ಹೀಗೊಂದು ಅಧುನಿಕ ತುಘಲಕ್ ಸಂಸ್ಕೃತಿ
ಮಧುಚಂದ್ರ ಭದ್ರಾವತಿ
ಅಲ್ಲೊಂದು ದೇವಸ್ಥಾನದ ವಿಮಾನ ಗೋಪುರದ ಪ್ರತಿಷ್ಠಾಪನೆಯ ಕಾರ್ಯಕ್ರಮ. ಕಾರ್ಯಕ್ರಮ ಅಂದರೆ ವೆಲ್ಕಮ್ ಕಮಿಟಿ ಅಂತ ಒಂದು ಕಾಲದಲ್ಲಿ ಇರುತಿತ್ತು . ಅವರು ಮಾತ್ರ ದೇವಸ್ಥಾನದ ರಾಜ ಬೀದಿಯಲ್ಲಿ ” ಕಾರ್ಯಕ್ರಮಕ್ಕೆ ಆಗಮಿಸುವ ಭಕ್ತಾದಿಗಳಿಗೆ ಶುಭ ಕೋರುತ್ತಿದ್ದೇವೆ ” ಅಂತ ಎಲ್ಲೋ ಒಂದು ಬೋರ್ಡ್ ಹಾಕಿ ಕೈ ತೊಳೆದುಕೊಳ್ಳುತಾ ಇದ್ದರು .
ಈಗ ಕಾಲ ಬದಲಾಗಿದೆ ” ವಿಮಾನ ಗೋಪುರದ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಭಕ್ತರಿಗೆ ಶುಭ ಕೋರುವವರು ..” ಎಂದು ಮೂವತ್ತೆರಡು ದಂತ ಪಂಕ್ತಿ ಗಳನ್ನು ಪ್ರದರ್ಶಿಸುತ್ತಾ ಕಾಲ್ಗಟೆ ಸ್ಮೈಲ್ ಕೊಡುತ್ತ ನಿಂತಿರುವ ನರ ರೊಪದ ಅಧುನಿಕ ತುಘಲಕರ ಭಾವ ಚಿತ್ರಗಳು ಎಲ್ಲ್ ಎಲ್ಲಿ ನೋಡಿದರು ರಾರಾಜಿಸುತ್ತಿರುತ್ತವೆ .
ಈ ರೀತಿಯ ಹುಚ್ಚು ಮನಸ್ಸಿನ ಅವಿವೇಕ ಎಲ್ಲಿಂದ ಬಂತೋ ಗೊತ್ತಿಲ್ಲ. ಕೇವಲ ಪ್ರಚಾರ ಮತ್ತು ರಾಜಕೀಯ ಲಾಭ ಮಾಡಿಕೊಳ್ಳಲು ತಮ್ಮ ಇರುವಿಕೆ ಮತ್ತು ಶಕ್ತಿ ಪ್ರದರ್ಶನ ಮಾಡಲು ಕೀಳು ಮಟ್ಟಕ್ಕೆ ಪುಡಾರಿಗಳು ಇಳಿಯುತ್ತಾರೆ. ಆವರಿಗೆ ಸಾತ್ ನೀಡಲು ನಮ್ಮ ನೆಚ್ಚಿನ ಜನ ನಾಯಕ ಎಂದು ಅವರ ಪಕ್ಕದಲ್ಲಿ ತಮ್ಮದೊಂದು ಮುಖಾರವಿಂದ ಇರಲಿ ಎಂದು ಮರಿ ಪುಡಾರಿಗಳು ಊರ ತುಂಬೆಲ್ಲ ಫ್ಲೆಕ್ಷ್ ಹಾಕಿ ಮೆರೆಯುತ್ತಾರೆ.
ಮಳೆಗಾಲಕ್ಕೆ ಸರಿಯಾಗಿ ಮಳೆ ಬರುತ್ತೋ ಇಲ್ಲವೋ, ಹಿಂದೂಗಳ ಹಬ್ಬ ಬಂದಾಗ ಹಿಂದುಗಳಿಗೆ , ಮುಸ್ಲಿಂರ ಹಬ್ಬಕ್ಕೆ ಮುಸ್ಲಿಮರಿಗೆ , ಕ್ರಿಶ್ಚಿಯನ್ನರ ಹಬ್ಬ ಬಂದಾಗ ಕ್ರಿಶ್ಚಿಯನ್ನರಿಗೆ ಶುಭಾಶಯಗಳ ಫ್ಲೆಕ್ಷ್ ಬ್ಯಾನರ್ ಮಾತ್ರ ಬಂದೆ ಬರುತ್ತೆ.
ಇತ್ತೀಚಿಗೆ ಜಾತಿಗಳ ಹೆಸರಲ್ಲಿ ಸಮಾವೇಶಗಳೇನು ಕಮ್ಮಿ ಇಲ್ಲ. ಬುದ್ದ ,ಏಸು , ಬಸವ, ಗಾಂಧಿ,ಅಂಬೇಡ್ಕರ್ ಇವರೆಲ್ಲ ಆಡಂಬರ ಮತ್ತು ಹುಚ್ಚು ಆಚರಣೆಗಳನ್ನು ಖಂಡಿಸಿದವರು. ಪಾಪ ಅವರೇನಾದರೂ ಇಂದು ಬದುಕಿದ್ದರೆ ಇಂದಿನ ತುಘಲಕರ ಆಚರಣೆ ನೋಡಿ ಬಹುಶ ಆತ್ಮ ಹತ್ಯೆ ಮಾಡಿಕೊಳ್ಳುತ್ತಿದ್ದರು ಅನ್ನಿಸುತ್ತೆ. ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ಸಾರಿದವರು ಕುವೆಂಪು. ಕುವೆಂಪು ಅವರು ಇಂತಹ ಆಚರಣೆಯನ್ನು ವಿರೋಧಿಸಿದವರು ಅವರನ್ನು ಜಾತಿ ಸಮಾವೇಶದ ಫ್ಲೆಕ್ಷ್ ಬ್ಯಾನರ್ ತುಂಬಾ ಮೆರೆಸಿದ್ದು ನೋಡಿದ್ದರೆ ಕುವೆಂಪು ಅವರಿಗೂ ಸಹ ಆಘಾತ ಆಗುತಿತ್ತು.
ಇದೆಲ್ಲ ಬಿಡಿ ಸ್ವಾಮಿ. ಇತ್ತೀಚಿಗೆ ನಮ್ಮನ್ನು ಅಗಲಿದರು , ಭಾವ ಪೂರ್ಣ ಶ್ರದ್ದಾಂಜಲಿ, ನಿನ್ನ ನೆನಪಿನಲ್ಲಿ ಎಂದು ಮರಣ ಹೊಂದಿದ ಮಹಾಶಯರಿಗೆ ರೋಡ್ ಸೈಡ್ನಲ್ಲಿ ಫ್ಲೆಕ್ಷ್ ಬ್ಯಾನ್ನೆರ್ ಹಾಕಿ ನೆನೆಯುತ್ತಾರೆ. ಈ ರೀತಿ ಫ್ಲೆಕ್ಷ್ ಬ್ಯಾನರ್ ಹಾಕದೆ ಅದೇ ಹಣದಲ್ಲಿ ನಿರ್ಗತಿಕರಿಗೆ , ಇಲ್ಲವೋ ಹಸಿದ ಹೊಟ್ಟೆಗಳಿಗೆ ಅನ್ನದಾನವನ್ನು ಮಾಡಿದ್ದರೆ ನಿಧನ ಹೊಂದಿದ ಆತ್ಮಕ್ಕೆ ಶಾಂತಿಯಾದರು ಸಿಕ್ಕುತ್ತಿತ್ತು.
ಊರು ತುಂಬಾ ಫ್ಲೆಕ್ಷ್ ಬ್ಯಾನರ್ ಹಾಕದೆ, ಇದೆ ರೀತಿ ಪ್ರತಿಯೊಬ್ಬರೂ ಶ್ರದ್ಧಾಂಜಲಿನೋ, ಶುಭಾಶಯನೋ , ಗೌರವನೋ ಸಲ್ಲಿಸಿದರೆ ಎಷ್ಟು ಅರ್ಥ ಪೂರ್ಣವಾಗಿರುತ್ತದೆ.
ಅಂದು ಕೇವಲ ಮಹಾ ನಗರಗಳಿಗೆ ಸೀಮಿತವಾದ ಫ್ಲೆಕ್ಷ್ ಬ್ಯಾನರ್ ಇಂದು ವಿದ್ಯುತ್ ಕಾಣದ ಹಳ್ಳಿಗಳಿಗೆ ಮುಟ್ಟಿದೆ ಅಂದರೆ, ಕೊಂಚ ಶಾಕ್ ಆಗಬಹುದು.ಬೆಂಗಳೂರಿನ ನಗರ ಸಭೆಯವರು ಇಂದು ಫ್ಲೆಕ್ಷ್ ಬ್ಯಾನರ್ ತೆರವು ಕಾರ್ಯದಲ್ಲಿ ತೊಡಗಿದ್ದಾರೆ. ಅದು ಸ್ವಗತಾರ್ಹ ಆದರೆ ಅದು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂದು ಕಾದು ನೋಡಬೇಕು.
ಇಂತಹ ಅಧುನಿಕ ತುಘಲಕರ ಸಂಸ್ಕೃತಿ ಗೆ ಯಾವಾಗ ತೆರೆ ಬೀಳುತ್ತದೆ ಎಂದು ಶಬರಿ ತರಹ ಕಾದು ನೋಡಬೇಕು ಅಷ್ಟೇ.





nimma anisikeyE nanna anisikeyoo aagide.. ee flex bannergaLAnnu kanDare onthara asahya nanage.