ಭಾರತದ ಮಾಣಿಕ್ಯ – ಮಾಣಿಕ್ ಸರ್ಕಾರ್
-ಡಾ. ಅಶೋಕ್ ಕೆ ಆರ್
ಭಾರತ ಬಡದೇಶವೇ? ನಮ್ಮ ರಾಜಕಾರಣಿಗಳು ಅಧಿಕೃತವಾಗಿಯೇ ಘೋಷಿಸಿಕೊಂಡಿರುವ ಆಸ್ತಿ ವಿವರಗಳನ್ನು ನೋಡಿದರೆ ಭಾರತದಲ್ಲಿ ಬಡವರ ಅಸ್ತಿತ್ವವೇ ಇಲ್ಲವೇನೋ ಎಂಬ ಭಾವನೆ ಮೂಡಿದರೆ ತಪ್ಪಲ್ಲ. ಎಲ್ಲೋ ಕೆಲವರನ್ನು ಹೊರತುಪಡಿಸಿ ನಮ್ಮ ಸಂಸದರು ಸಚಿವರು ಶಾಸಕರು ಮುಖ್ಯಮಂತ್ರಿಗಳೆಲ್ಲ ಕೋಟಿಗೂ ಅಧಿಕ ಬೆಲೆಬಾಳುವವರೇ! ಶಾಸನಸಭೆಯಲ್ಲಿ ಯಾರದೂ ವಿರೋಧವಿಲ್ಲದೆ ಅಂಗೀಕೃತವಾಗುವ ಮಸೂದೆ “ಶಾಸಕ – ಸಚಿವರ” ವೇತನ ಹೆಚ್ಚಳ ಮಾತ್ರ! ರಾಜಕಾರಣಿಗಳ ಬಗ್ಗೆ ರಾಜಕೀಯದ ಬಗ್ಗೆ ಅಪಾಯಕಾರಿ ಮಟ್ಟದಲ್ಲಿ ಬೆಳೆಯುತ್ತಿರುವ ಸಿನಿಕತೆಯ ನಡುವೆ ರಾಜಕಾರಣವೆಂದರೆ ಕೇವಲ ಹಣ ಮಾಡುವ, ಅನೈತಿಕ ರೀತಿಯಲ್ಲಿ ಜನರ ಮಧ್ಯೆಯೇ ವಿರೋಧ ಬೆಳೆಸುವ ದಂಧೆಯಲ್ಲ ಎಂಬುದನ್ನು ನಿರೂಪಿಸುವ ರಾಜಕಾರಣಿಗಳೂ ಇದ್ದಾರೆ ಎಂದರೆ ನಂಬುವುದು ಕೊಂಚ ಕಷ್ಟದ ಕೆಲಸವೇ ಸರಿ! ಅದರಲ್ಲೂ ಕರ್ನಾಟಕದ ರಾಜಕಾರಣ ಹಿಂದೆಂದೂ ಕಾಣದ ರೀತಿಯಲ್ಲಿ ಅಧಃಪತನಕ್ಕೊಳಗಾಗಿ ರಾಷ್ಟ್ರೀಯ ಮಟ್ಟದಲ್ಲಿ ಕನ್ನಡಿಗರನ್ನು ಅಪಹಾಸ್ಯದ ಸರಕನ್ನಾಗಿಸಿರುವುದು ಸುಳ್ಳಲ್ಲ. ಈ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣವೆಂದರೆ ಪ್ರಚಾರಕ್ಕಾಗಿ ಹಪಹಪಿಸುವುದಲ್ಲ, ವೋಟಿಗಾಗಿ ನೈತಿಕತೆ ತೊರೆಯುವುದಲ್ಲ, ಇವೆಲ್ಲಕ್ಕಿಂತ ಹೆಚ್ಚಾಗಿ ತನ್ನತನ ಕಳೆದುಕೊಳ್ಳುವುದಲ್ಲ ಎಂಬುದನ್ನು ನಿರೂಪಿಸುತ್ತ ತನ್ನ ಸಾಮರ್ಥ್ಯದ ಮಟ್ಟಿಗೆ ಜನರಿಗೆ ಅನುಕೂಲವನ್ನು ಮಾಡಿಕೊಡುತ್ತಿರುವ ಮಾಣಿಕ್ ಸರ್ಕಾರ್ ಬಗ್ಗೆ ತಿಳಿದುಕೊಳ್ಳುವುದು ರಾಜಕಾರಣಿಗಳಿಗೆ ಮತ್ತವರಿಗೆ ಮತ ನೀಡುವ ಜನರಿಗೂ ಅವಶ್ಯಕ.
“ಸೆವೆನ್ ಸಿಸ್ಟರ್ಸ್” ಎಂದೇ ಹೆಸರಾಗಿರುವ ಭಾರತದ ಈಶಾನ್ಯ ರಾಜ್ಯಗಳ ಪೈಕಿ ಅತ್ಯಂತ ಪುಟ್ಟ ಮತ್ತು ಕೊನೆಯ ರಾಜ್ಯ ತ್ರಿಪುರ. ತ್ರಿಪುರದಲ್ಲಿ 1998ರಿಂದಲೂ ಮುಖ್ಯಮಂತ್ರಿಯಾಗಿರುವವರು ಮಾಣಿಕ್ ಸರ್ಕಾರ್! ಜನವರಿ 22 1949ರಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಮಾಣಿಕ್ ಸರ್ಕಾರ್ ವಿಧ್ಯಾರ್ಥಿ ದೆಸೆಯಲ್ಲಿದ್ದಾಗ ನಕ್ಸಲ್ ವಿಚಾರಧಾರೆಗಳಿಗೆ ಆಕರ್ಷಿತರಾಗಿ ಕಮ್ಯುನಿಷ್ಟ್ ಪಕ್ಷ ಸೇರಿದರು. ಎಸ್ ಎಫ್ ಐನ ಪ್ರತಿನಿಧಿಯಾಗಿ, ಎಸ್ ಎಫ್ ಐನ ರಾಜ್ಯ ಕಾರ್ಯದರ್ಶಿಯಾಗಿ, ಅದೇ ಎಸ್ ಎಫ್ ಐನ ಅಖಿಲ ಭಾರತ ಸಮಿತಿಗೆ ಉಪಾಧ್ಯಕ್ಷನಾಗಿ ತಮ್ಮ ಹೋರಾಟದ ಹಾದಿಯನ್ನು ಮುಂದುವರೆಸಿದ ಮಾಣಿಕ್ 1972ರಲ್ಲಿ ಸಿ ಪಿ ಐ (ಎಂ)ನ ರಾಜ್ಯ ಕಮಿಟಿಯ ಸದಸ್ಯನಾಗಿ ಆಯ್ಕೆಯಾಗುತ್ತಾರೆ. 1978ರಲ್ಲಿ ಸಿ ಪಿ ಐ (ಎಂ)ನ ರಾಜ್ಯ ಕಾರ್ಯದರ್ಶಿಯಾಗುತ್ತಾರೆ. ಅದೇ ವರ್ಷ ಎಡರಂಗ ಮೊದಲ ಬಾರಿಗೆ ಅಧಿಕಾರಕ್ಕೆ ಬರುತ್ತದೆ. 1985ರಲ್ಲಿ ಮಾಣಿಕ್ ಸರ್ಕಾರ್ ಪಕ್ಷದ ಸೆಂಟ್ರಲ್ ಕಮಿಟಿಯ ಸದಸ್ಯರಾಗುತ್ತಾರೆ.