ವಿಷಯದ ವಿವರಗಳಿಗೆ ದಾಟಿರಿ

ಅಕ್ಟೋಬರ್ 15, 2012

1

ಕಿವುಡರೂ ಮಾತನಾಡಬಲ್ಲರು,ನೀವು ಮಾತನಾಡಿಸುವ ಮನಸ್ಸು ಮಾಡಬೇಕಷ್ಟೆ

‍ನಿಲುಮೆ ಮೂಲಕ

ಮಗುವೊಂದು ಭೂಮಿಗೆ ಬಂದಾಗ ತಂದೆ-ತಾಯಿಯರ ಪಾಲಿಗದು ಸ್ವರ್ಗವೇ ಧರೆಗಿಳಿವಂತ ದಿನ.ಆದರೆ,ವಿಶಿಷ್ಠ ಚೇತನ ಮಕ್ಕಳು ಹುಟ್ಟಿದಾಗ ತಂದೆತಾಯಿಗಳು,ಕುಟುಂಬ ವರ್ಗ ಮಾನಸಿಕವಾಗಿ ಕುಸಿದು ಹೋಗುತ್ತಾರೆ. ಬಡವರು,ಶ್ರೀಮಂತರು,ಅಕ್ಷರಸ್ಥರು,ಅನಕ್ಷರಸ್ಥರು ಬಹುಷಃ ಆ ಸಮಯಕ್ಕೆ ಎಲ್ಲರ ಪ್ರತಿಕ್ರಿಯೆಯೂ ‘ದೇವರು ನಮಗೆ ಹೀಗೇಕೆ ಮಾಡಿದ?” ಎಂಬುದೇ ಆಗಿರುತ್ತದೆ.ವಿಶಿಷ್ಠ ಚೇತನ ಮಕ್ಕಳು ಬೆಳೆಯುತ್ತ ಬೆಳೆಯುತ್ತ ತಂದೆ-ತಾಯಿಯರಿಗೂ ತಮ್ಮದೇ ರೀತಿಯಲ್ಲಿ ಜೀವನ ದರ್ಶನ ಮಾಡಿಸುವ ಗುರುಗಳಾಗಿಬಿಡುತ್ತಾರೆ.

ಇನ್ನು ಸಮಾಜ ಇಂತ ಮಕ್ಕಳನ್ನು ನೋಡುವ ರೀತಿಯೂ ಬೇರೆಯೇ ಆಗಿರುತ್ತದೆ.ಇಂತ ವಿಶಿಷ್ಠ ಚೇತನರನ್ನ ಗೇಲಿ ಮಾಡುತ್ತಾರಲ್ಲ ಅವರೇ ನಿಜವಾಗಿ ವಿಕೃತರು. ಮನೆಗಳಲ್ಲೇ ಇದು ಶುರುವಾಗುತ್ತದೆ,ಮುಂದುವರಿದು ಶಾಲೆಯಲ್ಲೂ ‘ಗುರು’ಗಳು ಅನ್ನಿಸಿಕೊಂಡವರಿಂದ,ಕಡೆಗೆ ಸಮಾಜದಿಂದ .ಇಷ್ಟೆಲ್ಲಾ ಕುಹುಕ – ಕೀಳರಿಮೆಯಿಂದ ಬೆಳೆದವರು ತೋರಿಸುವ ಈ ಪರಿ ಉತ್ಸಾಹವಿದೆಯಲ್ಲ ಇದನ್ನ ಎಲ್ಲ ಸರಿಯಿರುವ ಜನರಿಂದ ನಿರೀಕ್ಷಿಸಲು ಸಾಧ್ಯವಿಲ್ಲ ಬಿಡಿ.ಇಂತ ವಿಶಿಷ್ಠ ಚೇತನ ಮಕ್ಕಳು ಇಂದು ಸಮಾಜದ ವಿವಿಧ ಸ್ಥರಗಳಲ್ಲಿ  ತಮ್ಮ ಸಾಧನೆಯ ಹಾದಿಯನ್ನು ಸ್ಥಾಪಿಸುತ್ತ ಹೊರಟಿದ್ದಾರೆ.

ನಮ್ಮ ಲೇಖಕಿ ‘ಶ್ರೀ ವಿದ್ಯಾ‘ ಅವರಿಗೂ ಕೂಡ ಶ್ರವಣ ದೋಷವಿದೆ.ಆದರೆ, ದೋಷವನ್ನು ಹಿಂದಕಿಕ್ಕಿ ನೊಂದವರ ಕಣ್ಣೀರು ಒರೆಸುವಂತ ಕೆಲಸಕ್ಕೆ ಕೈ ಹಾಕುವುದು ನನ್ನ ಜೀವನದ ಗುರಿ ಅಂತ ಹೊರಟಿದ್ದಾರೆ,ಅವರ ಎಲ್ಲ ಪ್ರಯತ್ನಗಳು ಸಫಲವಾಗಲಿ ಅನ್ನುವುದು ನಿಲುಮೆ ಬಳಗದ ಪ್ರೀತಿಯ ಹಾರೈಕೆ – ನಿಲುಮೆ
– ಶ್ರೀ ವಿದ್ಯಾ

ಈ ದೇಶದಲ್ಲಿ ಎಷ್ಟೋ ಜನರು ಅಂಗವಿಕಲರು.ಕೆಲವರಿಗೆ ಕಿವಿ ಕೇಳಿಸಲ್ಲ, ಮಾತು ಬರಲ್ಲ, ಕಣ್ಣು ಕಾಣಿಸಲ್ಲ, ಕೈ ಕಾಲು ಇಲ್ಲ, ಬುದ್ಧಿ ಕಡಿಮೆ, ಈ ತರಹ ತುಂಬಾ ತೊಂದರೆ ಇರುವವರಿದ್ದಾರೆ. ಆದರೆ ನಾನು ಹೇಳುತ್ತಿರುವುದು ಕಿವುಡರ ಬಗ್ಗೆ. ಇತರ ಅಂಗವಿಕಲರಿಗಿಂತ ಕಿವುಡರಿಗೆ ಸಮಸ್ಯೆ ಹೆಚ್ಚು. ಅವರಿಗೆ ಕಿವಿ ಕೇಳಿಸದಿರುವುದರಿಂದ ಪ್ರಪಂಚ ಏನು? ಹೇಗೆ? ಎಂಬುದೇ ಗೊತ್ತಿರುವುದಿಲ್ಲ. ಕಿವುಡರ ಮನೆಯಲ್ಲಿ ಅವರ ಅಪ್ಪ ಅಮ್ಮಂದಿರು ಸರಿಯಾಗಿ ಬೆಂಬಲ ನೀಡದೆ ನಿರ್ಲಕ್ಷ್ಯ ಮಾಡುತ್ತಿರಬಹುದು. ಏನೆಂದರೆ, ಕೆಲವರು ಯಾಕಪ್ಪಾ ನಮಗೆ ಈ ಮಕ್ಕಳು ಹುಟ್ಟಿದರು ಎಂದು ಬೇಸತ್ತು ಚಿಕ್ಕವಯಸ್ಸಿನಿಂದ ಅವರಿಗೆ ಮಾತು ಕಲಿಸಿಲ್ಲ ಹಾಗೂ ತರಬೇತಿ ಕೊಡಿಸಿಲ್ಲ. ಹಾಗೂ ಅವರನ್ನು ಸನ್ನೆಭಾಷೆ ಶಾಲೆಯಲ್ಲಿ ಹಾಕಿ ಸರಿಯಾಗಿ ಶಿಕ್ಷಣ ನೀಡುತ್ತಿಲ್ಲ.

ಸನ್ನೆಭಾಷೆ ಕಿವುಡರ ಭಾಷೆ. ಆದರೂ ಅವರಿಗೆ ಚಿಕ್ಕವಯಸ್ಸಿನಿಂದ ಮಾತನಾಡಲು ತರಬೇತಿ ಕೊಡಿಸಿದರೆ ಅವರು ಖಂಡಿತ ಮಾತನಾಡಬಲ್ಲರು. ಕರ್ನಾಟಕದಲ್ಲಿ (ಸನ್ನೆಭಾಷೆ) ಕಿವುಡರ ಶಾಲೆಗಳು ಇವೆ. ಆದರೆ, ಅವರಿಗೆ ಇಂಗ್ಲೀಷ್ ಭಾಷೆ ಇಲ್ಲ. ಇದರಿಂದಾಗಿ ಅವರ ಜೀವನದಲ್ಲಿ ಕಷ್ಟಗಳು ಬರುತ್ತಿವೆ.ಇಂಗ್ಲೀಷ್ ಕೊರತೆಯಿಂದ ಶಿಕ್ಷಣಕ್ಕೆ ಹಾಗೂ ಉದ್ಯೋಗಕ್ಕೆ ಅಡ್ಡಿಯಾಗುತ್ತಿದೆ. ತಮ್ಮ ಮನೆಯಲ್ಲಿ ಅವರಿಗೆ ಮಾತು ಬರುವುದಿಲ್ಲವೆಂದು ಅವರ ಅಪ್ಪ ಅಮ್ಮಂದಿರು ಅವರ ಜೊತೆ ತುಂಬಾ ಹೊತ್ತು ಮಾತನಾಡಿಸುವುದಿಲ್ಲ ಹಾಗೂ ಯಾವುದೇ ವಿಚಾರ ಚರ್ಚೆ ಮಾಡುವುದಿಲ್ಲ. ಇದರಿಂದ ಅವರಿಗೆ ಹೆಚ್ಚಿನ ಅನುಭವ ಸಿಗುವುದಿಲ್ಲ. ಅಪ್ಪ ಅಮ್ಮಂದಿರಿಗೆ ಕಿವುಡರಷ್ಟು ಸನ್ನೆಭಾಷೆ ಗೊತ್ತಿಲ್ಲ. ಎಷ್ಟೋ ಜನರು ಕಿವುಡರ ಜೊತೆ ಹೊಂದಿಕೊಂಡಿಲ್ಲ. ಎಷ್ಟೋ ಅಪ್ಪ ಅಮ್ಮಂದಿರು ತಮ್ಮ ಕಿವುಡು ಮಕ್ಕಳನ್ನು ಅದರಲ್ಲೂ ಹೆಣ್ಣು ಮಕ್ಕಳನ್ನು ಹೊರಗೆ ಹೋಗಲು ಅನುಮತಿ ನೀಡುವುದಿಲ್ಲ. ಇದರಿಂದ ಕಿವುಡರಿಗೆ(ಹೆಣ್ಣು ಮಕ್ಕಳಿಗೆ) ಜ್ಞಾನವು ಕಡಿಮೆಯಾಗುತ್ತದೆ. ಅದಕ್ಕೆ ನಾವೆಲ್ಲರೂ ಅವರಿಗೆ ಗಟ್ಟಿಯಾದ ಬೆಂಬಲ ನೀಡಬೇಕು. ರಕ್ಷಣೆ ಮಾಡಬೇಕು. ಕಿವುಡರ ಪೋಷಕರಿಗೆ ಸರಿಯಾದ ತಿಳುವಳಿಕೆ ನೀಡಬೇಕು.ಅವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ನನ್ನ ಮನವಿ.

ಚಿತ್ರ ಕೃಪೆ : pedagogy.cwrl.utexas.edu

1 ಟಿಪ್ಪಣಿ Post a comment
  1. madhu's avatar
    madhu
    ಮಾರ್ಚ್ 2 2013

    nice awesome words vidya

    ಉತ್ತರ

ನಿಮ್ಮ ಅನಿಸಿಕೆ...

Note: HTML is allowed. Your email address will never be published.

Subscribe to comments