ಕಳ್ಳತನವೊಂದು ಬಿಟ್ಟು ಎಲ್ಲ ಕೆಲ್ಸ ಬರುತ್ತೆ ಸ್ಸಾರ್. .
-ಕಾಲಂ೯
ಮಾಧ್ಯಮದಿಂದ ಬಹುದೂರದಲ್ಲಿ ಆಗಿಹೋದ ಸಂಭಾಷಣೆಯಿದು. ನಮ್ಮ ರಸ್ತೆಯ ಸ್ವಚ್ಛತೆಯ ಹೊಣೆಹೊತ್ತ ಪೌರಕಾರ್ಮಿಕ ನಾಗರಾಜನೊಂದಿಗೆ ಅದೊಂಥರಾ ದೋಸ್ತಿ. ಬೆಳಗಿನ ವಾಕಿಂಗ್ – ಅವನೆಲ್ಲೋ ಎದುರಾಗಿ `ನಮಸ್ಕಾರ ಸ್ಸಾರ್’ ಎಂಬ ಮುಗುಳ್ನಗೆ ಧಕ್ಕದೆ ಮುಗಿಯೋದಿಲ್ಲ. ಮಾತಿಗೇನಾದರೂ ನಿಂತರೆ ಅನೇಕ ಸಲ ಅವನು ಹೊಸ ಹೊಳಹುಗಳನ್ನು ಸರಳವಾಗಿ ದಾಟಿಸಿಬಿಡ್ತಾನೆ. ಮೊನ್ನೆ ಆದದ್ದು ಹಾಗೆಯೇ.
ನಾವಿರೋ ಕಟ್ಟಡದ ಡ್ರೈನೇಜ್ ಬ್ಲಾಕ್ ಆಗಿ ಬದುಕು ಅಸಹನೀಯವೆನಿಸಲು ಆರಂಭವಾಗಿತ್ತು. ಹೀಗಾಗಿದೆ ಸ್ವಲ್ಪ ನೋಡು ಬಾ ಮಾರಾಯ ಅಂತಂದದ್ದೇ ತಡ ನಾಗರಾಜ ಬಂದ. ಸಮಸ್ಯೆ ಗಂಭೀರವಾಗೇ ಇದೆ, ಆಪರೇಷನ್ನೇ ಮಾಡಬೇಕಿದೆ ಎಂಬುದನ್ನು ಗಮನಕ್ಕೆ ತಂದು ಕೆಲಸ ಶುರು ಹಚ್ಚಿಕೊಂಡ. ಮತ್ಯಾವಗಲೋ ರಿಪೇರಿ ನಡೆದ ಜಾಗಕ್ಕೆ ಹೋದೆ. ಪೈಪ್‌ಲೈನ್ ಒಡೆದು ಹೋಗಿತ್ತು. ಅದನ್ನು ರೀಪ್ಲೇಸ್ ಮಾಡುತ್ತಾ ಬಾಣಲೆಯಲ್ಲಿ ಕಲಸಿದ ಸಿಮೆಂಟು ಇಟ್ಟುಕೊಂಡು ಕೆಲಸ ಮಾಡುತ್ತಿದ್ದ. ಹಾಗೇ ಕೇಳಿದೆ `ನಾಗರಾಜಣ್ಣ ನಿಂಗೆ ಗಾರೆ ಕೆಲ್ಸನೂ ಬರುತ್ತಾ?’. ಆಳದಲ್ಲೆಲ್ಲೋ ಹುದುಗಿಸಿದ್ದ ತಲೆಯನೆತ್ತಿ ನಾಗರಾಜ ಹೇಳಿದ `ಕಳ್ಳತನವೊಂದು ಬಿಟ್ಟು ಎಲ್ಲ ಕೆಲ್ಸ ಬರುತ್ತೆ ಸ್ಸಾರ್. . . ’ ದೀರ್ಘವಾಗಿ ಉಸಿರೆಳೆದುಕೊಳ್ಳುವ ಸರದಿ ನನ್ನದಾಗಿತ್ತು. ಕಳ್ಳತನದ ಹೊಸ ಅಧ್ಯಾಯಗಳನ್ನು ತೆರೆದು ಕಂಬಿ ಎಣಿಸುತ್ತಿರುವ ಯಾರ‍್ಯಾರೋ ಕಣ್ಣ ಮುಂದೆ ಬಂದು ಹೋದರು. ಸುದ್ದಿಗಾಗಿ ಕಾಸಿನ ಮಾಧ್ಯಮದ ಜಾಯಮಾನವೂ ಕಣ್ಣೆದುರು ಬಂದು ಹಿಂಡಿ ಹಾಕಿತು.
ಜನಲೋಕಪಾಲ್ ಮಸೂದೆಯ ರೂಪು-ರೇಷೆಗಳು ಅಂತಿಮವಾಗಿಲ್ಲ, ಜಾರಿಗೆ ಬರುವುದೆಂದೋ ಗೊತ್ತಿಲ್ಲ. ಆಗಲೇ ರೆಡ್ಡಿ, ಕಟ್ಟಾಗಳು ಜೈಲು ಸೇರಿದ್ದಾರೆ. ಬೇಲು ಸಿಗದೆ ಎದೆಹಿಡಿದುಕೊಂಡು ಪರದಾಡುತ್ತಿದ್ದಾರೆ.
ಇರೋ ಕಾಯ್ದೆ ಇಷ್ಟೆಲ್ಲ ಮಾಡಿದೆ. ಬರೋ ಕಾಯ್ದೆ ಮತ್ತೇನೇನು ಮಾಡುತ್ತೋ ಗೊತ್ತಿಲ್ಲ. ಕಾಯ್ದೆ ಹೇಗೂ ಇರಲಿ ಅದನ್ನು ಜಾರಿ ಮಾಡೋರು ತಾನೆ ಮುಖ್ಯ.
ನಾಗರಾಜ್‌ನಂತಹವರ ಕಾಯಕನಿಷ್ಠೆ, ಅದು ಹೊರಹಾಕುವ ಆಲೋಚನೆಗಳೇ ಈ ದೇಶವನ್ನು ಕಾಯಬೇಕು. ಕಾಯ್ದೆಯಲ್ಲ!
**************




