ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 1, 2012

27

ಜಾತ್ಯಾತೀತ ‘ಜಿನ್ನಾ’ ಖಳ ನಾಯಕನಾದರೆ ‘ಗಾಂಧೀ’ ಯಾರು?..

‍ನಿಲುಮೆ ಮೂಲಕ

– ಅಶ್ವಿನ್ ಅಮೀನ್

ಕೆಲವು ವರ್ಷಗಳ ಹಿಂದೆ ಮಾಜಿ ಉಪ ಪ್ರಧಾನಿ ಎಲ್. ಕೆ.ಅಡ್ವಾಣಿ ಯವರು ಪಾಕಿಸ್ತಾನದಲ್ಲಿರುವ ಮಹಮ್ಮದ್ ಆಲಿ ಜಿನ್ನಾ ಸಮಾಧಿಗೆ ಭೇಟಿ ಕೊಟ್ಟು ‘ಜಿನ್ನಾ ಒಬ್ಬ ಜಾತ್ಯಾತೀತ ನಾಯಕ’ ಎಂದು ಉದ್ಗರಿಸಿದ್ದರು. ಆ ಹೇಳಿಕೆ ಭಾರತದಾದ್ಯಂತ ಎಷ್ಟು ಸಂಚಲನವನ್ನು ಉಂಟು ಮಾಡಿತ್ತೆಂದರೆ ಸ್ವಪಕ್ಷೀಯರೇ ಆಡ್ವಾಣಿಯನ್ನು ವಿರೋಧಿಸತೊಡಗಿದರು.ಆದರೆ, ಅಷ್ಟು ಹಿರಿಯ ಮುತ್ಸದ್ದಿಯಾದ ಆಡ್ವಾನಿಯವರು ಯಾವುದೇ ಆಧಾರ – ಕಾರಣಗಳಿಲ್ಲದೆ ಆ ಹೇಳಿಕೆ ನೀಡಿಯಾರೇ ಎಂಬ  ಪ್ರಶ್ನೆ ನನ್ನನ್ನು ಕಾಡುತ್ತಲೇ ಇತ್ತು. ಅದಕ್ಕೆ ಉತ್ತರ ಹುಡುಕುತ್ತಾ ಇತಿಹಾಸದ ಪುಟಗಳನ್ನು ತಿರುವ ಹೊರಟ ನನಗೆ ಕಂಡು ಬಂದ ಸತ್ಯ ಮಾತ್ರ ನಿಜಕ್ಕೂ ಆಘಾತಕಾರಿ!. ‘ಧರ್ಮಕ್ಕಿಂತ ದೇಶ ಮೊದಲು, ನಾನು ಮೊದಲು ಭಾರತೀಯ’ ಎನ್ನುತ್ತಿದ್ದ ಮಹಮ್ಮದ್ ಆಲಿ ಜಿನಾ ಭಾರತವನ್ನು ಒಡೆಯುವಷ್ಟರ ಮಟ್ಟಿಗೆ ಹೋಗಲು ಕಾರಣೀಭೂತರಾದರೂ ಯಾರು? ಆ ಸತ್ಯಗಳನ್ನು ತಿಳಿಯುತ್ತಾ ಹೋದಂತೆ ಆಡ್ವಾಣಿಯವರು ಜಿನ್ನಾರ ಬಗ್ಗೆ ಅಂದು ಹೇಳಿದ ಮಾತುಗಳು ಸತ್ಯವಾಗುತ್ತಾ ಹೋಯಿತು.

ಮಹಮ್ಮದ್ ಆಲಿ ಜಿನ್ನಾ… ಆತನ ವ್ಯಕ್ತಿತ್ವ ಎಂದಿಗೂ ಒಬ್ಬ ಮುಸ್ಲಿಮನಿಗೆ ತಕ್ಕುದಾಗಿ ಇರಲಿಲ್ಲ. ಆತನೆಂದೂ ಗಡ್ಡ ಬಿಡಲಿಲ್ಲ, ಸ್ಕಲ್ ಕ್ಯಾಪ್ ಹಾಕಲಿಲ್ಲ, ದಿನಕ್ಕೆ ಐದು ಬಾರಿ ನಮಾಜ್ ಮಾಡಲಿಲ್ಲ, ಮದರಸಾದಲ್ಲಿ ಕಲಿಯಲಿಲ್ಲ… ಮದುವೆಯಾಗಿದ್ದು ಪಾರ್ಸಿ ಹುಡುಗಿಯನ್ನು, ಕಲಿತಿದ್ದು ಕ್ರೈಸ್ತ ಕಾನ್ವೆಂಟ್ ನಲ್ಲಿ, ಇಂಗ್ಲೆಂಡ್ ನಲ್ಲಿ ಉನ್ನತ ವ್ಯಾಸಾಂಗ… ಆತ ಸಿಗರೇಟು ಸೇದುತ್ತಿದ್ದ, ಹಂದಿ ಮಾಂಸ ತಿನ್ನುತ್ತಿದ್ದ, ಮದ್ಯ ಸೇವಿಸುತ್ತಿದ್ದ… ಅಂತಹ ವ್ಯಕ್ತಿ ಅದೇಗೆ ಧರ್ಮಾಂಧನಾಗಲು ಸಾಧ್ಯ…?

“ನನ್ನ ಪ್ರಕಾರ ದೇಶ ವಿಭಜನೆಯನ್ನು ಬಿಟ್ಟು ಬೇರಾವುದೇ ಪರಿಹಾರವಿರಲಿಲ್ಲ ಹಾಗೂ ಮುಂದೊಂದು ದಿನ ಇತಿಹಾಸ ಅದನ್ನು ಒಪ್ಪಿಕೊಳ್ಳುತ್ತದೆ… ಪಾಕಿಸ್ತಾನವನ್ನು ಸಮೃದ್ಧ ಉಲ್ಲಾಸಭರಿತ ರಾಷ್ಟ್ರವನ್ನಾಗಿ ರೂಪಿಸಬೇಕಾದರೆ ಸಕಲರ ಶ್ರೇಯೋಭಿವೃದ್ಧಿಗಾಗಿ ಏಕದೃಷ್ಟಿಯಿಂದ ನಾವು ಪ್ರಯತ್ನಿಸಬೇಕು. ಆತ ಯಾವುದೇ ಸಮುದಾಯಕ್ಕೆ ಸೇರಿರಲಿ, ಆತನ ಜತೆ ನೀವು ಈ ಹಿಂದೆ ಎಂಥದೇ ಸಂಬಂಧ ಹೊಂದಿರಲಿ, ಆತನ ಚರ್ಮದ ಬಣ್ಣ, ಧರ್ಮ ಮತ ಯಾವುದೇ ಆಗಿರಲಿ ಎಲ್ಲರೂ ಸಮಾನರು. ಪಾಕಿಸ್ತಾನದಲ್ಲಿ ಎಲ್ಲರಿಗೂ ಸಮಾನ ಹಕ್ಕುಗಳಿವೆ…. ದೇವಸ್ಥಾನ, ಮಸೀದಿ ಅಥವಾ ಯಾವುದೇ ಪೂಜಾ ಸ್ಥಳಗಳಿಗೆ  ಹೋಗುವ ಸ್ವಾತಂತ್ರ್ಯ ನೂತನ ರಾಷ್ಟ್ರ ಪಾಕಿಸ್ತಾನದಲ್ಲಿದೆ. ನೀವು ಯಾವುದೇ ಧರ್ಮ, ಮತ ಜಾತಿಗೆ ಸೇರಿರಬಹುದು. ಅದಕ್ಕೂ ಆಡಳಿತಕ್ಕೂ ಯಾವುದೇ ಸಂಬಂಧವಿಲ್ಲ…. ಕಾಲಾಂತರದಲ್ಲಿ ಹಿಂದೂಗಳು ಹಿಂದೂಗಳಾಗಿ ಮುಸ್ಲಿಮರು ಮುಸ್ಲಿಮರಾಗಿ ಉಳಿದು ಬಿಡುತ್ತಾರೆ. ಆದರೆ ಧಾರ್ಮಿಕ ಪ್ರಜ್ನೆಯಿಂದಲ್ಲ, ವೈಯಕ್ತಿಕ ನಂಬಿಕೆಯಿಂದ. ರಾಜಕೀಯ ದೃಷ್ಟಿಯಲ್ಲಿ ಅವರೆಲ್ಲರೂ ಪಾಕಿಸ್ತಾನದ ನಾಗರೀಕರು…”

ಮಹಮ್ಮದ್ ಆಲಿ ಜಿನ್ನಾ 1947, ಆಗಷ್ಟ್ 11 ರಂದು ಮಾಡಿದ ಭಾಷಣದ ತುಣುಕುಗಳಿವು. ಜಿನ್ನಾ  ಒಬ್ಬ ಧರ್ಮಾಂಧ ಕಟ್ಟಾ ಮುಸ್ಲಿಮನಾಗಿದ್ದರೆ ಪ್ರಜಾತಂತ್ರ, ಜಾತ್ಯಾತೀತತೆ ಬಗ್ಗೆ ಮಾತನಾಡುತ್ತಿದ್ದರೇ? ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆದ ನಂತರವೂ ಸಾಮರಸ್ಯ, ಸಮಾನತೆ, ಏಕತೆಯ ಬಗ್ಗೆ ಮಾತನಾಡುವ ಅಗತ್ಯವೇನಿತ್ತು…? ಧರ್ಮದ ಆಧಾರದಲ್ಲಿ ದೇಶ ವಿಭಜಿಸಿದ ‘ಖಳ’ ನಾಯಕರಾಗಿ ಕಂಡು ಬರುವ ಜಿನ್ನಾ ವಿಭಜನೆಯ ನಂತರ ಪಾಕಿಸ್ತಾನವನ್ನು ಮುಸ್ಲಿಂ ರಾಷ್ಟ್ರವೆಂದು ಘೋಸಿಸಬಹುದಿತ್ತು. ಅಲ್ಲಿ ಇಸ್ಲಾಂನ ಕಾನೂನುಗಳನ್ನು ಹೇರಬಹುದಾಗಿತ್ತು. ಆದರೆ ಜಿನ್ನಾ ಹಾಗೆ ಮಾಡಲಿಲ್ಲ. ಕಾರಣ ಜಿನ್ನಾ ಮೂಲತಃ ರಾಷ್ಟ್ರೀಯವಾದಿ ಹಾಗೂ ಜಾತ್ಯಾತೀತ ವ್ಯಕ್ತಿತ್ವದವರಾಗಿದ್ದರು. ಅಂತಹ ವ್ಯಕ್ತಿ ರಾಷ್ಟ್ರದ ವಿಭಜನೆಗೆ ಪಟ್ಟು ಹಿಡಿಯಲು ಕಾರಣ ಇರಲೇಬೇಕಲ್ಲವೇ…?

ಜಿನ್ನಾ ಹುಟ್ಟಿದ್ದು ಒಂದು ಶ್ರೀಮಂತ ವ್ಯಾಪಾರಸ್ಥ ಕುಟುಂಬದಲ್ಲಿ. ಉನ್ನತ ವ್ಯಾಸಂಗಕ್ಕಾಗಿ ಇಂಗ್ಲೆಂಡ್ ಗೆ ಹೋದ ಜಿನ್ನಾ ತಮ್ಮ 18 ನೇ ವಯಸ್ಸಿಗೇ ವಕೀಲಿ ಶಿಕ್ಷಣ ಮುಗಿಸಿ ಭಾರತಕ್ಕೆ ವಾಪಾಸಾದರು. ಬಂದವರೇ ಬಾಂಬೆ ಹೈಕೋರ್ಟ್ ನಲ್ಲಿ ವಕೀಲರಾಗಿ ವೃತ್ತಿಯನ್ನು ಆರಂಭಿಸಿದರು. ಕೆಲಸದ ವಿಷಯದಲ್ಲಿ ಜಿನ್ನಾ ತುಂಬಾ ಕಟ್ಟು ನಿಟ್ಟು ಹಾಗು ಶಿಸ್ತಿನ ಮನುಷ್ಯ. ಜಿನ್ನಾರ ಈ ವೃತ್ತಿಪರತೆ ಹಲವರನ್ನು ಆಕರ್ಷಿಸಿತು. ಅದರಲ್ಲೂ ಅವರ ಬಲಿಷ್ಠ ರಾಷ್ಟ್ರೀಯತೆ ಹಾಗೂ ದೇಶಭಕ್ತಿ. ಒಬ್ಬ ರಾಷ್ಟ್ರವಾದಿ ನಾಯಕರಾಗಲು ಎಲ್ಲಾ ಅರ್ಹತೆಗಳಿದ್ದ ಜಿನ್ನಾ 1896 ರಲ್ಲಿ ಅಧಿಕೃತವಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. ಜಿನ್ನಾರ ವ್ಯಕ್ತಿತ್ವದ ಬಗ್ಗೆ ತಿಳಿದಿದ್ದ ಆಗಿನ ಮೇರು ನಾಯಕ ಬಾಲ ಗಂಗಾಧರ ತಿಲಕರು ರಾಜದ್ರೋಹದ ಪ್ರಕರಣಕ್ಕೆ ಸಂಬಂದಿಸಿ ಜಿನ್ನಾರನ್ನು ತಮ್ಮ ವಕೀಲರಾಗಿ ನೇಮಕ ಮಾಡಿಕೊಂಡರು. ಹೀಗೆ ಜಿನ್ನಾಗೆ ತಿಲಕ್, ಫಿರೋಜ್ ಶಾಃ, ಸುರೆಂದ್ರನಾಥ ಬ್ಯಾನರ್ಜಿ ಮುಂತಾದ ಕಾಂಗ್ರೆಸ್ ದಿಗ್ಗಜರ ಸಂಪರ್ಕ ದೊರೆಯಿತು. ಅವರುಗಳ ಪ್ರಭಾವ ಜಿನ್ನಾರ ಮೇಲೆ ಭಾರೀ ಮಟ್ಟದಲ್ಲಾಯಿತು.1906 ರಲ್ಲಿ ಆಗಾ ಖಾನ್ ಅಧ್ಯಕ್ಷತೆಯಲ್ಲಿ ಮುಸ್ಲಿಂ ಲೀಗ್ ಸ್ಥಾಪನೆಯಾದಾಗ ‘ನಾನು ಮೊದಲು ಭಾರತೀಯ, ನಂತರ ಮುಸ್ಲಿಂ’ ಎಂದು ಅದರ ಸದಸ್ಯರಾಗಲು ಬಂದ ಮನವಿಯನ್ನು ತಿರಸ್ಕರಿಸಿದರು. ಹೀಗೆ ತಿಲಕರ ಕಾಲದಲ್ಲಿ ಜಿನ್ನಾ ಒಬ್ಬ ರಾಷ್ಟ್ರವಾದಿ ಯುವ ನಾಯಕನಾಗಿ ಬೆಳೆಯುತ್ತಾ ಸಾಗಿದರು.

ತಿಲಕರ ಹಠಾತ್ ಸಾವಿನ ನಂತರ ಕಾಂಗ್ರೆಸ್ ನಲ್ಲಿ ಗಾಂಧೀ ಯುಗ ಆರಂಭವಾಯಿತು. ಗಾಂಧಿಯುಗದಲ್ಲಿ ಹೋರಾಟದ ಕಿಚ್ಚಿಗಿಂತ ಅಧಿಕಾರದ ಮಹದಾಸೆ ಹೆಚ್ಚಿನವರಲ್ಲಿತ್ತು. ಗಾಂಧೀ, ನೆಹರೂ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಗಾಂಧೀ ಆಗಿನ ಯುವ ನಾಯಕ ಅಪ್ರತಿಮ ದೇಶಭಕ್ತ ಸುಭಾಶ್ ಚಂದ್ರ ಬೋಸ್ ರನ್ನು ಕಾಂಗ್ರೆಸ್ಸ್ ತೊರೆಯುವಂತೆ ಮಾಡಿದ್ದೇ ಈ ಕಾರಣಕ್ಕಾಗಿ. ಎಲ್ಲರೂ ತನ್ನ ಅಡಿಯಾಳಾಗಿರಬೇಕೆಂಬುದು ಗಾಂಧೀ ಬಯಕೆಯಾಗಿತ್ತು. ಇದೇ ಮುಂದೆ ತಿಲಕರ ಒಡನಾಡಿ ಕಟ್ಟಾ ರಾಷ್ಟ್ರೀಯವಾದಿ ಜಿನ್ನಾರು ಹೊಸದಿಕ್ಕಿನೆಡೆಗೆ ಹೋಗಲು ನಾಂದಿಯಾಯಿತು.

ಮುಂದೆ ಕೆಲ ಧರ್ಮಾಂಧ ಮುಸ್ಲಿಮರು ತಮ್ಮ ಹಿತಾಸಕ್ತಿಗಳಿಗಾಗಿ ನಡೆಸಿದ ‘ಖಿಲಾಫತ್ ಚಳುವಳಿಗೆ’ ಗಾಂಧೀಜಿ ಬೆಂಬಲ ನೀಡಿದ್ದು ದೊಡ್ಡ ದುರಂತಕ್ಕೆ ಕಾರಣವಾಯಿತು. ಖಿಲಾಫತ್ ಚಳುವಳಿಯ ಸಮಯದಲ್ಲಿ ಅಲ್ಲಲ್ಲಿ ಹಿಂದೂಗಳ ಕೊಲೆ, ಲೂಟಿ, ಭೀಕರ ಹಲ್ಲೆಗಳು ನಡೆದವು. ಇದ್ಯಾವುದಕ್ಕೂ ಅಹಿಂಸಾವಾದಿ ಗಾಂಧೀ ತಲೆಕೆಡಿಸಿಕೊಳ್ಳಲೇ ಇಲ್ಲ.! ಅಂದು ಮಹಮ್ಮದ್ ಆಲಿ ಜಿನ್ನಾ, ಗಾಂಧಿಯ ಒಟ್ಟಾರೆ ನಡೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದರು. ಜಿನ್ನಾ ಮುಸ್ಲಿಂ ಧರ್ಮಾಂಧನಾಗಿದ್ದರೆ ಗಾಂಧೀಜಿಯ ನಡೆಯನ್ನು ಟೀಕಿಸುತ್ತಿದ್ದರೇನು?

ಹೀಗೆ ಹಲವು ವಿಷಯಗಳಲ್ಲಿ ಗಾಂಧೀ-ನೆಹರೂ ಮತ್ತು ಜಿನ್ನಾರ ನಡುವೆ ಅಭಿಪ್ರಾಯ ಬೇಧಗಳು ಬೆಳೆಯತೊಡಗಿದವು. ಗಾಂಧೀಜಿಯ ಏಕಪಾರುಪತ್ಯವನ್ನು ಜಿನ್ನಾ ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಹಾಗೆಯೇ ಗಾಂಧೀ ಮತ್ತು ನೆಹರೂರವರು ಜಿನ್ನಾರನ್ನು ತಮ್ಮ ವೈರಿಯಂತೆ ನಡೆಸಿಕೊಂಡರು.ಇಬ್ಬರಿಗೂ ಜಿನ್ನಾ ಬಗ್ಗೆ ತಿರಸ್ಕಾರದ ಭಾವನೆಯಿತ್ತು. ತಿಲಕರ ಗರಡಿಯಲ್ಲಿ ಪಳಗಿದ ಜಿನ್ನಾಗೆ ಗಾಂಧಿಯುಗದಲ್ಲಿ ಉಸಿರುಗಟ್ಟುವ ವಾತಾವರಣವನ್ನು ಸೃಷ್ಟಿಸಲಾಯಿತು. ತಿಲಕರ ಮರಣಾ ನಂತರ ದಾರಿ ತಪ್ಪಿದ ಕಾಂಗ್ರೆಸ್ ಮತ್ತು ಅದರ ಚುಕ್ಕಾಣಿ ಹಿಡಿದಿದ್ದ ಗಾಂಧೀಜಿ ಧೋರಣೆ ಬಗ್ಗೆ ಬೇಸತ್ತ ಜಿನ್ನಾ ಕಡೆಗೆ ಕಾಂಗ್ರೆಸ್ ನಿಂದಲೇ ಹೊರಬರಬೇಕಾಯಿತು.

ಕಾಂಗ್ರೆಸ್ಸ್ ನಿಂದ ಹೊರಬಂದ ಜಿನ್ನಾ ಸುಮ್ಮನೆ ಕುಳಿತುಕೊಳ್ಳುವ ಸ್ವಭಾವದವರಾಗಿರಲಿಲ್ಲ. ಭಾರತೀಯ ರಾಜಕೀಯದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕಾಗಿಯೇ ಒಂದು ಸಮಯದಲ್ಲಿ ತಾನು ತಿರಸ್ಕರಿಸಿದ್ದ ಮುಸ್ಲಿಂ ಲೀಗನ್ನು ಸೇರಿದರು. 1916 ರಲ್ಲಿ ಮುಸ್ಲಿಂ ಲೀಗ್ ನ ಅಧ್ಯಕ್ಷರೂ ಆದರು. ಆದರೆ ಪ್ರತ್ಯೇಕತೆಯನ್ನು ಪ್ರತಿಪಾದಿಸಲಿಲ್ಲ. ಸ್ವಾತಂತ್ರ್ಯಗಳಿಕೆಯೆಂಬ ದೀರ್ಘಕಾಲೀನ ಗುರಿಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹಾಗು ಮುಸ್ಲಿಂ ಲೀಗನ್ನು ಒಟ್ಟಿಗೆ ತರಲು ಮುಂದಾದರು.

ಆದರೆ ಬೆಳೆಯುತ್ತ ಬೆಳೆಯುತ್ತ ಕಾಂಗ್ರೆಸ್ ಜಿನ್ನಾರ ಮುಸ್ಲಿಂ ಲೀಗ್ ಗೆ ಕಿಮ್ಮತ್ತೇ ಕೊಡಲಿಲ್ಲ. ಬ್ರಿಟೀಷರೊಂದಿಗಿನ ಹಲವು ಒಪ್ಪಂದಗಳಲ್ಲೂ ಜಿನ್ನಾರನ್ನು ಹೊರಗಿರಿಸಲಾಯಿತು. ಕಾಂಗ್ರೆಸ್ ಹಾಗು ಮುಸ್ಲಿಂ ಲೀಗ್ ನಡುವೆ ಸಹಮತ ತರಲು ಮಾಡಿದ ಜಿನ್ನಾ ಪ್ರಯತ್ನಗಳು ನೀರ ಮೇಲಿನ ಹೋಮದಂತಾಯಿತು. ಹೀಗೆ ಸೋಲುಗಳ ಮೇಲೆ ಸೋಲುಗಳನ್ನು ಕಂಡ ಜಿನ್ನಾ ರಾಜಕೀಯದಿಂದ ಬೇಸತ್ತು 1931 ರಲ್ಲಿ ಲಂಡನ್ ಗೆ ಹೋಗಿ ನೆಲೆಸಿದರು.

ಈ ಹಂತದಲ್ಲೇ ದೇಶ ವಿಭಜನೆಯ ವಿಷ ಬೀಜ ಹುಟ್ಟಿಕೊಂಡಿದ್ದು. ಆದರೆ ಅದು ಜಿನ್ನಾ ಮನಸಿನಲ್ಲಿ ಅಲ್ಲ. ಬದಲಾಗಿ ‘ಸಾರೆ ಜಹಾಂಸೇ ಅಚ್ಚಾ…’ ಎಂಬ ದೇಶ ಭಕ್ತಿ ಗೀತೆ ಬರೆದ ಸರ್ ಮೊಹಮ್ಮದ್ ಇಕ್ಬಾಲ್ ಮನದಲ್ಲಿ. ಭಾರತದ ವಿಭಜನೆಗೆ ಜಿನ್ನಾ, ಗಾಂಧೀ, ನೆಹರೂ ಎಷ್ಟು ಕಾರಣರೋ ಅಷ್ಟೇ ಈ ಇಕ್ಬಾಲ್ ಕೂಡ ಕಾರಣ. ಇದೇ ವಿಷಯಕ್ಕೆ ಸಂಬಂಧಿಸಿ ಇಕ್ಬಾಲ್ ಜಿನ್ನಾರಿಗೆ ಹಲವು ಪತ್ರಗಳನ್ನು ಬರೆದ. ಆದರೆ ಅದ್ಯಾವುದಕ್ಕೂ ಜಿನ್ನಾ ಒಪ್ಪಿಕೊಳ್ಳುವ ಗೋಜಿಗೆ ಹೋಗಿರಲಿಲ್ಲ.

ಇಲ್ಲಿನ ಮುಸ್ಲಿಂ ಲೀಗ್ ನ ನಾಯಕರುಗಳು ಮತ್ತೆ ಜಿನ್ನಾರ ನಾಯಕತ್ವದ ಅಗತ್ಯತೆಯನ್ನು ಮನಗಂಡು ಲಂಡನ್ ನಲ್ಲಿ ನೆಲೆಸಿದ್ದ ಜಿನ್ನಾರನ್ನು ಒತ್ತಾಯಪೂರ್ವಕವಾಗಿ ಭಾರತಕ್ಕೆ ಕರೆಸಿಕೊಂಡರು. ಮತ್ತೆ ಮುಸ್ಲಿಂ ಲೀಗ್ ನಲ್ಲಿ ಸಕ್ರಿಯರಾದರು ಜಿನ್ನಾ. ಇಕ್ಬಾಲ್ ಮುಂದಿಟ್ಟಿದ್ದ ದೇಶ ವಿಭಜನೆಯ ಪ್ರಸ್ತಾಪವನ್ನು ಜಿನ್ನಾ ಮೊದಲಿಗೆ ಒಪ್ಪಲಿಲ್ಲವಾದರೂ ಮುಂದೆ ಕಾಂಗ್ರೆಸ್ ಹಾಗು ಗಾಂಧೀ ಪರಿವಾರ ಜಿನ್ನಾರ ಬೇಡಿಕೆಗಳನ್ನು ನಿರ್ಲಕ್ಷಿಸುತ್ತಾ ಹೋದಂತೆ ರಾಜಕೀಯ ಒಂಟಿತನ ಎದುರುಸಿದ ಜಿನ್ನಾ ವಿಭಜನೆಯ ನಿಲುವಿಗೆ ಅಂಟಿಕೊಳ್ಳಲೇಬೇಕಾಯಿತು. ಅಂದು ಹಿಡಿದ ಪಟ್ಟನ್ನು ಮತ್ತೆಂದೂ ಸಡಿಲಿಸಲಿಲ್ಲ. ಒಂದು ಕಾಲದಲ್ಲಿ ಜಿನಾರನ್ನು ತಿರಸ್ಕರಿಸಿದ್ದ ಗಾಂಧೀ, ನೆಹರೂ ಹಾಗು ಕಾಂಗ್ರೆಸ್ ಜಿನ್ನಾರ ಮನವೊಲಿಸಲು ಪ್ರಯತ್ನಿಸಿದರೂ ಅದಕ್ಕೆ ಕಾಲ ಮಿಂಚಿ ಹೋಗಿತ್ತು. ಕ್ರಮೇಣ ಜಿನ್ನಾ ಒಬ್ಬ ಹಠಮಾರಿಯಾಗಿ ಬದಲಾದರು. ಎಲ್ಲಿಯವರೆಗೆ ಎಂದರೆ 1947ರ ಆಗಸ್ಟ್ ನಲ್ಲಿ ದೇಶ ವಿಭಜನೆಯಾಗುವವರೆಗೆ..

ದೇಶ ವಿಭಜನೆಯ ವಿಷಯ ಬಂದಾಗಲೆಲ್ಲ ಮಹಮ್ಮದ್ ಆಲಿ ಜಿನ್ನಾ ಒಬ್ಬ ‘ಖಳ’ ನಾಯಕರಾಗಿ ಕಂಡುಬರುತ್ತಾರೆ. ನಿಜ ಅವರು ಮಾಡಿದ್ದು ತಪ್ಪು ಕೂಡ… ಆದರೆ ಅವರನ್ನು ಅಂತಹ ಪರಿಸ್ಥಿತಿಯಲ್ಲಿ ತಂದು ನಿಲ್ಲಿಸಿ ಭಾರತದ ವಿಭಜನೆಗೆ ಪರೋಕ್ಷವಾಗಿ ಕಾರಣಕರ್ತರಾದವರನ್ನು ನಾವು ಮರೆತ್ತಿದ್ದೇವೆ..? ಯಾಕೆ ನಾವು ಗಾಂಧೀ ನೆಹರೂಗಳಂತ ಶಕುನಿ ನಾಯಕರನ್ನು ದೂರುತ್ತಿಲ್ಲ.

1930 ರ ಸಮಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುವುದು ಖಚಿತವಾದ ಮೇಲೆ 1947 ರ ವರೆಗೆ ನಡೆದ ಚಳುವಳಿಗಳೆಲ್ಲ ಅಧಿಕಾರ, ನಾಯಕತ್ವ ಹಾಗು ಸ್ವಾತಂತ್ರ್ಯ ಗಳಿಕೆಯ ‘ಕ್ರೆಡಿಟ್’ ಗಾಗಿ ನಡೆದವುಗಳೆಂಬುದು ಕಟು ಸತ್ಯ. ಸುಭಾಶ್ ಚಂದ್ರ ಬೋಸರು ಕಾಂಗ್ರೆಸ್ ನಿಂದ ಹೊರ ಹೋಗಿ INA ಕಟ್ಟಿದ ನಂತರ ಗಾಂಧೀ-ನೆಹರೂ-ಜಿನ್ನಾ ನಡುವಿನ ಮೇಲಾಟ ದೇಶವನ್ನು ಎರಡು ಭಾಗ ಮಾಡುವಷ್ಟರ ಮಟ್ಟಿಗೆ ತಂದು ನಿಲ್ಲಿಸಿತು.

ದೇಶ ವಿಭಜನೆಯ ಬಗ್ಗೆ ಗಾಂಧೀಜಿಯವರ ನಿಲುವುಗಳು ಕೂಡ ಅನುಮಾನವನ್ನು ಸೃಷ್ಟಿಸುತ್ತವೆ. ‘ನನ್ನ ದೇಹವನ್ನು ಬೇಕಾದರೆ ತುಂಡು ಮಾಡಿ ಹಂಚಿಕೊಳ್ಳಿ, ಆದರೆ ದೇಶ ವಿಭಜನೆಯನ್ನು ಒಪ್ಪುವುದಿಲ್ಲ’ ಎಂದಿದ್ದ ಗಾಂಧೀ ಕೊನೆಗೆ ಸುಮ್ಮನಾಗಿದ್ದೇಕೆ??  ವಿಭಜನೆಗೆ ಒಪ್ಪಿಗೆ ಸೂಚಿಸಿದ್ದೇಕೆ? ಮಾತು ಮಾತಿಗೂ ಸತ್ಯಾಗ್ರಹ ಉಪವಾಸ ಎನ್ನುತ್ತಿದ್ದ ಗಾಂಧೀ ವಿಭಜನೆ ವಿರುದ್ಧ ಯಾಕೆ Atleast ಒಂದು ದಿನದ ಉಪವಾಸ ಕೂರಲಿಲ್ಲ…? ಸತ್ಯಾಗ್ರಹ ಮಾಡಲಿಲ್ಲ?… ಚಾಚಾ ಎಂದು ಕರೆಸಿಕೊಳ್ಳುವ ನೆಹರೂ ಯಾಕೆ ತಡೆಯಲಿಲ್ಲ?

ಇಂದು ಜಿನ್ನಾ ಒಬ್ಬ ‘ಖಳ’ನಾಗಿ ಕಂಡು ಬರುವುದಾದರೆ ಅದಕ್ಕೆ ಗಾಂಧೀ-ನೆಹರೂ ಹಾಗು ಗಾಂಧೀ ಯುಗದ ಕಾಂಗ್ರೆಸ್ಸೇ ಕಾರಣ… ಒಬ್ಬ ರಾಷ್ಟ್ರವಾದಿ ಜಿನ್ನಾರನ್ನು ದೇಶ ವಿಭಜನೆ ಮಾಡುವಷ್ಟರ ಮಟ್ಟಿಗೆ ಬದಲಾಯಿಸಿದರು ಎಂದ ಮೇಲೆ ಇವರುಗಳೇ ತಾನೇ ನಿಜವಾದ ಖಳ ನಾಯಕರು.

ಯೋಚಿಸಿ…

ಜೈ ಹಿಂದ್…

ಚಿತ್ರ ಕೃಪೆ : historypak.com

27 ಟಿಪ್ಪಣಿಗಳು Post a comment
  1. Sridhara Mulki's avatar
    Sridhara Mulki
    ಆಕ್ಟೋ 1 2012

    ಜಿನ್ನ್ನಾ ಅವರ ಬಗೆಗಿದ್ದ ಗೊಂದಲಗಳನ್ನು ನಿವಾರಿಸಿದ್ದಕ್ಕೆ ವಂದನೆಗಳು ಅಶ್ವಿನ್ ಸರ್.. ಸತ್ಯದ ಅನಾವರಣಕ್ಕಾಗಿ ಮತ್ತೊಮ್ಮೆ ಧನ್ಯವಾದ.

    ಉತ್ತರ
  2. Ajith S Shetty's avatar
    ಆಕ್ಟೋ 1 2012

    ಅಶ್ವಿನ್ ನನ್ನ ಸ್ಪಷ್ಟ ಮತ್ತು ಸರಳ ಉತ್ತರ ಗಾಂಧಿ “ಖಳ ನಾಯಕನ್ನು ಸ್ರಷ್ಟಿಸಿದ ನೀರ್ದೆಶಕ”

    ಉತ್ತರ
  3. Rajesh C.'s avatar
    Rajesh C.
    ಆಕ್ಟೋ 1 2012

    What we studied in our school days, all fake History. 😦

    ಉತ್ತರ
  4. ರವಿಕುಮಾರ ಜಿ ಬಿ's avatar
    ರವಿಕುಮಾರ ಜಿ ಬಿ
    ಆಕ್ಟೋ 1 2012

    ಒಳ್ಳೆ ಲೇಖನ ….ಸ್ವಲ್ಪ ತತ್ಸಂಬಂದಿ ಕೊಂಡಿ ಗಳನ್ನು ಕೊಟ್ಟಿದ್ದರೆ ಇನ್ನೂ ಒಳ್ಳೆಯದಿತ್ತು !

    ಉತ್ತರ
  5. subramanyanavunda's avatar
    subramanyanavunda
    ಆಕ್ಟೋ 1 2012

    wonderful article ashwin

    ಉತ್ತರ
  6. ಈ ನೆಹರೂ – ಗಾಂಧಿ ಕುಟುಂಬದವರ ಬಲವಂತದ ರಾಜಕೀಯ ಆರಂಭವಾಗಿದ್ದು, ಅಂದು ಮಹಾತ್ಮರ ಬಾಯಿ ಮುಚ್ಚಿಸುವುದರಿಂದಲೇ!

    ಉತ್ತರ
  7. ಈ ಲೇಖನದ ಮೂಲ ಲೇಖಕರಾದ ಅಶ್ವಿನ್ ಅಮೀನ್ ರಿಗೆ, ಯಾವುದೇ ಗೌರವ ಸೂಚಿಸದೇ, ಈ ಲೇಖನವನ್ನು ಫೇಸ್ ಬುಕ್ ನ ಕನ್ನಡ ಬ್ಲಾಗ್ ಗುಂಪಿನಲ್ಲಿ ಸಚಿನ್ ನಾಯಕ್ ಅನ್ನುವವರು ತಮ್ಮ ಹೆಸರಿನೊಂದಿಗೆ ಪ್ರಕಟಿಸಿರುತ್ತಾರೆ.
    ಛೇ… ನಾಚಿಕೆಗೇಡು!

    https://www.facebook.com/groups/kannadablog/permalink/454121804631359/

    ಉತ್ತರ
  8. ಸವಿತಾ ಬಿ ಎ.'s avatar
    ಸವಿತಾ ಬಿ ಎ.
    ಆಕ್ಟೋ 2 2012

    ಎಂಥಾ ಕಾಮೆಡಿ..!!!
    ಇಂತಹ ಹಾಸ್ಯ ಲೇಖನಗಳು ಇನ್ನಷ್ಟು ಬರಲಿ…! 😉

    ಉತ್ತರ
    • Naresh Hegde's avatar
      Naresh Hegde
      ಆಕ್ಟೋ 2 2012

      ಸರಿಯಾಗಿ ಹೇಳಿದಿರಿ ನೋಡಿ 🙂

      ಉತ್ತರ
  9. ರವಿ's avatar
    ರವಿ
    ಆಕ್ಟೋ 2 2012

    ಶತ್ರುವಿನ ಶತ್ರು ಮಿತ್ರ ಎಂಬಂತಿದೆ ಲೇಖನ 🙂 ಜಿನ್ನಾಗೂ ಗಾಂಧಿಗೂ ಇನ್ನ ಅಭಿಪ್ರಾಯ ಭೇಧ, ಅಡ್ವಾಣಿ ಜಿನ್ನಾರನ್ನ ಹೊಗಳಿದ್ದು – ಇತ್ಯಾದಿಗಳಿಂದ ಜಿನ್ನಾ ಈ ಲೇಖನದಲ್ಲಿ ದೊಡ್ಡವರಾಗಿದ್ದಾರೆ. ಜಿನ್ನಾ ಒಳ್ಳೆಯವರಾಗಿದ್ದರೆ ಗಾಂಧೀ ಕೆಟ್ಟವರಾಗಿರ ಬೇಕೆಂದೇನೂ ಇಲ್ಲ, ಅಥವಾ ಗಾಂಧೀ ಒಳ್ಳೆಯವರಾಗಿದ್ದರೆ ಜಿನ್ನಾ ಕೆಟ್ಟವರಾಗಿರ ಬೇಕೆಂದೇನೂ ಇಲ್ಲ. ದೇಶ ವಿಭಜನೆಯನ್ನು ಇತಿಹಾಸದ ಕೆಟ್ಟ ಅಧ್ಯಾಯವೆಂದೇನೂ ಕರೆಯಬೇಕೆಂದಿಲ್ಲ. ದೇಶ ಒಡೆಯದಿದ್ದರೂ ಈಗಿರುವ ಎಲ್ಲ ಸಮಸ್ಯೆಗಳೂ ಇರುತ್ತಿತ್ತು ಬಹುಶಃ, ಬೇರೆಯೇ ರೀತಿಯಲ್ಲಿ.

    ಉತ್ತರ
  10. Nareshkumar Hegde Dodmari's avatar
    ಆಕ್ಟೋ 2 2012

    ಅಮೀನ್ ಅವರೇ… ನಮ್ಮ ಅಭಿಪ್ರಾಯಗಳು ರೂಪುಗೊಳ್ಳುವುದು ಹೇಗೆ?…
    1- ಇತರರು ಹೇಳಿದ್ದನ್ನು/ವಿವರಿಸಿದ್ದನ್ನು ಕೇಳುವುದರಿಂದ/ಓದುವುದರಿಂದ.
    2- ಘಟನೆಯೊಂದನ್ನು ಕಣ್ಣಾರೆ ನೋಡುವುದರಿಂದ
    ಈ ಮೇಲಿನ ಎರಡರಲ್ಲಿ ನಿಮ್ಮ ಅಭಿಪ್ರಾಯ ರೂಪುಗೊಂಡ ಬಗೆ 1ನೇ ಬಗೆಯಿಂದ ಎಂದು ತಿಳಿಯುತ್ತೇನೆ. ಹಾಗೂ ಈ ಎರಡನೇ ಬಗೆಯಿಂದ ಅಭಿಪ್ರಾಯ ರೂಪಿಸಿಕೊಳ್ಳುವಲ್ಲಿ ಮತ್ತೆರಡು ಬಗೆಗಳಿವೆ:
    1- ಇತಿಹಾಸದ ಕುರಿತಾಗಿನ ಕೆಲವೇ ಲೇಖನಗಳನ್ನು ಓದುವುದರಿಂದ
    2- ಸಂಪೂರ್ಣ ಇತಿಹಾಸವನ್ನು ಕೂಲಂಕುಷವಾಗಿ ಅಭ್ಯಸಿಸುವುದರಿಂದ
    ಹಾಗೂ ಈ ಮೇಲಿನ ವಿಧದಲ್ಲಿ ತಾವು ಯಾವ ಬಗೆಯನ್ನು ಅನುಸರಿಸಿದ್ದೀರಿ ಈ ಲೇಖನವನ್ನು ಬರೆಯುವ ಮೊದಲು ಎಂಬುದನ್ನು ನಾನು ಕೇಳಿದರೆ ದಯವಿಟ್ಟು ಅದು ಈ ಲೇಖನದ ಕುರಿತೇ ಹೊರತು ತಮ್ಮ ಕುರಿತಲ್ಲ.

    ನಾವು ಕೇವಲ ಓದಿ/ಕೇಳಿ ಪಡೆದ ಜ್ಞಾನದಿಂದ ಈಗಾಗಲೇ ಮಹಾನ್ ಎನಿಸಿರುವ ವ್ಯಕ್ತಿಯೊಬ್ಬನನ್ನು ಆತ ಮಾಡಿದ ಒಳ್ಳೆಯ ಕರ್ಮಗಳನ್ನು ತಿಳಿದು ಹೊಗಳಬಹುದೇ ಹೊರತು , ಆ ಅಲ್ಪಜ್ಞಾನವನ್ನು ಯಾರನ್ನಾದರೂ ತೆಗಳಲು ಬಳಸಿಕೊಳ್ಳಬಾರದೆಂಬುದು ನನ್ನ ಅನಿಸಿಕೆ. ಹಾಗಾಗಿ ನಾನು ಗಾಂಧೀಜಿಯವರ ಪರ ಬರೆಯುತ್ತಿದ್ದೇನೆಯೇ ಹೊರತು ಜಿನ್ನಾರವರ ವಿರುದ್ಧವಲ್ಲ.

    ಗಾಂಧೀಜಿಯವರನ್ನು ಶಕುನಿಗೆ ಹೋಲಿಸಿದ್ದೀರಲ್ಲಾ! ನಿಮಗೆ ಮನಸಾದರೂ ಹೇಗೆ ಬಂತು?
    ಗಾಂಧೀಜಿ ಅಂದು ತಮ್ಮ ಕಿರಿಯ ವಯಸ್ಸಿನಲ್ಲಿಯೇ ದಕ್ಷಿಣ ಆಫ್ರಿಕಾದಲ್ಲಿ ವರ್ಣ ತಾರತಮ್ಯದ ವಿರುದ್ಧ ಸೊಲ್ಲೆತ್ತಿ ಮಾಡಿದ ಹೋರಾಟದ ಫಲವಾಗಿ, ಇಡೀ ಜಗತ್ತಿನಲ್ಲಿ ವರ್ಣಭೇದ/ಸಮುದಾಯಭೇದದ ವಿರುದ್ಧದ ಹೋರಾಟಕ್ಕೆ ನಾಂದಿಯಾಯಿತು. ಅವರು ಆರಂಭಿಸಿದ ಹೊಸ ಅಹಿಂಸಾ ಮಾರ್ಗದ ಸತ್ಯಾಗ್ರಹ ಹೋರಾಟದ ಹೊಸ ದಾರಿಯನ್ನು ಪರಿಚಯಿಸಿತು. ಅವರ ಈ ಚಳುವಳಿ ಪ್ರಾರಂಭದಲ್ಲಿ ಅಲ್ಲಿ ವಾಸಿಸುತ್ತಿದ್ದ ಭಾರತೀಯ ಸಮುದಾಯದ ಕಳಕಳಿಯ ಮೇಲಾದರೂ, ನಂತರ ಬಿಳಿಯರಿಂದ ಜೀತದಾಳುಗಳಂತೆ ಜೀವಿಸಬೇಕಿದ್ದ ಅದೆಷ್ಟೋ ಸಾವಿರ ಕುಟುಂಬಕ್ಕೆ ಅದು ಆಶಾಕಿರಣವಾಯಿತು.

    ಅವರೇನಾದರೂ ಅಧಿಕಾರದಾಹಿಯಾಗಿದ್ದರೆ, ಅಲ್ಲಿಯೇ ಅವರಿಗೆ ಬಯಸಿ ಬಂದಿದ್ದ ಅವಕಾಶವನ್ನು ಬಿಟ್ಟು ಭಾರತಕ್ಕೆ ಮರಳುತ್ತಿದ್ದರಾ? ಭಾರತಕ್ಕೆ ಬಂದಾಗ ಅವರು ನೇರವಾಗಿ ರಾಜಕೀಯ ಸೇರಲಿಲ್ಲ. “ಭಾರತದ ಕುರಿತು ಮಾತನಾಡುವ ಮೊದಲು ನಾನು ಒಮ್ಮೆ ಇಡೀ ಭಾರತವನ್ನು ಸುತ್ತಿ ನಮ್ಮದೇ ಜನರ ನಾಡಿಮಿಡಿತವನ್ನು ಅರಿಯಬೇಕು.” ಎಂದು ಹೇಳಿ ಕೂಡಲೇ ಬಂದಿದ್ದ ರಾಜಕೀಯ ಆಹ್ವಾನವನ್ನು ತಿರಸ್ಕರಿಸಿ ತಾನೊಬ್ಬ ಸಾಧಕ ಎಂಬ ಅಹಂನ್ನು ಬಿಟ್ಟು, ಪಂಚೆಯೊಂದನ್ನು ತೊಟ್ಟು ಭಾರತದುದ್ದಗಲಕ್ಕೂ ಸಂಚರಿಸಿ ವೈವಿಧ್ಯ ಭಾರತದ ಜನಸಮುದಾಯದ ನಾಡಿಮಿಡಿತವನ್ನು ಅರಿಯಲು ಪ್ರಯತ್ನಿಸಿದರು. ಇದನ್ನು ಆ ಮೊದಲು ಯಾರೊಬ್ಬರೂ ಮಾಡಿರಲಿಲ್ಲ. ಆಗಲೇ ಅವರಿಗೆ ಮನದಟ್ಟಾಯಿತು – ಮೊದಲು ಭಾಷೆ/ಪ್ರಾಂತ್ಯ/ಕೋಮು – ಇವುಗಳನ್ನೆಲ್ಲ ಬದಿಗಿಟ್ಟು ಭಾರತೀಯರೆಲ್ಲ ಒಂದಾಗದೇ ಬ್ರಿಟಿಷರ ವಿರುದ್ದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದು ಅಸಾಧ್ಯ ಎಂದು.

    ಗಾಂಧೀಜಿಯವರು ಆ ಮೊದಲೇ ಒಂದು ಸತ್ಯವನ್ನು ಅರಿತಿದ್ದರು – ಯುದ್ಧ ಪರಿಣಿತಿಯಲ್ಲಿ ಬ್ರಿಟಿಷರು ಭಾರತಕ್ಕಿಂತ ಅದೆಷ್ಟೋ ಮುಂದಿದ್ದು, ಶಸ್ತ್ರಾಸ್ತ್ರ ಸಹಿತವಾದ ಹಿಂಸಾತ್ಮಕ ಹೋರಾಟದಿಂದ ಬ್ರಿಟಿಷರನ್ನು ಹಿಮ್ಮೆಟ್ಟಿಸುವುದು ಕಷ್ಟಸಾಧ್ಯ ಎಂದು. ಹಾಗಾಗಿಯೇ ಅವರೆಂದೂ ಹಿಂಸಾತ್ಮಕ ಮಾರ್ಗವನ್ನು ಬೆಂಬಲಿಸಲಿಲ್ಲ. (ಅವರೇ ಹೇಳಿದಂತೆ – “An eye for an eye makes the whole world blind”)

    ಆದರೆ ಅವರೇಕೆ ಭಗತ್ ಸಿಂಗ್ ಅವರನ್ನಾಗಲೀ, ಸುಭಾಷ್ ಚಂದ್ರ ಭೋಸ್ ಅವರನ್ನಾಗಲೀ ಬೆಂಬಲಿಸಲಿಲ್ಲ? ಏಕೆಂದರೆ ವೈಯಕ್ತಿಕವಾಗಿ ಅವರು ಮೊದಲಿನಿಂದಲೂ ವಿರೋಧಿಸುತ್ತ ಬಂದಿದ್ದ ಮಾರ್ಗವನ್ನು ಅನುಸರಿಸುತ್ತಿರುವವರನ್ನು ರಾಜಕೀಯವಾಗಿ ಬೆಂಬಲಿಸುವುದು ಅವರಿಗೆ ಅಷ್ಟು ಸುಲಭವಾಗಿರಲಿಲ್ಲ. ಹಾಗಾಗಿಯೇ ಗಾಂಧೀಜಿಯವರು ಅವರ ಕುರಿತಾಗಿ ತಟಸ್ಥ ನೀತಿಯನ್ನು ಅನುಸರಿಸಿದರು.

    ಭಾರತವೇನಾದರೂ ಹಿಂಸಾತ್ಮಕ ಮಾರ್ಗವನ್ನೇ ಹಿಡಿದು ಮುನ್ನಡೆದಿದ್ದರೆ ಇಂಗ್ಲೆಂಡಿನ ಬ್ರಿಟಿಷ ಆಡಳಿತಕ್ಕೆ ತಾನೂ ಹಿಂಸಾತ್ಮಕ ಮಾರ್ಗವನ್ನೇ ಮುಂದುವರೆಸಲು ಪ್ರಚೋದಿಸಿದಂತಾಗುತ್ತಿತ್ತು ಹೊರತು ಮತ್ತಾವ ಪ್ರಯೋಜನವೂ ಇರಲಿಲ್ಲ. ಹಾಗಾಗಿಯೇ ಗಾಂಧೀಜಿಯವರು ಅಹಿಂಸಾತ್ಮಕ ಸತ್ಯಾಗ್ರಹವನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿದರು.

    1947ರ ಸಮಯದಲ್ಲಿ ಹಿಂದೂ-ಮುಸ್ಲಿಮ್ ಸಮುದಾಯ ಆಗಲೇ ಬೇರೆಯಾಗಿಹೋಗಿತ್ತು. ಇದರ ಹಿಂದಿನ ಷಡ್ಯಂತ್ರ ಬ್ರಿಟಿಷರದ್ದಾಗಿತ್ತೇ ಹೊರತು ಮುಸ್ಲಿಮ್ ನಾಯಕರಾದ ಜಿನ್ನಾರವರಿದಾಗಲೀ ಅಥವಾ ಗಾಂಧೀಜಿ/ನೆಹ್ರುರವರಿದಾಗಲೀ ಆಗಿರಲಿಲ್ಲ. ಬ್ರಿಟಿಷರ ಈ ‘ಹಿಂದೂ-ಮುಸ್ಲಿಮ್’ ಒಡೆದಾಳುವ ಹೊಸ ದಾಳ ಆಗಿನ ಭಾರತ ಸ್ವಾತಂತ್ರ್ಯ ಚಳುವಳಿಗೆ ಅತ್ಯಂತ ಮಾರಕವಾಗತೊಡಗಿತು. ಭಾರತದಲ್ಲಿಯೂ ಹಲವೆಡೆ ಮುಸ್ಲಿಂ ರಾಜಪತ್ಯ ಆಡಳಿತದಲ್ಲಿರುವ ಸತ್ಯ ಗಾಂಧೀಜಿಯವರಿಗೂ/ನೆಹರೂರವರಿಗೂ ತಿಳಿದಿತ್ತು. ಹಾಗೂ ಹಿಂದೂ ಸಮುದಾಯದ ಪ್ರಶ್ನಾತೀತ ನಾಯಕನಾಗಿ ರಾಜಕೀಯವಾಗಿ ಇನ್ನೂ ಬೆಳೆಯಬೇಕೆಂಬ ಹಂಬಲದಿಂದ ನೆಹರೂರವರು, ಗಾಂಧೀಜಿಯವರ ‘ಅಖಂಡ ಭಾರತ’ ಎಂಬ ಮಹದಾಸೆಗೆ ಕೊನೆಕೊನೆಯಲ್ಲಿ ಹೆಚ್ಚಿನ ಬೆಂಬಲ ನೀಡದೇ ಹೋಗಿದ್ದು ಅತೀವ ನಿರಾಸೆಯನ್ನುಂಟುಮಾಡಿತ್ತು.

    ಅದೇ ಸಮಯದಲ್ಲಿ ಇನ್ನೊಂದೆಡೆ ಜಿನ್ನಾರವರು ಪಾಕಿಸ್ತಾನಕ್ಕಾಗಿ ಹೋರಾಡಲು ಮುಸ್ಲಿಂರನ್ನು ಕಿಚ್ಚೆಬ್ಬಿಸತೊಡಗಿದ್ದರು. ಎಲ್ಲ ಬ್ರಿಟಿಷರ ಆಶಯದಂತೆಯೇ ನಡೆಯತೊಡಗಿದಾಗ ಗಾಂಧೀಜಿಯವರಿಗೆ ತಮ್ಮ ‘ಅಖಂಡ-ಭಾರತ’ ಸೂತ್ರದಿಂದ ಹಿಂದೆಗೆಯದೇ ಬೇರೇ ದಾರಿಯೇ ಇರಲಿಲ್ಲ.

    ಹೀಗೆಲ್ಲ ಆಗಿ ಅಖಂಡ ಭಾರತ ವಿಭಜನೆಯಾಗಿ ಭಾರತ – ಪಾಕಿಸ್ತಾನ ಎಂದು ಎರಡು ಹೋಳಾದಾಗ ಗಾಂಧೀಜಿಯವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು.

    ಈ ರೀತಿಯಾಗಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವೇ ಅವರು ರಾಜಕೀಯದಿಂದ ನಿವೃತ್ತಿ ಘೋಷಿಸಿದರು. ಭಾರತದ ಸ್ವಾತಂತ್ರ್ಯ ಅವರ ಗುರಿಯಾಗಿತ್ತೇ ಹೊರತು, ಅವರ ರಾಜಕೀಯ ಅಸ್ತಿತ್ತ್ವ ಅಲ್ಲ.

    ಅವರ ದೂರದರ್ಶಿತ ರಾಜಕೀಯ ನೀತಿಗಳು,ಭವಿಷ್ಯ ಭಾರತದ ಕಲ್ಪನೆಗಳು, ಸಮಾನತೆಯ ಕುರಿತಾಗಿನ ಅವರ ಯೋಚನೆಗಳು, ಅಹಿಂಸೆಯ ಮಾರ್ಗಗಳು ಎಲ್ಲದಕ್ಕೂ ಹೆಚ್ಚಾಗಿ ಅವರ ಜೀವನಾಚರಣೆಯಲ್ಲಿನ ಸರಳತೆ – ಇವೆಲ್ಲ ಎಲ್ಲ ಕಾಲಕ್ಕೂ ಸಲ್ಲುವ ಆದರ್ಶಗಳಾಗಿವೆ.

    “ಮಹಾತ್ಮಾ ಗಾಂಧೀಜಿ ಕೇವಲ ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವಕ್ಕೂ ಸಲ್ಲುವ ಶ್ರೇಷ್ಠ ವ್ಯಕ್ತಿ”

    [ಗಾಂಧೀಜಿಯವರ ಮೇಲಿನ ನನ್ನ ನಂಬಿಕೆಯಿಂದ ಈ ಲೇಖನವನ್ನು ಬರೆದಿದ್ದೇನೆಯೇ ಹೊರತು, ಮತ್ತಾರನ್ನೂ ಖಂಡಿಸಲೆಂದಲ್ಲ. ನಂಬಿಕೆ – ಸತ್ಯಗಳ ನಡುವಿನ ವೈಮನಸ್ಕ ಕ್ಲಿಷ್ಟಕರವಾದದ್ದು]

    —- ನರೇಶಕುಮಾರ ಹೆಗಡೆ ದೊಡ್ಮರಿ

    ಉತ್ತರ
    • Mahesh's avatar
      ಆಕ್ಟೋ 2 2012

      ನರೇಶಕುಮಾರ ಹೆಗಡೆಯವರೇ, ತುಂಬಾ ಸುಂದರವಾದ ಉತ್ತರ. ಮಹಾತ್ಮಾ ಗಾಂಧಿಯವರ ಕುರಿತ ನಿಮ್ಮ ಅಭಿಪ್ರಾಯವನ್ನೂ ನಾನೂ ಒಪ್ಪುತ್ತೇನೆ.

      ಉತ್ತರ
    • SSNK's avatar
      ಆಕ್ಟೋ 3 2012

      > ಗಾಂಧೀಜಿಯವರು ಆ ಮೊದಲೇ ಒಂದು ಸತ್ಯವನ್ನು ಅರಿತಿದ್ದರು – ಯುದ್ಧ ಪರಿಣಿತಿಯಲ್ಲಿ ಬ್ರಿಟಿಷರು ಭಾರತಕ್ಕಿಂತ ಅದೆಷ್ಟೋ ಮುಂದಿದ್ದು,
      > ಶಸ್ತ್ರಾಸ್ತ್ರ ಸಹಿತವಾದ ಹಿಂಸಾತ್ಮಕ ಹೋರಾಟದಿಂದ ಬ್ರಿಟಿಷರನ್ನು ಹಿಮ್ಮೆಟ್ಟಿಸುವುದು ಕಷ್ಟಸಾಧ್ಯ ಎಂದು.
      ಕಾಂಗ್ರೆಸ್ ಏನಾದರೂ ಸುಭಾಷ್ ಚಂದ್ರ ಬೋಸರ INAಗೆ ಬೆಂಬಲ ನೀಡಿದ್ದರೆ ಭಾರತದ ಇತಿಹಾಸವೇ ಭಿನ್ನವಾಗಿರುತ್ತಿತ್ತು.
      ಹೊರಗಿನಿಂದ ಸುಭಾಷರ ಸೈನ್ಯ ಆಕ್ರಮಿಸಿತ್ತು; ಬ್ರಿಟಿಷರ ಸೈನ್ಯ ದ್ವಿತೀಯ ಮಹಾಯುದ್ಧದಲ್ಲಿ ಭಾಗವಹಿಸಿ ಸುಸ್ತಾಗಿತ್ತು; ಅದೇ ಸಮಯದಲ್ಲಿ, ಭಾರತದೊಳಗೆ “ಅಸಹಕಾರ ಆಂದೋಲನ” ಅಥವಾ “ಕ್ವಿಟ್ ಇಂಡಿಯಾ ಚಳುವಳಿ”ಗೆ ಕಾಂಗ್ರೆಸ್ ಕರೆ ನೀಡಿದ್ದಿದ್ದರೆ…….?
      ಬೆಂಬಲ ನೀಡುವುದಿರಲಿ, ಸುಭಾಷರನ್ನು ಬಹಳ ದೊಡ್ಡದಾಗಿ ಕಾಂಗ್ರೆಸ್ಸಿಗರು ವಿರೋಧಿಸಿಬಿಟ್ಟರು.
      ನೆಹರೂ ಅವರಂತೂ ಸುಭಾಷರನ್ನು ವೈರಿಯಂತೆ ಕಂಡರು!!
      ಇದಲ್ಲವೇ ನಾವು ಕೊಂಡಾಡುತ್ತಿರುವ “ದೇಶಭಕ್ತಿ”!?

      ಉತ್ತರ
      • Mahesh's avatar
        ಆಕ್ಟೋ 3 2012

        >1930 ರ ಸಮಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುವುದು ಖಚಿತವಾದ ಮೇಲೆ 1947 ರ ವರೆಗೆ ನಡೆದ ಚಳುವಳಿಗಳೆಲ್ಲ ಅಧಿಕಾರ, ನಾಯಕತ್ವ ಹಾಗು ಸ್ವಾತಂತ್ರ್ಯ ಗಳಿಕೆಯ ‘ಕ್ರೆಡಿಟ್’ ಗಾಗಿ ನಡೆದವುಗಳೆಂಬುದು ಕಟು ಸತ್ಯ

        1930 ರಷ್ಟಕ್ಕಾಗಲೇ ಸ್ವಾತಂತ್ರ್ಯ ಸಿಗುವದು ಖಚಿತವೆಂದಾದಲ್ಲಿ ಮತ್ಯಾಕೆ ಸುಭಾಸರು 1939 ರಲ್ಲಿ ಸೇನೆ ಕಟ್ಟಿ ಯುದ್ಧಕ್ಕೆ ಹೊರಟರು. ತನಗೊಪ್ಪದ ಜನಾಂಗದವರನ್ನು ಕಚಕಚನೆ ಕತ್ತರಿಸಿ ಹಾಕಿದ ಹಿಟ್ಲರನ ಸಹಾಯ ಪಡೆದು, ಭಾರತದ ಸರ್ವಾಧಿಕಾರಿಯಾಗುವ ಮನಸ್ಸಿತ್ತಾ?
        ಆ ಸಮಯದಲ್ಲೇನಾದರೂ ಭಾರತವೂ ಬ್ರಿಟಿಷರ ವಿರುದ್ಧ ಹೋರಾಡಿ, ಮಿತ್ರರಾಷ್ಟ್ರಗಳು ಸೋತು ಜಗತ್ತಿನಾದ್ಯಂತ ಸರ್ವಾಧಿಕಾರಿಗಳ ಆಡಳಿತ ಬರಬೇಕಿತ್ತಾ? ಹೀರೋಷಿಮಾ ಮತ್ತು ನಾಗಾಸಾಕಿಗಳ ಮೇಲೆ ಬಿದ್ದ ಕೆಲ ಬಾಂಬುಗಳು ಭಾರತದ ಮೇಲೂ ಬೀಳಬೇಕಿತ್ತಾ?

        ಉತ್ತರ
        • SSNK's avatar
          ಆಕ್ಟೋ 3 2012

          > 1930 ರ ಸಮಯದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬರುವುದು ಖಚಿತವಾದ ಮೇಲೆ
          1930ರಲ್ಲೇ ಸ್ವಾತಂತ್ರ್ಯ ಬರುವುದು ಖಚಿತವಾಗಿದ್ದರೆ, ದಂಡೀ ಯಾತ್ರೆ, ಕ್ವಿಟ್ ಇಂಡಿಯಾ ಚಳುವಳಿಗಳ ಅಗತ್ಯವೇ ಇರಲಿಲ್ಲ.
          ಭಗತ್ ಸಿಂಗ್ ಪ್ರಾಣತ್ಯಾಗ ಮಾಡಿದ್ದು ೧೯೩೧ರಲ್ಲಿ. ಚಂದ್ರಶೇಖರ ಅಜ಼ಾದ್ ಮತ್ತು ಇನ್ನೂ ಅನೇಕ ಕ್ರಾಂತಿಕಾರಿಗಳು ಪ್ರಾಣತ್ಯಾಗ ಮಾಡಿದ್ದೂ ೧೯೩೦ರ ನಂತರವೇ!
          ಇವರೆಲ್ಲರೂ ಭಾರತದ ಸರ್ವಾಧಿಕಾರಿಗಳಾಗಿ ಅಧಿಕಾರ ಹಿಡಿಯುವ ಚಿಂತನೆಯಲ್ಲಿದ್ದರು ಎಂಬುದು ನಿಮ್ಮ ಅಭಿಪ್ರಾಯವೇ?
          ೧೯೩೦ರಲ್ಲೇ ಸ್ವಾತಂತ್ರ್ಯ ಬರುವುದು ಖಚಿತವಾಗಿದ್ದರೆ, ಅದು ಬರಲು ೧೭ ವರ್ಷಗಳೇಕೆ ಬೇಕಾದವು?
          ೧೯೪೬ರಲ್ಲಿ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ನಡೆದ ಈ ಚರ್ಚೆಯನ್ನು ಗಮನಿಸುವುದೊಳ್ಳೆಯದು.
          ಚರ್ಚೆ ನಡೆದದ್ದು ವಿರೋಧ ಪಕ್ಷದ ನಾಯಕ ಚರ್ಚಿಲ್ ಮತ್ತು ಪ್ರಧಾನಿ ಕ್ಲೆಮೆಂಟ್ ಆಟ್ಲೀ ನಡುವೆ.
          “ಏನೇ ಆದರೂ ಭಾರತಕ್ಕೆ ನಾವು ಸ್ವಾತಂತ್ರ್ಯ ನೀಡುವುದಿಲ್ಲ ಎಂದು ೧೯೪೪ರಲ್ಲೇ ಘೋಷಿಸಿದ್ದೆವು. ಹೀಗಿರುವಾಗ, ನೀವು ಈಗೇಕೆ ಸ್ವಾತಂತ್ರ್ಯ ನೀಡುವ ಪ್ರಕ್ರಿಯೆ ಪ್ರಾರಂಭಿಸಿರುವಿರಿ” ಎಂದು ಚರ್ಚಿಲ್ ಪ್ರಶ್ನಿಸುತ್ತಾರೆ.
          ಅದಕ್ಕುತ್ತರಿಸುತ್ತಾ ಆಟ್ಲೀ ಹೀಗೆ ಹೇಳಿದ್ದಾರೆ: “ಭಾರತದಲ್ಲಿ ನಡೆದ INA trial ಗೆ ಪ್ರತಿಭಟನೆಯಾಗಿ ನೌಕಾ ಬಂಡಾಯ ತಲೆಯೆತ್ತಿದೆ. ಭಾರತೀಯ ಸೈನಿಕರು ಎಲ್ಲೆಡೆ ಬಂಡೇಳುವ ಸೂಚನೆಗಳು ಕಾಣುತ್ತಿವೆ. ೧೯೪೪ರಲ್ಲಿ ಭಾರತದ ಸೈನ್ಯ ನಾವು ಹೇಳಿದಂತೆ ಕೇಳುತ್ತಿತ್ತು. ಇಂದು ಭಾರತೀಯ ಸೈನ್ಯ ನಮ್ಮ ಕೈಮೀರಿ ಹೋಗುತ್ತಿದೆ. ಬ್ರಿಟಿಷರು ಭಾರತದಿಂದ ಗೌರವಯುತವಾಗಿ ಕಾಲ್ದೆಗೆಯಬೇಕಾದರೆ, ನಾವು ಅವರಿಗೆ ಸ್ವಾತಂತ್ರ್ಯನೀಡಲೇಬೇಕು”!!
          ೧೯೩೦ರಲ್ಲೇ ಸ್ವಾತಂತ್ಯ್ರ ನೀಡುವುದು ಖಚಿತವಾಗಿದ್ದರೆ, ಚರ್ಚಿಲ್ ಏಕೆ ಈ ರೀತಿ ಪ್ರಶ್ನಿಸಿದರು?

          ಉತ್ತರ
  11. Prasad V Murthy's avatar
    ಆಕ್ಟೋ 2 2012

    ನಿಮ್ಮ ವಸ್ತುವಿನ ಒಡಲನ್ನು ಸಮರ್ಥಿಸುವಲ್ಲಿ ಪೂರ್ಣ ಅಂಕಗಳನ್ನು ಗಳಿಸಿಕೊಂಡಿದ್ದೀರಿ ಅಮೀನ್. ನಿಮ್ಮ ಮಾತಿನಲ್ಲಿ ಸತ್ಯವಿರಬಹುದು! ಇತಿಹಾಸವನ್ನು ತಿರುವಿಹಾಕಿದರೆ ಗಾಂಧೀ ಮತ್ತು ನೆಹರೂರವರ ದ್ವಂದ್ವ ಪ್ರೌವೃತ್ತಿಗಳು ಇಂತಹ ಅನುಮಾನಗಳಿಗೆ ಎಡೆಮಾಡಿಕೊಡುತ್ತವೆ. ನೀವು ಹೇಳುವುದನ್ನು ಒಪ್ಪಿಕೊಳ್ಳುವುದಾದರೂ ೧೯೩೦ ರ ನಂತರ ನಡೆದ ಸ್ವಾರ್ಥ ಸಾಧನೆಯ ಮೇಲಾಟಗಳಲ್ಲಿ ಜಿನ್ನಾರವರ ಪಾತ್ರವೂ ಪ್ರಮುಖವಾದದ್ದು ಎಂಬುದನ್ನು ಅಲ್ಲಗೆಳೆಯಲಾಗದು. ಒಂದು ಒಳ್ಳೆಯ ಲೇಖನ, ನಿಮ್ಮ ನಿರೂಪಣೆ ಮೆಚ್ಚುವಂತದ್ದು.

    ಉತ್ತರ
  12. anand prasad's avatar
    anand prasad
    ಆಕ್ಟೋ 4 2012

    ಗಾಂಧೀಜಿಯವರಿಗೆ ಅಧಿಕಾರದ ಅಸೆ ಇದ್ದಿದ್ದರೆ ಪ್ರಧಾನಮಂತ್ರಿಯಾಗಬಹುದಿತ್ತು, ತನ್ನ ಮಗನನ್ನೂ ಪ್ರಧಾನ ಮಂತ್ರಿ ಮಾಡಬಹುದಿತ್ತು. ಆದರೆ ಗಾಂಧೀಜಿಯ ಮಕ್ಕಳಾಗಲಿ, ಮೊಮ್ಮಕ್ಕಳಾಗಲಿ, ಮರಿಮಕ್ಕಳಾಗಲೀ ರಾಜಕೀಯ ಅಧಿಕಾರಕ್ಕೆ ಬಂದಿಲ್ಲ ಎಂಬುದು ಏನನ್ನು ಸೂಚಿಸುತ್ತದೆ? ಜಿನ್ನಾ ಜಾತ್ಯತೀತ ವ್ಯಕ್ತಿ ಎಂಬುದು ನಿಜ. ಆದರೆ ಅವರು ಅಧಿಕಾರದ ಆಸೆಗಾಗಿ ಧಾರ್ಮಿಕ ಮೂಲಭೂತವಾದಿಗಳ ಬೆಂಬಲಕ್ಕೆ ನಿಂತು ಬ್ರಿಟಿಷರು ತೋಡಿದ ಹಳ್ಳದಲ್ಲಿ ಬಿದ್ದು ಮತ್ತೆಂದೂ ಮೂಲಭೂತವಾದದ ಗುಂಡಿಯಿಂದ ಮೇಲೇಳಲಾರದೆ ಹೋದರು. ಅಂದು ಜಿನ್ನಾ ಆರಂಭಿಸಿದ ಧಾರ್ಮಿಕ ಮೂಲಭೂತವಾದವೆಂಬ ಹುಲಿಯ ಮೇಲಿನ ಸವಾರಿಯಿಂದ ಪಾಕಿಸ್ತಾನ ಕೆಳಗೆ ಇಳಿಯಲಾರದೆ ಒದ್ದಾಡುತ್ತಿದೆ. ಪಾಕಿಸ್ತಾನ ನಿರ್ಮಾಣವಾದ ಕೆಲವೇ ದಿನಗಳಲ್ಲಿ ಜಿನ್ನಾರು ಭ್ರಮನಿರಸನಗೊಂಡು ಖಿನ್ನರಾದರು ಏಕೆಂದರೆ ಅವರು ಎಣಿಸಿದಂತೆ ಪಾಕಿಸ್ತಾನವನ್ನು ಜಾತ್ಯತೀತ ಪ್ರಜಾಸತ್ತಾತ್ಮಕ ರಾಷ್ಟ್ರವನ್ನಾಗಿ ಮಾಡುವಲ್ಲಿ ಅವರು ಆರಂಭದಲ್ಲಿಯೇ ವಿಫಲರಾದರು.

    ಉತ್ತರ
  13. anand prasad's avatar
    anand prasad
    ಆಕ್ಟೋ 4 2012

    ಗಾಂಧಿ ದೇಶವಿಭಜನೆಯನ್ನು ತಡೆಯಲಿಲ್ಲ ಎಂಬ ಆರೋಪವು ಸಮರ್ಪಕವಾಗಿ ಕಾಣುವುದಿಲ್ಲ. ಗಾಂಧೀಜಿ ದೇಶ ವಿಭಜನೆಯನ್ನು ತಡೆಯಲು ತಮ್ಮಿಂದ ಆಗುವಷ್ಟು ಪ್ರಯತ್ನಿಸಿದ್ದರು. ಆದರೆ ಮೂಲಭೂತವಾದದ ಅಮಲಿಗೆ ಸಿಲುಕಿದ್ದವರು ಅದನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಮುಸ್ಲಿಮರಿಗೆ ಬೇರೆ ದೇಶ ಬೇಕು ಎಂದು ಹೊರಟವರು ‘ನೇರ ಕಾರ್ಯಾಚರಣೆ ದಿನ’ (direct action day) ಆಚರಿಸಿ ಮಹಾ ಹಿಂಸಾಕಾಂಡವನ್ನು ಆರಂಭಿಸಿ ೫೦೦೦ ಜನರ ಹತ್ಯಾಕಾಂಡವನ್ನು ನಡೆಸಿದಾಗ ಇಡೀ ದೇಶವೇ ಅಂತರ್ಯುದ್ಧದ ಹಿಂಸೆಯ ಭೀತಿಗೆ ಸಿಲುಕಿದಾಗ ಗಾಂಧೀಜಿ ಗತ್ಯಂತರವಿಲ್ಲದೆ ಸುಮ್ಮನಾಗಬೇಕಾಯಿತು. ವಿಭಜನೆಯಾದರೂ ಲಕ್ಷಾಂತರ ಜನರ ಮಾರಣಹೋಮವನ್ನು ತಡೆಯಲಾಗಲಿಲ್ಲ. ವಿಭಜನೆಗೆ ಒಪ್ಪಿರದೆ ಇದ್ದಿದ್ದರೆ ದೇಶಾದ್ಯಂತ ಕೋಟ್ಯಂತರ ಜನರ ಮಾರಣಹೋಮ ಆಗುವ ಸಂಭವವೂ ಇತ್ತು.

    ಉತ್ತರ
  14. SSNK's avatar
    ಆಕ್ಟೋ 4 2012

    ಗಾಂಧೀಜಿಯವರು ಅಧಿಕಾರಕ್ಕೆ ಆಸೆ ಪಡಲಿಲ್ಲ ಎನ್ನುವುದು ಸತ್ಯ.
    ಅವರು ತಮ್ಮ ಧ್ಯೇಯಗಳಾದ ಸತ್ಯ, ಅಹಿಂಸೆ, ಸ್ವದೇಶಿ, ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು.
    ದೇಶವಿಭಜನೆಯ ವಿಷಯದಲ್ಲಿ ಅವರು ಸ್ವಲ್ಪಕಾಲ ತಾಳಬಹುದಿತ್ತು ಎನ್ನುವುದು ಒಂದು ಅಭಿಪ್ರಾಯ.
    ಏಕೆಂದರೆ, ಅಷ್ಟು ಹೊತ್ತಿಗಾಗಲೇ INA trials ಪ್ರಾರಂಭವಾಗಿ ನೌಕಾ ಬಂಡಾಯ ತಲೆಯೆತ್ತಿತ್ತು. ಭಾರತೀಯ ಸೈನ್ಯವೂ ಬ್ರಿಟಿಷರ ವಿರುದ್ಧ ಬಂಡಾಯವೇಳುವ ಸೂಚನೆಗಳಿದ್ದವು.
    ಹೀಗಾಗಿ ಬ್ರಿಟಿಷರು ಭಾರತ ಬಿಟ್ಟು ಹೋಗುವುದು ನಿಶ್ಚಿತವಿತ್ತು. ಅವರಿಗೆ ಭಾರತವನ್ನು ಬಿಟ್ಟು ಹೋಗುವ ಆತುರ ಎಷ್ಟಿತ್ತೆಂದರೆ, ಜುಲೈ ೧೯೪೮ಕ್ಕೆ ನಿಗಧಿಯಾಗಿದ್ದ ದಿನಾಂಕವನ್ನು ಆಗಸ್ಟ್ ೧೫ ೧೯೪೭ಕ್ಕೆ ಹಿಂದೂಡಿಬಿಟ್ಟರು!
    ಇನ್ನು ಜಿನ್ನಾ ತೀವ್ರ ಖಾಯಿಲೆಯಿಂದ ನರಳುತ್ತಿದ್ದರು. ಅವರು ಹೆಚ್ಚುದಿನ ಉಳಿಯುವ ಸ್ಥಿತಿಯಲ್ಲಿರಲಿಲ್ಲ.
    ಮತ್ತು ಕಾಂಗ್ರೆಸ್ಸಿನ ಸ್ಥಿತಿ ಬಲವಾಗಿತ್ತು. ಗಾಂಧೀಜಿಯವರಂತ ಪ್ರಭಾವಿ ನಾಯಕರಿದ್ದರು. ಜಿನ್ನಾರಿಗಿಂತ ಅವರು ಹೆಚ್ಚು ಪಟ್ಟುಹಿಡಿದು ಕುಳಿತಿದ್ದರೆ, ವಿಭಜನೆ ಆಗುತ್ತಿರಲಿಲ್ಲ ಎಂದು ಅನೇಕ ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
    ಹೋಗಲಿ, ವಿಭಜನೆ ಅನಿವಾರ್ಯವಾಗಿತ್ತು ಎಂದೇ ಒಪ್ಪಿಕೊಳ್ಳೋಣ. ಭಾರತದಲ್ಲಿ ಇಂದು ಹಿಂದು-ಮುಸಲ್ಮಾನರ ನಡುವೆ ಇರುವ ಕಂದಕವನ್ನು ನೋಡಿದವರು ವಿಭಜನೆ ಮಾಡಿದ್ದು ಒಳ್ಳೆಯದೇ ಆಯ್ತೆಂದು ಹೇಳುತ್ತಾರೆ.
    ಮತದ ಆಧಾರದ ಮೇಲೆ ವಿಭಜನೆ – ಮುಸಲ್ಮಾನರಿಗೆ ಪಾಕಿಸ್ತಾನ ಮತ್ತು ಹಿಂದುಗಳಿಗೆ ಹಿಂದುಸ್ಥಾನ.
    ಇದಕ್ಕೆ ಒಪ್ಪಿಕೊಂಡಮೇಲೆ “Exchange of population”ಗೆ ಅವರು ಒಪ್ಪಬೇಕಿತ್ತು. ಹಾಗೇನಾದರೂ ಆಗಿದ್ದಲ್ಲಿ ಭಾರತದಲ್ಲಿ ಇಂದು ಇರುವ ಅನೇಕ ಸಮಸ್ಯೆಗಳು ಇರುತ್ತಿರಲಿಲ್ಲ.
    ಡಾ|| ಅಂಬೇಡ್ಕರ್ ಅವರೂ ಸಹ, ತಮ್ಮ “Thoughts on Pakistan” ಪುಸ್ತಕದಲ್ಲಿ ಇದೇ ಅಭಿಪ್ರಾಯವನ್ನು ಹೇಳಿದ್ದಾರೆ.
    ಆದರೆ, ಗಾಂಧೀಜಿಯವರು ಇದಕ್ಕೊಪ್ಪಲಿಲ್ಲ.
    ಪ್ರಜಾಪ್ರಭುತ್ವವೆಂದ ಮೇಲೆ ಅನೇಕ ರೀತಿಯ ಅಭಿಪ್ರಾಯಗಳಿರುತ್ತವೆ. ಆದರೆ, ನನ್ನ ಅಭಿಪ್ರಾಯಕ್ಕೆ ಮಾತ್ರ ಮನ್ನಣೆ ನೀಡಬೇಕೆಂದರೆ ಅದು ಪ್ರಜಾಪ್ರಭುತ್ವವೆನಿಸುವುದಿಲ್ಲ ಅಲ್ಲವೆ?
    ಗಾಂಧೀಜಿ “Exchange of polulation” ಆಗಕೂಡದೆಂದು ಪಟ್ಟುಹಿಡಿದರು ಮತ್ತು ಅದಕ್ಕಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿಬಿಟ್ಟರು.
    ಆಗಸ್ಟ್ ೧೫ಕ್ಕೆ ಪಾಕಿಸ್ತಾನ ಹುಟ್ಟಿತು; ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಕಾಶ್ಮೀರ ಕಬಳಿಸಲು ತನ್ನ ಸೈನ್ಯವನ್ನು ನುಗ್ಗಿಸಿತು.
    ಅದೇ ಸಮಯಕ್ಕೆ ಪಾಕಿಸ್ತಾನಕ್ಕೆ ೧೦೦ ಕೋಟಿ ರೂ ಸಹಾಯ ನೀಡಬೇಕೆಂದು ಗಾಂಧೀಜಿ ಸರಕಾರಕ್ಕೆ ಹೇಳಿದರು. ಸರಕಾರ ಒಪ್ಪಲಿಲ್ಲ.
    ಮತ್ತೊಮ್ಮೆ ಗಾಂಧೀಜಿ ತಮ್ಮ ಮಾತನ್ನು ನಡೆಸಿಕೊಡಲೇ ಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಕುಳಿತುಬಿಟ್ಟರು!
    ಲಕ್ಷಾಂತರ ಜನ ನಮ್ಮ ದೇಶವಾಸಿಗಳೇ ರಾತ್ರಿ ಹಗಲಾಗುವುದರೊಳಗೆ ನಮ್ಮ ದೇಶದಲ್ಲೇ ನಿರಾಶ್ರಿತರಾಗಿಬಿಟ್ಟಿದ್ದರು; ಲಕ್ಷಾಂತರ ಜನರ ಕಗ್ಗೊಲೆ ನಡೆಯುತ್ತಿತ್ತು; ಬಗಲಿಗೆ ಚೂರಿ ಹಾಕುವಂತೆ ಪಾಕಿಸ್ತಾನ ಸೈನ್ಯ ಒಳನುಗ್ಗಿಸಿತ್ತು; ಭಾರತದ ಸರಕಾರವೂ ಹೊಸತಾಗಿತ್ತು ಮತ್ತು ಅನುಭವವಿರಲಿಲ್ಲ; ಇಂತಹ ಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ೧೦೦ ಕೋಟಿ ರೂ ಸಹಾಯ ನೀಡಲೇಬೇಕೆಂಬ ಪಟ್ಟು ಹಿಡಿದದ್ದಕ್ಕೆ ಏನೆನ್ನೋಣ?

    ಇವನ್ನೆಲ್ಲಾ ನೋಡಿದಾಗ, ಗಾಂಧೀಜಿ ೨ ವಿಷಯದಲ್ಲಿ ಎಡವಿದರೆನ್ನಿಸುತ್ತದೆ.
    ಒಂದು, ವಿಭಜನೆಯ ನಂತರ “Exchange of population”ಗೆ ಒಪ್ಪದಿದ್ದುದು.
    ಎರಡು, ತಮ್ಮ ಮಾತೇ ನಡೆಯಬೇಕೆಂದು ಒತ್ತಾಯಿಸಿ ಆಮರಣಾಂತ ಉಪವಾಸದ ಗುಮ್ಮ ಇಡುತ್ತಿದ್ದುದು!

    ಉತ್ತರ
  15. gunashekaramurthy's avatar
    ಆಕ್ಟೋ 5 2012

    ಮುಸಲ್ಮಾನರು ಎಲ್ಲರೂ ಹೊರಗಿನಿಂದ ಬಂದವರಲ್ಲ. ನಮ್ಮ ಹಿಂದೂ ಧರ್ಮದ ನ್ಯೂನತೆಯ ಕಂಡು ಜಾತಿ ಬದುಕಿನ ಪ್ರೆಶ್ನೆಯಾಗಿ ರಾಜಕೀಯ ಒತ್ತಡದಿಂದಲೂ ಮತಾಂತರ ಹೊಂದಿದವರಾಗಿದ್ದರು. ಮುಸಲ್ಮಾನರು ಈ ದೇಶದ ಸ್ವಾತಂತ್ರ ಹೋರಾಟದಲ್ಲಿಯು ಹಿಂದೆ ಬಿದ್ದಿರಲಿಲ್ಲ. ಅವರ ಕೊಡಿಗೆಯು ಅಪಾರ. ಮುಂದೆ ದೇಶದಲ್ಲಿ ಧರ್ಮ ಧರ್ಮದಲ್ಲಿ ಹಿಂದೂ ಮುಸ್ಲಿಮರ ಕಲಹಗಳು ಹೆಚ್ಚಿದ್ದಕಾಲ ಆಗ ಹೇಳಿದರು ಗಾಂಧಿಯು ನಮ್ಮ ರಾಷ್ಟ್ರಕ್ಕೆ ಒಬ್ಬ ಮುಸ್ಲಿಮನನ್ನು ಪ್ರಧಾನ ಮಂತ್ರೀಯಾಗಿ ಮಾಡಿದರೇ, ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಅಂದೇ ಹೇಳಿದ್ದರು. ಅದನ್ನು ಕೇಳುವ ಮನಸ್ಸಿನಲ್ಲಿ ಹಿಂದೂವಾದಿಗಳು ವಲ್ಲಭಾಯಿ ಪಟೇಲರು ಮತ್ತಿತರರು ಒಪ್ಪುವರಾಗಿರಲಿಲ್ಲ. ಮತ್ತೇ ನಮ್ಮ ಹಿಂದೂ ನಾಯಕನೇ ಪ್ರಧಾನಮಂತ್ರೀ ಯಾಗಲೇಬೇಕೆಂದು ಹಟಹಿಡಿದರು. ಗಾಂಧಿಯು ಅವರನ್ನು ಸರಿದಾರಿಗೆ ತರುವಲ್ಲಿ ಯಶಸ್ಸನ್ನು ಕಾಣಲಾಗಲೇ ಇಲ್ಲ. ಮುಂದೇ ನಾವು ಹಿಂಸೆ ಪಡುವುದೇ ಆಗಿದೆ ಇದಕ್ಕೆ ಮುಖ್ಯಕಾರಣ ಹಿಂದುಗಳ ಸಂಕುಚಿತ ಭಾವನೆಯೇ ಕಾರಣವೆನ್ನುವುದ ಮರೆಯದಿರಿ.

    ಮಹಮದ್ ಆಲಿ ಜಿನ್ನಾರು ಪಾಕಿಸ್ಥಾನದ ಸಂಸ್ಥಾಪಕನೆಂದೆರು ಈ ಉಪಖಂಡದಲ್ಲಿ ನೆಲೆಸಿರುವ ಹಿಂದೂಗಳು ಮತ್ತು ಮುಸ್ಲೀಮರು ಬೇರೆ ಬೇರೆ ನೆಲೆಯಲ್ಲಿ ರಾಷ್ಟ್ರಗಳಾದರೂ ಎರಡು ಸಿದ್ಧಾಂತವನ್ನೇ ಪ್ರತಿಪಾದಿಸಿದ್ದರು. ತಮ್ಮ ರಾಷ್ಟ್ರದ ರಚನೆಯಾದ ಬಳಿಕ ತಾತ್ವಿಕ ಸಿದ್ಧಾಂತವನ್ನು ಧರ್ಮದಿಂದ ರಾಷ್ಟ್ರಿಯತೇ ಭಾವನೆಗೆ ಬದಲಾಯಿಸಿಕೊಂಡಿದ್ದರು. ಅದು ಹೇಗೆಂದರೇ, ತಮ್ಮ ಪಾಕಿಸ್ಥಾನದ ಸಂವಿಧಾನ ಮೊದಲ ಸಭೆಯಲ್ಲಿ ಮಾಡಿದ ಬಾಷಣವೇ ಇಲ್ಲಿ ಮುಖ್ಯ ಸಂದೇಶವಾಗಿರುತ್ತದೆ. ಹಿಂದೂಗಳು ನೀವು ಗುಡಿ ಮಂದಿರ ದೇವಾಲಯಗಳಿಗೆ ಹೋಗಲು ಮುಕ್ತರು ಅದೇ ರೀತಿ, ಮಸೀದಿ ಅಥವಾ ಪಾಕಿಸ್ಥಾನದಲ್ಲಿರುವ ಪೂಜಾಮಂದೀರಗಳಿಗೆ ( ಚರ್ಚು ) ಹೋಗಲು ಮುಕ್ತರು. ಹಿಂದೂಗಳು ಹಿಂದೂವಾಗಿರುವುದಿಲ್ಲ ಮುಸ್ಲೀಮರು ಮುಸ್ಲೀಮರಾಗಿರುವುದಿಲ್ಲ. ಇದು ಧಾರ್ಮಿಕ ಅರ್ಥದಲ್ಲಲ್ಲ. ಏಕೆಂದರೆ, ಧಾರ್ಮಿಕ ನಂಭಿಕೆಗಳು ಒಬ್ಬೊಬ್ಬ ವ್ಯೆಕ್ತಿಯ ವೈಕ್ತಿಕ ವಿಚಾರ. ಆದರೇ, ರಾಜಕೀಯ ಅರ್ಥದಲ್ಲಿ ಎಲ್ಲರೂ….. ಎಲ್ಲರೂ ಈ ರಾಷ್ಟ್ರದ ಪ್ರೆಜೆಗಳು. ಇಲ್ಲಿ ಹಿಂದೂಗಳಿಗಾಗಲೀ ಇತರಿಗಾಗಲೀ ಏನಾದರೂ ತೊಂದರೆಯಾದಲ್ಲಿ ನಾನು ಮಾತನಾಡುವುದಿಲ್ಲ ನಮ್ಮ ಬಂದೂಕಗಳು ಮಾತನಾಡುತ್ತವೆ ಎಂದರು. ಅಂದರೇ, ಯಾರಿಗೂ ತೊಂದರೆ ಕೊಡಬಾರದೆಂದು ಒತ್ತಿ ಹೇಳಿರುತ್ತಾರೆ.

    ಉತ್ತರ
  16. gunashekaramurthy's avatar
    ಆಕ್ಟೋ 5 2012

    ಮಹಾತ್ಮ ಗಾಂಧಿಯ ಬಗ್ಗೆ ಕೀಳಾಗಿ ಅವಹೇಳನವಾಗಿ ಮಾತನಾಡಲು ಬರೆಯಲು ಕಣದ ಕಿಂಚತ್ತು ಯೋಗ್ಯತೆ ಇಲ್ಲವೆಂದೆ ಹೇಳಬೇಕಾಗುತ್ತದೆ

    ಉತ್ತರ
    • SSNK's avatar
      ಆಕ್ಟೋ 6 2012

      > ಮಹಾತ್ಮ ಗಾಂಧಿಯ ಬಗ್ಗೆ ಕೀಳಾಗಿ ಅವಹೇಳನವಾಗಿ ಮಾತನಾಡಲು ಬರೆಯಲು ಕಣದ ಕಿಂಚತ್ತು ಯೋಗ್ಯತೆ ಇಲ್ಲವೆಂದೆ ಹೇಳಬೇಕಾಗುತ್ತದೆ
      ಇತಿಹಾಸದ ಚರ್ಚೆಯಲ್ಲಿ ಭಾವನೆಗಳನ್ನು ಸ್ವಲ್ಪಕಾಲ ಪಕ್ಕಕ್ಕಿಡುವುದು ಒಳ್ಳೆಯದು. ಆಗಮಾತ್ರ ವಸ್ತುನಿಷ್ಠ ಅಧ್ಯಯನ ಸಾಧ್ಯ.
      ಮಹಾತ್ಮಾ ಗಾಂಧೀಜಿಯವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆಂಬ ನಿಮ್ಮ ಭಾವನೆಯೇ ತಪ್ಪು.
      ಇತಿಹಾಸದ ಆಧಾರದ ಮೇಲೆಯೇ ಇಲ್ಲಿ ಚರ್ಚೆ ನಡೆಸುತ್ತಿರುವುದು. ಗಾಂಧೀಜಿಯವರ ಸರಳತೆ, ಸತ್ಯಸಂದತೆ, ಅಹಿಂಸಾಪಾಲನೆ, ಇತ್ಯಾದಿಗಳ ಕುರಿತಾಗಿ ಎಲ್ಲರಿಗೂ ಗೌರವವಿದ್ದೇ ಇದೆ. ಇದಕ್ಕಾಗಿ ಅವರನ್ನು ಮಹಾತ್ಮ ಎಂದು ಕರೆಯುತ್ತಿರುವುದು.
      ಆದರೆ, ಭಾರತದ ಸ್ವಾತಂತ್ರ್ಯ, ಭಾರತದ ವಿಭಜನೆ, ಭಾರತದಲ್ಲಿರುವ ಮುಸಲ್ಮಾನರ ಸಮಸ್ಯೆ, ಇತ್ಯಾದಿಗಳಲ್ಲಿ ಗಾಂಧೀಜಿಯವರ ನೇರಪಾತ್ರವಿದೆ.
      ಕೇವಲ ಪಾತ್ರವಲ್ಲ, ಪ್ರಭಾವವೂ ಇದೆ. ಹೀಗಾಗಿ, ಅವುಗಳಿಗೆ ಸಂಬಂಧಿಸಿದಂತೆ ಚರ್ಚಿಸುವಾಗ ಅವರ ಪಾತ್ರವೂ ಚರ್ಚೆಗೆ ಬರುತ್ತದೆ ಮತ್ತು ಅದಕ್ಕಾಗಿ ಟೀಕಿಸಬೇಕಾಗುತ್ತದೆ.
      ಆದರೆ, ಆ ರೀತಿಯ ಟೀಕೆಗೆ ಗಾಂಧೀಜಿಯವರ ಮೇಲಿನ ಅಗೌರವ ಕಾರಣವಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ.

      ಉತ್ತರ
  17. SSNK's avatar
    ಆಕ್ಟೋ 6 2012

    > ಅದನ್ನು ಕೇಳುವ ಮನಸ್ಸಿನಲ್ಲಿ ಹಿಂದೂವಾದಿಗಳು ವಲ್ಲಭಾಯಿ ಪಟೇಲರು ಮತ್ತಿತರರು ಒಪ್ಪುವರಾಗಿರಲಿಲ್ಲ.
    > ಮತ್ತೇ ನಮ್ಮ ಹಿಂದೂ ನಾಯಕನೇ ಪ್ರಧಾನಮಂತ್ರೀ ಯಾಗಲೇಬೇಕೆಂದು ಹಟಹಿಡಿದರು
    ಇದು ನಿಮ್ಮ ಊಹೆಯಷ್ಟೇ. ಕಾಂಗ್ರೆಸ್ಸಿನ ಇತಿಹಾಸದಲ್ಲಿ ಎಲ್ಲೂ ಇದನ್ನು ಹೇಳಲಾಗಿಲ್ಲ.
    ಪ್ರಧಾನ ಮಂತ್ರಿಯವರಾಗಬೇಕೆಂಬ ಹಠ ಇದ್ದುದು ಜವಹರಲಾಲ ನೆಹರೂ ಅವರಿಗೆ. ನೆಹರೂ ಅವರನ್ನೇ ಪ್ರಧಾನಿಯನ್ನಾಗಿ ಮಾಡಬೇಕೆಂಬ ಹಠ ಗಾಂಧೀಜಿಯವರಿಗಿತ್ತು.
    ೧೯೪೬ರಲ್ಲಿ ನಡೆದ “ಕಾಂಗ್ರೆಸ್ ವರ್ಕಿಂಗ್ ಕಮಿಟೀ” ಚುನಾವಣೆಯಲ್ಲಿ ನೆಹರೂ ಅವರಿಗೆ ಒಂದು ಮತವೂ ಬೀಳಲಿಲ್ಲ. ೪/೫ರಷ್ಟು ಬಹುಮತ ಸರ್ದಾರ್ ಪಟೇಲರಿಗೆ ಸಿಕ್ಕಿತು.
    ಇದರಿಂದ ವಿಚಲಿತರಾದ ಗಾಂಧೀಜಿಯವರು ಕೂಡಲೇ ತಮ್ಮ ನಾಮಪತ್ರವನ್ನು ಹಿಂದೆ ಪಡೆಯುವಂತೆ ಪಟೇಲರ ಮೇಲೆ ಒತ್ತಡ ಹಾಕಿದರು.
    ಸರ್ದಾರ ಪಟೇಲರು ದೇಶಭಕ್ತರಾಗಿದ್ದರು ಮತ್ತು ಗಾಂಧೀಜಿಯವರ ಕುರಿತಾಗಿಯೂ ಅಪಾರ ಗೌರವ ಹೊಂದಿದ್ದರು – ಅವರು ಗಾಂಧೀಜಿಯವರ ಮಾತಿಗೆ ಬೆಲೆಕೊಟ್ಟು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡು ನೆಹರೂ ಅವರು ಆರಿಸಿ ಬರುವಂತೆ ನೋಡಿಕೊಂಡರು.
    ಮುಸಲ್ಮಾನನೊಬ್ಬ ಪ್ರಧಾನಮಂತ್ರಿಯಾಗಬೇಕೆಂದು ಗಾಂಧೀಜಿಯವರು ಎಂದೂ ಹೇಳಿರಲಿಲ್ಲ. ಹಾಗೇನಾದರೂ ಅವರ ಮನಸ್ಸಿನಲ್ಲಿ ಪ್ರಾಮಾಣಿಕ ಕಳಕಳಿ ಇದ್ದದ್ದೇ ಆದಲ್ಲಿ, ೧೯೪೬ರ ಚುನಾವಣೆಯಲ್ಲಿ ನೆಹರೂ ಅವರ ಬದಲಿಗೆ ಅಜ಼ಾದ್ ಅವರನ್ನು ನಿಲ್ಲಿಸುತ್ತಿದ್ದರು.
    ಹಾಗೆ ನೋಡಿದರೆ, ದೇಶವನ್ನು ವಿಭಜನೆ ಮಾಡುವ ಬದಲು ಮಹಮ್ಮದ್ ಆಲಿ ಜಿನ್ನಾ ಅವರನ್ನೇ ಅಖಂಡ ಭಾರತಕ್ಕೆ ಪ್ರಧಾನಿಯನ್ನಾಗಿ ಮಾಡೋಣ ಎಂದು ಪಟೇಲ್ ಸಲಹೆ ನೀಡಿದರು. ಆದರೆ, ಅದಕ್ಕೆ ಗಾಂಧೀಜಿ ಮತ್ತು ನೆಹರೂ ಒಪ್ಪಲಿಲ್ಲ!

    > ಮುಸಲ್ಮಾನರು ಎಲ್ಲರೂ ಹೊರಗಿನಿಂದ ಬಂದವರಲ್ಲ.
    ಮುಸಲ್ಮಾನರು ಹೊರಗಿನಿಂದ ಬಂದವರೆಂದು ಯಾರೂ ಇಲ್ಲಿ ಹೇಳುತ್ತಿಲ್ಲ. ಆದರೆ, ೧೯೪೭ರಲ್ಲಿ “ನಾವೇ ಬೇರೆ ರಾಷ್ಟ್ರ” ಎಂದು ಘೋಷಿಸಿ ಪ್ರತ್ಯೇಕ ದೇಶಕ್ಕಾಗಿ ಒತ್ತಾಯಿಸಿ ಗಿಟ್ಟಿಸಿಕೊಂಡದ್ದು ಮುಸಲ್ಮಾನರೇ. ಹಿಂದುಗಳೆಂದೂ ಅವರಿಗೆ ನೀವು ಪರಕೀಯರು ದೇಶಬಿಟ್ಟು ಹೋಗಿ ಎಂದು ಹೇಳಿಯೇ ಇಲ್ಲ. ಭಾರತದಲ್ಲಿ ಬದುಕುವವರಿ, ಇಲ್ಲಿನ ಅನ್ನ-ನೀರು ಉಣ್ಣುವವರು ಇಲ್ಲಿನ ಮಕ್ಕಳಂತೆ ಬದುಕಬೇಕು.

    > ಮುಸಲ್ಮಾನರು ಈ ದೇಶದ ಸ್ವಾತಂತ್ರ ಹೋರಾಟದಲ್ಲಿಯು ಹಿಂದೆ ಬಿದ್ದಿರಲಿಲ್ಲ
    ಇದು ನಿಮ್ಮ ಊಹೆಯಷ್ಟೇ. ಕೇವಲ ಬೆರಳೆಣಿಕೆಯಷ್ಟು ಮುಸಲ್ಮಾನರು ಮಾತ್ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಅದಕ್ಕಿಂತ ಬಹುಪಟ್ಟು ಹೆಚ್ಚಿನ ಮುಸಲ್ಮಾನರು “ಮುಸ್ಲಿಂ ಲೀಗ್” ಮೂಲಕ “ಪ್ರತ್ಯೇಕ ರಾಷ್ಟ್ರ”ಕ್ಕಾಗಿ ಹೋರಾಡಿದರು.

    > ತಮ್ಮ ರಾಷ್ಟ್ರದ ರಚನೆಯಾದ ಬಳಿಕ ತಾತ್ವಿಕ ಸಿದ್ಧಾಂತವನ್ನು ಧರ್ಮದಿಂದ ರಾಷ್ಟ್ರಿಯತೇ ಭಾವನೆಗೆ ಬದಲಾಯಿಸಿಕೊಂಡಿದ್ದರು.
    ಊರು ಕೊಚ್ಚಿಹೋದ ಮೇಲೆ ದಿಡ್ಡಿ ಬಾಗಿಲು ಹಾಕಿದರಂತೆ! ಹಾಗಾಯ್ತು ನಿಮ್ಮ ಮಾತು.
    ದೇಶವನ್ನು ಮತದ ಆಧಾರದ ಮೇಲೆ ಒಡೆದು, “ನೇರ ಕಾರ್ಯಾಚರಣೆ”ಯ ಹೆಸರಿನಲ್ಲಿ ಲಕ್ಷಾಂತರ ಹಿಂದುಗಳ ಕಗ್ಗೊಲೆಗೈಯ್ದು, ಸಹಸ್ರಾರು ಹೆಣ್ಣು ಮಕ್ಕಳ ಅಪಹರಣ-ಮಾನಹಾನಿ ಮಾಡಿ, ೧೦ ಲಕ್ಷಕ್ಕೂ ಹೆಚ್ಚು ಹಿಂದುಗಳನ್ನು ತಮ್ಮ ತಾಯ್ನೆಲದಿಂದ ಒಕ್ಕಲೆಬ್ಬಿಸಿ ತಮ್ಮ ನೆಲದಲ್ಲೇ ನಿರಾಶ್ರಿತರನ್ನಾಗಿ ಮಾಡಿ, ಪಾಕಿಸ್ತಾನ ರಚನೆಯಾದ ಕೂಡಲೇ ಕಾಶ್ಮೀರವನ್ನೂ ಕಬಳಿಸಲು ಯುದ್ಧವನ್ನು ನಡೆಸಿ, ಹಿಂದು-ಮುಸಲ್ಮಾನರ ನಡುವೆ ಮುಚ್ಚಲಾರದಷ್ಟು ದೊಡ್ಡ ಕಂದಕವನ್ನು ನಿರ್ಮಾಣ ಮಾಡಿ, ನಂತರ ತಾನು ಜಾತ್ಯಾತೀತ ಎಂದು ಹೇಳಿಕೊಂಡರೇನು ಪ್ರಯೋಜನ?
    ಅವರ ಮನಸ್ಸಿನಲ್ಲಿ ಹಿಂದು-ಮುಸಲ್ಮಾನರು ಒಟ್ಟಾಗಿ ಬಾಳಬೇಕೆಂಬ ಆಸೆ ನಿಜಕ್ಕೂ ಇದ್ದಿದ್ದಲ್ಲಿ, ಅವರು ದೇಶವನ್ನು ಒಡೆಯುವ ಯೋಚನೆಯನ್ನೇ ಮಾಡುತ್ತಿರಲಿಲ್ಲ.

    ದಯವಿಟ್ಟು ಇತಿಹಾಸದ ಅಧ್ಯಯನ ಮಾಡಿರಿ; ಕಾಂಗ್ರೆಸ್ಸಿನ ಇತಿಹಾಸವನ್ನು ತಿಳಿಯಿರಿ; ವಿಭಜನೆಗೆ ಕಾರಣಗಳನ್ನು ಅವಲೋಕಿಸಿ; ಗಾಂಧೀಜಿ ಮತ್ತು ಜಿನ್ನಾ ನಡುವೆ ನಡೆದ ಅನೇಕ ದಿನಗಳ ಚರ್ಚೆಗಳನ್ನು ಓದಿ.
    ಇತಿಹಾಸದ ಸತ್ಯದ ಆಧಾರದ ಮೇಲೆ ಮಾತ್ರ ಚರ್ಚಿಸಿ. ಕೇವನ ನಮಗೆ ಗಾಂಧೀಜಿಯವರ ಮೇಲೆ ಗೌರವವಿದೆಯೆಂದ ಮಾತ್ರಕ್ಕೆ ಇತಿಹಾಸವನ್ನೇ ತಿರುಚಲು ಸಾಧ್ಯವಿಲ್ಲ. ಸತ್ಯವು ಎಂದೆಂದಿಗೂ ಸತ್ಯವೇ!

    ಉತ್ತರ
  18. Nanjunda Raju's avatar
    Nanjunda Raju
    ಆಕ್ಟೋ 10 2012

    ಮಾನ್ಯರೇ, ಸತ್ಯ ಕಹಿ ನಿಜ. ಸತ್ಯ ಯಾವಾಗಲೂ ಸತ್ಯವೇ ಅಲ್ಲವೇ?

    ಉತ್ತರ
  19. ಮಂಜುನಾಯ್ಕ ದಾವಣಗೆರೆ's avatar
    ಮಂಜುನಾಯ್ಕ ದಾವಣಗೆರೆ
    ಏಪ್ರಿಲ್ 9 2020

    ನಿಮ್ಮ ಮಾತು ಅಕ್ಷರ ಸಹ ನಿಜ ಗಾಂಧೀಜಿಯ ಅಸ್ತಿತ್ವಕ್ಕೆ ಅಡ್ಡಿಯಾಗುವ ಭಗತ್ ರಾಜಗುರು ಸುಕದೇವ್ ಪಟೇಲ್ ಸುಭಾಷ್ ಅಂಬೇಡ್ಕರ್ ನಂತಹ ಮಹಾನ್ ವ್ಯಕ್ತಿಗಳನ್ನ ದೂರಮಾಡಿ ತನ್ನ ಛಾಯೆ ಮುಡಿಸಿ ಸಂದಭ೯ಕ್ಕೆ ತಕ್ಕಂತೆ ಸತ್ಯಗ್ರಹವೆಂಬ ಮುಖವಾಡ ಧರಿಸಿ ತನ್ನ ತಾಳಕ್ಕೆ ಕುಣಿವ ಸದಸ್ಯರನ್ನು (ಪಟ್ಟಾಭಿಸೀತಾರಾಮ್,ನೆಹರು,,,)ಬೆಳೆಸುತ್ತಾ ತಮ್ಮ ಚರಿತ್ರೆಗಳಿಗೆ ಕಳಂಕ ತರುವ ಕಡತಗಳನ್ನ ಮರೆಮಾಚುತ್ತಾ ಹೋರಾಟದಲ್ಲಿ ಬಲಿಯಾದ ಸಾವಿರಾರು ಜನರನ್ನು ಮರೆತು ಗಾಂಧಿ ಪೋಟೊ ಇಟ್ಟು ಪೊಜಿಸುವ ಕಾಂಗ್ರೇಸ್ನ ಸುದೀರ್ಘ ಶಾಲಾ ಪಠ್ಯ ದೂರವಾಗಬೇಕು ನೂಟುಗಳ ಮೇಲಿನ ಗಾಂಧಿ ದೂರವಾದ ಮೇಲೆಯೇ ಜಿನ್ನ ಗೊಡ್ಸೆ ನಂತಹ ಅಖಂಡ ಭಾವನಾ ತ್ಯಾಗಿಗಳಿಗೆ ನ್ಯಾಯ ಸಿಕ್ಕಂತಾಗುವುದು ಜಿನ್ನರ ಮೇಲಿದ್ದ ನನ್ನ ತಿರಸ್ಕಾರ ಭಾವನೆಗೆ ಸೂಕ್ತಮಾಹಿತಿಯಿಂದ ಸಮಥಿ೯ಸಿದ್ದಕ್ಕೆ ಧನ್ಯವಾದಗಳು

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments