ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 22, 2011

2

ದುಡ್ಡು ಇದ್ದರೆ ದುನಿಯಾ, ಜಾತಿ ಇದ್ದರೆ ಅಧಿಕಾರ – ಹೊಸಗಾದೆ

‍parupattedara ಮೂಲಕ

ಕೋಮಲ್

ಸಿದ್ದ ಯಾಕೋ ಸಾನೇ ಬೇಜಾರಾಗಿದ್ದ, ಮನೆ ಮುಂದೆ ತಲೆ ಮ್ಯಾಕೆ ಟವಲ್ ಹಾಕ್ಕಂಡು, ವಿಧವೆ ತರಾ ಕುಂತಿದ್ದ. ಯಾಕ್ಲಾ ಸಿದ್ದ ಅಂದ ಸಂಭು. ನೋಡ್ಲಾ ನಾನು ರಾಜಕೀಯ ನೋಡ್ತಾನೇ ಇದೀನಿ, ಎಲ್ಲಿಗಲಾ ಬಂತು ನಮ್ಮ ರಾಜಕೀಯ, ಅಧಿಕಾರಕ್ಕಾಗಿ ಹೊಡೆದಾಟ, ಜಾತಿ, ಕಾಸು ಎಲ್ಲಾ ಬತ್ತಾ ಐತಲ್ಲೋ, ಹಿಂಗಾದ್ರೆ ನಮ್ಮಂತಹ ಬಡವರು, ರೈತರು ಬದಕಕ್ಕೆ ಆಯ್ತದೇನ್ಲಾ ಅಂದ ಸಿದ್ದ.  ನಮ್ಮ ಜಾತಿ ಪ್ರಬಲವಾಗಿಲ್ಲ ಅಂದ್ರೆ ಸಾಯೋ ಗಂಟ ಬರೀ ಕಾರ್ಯಕರ್ತನಾಗೇ ಇರಬೇಕಾಯ್ತದೆ ಕಲಾ, ಅದೇ ಪ್ರಬಲ ಜಾತಿ ಇದ್ದೋರು ಅಧಿಕಾರನೂ ಮಾಡ್ತಾರೆ, ಅಂಗೇ ಕಾಸು ಮಾಡ್ಕಂತಾರೆ ಅಂದ ಸಂಭು. ಪಾಪ ಸಂಭುನೂ ಅಳಕ್ಕೆ ಸುರು ಮಾಡ್ದ. ಬುಡ್ಲಾ ಅಳಬೇಡ ಬುಡ್ಲಾ ಅಂದ ಸಿದ್ದ. ನಮ್ಮದು ಜಾತ್ಯಾತೀತ ರಾಜ್ಯ ಅಲ್ಲ ಕಲಾ.  ನಮ್ಮದು ಜಾತಿ ರಾಜ್ಯ ಅಂದ ಸುಬ್ಬ.

ಕಡೆಗೆ ಎಲ್ಲಾ ಸೇರ್ಕಂಡು, ನಿಂಗನ ಅಂಗಡಿಗೆ ಚಾ ಕುಡಿಯುವಾ ಅಂತಾ ಹೋದ್ವಿ. ಅಲ್ಲಿ ನಮ್ಮ ಮಿಕ್ಕಿದ ಗೆಳೆಯರು ಕೂಡ ಬೈ ಟು ಚಾ ಕುಡಿತಾ ಕುಂತಿದ್ರು, ಬರೀ ಚಲ್ಟಾ ಐತೆ ಅನ್ನೋರು. ಕಿಸ್ನ ಡಿಕಾಕ್ಸನ್ ಕಮ್ಮಿ ಆಗೈತೆ ಅಂತಿದ್ದ. ಮಗಾ ನಾಗ ಮಾತ್ರ ಇಂಗ್ಲೀಸ್ ಪೇಪರ್ ಓದ್ತಾ ಇದ್ದ. ಓದಿರೋದು ಮಾತ್ರ ಮೂರನೇ ಕಿಲಾಸು. ಪೋಟೋ ನೋಡ್ತಾ ಇದೀನಿ ಕನ್ರಲಾ ಅಂತಿದ್ದ ನಾಗ, ಅದೂ ಉಲ್ಟಾ ಮಡಿಕ್ಕಂಡು. ಏಥೂ.  ಏನ್ರಲಾ ಸಮಾಚಾರ ಅಂದ ತಂಬೂರಿ ನಾಗ. ನೋಡ್ರಲಾ ಒಂದು ಟೇಮಲ್ಲಿ ರೆಡ್ಡಿಗಳು ಅಂದ್ರೆ ಸರ್ಕಾರನೇ ಹೆದರೋದು ಕಲಾ, ಅವರು ಇಲ್ಲದೆ ಸರ್ಕಾರನೇ ನಡೆಸಕ್ಕೆ ಆಗಕ್ಕಿಲ್ಲಾ ಅನ್ನೋ ಟೇಮ್ ಇತ್ತು. ಯಡೂರಪ್ಪನು ಹೆದರೋದು. ಹಯ ಕಮಾಂಡ್ ಹೆದರೋದು. ಅಮ್ಮ ಸುಸ್ಮಾ ಆಸೀರ್ವಾದನೂ ಇತ್ತು. ಹಂಗಾಗೇ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ರು ಕಲಾ, ಈಗ ನೋಡ್ಲಾ, ಹೆಂಗೆ ಟೇಮ್ ಚೇಂಜ್ ಆಗೈತೆ. ಈಗ ನಮಗೆ ಇಲ್ಲಾ, ನಮ್ಮ ಕಡೆಯೋರಿಗೆ ಸಚಿವ ಸ್ಥಾನ ಕೊಡಿ ಅಂತ ಬೇಡೋ ಹಾಗೆ ಆತಲ್ಲೋ ಅಂದ ಸಿದ್ದ. ಹಯ ಕಮಾಂಡ್್ಗೆ ಸಾನೇ ತೊಂದರೆ ಕೊಡ್ತಾವ್ರಂತೆ. ಇವರಿಗೆ ಸಚಿವ ಸ್ಥಾನ ಕೊಡ್ಲಿಲ್ಲಾ ಅಂದ್ರೆ ಮುಂದಿನ ಚುನಾವಣೆಯಲ್ಲಿ ಸುಸ್ಮಾ ಬದಲು, ಸೋನಿಯಾ ಅಮ್ಮ ಆಯ್ತರೆ ಕಲಾ ಅಂದ ಸೀನ. ಹೂಂ ಕಲಾ ಅವಾಗ ಅಧಿಕಾರನೂ ಇತ್ತದೆ, ಹಂಗೇ ಅಕ್ರಮ ಗಣಿ ಮಾಡಕ್ಕೂ ತೊಂದರೆ ಇರಕ್ಕಿಲ್ಲಾ ಕಲಾ ಅಂದ ನಾಗ. ಯಡೂರಪ್ಪ ಲಿಂಗಾಯಿತರಿಂದಲೇ ನಾನು ಅಧಿಕಾರಕ್ಕೆ ಬಂದಿರುವುದು, ನಾನು ಬಸವ ತತ್ವಗಳನ್ನು ಪಾಲಿಸುತ್ತೇನೆ ಅಂತಾ , ಎಲ್ಲಾ ಮಠಕ್ಕೂ ಕಾಸು ಕೊಟ್ಟಿದ್ದೇ ಕೊಟ್ಟಿದ್ದು, ಅಂಗೇ ಸ್ವಾಮೀಜಿಗಳ ಕಾಲಿಗೆ ಅಡ್ಡ ಬಿದ್ದಿದ್ದೇ ಬಿದ್ದಿದ್ದು, ಡಿ ನೋಟಿಫಿಕೇಸ್ ಮಾಡಿದ್ದೇ ಮಾಡಿದ್ದು. ಮಕ್ಕಳು, ಸೊಸೆಯಂದಿರು,ಅಳಿಯಂದಿರು ಕಾಸು ಮಾಡಿದ್ದೇ ಮಾಡಿದ್ದು. ಲೇ ಇನ್ನು ನೂರು ತಲೆಮಾರು ತಿನ್ನುವಷ್ಟು ಮಾಡ್ಕಂಡ್ರು ಕಲಾ, ಕರ್ನಾಟಕದ ಜನತೆ ಸಾಂತ ಸ್ವಭಾವದವರು, ಅದಕ್ಕೆ ಸುಮ್ಕಿದಾರೆ ಅಂದ ಸೀನ.

ಅದೇ ತನ್ನ ಬುಡಕ್ಕೆ ಜಗದೀಶ್ ಸೆಟ್ಟರ್ ಬಿಸಿನೀರು ಕಾಯಿಸ್ತಾರೆ ಅಂತಾ ಗೊತ್ತಾಗ್ತಿದ್ದಾಗೆನೇ, ಜಾತಿ ಎಲ್ಲಾ ಬಿಟ್ಟು ಸದಾನಂದ ಗೌಡರನ್ನು ಆಯ್ಕೆ ಮಾಡಿದ್ದು ಸರಿ ಏನ್ಲಾ ಅಂದ ಸಿದ್ದ. ಬುಡ್ಲಾ, ಆ ವಯ್ಯನೂ ನಿಷ್ಠಾವಂತ ಕಾರ್ಯಕರ್ತ ತಪ್ಪು ಇಲ್ಲ ಬುಡ್ಲಾ ಅಂದ ಸಂಭು. ಅದು ಇರಲಿ ಕಲಾ , ಈಗ ಲಿಂಗಾಯಿತ ಮಠದ ಸ್ವಾಮೀಜಿಗಳು, ಸಮಾಜದ ಬಂಧುಗಳು ಯಡೂರಪ್ಪನ ಮೇಲೆ ಸಾನೇ ಮುನಿಸ್ಕಂಡಿದಾರೆ ಕಲಾ. ಮುಂದಿನ ಬಾರಿ ಚುನಾವಣೆಗೆ ಬನ್ನಿ ಐತೆ ಮಾರಿ ಹಬ್ಬ ಅಂತಾವ್ರೆ ಕಲಾ ಅಂದ ತಂಬೂರಿ ನಾಗ. ಅದೆಂಗಲಾ ಹೇಳ್ತೀಯಾ ಅಂದ ಸಿದ್ದ. ಲೇ ಹೋದ ಕಿತಾ ರಾಜ್ಯಪಾಲರು ಯಡೂರಪ್ಪನ್ನ ಇಳಿಸಬೇಕು ಅಂತ ಹೊಂಟಾಗ ಇದೇ ಸ್ವಾಮೀಜಿಗಳು ಅಲ್ವೇನ್ಲಾ ಅಡ್ಡ ಬಂದಿದ್ದು. ಈಗ ನೋಡ್ಲಾ, ಯಾರು ಬಾಯಿನೇ ಬುಡ್ತಾ ಇಲ್ಲಾ ಅಂದ ನಾಗ. ಲೇ ಅವರು ಎಷ್ಟು ಅಂತಾ ಸಪೋರ್ಟ್ ಮಾಡ್ತಾರೆ ಹೇಳು, ಮಠ ಅಂದ ಮ್ಯಾಕೆ ಎಲ್ಲಾ ತರದ ಭಕ್ತರೂ ಬತ್ತಾರೆ ಕಲಾ ಅಂದ ಸಂಭು.

ಯಡೂರಪ್ಪ ಅಧಿಕಾರದಲ್ಲಿ ಇದ್ದಾಗ, ಅವರ ಸುತ್ತಮುತ್ತಲು ಇದ್ದೋರೆಲ್ಲಾ, ಅವರ ಸಮಾಜದ ಬಂಧುಗಳೇ ಹೆಚ್ಚು ಕಲಾ, ಶಿವಮೊಗ್ಗದಲ್ಲೂ ಇದೇ ರಾಮಾಣ್ಯ ಆಗಿತ್ತು ಕಲಾ. ಹಂಗಾದ್ರೆ ಬಿಜೆಪಿಗೆ ಬೇರೆ ಜಾತಿಯವರು ಓಟೇ ಹಾಕಿಲ್ವೇನ್ಲಾ. ಯಡೂರಪ್ಪ ರಾಜ್ಯಕ್ಕೆ ಅಲ್ವೇನ್ಲಾ ಮುಕ್ಕಮಂತ್ರಿ ಆಗಿದ್ದು ಅಂದ ಸಿದ್ದ. ಲೇ ಅದು ಬುಡ್ಲಾ, ಎಲ್ಲಾ ಮುಗಿದು ಹೋಗೈತೆ, ಮುಂದಿಂದು ಏನು ಅಂತ ಹೇಳಲಾ.

ಸದಾನಂದ ಗೌಡರನ್ನ ನಾನು ಕೂರಿಸಿದ್ದು, ನಾನು ಹೇಳಿದಂಗೆ ಕೇಳ್ತದೆ ಅಂದ್ಕಂಡೈತೆ ಯಡೂರಪ್ಪ. ಲೇ ಗೌಡರು ಸಾನೇ ಬುದ್ದಿವಂತರು ಕಲಾ, ಹೂಂ ಅಂದು, ಅಂಗೇ ಜಾರ್ಕಂತದೆ. ಮತ್ತೆ ಯಡೂರಪ್ಪನವರ ಕಥೆ, ಮುಂದೆ ಐತೆ ನೋಡ್ಲಾ, ಆ ವಯ್ಯ ನನ್ನ ಹಿಂದೆ ಸಾಸಕರು, ಸಂಸದರು ಎಲ್ಲಾ ಅವ್ರೆ ಅಂತಾ ಇದಾರೆ. ಸರ್ಕಾರ ಸ್ವಲ್ಪ ಸೇಕ್ ಆಗಲಿ. ಅಂಗೇ ಈ ವಯ್ಯನ ಮೇಲಿರೋ ಕೇಸು ಕಚ್ಕಂಡರೆ, ಅವಾಗ ನೋಡ್ಲಾ ಬಂಡವಾಳ ಹೊರ ಬತ್ತದೆ. ಈಗ ಏನು ನನ್ನ ಕಡೆ ಇದಾರೆ ಅಂತಾ ಯಡೂರಪ್ಪ ಹೇಳ್ತಾ ಇದಾರಲ್ಲಾ, ಅವರು ಯಾವ ಪಕ್ಸದಾಗೆ ಇರ್ತಾರೋ ಅಂತಾ ಅವರಿಗೇ ಗೊತ್ತಿರಕ್ಕೆ ಇಲ್ಲ ಕಲಾ ಅಂದ ಸಂಭು. ಇದೇ ಕಲಾ ರಾಜಕೀಯ.

ಮತ್ತೆ ಕುಮಾರಸ್ವಾಮಿ ನಾನು ಹೇಳೋದು ಸತ್ಯ ಅಂತಾ ಎಲ್ಲಾ ದಾಖಲೆ ಬಿಡುಗಡೆ ಮಾಡಿ, ಈಗ ಅವರು ಒಳಿಕ್ಕೆ ಹೋಗ್ತಾರೆ ಅಂತ್ಯಾ ಅಂದ ನಾಗ. ಲೇ ರಾಜಕಾರಣಿಗಳು ಅಂದ್ರೆ ಸತ್ಯ ಹರೀಶ್ಚಂದ್ರರು ಅನ್ಕಂಡೇನ್ಲಾ, ಆ ವಯ್ಯಂದು ಡಿನೋಟಿಫಿಕೇಸನ್ ಹಗರಣ ಐತೆ, ಎಲ್ಲಾರೂ ಸೇರಿ ಮುದ್ದೆ ಮುರಿದ್ರೆ, ಮುಂದಿನ ರಾಜಕಾರಣಿಗೆ ಪಾಠ ಆಯ್ತದೆ ಕಲಾ, ಅವಾಗ ಜಾತಿ, ಸ್ವಾರ್ಥ ಸ್ವಲ್ಪನಾದ್ರೂ ಬಿಟ್ಟು ರಾಜಕೀಯ ಮಾಡ್ತಾರೆ, ಇಲ್ಲಾಂದ್ರೆ ಮುಂದಿನ 20 ವರ್ಸದೊಳಗೆ ಕರ್ನಾಟಕದಾಗೆ ಇರೋ ಭೂಮಿಯೆಲ್ಲಾ ರಾಜಕಾರಣಿಗಳದ್ದು ಆಯ್ತದೆ ಕಲಾ ಅಂದ ಸಿದ್ದ.

ಲೇ ಮೊನ್ನೆ ಸಚಿವ ಸ್ಥಾನ ಪಡೆದೋರೆಲ್ಲಾ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರು ಏನ್ಲಾ ಅಂದ ಸಂಭು, ಲೇ ಅವರೆಲ್ಲಾ ಮೊನ್ನೆ ಬಿಜೆಪಿಗೆ ಅಧಿಕಾರಕ್ಕಾಗಿ ಬಂದೋರು ಕಲಾ, ಸರ್ಕಾರ ಬಿದ್ದು ಹೋಗುತ್ತದೆ ಎನ್ನುವ ಕಾರಣಕ್ಕಾಗಿ ಅವರಿಗೆಲ್ಲಾ ಅಧಿಕಾರ ಕೊಟ್ಟವ್ರೆ. ವರ್ತೂರು ಪ್ರಕಾಶ್, ಬಾಲಚಂದ್ರ ಜಾರಕಿಹೊಳಿ, ಆನಂದ ಆಸ್ನೋಟಿಕರ್, ರಾಜೂ ಗೌಡ, ಉಮೇಶ್ ಕತ್ತಿ, ಸೋಮಣ್ಣ, ಬಸವರಾಜ ಬೊಮ್ಮಾಯಿ ಇನ್ನೂ ಸಾನೇ ಅವ್ರೆ, ಇವರೆಲ್ಲಾ ಸಂಘದಿಂದ ಬಂದೋರು ಅಂತೆ ಕಲಾ. ಏಥೂ. ಸುಮ್ಕರ್ಲಾ.  ಬಿಜೆಪಿ ನಿಷ್ಠೆ, ತತ್ವ ಸಿದ್ದಾಂತ ಎಲ್ಲಾ ನೆಗೆದು ಬಿದ್ದು ಹೋಗೈತೆ ಕಲಾ. ಪಾಪ ಹಳೇ ಕಾರ್ಯಕರ್ತರು ಇನ್ನೂ ಅಂಗೇ ಅವ್ರೆ ಕಲಾ. ನಾವು ಸಂಘದಿಂದ ಬಂದಿದೀವಿ ಪಕ್ಸಕ್ಕೆ ದ್ರೋಹ ಮಾಡಲ್ಲಾ ಅಂತಾರೆ.

ಇದು ಹಿಂಗೆ ಮುಂದುವರೆದ್ರೆ ಬಿಜೆಪಿ ಕಥೆ ಮುಂದೆ ಏನು ಆಯ್ತದೋ ಆ ಗಡ್ಕರಿಗೆ ಗೊತ್ತು ಕಲಾ. ಕಾಂಗ್ರೆಸ್್ನೋರು ಏನಾದ್ರೂ ಮಾಡುವ ಅಂದ್ರೆ, ಅವರಿಗೆ ಅಮ್ಮ ಅಪ್ಪಣೆ ನೀಡಬೇಕು. ಅದಕ್ಕೆ ಬರೀ ಹೇಳಿಕೆ ಕೊಟ್ಕಂಡು ಕುಂತವ್ರೆ. ಜೆಡಿಎಸ್ ಅಂತ ಇರೋದು ಪ್ರಾದೇಸಿಕ ಪಕ್ಸ, ಅದು ಹೋರಾಟ ಮಾಡಿ ಸಾಕಾಗೈತೆ. ಮುಂದಿನ ದಪನೂ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಆಶ್ಚರ್ಯ ಏನೂ ಇಲ್ಲಾ ಕಲಾ ಅಂದ ಸಿದ್ದ. ಯಾಕ್ಲಾ. ಚುನಾವಣೆ ಇರೋದೆ ಹಣ ಹೆಂಡದ ಮೇಲೆ ಕಲಾ. ದುಡ್ಡಿನ ಮೇಲೆ ದುನಿಯಾ, ಜಾತಿ ಇದ್ದರೆ ಅಧಿಕಾರ ಕಲಾ ಅಂದ ಸಂಭು. ಲೇ ನಡೀರಲಾ, ಇವತ್ತು ಮೆಕ್ಕೆಜೋಳಕ್ಕೆ ಔಷಧಿ ಹೊಡಿಬೇಕು. ಮತ್ತೆ ಸಂಜೆ , ಚಾ ಅಂಗಡಿ ನಿಂಗನ ತಾವ ಸೇರೋಣ ಅಂದು ಎಲ್ಲಾರೂ ಹೊಂಟರು.

Read more from ಲೇಖನಗಳು
2 ಟಿಪ್ಪಣಿಗಳು Post a comment
  1. Badarinath Palavalli's avatar
    ಆಗಸ್ಟ್ 23 2011

    ಈ ನಡುವೆ ರಾಜಕೀಯವೂ ವೃತ್ತಿಯಾಗಿ ಪರಿವರ್ತನೆಯಾಗಿ ಹೋಗುತ್ತದೆ. ಈ ರಾಜಕಾರಣಿಗಳು ತಮ್ಮ ಸ್ವಾರ್ತ ಸಾಧನೆಗೆ ಕುರ್ಚಿ ತೆವಲಿಗೆ ಹಾಕುವ ತಿಪ್ಪರಲಾಗಗಳು, ಪಕ್ಷಾಂತರಗಳು ಅಸಹ್ಯ ಹುಟ್ಟಿಸುತ್ತವೆ. ಆದರೇ ಈ ದೊಂಬರಾಟಗಳನ್ನು ನನ್ನಂತ ಅಮಾಯಕ ಮತದಾರ ಓಟು ಹಾಕುವಾಗ ಮರೆಯುತ್ತಾನೆ.

    ಸಕಾಲಿಕ ಲೇಖನ ಸಾರ್! ಸರಳ ಶೈಲಿಯಲ್ಲಿ ಪಾಠ ಹೇಳಿಕೊಡುವ ನಿಮ್ಮ ತಂತ್ರ ಒಳ್ಳೆಯದು…

    ಉತ್ತರ
  2. komal's avatar
    komal
    ಆಗಸ್ಟ್ 23 2011

    ಪಲ್ಲವಿಯವರೆ ಮತದಾರ ಎಚ್ಚೆತ್ತುಕೊಳ್ಳುವುದರ ಜೊತೆಗೆ ಸಕಾಲಕ್ಕೆ ವಿರೋಧ ವ್ಯಕ್ತಪಡಿಸಿದರೆ, ಸ್ವಲ್ಪವಾದರೂ ಬದಲಾವಣೆ ಕಾಣಬಹುದು.

    ಉತ್ತರ

Leave a reply to Badarinath Palavalli ಪ್ರತ್ಯುತ್ತರವನ್ನು ರದ್ದುಮಾಡಿ

Note: HTML is allowed. Your email address will never be published.

Subscribe to comments