ ತಯಾರಾದ.ಅಲ್ಲಿಗೆ ಕ್ರಾಂತಿಕಾರಗಳ ಸಿಟ್ಟು ಮಿತಿ ಮೀರಿತು..ಜೈಲಿನ ಒಳಗಿದ್ದ ‘ಸತ್ಯೇಂದ್ರನಾಥ್’ ಹಾಗು ಅವನ ಗೆಳೆಯ ‘ಕನ್ನಯ್ಯಲಾಲ್ ದತ್ತ’ ಇಬ್ರೂ ಸೇರಿ ಆ ದ್ರೋಹಿ ನರೇನ್ ಸಂಹಾರಕ್ಕೆ ಪ್ಲಾನ್ ಹಾಕಿದರು…
ಸತ್ಯೇಂದ್ರನಾಥ್ ದೊಡ್ಡ ದೇಶಪ್ರೇಮಿಯಾಗಿದ್ರೂ, ಅವನ ಆರೋಗ್ಯಸ್ಥಿತಿ ಚನ್ನಾಗಿರ್ಲಿಲ್ಲ.. ಅಸ್ಥಮದಿಂದ ಬಳಲುತ್ತಿದ್ದ.. ಆದ್ರೆ ಅದೇ ವರವಾಯ್ತು.. ಆರೋಗ್ಯದ ನೆಪವೊಡ್ಡಿ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಆದ.. ಕಾರಣ approver ಆಗಿದ್ದ ನರೇನ್ ನನ್ನು ಸೇಫ್ ಆಗಿ ಇಡಬೇಕು ಅಂತ, ಬ್ರಿಟಿಷರು ಅವನನ್ನ ಜೈಲಿನ ಆಸ್ಪತ್ರೆಯಲ್ಲಿ ಇಟ್ಟಿದ್ರು. ಅದೇ ಆಸ್ಪತ್ರೆಗೆ ಸತ್ಯೇನ್ ಬಂದಿದ್ದ. ಅದಾದ ಮೇಲೆ ಕನ್ನಯ್ಯಲಾಲ್ ಕೂಡ ಅನಾರೋಗ್ಯದ ನೆಪದಿಂದ ಆಸ್ಪತ್ರೆ ಸೇರಿಕೊಂಡ. ನಂತರ ಸತ್ಯೇನ್, ಆ ದ್ರೋಹಿ ನರೇನ್ ಗೆ ಒಂದು ಸಂದೇಶ ಕಳಿಸಿದ.ಏನಂದ್ರೆ ‘ ನಾನು ನಿನ್ನ ಜೊತೆ approver ಆಗ್ತೀನಿ. ನನ್ನ ಭೇಟಿಯಾಗೊದಕ್ಕೆ ಬಾ’ ಅಂತ.. ಬಲೆಗೆ ಬಿದ್ದ ನರೇನ್ ತನ್ನ ಸಾವಿನ ಯಾವ ಮುನ್ಸೂಚನೆಯೂ ಇಲ್ಲದೆ ಒಬ್ಬ ಬ್ರಿಟಿಶ್ ವಾರ್ಡನ್ ಜೊತೆಗೆ ಸತ್ಯೇನ್ ಹೇಳಿದ ಜಾಗಕ್ಕೆ ಬಂದ.. ಬಲಿಗಾಗಿ ಕಾದು ಕೂತಿದ್ದ ಸತ್ಯೇನ್, ಕನ್ನಯ್ಯಲಾಲ್ ಗುಟ್ಟಾಗಿ ತಂದಿದ್ದ ಪಿಸ್ತೂಲ್ ನಿಂದ ಗುಂಡು ಹಾರಿಸಿಯೇ ಬಿಟ್ರು..
ತಪ್ಪಿಸಿಕೊಳ್ಳಲು ಹೋದ ನರೇನ್ ಪಕ್ಕದ ಚರಂಡಿಯಲ್ಲಿ ಬಿದ್ದ.. ಕೊನೆಗೂ ಗುಂಡಿನ ಸುರಿಮಳೆಯಲ್ಲಿ ಆ ದ್ರೋಹಿ ಸತ್ತ.. ದೇಶಕ್ಕೆ ದ್ರೋಹವೆಸಗಿದ್ರೆ,ದೇಶದ್ರೋಹಿಗಳಿಗೆ ಇದೆ ಗತಿಯಾಗುತ್ತೆ ಅಂತ ಬಿಸಿ ಮುಟ್ಟಿಸಿದರು.
ಆಮೇಲೆ ಸತ್ಯೇನ್ ಮತ್ತು ಕನ್ನಯ್ಯ ನನ್ನು ಬಂಧಿಸಿದರು. ವಿಚಾರಣೆ ಅಂತ ನಡೆಸಿ ಇಬ್ಬರಿಗೂ ಗಲ್ಲು ಶಿಕ್ಷೆ ವಿಧಿಸಲಾಯ್ತು.. ಇಬ್ರೂ ಅತ್ಯಂತ ಸಂತೋಷದಿಂದ ನೇಣಿಗೇರಿದರು. ಸಾಯೋಕು ಮುಂಚೆ ಕನ್ನಯ್ಯಲಾಲ್ ನ ತೂಕ 8 ಪೌಂಡ್ ಹೆಚ್ಚಾಗಿತ್ತಂತೆ. ಏನು ಸ್ಥೈರ್ಯ ನೋಡಿ ಆ ವೀರರದ್ದು..
ಇವತ್ತು ಈ ಇತಿಹಾಸ ಹೇಳಿದ ಕಾರಣ ಏನಂದ್ರೆ, ಇವತ್ತು, ಜುಲೈ 30 , ಆ ಪುಣ್ಯಾತ್ಮ ‘ಸತ್ಯೇಂದ್ರನಾಥ್ ಬೋಸ್’ ನ ಹುಟ್ಟಿದ ಹಬ್ಬ.. ಶಾಲಾ-ಕಾಲೇಜುಗಳ ಪುಸ್ತಕದಲ್ಲಂತೂ ಇಂಥವರ ಹೆಸರು ಇರಲ್ಲ ಬಿಡಿ. ಆದ್ರೆ ದುರಂತ ಅಂದ್ರೆ ಇಡೀ internet ಹುಡುಕಿದರೂ ಇವರ ಇತಿಹಾಸ ದುರ್ಲಭ.. ನಾನು 7 ನೆಯ ತರಗತಿಯಲ್ಲಿದ್ದಾಗ ‘ಭಾರತ ಭಾರತಿ’ ಅನ್ನೋ ಪುಸ್ತಕದಲ್ಲಿ ಈ ಮಹಾತ್ಮನ ಇತಿಹಾಸ ಓದಿದ ನೆನಪು. ಹೆಚ್ಚಿನ ಮಾಹಿತಿಗೆ ನೆಟ್ ನಲ್ಲಿ ಹುಡುಕಿದರೆ 1-2 ಸೈಟ್ ಗಳಲ್ಲಿ ಬಿಟ್ರೆ ಬೇರೆಲ್ಲೂ ಅವರ ಇತಿಹಾಸವೇ ಇಲ್ಲ. ಅವನ ಒಂದು ಫೋಟೋನೂ ನೆಟ್ ನಲ್ಲಿ ಇಲ್ಲ.. ಆದ್ರೆ ನಾ ಓದೋವಾಗ ನೋಡಿದ ಅವರ ಭಾವಚಿತ್ರ ಇನ್ನೂ ಕಣ್ಣಿಗೆ ಕಟ್ಟಿದ ಹಾಗೆ ಇದೆ.. ಏನ್ ದುರವಸ್ಥೆ ನೋಡಿ ನಮ್ ದೇಶದಲ್ಲಿ.. ಸತ್ಯೇನ್ ಹುತಾತ್ಮನಾದಾಗ ಬಹಳ ಅಂದ್ರೆ 28-30 ವರ್ಷ ಇರಬಹುದು. ಮದುವೇನೂ ಆಗಿರಲಿಲ್ಲ. ತಮ್ಮದೆಲ್ಲವನ್ನೂ ನಮಗಾಗಿ ತ್ಯಾಗ ಮಾಡಿದವರನ್ನು ನೆನಪಿಸ್ಕೊಳ್ದೆ ಇರೋವಷ್ಟು ಕೃತಘ್ನರಾಗಿಬಿಟ್ವಲಾ ನಾವು..’ಪ್ರತಾಪ್ ಸಿಂಹ’ ಒಂದ್ಸಲ ತುಂಬಾ ಚನ್ನಾಗಿ ಹೇಳಿದ್ರು.. ‘ಗಾಂಧಿ-ನೆಹರು’ ಅನ್ನೋ ಹೆಮ್ಮರದ ಕೆಳಗೆ ನಾವು ಉಳಿದವರನ್ನೆಲ್ಲ ಹೂತುಹಾಕಿದ್ದೇವೆ ಅಂತ.. ನಿಜ. ನಿಜವಾಗಿ ಪ್ರಾಣತೆತ್ತವರು ಎಲೆಮರೆಯ ಹೂವಿನಂತೆ ಉಳಿದ್ಬಿಟ್ರು. ಆದರೇನಂತೆ, ದೇಶಪ್ರೇಮವನ್ನು ಹೊತ್ತಿಸಿಕೊಂಡಂತಹ ದುಂಬಿಗಳು ಇರೋತನಕ, ಹೂವು ಎಲ್ಲೇ ಅಡಗಿದ್ರೂ ಹುಡುಕೇ ಹುಡುಕ್ತಿವಿ….
ಸತ್ಯೇಂದ್ರನಾಥ್ ಬೋಸ್ ಗೆ ಮನಃಪೂರ್ವಕ ಪ್ರಣಾಮಗಳು..
ವಂದೇ ಮಾತರಂ…





{}
First British colony in India was Bengal. They appreciated Robert Clive for beating Sirajuddoula.
ಮಹನ್ ವ್ಯಕ್ತಿಯ ಬಗ್ಗೆ ತಿಳಿಸಿದಕ್ಕೆ ಧನ್ಯವಾದಗಳು……