ಕಾನೂನಿನಂಗಳ ೯ : ಹೆಣ್ಣಿಗೆ ಆಸ್ತಿಯಲ್ಲಿ ಸಮಾನ ಹಕ್ಕು
ಉಷಾ ಐನಕೈ ಶಿರಸಿ
ಭಾರತೀಯ ಸಂಸ್ಕೃತಿಗೆ ಜಾಗತಿಕ ಮಟ್ಟದಲ್ಲಿ ಒಂದು ವಿಶಿಷ್ಟವಾದ ಸ್ಥಾನಮಾನ ಇದೆ. ವೈವಿಧ್ಯಮಯವಾದ ಭೌಗೋಲಿಕ ಸ್ವರೂಪ, ವಿಭಿನ್ನವಾದ ಭಾಷೆ, ಆಚಾರ, ರೂಢಿ ಹೀಗೆ ಭಾರತದಲ್ಲಿ ಸಾಂಸ್ಕೃತಿಕ ವೈವಿಧ್ಯತೆ ಅಪಾರ. ಈ ಕಾರಣಕ್ಕಾಗೇ ಭಾರತದೇಶ ಜಾಗತಿಕ ಕುತೂಹಲದ ತಾಣವಾಗಿದೆ. ಭಾರತೀಯ ಸಮಾಜಕ್ಕೆ ಸಾವಿರಾರು ವರ್ಷಗಳ ಪರಂಪರೆ ಇದೆ. ಇಷ್ಟೊಂದು ವರ್ಷ ಈ ಸಂಸ್ಕೃತಿ ಸುಸಂಬದ್ಧವಾಗಿ ಸಾಗಿಬಂದಿದೆ ಅಂದರೆ ಇದರ ಹಿಂದೆ ನ್ಯಾಯ, ನೀತಿ, ಧರ್ಮ ಮುಂತಾದವುಗಳು ಇದೆ ಅಂತಲೇ ಅರ್ಥ. ಅಂದರೆ ಒಂದು ರೀತಿಯ ಕಾನೂನುಗಳ ಪರಿಕಲ್ಪನೆಯಲ್ಲೇ ನಮ್ಮ ಸಂಸ್ಕೃತಿ ಸಾಗಿಬಂದಿದೆ. ಅದನ್ನೇ ಸಂಪ್ರದಾಯ, ರೂಢಿ, ಶ್ರುತಿ, ಸ್ಮೃತಿ, ಉಪನಿಷತ್ ಮುಂತಾದವುಗಳಾಗಿ ಕಾನೂನಿನ ಅಂಗವೆಂದು ಗುರುತಿಸಲ್ಪಟ್ಟಿವೆ. ನಾವಿಂದು ನೋಡುತ್ತಿರುವ ಹಿಂದೂ ಕಾನೂನು ಪ್ರಾಚೀನ ಭಾರತದಲ್ಲಿನ ಸಂಪ್ರದಾಯ, ಪದ್ದತಿ, ಸ್ಮೃತಿಗಳನ್ನಾಧರಿಸಿಯೇ ಇದೆ.
ಈ ಹಿಂದೂ ಕಾನೂನು ಎನ್ನುವುದು ಎಲ್ಲ ಭಾರತೀಯರಿಗೆ ಅಥವಾ ಹಿಂದೂಗಳು ಎನಿಸಿಕೊಂಡ ಭಾರತೀಯರಿಗೆ ಅನ್ವಯಿಸುತ್ತದೆ. ಇದರಲ್ಲಿ ವಿವಾಹ, ಜೀವನಾಂಶ, ದತ್ತಕ, ವಾರಸಾ, ಸಂರಕ್ಷ ಅಧಿನಿಯಮ, ಆಸ್ತಿ ವಿಭಾಗ ಮುಂತಾದವುಗಳೆಲ್ಲ ಬರುತ್ತವೆ.
ಆಧುನಿಕ ಭಾರತೀಯ ಕಾನೂನುಗಳಲ್ಲೇ ಹಿಂದೂ ಕಾನೂನು ಸ್ವಲ್ಪ ಭಿನ್ನವಾಗಿ ಇದೆ. ಏಕೆಂದರೆ ಉಳಿದ ನಮ್ಮ ಕಾನೂನುಗಳಂತೆ ಇಲ್ಲಿ ಸಂಪೂರ್ಣ ಪಾಶ್ಚಾತ್ಯಮಯವಾಗಿಲ್ಲ. ಈ ಕುರಿತು ಎರಡು ರೀತಿಯ ಧೋರಣೆಗಳನ್ನು ನಾವು ಕಾಣುತ್ತೇವೆ. ಪಾಶ್ಚಾತ್ಯರು ಹಿಂದೂ ಕಾನೂನನ್ನು ರಚಿಸುವಾಗ ಸ್ವಲ್ಪಮಟ್ಟಿನ ಪಕ್ಷಪಾತ ಮಾಡಿದ್ದಾರೆ ಎಂಬುದು ಒಂದೆಡೆಯಾದರೆ ಇನ್ನೊಂದೆಡೆ ಇವು ಹಿಂದೂ ಸಂಸ್ಕೃತ ಪಂಡಿತರು ರಚಿಸಿದ ಕಾನೂನಿನ ಪ್ರಮಾಣಗಳು ಎಂಬ ಟೀಕೆ ಇದೆ. ಮದ್ರಾಸ್ ಉಚ್ಚ ನ್ಯಾಯಾಲಯವು ಒಂದು ಕಡೆ ಅಭಿಪ್ರಾಯಪಡುತ್ತಾ ‘ಸಾಮಾನ್ಯವಾಗಿ ತಿಳಿದುಕೊಂಡಿರಲ್ಪಟ್ಟ ಹಿಂದೂ ಕಾನೂನುಗಳು ಇಂಗ್ಲೆಂಡಿನಲ್ಲಿರುವ ‘ಕಾಮನ್ ಲಾ’ನಂತೆ ಇಲ್ಲ. ಇದು ರಾಜ ನಿರ್ಮಿತ ಶಾಸನ ಅಲ್ಲ. ಅಥವಾ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿರುವುದೂ ಅಲ್ಲ. ಶ್ರುತಿ, ಸ್ಮೃತಿ, ಉಪನಿಷತ್ ಮುಂತಾದವುಗಳ ಸಂಗ್ರಹವಾಗಿದ್ದು ಸಂಸ್ಕೃತ ಪಂಡಿತರು ಈ ಪುಸ್ತಕವನ್ನು ಹಿಂದೂಗಳಿಗೆ ಅನ್ವಯ ವಾಗುವ ಕಾನೂನಿನ ಪ್ರಮಾಣ ಗ್ರಂಥಗಳೆಂದು ಎಣಿಸಿರುವರು’ ಎಂದಿದೆ.
ಏನೇ ಇದ್ದರೂ ಕೂಡ ನಮ್ಮ ಆಧುನಿಕ ಕಾನೂನುಗಳಲ್ಲೇ ಹಿಂದೂ ಕಾನೂನು ಭಾರತೀಯರ ಅನುಭವಗಳಿಗೆ ತೀರ ಹತ್ತಿರವಾಗಿದೆ. ಹಾಗಾಗಿ ಈ ಕಾನೂನು ನಮಗೆ ಸುಲಭವಾಗಿ ಅರ್ಥವಾಗುತ್ತದೆ. ಹಾಗೂ ಅನುಸರಿಸಲು ಸುಲಭ.
ಸಾಮಾನ್ಯವಾಗಿ ಹಿಂದೂ ಕಾನೂನಿಗೆ ಸಂಬಂಧಪಟ್ಟಂತೆ ಭಾರತದಲ್ಲಿ ರೂಢಿಯಲ್ಲಿದ್ದ ಎರಡು ಸಂಪ್ರದಾಯಗಳನ್ನು ಬಳಸಿಕೊಳ್ಳಲಾಗುತ್ತದೆ. ಮಿತಾಕ್ಷರ ಮತ್ತು ದಯಾಭಾಗ. ದಯಾಭಾಗ ಸಂಪ್ರದಾಯವು ಮುಖ್ಯವಾಗಿ ಬಂಗಾಳದಲ್ಲಿ ಮಾತ್ರ ಆಚರಣೆಯಲ್ಲಿದೆ. ದಯಾಭಾಗದಲ್ಲಿ ಮೊದಲಿನಿಂದಲೂ ಸ್ತ್ರೀಯರಿಗೆ ಆಸ್ತಿಯಲ್ಲಿ ಹಕ್ಕು ಇತ್ತು. ಹಾಗಾಗೇ ದಯಾಭಾಗ ಪ್ರಗತಿಶೀಲ ಕಾನೂನು ಎಂದು ಕರೆದದ್ದುಂಟು. ಆದರೆ ದೇಶದ ಉಳಿದ ಎಲ್ಲೆಡೆಯಲ್ಲೂ ಯಾಜ್ಞವಲ್ಕ ್ಯ ಸಂಹಿತೆಯ ಆಧರಿಸಿ ವಿಜ್ಞಾನೇಶ್ವರನು ಬರೆದ ಮಿತಾಕ್ಷರ ಸಂಪ್ರದಾಯವೇ ರೂಢಿಯಲ್ಲಿದೆ.
ಹಿಂದೂ ವಾರಸಾ ಅಧಿನಿಯಮ 1956
1956ಕ್ಕೂ ಪೂರ್ವದಲ್ಲಿ ಮಿತಾಕ್ಷರ ಸಂಪ್ರದಾಯದಂತೆ ಹಿಂದೂ ಮಹಿಳೆಯರಿಗೆ ಆಸ್ತಿಯಲ್ಲಿ ಯಾವುದೇ ಹಕ್ಕಿರಲಿಲ್ಲ. 1937ರಲ್ಲಿ ಹಿಂದೂ ಮಹಿಳಾ ಆಸ್ತಿಯ ಹಕ್ಕಿನ ಶಾಸನ ಬಂದನಂತರ ಕೇವಲ ಮೃತ ಪುರುಷನ ಹೆಂಡತಿಗೆ ಅಂದರೆ ವಿಧವೆಗೆ ಮಾತ್ರ ಆಸ್ತಿಯಲ್ಲಿ ಭಾಗ ನೀಡಲಾಗುತ್ತಿತ್ತು. ವಿಧವೆಯರು ತಮ್ಮ ಆಸ್ತಿಯನ್ನು ಸ್ವಂತ ಜೀವನಕ್ಕಾಗಿ ಅನುಭೋಗಿಸಬಹುದಾಗಿತ್ತೇ ಹೊರತೂ ಅದರ ಮೇಲೆ ಹಕ್ಕು ಚಲಾಯಿಸಿ ಮಾರುವಂತಿರಲಿಲ್ಲ. ಆಕೆಯ ಮರಣದ ನಂತರ ಅದು ಮೂಲ ಆಸ್ತಿಯದೇ ಒಂದು ಭಾಗವಾಗುತ್ತಿತ್ತು. ಮನುಸ್ಮೃತಿಯಲ್ಲಿ ಉಲ್ಲೇಖಿಸಿದಂತೆ ಬಾಲ್ಯದಲ್ಲಿ ತಂದೆ- ತಾಯಿಯರ ಆಶ್ರಯ, ಯೌವನಾವಸ್ಥೆಯಲ್ಲಿ ಗಂಡನ ಆಶ್ರಯ ಹಾಗೂ ಮುಪ್ಪಿನಲ್ಲಿ ಮಕ್ಕಳ ಆಶ್ರಯದಲ್ಲಿರುವ ಹೆಣ್ಣು ಸ್ವತಂತ್ರಳಾಗಿರಲು ಸಾಧ್ಯವಿಲ್ಲ. ಇದನ್ನೇ ‘ನ ಸ್ತ್ರೀ ಸ್ವಾತಂತ್ರ್ಯಮ್ ಅರ್ಹಸಿ’ ಎಂದು ಉಲ್ಲೇಖಿಸಿದ್ದಾನೆ.
1956ರ ಅಧಿನಿಯಮದ ಪೂರ್ವದಲ್ಲಿ ಗಂಡು ಸಂತಾನವಿಲ್ಲದೇ ಹೆಣ್ಣುಮಕ್ಕಳಾದರೆ ಆಗ ಆ ಹೆಣ್ಣುಮಕ್ಕಳಿಗೆ ಆಸ್ತಿಯಲ್ಲಿ ಹಕ್ಕು ನೀಡಲಾಗುತ್ತಿತ್ತು. ಹಿಂದೂ ಕಾನೂನಿನ ಕಲಂ 17ರ ಪ್ರಕಾರ ಆಯಾ ಪ್ರಾಂತ್ಯದ ರೂಢಿ ಅತ್ಯಂತ ಮಹತ್ವದ್ದಾಗಿದೆ. ಅನಾದಿಕಾಲದಿಂದ ನಡೆದುಕೊಂಡುಬರುತ್ತಿರುವ ರೂಢಿಗೇ ಆದ್ಯತೆ ನೀಡಲಾಗುತ್ತದೆ. ಉದಾಹರಣೆಗೆ ಅಳಿಯ ಸಂತಾನ ಪದ್ಧತಿಯಲ್ಲಿ ಹೆಣ್ಣುಮಕ್ಕಳದೇ ಅಧಿಕಾರವಿರುವುದರಿಂದ ಅದೇ ಮುಂದುವರೆದುಕೊಂಡುಬಂದಿದೆ.
ಹಿಂದೂ ವಾರಸಾ ಅಧಿನಿಯಮವು ಹೆಣ್ಣಿಗೆ ಆಸ್ತಿಯಲ್ಲಿ ಹಕ್ಕನ್ನು ಪ್ರಸ್ತಾಪಿಸಿದರೂ ಕೂಡ ಕುಟುಂಬದ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡಿಗೇ ಹೆಚ್ಚಿನ ಹಕ್ಕು ಪ್ರಾಪ್ತವಾಗುತ್ತದೆ. ತಂದೆ-ತಾಯಿ, ಮಗ-ಮಗಳು ಇರುವ ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ತಂದೆಗೆ, ತಾಯಿಗೆ ಹಾಗೂ ಮಗನಿಗೆ ಒಂದೊಂದು ಪಾಲು ಇರುತ್ತದೆ. ಮಗಳಿಗೆ ಹಿಸೆ ಇರುವುದಿಲ್ಲ. ಆದರೆ ತಂದೆ-ತಾಯಿಯರು ತಮ್ಮ ಭಾಗದ ಆಸ್ತಿಯ ಕುರಿತು ವಿಲ್ ಮಾಡದೇ ಮರಣಹೊಂದಿದಲ್ಲಿ ಮಗ ಮತ್ತು ಮಗಳಿಗೆ ಸಮಾನವಾದ ಹಕ್ಕು ಬರುತ್ತದೆ. 1956ರ ನಂತರ ತಂದೆ-ತಾಯಂದಿರ ಸ್ವಯಾರ್ಜಿತ ಆಸ್ತಿಯಲ್ಲೂ ವಿಲ್ ಮಾಡದೇ ಇದ್ದಲ್ಲಿ ಹೆಣ್ಣು ಮತ್ತು ಗಂಡುಮಕ್ಕಳಿಗೆ ಸಮಾನ ಹಕ್ಕು ಪ್ರಾಪ್ತವಾಗುತ್ತದೆ.
ತಂದೆ ಮತ್ತು ತಾಯಿ ಯಾರೇ ಇರಲಿ ತಮ್ಮ ಪಾಲಿನ ಪಿತ್ರಾರ್ಜಿತ ಅಥವಾ ಸ್ವಯಾರ್ಜಿತ ಆಸ್ತಿಯನ್ನು ತಮಗೆ ಇಷ್ಟವಿದ್ದವರಿಗೆ ಮರಣಶಾಸನ ಮಾಡಬಹುದು. ಕೇವಲ ಮಕ್ಕಳಿಗೇ ವಿಲ್ ಮಾಡ ಬೇಕೆಂದೇನೂ ಇಲ್ಲ. ಹಾಗೆಯೇ ಕುಟುಂಬದ ವಿಧವೆ ಮಹಿಳೆ ಕೂಡ ತನ್ನ ಹಕ್ಕನ್ನು ಪಡೆಯಬಹುದು. ಅಷ್ಟೇಅಲ್ಲ, ಅದು ಅವಳ ಸ್ವಂತ ಆಸ್ತಿಯಾಗಿರುವುದರಿಂದ ಆ ಆಸ್ತಿಯ ಮಾಲಿಕಳಂತೆ ಅದನ್ನು ಉಪಭೋಗಿಸಬಹುದು ಅಥವಾ ವಿಲೇವಾರಿ ಮಾಡಬಹುದು.
1994 ಜುಲೈ 30ರಂದು ಕರ್ನಾಟಕ ಸರಕಾರವು 1956ರ ವಾರಸಾ ಅಧಿನಿಯಮದಲ್ಲಿ ತಿದ್ದುಪಡಿ ಮಾಡಿತು. ಈ ತಿದ್ದುಪಡಿಯಂತೆ ಹೆಣ್ಣು ಮಗಳೂ ಕೂಡ ಮಗನಂತೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಪಾಲು ಪಡೆಯುವ ‘ದಾಯಾದಿತ್ವ’ ಹಕ್ಕನ್ನು ಹೊಂದಿರುತ್ತಾಳೆ. ಆದರೆ 1994ರ ಜುಲೈ 30ರ ಮೊದಲೇ ವಿವಾಹವಾಗಿದ್ದಲ್ಲಿ ಅಥವಾ ಕುಟುಂಬದ ಆಸ್ತಿಯನ್ನು ಕುಟುಂಬದ ಸದಸ್ಯರೆಲ್ಲ ವಿಭಾಗ ಮಾಡಿಕೊಂಡಿದ್ದಲ್ಲಿ ಆಕೆಗೆ ಸಮಾನವಾದ ಹಕ್ಕು ಬರಲಾರದು.
ನಂತರ 2005ರಲ್ಲಿ ಹಿಂದೂ ವಾರಸಾ ಅಧಿನಿಯಮದಲ್ಲಿ 1956ರ ಇಡೀ ವಾರಸಾ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಒಂದು ಮಹತ್ವದ ತಿದ್ದುಪಡಿಯಾಯಿತು. ಅದರ ಪ್ರಕಾರ 30 ಡಿಸೆಂಬರ್ 2004ರ ನಂತರದಲ್ಲಿ ಯಾವುದೇ ಕುಟುಂಬದ ಗಂಡು ಹಾಗೂ ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸರಿಸಮಾನವಾದ ಹಕ್ಕು ಪ್ರಾಪ್ತವಾಗುವುದು. ಅಂದರೆ 2005ರ ತಿದ್ದುಪಡಿಯ ಪ್ರಕಾರ 1994ರ ಕರ್ನಾಟಕ ಸರಕಾರದ ತಿದ್ದುಪಡಿ ಅನ್ವಯವಾಗಲಾರದು. ಏಕೆಂದರೆ 2005ಕ್ಕೆ 1994ರ ತಿದ್ದುಪಡಿ ಸಮಾಪ್ತಿಯಾಗಿರುತ್ತದೆ. ಉದಾಹರಣೆಗೆ 20 ಡಿಸೆಂಬರ್ 2004ರ ಪೂರ್ವದಲ್ಲಿಯೇ ಒಂದು ಕುಟುಂಬದಲ್ಲಿ ಆಸ್ತಿ ಮಾರಾಟವಾಗಿದ್ದಲ್ಲಿ ಅಥವಾ ಕುಟುಂಬದ ಸದಸ್ಯರ ನಡುವೆ ನೊಂದಾಯಿತ ಹಿಸೆ ದಸ್ತಾವೇಜು ಆಗಿದ್ದಲ್ಲಿ ಆಗ ಹೆಣ್ಣುಮಕ್ಕಳು ಸಮಾನ ಹಕ್ಕು ಕೇಳುವ ಹಾಗಿಲ್ಲ. ಅಂದರೆ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಾನ ಹಕ್ಕು ಕಾನೂನು 20 ಡಿಸೆಂಬರ್ 2004ರಿಂದ ಅನ್ವಯವಾಗುತ್ತದೆ.
ವಾರಸಾ ಕಾನೂನಿನ ಸ್ವರೂಪ ಹೀಗಿದ್ದರೂ ಕೂಡ ಕೆಲವೊಂದು ಸಂದರ್ಭಗಳಲ್ಲಿ ವಾರಸದಾರರು ತಮ್ಮ ಆಸ್ತಿ ಪಡೆದುಕೊಳ್ಳುವ ಹಕ್ಕನ್ನು ಕಳೆದುಕೊಳ್ಳುತ್ತಾರೆ.
1. ವಿಧವೆಯರು – ಹಿಂದೂ ವಾರಸಾ ಅಧಿನಿಯಮ ಕಲಂ 24ರ ಪ್ರಕಾರ ಮೃತನ ಪತ್ನಿ ವಿಧವೆಯಾಗಿದ್ದು ಆಕೆ ಪುನವರ್ಿವಾಹವಾಗಿದ್ದಲ್ಲಿ ಮೃತನ ಆಸ್ತಿಯ ಹಕ್ಕನ್ನು ಕಳೆದುಕೊಳ್ಳುತ್ತಾಳೆ. ಒಂದೊಮ್ಮೆ ಆಕೆ ಮೃತನ ಉತ್ತರಾಧಿಕಾರತ್ವ ಚಲಾಯಿಸಿ ಆತನ ಆಸ್ತಿ ಪಡೆದ ನಂತರ ಪುನವರ್ಿವಾಹವಾಗಿದ್ದರೆ ಆಕೆ ಮೃತನ ಆಸ್ತಿಯನ್ನು ಕಳೆದು ಕೊಳ್ಳುವುದಿಲ್ಲ.
2. ಕೊಲೆಗಾರ – ಕಲಂ 25ರ ಪ್ರಕಾರ ಮೃತರ ವಾರಸುದಾರ ಆಸ್ತಿ ಪಡೆಯುವ ಸಲುವಾಗಿ ಕೊಲೆ ಮಾಡಿದಲ್ಲಿ ಅಥವಾ ಕೊಲೆಗೆ ಪ್ರೇರಣೆ ನೀಡಿದಲ್ಲಿ ವಾರಸುದಾರನಾಗಿದ್ದರೂ ಆಸ್ತಿ ಪಡೆಯಲಾರ.
3. ಧರ್ಮ ಬದಲಾವಣೆ – ಹಿಂದೂ ಪುರುಷ ಅಥವಾ ಮಹಿಳೆ ಮೃತಪಟ್ಟಲ್ಲಿ ಕಲಂ 26ರ ಪ್ರಕಾರ ಅವರ ವಾರಸುದಾರರು ಹಿಂದೂ ಧರ್ಮವನ್ನು ತ್ಯಜಿಸಿ ಬೇರೆ ಧರ್ಮಕ್ಕೆ ಮತಾಂತರ ಗೊಂಡಿದ್ದರೆ ಅವರು ಮತ್ತು ಅವರ ಮಕ್ಕಳು ಮೃತ ಹಿಂದುವಿನ ಆಸ್ತಿಯಲ್ಲಿ ಪಾಲು ಪಡೆಯುವಂತಿಲ್ಲ.
ಹೀಗೆ ಹಿಂದೂ ವಾರಸಾ ಅಧಿನಿಯಮವು ತುಂಬ ವಿಶಾಲವಾಗಿದ್ದು ಕಾಲಕಾಲಕ್ಕೆ ಸೂಕ್ತ ತಿದ್ದುಪಡಿಯೊಂದಿಗೆ ನ್ಯಾಯ ನೀಡಲು ಪ್ರಯತ್ನಿಸುತ್ತಿದೆ.
* * * * * * * * *
ಚಿತ್ರಕೃಪೆ : foxyladydrivers.com





ನನ್ನ ಪ್ರಶ್ನೆ ಗೆ ಉತ್ತರ ಬೇಕಾಗಿದೆ ದಯವಿಟ್ಟು ಏನು ಮಾಡಬೇಕು ಹೇಳಿ…
ಉಚಿತ ಸಲಹೆ ಬೇಕಾಗಿದೆ ನನಗೆ ತೊಂದರೆ ಇದೆ