ಸಂಸ್ಕೃತಿ ಸಂಕಥನ – ೫
– ರಮಾನಂದ ಐನಕೈ
ಆಧುನಿಕ ಇತಿಹಾಸದಲ್ಲಿ ಪದೇ ಪದೇ ಕಲ್ಯಾಣ ರಾಜ್ಯ ‘ವೆಲ್ಫೇರ್ ಸ್ಟೇಟ್’ದ ಕುರಿತು ಉಲ್ಲೇಖವಾಗುತ್ತದೆ. ಕಲ್ಯಾಣ ರಾಜ್ಯ ಅಂದರೆ ಏನು? ಪ್ರಜೆಗಳ ಸರ್ವತೋಮುಖ ಕ್ಷೇಮವನ್ನು ಹೆಗಲ ಮೇಲೆ ಹೊತ್ತ ಪರಿಕಲ್ಪನೆ ಇದು. ಸಾಮಾಜಿಕ ಭದ್ರತೆ (ಸೋಶಿಯಲ್ ಸೆಕ್ಯುರಿಟಿ) ಕಲ್ಯಾಣ ರಾಜ್ಯದ ಒಂದು ಆದರ್ಶ. ಪ್ರತಿಯೊಬ್ಬ ಪ್ರಜೆಗೆ ಸಾಮಾಜಿಕ ಭದ್ರತೆ ನೀಡುವುದೂ ಕಲ್ಯಾಣ ರಾಜ್ಯದ ಒಂದು ಗುರಿ.
ಪಾಶ್ಚಾತ್ಯರು ಈ ಸಮಾಜಿಕ ಭದ್ರತೆಯನ್ನು ಕಲ್ಪಿಸಿಕೊಂಡ ರೀತಿ ಭಿನ್ನವಾಗಿದೆ. ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಬದುಕುವ ಹಕ್ಕಿದೆ. ಇದನ್ನು ಯಾರೂ ಪ್ರಶ್ನಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿ ಮನುಷ್ಯನಿಗೆ ಬದುಕಲು ಬೇಕಾದ ಅನ್ನ, ನೀರು, ಮನೆ, ಬಟ್ಟೆ ಮುಂತಾದ ಅನೇಕ ಅವಶ್ಯಕತೆಗಳನ್ನು ಪ್ರಭುತ್ವ (ಸ್ಟೇಟ್) ಪೂರೈಸಿ ಅವರಲ್ಲಿ ಭದ್ರತೆಯ ಭಾವನೆಯನ್ನು ಹುಟ್ಟಿಸಬೇಕು. ಆಗ ಪ್ರಜೆಗಳು ಸಂತೋಷವಾಗಿರುತ್ತಾರೆ ಎಂಬುದು ಅವರ ಚಿಂತನೆ. ಇದನ್ನೇ ಸಾಮಾಜಿಕ ಭದ್ರತೆ ಎಂದು ಕರೆದರು. ಇದಕ್ಕಾಗೇ ಅನೇಕ ರಾಷ್ಟ್ರಗಳು ತಮ್ಮನ್ನು ವೆಲ್ಫೇರ್ ಸ್ಟೇಟ್ಸ್ ಎಂದು ಕರೆದುಕೊಂಡವು. ಇದನ್ನು ಸರಳವಾಗಿ ಹೇಳಬಹುದಾದರೆ ಕನಿಷ್ಟ ಅವಶ್ಯಕತೆಯ ಭೌತಿಕ ಸವಲತ್ತುಗಳನ್ನು ನೀಡುವುದೇ ಅವರ ಪ್ರಕಾರ ಸಾಮಾಜಿಕ ಭದ್ರತೆ. ಪಾಶ್ಚಾತ್ಯರ ಈ ಲೋಕಜ್ಞಾನ ಭಾರತೀಯರಿಗೆ ರೋಮಾಂಚಕವಾಗಿ ಕಂಡದ್ದು ಸಹಜ. ಏಕೆಂದರೆ ಪಾಶ್ಚಾತ್ಯ ಸಂಸ್ಕೃತಿಯನ್ನು ಒಂದು ಪರಿಪೂರ್ಣ ಮಾದರಿ ಎಂದು ನಾವು ಸ್ವೀಕರಿಸಿಬಿಟ್ಟಿದ್ದೇವೆ.





