ಜಾತಿ ಸೂಚಕ ಹೆಸರಿಗೆ ನಿರ್ಬಂಧ, ಹಿಮಾಚಲ ಪೊಲೀಸರ ಮಾದರಿ ನೀತಿ
-ರಾಕೇಶ್ ಎನ್ ಎಸ್
ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆ ಅತ್ಯುತ್ತಮ ನಿರ್ಧಾರವೊಂದನ್ನು ಕೈಗೊಂಡಿದೆ. ಅದೇನೆಂದರೆ ತನ್ನ ಪೊಲೀಸರ ಪೂರ್ಣ ಹೆಸರಿನ ಜೊತೆ ಸಾಮಾನ್ಯವಾಗಿ ಒಂದು ಭಾಗವಾಗಿರುವ ಜಾತಿ ಸೂಚಕ ಹೆಸರನ್ನು ಕಿತ್ತು ಹಾಕುವ ವಿಶಿಷ್ಟ ಯೋಜನೆಯನ್ನು ಅದು ಹಾಕಿಕೊಂಡಿದೆ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನ ಜೂನ್ ೨೪ರ ನವದೆಹಲಿ ಆವೃತ್ತಿಯ ಮುಖಪುಟದಲ್ಲಿನ ವರದಿಯೊಂದು ಹೇಳುತ್ತಿತ್ತು.
ಇನ್ನೂ ಒಬ್ಬ ಮಂತ್ರಿ ಕೂಡ ಹೆಚ್ಚಾಗಿ ತನ್ನ ಜಾತಿಯವರನ್ನೇ ತನ್ನ ಸುಪರ್ದಿಯಲ್ಲಿರುವ ಪ್ರಮುಖ ಮತ್ತು ಆಯಾಕಟ್ಟಿನ ಹುದ್ದೆಗಳಿಗೆ ಆಯ್ಕೆ ಮಾಡುವುದು, ಅವರಿಗೆ ವಿಶೇಷ ಸ್ಥಾನಮಾನ ನೀಡುವುದು ಅನಾಚೂನವಾಗಿ ನಡೆದು ಬಂದಿರುವ ಸಂಪ್ರದಾಯ. ರಾಜ್ಯದ ಪ್ರಸಕ್ತ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇದಕ್ಕೆ ‘ಮೇರು’ ಉದಾಹರಣೆ. ಹೀಗೆ ಸರ್ಕಾರಿ ವ್ಯವಹಾರದಲ್ಲಿ ಜಾತಿ ಸಾಮ್ರಾಜ್ಯದ ಹಿಡಿತ ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ.
ಇಂತಹ ಸಂದರ್ಭದಲ್ಲಿ ಜಾತಿ ಮುಕ್ತ ಸಮಾಜ ನಿರ್ಮಾಣವಾಗುವ ಕನಸು ಸಧ್ಯದಲ್ಲೇ ನನಸಾಗುತ್ತದೆ ಎಂದು ಹೇಳುವಂತಿಲ್ಲ. ಅದ್ದರಿಂದ ಜಾತಿ ಮುಕ್ತ ಸಮಾಜ ನಿರ್ಮಾಣವಾಗುವ ಮುಂಚಿತವಾಗಿ ಜಾತಿ ಮುಕ್ತ ವ್ಯವಸ್ಥೆಯೊಂದನ್ನು ಸ್ಥಾಪಿಸುವ ಜರೂರತ್ತಿದೆ. ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರ ಆ ನಿಟ್ಟನಲ್ಲಿ ಅತ್ಯಂತ ಮಹತ್ವಪೂರ್ಣ ಮತ್ತು ಒಂದು ಮೈಲಿಗಲ್ಲು.
ಈ ನಿರ್ಧಾರದಿಂದ ಸರ್ಕಾರಿ ಅಧಿಕಾರಿಗಳ ಮನಸ್ಸಲ್ಲಿರುವ ಜಾತೀಯ ಭಾವನೆ ಕಡಿಮೆ ಆಗುತ್ತದೆ ಎಂದು ನಂಬುವಷ್ಟು ಮೂರ್ಖ ನಾನಲ್ಲ. ಜಾತಿ ಸೂಚಕ ಹೆಸರಿನ ಅಧಿಕಾರಿಯೊಬ್ಬನ ಬಳಿ ಯಾವುದಾದರೂ ಕೆಲಸಕ್ಕಾಗಿ ಬರುವಾತನ ಮೇಲೆ ಆತನ ಜಾತಿ ಬೀರುವ ತಕ್ಷಣದ ಪರಿಣಾಮ ಕಡಿಮೆ ಆಗುತ್ತದೆ ಎಂಬುದು ಮಾತ್ರ ದಿಟ.
ನನ್ನ ಜೊತೆ ಕೇಳಿದರೆ ಯಾವುದೇ ಸರ್ಕಾರಿ ದಾಖಲೆಗಳಲ್ಲಿ ಒಬ್ಬ ವ್ಯಕ್ತಿಯ ಜಾತಿಯನ್ನು ಸೂಚಿಸಲೇ ಬಾರದು ಎಂದು ಹೇಳುತ್ತೇನೆ. ಇಂದು ಶಾಲೆಯ ಪ್ರವೇಶ ಪತ್ರಗಳಲ್ಲೂ ಜಾತಿಯನ್ನು ಸೂಚಿಸುವ ಬಾಕ್ಸ್‌ಗಳಿರುವುದು ಖೇದನೀಯ. ಏನಿದ್ದರೂ ಕೂಡ ಜಾತಿ ಸೂಚಕ ಸಂಖ್ಯೆ, ಅಕ್ಷರಗಳಲ್ಲಿ ಈ ಕೆಲಸವನ್ನು ಮುಗಿಸಿಬಿಡಬೇಕು (ಅದೂ ನಮ್ಮಲಿ ಮೀಸಲಾತಿ ವ್ಯವಸ್ಥೆ ಇರುವುದರಿಂದ, ಇಲ್ಲದಿದ್ದಲ್ಲಿ ಅದು ಬೇಕಾಗಿರಲಿಲ್ಲ.)
ಹಿಮಾಚಲ ಪ್ರದೇಶದ ಪೊಲೀಸ್ ಇಲಾಖೆಯ ನಿರ್ಧಾರ ನಮ್ಮ ಕೇಂದ್ರ, ರಾಜ್ಯ ಸರ್ಕಾರಗಳಿಗೂ ಒಂದು ಮಾದರಿಯಾಗಲಿ ಎಂಬ ಆಶಯ ನನ್ನದು. ಭಟ್, ಗೌಡ, ಶೆಟ್ಟಿ, ರಾವ್, ಮೂರ್ತಿ, ನಾಯಕ್, ಪ್ರಭು, ಪೂಜಾರಿ… ಇತ್ಯಾದಿ ಇತ್ಯಾದಿ ಅಸಂಖ್ಯಾತ ಜಾತಿ ಸೂಚಕ ಪದಗಳು ನಮ್ಮ ನಮ್ಮ ಹೆಸರಿನಿಂದ ಮರೆಯಾಗಲಿ ಎಂಬ ಆಶಯ ನನ್ನದು. ಆದೂ ಪ್ರಸಕ್ತ ಸ್ಥಿತಿಯಲ್ಲಿ ಕಷ್ಟ ಸಾಧ್ಯ… ಆದರೆ ಸರ್ಕಾರಿ ನೌಕರರ ಮಟ್ಟಿಗಾದರೂ ಈ ಆಶಯ ನಿಜವಾಗಲಿ…





ಅತ್ಯುತ್ತಮ ನಿರ್ಧಾರ. ಇಂಗ್ಲಿಷಿನಲ್ಲಿ ಸರ್ ನೆಮ್ ಆಗಿ ಕುಟುಂಬ, ಬುಡಕಟ್ಟು, ವೃತ್ತಿ ಮೊದಲಾದವುಗಳ ಸೂಚಕಗಳು ಇರುವಂತೆ ನಮ್ಮಲ್ಲಿ ಜಾತಿ ಸೂಚಕಗಳು ಇವೆ. ಉತ್ತರ ಭಾರತ, ಉತ್ತರ ಕರ್ನಾಟಕಗಳಲ್ಲಿ ಇವು ವ್ಯಕ್ತವಾಗಿ ಬಳಕೆಗೆ ಬಂದಂತೆ ಹಖೆಯ ಮೈಸೂರಿನಲ್ಲಿ ಕಾಣಿಸದಿದ್ದರೂ (ಆದ್ಯಕ್ಷರಗಳಲ್ಲಿ -ಇನಿಷಿಯಲ್ಸ್-ಅವನ್ನು ಅಡಗಿಸಿದ್ದರೂ) ಈಗ ತಮ್ಮ ಆಧುನಿಕ ಹೆಸರಿನ ಜೊತೆ ಮತ್ತೆ ಜಾತಿ ಸೂಚಕಗಳನ್ನು ಸೇರಿಸಿಕೊಳ್ಳುವ ಮನೋಧರ್ಮ ವ್ಯಾಪಕವಾಗಿದೆ. ಅಂಬರೀಶ ಅಂಬರೀಶ್ ಆಗಿ ಈಗ ಅದರ ಜೊತೆಗೆ ಗೌಡ ಸೇರಿ ಅಂಬರೀಶ್ ಗೌಡ ಆಗಿದೆ. ಇದು ಎಲ್ಲ ಜಾತಿ ಗುಂಪುಗಳಲ್ಲಿ ಆರಂಭವಾಗಿದೆ. ಈಗ ಹಿಮಾಚಲ ಪ್ರದೇಶದ ಪೊಲೀಸರು ಆರಂಭಿಸಿರುವುದು ವ್ಯಾಪಕವಾಗಿ ಬಳಕೆಗೆ ಬರುವಂತಾಗಲಿ.
ನಾನು ನನ್ನ ಹೆಸರಿನ ಜೊತೆ ಇದ್ದ ಇಂಗ್ಲಿಷ್ ಆದ್ಯಕ್ಷರಗಳ ಜೊತೆ ಇದ್ದ ಧರ್ಮ ಸೂಚಕ ಪದವನ್ನು ಇಂಗ್ಲಿಷ್ ಆದ್ಯಕ್ಷರಗಳ ಜೊತೆಗೇ ಬಿಟ್ಟಿದ್ದೇನೆ. ಅಲ್ಲದೆ ಹಳೆಯ ಮೈಸೂರಿನಲ್ಲಿ ಎಲ್ಲರೂ ವ್ಯಕ್ತವಾಗಿ ಜಾತಿ ಸೂಚಕವನ್ನು ಬಳಸದಿದ್ದರೂ ಕುಟುಂಬ ಸೂಚಮವಾಗಿ ತಂದೆಯ ಹೆಸರಿನ ಮೊದಲ ಅಕ್ಷರವನ್ನು ಬಳಸುವುದು ರೂಢಿಯಲ್ಲಿದೆ. ನನ್ನ ಆದ್ಯಕ್ಷರಗಳಲ್ಲಿದ್ದ (ಎಂ ಎನ್ ವಿ)ತಂದೆಯ ಹೆಸರಿನ ಮೊದಲ ಅಕ್ಷರವನ್ನೂ ಬಿಟ್ಟಿದ್ದೇನೆ. ನಮ್ಮ ಅಧ್ಯಕ್ಷರಗಳಲ್ಲಿ ಪುರುಷ ಪ್ರಧಾನ ತಂದೆಯ ವಂಶವನ್ನು ಮಾತ್ರ ಸೂಚಿಸುವ ಾಧ್ಯಕ್ಷರಗಳಿವೆ. ಈಗ ನಮ್ಮ ಮನೆಯಲ್ಲಿ ತಮ್ಮ ತಂಗಿಯರ ಮಕ್ಕಳ ಹೆಸರುಗಳಲ್ಲಿ ಊರು, ವಂಶಗಳ ಪ್ರಾತಿನಿಧ್ಯದ ಆದ್ಯಕ್ಷರಗಳಿಲ್ಲ. ಕೇವಲ ತಂದೆ ಮತ್ತು ತಾಯಿಯರ ಹೆಸರಿನ ಮೊದಲ ಅಕ್ಷರಗಳು ಮಾತ್ರ ಇವೆ. ಬಿ(ಭೀಮೇಶ್) ಎಸ್(ಸುಮಿತ್ರಾ) ನಿಶಿತಾ , ಎಸ್(ಶಿವಪ್ರಸಾದ) ಎಂ(ಮುಕ್ತಾ) ಶಿಶಿರ, ಇತ್ಯಾದಿ.
ಶಿವಮೊಗ್ಗ ಇತ್ಯಾದಿ ಊರುಗಳಲ್ಲಿ ಹೆಸರಿನ ಮುಂದೆ ಊರಿನ ಹೆಸರು ಹಾಗೂ ತಂದೆಯ ಹೆಸರು ಅಷ್ಟೇ ಇರುತ್ತದೆ. ನನಗೆ ಅನಿಸಿದಂತೆ ಉತ್ತರಭಾರತದಲ್ಲಿ sir name ಗೆ ಕೊಟ್ಟಷ್ಟು ಪ್ರ್ರಾಮುಖ್ಯತೆ ನಾವು ಕೊಟ್ಟಿರಲಿಲ್ಲ. ಆದರೆ ನಮಗೆ sir nameಇಲ್ಲ ಎಂದರೆ ಎನೋ ಹಿಂದುಮುಂದು ಇಲ್ಲವೇನೋ ಎಂಬಂತೆ ನೋಡುತ್ತಾರೆ ಈ ಉತ್ತರಭಾರತ ಹಾಗೂ ವಿದೇಶೀಯರು, ಹಾಗಾಗಿ ಮತ್ತೆ ಸರ್ ನಾಮ ಸೇರಿಸುವ ಪದ್ದತಿ ಶುರುವಾಗಿದೆ.
ನನಗಂತೂ ಹೆಸರಿನ ಜೊತೆ ಜಾತಿಯನ್ನು ನಮೂದಿಸದಿದ್ದರೇ ಸಂತೋಷ.
ಕುವೆಂಪು, ನಿಸಾರ್ ಅಹಮದ್, ಗಾಂಧೀಜಿ ಇವರೆಲ್ಲ ಯಾವ ಜಾತಿ?? ನಾವೂ ಅದೇ ಜಾತಿ!
ವೈಜ್ಙಾನಿಕವಾಗಿ ವೇಗವಾಗಿ ಬೆಳೆಯುತ್ತಿರುವ ಭಾರತಕ್ಕೆ ಜಾತಿ ಪದ್ಧತಿಯು ಕಪ್ಪು ಕಲೆಯಾಗಿದೆ . ಹಿಮಾಚಲ ಪ್ರದೇಶದ ಸರಕಾರದ ಕಾರ್‍ಯವನ್ನು ಶ್ಲಾಘಿಸಬೇಕು.ಈ ಲೇಖನದ ಮೂಲಕ ಹಲವು ಅಂಶಗಳು ತಿಳಿಯಲ್ಪಟ್ಟವು .ಕೊಡಗಿನಲ್ಲಿಯೂ ಸಹ ಜಾತಿಯ ಹೆಸರನ್ನು ಅಥವ ಸರ್ ನೇಮನ್ನು ಹೆಸರಿನ ಮುಂದೆ ಹಾಕುವುದಿಲ್ಲ ಚಂಗಪ್ಪ,ಮುತ್ತಣ್ಣ, ದೇವಯ್ಯ ಈ ರೀತಿಯ ಹೆಸರುಗಳು ಎಲ್ಲಾ ಜಾತಿಯವರಲ್ಲಿಯು ಇರುವುದನ್ನು ಕಾಣ ಬಹುದಾಗಿದೆ .ಹೆಸರಿನ ಮುಂದೆ ಊರಿನ ಅಥವ ಕುಟುಂಬದ ಹೆಸರನ್ನು ಹಾಕುತ್ತಾರೆ . ಹೆಸರಿನ ಮೂಲಕವೆ ಜಾತಿ ಯನ್ನು ಗುರುತಿಸುವ ವ್ಯವಸ್ಥೆ ಬದಲಾಗ ಬೇಕಿದೆ.