ಟಾಯ್ಲೆಟ್ ವಾಸು ಅಂದ್ರೆ ಯಾರು ಗೊತ್ತಾ?
-ಚಕ್ರವರ್ತಿ ಸೂಲಿಬೆಲೆ
”ಪ್ರಚಾರದ ಹೆಸರಲ್ಲಿ ಹೊಸಹೊಸ ಮಾರ್ಗಗಳನ್ನು ಹುಡಕಲಾಯ್ತು. ನಾಟಕಗಳು, ಕಥೆಗಳು, ಎಲ್ಲವೂ ಶೌಚಾಲಯದ ಕುರಿತಂತೆಯೇ. ಕುಂತರೂ ನಿಂತರೂ ಶೌಚಾಲಯಗಳೇ. ಕೊನೆಗೆ ಕನಸಿನಲ್ಲೂ ವಾಸು ದೇಶ್ಪಾಂಡೆ ಶೌಚಾಲಯವನ್ನೆ ಕಂಡಿದ್ದರೆ ಅಚ್ಚರಿಯಿಲ್ಲ! ಈ ಕಾರಣದಿಂದಲೇ ಸ್ಥಳೀಯ ಆರು ಜಿಲ್ಲೆಗಳಲ್ಲಿ ವಾಸು ದೇಶ್ಪಾಂಡೆ `ಟಾಯ್ಲೆಟ್ ವಾಸು’ವಾಗಿಯೇ ಜನಪ್ರಿಯರಾದರು”
ವಾಸು ದೇಶ್ಪಾಂಡೆ ಅಲಿಯಾಸ್ ಟಾಯ್ಲೆಟ್ ವಾಸು! ಗುಲ್ಬರ್ಗಾದ ಸೇಡಮ್ಮಿನ ಹುಡುಗ. ಬಡತನದಲ್ಲಿ ಬೆಳೆದ, ಕಷ್ಟಪಟ್ಟು ಓದಿದ. ಕೊನೆಗೆ ಇಂಜಿನಿಯರ್ರೂ ಆದ. ಇನ್ಫೋಸಿಸ್ನಲ್ಲಿ ಕೆಲಸಕ್ಕೆ ಸೇರಿಕೊಂಡು ಚೆನ್ನಾಗಿ ದುಡಿದ. ಇಷ್ಟೇ ಆಗಿದ್ದರೆ ಇದೊಂದು ಕನ್ನಡ ಫಿಲಮ್ಮಿನ ಕಥೆಯಂತಾಗಿ ಮುಗಿದುಹೋಗುತ್ತಿತ್ತು. ಹಾಗಾಗಲಿಲ್ಲ. ಊರಿನ ಕೆಲಸ ವಾಸುವನ್ನು ಬಿಡಲಿಲ್ಲ. ಬೆಂಗಳೂರು ಎಲ್ಲರನ್ನು ಕಾಡಿದಂತೆ ಮೋಹವಾಗಿ ಕಾಡಲಿಲ್ಲ.
ಉತ್ತರ ಕರ್ನಾಟಕಕ್ಕೆ ನೆರೆ ಹಾವಳಿ ಅಪ್ಪಳಿಸಿದಾಗ ಇನ್ಫೋಸಿಸ್ ಗುಲ್ಬರ್ಗಾದ ನೆರೆ ಪೀಡಿತ ಪ್ರದೇಶಗಳಲ್ಲಿ ಯೋಜನೆಗಳನ್ನು ಕೈಗೆತ್ತಿಕೊಂಡಿತು. ಮನೆ ಕಟ್ಟಿಕೊಡುವ ಸಾಮಾಜಿಕ ಜವಾಬ್ದಾರಿ ನಿರ್ವಹಿಸಲು ಮುಂದೆ ಬಂತು. ಸ್ಥಳೀಯವಾಗಿ ಸಾಥ್ ಕೊಡಲು ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಂತಹ ಪ್ರಾಮಾಣಿಕ ಸಂಸ್ಥೆಯೇನೋ ಸಿಕ್ಕಿತು. ಆದರೆ ಈ ಕೆಲಸವನ್ನು ತನ್ನದೆಂದುಕೊಂಡು ಸಮರ್ಥವಾಗಿ ಮಾಡುವವರು ಯಾರಾದರೊಬ್ಬರು ಬೇಕಲ್ಲ? ಆಗ ಇನ್ಫೋಸಿಸ್ಗೆ ಕಂಡ ಬೆರಗುಗಣ್ಣಿನ ಇಂಜಿನಿಯರ್ ವಾಸು ದೇಶ್ಪಾಂಡೆ. ಅಮೆರಿಕಾದಲ್ಲೆಲ್ಲ ಇದ್ದು ಬಂದ ಹುಡುಗ; ಮತ್ತೆ ಮರಳಿ ಹೊರಡಲು ಸಜ್ಜಾಗಿದ್ದ. ಆದರೆ ಈಗ ಹೊಸತೊಂದು ಆಸಕ್ತಿಕರ ಯೋಜನೆ ಕೈಬೀಸಿ ಕರೆಯಿತು. ಹುಟ್ಟೂರಿನ, ಜಿಲ್ಲೆಯ, ಕೊನೆಗೆ ಹಿಂದುಳಿದ ಎಂಬ ಹಣೆಪಟ್ಟಿ ಹೊತ್ತ ತನ್ನ ಭಾಗದ ಸೇವೆ ಮಾಡುವ ಅವಕಾಶ ಬಯಸಿಬಂದಾಗ ಆಗುವುದಿಲ್ಲ ಎನ್ನುವುದು ಹೇಗೆ?