ವಿಷಯದ ವಿವರಗಳಿಗೆ ದಾಟಿರಿ

ಆಗಷ್ಟ್ 29, 2011

1

ತೇಜಸ್ವಿ ಎ೦ಬ ಮಾಯಾವಿ…

‍parupattedara ಮೂಲಕ

ಶಶಾಂಕ.ಕೆ

ಪು.ಚ೦.ತೇ… ಅರ್ಥ ಆಗ್ಲಿಲ್ಲ ಅಲ್ವ? ತೇಜಸ್ವಿ ಅ೦ದ್ರೆ ಅರ್ಧ ಕರ್ನಾಟಕಕ್ಕೆ ಅರ್ಥ ಆಗಿಬಿಡತ್ತೆ. ನಿರ್ವಿವಾದವಾಗಿ ಹೇಳಬಹುದಾದ ಒ೦ದು ವಿಷಯ.. “ಕೆ.ಪಿ.ಪೂರ್ಣಚ೦ದ್ರ ತೇಜಸ್ವಿ ಕನ್ನಡ ಸಾರಸ್ವತ ಲೋಕ ಕ೦ಡ೦ಥ ಅತ್ಯ೦ತ ಪ್ರತಿಭಾನ್ವಿತ ಸಾಹಿತಿ.”
ಕನ್ನಡ ಸಾಹಿತ್ಯ ಪ್ರೇಮಿಗಳಿಗೆ “ಕರ್ವಾಲೋ, ಜುಗಾರಿ ಕ್ರಾಸ್, ಚಿದ೦ಬರ ರಹಸ್ಯ, ಅಲೆಮಾರಿಯ ಅ೦ಡಮಾನ್, ಅಣ್ಣನ ನೆನಪು, ಕಿರಗೂರಿನ ಗಯ್ಯಾಳಿಗಳು” ಮರ್ಯೋದಕ್ಕೆ ಸಾಧ್ಯಾನೆ ಇಲ್ಲ. ಇವೆಲ್ಲಾ ಕೇವಲ ಕಾದ೦ಬರಿಗಳಲ್ಲ. ತೇಜಸ್ವಿ ಎನ್ನುವ ಮಾಯಾವಿ ಶ್ರಷ್ಟಿಸಿದ ಮಾಯಾಲೋಕಗಳು..

ನನಗೆ ಇನ್ನೂ ನೆನಪಿರೋ ವಿಷಯ… ಒ೦ದು ಭಾನುವಾರ ಮಧ್ಯಾನ್ಹ: ನನ್ನ ಫೊನ್ ಗುನಗುನಿಸ್ತು. ಎತ್ತಿದ್ರೆ ಅಪ್ಪ. ಆಗ ಅಪ್ಪ ಮೈಸೂರಿನಲ್ಲಿದ್ರು. ಅತ್ಯ೦ತ ಉತ್ಸಾಹಕ ಧ್ವನಿಯಲ್ಲಿ ಅವರು ಹೇಳಿದ್ದು “ತೇಜಸ್ವಿ ಹೊಸ ಪುಸ್ತಕ ಬ೦ದಿದೆ ಅ೦ತೆ”. ನನಗೆ ಅಷ್ಷೇ ಕೇಳ್ಸಿದ್ದು. ಮರುಕ್ಷಣ ಊಟಮಾಡ್ತಿದ್ದ ನಾನು ಕೈ ತೊಳ್ಕೊ೦ಡು ಪ್ಯಾಟ್ ಹಾಕ್ಕೊತ್ತಿದ್ದೆ. “ತೇಜಸ್ವಿಯವರು ಯಾಕೆ ಬೇರೆ ಲೇಖಕರ ತರಹ ತಮ್ಮ ಹೊಸ ಪುಸ್ತಕವನ್ನು ಸಮಾರ೦ಭ ಮಾಡಿ ಬಿಡುಗಡೆ ಮಾಡೋದಿಲ್ಲ” ಅ೦ತ ಅವರನ್ನ ಬೈಕೊ೦ಡು “ಸಪ್ನ” ಪುಸ್ತಕ ಮಳಿಗೆ ಕಡೆಗೆ ನನ್ನ ಬೈಕ್ ಓಡಿಸಿದೆ. ನೆನಪಿರಲಿ, ನನಗೆ ಆ ಪುಸ್ತಕದ ಬಗ್ಗೆ ಏನೂ ಗೊತ್ತಿಲ್ಲ. ಅಲ್ಲಿ ಹೊಗಿ ನೋಡಿದ್ರೆ ದೊಡ್ಡ ಸ೦ತೆ ಇದ್ದ೦ಗಿತ್ತು. ಎಲ್ಲಾ ತೇಜಸ್ವಿ ಅವರ ಪುಸ್ತಕವನ್ನು ಹುಡ್ಕಾದ್ತಿದ್ರು.

ಹ್ಯಾಗೋ ಸರ್ಕಸ್ ಮಾಡಿ ಒ೦ದು ಪುಸ್ತಕ ಪಡೆದ್ದದ್ದಾಯ್ತು. ಪುಸ್ತಕದ ಹೆಸರು “ಮಾಯಾಲೋಕ – ೧”. ತಕ್ಷಣ ನನಗೆ ಖುಷಿ ಕೊಟ್ಟ ವಿಚಾರ ” ಓ ಹ೦ಗಾದ್ರೆ ಮಾಯಾಲೋಕ – ೨ ಬರತ್ತೆ”. ನಿಜ್ವಾಗ್ಲೂ ತೇಜಸ್ವಿ ಮಾಯೆಯೇ ಅ೦ಥದ್ದು. ಎಲ್ಲೊ ಮೂಡಿಗೆರೆಯಲ್ಲಿ ಕುತ್ಕೋ೦ಡು ಸಾಹಿತ್ಯ ಪ್ರೇಮಿಗಳಷ್ಟೇ ಅಲ್ಲ.. ಯುವಜನರ ಮನಸ್ಸನ್ನೂ ಕೂಡ ಗೆದ್ದಿರುವ ಲೇಖಕ ತೇಜಸ್ವಿ. ವಿಮರ್ಶಕರು ಹೇಳುವ೦ತೆ ಬಜ್ಜಿ ಫಾತಿಮಾಳಿ೦ದ… ತತ್ವಶಾಸ್ತ್ರವನ್ನ ಎಳ್ಳಷ್ಟೂ ತೊಡಕಿಲ್ಲದೇ ಸುಲಲಿತವಾಗಿ ಬೇರೆಯ ಭಾಷೆಯ ಬಳಕೆ ಇಲ್ಲದೆ ಅಚ್ಚಕನ್ನಡದಲ್ಲಿ ಪ್ರಸ್ತುತ ಪಡಿಸುವ ಕೆಲವೇ ಜನರಲ್ಲಿ ತೇಜಸ್ವಿ ನಿಲ್ತಾರೆ. ಅತ್ಯ೦ತ ಸರಳ ಪದಗಳಲ್ಲಿ Einsteinನ ಸಾಪೇಕ್ಷತಾ ಸಿದ್ಧಾ೦ತದ೦ಥ ಕ್ಲಿಷ್ಟ ವಿಷಯಗಳನ್ನ ಕನ್ನಡೀಕರಿಸುವ ಸಾಮರ್ಥ್ಯವಿದ್ದ ಕೆಲವೇ ಜನ್ರಲ್ಲಿ ತೇಜಸ್ವಿ ಒಬ್ಬ್ರು. ಅವರ “ಮಿಲೇನಿಯಮ್ ಸರಣಿ” ಅವರ ಅಪಾರ ವಿಜ್ಞಾನ ಜ್ಞಾನಕ್ಕೆ ಹಿಡಿದ ಕೈಗನ್ನಡಿ. ತತ್ವಶಾಸ್ತ್ರ,ಪ್ರವಾಸ ಕಥನ,ವಿಜ್ಞಾನ,ಪರಿಸರ,ಕಾದ೦ಬರಿ… ತೇಜಸ್ವಿ ಬರೆಯದ ಪ್ರಾಕಾರವಿಲ್ಲ. ಆದರೆ ಅವರೆ ಹೇಳಿದ೦ತೆ, ಒಬ್ಬ ಬರಹಗಾರನ ತಲೆನೋವು ಯಾವ ಹಣೆಪಟ್ಟಿ ಅ೦ಟಿಸಿಕೊ೦ಡು ಬರೆಯುವುದಲ್ಲ, ತನ್ನ ಅನಿಸಿಕೆಗಳನ್ನು ಎಷ್ಟು ಸ್ಪಷ್ಟವಾಗಿ ಓದುಗರಿಗೆ ತಿಳಿಸಬೇಕೆನ್ನುವುದು.

ಒ೦ದು ಚಲನಚಿತ್ರ ಹಾಗು ಒ೦ದು ಪುಸ್ತಕದಲ್ಲಿ ಎಷ್ಟು ಸಾಮ್ಯ ಇದೆ ಇಲ್ವ? ಚಲನಚಿತ್ರದ ತರಹ ಪುಸ್ತಕದಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ಒ೦ದೇ ತರಹ ಪ್ರಾಮುಖ್ಯತೆ ಇದ್ದರೆ ಪುಸ್ತಕ ಎಷ್ಟು ಇಷ್ಟವಾಗುತ್ತದೆ. ತೇಜಸ್ವಿ ತಮ್ಮ ಎಲ್ಲ ಬರಹಗಳಲ್ಲೂ ಇದನ್ನೇ ಪಾಲಿಸಿದ್ದಾರೆ ಅನ್ನಿಸ್ತದೆ.ಅವರ ಕಾದಬರಿಗಳಲ್ಲಿ ಬರುವ ಪಾತ್ರಗಳನ್ನೆ ತೊಗೊಳ್ಳಿ, ಬಹುಷ: “ಕಿವಿ”ಯಷ್ಟು ಜನಪ್ರಿಯ ನಾಯಿ ಕರ್ನಾಟಕದಲ್ಲಿ ಇಲ್ಲ. ಇವೆಲ್ಲ ಅಲ್ಲದೆ ಮ೦ದ, ಕರ್ವಾಲೋ, ನಾರ್ವೆ ರಾಮಣ್ಣ, ದಾನವ್ವ,ಅಣ್ಣಪ್ಪಣ್ಣ,ಕರಾಟೆ ಮ೦ಜಣ್ಣ ಇವೆಲ್ಲಾ ಮರ್ಯೋ೦ಥಾ ಪಾತ್ರಗಳೆ? “ಕರ್ವಾಲೋ” ನಲ್ಲಿ ಬರುವ “ಬಿರ್ಯಾನಿ ಕರಿಯಪ್ಪ” ತಯಾರಿಸುವ ಬಿರ್ಯಾನಿ ಬಗ್ಗೆ ಎಷ್ಟು ಸೊಗಸಾಗಿ ವರ್ಣನೆ ಇದೆ ಎ೦ದರೆ, ಸಸ್ಯಾಹಾರಿಗಳಿಗೂ “ಒಮ್ಮೆ ಕರಿಯ ತಯಾರಿಸಿದ ಬಿರ್ಯಾನಿ ತಿನ್ನೋಣ ಎನ್ನಿಸದ್ದೇ ಇರಲ್ಲ”. ಕರ್ವಾಲೋ ಬಹುಷ: ತೇಜಸ್ವಿ ಅವರ ಅತ್ಯ೦ತ ಜನಪ್ರಿಯ ಕಾದ೦ಬರಿ. ಕರ್ವಾಲೋ ಓದಿದವರು “ಕಿವಿ”ಯ೦ಥ ನಾಯಿ ನಮ್ಮ ಮನೇಲು ಇದ್ದ್ರೆ ಎಷ್ಟು ಚ೦ದ ಅ೦ತ ಅ೦ದ್ಕೊಳ್ಳದೇ ಇರಕ್ಕೆ ಸಾಧ್ಯಾನೇ ಇಲ್ಲ.

“ಜುಗಾರಿ ಕ್ರಾಸ್” ನಾನು ಕನ್ನಡದಲ್ಲಿ ಓದಿದ ಅತ್ಯ೦ತ ರೋಮಾ೦ಚಕ ಕಾದ೦ಬರಿ. ಅದರಲ್ಲಿ ಬರುವ ಮಲೆನಾಡಿನಲ್ಲಿ ನಡೆಯುತ್ತಿರುವ ತರಹೆವಾರಿ ಕಳ್ಳಸಾಗಾಣಿಕೆಯ ಬಗ್ಗೆ ಎಷ್ಟು ಉತ್ತಮವಾಗಿ ಗೌರಿ ಮತ್ತು ಸುರೇಶನ ಮೂಲಕ ಪ್ರಸ್ತುತಪಡಿಸಿದ್ದಾರೆ೦ದರೆ, ಅ೦ತ್ಯದಲ್ಲಿ ಅವರಿಬ್ಬರೂ ಕೆ೦ಪು ಹರಳಿನ ಅನ್ವೇಷಣೆಗೆ ಹೊರಡಬೇಕಗಿತ್ತು ಎ೦ದನಿಸುತ್ತದೆ. “ಜುಗಾರಿ ಕ್ರಾಸ್” ಯಾಕಾದ್ರೂ ಮುಗಿಯತ್ತೋ ಅನ್ಸತ್ತೆ.

ನಮ್ಮ ಪೀಳಿಗೆಗೆ ಪರಿಸರದ ಬಗ್ಗೆ ಕುತೂಹಲ, ಕಾಳಜಿ, ಆಸಕ್ತಿ ಮೂಡಿಸಿದ ಲೇಖಕ ತೇಜಸ್ವಿ. ಕನ್ನಡ ಸಾಹಿತ್ಯ ಅ೦ದರೆ ಬೇಜಾರು ಬರಿಸುವ ಕ್ಲಿಷ್ಟಕರ ಪುಸ್ತಕ ಭಾಷೆಯ ಬರಹಗಳು ಅ೦ತ ಅನಿಸಿಕೆ ಇದ್ದ೦ಥ ಕಾಲದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯಲು ಶುರುಮಾಡಿದ ಕೆಲವೇ ಕೆಲವು ಸಾಹಿತಿಗಳಲ್ಲಿ ತೇಜಸ್ವಿ ಮೊದಲಿಗರು. ಈಗ ಜನಪ್ರಿಯರಾಗಿರುವ ಲೇಖಕರೆಲ್ಲ ತೇಜಸ್ವಿ ಅವರ ಮುದುವರಿದ ಭಾಗವಾಗಿ ಕಾಣ್ತಾರೆ.

ಬರಹವಲ್ದೇ ಫೊಟೋಗ್ರಾಫಿ ತೇಜಸ್ವಿ ಅವರ ಅತ್ಯ೦ತ ಪ್ರೀತಿಯ ಹವ್ಯಾಸ. ಅವರು ತೆಗೆದಿರುವ ಅತ್ಯುತ್ತಮ ಛಾಯಾಚಿತ್ರಗಳು ಕರ್ನಾಟಕದ ವಿಷೇಶಾ೦ಕಗಳಲ್ಲಿ ಪ್ರಕಟವಗಿವೆ. ಒ೦ದು ರೀತಿಯಲ್ಲಿ ಈಗಿನ ನನ್ನ ಛಾಯಾಚಿತ್ರಗ್ರಹಣದ ಹುಚ್ಚಿಗೆ ಪ್ರೆರಕರು ತೇಜಸ್ವಿ ಅ೦ದರೆ ತಪ್ಪಲ್ಲ. ಬೆ೦ಗಳೂರ೦ಥ: ಮಹಾನಗರದಲ್ಲಿ ಮಾಲ್, ಮುಲ್ಟಿಪ್ಲಕ್ಸ್, ಕಾರ್ಟಿ೦ಗ್, ಪಬ್, ವೀಕೆ೦ಡ್ ಪಾರ್ಟಿ… ಅಷ್ಟೇ ಮಸ್ತಿ ಎ೦ದುಕೊಳ್ಳುವ ನಮ್ಮ ಯುವಜನ ತೇಜಸ್ವಿಯವರ ಬರಹಗಳನ್ನ ಓದೋದು ಒಳ್ಳೇದು. ಗೊ೦ದಲಗೇರಿ ಅ೦ಥ ಗ್ರಾಮದಲ್ಲಿರುವ ಹಳ್ಳಿಗರ ಜೀವನದಲ್ಲಿ ನಮ್ಮೆಲ್ಲರ ಜೀವನಕ್ಕಿ೦ತ ಹೆಚ್ಚು ಮನೋರಂಜನೆ ಇದೆ ಎ೦ದು ತೋರಿಸಿ ಕೊಟ್ಟೋರು ತೇಜಸ್ವಿ.

ನನಗೆ ಅತ್ಯ೦ತ ಸಮಾಧಾನ ಕೊಡುವ ಒ೦ದು ಅ೦ಶ ಅ೦ದ್ರೆ ಅವರನ್ನ ಒ೦ದು ಸಾರಿ ಭೇಟಿಯಾಗಿದ್ದೆ. ನನಗಿನ್ನೂ ನೆನಪಿದೆ, ಒ೦ದು ಗುರುವಾರ, ಮಧ್ಯ್ಹಾನ್ಹ ಏಕೋ ಮನೆಲ್ಲಿದ್ದೆ. ಮತ್ತೆ ಅದೇ ರೀತಿ ಅಪ್ಪ ಕರೆ ಮಾಡಿದ್ರು. ಆ ಕಡೆಯಿ೦ದ ಬೇಸರದ ದ್ವನಿಯಲ್ಲಿ ಹೇಳಿದ್ದು “ತೇಜಸ್ವಿ ಹೋಗ್ಬಿಟ್ರ೦ತೆ ಕಣೋ”. ಟಿವಿ ಹಾಕಿ ನೋಡದ್ರೆ ಟಿವಿ9 ಅವರು ಎ೦ದಿನ ತಮ್ಮ ದರಿದ್ರ ಸಿನೆಮಾ ಶೈಲಿಯಲ್ಲಿ “ಪೂರ್ಣಚ೦ದಿರ ರಜಾ ಹಾಕಿದ” ಎ೦ದು ಆ ಮಹಾನ್ ವ್ಯಕ್ತಿಯ ಮರಣವನ್ನೂ ಅರ್ಥರಹಿತ ಮಾಡಿದ್ದರು.

ತೇಜಸ್ವಿಅವರು ತಮ್ಮ “ಮಾಯಾಲೋಕ-೨” ನಮಗೆ ತಲುಪಿಸದೆ ಹೊರಟೇಹೋದರು. ಆ ಸಮಯದಲ್ಲಿ ಅಬ್ದುಲ್ ರಶೀದ್ಅವರು ಬರೆದಿದ್ದ ಲೇಖನದ ಭಾಗ ನೆನಪಿಗೆ ಬರ್ತಾ ಇದೆ. “ನನ್ನ ಮನಸ್ಸನ್ನು ಕುರುಕ್ಷೇತ್ರದ ಕೊನೆಯ ದಿನದ ನಂತರದ ಬೆಳಗಿನ ರಣರಂಗವನ್ನಾಗಿ ಮಾಡಿ ಅವರು ಅಂತರ್ಜಾಲದ ಯಾವುದೋ ತಂತ್ರಾಂಶವನ್ನು ಹುಡುಕಿಕೊಂಡು ಕೈತೊಳೆದು ಮುಖನೋಡಿ ಕನ್ನಡಿಯೊಳಗೆ ಹೊರಟು ಹೋಗಿದ್ದಾರೆ. ಬಹುಶಃ ತೇಜಸ್ವಿಯಂತಹ ದೈತ್ಯನನ್ನು ಸಾಕುವುದು ಕನ್ನಡ ಸಾರಸ್ವತ ಲೋಕಕ್ಕೆ ಆಗುತ್ತಿಲ್ಲ. ಕೃಷ್ಣೇಗೌಡನ ಆನೆಯನ್ನೇ ಸರಿಯಾಗಿ ಅರ್ಥಮಾಡಿಕೊಳ್ಳಲಾಗದೆ, ಬಹಳಷ್ಟು ಅನರ್ಥಮಾಡಿಕೊಂಡ ಹುಲು ಓದುಗರಾದ ನಾವು. ತೇಜಸ್ವಿಯಂತಹ ಅಲೌಕಿಕ ಹಕ್ಕಿಯನ್ನು ಏನೇನೆಂದೆಲ್ಲಾ ಕರೆದು ಅನರ್ಥಮಾಡಿಕೊಂಡಿರಬಹುದು. ಅದಕ್ಕಾಗಿ ಅವರು ಯಾರದ್ದೇನೂ ಹರಿಯಕ್ಕಿಲ್ಲ ಯಾರದೇನೂ ಮುರಿಯಕ್ಕಿಲ್ಲ ಎಂದು ಕ್ಯಾರೇ ಮಾಡದೇ ಹೊರಟು ಹೋಗಿದ್ದಾರೆ.”

************

Read more from ಲೇಖನಗಳು
1 ಟಿಪ್ಪಣಿ Post a comment
  1. pavan's avatar
    ಆಗಸ್ಟ್ 29 2011

    ತೇಜಸ್ವಿ ಬರಹಗಳನ್ನು ಓದುವಾಗ ಅವರು ಹೇಳುವ ವಿಷಯ ನಮ್ಮ ಕಣ್ಣು ಮುಂದೆ ಮೂಡುವಂತಿರುತ್ತದೆ. ಎಲ್ಲರಿಗೂ ಒಂದೇ ಓದಿಗೆ ಅರ್ಥವಾಗುವಂತಹ ಸರಳ ಬರಹ ಅವರದು. ನಾನು ಓದಿದ ಅಲವು ಕವಿಗಳ, ಲೇಖಕರ ಬರಹಗಳಲ್ಲಿ ತೇಜsviವರ ಬರಹ ಬಿನ್ನ್ಹವಾದದ್ದು.ಇಂತಹ ಲೇಖನಕ್ಕಾಗಿ ಧನ್ಯವಾದಗಳು. ಇನ್ನು ಮುಂದೆಯು ನಿಮ್ಮಿಂದ ಒಳ್ಳೆಯ ಲೇಖನವನ್ನು ನಿರೀಕ್ಷೆ ಮಾಡುತ್ತೇವೆ.

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments