ವಿಷಯದ ವಿವರಗಳಿಗೆ ದಾಟಿರಿ

Archive for

6
ಆಗಸ್ಟ್

ಹಿಂದುತ್ವ ಬೋನ್ಸಾಯ್ ಮರವಲ್ಲ, ವಿಶಾಲ ಆಲದ ಮರ

-ಚಕ್ರವರ್ತಿ ಸೂಲಿಬೆಲೆ

ದಾಳಿಗೆ ಮುನ್ನ ಎದುರಾಳಿಗಳ ಶಕ್ತಿಯನ್ನು ಅರಿತುಕೊಳ್ಳಬೇಕು. ದಾಳಿಯ ವೇಳೆ ತಲೆ ಹೋದರೂ ಸರಿ ಎಂದು ಕಾದಾಡಬೇಕು. ಕದನದ ನಂತರ ಆಗುವ ಲಾಭ ನಷ್ಟಗಳ ಅರಿವಿರಬೇಕು ಪ್ರತಿಯೊಬ್ಬ ಸೇನಾಪತಿಗೆ ಗೊತ್ತಿರಲೇಬೇಕಾದ ಅಂಶಗಳಿವು. ಇವುಗಳ ಆಧಾರದ ಮೇಲೆ ರೂಪುಗೊಂಡದ್ದೇ ಯೋಜನೆ. ಮೊದಲೇ ರೂಪಿಸಿದ ಯೋಜನೆ ಒಮ್ಮೊಮ್ಮೆ ಕೈಕೊಟ್ಟರೂ ಕೊಡಬಹುದು. ಪೂರ್ವ ತಯಾರಿಯೇ ಇಲ್ಲದೆ ಗೆದ್ದರೂ ಗೆಲ್ಲಬಹುದು. ಎಲ್ಲ ಅಪರೂಪ. ಆದರೆ, ಹಳೆಯ ನೆನಪುಗಳನ್ನು ಹಸಿರಾಗಿಸಿಕೊಂಡು, ಭವಿಷ್ಯದ ಕಷ್ಟ ನಷ್ಟಗಳನ್ನು ಆಲೋಚಿಸಿ, ವರ್ತಮಾನದಲ್ಲಿ ಕ್ರಿಯಾಶೀಲರಾಗುವವರು ಜಯಶಾಲಿಗಳಾಗುತ್ತಾರೆ. ಇಲ್ಲವಾದರೆ ತಮಗೂ ಸಮಾಜಕ್ಕೂ ತೊಂದರೆ ತಂದಿಡುತ್ತಾರೆ.
೧೮೫೭ರ ಸಂಗ್ರಾಮಕ್ಕೆ ಸುದೀರ್ಘ ತಯಾರಿ ನಡೆದಿತ್ತು. ನಾನಾ, ತಾತ್ಯಾ, ಲಕ್ಷ್ಮೀ ಬಾಯಿ, ಕುವರ ಸಿಂಗರೆಲ್ಲ ತಯಾರಾಗಿದ್ದರು. ಯಾರು, ಎಲ್ಲಿ, ಹೇಗೆ ದಾಳಿ ಮಾಡಬೇಕೆಂಬುದನ್ನೂ ರೂಪಿಸಿಯಾಗಿತ್ತು. ಎಲ್ಲ ಮುಗಿದ ಮೇಲೆ ದೇಶ ಒಪ್ಪುವ ನಾಯಕನ ಕೈಗೆ ಆಡಳಿತ ನೀಡಬೇಕೆಂದು ಬಹಾದ್ದೂರ್ ಷಾಹನೇ ಹೇಳಿದ್ದ. ಎಡವಟ್ಟು, ಬ್ಯಾರಕ್‌ಪುರದಲ್ಲಿ ಆಯಿತು. ಅಂದುಕೊಂಡಿದ್ದಕ್ಕಿಂತ ಒಂದು ತಿಂಗಳು ಮುಂಚೆ ಸಿಡಿದ ಕ್ರಾಂತಿಯ ಸಿಡಿಮದ್ದು ಪೂರ್ಣ ಜಯ ಕೊಡಿಸುವಲ್ಲಿ ವಿಫಲವಾಯಿತು. ಅಷ್ಟೇ ಅಲ್ಲ, ಮುಂದಿನ ಅನೇಕ ವರ್ಷಗಳ ಕಾಲ ಬ್ರಿಟಿಷರ ವಿರುದ್ಧ ಕಾದಾಡಿ ಗೆಲ್ಲುವುದು ಅಸಾಧ್ಯವೆಂದು ಜನಮಾನಸದಲ್ಲಿ ಹುದುಗಿಹೋಗಿತ್ತು. ಮೌನವಾಗಿ ಸಹಿಸುವ, ಇದ್ದುದರಲ್ಲೆ ಸಂಧಾನ ಮಾಡಿಕೊಂಡು ಬದುಕುವ ಯುವ ಸಮೂಹ ರೂಪುಗೊಳ್ಳಲು ಆರಂಭಿಸಿದ್ದೂ ಆಗಲೇ. ಸರಿಯಾಗಿ ಹೇಳಬೇಕೆಂದರೆ, ಗುಲಾಮೀ ಮಾನಸಿಕತೆಯ ನಿರ್ಮಾಣದ ಹಂತ ಅದು. ಇವಿಷ್ಟಕ್ಕೂ ಕಾರಣ- ಕೈಕೊಟ್ಟ ಒಂದು ಯೋಜನೆ!
ನಾಯಕನಾದವ ಯಾವಾಗಲೂ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಇಟ್ಟ ಹೆಜ್ಜೆಯನ್ನು ಪ್ರಾಣ ಬಿಟ್ಟರೂ ಹಿಂದೆ ತೆಗೆದುಕೊಳ್ಳದವನಾಗಿರಬೇಕು. ಜೋ ಸಿರ್‌ದಾರ್, ವಹೀ ಸರ್‌ದಾರೆಂದು ಹೇಳೋದು ಅದಕ್ಕೇ. ಗೆದ್ದಾಗ ಹೊಗಳಿಕೆ ಸಿಕ್ಕಷ್ಟೇ ಸೋತಾಗ ತೆಗಳಿಕೆಯೂ ಸಿಗುತ್ತದೆ. ಎಲ್ಲಕ್ಕೂ ತಯಾರಾದವ ಮಾತ್ರ ಮುಂದೆ ಬಂದು ನಿಂತಿರಬೇಕು.
ಈ ಎಲ್ಲ ಘಟನೆಗಳನ್ನು ಕಣ್ಣ ಮುಂದಿಟ್ಟುಕೊಂಡು ಒಮ್ಮೆ ಮಂಗಳೂರಿನ ಗಲಾಟೆಗಳನ್ನು ಅವಲೋಕಿಸಿ ನೋಡಿ. ಹಿಂದೂ ಸಮಾಜ ಅಂತ ಹೇಳಿ ಇಂಥದೊಂದು ರಾದ್ಧಾಂತ ಎಬ್ಬಿಸುವ ಅಗತ್ಯವಿತ್ತೆ? ಮಾಧ್ಯಮದವರನ್ನು ಕರೆದುಕೊಂಡು ಹೋಗಿ ಇಂದಿನ ಸಿನಿಮಾ ಟ್ರೈಲರ್‌ಗಳಂತೆ ಬಿತ್ತರಿಸುವ ಜರೂರತ್ತು ಇತ್ತೆ? ಒಮ್ಮೆ ಯೋಚಿಸಿ.

ಮತ್ತಷ್ಟು ಓದು »