ವಿಷಯದ ವಿವರಗಳಿಗೆ ದಾಟಿರಿ

Archive for

30
ಜುಲೈ

ಸಹಿಸಿಕೊಳ್ಳುವುದಕ್ಕಿಂತ ತಿರುಗೇಟು ನೀಡುವುದೇ ಒಳ್ಳೇದು ಎಂದು ಅನಿಸಲ್ವಾ?

-ರಶ್ಮಿ ಕಾಸರಗೋಡು

ದಿನಪತ್ರಿಕೆ ತೆರೆದು ನೋಡಿದರೆ ಪ್ರತಿದಿನವೂ ಮಹಿಳೆಯ ಮೇಲೆ ದೌರ್ಜನ್ಯ ಎಂಬ ಒಂದು ಸುದ್ದಿ ಇದ್ದೇ ಇರುತ್ತದೆ. ಅತ್ತೆಯ ದೌರ್ಜನ್ಯ, ಪತಿಯ ದೌರ್ಜನ್ಯ, ಕಚೇರಿಯಲ್ಲಿ ದೌರ್ಜನ್ಯ ಅಬ್ಬಾ ಎಷ್ಟೊಂದು ವಿಧದ ದೌರ್ಜನ್ಯಗಳು!. ನಾವು ಮುಂದುವರಿದಿದ್ದೇವೆ, ಅಬಲೆಯಲ್ಲ ಸಬಲೆ ಎಂದು ನಾನೂ ಸೇರಿದಂತೆ ಮಹಿಳೆಯರೆಲ್ಲಾ ಗಟ್ಟಿಯಾಗಿ ಕೂಗಿ ಹೇಳುತ್ತಿದ್ದೇವೆ. ಹೆಣ್ಣು ಅಬಲೆಯಿಂದ ಸಬಲೆಯಾಗಿ ಬಡ್ತಿ ಪಡೆದಿದ್ದರೂ ದೌರ್ಜನ್ಯ , ಕಿರುಕುಳಗಳು ಮಾತ್ರ ಅವಳ ನೆರಳಂತೆ ಹಿಂಬಾಲಿಸುತ್ತಿವೆ. ಹಳ್ಳಿಯಲ್ಲಿದ್ದರೂ, ನಗರದಲ್ಲಿದ್ದರೂ ಮಹಿಳೆ ದೌರ್ಜನ್ಯಕ್ಕೊಳಗಾಗುವುದು ತಪ್ಪಿಲ್ಲ. ಅಲ್ಲಿ ಹಾಗಾಯ್ತು, ಇಲ್ಲಿ ಹೀಗಾಯ್ತು ಎಂದು ಎಂಬ ವರದಿಗಳನ್ನೋದಿದಾಗ ಅಯ್ಯೋ ಪಾಪ ಎಂದು ಎನಿಸುತ್ತದೆ. ಆದರೆ ಇದಕ್ಕೆ ಪರಿಹಾರ ಏನು? ಎಂಬುದರ ಬಗ್ಗೆ ಚಿಂತಿಸತೊಡಗಿದಾಗಲೇ ಸಮಸ್ಯೆಯ ಗಂಭೀರತೆ ಅರಿವಿಗೆ ಬರುವುದು. ಇತ್ತೀಚೆಗೆ ನಮ್ಮ ದೇಶದಲ್ಲಿ ಇಂಥಾ ದೌರ್ಜನ್ಯಗಳ ಸಂಖ್ಯೆ ಏರುತ್ತಲೇ ಹೋಗುತ್ತಿದೆ. ಅದರಲ್ಲೂ ಬೆಂಗಳೂರು ಸುರಕ್ಷಿತವಲ್ಲ ಎಂದು ಹೇಳಲಾಗುತ್ತದೆ. ಎನ್ ಸಿಆರ್ ಬಿ (ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ) ವರದಿ ಪ್ರಕಾರ 2011ರಲ್ಲಿ ಬೆಂಗಳೂರಲ್ಲಿ ಮಹಿಳೆಯ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ದಾಖಲಾದ ಪ್ರಕರಣಗಳ ಸಂಖ್ಯೆ 1,890, ಇನ್ನು ದಾಖಲಾಗದೇ ಇರುವ ದೌರ್ಜನ್ಯಗಳ ಸಂಖ್ಯೆ ಎಷ್ಟಿರಬಹುದೇನೋ. ನವದೆಹಲಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 4,489. ಅಂದರೆ ದೆಹಲಿಯ ನಂತರ ಬೆಂಗಳೂರು ನಗರವೇ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದಕ್ಕೆ ಈ ಪ್ರಕರಣಗಳ ಸಂಖ್ಯೆಯೇ ಸಾಕ್ಷಿ.

ಎನ್ ಸಿಆರ್ ಬಿ ನೀಡಿರುವ ಅಂಕಿ ಅಂಶಗಳ ಪ್ರಕಾರ 2011ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣಗಳ ಲೆಕ್ಕಾಚಾರ ಹೀಗಿದೆ.

ಮತ್ತಷ್ಟು ಓದು »

30
ಜುಲೈ

ಇವರ ಪಾಲಿಗೆ ‘ಹೆಣ್ಣು’ ಟಿ ಆರ್ ಪಿ ಹೆಚ್ಚಿಸುವ ಕ್ಯಟಲಿಸ್ಟ್ ಮಾತ್ರ…

– ಚೇತನಾ ತೀರ್ಥಹಳ್ಳಿ

ಸತ್ತು ಬಿದ್ದಿತ್ತು ಭಾರತ’ – ಇದು ಡಿಸೆಂಬರ್ 2, 2007ರಂದು ಬರೆದು ನನ್ನ ಬ್ಲಾಗ್ ನಲ್ಲಿ ಹಾಕಿಕೊಂಡಿದ್ದ ಲೇಖನ.
ಆ ದಿನ ಅಸ್ಸಾಮಿನ ಬುಡಕಟ್ಟು ಜನಾಂಗವೊಂದು ತನ್ನ ಹಕ್ಕುಗಳಿಗಾಗಿ ಒತ್ತಾಯಿಸಿ ಧರಣಿ ಹೂಡಿತ್ತು. ಅದರಲ್ಲಿ ಹೆಂಗಸರೂ ಇದ್ದರು. ದಿಬ್ರುಗಡ್ ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿತ್ತು. ಅದೇ ಸಮಯಕ್ಕೆ ಗುವಹಾಟಿಯ ಬೀದಿಯೊಂದರಲ್ಲಿ ಒಬ್ಬ ಟ್ರೈಬಲ್ ಹೆಣ್ಣುಮಗಳು ಪ್ರತಿಭಟನೆಯ ಬೋರ್ಡ್ ಹಿಡಿದು ತನ್ನ ಪಾಡಿಗೆ ನಿಂತಿದ್ದಳು. ತನ್ನ ಜನಾಂಗದ ಹಕ್ಕಿಗಾಗಿ ಶಾಂತಿಯುತ ಪ್ರತಿರೋಧ ತೋರುತ್ತಿದ್ದ ಆ ಹೆಣ್ಣನ್ನು ಗುವಹಾಟಿಯ ಕೆಲವು ಗಂಡಸರು ಅಟ್ಟಾಡಿಬಿಟ್ಟಿದ್ದರು. ಜನಾಂಗೀಯ ದ್ವೇಷ, ಮತ್ತೆಲ್ಲೋ ನಡೆದ ಹಿಂಸೆಗೆ ಪ್ರತಿಯಾಗಿ ಇಲ್ಲಿ ಅಸಹಾಯಕ ಹೆಣ್ಣಿನ ಮೇಲೆ ಮುಗಿಬಿದ್ದಿದ್ದರು. ಆಗಲೂ ಒಬ್ಬ ಮೀಡಿಯಾ ಹುಡುಗ ಫೋಟೋಗಳನ್ನ ತೆಗೆದು “ಭೇಷ್” ಆಗಿದ್ದ!
~
2012ರ ಜುಲೈ 13. ಪಬ್ ನಿಂದ ಹೊರಬಂದು ಸ್ನೇಹಿತರ ಜತೆ ಜಗಳಾಡುತ್ತಿದ್ದ ಹುಡುಗಿಯ ಮೇಲೆ 20 ಜನ ಗಂಡಸರು ಕೈಮಾಡಿದರು. ಕೈಹೋದಲ್ಲೆಲ್ಲ ಮುಟ್ಟಿ ತೆವಲು ತೀರಿಸಿಕೊಂಡರು. ಅವಳ ಬಟ್ಟೆ ಚಿಂದಿಯಾಯ್ತು. ಇದು ಕೂಡ ನಡೆದಿದ್ದು ಗುವಹಾಟಿಯಲ್ಲೇ. ಆಗಲೂ ಒಬ್ಬ ಲೋಕಲ್ ಮೀಡಿಯಾದ ಫೋಟೋಗ್ರಾಫರ್ ಇದ್ದ. ಘಟನೆಯನ್ನ ವಿಡಿಯೋ ಮಾಡಿದ. ನನ್ನಿಂದ ಸಹಾಯ ಅಂತೂ ಮಾಡಲಾಗಲಿಲ್ಲ, ಅದಕ್ಕೆ ಚಿತ್ರೀಕರಣ ಮಾಡಿದೆ ಅಂದ. ಶೂಟ್ ಮಾಡುವಾಗ ವಿಡಿಯೋಗೆ ಬೆಳಕು ಸಾಕಾಗ್ತಿಲ್ಲ, ಅವಳನ್ನ ಈಚೆ ಎಳಕೊಂಡು ಬನ್ನಿ ಅಂತ ಅವನಂದಿದ್ದು ರಟ್ಟಾಯ್ತು.
~
2009ರ ಜನವರಿ 24. ಮಂಗಳೂರಿನ ಪಬ್ ಒಂದರ ಮೇಲೆ ಶ್ರೀರಾಮ ಸೇನೆಯ ವಾನರರು ದಾಳಿ ಮಾಡಿದರು. ಹೆಣ್ಣುಮಕ್ಕಳನ್ನ ಹಿಗ್ಗಾಮುಗ್ಗ ಬಡಿದರು. ಚಾನೆಲ್ ಒಂದು ಅಚ್ಚುಕಟ್ಟಾಗಿ ಚಿತ್ರೀಕರಿಸಿ ಟಿ ಆರ್ ಪಿ ಹೆಚ್ಚಿಸಿಕೊಂಡಿತು. ತಪ್ಪಿಸುವ ಗೋಜಿಗೆ ಹೋಗುವುದು ಹಾಗಿರಲಿ, ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸುರಿಯಿತು.
ಮತ್ತಷ್ಟು ಓದು »

29
ಜುಲೈ

ಮುಸ್ಲಿಮರ ವಿರುದ್ಧ ಕೆಂಡಕಾರುವುದಕ್ಕಷ್ಟೇ ಹಿಂದೂ ಜಾಗೃತಿ ಸೀಮಿತವಾಗಬೇಕಾ?

– ಡಾ. ಅಶೋಕ್ ಕೆ.ಆರ್

          ಅನಾಗರೀಕ, ಹಿಂದುಳಿದ ರಾಜ್ಯಗಳೆಂಬ ಹಣೆಪಟ್ಟಿ ಹೊತ್ತ ದೂರದ ಬಿಹಾರ, ಉತ್ತರಪ್ರದೇಶದಲ್ಲಿ ನಡೆಯುತ್ತದೆಂದು ಕೇಳುತ್ತಿದ್ದ ಅಮಾನವೀಯ ಘಟನೆಯೊಂದು ನಮ್ಮ ಕರ್ನಾಟಕದ ಮಂಡ್ಯಜಿಲ್ಲೆಯಲ್ಲಿ ನಡೆದುಹೋಗಿದೆ. ನಾಲ್ವರು ಯುವಕರು ಯಶವಂತಪುರ – ಮೈಸೂರು ರೈಲಿನಲ್ಲಿ ಮಹಿಳೆಯೊಬ್ಬಳನ್ನು ಚುಡಾಯಿಸಿದ್ದಾರೆ. ಬೇಸತ್ತ ಯುವತಿ ಬಾಗಿಲಿನ ಬಳಿ ಬಂದು ನಿಂತಿದ್ದಾಳೆ. ಅಲ್ಲಿಗೂ ಬಂದು ರೇಗಿಸಲಾರಂಭಿಸಿದವರಿಗೆ ಪೋಲೀಸರಿಗೆ ದೂರು ನೀಡುವುದಾಗಿ ಹೇಳಿದ್ದಾಳೆ. ಕೋಪಗೊಂಡ ಆ ನಾಲ್ಕು ಮನುಷ್ಯರೂಪಿ ರಾಕ್ಷಸರು ಚಲಿಸುವ ರೈಲಿನಿಂದ ಆಕೆಯನ್ನು ಹೊರತಳ್ಳಿಬಿಟ್ಟಿದ್ದಾರೆ. ರೈಲಾಗ ಮದ್ದೂರಿನ ಶಿಂಷಾ ನದಿಯ ಸೇತುವೆಯ ಮೇಲೆ ಚಲಿಸುತ್ತಿತ್ತು. ಅದೃಷ್ಟವಶಾತ್ ಬದುಕುಳಿದಿದ್ದಾಳೆ. ಬೆನ್ನುಹುರಿಗೆ ಬಿದ್ದ ಏಟು, ಮೂಳೆಮುರಿತದಿಂದ ಎಷ್ಟರ ಮಟ್ಟಿಗೆ ಆ ಯುವತಿ ಚೇತರಿಸಿಕೊಳ್ಳುತ್ತಾಳೆ ಎಂಬುದನ್ನು ಕಾದುನೋಡಬೇಕಷ್ಟೇ.

ಆ ನಾಲ್ಕೂ ಯುವಕರನ್ನು ಪೋಲೀಸರು ಬಂಧಿಸಿದ್ದಾರೆ. ಮಾರನೇ ದಿನ ನ್ಯಾಯಾಲಯಕ್ಕೆ ಅವರನ್ನು ಕರೆದೊಯ್ಯುವಾಗ ಹಿಂದೂ ಜಾಗರಣ ವೇದಿಕೆಯ ಸದಸ್ಯರು ಮುತ್ತಿಗೆ ಹಾಕಿ ಅಪರಾಧಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಊರಿನ ಹೆಣ್ಣುಮಗಳ ಜೀವಕ್ಕೆ ಅಪಾಯತಂದ ಯುವಕರ ಮೇಲಿನ ಕೋಪ ಸಹಜವಾದುದು. ಆದರೆ? ಹಿಂದೂ ಜಾಗರಣ ವೇದಿಕೆ ಜಾಗೃತಗೊಂಡು ಆ ನಾಲ್ವರನ್ನು ಥಳಿಸಿದ್ದು ಯುವತಿಯ ಮೇಲೆ ಹಲ್ಲೆಯಾದ ಕಾರಣಕ್ಕೆ ಮಾತ್ರವಲ್ಲ! ಹಲ್ಲೆ ಮಾಡಿದ ನಾಲ್ವರು ಮುಸ್ಲಿಮರೆಂಬುದೇ ಇವರು ಜಾಗೃತಿಯಾಗಲು ಕಾರಣ! ಹಲ್ಲೆ ಮಾಡಿದವರು ಮುಸ್ಲಿಮರಾಗದೇ ಹಿಂದೂಗಳಾಗಿದ್ದಲ್ಲಿ ಅದರಲ್ಲೂ ಯಾವುದೋ ‘ಮೇಲುಜಾತಿಗೆ’[?] ಸೇರಿದವರಾಗಿದ್ದಲ್ಲಿ ಖಂಡಿತವಾಗ್ಯೂ ಹಿಂದೂ ಜಾಗರಣ ವೇದಿಕೆ ಜಾಗೃತವಾಗುತ್ತಿರಲಿಲ್ಲ ಎಂಬುದೇ ಇಂಥ ಸಂಘಟನೆಗಳ – ಹಿಂದೂ ಧರ್ಮದ ವೈಫಲ್ಯ.

ಮತ್ತಷ್ಟು ಓದು »

28
ಜುಲೈ

ನನ್ನ ಅಜ್ಜಿ

– ಚೇತನ್ ಕೆ.ವಿ

ಬಹಳ ವರ್ಷಗಳ ನಂತರ ನಾನು ನನ್ನ ಅಜ್ಜಿ ಊರು, ಮಂಜುಗುಡ್ಡೆಗೆ ಕಾಲಿರಿಸಿದ್ದೆ. ಒಮ್ಮೆ ನನ್ನ ಬಾಲ್ಯದ ದಿನಗಳೆಲ್ಲ ಕಪ್ಪುಬಿಳಪು ಚಿತ್ರದಂತೆ ತಟ್ಟನೆ ಕಣ್ಣೆದುರು ಬಂದು ಹೋಯಿತು. ಗಲ್ಲಿ ಗಲ್ಲಿಗೆ ಕಾಲಿರಿಸಿದಂತೆ ಮತ್ತೆ ಹಳೆ ನೆನಪಿನ ಪುಟಗಳು ತಿರುವುತಿತ್ತು. ಸುತ್ತ ಇಬ್ಬನಿ ಮುಸುಕಿದ ಪ್ರದೇಶ. ಬರೇ ಏರು-ಪೇರುಗಳ ಜಾಗಗಳು ಹೆಸರಿಗೆ ತಕ್ಕಂತೆ – ಮಂಜುಗುಡ್ಡೆ. ನಾನು ಈ ಊರು ಬಿಟ್ಟು ೨೫ ವರ್ಷಗಳ ಮೇಲಾಯಿತು. ಹೈಸ್ಕೂಲ್ ಮುಗಿಸಿ ತಂದೆ-ತಾಯಿ ಜೊತೆ ಊರು ಬಿಟ್ಟವನು ಮತ್ತೆ ಈ ಕಡೆ ಬಂದವನೆ ಅಲ್ಲ.ಆದರೂ ಅಲ್ಪ ಸ್ವಲ್ಪ ಬದಲಾವಣೆ ಬಿಟ್ಟರೆ ಹೇಳಿಕೊಳ್ಳುವಂತ change ಎನೂ ತೋರಲಿಲ್ಲ,ಅದೆ ನಾನಿರುವ ಬೆಂಗಳೂರು ವರ್ಷ ವರ್ಷಕ್ಕೂ ಎಂತ ಬದಲಾವಣೆ,೧ ವರ್ಷ ಯಾವುದಾದರು ಜಾಗಕ್ಕೆ ಹೋಗದಿದ್ದರೆ  ಮತ್ತೆ ಆ ಜಾಗ ಗುರುತು ಸಿಗೋದು ಕಷ್ಟವೆ ಸರಿ ಎಂದುಕೊಂಡು ಮೂಲೆಯ ಒಂದು ಪೆಟ್ಟಿಗೆಯಂತಹ ಅಂಗಡಿ ಹೊಕ್ಕೆ.

ನನ್ನ ಅಜ್ಜ ವೆಂಕಟರಾಜಪ್ಪನ ಹೆಸರು ಹೇಳಿ ಅವರ ಮನೆಯ ವಿಳಾಸ ಕೇಳಿ,ಅವನು ತೋರಿದ ದಾರಿ ಹಿಡಿದು ಹೊರಟೆ.

ಸರಿ ಸುಮಾರು ೨೫ ವರ್ಷಗಳ ನಂತರ ತನ್ನ ಅಜ್ಜನ ಮನೆಗೆ ಹೋಗುತ್ತಿರುವ ಸಂಭ್ರಮ ಒಂದು ಕಡೆಯಾದರೆ, ಅಜ್ಜ ಅಜ್ಜಿಯ ಗುರುತೆ ಮರೆತ ಬೇಸರ ಮತ್ತೊಂದೆಡೆ. ಅಮ್ಮ ಅಜ್ಜಿಯೋಂದಿಗೆ ಜಗಳವಾಡಿ ಊರು ಬಿಡಲೇ ಬೇಕು ಎಂದು ಹಟ ಹಿಡಿದು ಪಟ್ಟಣ ಸೇರಿದ ಮೇಲೆ ಈ ಕಡೆ ಮತ್ತೆ ತಲೆ ಹಾಕಿ ಸಹ ಮಲಗಿರಲಿಲ್ಲ.ಒಬ್ಬನೆ ಮಗನನ್ನು ಕಳೆದುಕೊಂಡು ಎಷ್ಟು ದುಃಖ ಪಟ್ಟಿದ್ದರೂ ಅಜ್ಜಿ ಎಂದುಕೊಳ್ಳುತ್ತಾ ಹೆಜ್ಜೆ ಮುಂದಿಟ್ಟೆ. ದಾರಿಯಲ್ಲಿ ವಿಳಾಸ ಕೇಳುತ್ತಾ ಅಂತು ಮನೆ ಎದಿರು ಬಂದೆ. ಹಾಳು ಬಿದ್ದ ಮನೆಯಂತಿದ್ದ ಆ ಮನೆಯನ್ನೆ ಹಾಗೆ ದಿಟ್ಟಿಸಿ ನೋಡಿದೆ.ಹೆಂಚಿನ ಮನೆ,ಮುಂದಿನ ಅಂಗಳ ತುಂಬೆಲ್ಲ ಹುಲ್ಲು ಬೆಳೆದು ಎತ್ತರವಾಗಿತ್ತು.ಹಾಗೆ gateನಂತೆ ಅಡ್ಡಲಾಗಿಟ್ಟಿದ್ದ ಮರದ ದಿಣ್ಣೆ ಸರಿಸಿ ಒಳ ಹೊಕ್ಕೆ. ಮನೆಯ ಹೆಬ್ಬಾಗಿಲ ಬಳಿ ಬಂದು ನಿಲ್ಲುತಿದ್ದ ಹಾಗೆ ಹೆಬ್ಬಾಗಿಲಿಗೆ ಹತ್ತಿದ ಒರಳೆ ಕಣ್ಣಿಗೆ ರಾಚಿತು.ಒಂದು ಭಾಗ ಪೂರ ತಿಂದು ಈಗಲೊ ಅಗಲೊ ಅನ್ನುವಂತಿತ್ತು.

ಒಣಗಿದ ಗಂಟಲಲ್ಲೆ ಮೂರು ಬಾರಿ ಅಜ್ಜಿ ಎಂದು ಜೋರಾಗಿ ಕೂಗಿದ ನಂತರ ಒಳಗಿಂದ ಬೆನ್ನು ಬಾಗಿಹೋದ ಅಜ್ಜಿ ಹಣೆಯ ಮೇಲೆ ಕೈ ಇಟ್ಟು “ಯಾರೂ…..” ಎಂದು ನಡುಗುವ ಆ ದನಿಯಲ್ಲೆ ಕೇಳುತ್ತಾ ಬಂದಳು.ಅಜ್ಜಿಯನ್ನು ನೋಡಿದಕೂಡಲೆ ಇದು ನನ್ನ ಅಜ್ಜಿಯೆ ಹೌದ ಎಂದೆನ್ನಿಸಿತು. ನೇರವಾಗಿದ್ದ ಬೆನ್ನು ಮುರಿದು ಬಾಗಿ ಹೋಗಿತ್ತು, ಹಲ್ಲುಗಳೆಲ್ಲ ಉದುರಿ ಹೋಗಿ ಮತ್ತಷ್ಟು ಓದು »

27
ಜುಲೈ

ನಮ್ಮ ಬರಹ ಇನ್ನೊಬ್ಬರ ಬದುಕಿಗೆ ಬೆಂಕಿ ಇಡಬಾರದು

– ರಾಕೇಶ್ ಶೆಟ್ಟಿ

ಛೆ..! ದೆಹಲಿ,ಉತ್ತರ ಭಾರತದ ಕಡೆಯಿಂದ ಸಾಮಾನ್ಯವಾಗಿ ಸುದ್ದಿಯಾಗುತಿದ್ದ ಅತ್ಯಾಚಾರದಂತ ರಾಕ್ಷಸಿ ವರ್ತನೆ ಕರ್ನಾಟಕದಲ್ಲೂ ದಾಖಲಾಯಿತಲ್ಲ ಅಂತ ಮೊನ್ನೆಯ ‘ಮದ್ದೂರಿನ ರೈಲಿನಲ್ಲಿ ನಡೆದ ದುರ್ಘಟನೆ’ ಸುದ್ದಿಯಾದಾಗ ನಾಡಿನ ಬಹಳಷ್ಟು ಜನರಿಗೆ ಅನ್ನಿಸಿರಲಿಕ್ಕೂ ಸಾಕು.ಅದೃಷ್ಟವೆಂದರೆ ಆ ಹುಡುಗಿ ಪ್ರಾಣಾಪಾಯದಿಂದ ಪಾರಾಗಿದ್ದು.ಕಡೆಗೂ ರೈಲಿನಲ್ಲಿದ್ದ ಜನ ಧೈರ್ಯ ತಂದುಕೊಂಡು ಆ ರಾಕ್ಷಸರಿಗೆ ಬಡಿದು ಪೋಲಿಸರಿಗೆ ಒಪ್ಪಿಸಿದ್ದು ಮತ್ತೆ ಮರು ದಿನ ಹಿಂದೂ ಜಾಗರಣ ವೇದಿಕೆಯವರು ನೀಡಿದ ತಪರಾಕಿ ಎಲ್ಲವೂ ಸುದ್ದಿಯಾದವು.

ಆದರೆ, ಆ ನಂತರ ಆ ಹುಡುಗಿಯ ಪೂರ್ವಾಪರ ಮತ್ತು ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಮಾಧ್ಯಮಗಳು ಬರೆಯಲು ಶುರು ಮಾಡಿದವಲ್ಲ.ಒಂದು ವರದಿಯಲ್ಲಿ ಹುಡುಗಿಯ ನಿಜ ಹೆಸರನ್ನೇ ಬರೆದುಬಿಟ್ಟಿದ್ದರು.ಕಡೆಗೆ ಓದುಗರು ಗಮನಕ್ಕೆ ತಂದ ಮೇಲೆ ತಿದ್ದಿದರು.ಮತ್ತದೇ ಆನ್-ಲೈನ್ ಪತ್ರಿಕೆಯಲ್ಲಿ ಹಾಗೂ ರಾಜ್ಯಮಟ್ಟದ ದಿನಪತ್ರಿಕೆ ಪ್ರಜಾವಾಣಿಯಲ್ಲಿ (ನಾಡಿನ ವಿಚಾರಾವಂತರ ನೆಚ್ಚಿನ ಪತ್ರಿಕೆಯಿದು..!) ಹುಡುಗಿಯ ಪೊಟೋವನ್ನೇ ಹಾಕಿಬಿಡುವುದಾ? ಕನಿಷ್ಠ ಮುಖವನ್ನು ಬ್ಲರ್ ಮಾಡಬೇಕು ಅನ್ನುವ ಕಾಮನ್ ಸೆನ್ಸ್ ಕಾಣೆಯಾಯಿತಾ?ಇದೆಂತ Irresponsibility ? ವರದಿಗಾರಿಕೆ ಅನ್ನುವುದು ಇಷ್ಟೊಂದು ಕಾಟಾಚಾರವಾಗಿದೆಯಾ? ಈ ಮಧ್ಯೆ ಆ ಹುಡುಗಿಯ ಕೆಲಸ ಮಾಡುವ ಜಾಗ ಎಲ್ಲವನ್ನೂ ಹೇಳಿಯೂಬಿಟ್ಟವು.ಮುಂದೆ ಆ ಹುಡುಗಿಯ ಭವಿಷ್ಯವೇನು? ಅವಳನ್ನು ನೋಡಿದಾಗೆಲ್ಲ ಜನ ಅವಳನ್ನ ಏನೆಂದು ಗುರುತಿಸುತ್ತಾರೆ?

ಈ ಹಿಂದೆ ಸುವರ್ಣವಾಹಿನಿ ಶಿವಮೊಗ್ಗದ ಹುಡುಗಿಯೊಬ್ಬಳ ವಿಷಯದಲ್ಲೂ ಹೀಗೆ ಬೇಜವಬ್ದಾರಿತನ ತೋರಿತ್ತು.ಈ ವಿಷಯದ ಬಗ್ಗೆ ದಯಾನಂದ ಟಿ.ಕೆ ಸರಿಯಾಗಿ ಜಾಡಿಸಿ ಆ ವಾಹಿನಿಯ ಸಂಪಾದಕರಿಗೆ ಬಹಿರಂಗ ಪತ್ರ ಬರೆದಿದ್ದರು.ಉತ್ತರ ಬಂದ ಬಗ್ಗೆ ಸುದ್ದಿಯಿಲ್ಲ.ಇದೆ ನ್ಯೂಸ್ ಚಾನೆಲ್ಗಳೇ ತಾನೇ ಬ್ಲೂ ಬಾಯ್ಸ್ ಗಳನ್ನ ತೋರಿಸುವ ನೆಪದಲ್ಲಿ ಬ್ಲೂ-ಫಿಲಂ ತೋರಿಸಿದ್ದು,ಮುನ್ನಿ-ಶೀಲ,ಮದನಾರಿ ಅಂತೆಲ್ಲ ತಲೆ ಕೆಟ್ಟ ಕಾರ್ಯಕ್ರಮ ಮಾಡುತ್ತಿರುವುದು.ಮಕ್ಕಳಿರೋ ಮನೆಯಲ್ಲಿ ನ್ಯೂಸ್ ಚಾನೆಲಗಳನ್ನು ನೋಡಬೇಡಿ ಮಕ್ಕಳು ಹಾದಿ ತಪ್ಪುತ್ತಾರೆ ಅನ್ನುವ ಕಾಲ ಬಂದು ಬಿಟ್ಟಿತಲ್ಲ…!

ಮತ್ತಷ್ಟು ಓದು »

27
ಜುಲೈ

ಶೇರು ಮಾರುಕಟ್ಟೆ : ಭಾಗ -೩

– ವೆಂಕಟೇಶ್ ಗುರುರಾಜ್

೧೯೭೭ರಲ್ಲಿ ನೀವು ೧,೦೦೦ ರೂಪಾಯಿಗಳಲ್ಲಿ ಇಂದಿರಾ ವಿಕಾಸ್ ಪತ್ರವನ್ನು ತೆಗೆದುಕೊಂಡು ಇಲ್ಲಿಯವರೆಗೆ ಅಂದರೆ ೨೦೧೨ರವರೆಗೆ ಇಟ್ಟುಕೊಂಡಿದ್ದರೆ ನಿಮ್ಮ ಹಣ ೧೯೮೨ರಲ್ಲಿ ದ್ವಿಗುಣವಾಗಿ ೨,೦೦೦, ೧೯೮೭ರಲ್ಲಿ ೪,೦೦೦, ೧೯೯೨ರಲ್ಲಿ ೮,೦೦೦, ೧೯೯೭ರಲ್ಲಿ ೧೬,೦೦೦, ೨೦೦೨ರಲ್ಲಿ ೩೨,೦೦೦, ೨೦೦೭ರಲ್ಲಿ ೬೪,೦೦೦, ೨೦೧೨ರಲ್ಲಿ ೧,೨೮,೦೦೦ ಸಾವಿರವಾಗುತ್ತಿತ್ತು. (ಸುಮಾರು ೧೪.೨೫% ಬಡ್ಡಿಯಂತೆ.) ೫ ವರ್ಷಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು. ಮುಂದೆ ಅದನ್ನು ೫  ೧/೨ ವರ್ಷಕ್ಕೆ ಮಾರ್ಪಾಡು ಮಾಡಲಾಯಿತು. (ಇಂದಿರಾ ವಿಕಾಸ್ ಪತ್ರವನ್ನು ೧೯೯೬ನೆ ಇಸವಿಯಲ್ಲಿ ನಿಲ್ಲಿಸಿಬಿಟ್ಟತು ಕೇಂದ್ರ ಸರ್ಕಾರ.) ನೀವು ಅದೇ ಹಣವನ್ನು ಬ್ಯಾಂಕ್ ನಲ್ಲಿ ಇಟ್ಟಿದ್ದರೆ ನಿಮ್ಮ ಹಣ ದ್ವಿಗುಣವಾಗಿ ೧೯೮೪ ಮತ್ತು ೨ ತಿಂಗಳಲ್ಲಿ ೨,೦೦೦, ೧೯೯೧ ಮತ್ತು ೪ ತಿಂಗಳಲ್ಲಿ ೪,೦೦೦, ೧೯೯೮ ಮತ್ತು ೬ ತಿಂಗಳಲ್ಲಿ ೮,೦೦೦, ೨೦೦೫ ಮತ್ತು ೮ ತಿಂಗಳಲ್ಲಿ ೧೬,೦೦೦, ೨೦೧೨ ಮತ್ತು ೧೦ ತಿಂಗಳಲ್ಲಿ ಕೇವಲ ೩೨,೦೦೦ ರೂಪಾಯಿಗಳಾಗುತ್ತಿತ್ತು (ಅದು ಸುಮಾರು ೧೦% ಬಡ್ಡಿಯನ್ನು ನಿಮಗೆ ತಂದುಕೊಡುವಂತಿದ್ದರೆ.) ೭ ವರ್ಷ ೨ ತಿಂಗಳಲ್ಲಿ ನಿಮ್ಮ ಹಣ ದ್ವಿಗುಣವಾಗುತ್ತಿತ್ತು.

ಆದರೆ, ಅದೇ ೧,೦೦೦ ರೂಪಾಯಿಗಳನ್ನು ನೀವು  ೧೯೭೭ರಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯಲ್ಲಿ ಹೂಡಿದ್ದರೆ ಈಗ ನಿಮ್ಮ ಬಳಿ ೭.೭೮ ಲಕ್ಷ ರೂಪಾಯಿ ಇರುತ್ತಿತ್ತು. ೧೯೭೭ರಲ್ಲಿ ರಿಲಯನ್ಸ್ ಕಂಪನಿಗಳ ೧೦೦ ಶೇರುಗಳ ಬೆಲೆ ೧,೦೦೦ ಇತ್ತು.

ಮತ್ತಷ್ಟು ಓದು »

26
ಜುಲೈ

ಮೂರುವರೆ ರೂಪಾಯಿ ಓದುಗ ಆರೂವರೆ ರೂಪಾಯಿಯ ಜಾಹೀರಾತುದಾರ…

– ಡಾ.ಅಶೋಕ್ ಕೆ.ಆರ್

ಪ್ರಜಾವಾಣಿಯಿಂದ ನಿವೃತ್ತರಾದ ವ್ಯಂಗ್ಯಚಿತ್ರಕಾರ ಪಿ.ಮಹಮ್ಮದ್ ರವರು ವ್ಯಂಗ್ಯಚಿತ್ರಕಾರರ ಬವಣೆ, ಹಣ ನೀಡದ ಪತ್ರಿಕಾ ಸಂಸ್ಥೆಗಳಬಗ್ಗೆ ತಮ್ಮ ಅಭಿಪ್ರಾಯವನ್ನು ಫೇಸ್ ಬುಕ್ಕಿನಲ್ಲಿ ಪತ್ರದ ರೂಪದಲ್ಲಿ ಬರೆದುಕೊಂಡಿದ್ದರು.ಅದಕ್ಕೆ ಪ್ರತಿಕ್ರಿಯೆಯಾಗಿ ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟುರವರು ಫೇಸ್ ಬುಕ್ಕಿನಲ್ಲಿ ಕೆಳಗಿನಂತೆ ಬರೆದಿದ್ದಾರೆ.

“ಸಂಬಳ-ಸೌಲಭ್ಯಗಳ ವಿಚಾರದಲ್ಲಿ ಪತ್ರಕರ್ತರಿಗೆ ಆಗಿರುವ ಅನ್ಯಾಯವನ್ನು ಬರೆಯಲು ಹೊರಟರೆ ಪತ್ರಿಕೆಗಳ ಹನ್ನೆರಡು ಪುಟಗಳೂ ಸಾಲದು. ಊರಿನವರಿಗೆಲ್ಲ ಆಗುತ್ತಿರುವ ಅನ್ಯಾಯದ ಬಗ್ಗೆ ವರದಿ-ಸಂಪಾದಕೀಯಗಳನ್ನು ಬರೆಯುವ ಪತ್ರಕರ್ತರದ್ದು, ತಮ್ಮ ಕಷ್ಟಗಳನ್ನು ಎಲ್ಲಿಯೂ ಹೇಳಲಾಗದ ಅಸಹಾಯಕ ಸ್ಥಿತಿ. ’ಸೆಲೆಬ್ರೆಟಿ’ ಆಗಿ ಮೆರೆಯುತ್ತಿರುವ ಒಂದಷ್ಟು ಪತ್ರಕರ್ತರನ್ನು ನೋಡುವ ಜನ ಪತ್ರಕರ್ತರೆಲ್ಲರೂ ’ಕಾರು-ಬಂಗಲೆ” ಮಟ್ಟದಲ್ಲಿಯೇ ಇದ್ದಾರೆ ಎಂಬ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಆದರೆ ಇಂದಿನ ಪತ್ರಕರ್ತರ ಸ್ಥಿತಿಯನ್ನು ಚರ್ಚಿಸುವಾಗ ಕಳೆದೆರಡು ದಶಕಗಳ ಅವಧಿಯಲ್ಲಿ ಮಾಧ್ಯಮ ರಂಗದಲ್ಲಿ ಆಗಿರುವ ಬದಲಾವಣೆಗಳನ್ನು ಗಮನಕ್ಕೆ ತೆಗೆದುಕೊಳ್ಳಲಾಗದಿರುವುದಿಲ್ಲ.
ಮಾಧ್ಯಮಗಳು ಅತ್ತ ಹಳೆಯ ಆದರ್ಶರೂಪದ ವೃತ್ತಿಯಾಗಿ ಉಳಿಯದೆ, ಇತ್ತ ಪೂರ್ಣ ಪ್ರಮಾಣದ ಉದ್ಯಮವಾಗಿಯೂ ಬೆಳೆಯದೆ ತ್ರಿಶಂಕು ಸ್ಥಿತಿಯಲ್ಲಿರುವುದೇ ಪತ್ರಕರ್ತರ ಇಂದಿನ ಬವಣೆಗೆ ಮುಖ್ಯ ಕಾರಣ. ಓದುಗರು ಪತ್ರಕರ್ತರನ್ನು ಸಮಾಜಸೇವಕರ ರೂಪದಲ್ಲಿ ಕಾಣಬಯಸುತ್ತಾರೆ. ಸಮಾಜಸೇವೆಯೂ ವೃತ್ತಿಯಾಗಿರುವ (ಎನ್‌ಜಿಒಗಳು ಮತ್ತೇನು?) ಈ ದಿನಮಾನದಲ್ಲಿ ಪತ್ರಕರ್ತರು ಮಾತ್ರ ಸಮಾಜ ಸೇವಕರ ರೂಪದಲ್ಲಿಯೇ ಉಳಿಯಬೇಕೆನ್ನುವುದು ಅಮಾನವೀಯವಾದುದು. ಮತ್ತಷ್ಟು ಓದು »
25
ಜುಲೈ

ಇನ್ನು “ ಕುಮಾರ ಪಟ್ಟಾಭಿಷೇಕ “ದ ದಿನಗಳು ಬಲು ದೂರವಿಲ್ಲ

-ಕೆ ಎಸ್ ರಾಘವೇಂದ್ರ ನಾವಡ

ಪ್ರಣಬ್ ಮುಖರ್ಜಿ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಎರಡು ದಿನಗಳ ಮು೦ಚೆಯೇ ಕಾ೦ಗ್ರೆಸ್ ನಲ್ಲಿ ಕುಮಾರ ಪಟ್ಟಾಭಿಷೇಕದ ದಿನಗಳು ಹತ್ತಿರವಾಗುವ ಲಕ್ಷಣಗಳ ಬಗ್ಗೆ ಹುಟ್ಟಿಕೊ೦ಡಿದ್ದ ವದ೦ತಿಗಳು ಪ್ರಣವ್ ದಾದಾ ರಾಷ್ಟ್ರಪತಿಯಾಗಿ ಆಯ್ಕೆಯಾಗುವುದರೊ೦ದಿಗೆ, ನಿಜವಾಗುವ ಸಾಧ್ಯತೆಗಳು “ಕಾಲದ ಕನ್ನಡಿಗೆ“ ಕ೦ಡು ಬ೦ದಿವೆ. ನೆಹರೂ  ಕುಟು೦ಬದ ಮತ್ತೊ೦ದು ಕುಡಿ  ಈಗಾಗಲೇ ಸಕ್ರಿಯ ರಾಜಕಾರಣದಲ್ಲಿದ್ದರೂ, ಅಧಿಕೃತ  ಪಟ್ಟಾಭಿಷೇಕಕ್ಕಾಗಿ ಹೊಸ ಸೂಟು ಹೊಲಿಸಿ, ನೀಟಾಗಿ ತಲೆ ಬಾಚಿಕೊಳ್ಳೋಕೆ ರೆಡಿ ಆಗ್ತಿದ್ದಾರೆ! ಭಾರತ ರಾಜಕೀಯದಲ್ಲಿ ಅಧಿಕೃತ “ ಕುಮಾರ ಸ೦ಭವ “ ಜರುಗುವುದು ಖ೦ಡಿತವಾಗಿದೆ! ಸೋನಿಯಾರವರ ಬುಧ್ಧಿಶಕ್ತಿಯೇ ಅಷ್ಟೊ೦ದು ಚುರುಕು! ತನ್ನ ಮಗನ ಅದ್ದೂರಿ ರ೦ಗ ಪ್ರವೇಶಕ್ಕೆ ಎಷ್ಟೊ೦ದು ನೀಟಾಗಿ ದಾಳಗಳನ್ನು ಉರುಳಿಸಿದರಲ್ಲ! ಪಕ್ಷದ ಏಕಮೇವ ಪ್ರಭೃತಿಯಾಗಿದ್ದ ಪ್ರಣವ್ ಮುಖರ್ಜಿ ಇ೦ದು ರಾಷ್ಟ್ರಪತಿಯಾಗಿ, ಸಕ್ರಿಯ ರಾಜಕಾರಣದಿ೦ದಲೇ ದೂರವಾದರು! ಪ್ರಣಬ್ ದಾದಾ ಕಾ೦ಗ್ರೆಸ್ಸಿನ ಉನ್ನತ ನಾಯಕರಲ್ಲಿ ಮೊದಲನೇ ಪ೦ಕ್ತಿಯವರು. ಸಚಿವ ಸ೦ಪುಟದಲ್ಲಿ ಅವರಿಗಿದ್ದದ್ದು ೨ ನೇ ರ್ಯಾ೦ಕ್ !

ಮತ್ತಷ್ಟು ಓದು »

24
ಜುಲೈ

ಲಿಮಿಟ್ಟೆ ಇಲ್ಲವ?

– ಮಧು ಚಂದ್ರ

ಒಂದು ಕಾಲ ಇತ್ತು , ದಿನ ಪತ್ರಿಕೆಯ ಮುಖ ಪುಟ  ಕೇವಲ ಸಾಧಕರು ಮತ್ತು ರಾಜಕೀಯ ಬೆಳವಣಿಗೆಗಳ ಲೇಖನಗಳಿಂದ ರಾರಜಿಸುತಿತ್ತು. ದಿನ ಕಳೆದಂತೆ ನಮ್ಮ ಸುತ್ತಲಿನ ಪರಿಸರದಲ್ಲಿ ಬೆಳವಣಿಗೆಯು ಸಹ ವೇಗವನ್ನು ಪಡೆದುಕೊಂಡಿತು. ಕೇವಲ ಸಾಧಕರಿಗೆ ಮೀಸಲಾದ ಮುಖ ಪುಟದಲ್ಲಿ ಇಂದು  ಬ್ರಷ್ಟ ಭ್ರಷ್ಟಚರ   ಅಧಿಕಾರಿಗಳು, ಸಮಾಜ ಘಾತುಕರು , ಹಿಂಸೆ ಮತ್ತು ಆತ್ಮ ಹತ್ಯೆಗಳ ಸುದ್ದಿ ಅಲಂಕರಿಸಿವೆ. ಅದರಲ್ಲೋ   ಬ್ರಷ್ಟ ಅಧಿಕಾರಿಗಳು ಬಗ್ಗೆ ಲೇಖನವಿಲ್ಲದೆ ಇದ್ದರೆ ದಿನಪತ್ರಿಕೆಯ  ಮುಖಪುಟಕ್ಕೆ ಕಳೆಗುಂದುತ್ತದೆ .

ಜವಾನ , ಜಲಗಾರ, ಬಸ್ ನಿರ್ವಾಹಕನಿಂದು ಹಿಡಿದು ಅಧಿಕಾರಿಗಳು, ರಾಜಕಾರಣಿಗಳು ಬ್ರಷ್ಟಚಾರವು ಸೃಷ್ಟಿಸಿದ  ಹಲವು ಮುಖಗಳು  ನಮ್ಮ ರಾಜ್ಯದ  ಶಾಸಕನೊಬ್ಬ ಲಂಚ ಪಡೆಯುವಾಗ ಸಿಕ್ಕಿ ಹಾಕಿಕೊಂಡದ್ದು. ನಂತರ ಅದರಿಂದ ಜಾಗೃತರಾದ ಇತರ ರಾಜಕಾರಣಿಗಳು ಲಂಚ ಪಡೆಯುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿ. ಮುಂದೆ ಲಂಚ ಪಡೆಯುವಾಗ ಬಳಸುವ ವಾಮ ಮಾರ್ಗಗಳನ್ನು ಹುಡುಕಲು ಆರಂಬಿಸಿದರು ಎನ್ನುವ ವಿಚಾರ ನಿಮಗೆಲ್ಲ  ಗೊತ್ತೇ ಇದೆ.

ತಮ್ಮ ಮೇಲೆ ಎಷ್ಟೇ ಆಕ್ರಮಣವಾದರೂ  ಏನೇ ಅಗಲಿ ದಿನಕೊಂದು ಭರ್ಜರಿ ಬೇಟೆಯಾಡುವುದನ್ನು ನಮ್ಮ ಲೋಕಾಯುಕ್ತ ಹುಲಿಗಳು ಎಲ್ಲಿಯೂ ನಿಲ್ಲದೆ ಮುಂದುವರೆಸಿದ್ದಾರೆ. ಒಂದು ಕಡೆ ಅಣ್ಣ ಹಜಾರೆ ಗರ್ಜಿಸುತ್ತಿದ್ದರೆ , ಇನ್ನೊದು ಕಡೆ ಅದೇ ಸರ್ಕಾರ ಅಣ್ಣ ಹಜಾರೆಯ ತಂಡದ ಮೇಲೆ ಇದ್ದ ಬದ್ದ ಆರೋಪಗಳನ್ನು ಮಾಡುತ ಅಣ್ಣನ ಹುಟ್ಟಡಗಿಸುವ ಶತಾಯಗತಾಯ ಪ್ರಯತ್ನದಲ್ಲಿ ತೊಡಗಿದೆ… .

ಒಮ್ಮೆ ಒಬ್ಬ ಬ್ರಷ್ಟ ಅಧಿಕಾರಿಯ ಮನೆಗೆ  ಲೋಕಾಯುಕ್ತರು ದಾಳಿ ಮಾಡಿದರೆಂದರೆ  ಮಿನಿಮಮ್  ಒಂದು ನಾಲ್ಕು ಸೈಟಿನ  ದಾಖಲೆಗಳು  , ಒಂದೆರಡು  ಕಾರು, ಒಂದು ಹತ್ತಿಪ್ಪತು ಎಕರೆ ತೋಟದ ದಾಖಲೆಗಳು  , ಒಂದು ಕೆಜಿ ಚಿನ್ನ ..ಇತ್ಯಾದಿ ಹೀಗೆ ದಾಳಿ ಸಂಧರ್ಭದಲ್ಲಿ ವಶಪಡಿಸಿಕೊಂಡ ವಸ್ತುಗಳ ಪಟ್ಟಿ ನೀಡುತ್ತಾರೆ… ಸದ್ಯಕ್ಕೆ ಇಷ್ಟು ಸಾಕು ..

ಮತ್ತಷ್ಟು ಓದು »

20
ಜುಲೈ

ಹಿಂದುತ್ವವೇ ನಮ್ಮ ತತ್ವ ಎಂದು ಸಾರುತ್ತ ಮಾಡಿದ್ದೇನು?

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಸಂಭ್ರಮ…ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಿಕೊಂಡು ಸಂತೋಷದಿಂದ ಬದುಕು ಸಾಗಿಸಬಹುದು ಎನ್ನುವ ಅಸೆಯ ಅಂಬಾರಿಯನ್ನು ಹೊಡೆದು ಉರುಳಿಸಿದರಲ್ಲಾ ಎನ್ನುವ ಭಾವನೆ ಮೂಡಿದರೆ ತಪ್ಪಲ್ಲ. ಕಾರಣ ರಾಜ್ಯದ ರಾಜಕೀಯದಲ್ಲಿನ ಪ್ರಸ್ತುತ ಬೆಳವಣಿಗೆ. 1950ರಲ್ಲಿ ಸಂವಿಧಾನ ರಚನೆಯಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದು ಶಾಸಕಾಂಗ,ನ್ಯಾಯಾಂಗ,ಕಾರ್ಯಾಂಗ ಹಾಗೂ ಮಾಧ್ಯಮರಂಗಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಪ್ರಮುಖ ಪಾತ್ರಧಾರಿಗಳು ಎಂದು ಎದೆ ತಟ್ಟಿಕೊಂಡು ಹೇಳುತ್ತಿದ್ದ ಕಾಲ ಮರೆಯಾಗಿದೆ. ಆದರೆ ಯಾವುದೇ ರಂಗದಲ್ಲಿ ಲೋಪದೋಷಗಳಾದರೂ ಕಷ್ಟ ಅನುಭವಿಸುವವರು ಸಾಮಾನ್ಯ ಜನತೆ ಎನ್ನುವುದು ಸ್ಪಷ್ಟ.

ಯತ್ಖಲು ಖಲಮುಖಹುತವಹವಿನಿಹಿತಮಪಿ ಶುದ್ದಿಮೇವ ಪರಮೇತಿ
ತದನಲ ಶೌಚಮಿವಾಂಶುಕಮಿಹ ಲೋಕೇ ದುರ್ಲಭಂ ಪ್ರೇಮ||

ನೀಚರ ಬಾಯೆಂಬ ಬೆಂಕಿಯಲ್ಲಿ ಬಿದ್ದದ್ದೆಲ್ಲ ಶುದ್ದವಾಗುವುದೆಂಬ ಮಾತು ಸರ್ವಥಾ ಸರಿಯಲ್ಲ. ಏಕೆಂದರೆ ಬೆಂಕಿಯಲ್ಲಿ ಬಿದ್ದು ಶುದ್ದವಾಗಿ ಉಳಿದು ಬಂದ ಬಟ್ಟೆಯೆಷ್ಟು ದುರ್ಲಭವೋ ದುಷ್ಟರ ಬಾಯಿಗೆ ಸಿಲುಕಿ ಶುದ್ದವಾಗಿ ಹೊರಬಂದ ಸದ್ಗುಣಗಳು ಅಷ್ಟೇ ದುರ್ಲಭ.

ಮತ್ತಷ್ಟು ಓದು »